ಉರ್ವಸ್ಟೋರ್‌ ಮಾರುಕಟ್ಟೆ ಅಭಿವೃದ್ಧಿಯಾಗಲಿ

Team Udayavani, Mar 10, 2019, 9:42 AM IST

ಸ್ಮಾರ್ಟ್‌ ನಗರಿಯಾಗಿರುವ ಮಂಗಳೂರಿನಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದರಲ್ಲಿ ಸಿಂಹಪಾಲು ಮಾರುಕಟ್ಟೆಗಳ ಅಭಿವೃದ್ಧಿಯಾಗಿರುವುದು ಸಂತಸದ ವಿಚಾರ. ನಗರವು ಮಹಾನಗರವಾಗಿ ಪರಿವರ್ತನೆಯಾಗುವಾಗ ಶಾಪಿಂಗ್‌ ಮಾಲ್‌ ಸಂಸ್ಕೃತಿಯೂ ಬೆಳೆದು ಬಂತು. ಮಾರುಕಟ್ಟೆಯಿಂದ ಬಂದಂತಹ ಪರಿಕಲ್ಪನೆಯಲ್ಲೇ ಮಾಲ್‌ ಸಂಸ್ಕೃತಿಯೂ ಬೆಳೆದು ಬಂದಿದೆ. ಇದೊಂದು ಅತ್ಯುತ್ತಮ ಬೆಳವಣಿಗೆ.

ಆಧುನಿಕ ಸ್ಪರ್ಶದೊಂದಿಗೆ ಹಿಂದಿನ ಪರಿಕಲ್ಪನೆ ಸೇರಿದರೆ ಅತ್ಯುತ್ತಮವಾಗಿರುತ್ತದೆ. ಮಾಲ್‌ನಷ್ಟು ಆಕರ್ಷಣೀಯವಲ್ಲದಿದ್ದರೂ ಅದಕ್ಕೆ ಪರ್ಯಾಯವಾಗಿ ಅತ್ಯುತ್ತಮ ಮಟ್ಟದ ಮಾರುಕಟ್ಟೆಗಳು ನಮ್ಮ ಮಂಗಳೂರಿನಲ್ಲಿ ಬೆಳಕಿಗೆ ಬರುತ್ತಿದೆ. ಉರ್ವದ ಹೊಸ ಮಾರುಕಟ್ಟೆಯೇ ಅದಕ್ಕೆ ಸಾಕ್ಷಿ. ಕಾವೂರಿನಲ್ಲಿಯು ಇತ್ತೀಚೆಗೆ ಹೊಸ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. ಸುರತ್ಕಲ್‌, ಅಳಕೆ ಮಾರುಕಟ್ಟೆಗಳು ನಿರ್ಮಾಣವಾಗುತ್ತಿವೆ. ಕದ್ರಿ ಮತ್ತು ಕಂಕನಾಡಿ ಮಾರುಕಟ್ಟೆ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ಅದರೊಂದಿಗೆ ಕೃಷ್ಣಾಪುರ ಮತ್ತು ಕಾಟಿಪಳ್ಳದಲ್ಲೂ ಮಾರುಕಟ್ಟೆಗಳ ಕೆಲಸಗಳು ನಡೆಯುತ್ತಿವೆ.

ಅಂತೆಯೇ ಉರ್ವಸ್ಟೋರ್‌ ಮಾರುಕಟ್ಟೆಯ ಬಗ್ಗೆಯೂ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ. ಸರಿಯದ ವ್ಯವಸ್ಥೆಗಳಿಲ್ಲದ ಬಹು ಪುರಾತನ ಮಾರುಕಟ್ಟೆ ಇಲ್ಲಿದೆ. ಸುತ್ತುಮುತ್ತು ತುಂಬಾ ಕೊಳಕು ತುಂಬಿದೆ. ಕ್ರಮಬದ್ಧವಾದ ಅಂಗಡಿಗಳಿಲ್ಲ, ಸರಿಯಾದ ಶೌಚಾಲಯವೂ ಇಲ್ಲ.

ಉರ್ವಸ್ಟೋರ್‌ನ ಸುತ್ತ ಮುತ್ತ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ, ಪೊಲೀಸ್‌ ಸ್ಟೇಶನ್‌, ಇನ್ಫೋಸಿಸ್‌, ತುಳು ಭವನ, ಜಿಲ್ಲಾ ಪಂಚಾಯತ್‌, ಸರಕಾರಿ ಅಧಿಕಾರಿಗಳ/ ನೌಕರರ ವಸತಿ ಗೃಹಗಳು, ಸಾಲು ಸಾಲಾಗಿ ಅಂಗಡಿ/ ಮಳಿಗೆಗಳು, ಬಹುಮಹಡಿ ಕಟ್ಟಡಗಳಿವೆ. ಅಲ್ಲದೇ ನಮ್ಮ ನಗರದಲ್ಲಿಯೇ ಅತೀ ಹೆಚ್ಚು ಮನೆಗಳಿರುವ ಕೋಡಿಕಲ್‌ ಪ್ರದೇಶ ಸನಿಹದಲ್ಲೇ ಇದ್ದು, ಇಲ್ಲಿನ ಬಹುತೇಕ ಜನರು ಉರ್ವಸ್ಟೋರ್‌ ಮಾರುಕಟ್ಟೆಯನ್ನೇ ಅವಲಂಭಿಸಿದ್ದಾರೆ. ಆದರೆ ಈ ಮಾರುಕಟ್ಟೆ ಅವ್ಯವಸ್ಥೆಯಿಂದಿರುವುದರಿಂದ ಬಹಳ ಮಂದಿ ದೂರದ ಉರ್ವ ಅಥವಾ ಮಂಗಳೂರು ಮಾರುಕಟ್ಟೆಗೋ ತೆರಳುತ್ತಿದ್ದಾರೆ.

ನಗರ ವ್ಯಾಪ್ತಿಯಲ್ಲಿ ಅತೀ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ಪ್ರದೇಶಗಳಲ್ಲಿ ಉರ್ವಸ್ಟೋರ್‌ ಕೂಡ ಒಂದು. ಹೀಗಾಗಿ ಇಲ್ಲಿಗೆ ಅತ್ಯಂತ ಸುಸಜ್ಜಿತ ಮಾರು ಕಟ್ಟೆಯ ಅಗತ್ಯ ಹೆಚ್ಚಾಗಿದೆ.

ವಿಶ್ವನಾಥ್‌ ಕೋಟೆಕಾರ್‌, 
ಕೋಡಿಕಲ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ