ಗೊರಕೆಗೆ ನೀಡಿ ಮುಕ್ತಿ

Team Udayavani, Jun 18, 2019, 5:00 AM IST

ನಿದ್ದೆ ಬರುವುದೊಂದೇ ಗೊತ್ತು. ಅದೇನು ಗೊರಕೆ ಹೊಡೀತಾರೋ..ಈ ಗೊರಕೆ ಸದ್ದಿನಲ್ಲಿ ಮನೆಯವರಿಗೆ ಯಾರಿಗೂ ನಿದ್ದೆ ಇಲ್ಲದಂತಾಗುತ್ತದೆ ಎಂದು ಮನೆಮಂದಿ ಎಲ್ಲ ಗೊಣಗುತ್ತಾ ಕುಳಿತುಕೊಳ್ಳುವುದು ಮನೆ ಮನೆಯ ಕತೆ. ಮನೆಯಲ್ಲಿ ವಯಸ್ಸಾದವರು, ಸ್ಥೂಲಕಾಯದ ವ್ಯಕ್ತಿಗಳಿದ್ದರೆ ಪ್ರತಿ ದಿನ ಗೊರಕೆ ಸದ್ದು ಇಡೀ ಮನೆಯಲ್ಲಿ ಪ್ರತಿಧ್ವನಿಸುತ್ತಿರುವುದು ಸಾಮಾನ್ಯ.

ನಿದ್ದೆ ಸರಿಯಾಗಿ ಆಗದೇ ಇದ್ದರೆ ಆ ದಿನ ಹಾಳಾಗುವುದು ಸಾಮಾನ್ಯ. ಮನುಷ್ಯರ ಉತ್ತಮವಾದ ನಿದ್ದೆಗೆ ಅಡ್ಡಿ ಮಾಡುವ ವಿಷಯಗಳಲ್ಲಿ ಪ್ರಥಮ ಸ್ಥಾನ ಈ ಗೊರಕೆಗೆ ಸೇರಬೇಕು. ದಿಂಬಿಗೆ ತಲೆಯಿಟ್ಟ ಕೂಡಲೇ ನಿದ್ದೆ ಜಾರುವವರಿಗೆ ಈ ಗೊರಕೆ ಸಂಗಾತಿಯಾಗಿ ಜತೆಯಲ್ಲಿರುತ್ತದೆ. ಗೊರಕೆ ಹೊಡೆಯುವವರ ನಿದ್ದೆಗೆ ಇದು ಯಾವುದೇ ಸಮಸ್ಯೆಯಾಗದಿದ್ದರೂ ಅವರ ಪಕ್ಕದಲ್ಲಿ ಮಲಗಿದ ವ್ಯಕ್ತಿಗೆ ನಿದ್ದೆಯಿಲ್ಲದಂತೆ ಮಾಡಿ ಬಿಡುತ್ತದೆ. ಅನೇಕರಿಗೆ ಗೊರಕೆ ಹೊಡೆಯುತ್ತೇನೆ ಎಂಬ ಸಂಗತಿ ಗೊತ್ತೇ ಇರುವುದಿಲ್ಲ. ಗೊರಕೆಯ ಸದ್ದಿಗೆ ನಿದ್ದೆ ಬಾರದೇ ಒದ್ದಾಡಿದವರು ಹೇಳಿದಾಗಲೇ ತಿಳಿಯುವುದು ಸಮಸ್ಯೆಯ ಅವಾಂತರ.

ವಯಸ್ಸಾದಂತೆಯೋ, ಸ್ಥೂಲಕಾಯದ ದೇಹ ರಚನೆ ಇದ್ದಾಗಲೋ ನಿದ್ದೆಯಲ್ಲಿ ಗೊರಕೆ ಹೊಡೆಯುವುದು ಸಾಮಾನ್ಯವಾಗಿ ಹೆಚ್ಚುತ್ತಿದೆ. ಹಲವರಿಗೆ ಇದು ಸಾಮಾನ್ಯ ಸಮಸ್ಯೆಯಾಗಿ ಕೂಡ ಕಾಡುತ್ತಿದೆ. ವಯಸ್ಸು ಹೆಚ್ಚಿದಂತೆ ಉಸಿರಾಟದ ಸಮಸ್ಯೆ ಬಂದಾಗ ಗೊರಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಇದು ದೈನಂದಿನ ಸಮಸ್ಯೆಯಾಗಲು ಸ್ಥೂಲಕಾಯತೆ ಕೂಡ ಒಂದು ಕಾರಣ.

ಗೊರಕೆಗೆ ಕಾರಣ
ಕುತ್ತಿಗೆಯಲ್ಲಿ ಸೇರಿಕೊಳ್ಳುವ ಕೊಬ್ಬು ಗಂಟಲಿನ ಎಲುಬನ್ನು ಕಿರಿದಾಗಿಸಿ ಗೊರಕೆಗೆ ಕಾರಣವಾಗುತ್ತದೆ. ವಯಸ್ಸಾದಂತೆ ಗಂಟಲಿನ ಎಲುಬು ಬಿಗಿ ಕಳೆದುಕೊಂಡು ಗಾಳಿಯಾಡುವ ದಾರಿಯನ್ನು ಸಣ್ಣದಾಗಿಸುತ್ತದೆ. ಇದರಿಂದ ಗೊರಕೆ ಸಮಸ್ಯೆ ಹೆಚ್ಚಾಗುತ್ತದೆ. ಮೂಗಿಗೆ ಸೋಂಕು ತಗುಲಿ ಗೊರಕೆ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಇವೆಲ್ಲ ವ್ಯಕ್ತಿಗತವಾಗಿ ಬರುವ ಸಮಸ್ಯೆಗಳಾದರೆ, ವಂಶಪಾರಂಪರ್ಯವಾಗಿಯೂ ಗೊರಕೆ ಸಮಸ್ಯೆ ಬರುವ ಸಾಧ್ಯತೆಗಳಿವೆ. ಕುಟುಂಬದಲ್ಲಿ ಅಥವಾ ಮನೆಯ ಸದಸ್ಯರಲ್ಲಿ ಯಾರಾದರೂ ಗೊರಕೆಯಿಂದ ಬಳಲುತ್ತಿದ್ದರೆ ಅದು ಮನೆಯ ಇತರರಲ್ಲೂ ಕಾಣಿಸಿಕೊಳ್ಳುತ್ತದೆ.

ಗೊರಕೆಯೊಂದು ಸಮಸ್ಯೆ. ನಿದ್ದೆಯಲ್ಲಿರುವಾಗ ಬಂದು ಬೆಳಗ್ಗಿನ ಹೊತ್ತಿನಲ್ಲಿ ಸರಿ ಹೋಗುತ್ತದೆ ಎಂದು ನಿರ್ಲಕ್ಷಿಸಿದರೆ, ಮುಂದೆ ಅದೇ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತದೆ. ಮುಖ್ಯವಾಗಿ ಗೊರಕೆಯನ್ನು ನಿರ್ಲಕ್ಷಿಸಿದರೆ ಉಸಿರಾಟದ ತೊಂದರೆ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ವೈದ್ಯರು. ಗೊರಕೆ ಹೆಚ್ಚಾದರೆ ಹೃದಯಕ್ಕೂ ಅಪಾಯಕಾರಿಯಾಗಿದೆ. ವಯಸ್ಸಾದವರಲ್ಲಿ ಹೆಚ್ಚಾಗಿ ಕಾಣಿಸಿಕೊಂಡರೂ ಕೆಲವೊಮ್ಮೆ ಸಣ್ಣ ವಯಸ್ಸಿನಲ್ಲೂ ಕಾಣಿಸಿಕೊಂಡು ವೈವಾಹಿಕ ಜೀವನದಲ್ಲಿಯೂ ಬಿರುಕುಂಟಾಗಿರುವ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಈ ನಿಟ್ಟಿನಲ್ಲಿ ಪ್ರಥಮ ಹಂತದಲ್ಲೇ ಚಿಕಿತ್ಸೆ ಪಡೆದುಕೊಂಡು ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬೇಕಾದುದು ಅಷ್ಟೇ ಅವಶ್ಯ.

ಮದ್ಯ ಸೇವನೆ ಬೇಡ
ಮಲಗುವ ಮುನ್ನ ಮದ್ಯ ಸೇವನೆಯಿಂದ ಗೊರಕೆ ಉಂಟಾಗುವ ಸಾಧ್ಯತೆ ಇದೆ. ಮದ್ಯ ಸೇವನೆಯಿಂದ ಮೂಗು ಮತ್ತು ಬಾಯಿಯ ಮೂಲಕ ಗಾಳಿ ಒಳ ಹೋಗಲು ಅಡೆತಡೆ ಉಂಟಾಗಿ ಗೊರಕೆಯಾಗಿ ಪರಿವರ್ತನೆಯಾಗುತ್ತದೆ. ಪದೇ ಪದೆ ಮೂಗು ಕಟ್ಟುವುದರಿಂದ ಮೂಗಿನ ಮೂಲಕ ಗಾಳಿ ದೇಹದೊಳಗೆ ಹೋಗಲಾಗದೆ ಗೊರಕೆಯಾಗಿ ಮಾರ್ಪಾಡಾಗುತ್ತದೆ.

ಗೊರಕೆಗೆ ಮನೆಮದ್ದು ಬೆಸ್ಟ್‌
ವೈದ್ಯರ ಔಷಧಗಳ ಮೂಲಕ ಗೊರಕೆಯನ್ನು ನಿವಾರಿಸಬಹುದು. ಆದರೆ ಅದಕ್ಕಿಂತಲೂ ಮನೆಮದ್ದು ಬೆಸ್ಟ್‌ ಎನ್ನುತ್ತಾರೆ ತಿಳಿದವರು. ಗಂಟಲು, ಮೂಗಿನಲ್ಲಿ ಸೋಂಕು ದೂರ ಮಾಡುವ ಗುಣ ಪುದೀನಾ ಎಣ್ಣೆಯಲ್ಲಿದೆ. ಉಗುರು ಬೆಚ್ಚಗಿನ ನೀರಲ್ಲಿ ಕೆಲವು ಹನಿ ಪುದಿನಾ ಎಣ್ಣೆ ಸೇರಿಸಿ ರಾತ್ರಿ ಮಲಗುವ ಮುಂಚೆ ಬಾಯಿ ಮುಕ್ಕಳಿಸಬೇಕು. ಒಂದು ಲೋಟ ಬಿಸಿ ಹಾಲಿನಲ್ಲಿ ಸ್ವಲ್ಪ ಅರಶಿನ ಹುಡಿ ಹಾಕಿ ಕುಡಿದು ಮಲಗಿದರೆ ನಿಧಾನಕ್ಕೆ ಗೊರಕೆ ಸಮಸ್ಯೆ ನಿವಾರಣೆಯಾಗುತ್ತದೆ. ರಾತ್ರಿ ಊಟದೊಡನೆ ಹಸಿ ಬೆಳ್ಳುಳ್ಳಿ ತುಂಡುಗಳನ್ನು ಕಲಸಿ ಉಣ್ಣುವುದರಿಂದ ಗೊರಕೆ ಶಮನಕ್ಕೆ ಸಹಕಾರಿಯಾಗುತ್ತದೆ. ಲೋಟ ನೀರಿಗೆ ಏಲಕ್ಕಿ ಹಾಕಿ ಚೆನ್ನಾಗಿ ಕುದಿಸಿ ಮಲಗುವ ಮುನ್ನ ಕುಡಿದರೆ ಹಾಗೂ ಒಂದು ಲೋಟ ನೀರಿಗೆ ಜೇನು ಸೇರಿಸಿ ಮಲಗುವ ಮುನ್ನ ಕುಡಿಯುವುದರಿಂದಲೂ ಇದನ್ನು ತಡೆ ಹಿಡಿಯಬಹುದು.

ಪ್ರಾರಂಭದಲ್ಲೇ ಗುರುತಿಸಿ
ಸ್ಥೂಲಕಾಯದವರಲ್ಲಿ ಗೊರಕೆ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ವಂಶಪಾರಂಪರ್ಯ ವಾಗಿ ಬರುವ ಸಾಧ್ಯತೆಯೂ ಇದೆ. ಸಮಸ್ಯೆಯನ್ನು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿ ವೈದ್ಯರಲ್ಲಿಗೆ ಬಂದು ಸೂಕ್ತ ಸಲಹೆ ಪಡೆದುಕೊಳ್ಳಬೇಕು. ವ್ಯಕ್ತಿಯನ್ನು ನೋಡಿ, ಪರೀಕ್ಷಿಸಿದ ಬಳಿಕವಷ್ಟೇ ಚಿಕಿತ್ಸೆ ನೀಡಬಹುದು.
– ಡಾ| ಗೋಪಾಲಕೃಷ್ಣ ನಾಯಕ್‌ ವೈದ್ಯರು

-   ಧನ್ಯಾ ಬಾಳೆಕಜೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗ ಜ್ವರ. ಈ ಜ್ವರದಲ್ಲಿ ಬಹಳಷ್ಟು ವಿಧಗಳಿವೆ. ಡೆಂಗ್ಯೂ, ಮಲೇರಿಯಾ ಹೀಗೆ ಅನೇಕ ಜ್ವರಗಳು ಈಗಾಗಲೇ ದೇಶದೆಲ್ಲೆಡೆ ಮನುಷ್ಯನನ್ನು...

  • ಇಂಗ್ಲಿಷ್‌ನಲ್ಲಿ ಫಾಕ್ಸ್‌ ನಟ್ಸ್‌ ಎಂದು ಕರೆಸಿಕೊಳ್ಳುವ ಮಖಾನ ರುಚಿಯಾದ ತಿಂಡಿಗೆ ಮಾತ್ರವಲ್ಲ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ...

  • ಮಳೆಗಾಲದಲ್ಲಿ ಆಹಾರ ಸೇವನೆಯ ಕುರಿತು ಜಾಗೃತಿ ಅತ್ಯಗತ್ಯ. ಹೊರಗಿನ ತಣ್ಣಗಿನ ವಾತಾವರಣಕ್ಕೆ ಬೆಚ್ಚಗಿನ ತಿಂಡಿ ಬೇಕೆನಿಸಿದರೂ ಅವು ಆರೋಗ್ಯಕಾರಿಯಲ್ಲ. ಯಾವುದೇ...

  • ಕಣ್ಣ ಮುಂದೆ ಜಾಹಂಗೀರು, ಜಿಲೇಬಿ ಕೈಬೀಸಿ ಕರೆಯುತ್ತಿದ್ದರೂ ನಾಲಗೆ ಚಪಲ ಬಿಡುತ್ತಿಲ್ಲ. ತಿನ್ನದಿದ್ದರೆ ನಾಲಿಗೆಗೆ ಮೋಸ ತಿಂದರೆ ದೇಹವೇ ಕೈಲಾಸ ಎಂದು ಮುದಿವಯಸ್ಸಿನ...

  • ಉಸಿರಾಟದ ತೊಂದರೆ ಇಂದಿನ ಸಾಮಾನ್ಯ ಸಮಸ್ಯೆ. ಅಸ್ತಮಾ ಅಥವ ಉಬ್ಬಸ ಎಂದು ಕರೆಯಲ್ಪಡುವ ಈ ಉಸಿರಾಟದ ಸಮಸ್ಯೆಗಳು ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುತ್ತವೆ. ಆರೋಗ್ಯ...

ಹೊಸ ಸೇರ್ಪಡೆ