ದಾರಿ ತೋರಿದ ಗುರುವಿಗೊಂದು ಧನ್ಯವಾದ

Team Udayavani, Jun 24, 2019, 5:30 AM IST

ವರ್ಷ ಸರಿದಹಾಗೆ ವಯಸ್ಸಿನ ಜತೆಗೆ ಜವಾಬ್ದಾರಿಯು ಅಂಟಿಕೊಳ್ಳುತ್ತಾ ಸಾಗುತ್ತೆ, ಇದರ ನಡುವೆ ಕೆಲವೊಮ್ಮೆ ಸಾಗಿ ಬಂದ ದಾರಿಯ ನೆನಪು ಆವರಿಸುತ್ತದೆ.

ಇತ್ತೀಚೆಗೆ ಒಂದು ಚಲನಚಿತ್ರ ನೋಡ್ತಾ ಇದ್ದೆ. ಅದರಲ್ಲಿದ ಒಂದು ದೃಶ್ಯ ತುಂಬಾ ಕಾಡಿತ್ತು. ಮತ್ತೆ ಬಾಲ್ಯದ ನೆನ ಪತ್ತು ಮುಂದಿರಿಸಿತ್ತು. ಶಿಕ್ಷಣ ಜೀವನಕ್ಕೆ ಮುಕ್ತಾಯ ಹಾಡಿ ಸುಮಾರು ಮೂರು ನಾಲ್ಕು ವರ್ಷಗಳೇ ಕಳೆದಿವೆೆ, ಅದರಲ್ಲಿ ತುಂಬ ಸ್ಮರಣಿಯವಾಗಿದ್ದು ಹೈಸ್ಕೂಲ್‌ ಸಮಯ. ಮತ್ತೇ ಬೇಕೆಂದರೂ ಅದು ಮರಳಿ ಬಾರದ ಸಮಯ.

ಹೈಸ್ಕೂಲ್‌ ಇದ್ದದ್ದು ಸಮುದ್ರದ ಬದಿಯಲ್ಲಿ ಆ ವಾತಾವರಣ, ಸಹಪಾಠಿಗಳು, ಶಿಕ್ಷಕರು ಎಲ್ಲವೂ ಅದ್ಭುತ. ಬದು ಕಿನ ಮೌಲ್ಯಗಳನ್ನು ಕಲಿಸಿದ ಹೈಸ್ಕೂಲ್‌ ಜೀವನದಲ್ಲಿ ಚೇಷ್ಟೆ ಕಿತಾಪತಿಗಳಿಗೆ ಕಡಿಮೆ ಇರಲಿಲ್ಲ.

ಒಂದು ದಿನ ಶಾಲೆ ಮಹಡಿ ಮೇಲಿನಿಂದ ಸಮುದ್ರದ ಸೌಂದರ್ಯವನ್ನು ವೀಕ್ಷಿಸುತ್ತಿದ್ದೆವು. ಸಮುದ್ರದ ಅಲೆಗಳ ಏರಿಳಿತ ಜೀವನಕ್ಕೇನೋ ಪಾಠ ಹೇಳು ವಂತೆ ಭಾಸವಾಯಿತು. ಆದರೆ ಆಗದು ಅರ್ಥವಾಗಲಿಲ್ಲ. ಕೆಲವೇ ದಿನಗಳಲ್ಲಿ ಎಸೆಸೆಲ್ಸಿ ಪೂರ್ವಭಾವಿ ಪರೀಕ್ಷೆ ಇತ್ತು. ಅದೊಂದು ದಿನ ವಯಕ್ತಿಕ ಕಾರಣದಿಂದಾಗಿ ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ. 2- 3 ದಿನ ಶಾಲೆಗೆ ಬಾರದೇ ಇದ್ದುದರಿಂದ ಶಿಕ್ಷಕರು ಸ್ವತಃ ಮನೆ ಕಡೆ ಹುಡುಕಿಕೊಂಡು ಬಂದರು. ಆ ವೇಳೆ ನಾನು ಮನೆಯಲ್ಲಿ ಇರಲಿಲ್ಲ. ಹೀಗಾಗಿ ಮನೆ ಮಂದಿಗೆ ವಿಷಯ ತಿಳಿಸಿದರು. ನಾನು ಮನೆಗೆ ಬಂದಾಗ ತಿಳಿಯಿತು ಹಾಜರಾತಿ ಕೊರತೆಯಿಂದ ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಎನ್ನುವ ವಿಷಯ. ನನ್ನ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅವರೇ ಬಂದು ತಿಳಿ ಹೇಳಿದ್ದು ಕೇಳಿ ಕಣ್ತುಂಬಿ ಬಂತು. ಹಾಗೇ ಆ ವರ್ಷ ನನ್ನ ಶಾಲೆ ಶುಲ್ಕ ಅವರೇ ತುಂಬಿದ್ರು.

ಸರಕಾರಿ ಶಾಲೆ ಎಂದರೆ ಹಣ, ಆಸ್ತಿ ಸಂಪಾದನೆಗೆ ದಾರಿ ಎನ್ನುವವರಿದ್ದಾರೆ. ಆದರೆ ನಿಜವಾದ ಕಾಳಜಿಯಿಟ್ಟು ಕೆಲಸ ಮಾಡುವವರೂ ಇರುತ್ತಾರೆ. ಬದುಕಿನಲ್ಲಿ ಎಲ್ಲರೂ ಏನಾದರೂಂದು ಪಾಠವನ್ನು ಹೇಳಿ ಕೊಟ್ಟು ಹೋಗುತ್ತಾರೆ. ಅಂಥದ್ದರಲ್ಲಿ ಶಿಕ್ಷಣದ ಮಹತ್ವದ ಜತೆಗೆ ತಮ್ಮ ವೃತ್ತಿಯ ಮೇಲಿನ ಬದ್ಧತೆಯನ್ನು ಕಲಿಸಿಕೊಟ್ಟ ಗುರುವಿಗೊಂದು ಧನ್ಯಾವಾದ ಹೇಳಲೇಬೇಕು.

– ಕಾರ್ತಿಕ್‌ ಚಿತ್ರಾಪುರ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ