ಅಡಿಕೆ ತೋಟ, ಭತ್ತದ ಕೃಷಿಗೆ ವರುಣನ ಅವಕೃಪೆ

Team Udayavani, Sep 15, 2019, 5:29 AM IST

ನಿರೀಕ್ಷಿತ ಮಳೆಯಾಗದಿದ್ದರೆ ಕೃಷಿಯಿಂದ ಹೆಚ್ಚಿನ ಲಾಭಗಳಿಸಲು ಸಾಧ್ಯವಿಲ್ಲ. ಈ ಬಾರಿ ತಡವಾಗಿ ಆರಂಭವಾದ ಮಳೆ ಹಲವು ಅನಾಹುತಗಳನ್ನು ಸೃಷ್ಟಿಸಿರುವುದು ಮಾತ್ರವಲ್ಲದೇ ಅತಿವೃಷ್ಟಿಯಾಗಿ ಅಡಿಕೆ ಹಾಗೂ ಭತ್ತದ ಕೃಷಿಗೆ ತೊಂದರೆಯನ್ನುಂಟು ಮಾಡಿದೆ. ಅಡಕೆ ಕೃಷಿಗೆ ಎರಡನೇ ಬಾರಿಗೆ 2ನೇ ಹಂತದ ಔಷಧಿಯ ಸಿಂಪಡಣೆಗೆ ಅವಕಾಶ ದೊರಕದೆ ಕೃಷಿಕರು ಪರದಾಡುವಂತಾಗಿದೆ.

ಸಾಂಪ್ರದಾಯಿಕಕ್ಕಿಂತ ಭಿನ್ನವಾಗಿ ತಡವಾಗಿ ಸುರಿಯುತ್ತಿರುವ ಭಾರೀ ಮಳೆ ಕೃಷಿಕರಿಗೆ ಸವಾಲಾಗಿ ಪರಿಣಮಿಸಿದೆ. ಒಂದೆಡೆ ಅಡಿಕೆ ಬೆಳೆ ನಾಶವಾಗುತ್ತಿದ್ದರೆ, ಭತ್ತದ ಬೆಳೆಯೂ ಕೈಗೆ ಸಿಗುವ ಹಾಗಿಲ್ಲ.

ಎರಡು ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರೈತವರ್ಗ ಕಂಗಾಲಾಗಿದೆ. ಅಡಿಕೆ ಫಸಲು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ರೈತರಿಗೆ ಇತ್ತ ಭತ್ತವನ್ನೂ ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಸಾಮಾನ್ಯವಾಗಿ ಆ. 15ರ ಅನಂತರ ಮಳೆಯ ತೀವ್ರತೆ ಕಡಿಮೆಯಾಗುತ್ತಿತ್ತು. ಆದರೆ ಈ ಬಾರಿ ಸೆಪ್ಟಂಬರ್‌ ತಿಂಗಳ ಮೊದಲ ವಾರದಲ್ಲೂ ಅತಿವೃಷ್ಟಿಯಾಗುತ್ತಿದೆ. ಮೊದಲ ಹಂತದಲ್ಲಿ ಅಡಿಕೆ ಬೆಳೆಗೆ ಬೋಡೋ ದ್ರಾವಣ ಸಿಂಪಡಣೆ ಮಾಡಿದ್ದ ರೈತರು 2ನೇ ಹಂತದ ಔಷಧಿ ಸಿಂಪಡಣೆಗೆ ಮಳೆ ಅವಕಾಶವನ್ನೇ ನೀಡಿಲ್ಲ. ಒಂದು ಸಲ ಬೋಡೋ ದ್ರಾವಣ ಸಿಂಪಡಣೆ ಮಾಡಿದರೆ ಅನಂತರ 40 ದಿನಗಳ ಒಳಗಾಗಿ ಮತ್ತೆ ಸಿಂಪಡಣೆ ಮಾಡಬೇಕು. ಇಲ್ಲವಾದರೆ ಅಡಿಕೆಗೆ ಕೊಳೆರೋಗ ಬಾಧಿಸುತ್ತದೆ. ಈ ವರ್ಷ ಜೂನ್‌ ತಿಂಗಳಲ್ಲಿ ಮಳೆ ಕಡಿಮೆಯಾಗಿದ್ದ ಕಾರಣ ರೈತರು ಮೊದಲ ಹಂತದ ಸಿಂಪಡಣೆಯನ್ನು ಆರಾಮವಾಗಿ ನಡೆಸಿದ್ದರು. ಆದರೆ ಅನಂತರ ಔಷಧಿ ಸಿಂಪಡಣೆ ನಡೆಯಲೇ ಇಲ್ಲ. ಹಾಗಾಗಿ ಬಹುತೇಕ ರೈತರ ಅಡಿಕೆ ತೋಟಗಳಲ್ಲಿ ಕೊಳೆರೋಗ ತನ್ನ ಕಬಂಧ ಬಾಹುಗಳನ್ನು ಚಾಚಿದೆ.

ಭತ್ತಕ್ಕೂ ಕಷ್ಟ
ಅಡಿಕೆ ಬೆಳೆಯ ಸಮಸ್ಯೆ ಒಂದೆಡೆಯಾದರೆ ಭತ್ತದ ಬೆಳೆಯ ರೈತನಿಗೂ ಮಳೆಯ ಸಮಸ್ಯೆ ಕಾಡುತ್ತಿದೆ. ಕಳೆದ ಜೂನ್‌ ತಿಂಗಳಲ್ಲಿ ನೇಜಿ ನಾಟಿ ಮಾಡಿದ್ದ ರೈತ ವರ್ಗ ಸೆಪ್ಟಂಬರ್‌ ತಿಂಗಳಾದರೂ ಕಡಿಮೆಗೊಳ್ಳದ ಮಳೆಯಿಂದ ಸಂಕಷ್ಟಕ್ಕೀಡಾಗಿದ್ದಾನೆ. ನಾಟಿ ಮಾಡಿದ ನೇಜಿ ಪ್ರಸ್ತುತ ಪೈರಾಗಿ ಬೆಳೆದಿದ್ದು, ತೆನೆ ಬಿಡುವ ಸಮಯವಾಗಿದೆ. ಈ ಹಂತದಲ್ಲಿ ಮಳೆ ಬಿದ್ದರೆ ರೈತನ ಪಾಲಿಗೆ ಭತ್ತದ ಕಾಳಿನ ಬದಲಿಗೆ ಜೊಳ್ಳು ಮಾತ್ರ ಸಿಗುತ್ತದೆ. ತೆನೆ ಬಿಡುವ ಸಂದರ್ಭದಲ್ಲಿ ಬಿಸಿಲಿನ ಅಗತ್ಯವಿದ್ದು, ಆದರೆ ಈ ಬಾರಿ ರೈತರ ಪಾಲಿಗೆ ಪ್ರಕೃತಿ ಕರುಣೆ ತೋರಿಲ್ಲ.

ಮೇ, ಜೂನ್‌ ತಿಂಗಳಲ್ಲಿ ಸಮರ್ಪಕವಾದ ಮಳೆ ಬರದೆ ಕಂಗಾಲಾಗಿದ್ದ ರೈತರು ನೇಜಿ ನಾಟಿ ಮಾಡುವುದಕ್ಕೆ ಪರದಾಟ ನಡೆಸಿದ್ದರು. ಆದರೆ ನೇಜಿ ನಾಟಿ ಮಾಡಿದ ನಂತರ ಸುರಿದ ಮಳೆಗೆ ಭತ್ತದ ರೈತ ಸ್ವಲ್ಪಮಟ್ಟಿಗೆ ಖುಷಿಯಾಗಿದ್ದ. ಮಳೆಯಿಂದಾಗಿ ಬೆಳೆ ಫಸಲು ಹೆಚ್ಚು ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ. ಆದರೆ ಇದೀಗ ಎಲ್ಲವೂ ತಲೆಕೆಳಗಾಗಿದೆ. ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ ರೈತನ ಸ್ಥಿತಿ. ಅಡಿಕೆಗೆ ಕೊಳೆರೋಗ ಬಂದು ನಾಶವಾಗಿದೆ. ಭತ್ತ ತೆನೆ ಬಿಡುವ ಮೊದಲೇ ಹಾಳಾಗುವಂತಾಗಿದೆ. ಒಟ್ಟಿನಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕ ವಾತಾವರಣ ಇಲ್ಲದಂತಾಗಿದೆ.

ಭತ್ತ ಬೆಳೆಯೂ ಕೈಗಿಲ್ಲದ ಸ್ಥಿತಿ
ವಿಪರೀತ ಮಳೆಯ ಕಾರಣ ಭತ್ತದ ಬೆಳೆಯ ಬಗ್ಗೆ ಯಾವುದೇ ಆಶೆ ಇಟ್ಟುಕೊಳ್ಳುವಂತಿಲ್ಲ. ಮಳೆ ಇಲ್ಲದೆ ಭತ್ತ ಬೆಳೆಯ ಈ ಬಾರಿ ತಡವಾಗಿಯೇ ಆರಂಭಿಸಲಾಗಿತ್ತು. ಇದೀಗ ಮಳೆಯ ಬಿಡುವು ಕೊಡುವುದೇ ಇಲ್ಲ. ಹಾಗಾಗಿ ಭತ್ತದ ಬೆಳೆ ಕೈಗೆ ದೊರಕುವ ಬಗ್ಗೆ ಆಶಾಭಾವನೆ ಇಲ್ಲ. ಅಡಿಕೆ ಅರ್ಧಕ್ಕರ್ಧ ಈಗಾಗಲೇ ನಾಶವಾಗಿದೆ. ಇನ್ನು ಔಷಧಿ ಸಿಂಪಡಣೆ ನಡೆಸಿದರೂ ದೊಡ್ಡ ಮಟ್ಟದ ಪ್ರಯೋಜನವಿಲ್ಲ. ಹಳ್ಳಿಯ ಎಲ್ಲಾ ಭಾಗದ ಅಡಕೆ ತೋಟಗಳಲ್ಲಿ ಬಹುತೇಕ ಅಡಕೆ ಮರಗಳಲ್ಲಿ ರೋಗ ಕಾಣಿಸಿಕೊಂಡಿದೆ..
– ರಾಮಣ್ಣ ಗೌಡ ಪಾಲೆತ್ತಾಡಿ

-   ರಾಜೇಶ್‌ ಪಟ್ಟೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ