ಶಾಲೆಗೆ ಹೊರಟ ಶ್ರೀಕಂಠ

Team Udayavani, Sep 7, 2019, 5:56 AM IST

ಹಿರಿಯೂರು ಪಟೇಲರಿಗೆ ಮೊಮ್ಮಕ್ಕಳಿರಲಿಲ್ಲ. ದೇವಸ್ಥಾನ, ವೈದ್ಯರು ಅಂತ ಸುತ್ತಾಟ ನಡೆಸಿ, ಬಹಳ ಸಮಯದ ಅನಂತರ ಒಬ್ಬ ಮೊಮ್ಮಗ ಹುಟ್ಟಿದ. ಮನೆ ಮಂದಿಗೆಲ್ಲ ಆತನೆಂದರೆ ಅತಿಯಾದ ಮುದ್ದು. ಅವನ ಹೆಸರು ಶ್ರೀಕಂಠ. ಅಜ್ಜ- ಅಜ್ಜಿಗೆ ಮೊಮ್ಮಗ ಏನು ಮಾಡಿದರೂ ಖುಷಿಯೋ ಖುಷಿ. ಅವನಿಗೆ ಶಾಲೆಗೆ ಹೋಗಲು ಇಷ್ಟವಿರಲಿಲ್ಲ. ಅಜ್ಜ-ಅಜ್ಜಿ ಅವನ ತಾಳಕ್ಕೆ ಕುಣಿದರು. ಇಷ್ಟು ಜಮೀನಿರುವಾಗ ಮೊಮ್ಮಗ ಶಾಲೆಗೆ ಹೋಗಿ ನೌಕರಿ ಮಾಡೋದೇನಿದೆ ಅನ್ನೋ ಭಾವನೆ ಪಟೇಲರಿಗೆ. ಆದರೆ, ಪಟೇಲರ ಮಗ ಸುರೇಶ- ಸೊಸೆ ರೂಪಾಳಿಗೆ ತಮ್ಮ ಮಗ ಶಾಲೆಗೆ ಹೋಗದಿರುವುದು ದೊಡ್ಡ ತಲೆ ನೋವಾಯಿತು. ಈ ಸಮಸ್ಯೆಯನ್ನು ಜಾಣ್ಮೆಯಿಂದ ಬಗೆಹರಿಸಬೇಕು ಎಂದು ಅವರಿಬ್ಬರು ಸೇರಿ ಒಂದು ಉಪಾಯ ಮಾಡಿದರು.

ಒಮ್ಮೆ ಸುರೇಶ ಹೊಲದ ಕಡೆ ಹೊರಟಿದ್ದರು. ಅಪ್ಪನ ಜತೆ ತಾನು ಬರುತ್ತೇನೆ ಎಂದು ಶ್ರೀಕಂಠನೂ ಹಠ ಮಾಡಿದ. ಅಪ್ಪ ಮಗ ಇಬ್ಬರೂ ಹೊಲದ ಕಡೆ ಹೊರಟರು. ಹೊಲದಲ್ಲಿ ಬಹಳಷ್ಟು ಕೆಲಸಗಳು ಬಾಕಿ ಉಳಿದಿದ್ದವು. ಸುರೇಶ ಪಂಚೆಯನ್ನು ಎತ್ತಿ ಕಟ್ಟಿ ಹೊಲದಲ್ಲಿ ಬೆಳೆದಿದ್ದ ಕಳೆಯನ್ನು ಕೀಳಲು ಶುರುಮಾಡಿದ. ಶ್ರೀಕಂಠನಿಗೂ ಒಂದು ಕೆಲಸ ಹಚ್ಚಿದರು. ಇಬ್ಬರೂ ಬಿಸಿಲಿನಲ್ಲಿ ಕೆಲಸ ಮಾಡಿ ದಣಿದರು. ಅದೇ ಸಮಯಕ್ಕೆ ಮಕ್ಕಳು ಆಡಿ ನಲಿಯುವ ದನಿ ಕೇಳಿಸಿತು. ಶ್ರೀಕಂಠನಿಗೆ ಅಚ್ಚರಿಯಾಗಿ ದನಿ ಬಂದ ಕಡೆ ನಡೆದುಹೋದನು. ಹೊಲದಿಂದ ಸ್ವಲ್ಪ ದೂರದಲ್ಲಿ ಒಂದು ಶಾಲೆಯಿತ್ತು. ಅದರ ಮುಂದಿದ್ದ ಮೈದಾನದಲ್ಲಿ ಕೆಲ ಮಕ್ಕಳು ಆಟವಾಡುತ್ತಿದ್ದರು. ಕೆಲವರು ಚಿತ್ರ ಬಿಡಿಸುತ್ತಿದ್ದರು, ಇನ್ನು ಕೆಲವರು ಮೇಸ್ಟ್ರೆ ಹೇಳುವ ಕಥೆಗಳನ್ನು ಕೇಳುವುದರಲ್ಲಿ ಮಗ್ನರಾಗಿದ್ದರು. ಅದನ್ನು ನೋಡಿ ಶ್ರೀಕಂಠನಿಗೆ ಶಾಲೆ ಎಂದರೆ ಏನು ಅನ್ನೋದು ಅರ್ಥವಾಯಿತು. ಅವನಿಗೂ ಶಾಲೆಗೆ ಹೋಗುವ ಮನಸ್ಸಾಯಿತು. ಶ್ರೀಕಂಠ ಮನೆಗೆ ಬಂದವನೇ ನಾನು ನಾಳೆಯಿಂದ ಶಾಲೆಗೆ ಹೋಗುತ್ತೇನೆ’ ಎಂದನು. ಈ ಮಾತನ್ನು ಕೇಳಿ ಅಪ್ಪ ಅಮ್ಮಂದಿರಿಬ್ಬರಿಗೂ ಖುಷಿಯಾಯಿತು. ಆದರೆ ಪಟೇಲರ ಮುಖ ಸಣ್ಣದಾಯಿತು. ಶ್ರೀಕಂಠ ತಾತ, ನಾನು ಓದಿ ದೊಡ್ಡವನಾಗಿ ನಮ್ಮ ಜಮೀನಿನಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡ್ತೀನಿ’ ಎಂದಾಗ ಪಟೇಲರಿಗೂ ಖುಷಿಯಾಯಿತು.

  ಪ್ರೇಮಾ ಲಿಂಗದಕೋಣ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ