ಮೂಲ ಸೌಕರ್ಯ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ

Team Udayavani, Apr 17, 2019, 6:06 AM IST

ನಗರ ವ್ಯಾಪ್ತಿಯ ನಾಗರಿಕ ಸಮಸ್ಯೆಗಳ ನಿಮ್ಮ
ದನಿಗೆ ನಮ್ಮ ದನಿ ಸೇರಿಸುವ ಪ್ರಯತ್ನ ಈ ಸುದಿನ ಜನದನಿ. ಓದುಗರು ತಮ್ಮ ಪ್ರದೇಶದ ರಸ್ತೆ, ನೀರು, ಸ್ವತ್ಛತೆ, ನೈರ್ಮಲ್ಯ, ಮಾಲಿನ್ಯ, ಸಂಚಾರ ವ್ಯವಸ್ಥೆ ಸೇರಿದಂತೆ ಯಾವುದೇ ಸಮಸ್ಯೆ ಕುರಿತು ತಿಳಿಸಬಹುದು. ಈ ಅಂಕಣ ಪ್ರತಿ ಬುಧವಾರ ಪ್ರಕಟವಾಗಲಿದೆ. ವೈಯಕ್ತಿಕ ಸಮಸ್ಯೆ, ಕಾನೂನು ವ್ಯಾಜ್ಯದ ದೂರು ಅಥವಾ ವಿವಾದದಲ್ಲಿರುವ ವಿಷಯಗಳನ್ನು ಪರಿಗಣಿಸುವುದಿಲ್ಲ. ನಾಗರಿಕರು ತಮ್ಮ ಪ್ರದೇಶದ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಬರೆದು ಪೂರಕವೆನಿಸುವ ಒಂದು ಪೋಟೊ ಜತೆ ಹೆಸರು, ವಿಳಾಸ ಮತ್ತು ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ ಅಂಚೆ, ಇಮೇಲ್‌ ಅಥವಾ ವಾಟ್ಸಪ್‌ ಮೂಲಕ ಕಳುಹಿಸಬಹುದು. ಅರ್ಹ ದೂರುಗಳನ್ನು ಪ್ರಕಟಿಸಿ, ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಸುದಿನ ಮಾಡಲಿದೆ.

ತೆರೆದ ವಿದ್ಯುತ್‌ ಬಾಕ್ಸ್‌ ಅಪಾಯ
ನಗರದ ಕದ್ರಿ ಬಂಟ್ಸ್‌ ಹಾಸ್ಟೆಲ್‌ ರಸ್ತೆಯಲ್ಲಿರುವ ಚಿನ್ಮಯ ಶಾಲೆಯ ಎದುರು ಹಲವಾರು ಸಮಯಗಳಿಂದ ವಿದ್ಯುತ್‌ ಬಾಕ್ಸ್‌ ಮುಚ್ಚಳ ತೆರೆದ ಸ್ಥಿತಿಯಲ್ಲಿದೆ. ಇಲ್ಲಿ ಶಾಲೆ ಇರುವುದರಿಂದ ಮಕ್ಕಳು ಆಗಾಗ ಈ ರಸ್ತೆಯಲ್ಲಿ ನಡೆದಾಡುತ್ತಿರುತ್ತಾರೆ. ತಿಳಿಯದೇ ಅವರು ಇದನ್ನು ಮುಟ್ಟಿದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಅಲ್ಲದೆ, ಪಾದಚಾರಿಗಳು, ಜಾನುವಾರುಗಳು ಕೂಡ ಇಲ್ಲಿ ಓಡಾಡುವುದರಿಂದ ಇದು ತೀರಾ ಅಪಾಯಕಾರಿಯಾಗಿ ಪರಿಣಮಿಸಿದೆ. ಮೆಸ್ಕಾಂ ತತ್‌ಕ್ಷಣ ಇತ್ತ ಗಮನ ಹರಿಸಿ ಮುಚ್ಚುವ ವ್ಯವಸ್ಥೆ ಮಾಡಲಿ.
-ಜ್ಯೋತ್ಸಾ ಅಡಿಗ, ಶಿವಬಾಗ್‌

ನೀರು ಪೋಲು ಮಾಡದಿರಿ
ಬಿಜೈ ಕಾಪಿಕಾಡ್‌ ರಸ್ತೆಯಲ್ಲಿರುವ ಕುಂಟಿಕಾನ ಜಂಕ್ಷನ್‌ ಬಳಿ ಕಳೆದ ನಾಲ್ಕೈದು ದಿನಗಳಿಂದ ಪೈಪ್‌ನಲ್ಲಿ ನೀರು ಸೋರಿಕೆಯಾಗುತ್ತಿದೆ. ಇಲ್ಲಿ ಯಾವುದೋ ಕೆಲಸಕ್ಕಾಗಿ ಮಣ್ಣು ಅಗೆಯಲಾಗಿದ್ದು, ಆ ವೇಳೆ ಪೈಪ್‌ಗೆ ತಾಗಿರುವ ಸಾಧ್ಯತೆ ಇದೆ. ಆದರೆ ಸೋರಿಕೆಯಾದ ನೀರನ್ನು ತಡೆಯುವ ಪ್ರಯತ್ನ ಮಾಡದೇ ಹಾಗೇ ಬಿಟ್ಟಿರುವುದರಿಂದ ನೀರು ಪೋಲಾಗಿದೆ. ಕಳೆದೆರಡು ದಿನಗಳ ಹಿಂದೆ ಈ ಪೈಪ್‌ನ ಮೇಲ್ಭಾಗದಲ್ಲಿ ಕೋಲು ಹಾಕಿ ಬಂದ್‌ ಮಾಡಲಾಗಿದೆ. ಆದರೆ ಇದು ತಾತ್ಕಾಲಿಕವಾಗಿದ್ದು, ಯಾರಾದರು ಕೋಲನ್ನು ಕಿತ್ತು ಹಾಕಿದ್ದಲ್ಲಿ ಮತ್ತೆ ನೀರು ಸೋರಿಕೆಯಾಗುವ ಸಾಧ್ಯತೆ ಇದೆ. ಮೊದಲೇ ನಗರಕ್ಕೆ ನೀರಿನ ಅಭಾವವಿದ್ದು, ಇರುವ ನೀರನ್ನು ಹೀಗೆ ಪೋಲು ಮಾಡಿದರೆ ಹೇಗೆ?
-ಪುರುಷೋತ್ತಮ, ಪ್ರಗತಿ ನಗರ ಲೇಔಟ್‌

ಕೊಳಚೆ ನೀರು ರಸ್ತೆಗೆ
ಬಿಜೈ ಆಶ್ರಯ ರಸ್ತೆಯಲ್ಲಿ ಒಂದು ವರ್ಷದಿಂದ ಕೊಳಚೆ ನೀರನ್ನು ರಸ್ತೆಗೆ ಹರಿಯ ಬಿಡಲಾಗುತ್ತಿದೆ. ಕೆಟ್ಟ ವಾಸನೆಯಿಂದ ಕೂಡಿರುವ ಈ ನೀರಿನಿಂದಾಗಿ ಈ ರಸ್ತೆಯಾಗಿ ತೆರಳುವ ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರಿಗೆ ಹಲವು ಬಾರಿ ಈ ಬಗ್ಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಪಾಲಿಕೆಗೆ ದೂರು ನೀಡಲು ಮೊದಲು ಆನ್‌ಲೈನ್‌ ವ್ಯವಸ್ಥೆ ಇತ್ತು. ಪ್ರಸ್ತುತ ಅದನ್ನೂ ತೆಗೆದು ಹಾಕಲಾಗಿದೆ.
– ಸ್ಥಳೀಯ ನಿವಾಸಿಗಳು, ಬಿಜೈ

ತ್ಯಾಜ್ಯ ನೀರು ತೋಡಿಗೆ
ಕುಂಜತ್ತ ಬೈಲ್‌ ಮಾರುತಿ ಲೇಔಟ್‌ನಲ್ಲಿ ಮಳೆ ನೀರು ಹರಿಯುವ ತೋಡಿಗೆ ಒಳಚರಂಡಿ ತ್ಯಾಜ್ಯ ನೀರನ್ನು ಹರಿದು ಬಿಡುತ್ತಿರುವುದರಿಂದ ಸುತ್ತಮುತ್ತಲಿನ ಪರಿಸರದ ಬಾವಿಗಳ ನೀರು ಸಂಪೂರ್ಣ ಮಲಿನಗೊಂಡು ಕುಡಿಯಲು ಅಸಾಧ್ಯವಾಗಿದೆ. ಸುಮಾರು 60ರಷ್ಟು ಮನೆಗಳಿದ್ದು, ಒಳಚರಂಡಿ ನೀರಿನ ವಾಸನೆಯಿಂದಾಗಿ ವಾಸಿಸಲು ತೊಂದರೆಯಾಗಿದೆ. ಈ ಬಗ್ಗೆ ಹಲವಾರು ಬಾರಿ ಸ್ಥಳೀಯ ಕಾರ್ಪೊರೇಟರ್‌, ಪಾಲಿಕೆ ಆಯುಕ್ತರು ಮತ್ತು ಮೇಯರ್‌ರಿಗೆ ದೂರು ನೀಡಲಾಗಿದ್ದರೂ ಸಮಸ್ಯೆ ನಿವಾರಿಸಲು ಮುಂದಾಗಿಲ್ಲ. ಅಲ್ಲದೆ ಮಳೆ ನೀರು ಹೋಗಲು ಇದ್ದ ತೋಡೊಂದನ್ನು ಮುಚ್ಚಿ ಕಾಂಕ್ರೀಟ್‌ ರಸ್ತೆ ಮಾಡಲಾಗಿದೆ. ತತ್‌ಕ್ಷಣ ಸ್ಥಳೀಯಾಡಳಿತ ಇತ್ತ ಗಮನಹರಿಸಿ ಇಲ್ಲಿನ ನಿವಾಸಿಗಳಿಗೆ ವಾಸಯೋಗ್ಯ ಪರಿಸರ ಕಲ್ಪಿಸಿಕೊಡಬೇಕು.
– ದಯಾನಂದ ಆರ್‌. ಶೆಟ್ಟಿ, ಕುಂಜತ್ತಬೈಲ್‌

ಫುಟ್‌ಪಾತ್‌ ಕಾಮಗಾರಿ ಪೂರ್ಣಗೊಳಿಸಿ
ಲೇಡಿಹಿಲ್‌ ಚರ್ಚ್‌ ಮುಂಭಾಗದಲ್ಲಿ ಪಾಲಿಕೆ ವತಿಯಿಂದ ನಡೆಯುತ್ತಿರುವ ಫುಟ್‌ಪಾತ್‌ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ರಸ್ತೆ ಬದಿಯಲ್ಲಿ ಮಣ್ಣು ಅಗೆದಿರುವುದರಿಂದ ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ಕೆಸರು ನೀರು ಸನಿಹದಲ್ಲಿರುವ ಮನೆಗಳ ಅಂಗಳಕ್ಕೆ ನುಗ್ಗಿದೆ. ಮುಂದೆ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದಲ್ಲಿ ಮನೆಯೊಳಗೆ ಕೆಸರು ನೀರು ನುಗ್ಗುವ ಸಾಧ್ಯತೆ ಇದೆ. ಎರಡು ತಿಂಗಳಿಂದ ಕಾಮಗಾರಿ ನಡೆಯುತ್ತಿದ್ದರೂ ಇನ್ನೂ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ತತ್‌ಕ್ಷಣ ಪಾಲಿಕೆ ಇತ್ತ ಗಮನಹರಿಸಿ ಈ ಕೆಲಸವನ್ನು ಪೂರ್ಣಗೊಳಿಸಬೇಕು.
 - ಸ್ಥಳೀಯರು, ಲೇಡಿಹಿಲ್‌

ಕಸವನ್ನು ತತ್‌ಕ್ಷಣ ವಿಲೇವಾರಿ ಮಾಡಿ
ಮಂಗಳೂರಿನಲ್ಲಿ ಮುಂಗಾರು ಮಳೆಗಿಂತ ಮೊದಲು ಚರಂಡಿಯನ್ನು ಸ್ವತ್ಛಗೊಳಿಸುವ ಕಾರ್ಯ ಕೆಲವು ಸ್ಥಳಗಳಲ್ಲಿ ನಡೆಯುತ್ತದೆ. ಅಂತೆಯೇ ಮಾಲೆಮಾರ್‌ ರಸ್ತೆಯಲ್ಲಿಯೂ ಚರಂಡಿಯಿಂದ ಕಸ ಎತ್ತುವ ಕೆಲಸ ನಡೆದಿದೆ. ಆದರೆ ಒಂದು ವಾರ ಕಳೆದರೂ ಕಸ ಸಾಗಾಟ ಮಾಡಿಲ್ಲ. ಇದರಿಂದ ಪುನಃ ಆ ಕಸ ಚರಂಡಿಗೆ ಮತ್ತು ರಸ್ತೆಗೆ ಬೀಳುತ್ತಿದೆ. ಕಳೆದ ವರ್ಷ ಚರಂಡಿ ಮತ್ತು ತೋಡುಗಳನ್ನು ಸ್ವತ್ಛ ಮಾಡದೇ ಇದ್ದುದ ರಿಂದ ಆದ ಪರಿಣಾಮ ಎಲ್ಲರ ಕಣ್ಮುಂದಿದೆ. ಆದ್ದರಿಂದ ಸ್ಥಳೀಯಾಡಳಿತವು ಈ ಬಗ್ಗೆ ತತ್‌ಕ್ಷಣ ಗಮನ ಹರಿಸಿ ಕಸವನ್ನು ವಿಲೇವಾರಿ ಮಾಡಬೇಕು..
-ರಾಮಕೃಷ್ಣ ಭಟ್‌, ಮಾಲೆಮಾರ್‌

ಇಲ್ಲಿಗೆ ಕಳುಹಿಸಿ
“ಸುದಿನ-ಜನದನಿ’ ವಿಭಾಗ, ಉದಯವಾಣಿ, ಮಾನಸ ಟವರ್‌, ಮೊದಲ ಮಹಡಿ, ಎಂಜಿ ರಸ್ತೆ, ಪಿವಿಎಸ್‌ ವೃತ್ತ ಸಮೀಪ, ಕೊಡಿಯಾಲ್‌ಬೈಲ್‌, ಮಂಗಳೂರು-575003. ವಾಟ್ಸಪ್‌ ನಂಬರ್‌-9900567000. ಇ-ಮೇಲ್‌: mlr.sudina@udayavani.com


ಈ ವಿಭಾಗದಿಂದ ಇನ್ನಷ್ಟು

  • 2019ಕ್ಕೆ ವಿದಾಯ ಹೇಳುವ ಸಮಯ ಹತ್ತಿರವಾಗುತ್ತಿದ್ದಂತೆ ಹೊಸ ವರ್ಷದ ನಿರೀಕ್ಷೆ ಗರಿ ಗೆದರಿದೆ. ಸಹಜವಾಗಿ ವಾಹನ ತಯಾರಿಕಾ ಕ್ಷೇತ್ರದತ್ತಲೂ ಅನೇಕ ನಿರೀಕ್ಷೆಗಳಿರುತ್ತವೆ....

  • ಕಾರು ಅಪಘಾತಕ್ಕೊಳಗಾದಾಗ ಮುಂಭಾಗ, ಹಿಂಭಾಗ, ಡೋರ್‌ಗಳಿಗೆ ಹಾನಿಯಾಗಬಹುದು. ಕಾರಿನ ಬಾಡಿಗಳಲ್ಲಿ ಗುಳಿ(ಡೆಂಟ್‌) ಬಿದ್ದಿದೆ ಎಂದರೆ ಅದು ಆತಂಕಕಾರಿ ವಿಚಾರವೇ ಅಲ್ಲ....

  • ಹಿಂದೊಂದು ಕಾಲವಿತ್ತು. ಮಹಿಳೆಯರು ತಲೆತುಂಬಾ ಎಣ್ಣೆಹಾಕಿ ಜಡೆಹೆಣೆದು ಬಾಚಿಕೊಳ್ಳುವುದೇ ಒಂದು ಫ್ಯಾಶನ್‌ ಆಗಿತ್ತು. ಆದರೆ ಇಂದು ಈ ರೀತಿ ತಲೆಕಟ್ಟಿಕೊಳ್ಳಲು...

  • ವಸಂತ ಬದುಕಿನ ಹಾದಿಯುದ್ದಕ್ಕೂ ವಿಧವಿಧದ ಬಣ್ಣಗಳ ಚಿತ್ತಾರ, ಭಾವ ಜಗತ್ತನ ನಂಬಿಕೆಯ ಹಾದಿಯಲ್ಲಿ ಮೌನದ ಆಗಮನ. ಹೊಸ ಪರ್ವದ ನವ ಭಾವನೆಗಳ ಜತೆಯಲ್ಲಿ ಒಂಟಿತನದಲ್ಲೂ...

  • ಆಧುನಿಕತೆ ಬೆಳೆದಂತೆ, ತಂತ್ರಜ್ಞಾನ ಮುಂದುವರಿದಂತೆ ಮಾನಸಿಕ ನೆಮ್ಮದಿ ಎನ್ನುವುದು ಮರೀಚಿಕೆಯಾಗುತ್ತಿದೆ. ಎಲ್ಲವೂ ಬೆರಳ ತುದಿಯಲ್ಲೇ ದೊರೆಯುತ್ತದೆ ಎನ್ನುವುದೇನೋ...

ಹೊಸ ಸೇರ್ಪಡೆ