ಶಿರಡಿ ಶ್ರೀ ಸಾಯಿಬಾಬಾ

Team Udayavani, Jan 20, 2020, 5:34 AM IST

ಈ ಜಗತ್ತಿನಲ್ಲಿ ಹೊಸತು ಯಾವುದು? ಏನೂ ಇಲ್ಲ. ಹಾಗಾದರೆ ಹಳತು ಯಾವುದು? ಅದೂ ಇಲ್ಲ. ಎಲ್ಲವೂ ಯಾವಾಗಲೂ ಇದೆ, ಯಾವಾಗಲೂ ಇದ್ದೇ ಇರುತ್ತದೆ.

ಶಿರಡಿ ಶ್ರೀ ಸಾಯಿಬಾಬಾ ಪವಾಡ ಪುರುಷರು. ಬದುಕಿನ ನೈಜ ಉದ್ದೇಶವನ್ನು ಸರಳ ಮಾತುಗಳಿಂದ ಮನವರಿಕೆ ಮಾಡುತ್ತಾ, ದೇವರು ದೂರದಲ್ಲೆಲ್ಲೋ ಇಲ್ಲ. ನಮ್ಮೊಳಗೇ ಇದ್ದಾನೆ. ಅವನನ್ನು ಕಾಣುವ ಪ್ರಯತ್ನ ಮಾಡಬೇಕು. ಅದೆಂದರೆ ನಾವು ಇನ್ನಷ್ಟು ಒಳ್ಳೆಯವರಾಗುವುದು ಎಂದು ಸಾರಿದ ಮಹಾಪುರುಷ ಎನ್ನುತ್ತಾರೆ ಸುಷ್ಮಿತಾ ಜೈನ್‌.

ನಮ್ಮ ದೇಶದಲ್ಲಿ ಸಾಧು ಸಂತರು, ಮಹಾನ್‌ ಪುರುಷರು, ಆಧ್ಯಾತ್ಮಿಕ ಗುರುಗಳು ತಮ್ಮ ಬದುಕಿನ ಮೂಲಕವೇ ಸಂದೇಶ ಸಾರಿದ್ದಾರೆ. ಅವರ ಬದುಕೇ ನಮಗೆ ಸದಾ ಸ್ಫೂರ್ತಿಯನ್ನು ತರುವಂಥದ್ದು. ಕತ್ತಲೆಯಲ್ಲಿರುವವನಿಗೆ ಬೆಳಕು ತೋರುವಂಥದ್ದು. ನೆಮ್ಮದಿ ಯನ್ನು ಅರಸಿ ಬಂದವರಿಗೆ ಆಶ್ರಯ ನೀಡುವಂಥದ್ದು. ಇಂದಿನ ಒತ್ತಡದ ಬದುಕಿನಲ್ಲಿ ಗುರಿ ಇಲ್ಲದೆಯೇ ಅಥವಾ ಗುರಿಯ ಸ್ಪಷ್ಟತೆಯಿಲ್ಲದೇ ಒಟ್ಟೂ ಬದುಕು ನಡೆಸುತ್ತಿ ರುವಾಗ ಸುಖ ಶಾಂತಿಯನ್ನು ಅರಸುವುದು ಸಾಮಾನ್ಯ.

ಹಲವು ಮಹಾಪುರುಷರು, ದಾರ್ಶನಿಕರು ಒಂದೆಡೆ ಇದ್ದರೆ, ಮತ್ತೂಂದೆಡೆ ಪವಾಡ ಪುರುಷರು, ದೇವ ಮಾನವರೂ, ಮಹಾನ್‌ ಗುರುಗಳೂ ಈ ದೇಶದಲ್ಲಿ ಜನಿಸಿದ್ದಾರೆ. ಶ್ರೀ ರಾಮಕೃಷ್ಣ ಪರಮಹಂಸರು, ರಮಣ ಮಹರ್ಷಿಗಳು, ಶಿರಡಿ ಶ್ರೀ ಸಾಯಿಬಾಬಾ-ಹೀಗೆ ಹಲವಾರು ಮಹಾನ್‌ ಪುರುಷರನ್ನು ದೇವ ಸ್ವರೂಪಿಗಳೆಂದೇ ಭಾವಿಸಲಾಗುತ್ತಿದೆ.
ಶಿರಡಿ ಶ್ರೀ ಸಾಯಿಬಾಬಾ ಇಂದು ಜನಮಾನಸದಲ್ಲಿ ವಿರಾಜಮಾನರಾಗಿರುವ ಮಹಾಪುರುಷರು. ಅವರ ಜನ್ಮತಿಥಿ, ಜನ್ಮಸ್ಥಾನ ಮತ್ತು ಅವರ ಹೆತ್ತವರ ಬಗ್ಗೆ ಲಭ್ಯ ಮಾಹಿತಿ ಕಡಿಮೆ. ಈ ಬಗ್ಗೆ ಸಾಕಷ್ಟು ಚರ್ಚೆಯೂ ನಡೆದಿದೆ. ಅದೇ ರೀತಿ ಸಾಯಿ ಬಾಬಾರನ್ನು ಸಂತ ಕಬೀರರ ಅವತಾರ ಎನ್ನುವವರೂ ಇದ್ದಾರೆ. ಮಹಾರಾಷ್ಟ್ರದ ಪರ್ಭನಿ ಜಿಲ್ಲೆಯ ಪತ್ರಿ ಎಂಬ ಗ್ರಾಮದಲ್ಲಿ ಸಾಯಿಬಾಬಾ ಅವರ ಜನನವು 1835ರಲ್ಲಿ ಆಯಿತು ಎಂಬ ಮಾಹಿತಿಯೂ ಇದೆ.

ದೇವರಿದ್ದಾನೆ ದೇಹತ್ಯಾಗ ಮಾಡುವವರೆಗೂ ಬಾಬಾ ಅವರು ಶಿರಡಿಯಲ್ಲಿ ನೆಲೆನಿಂತು ತಮ್ಮ ಲೀಲೆಗಳಿಂದ ಭಗವದ್ಭಕ್ತರನ್ನು ಹರಸುತ್ತಿದ್ದರು. ದೇವರಿದ್ದಾನೆ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟವರು ಅವರು. ಹಲವಾರು ಪವಾಡಗಳನ್ನು ಮಾಡಿ ಭಕ್ತರ ಆತ್ಮಬಲವನ್ನು ಹೆಚ್ಚಿಸಿದವರು. ಎಲ್ಲಾ ಸಮುದಾಯಗಳಲ್ಲಿ ಏಕತೆ ಮತ್ತು ಸೌಹಾರ್ದ ಭಾವ ಮೂಡಿಸಲು ಪ್ರಯತ್ನಿಸಿದವರು. ದೇವರೊಬ್ಬನೇ, ನಾಮ ಹಲವು ಎಂದು ಸಾರಿದವರು. ನಿಮ್ಮದೇ ಧರ್ಮ ಅನುಸರಿಸಿ ಸತ್ಯ ದರ್ಶನವಾಗುತ್ತದೆ ಎಂದು ಬೋಧಿಸಿದವರು.ಗುರುಸ್ಥಾನದ ಮಹತ್ವ ಸಾರಿದ ಮಹಾನ್‌ ಸಂತ ಮಾನವನ ಜೀವನದಲ್ಲಿ ಗುರುವಿನ ಸ್ಥಾನ ಬಹಳ ಪ್ರಮುಖವಾದುದು. ಗುರುವಿನಲ್ಲಿ ಸಂಪೂರ್ಣ ಶರಣಾಗತನಾದರೆ ಮಾತ್ರ ಎಲ್ಲರೂ ತಾವು ಬಯಸಿದ್ದನ್ನು ಜೀವನದಲ್ಲಿ ಪಡೆಯಬಹುದು. ಭಕ್ತನಿಗೆ ಸಂಪೂರ್ಣ ಶಕ್ತಿಯನ್ನು ದಯಪಾಲಿಸುವವನು ಗುರು ಒಬ್ಬನೇ. ಗುರುವಿನಲ್ಲಿ ಭಕ್ತಿಯಿಡುವುದು ದೇವರಲ್ಲಿ ಭಕ್ತಿಯಿಡುವುದಕ್ಕಿಂತ ಹೆಚ್ಚಿನಮಹತ್ವ ಪಡೆದಿದೆ. ಆದರಿಂದ ಗುರುವೇ ಶ್ರೇಷ್ಠನು ಎಂಬುದಕ್ಕೆ ನಿದರ್ಶನರಾದವರು ಶಿರಡಿ ಶ್ರೀ ಸಾಯಿಬಾಬಾ.

ಆಡಂಬರದ ಆಚರಣೆಗೆ
ದೇವ ಒಲಿಯುವುದಿಲ್ಲ
ದೇವರನ್ನು ನಾವು ಯಾವುದರಿಂದ ಮೆಚ್ಚಿಸಬಹುದು, ಅವನನ್ನು ಒಲಿಸಿಕೊಳ್ಳಬಹುದು ಎಂಬ ಚಿಂತೆಯಲ್ಲಿಯೇ ನಾವು ಮುಳುಗಿರುತ್ತೇವೆ . ಆತ ನಮ್ಮ ರೂಪ ನೋಡಿ ಒಲಿಯುವನೇ, ನಮ್ಮ ಕೀರ್ತಿ ನೋಡಿ ಹರಸುವನೇ, ನಮ್ಮ ಶ್ರೀಮಂತಿಕೆ ನೋಡಿ ಆಶೀರ್ವದಿಸುವನೇ ಎಂಬ ನಾನಾ ಪ್ರಶ್ನೆಗಳಿರುತ್ತವೆ. ಆದರೆ ಭಗವಂತ ಈ ಯಾವುದರಿಂದಲೂ ಪ್ರಭಾವಿತನಾಗಿ ಒಲಿಯಲಾರ. ಅವನು ಒಲಿಯುವುದು ಶುದ್ಧ ಮನಸ್ಸಿನ ಭಕ್ತಿಗೆ.

ನಮ್ಮ ದೇಶದಲ್ಲಿ ಸಂತರು, ಶರಣರನ್ನು ನಿತ್ಯವೂ ಸ್ಮರಿಸುತ್ತೇವೆ. ಅವರು ಯಾವುದೇ ಆಸ್ತಿ ಮಾಡಲಿಲ್ಲ. ಸಂಪತ್ತುಗಳಿಸಲಿಲ್ಲ. ಹೊಲ ಮನೆ ಮಾಡಲಿಲ್ಲ. ಅಷ್ಟೇ ಏಕೆ ಅವರಿಗೆ ತೊಟ್ಟುಕೊಳ್ಳಲು ಸರಿಯಾದ ಒಂದು ಬಟ್ಟೆ ಇರಲಿಲ್ಲ, ಅವರನ್ನು ಸಾವಿರ ಸಾವಿರ ವರ್ಷಗಳಿಂದಲೂ ನಿತ್ಯವೂ ಸ್ಮರಣೆ ಮಾಡುತ್ತೇವೆ. ಕಾರಣ ಅವರ ಹತ್ತಿರವಿದ್ದದ್ದು ಭಗವಂತನ ಸ್ಮರಣೆ. ಆಡಂಬರ ಮಹತ್ವಾಕಾಂಕ್ಷೆಗಳನ್ನು ದಿಟ್ಟಿಸುವಂತಹ ಸರಳ ಮತ್ತು ನಿಷ್ಕಲ್ಮಷ ಮನಸ್ಸಿನಿಂದ ಮಾತ್ರ ದೇವನ ಪ್ರೀತಿಗೆ ಪಾತ್ರರಾಗಲು ಸಾಧ್ಯ ಎಂದು ಸಾರಿದವರು ಸಾಯಿಬಾಬಾ ಗುರುಗಳು.

ಸಮನ್ವಯತೆಗೆ ಆದ್ಯತೆ
ಬಾಬಾ ವೈಯಕ್ತಿಕವಾಗಿ ಸಂಪ್ರದಾಯ ಧರ್ಮ ಆಚರಣೆ ಗಳನ್ನು, ಜಾತಿ ವಾದಗಳನ್ನು ವಿರೋಧಿಸುತ್ತಿದ್ದರು. ಯಾವುದೇ ಒಂದು ಧರ್ಮಕ್ಕೆ ಕಟ್ಟು ಬೀಳದೆ ಧರ್ಮಾತೀತವಾದ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು. ಎಲ್ಲ ಜನಾಂಗದ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು. ದಾನಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತಿದ್ದ ಬಾಬಾ ಇದ್ದುದ್ದನೇ ಹಂಚಿಕೊಂಡು ತಿನ್ನುವಂತೆ ಸದಾ ಬೋಧಿಸುತ್ತಿದ್ದರು. ಬದುಕೆಂಬುದು ಇರುವುದು ಒಬ್ಬನಿಗಲ್ಲ, ನಮ್ಮಲ್ಲಿದ್ದದ್ದನ್ನು ಹಂಚಿಕೊಳ್ಳುವುದಕ್ಕೆಎಂದವರು ಅವರು.ಪರರ ನಿಂದನೆಯನ್ನು ನಿಮ್ಮಿಂದ ಸಹಿಸಲು ಸಾಧ್ಯವಾಗ ದಿದ್ದರೆ ಸರಳವಾಗಿ ಒಂದು ಮಾತು ಹೇಳಿ, ಇಲ್ಲವೇ ಎರಡು ಮಾತು. ಅದಕ್ಕಿಂತ ಹೆಚ್ಚಿನದೇನೂ ಬೇಡ. ಅಲ್ಲಿಂದ ಹೊರಡಿ. ಯಾರೊಂದಿಗೂ ಜಗಳಕ್ಕಿಳಿಯಬೇಡಿ, ನಿಂದನೆ ಮಾಡಬೇಡಿ. ಯಾರು ಕಷ್ಟ ಮತ್ತು ಸುಖ ಎರಡೂ ಕಾಲದಲ್ಲೂ ನಿನ್ನೊಂದಿಗೆ ಇರುತ್ತಾರೋ ಅವರನ್ನೇ ಗೆಳೆಯರನ್ನಾಗಿ ಸ್ವೀಕರಿಸು ಎಂಬುದು ಅವರ ಬೋಧನೆಯ ಸಾರ.

ದುರಾಸೆ ಸಲ್ಲದು
ನಾವು ದೇವರಿಗೆ ಮೊದಲು ಸೇವೆ ಮಾಡಿ ಜೀವನ ಸಾಕ್ಷಾತ್ಕಾರ ಮಾಡಿಕೊಳ್ಳುವುದು ಬಿಟ್ಟು ಅದು ಬೇಕು, ಇದು ಬೇಕು ಎನ್ನುವುದು ಸರಿಯಲ್ಲ. ಇದ್ದುದ್ದರಲ್ಲಿಯೇ ಸಂತೃಪ್ತಿ ಕಾಣುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂಬುದು ಬಾಬಾರ ಸರಳ ಜೀವನ ಸೂತ್ರ. ಸಂಬಂಧಗಳಿಗೆ ಏಕೆ ಮಹತ್ವವನ್ನು ಕೊಡಬೇಕು ಎಂಬುದನ್ನೂ ಹೇಳಿದ್ದರು ಸಾಯಿಬಾಬಾ.ಯಾಂತ್ರಿಕರಾಗಿ ಮತ್ತಷ್ಟು ಬೇಕು ಎಂಬ ಧೋರಣೆಯನ್ನು ಪಾಲಿಸುವ ಬದಲು ಇದ್ದುದರಲ್ಲೇ ಖುಷಿ ಪಡಬೇಕೆನ್ನುವುದು ನಿಜಕ್ಕೂ ಪ್ರಮುಖ ನೀತಿಪಾಠ. ಆಸೆಗಳ ಬೆನ್ನೇರಿ ವಾಸ್ತವವನ್ನು ಮರೆತು ನಿರೀಕ್ಷೆಗಳ ಸಂಕೋಲೆಯಲ್ಲಿ ಬಂಧಿಯಾಗುವ ಮನೋಪ್ರವೃತ್ತಿಯನ್ನು ಬಿಟ್ಟು, ಸನ್ಮಾರ್ಗದಲ್ಲಿ ಸಾಗುವಂತೆ ಪ್ರೇರೇಪಿಸಿದವರು ಸಾಯಿಬಾಬಾ ಗುರುಗಳು.

ಬದುಕಿನ ನಿಜದ ಆನಂದ
ನೀನು ಶ್ರೀಮಂತನಾಗಿದ್ದರೆ ವಿನಮ್ರನಾಗಿರು. ಮರಗಳು ಹಣ್ಣು ಬಿಟ್ಟಾಗ ಹೇಗೆ ಕೆಳಕ್ಕೆ ಬಾಗುತ್ತವೆ ನೋಡು. ಹಣವನ್ನು ಒಳ್ಳೆಯ ಉದ್ದೇಶ, ಕೆಲಸಗಳಿಗೆ, ಸದಾಚಾರಕ್ಕೆ ದಾನ ಮಾಡು. ಉದಾರವಾಗಿರುವುದನ್ನೂ ಅತಿರಂಜಿಸದಿರು. ಮನುಷ್ಯನೂ ಸೇರಿ ದಂತೆ ಯಾರೇ ಬಂದರೂ, ಯಾವುದೇ ಪ್ರಾಣಿಗಳು ಬಂದರೂ ಉದಾರ ಭಾವದಿಂದ ಕಾಣು. ಮನುಷ್ಯ ನಲ್ಲಿ ದೈವಿಕತೆಯನ್ನು ಕಾಣು. ನಿನ್ನ ಮತ್ತು ಉಳಿದ ವರ ಮಧ್ಯೆ ಇರುವ ಗೋಡೆಯನ್ನು ನಾಶ ಮಾಡು.

ನನಗೆ ಯಾರ ಮೇಲೂ ಕೋಪ ಬರುವುದಿಲ್ಲ. ಯಾವುದಾದರೂ ತಾಯಿ ತನ್ನ ಮಕ್ಕಳ ಮೇಲೆ ಕೋಪ ಮಾಡಿಕೊಳ್ಳುತ್ತಾಳೆಯೇ? ಸಮುದ್ರ ಎಂದಾದರೂ ಕೋಪಗೊಂಡು ನೀರನ್ನೆಲ್ಲ ವಾಪಸು ಆಯಾ ನದಿಗಳಿಗೆ ಕಳುಹಿಸುತ್ತದೆಯೇ? ನಮ್ಮ ಕೆಲಸವೇನು? ಸನ್ನಡತೆಯಿಂದ ಬಾಳುವುದು. ಅಷ್ಟೇ ಸಾಕು. ದೇವರು ಬಹಳ ದೂರದಲ್ಲಿಲ್ಲ. ಅವನು ಸ್ವರ್ಗದಲ್ಲೂ ಇಲ್ಲ, ನರಕದಲ್ಲೂ ಇಲ್ಲ. ಅವನು ಯಾವಾಗಲೂ ನಮ್ಮ ಬಳಿಯೇ ಇದ್ದಾನೆ, ಇರುತ್ತಾನೆ.ಯಾವಾಗ ನಿನ್ನನ್ನು ನೀನು ನಿನ್ನ ಅಂತಃಚಕ್ಷುವಿನಿಂದ ನೋಡಿಕೊಳ್ಳುತ್ತೀಯೋ ಆಗ ನೀನೇ ದೇವರೆಂಬುದು ಮತ್ತು ಅವನಿಂದ ಬೇರಿಲ್ಲ ಎಂಬುದು ತಿಳಿಯುತ್ತದೆ. ಅದೇ ನಿಜದ ಆನಂದ.

ಶಿರಡಿಗೆ ಹೋಗಿ ಬನ್ನಿ
ಶ್ರೀ ಸದ್ಗುರು ಸಾಯಿಬಾಬಾ ನೆಲೆಸಿರುವ ಶ್ರೀಕ್ಷೇತ್ರವೇ ಶಿರಡಿ. ಮಹಾರಾಷ್ಟ್ರದ ನಾಸಿಕ್‌ನಿಂದ ಸುಮಾರು 76 ಕಿ.ಮೀ. ದೂರದಲ್ಲಿದೆ. ಸಾಯಿ ಬಾಬಾರ ಶಿರಡಿ ಕ್ಷೇತ್ರಕ್ಕೆ ಎಲ್ಲ ದೊಡ್ಡ ಪಟ್ಟಣಗಳಿಂದ ರಸ್ತೆ, ರೈಲು ಮತ್ತು ವಿಮಾನ ಮಾರ್ಗವಾಗಿ ತಲುಪಬಹುದಾಗಿದೆ. ನಾಸಿಕ್‌, ಪುಣೆ ಮತ್ತು ಮುಂಬಯಿಯಿಂದ ಬಸ್‌ಗಳ ಮೂಲಕ ತೆರಳಬಹುದು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ