ಕುಡಿಯುವ ನೀರು ಸಮಸ್ಯೆ ನಿರ್ವಹಣೆಗೆ ಸಮರ್ಪಕ ಯೋಜನೆ ಜಾರಿಯಾಗಲಿ

Team Udayavani, Mar 17, 2019, 7:17 AM IST

ಬೇಸಗೆ ಆರಂಭವಾಗಿದೆ. ಅಲ್ಲಲ್ಲಿ ನೀರಿನ ಸಮಸ್ಯೆಯೂ ಕಾಡತೊಡಗಿದೆ. ಮಂಗಳೂರು ಮಹಾನಗರ ವ್ಯಾಪ್ತಿಯ ಕೆಲವೆಡೆ ಬೇಸಗೆ ಮಾತ್ರವಲ್ಲ ಮಳೆಗಾಲದಲ್ಲೂ ನೀರಿನ ಸಮಸ್ಯೆ ಇರುತ್ತದೆ. ಪ್ರಸ್ತುತ ಲಭ್ಯವಿರುವ ನೀರಿನಲ್ಲಿ ಮುಂದಿನ 55 ದಿನಗಳಿಗಾಗುವಷ್ಟು ನೀರಿದೆ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಸ್ಮಾರ್ಟ್‌ ನಗರಿಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಶಾಶ್ವತ ಯೋಜನೆಯೊಂದನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಅಭಿವೃದ್ಧಿ ಹೊಂದುತ್ತಿರುವ ನಗರದಲ್ಲಿ ಮುಂದಿನ ದಿನಗಳಲ್ಲಿ ನೀರಿಗಾಗಿ ಹೆಚ್ಚಿನ ಬೇಡಿಕೆ ಉಂಟಾಗುವುದರಿಂದ ಈ ನಿಟ್ಟಿನಲ್ಲಿ ಈಗಲೇ ಚಿಂತನೆ ನಡೆಸಬೇಕಿದೆ.

ಕಡು ಬೇಸಗೆ ಆರಂಭಗೊಂಡಿದೆ. ನಗರಕ್ಕೆ ಕುಡಿಯುವ ನೀರಿನ ಮೂಲವಾಗಿರುವ ನೇತ್ರಾವತಿ ನದಿಯಲ್ಲಿ ನೀರಿನ ಒಳಹರಿವು ನಿಂತಿದೆ. ತುಂಬೆ ವೆಂಟೆಡ್‌ ಡ್ಯಾಂ ಹಾಗೂ ಶಂಭೂರಿನಲ್ಲಿರುವ ಎಎಂಆರ್‌ ಡ್ಯಾಂನಲ್ಲಿ ನೀರಿನ ಸಂಗ್ರಹ ಮಟ್ಟದಲ್ಲಿ ಇಳಿಮುಖ ಆರಂಭಗೊಂಡಿದೆ. ಮಳೆಗಾಲ ಆರಂಭಕ್ಕೆ ಇನ್ನೂ ಸುಮಾರು 75 ದಿನಗಳಿವೆ. ಅಲ್ಲಿಯವರೆಗೆ ತುಂಬೆ ವೆಂಟೆಡ್‌ ಡ್ಯಾಂನಿಂದ ಲಭ್ಯವಿರುವ ನೀರನ್ನು ಮಂಗಳೂರು ನಗರಕ್ಕೆ ಹೊಂದಿಸಿಕೊಳ್ಳಬೇಕಾಗಿದೆ.

ಪ್ರಸ್ತುತ ಅಂದಾಜಿನ ಪ್ರಕಾರ ತುಂಬೆ ವೆಂಟೆಡ್‌ ಡ್ಯಾಂ ಹಾಗೂ ಶಂಭೂರಿನಲ್ಲಿರುವ ಎಎಂಆರ್‌ ಡ್ಯಾಂಗಳ ನೀರಿನ ಸಂಗ್ರಹವನ್ನು ಬಳಸಿಕೊಂಡು ಸುಮಾರು 55 ದಿನಗಳವರೆಗೆ ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಪೂರೈಕೆ ಮಾಡಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಒಟ್ಟು ನೀರಿನ ಲಭ್ಯತೆಯನ್ನು ಅಂದಾಜಿಸಿಕೊಂಡು ಬೇಸಗೆ ಪೂರ್ತಿ ಸುಗಮವಾಗಿ ಕುಡಿಯುವ ನೀರು ಸರಬರಾಜು ಕುರಿತು ಕಾರ್ಯಯೋಜನೆಯೊಂದನ್ನು ಸಿದ್ಧಪಡಿಸುವುದು ಅವಶ್ಯ.

ಸಾಮಾನ್ಯವಾಗಿ ಮಾರ್ಚ್‌ನಿಂದ ಕುಡಿಯುವ ನೀರು ಪೂರೈಕೆಯಲ್ಲಿ ಪಾಲಿಕೆ ಹೆಚ್ಚಿನ ಸವಾಲು ಎದುರಿಸಬೇಕಾಗುತ್ತದೆ. ಮಾರ್ಚ್‌ 10ರ ವೇಳೆಗೆ ನೇತ್ರಾವತಿ ನದಿಯಲ್ಲಿ ಒಳಹರಿವು ಸ್ಥಗಿತಗೊಳ್ಳುತ್ತದೆ. ಇದರೊಂದಿಗೆ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಿನ ಮಟ್ಟದ ಏರಿಕೆಯು ನಿಲ್ಲುತ್ತದೆ. ಇದು ಮೇ ಅಂತ್ಯದವರೆಗೂ ಮುಂದುವರಿಯುತ್ತದೆ. ನಡುವೆ ಜಲನಯನ ಪ್ರದೇಶದಲ್ಲಿ ಒಂದೆರಡು ಉತ್ತಮ ಮಳೆಯಾದರೆ ಒಂದಷ್ಟು ರಿಲೀಫ್ ಸಿಗುತ್ತದೆ. ಕಳೆದ ಸಾಲಿನಲ್ಲಿ ಪಾಲಿಕೆಗೆ ಕುಡಿಯುವ ನೀರು ಪೂರೈಕೆಯಲ್ಲಿ ಹೆಚ್ಚಿನ ಸಮಸ್ಯೆ ತಲೆದೋರಿರಲಿಲ್ಲ. ಆದರೆ ಈ ಬಾರಿ ನೇತ್ರಾವತಿ ನದಿಯಲ್ಲಿ ನವೆಂಬರ್‌ ತಿಂಗಳಿನಿಂದಲೇ ಒಳಹರಿವಿನಲ್ಲಿ ತೀವ್ರಗತಿಯಲ್ಲಿ ಇಳಿಮುಖ ಗೋಚರಿಸಿದ್ದ ಹಿನ್ನೆಲೆಯಲ್ಲಿ ನವೆಂಬರ್‌ ಮಧ್ಯಭಾಗದಲ್ಲೇ ತುಂಬೆ ವೆಂಟೆಡ್‌ ಡ್ಯಾಂನ ಎಲ್ಲ ಗೇಟ್‌ಗಳನ್ನು ಮುಚ್ಚಿ 6 ಮೀಟರ್‌ ನೀರು ನಿಲ್ಲಿಸಲಾಗಿತ್ತು. ಈಗ ತುಂಬೆ ವೆಂಟೆಡ್‌ಡ್ಯಾಂನಲ್ಲಿ ನೀರಿನ ಮಟ್ಟ 5.2 ಮಿ.ಅಸುಪಾಸಿನಲ್ಲಿದೆ.

ತುಂಬೆ ವೆಂಟೆಡ್‌ಡ್ಯಾಂನಿಂದ ಮೇಲ್ಗಡೆ ಇರುವ ಎಎಂಆರ್‌ಡ್ಯಾಂನಲ್ಲಿ ವಾಸ್ತವದಲ್ಲಿ ದೊರೆಯುವ ನೀರಿನ ಪ್ರಮಾಣ 7 ಮೀಟರ್‌. ತುಂಬೆಯಲ್ಲಿ ನೀರಿನ ಮಟ್ಟ ಕುಸಿತವಾದರೆ ಆಗ ನೆರವಿಗೆ ಬರುವುದು ಎಎಂಆರ್‌, ದಿಶಾ ಅಣೆಕಟ್ಟುಗಳು. ಆದ್ದ ರಿಂದ ಬೇಸಗೆಯಲ್ಲಿ ಮಂಗಳೂರು ಮಹಾನಗರಕ್ಕೆ ಸುಗಮ ಕುಡಿಯುವ ನೀರು ಪೂರೈಕೆ ನಿಟ್ಟಿನಲ್ಲಿ ಈಗಿಂದಲೇ ಪೂರಕ ಸಿದ್ದತೆಗಳನ್ನು ಮಾಡಿಕೊಂಡರೆ ಮುಂದಕ್ಕೆ ಸಮಸ್ಯೆಗಳು ತಲೆದೋರದಂತೆ ನೋಡಿಕೊಳ್ಳಬಹುದಾಗಿದೆ.

ವಿತರಣೆ ವ್ಯವಸ್ಥೆ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೇಸಗೆ ಅಲ್ಲದ ಸಮಯದಲ್ಲೂ ಕೆಲವು ಕಡೆ ನೀರು ಸರಿಯಾಗಿ ತಲುಪುತ್ತಿಲ್ಲ. ಕೆಲವು ಭಾಗಗಳಿಗೆ ಎರಡು ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದೆ. ಬೇಸಗೆಯಲ್ಲಿ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಗಳಿವೆ. ಪ್ರಸ್ತುತ ಪರಿಸ್ಥಿತಿಯನ್ನು ವಿಶ್ಲೇಷಿಸಿಕೊಂಡು ಮುಂದಿನ ದಿನಗಳಲ್ಲಿ ನೀರು ನಿರ್ವಹಣೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ವಿತರಣೆ ವ್ಯವಸ್ಥೆಯನ್ನು ವ್ಯವಸ್ಥಿತಗೊಳಿಸುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಮೇ 29 ರವರೆಗೆ ತುಂಬೆ ವೆಂಟೆಡ್‌ ಡ್ಯಾಂನಿಂದ ದೊರೆಯಬಹುದಾದ ನೀರಿನ ಪ್ರಮಾಣವನ್ನು ಅಂದಾಜಿಸಿಕೊಂಡು ಅದಕ್ಕೆ ಪೂರಕವಾಗಿ ವಿತರಣೆ ವ್ಯವಸ್ಥೆಯನ್ನು ಹೊಂದಿಸಿಕೊಳ್ಳುವ ಬಗ್ಗೆ ಕಾರ್ಯಯೋಜನೆ ರೂಪಿಸುವುದು ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಯಲ್ಲಿ ಸಹಕಾರಿಯಾಗಬಹುದು.

ಬೋರ್‌ವೆಲ್‌ಗ‌ಳ ಸುಸ್ಥಿತಿ
ಮಂಗಳೂರು ನಗರದಲ್ಲಿ ಪ್ರಸ್ತುತದ ಅಂಕಿಅಂಶದಂತೆ 137 ಹಾಗೂ ಸುರತ್ಕಲ್‌ನಲ್ಲಿ 59 ಸೇರಿ ಒಟ್ಟು 196 ಬೋರ್‌ವೆಲ್‌ಗ‌ಳು ಇವೆ. ತುಂಬೆಯಿಂದ ಸರಬರಾಜಾಗುವ ಜತೆಗೆ ಈ ಬೋರ್‌ವೆಲ್‌ಗ‌ಳಿಂದಲೂ ನೀರು ಸರಬರಾಜಾಗುತ್ತಿದೆ. ನೀರಿನ ಸಮಸ್ಯೆ ತಲೆದೋರಿದ್ದ ಸಂದರ್ಭದಲ್ಲಿ ಬಹಳಷ್ಟು ಪ್ರದೇಶದಲ್ಲಿ ಈ ಬೋರ್‌ ವೆಲ್‌ಗ‌ಳು ಜನರ ನೆರವಿಗೆ ಬಂದಿವೆ. ಆದ್ದ ರಿಂದ ಅಗತ್ಯ ಕ್ರಮಗಳನ್ನು ಕೈಗೊಂಡು ಈ ಬೋರ್‌ಗಳನ್ನು ಸುಸ್ಥಿತಿಯಲ್ಲಿಡುವ ಕಾರ್ಯ ನಡೆದರೆ ಅವಶ್ಯ ಸಂದರ್ಭದಲ್ಲಿ ಇವುಗಳನ್ನು ಬಳಸಬಹುದಾಗಿದೆ.

ಬಾವಿಗಳ ಸ್ವಚ್ಛತೆ
ಬೋರ್‌ವೆಲ್‌ಗ‌ಳಲ್ಲದೆ ನಗರದಲ್ಲಿ ಬಳಕೆಗೆ ಯೋಗ್ಯವಾಗಿರುವ ಬಾವಿಗಳನ್ನು ಸುಸ್ಥಿತಿಯಲ್ಲಿಡಲು ಕಾರ್ಯೋನ್ಮುಖವಾಗುವುದು ಅಗತ್ಯ. ನಗರದಲ್ಲಿ ಸರಕಾರಿ ಹಾಗೂ ಖಾಸಗಿ ಸಹಿ ತ ಕುಡಿಯುವ ನೀರಿಗೆ ಬಳಸಲು ಯೋಗ್ಯವಾದ ಒಟ್ಟು 90 ತೆರೆದ ಬಾವಿಗಳನ್ನು ಈ ಹಿಂದೆ ಗುರುತಿಸಲಾಗಿತ್ತು. ಮನೆಗಳ ಆವರಣಗಳಲ್ಲಿ ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಮನೆಯ ಆವರಣಗಳಲ್ಲಿರುವ ಬಾವಿಗಳನ್ನು ಸ್ವಚ್ಛವಾಗಿಟ್ಟು ಬಳಕೆಗೆ ಯೋಗ್ಯವಾಗಿರಿಸುವುದು ಅತಿ ಅಗತ್ಯ. ಒಂದೊಮ್ಮೆ ಬಾವಿ ನೀರು ಕುಡಿಯಲು ಯೋಗ್ಯವಾಗಿರದಿದ್ದರೆ ಅಂತಹ ಬಾವಿಗಳ ನೀರನ್ನು ಇತರ ಉದ್ದೇಶಗಳಿಗೆ ಬಳಸಬಹುದಾಗಿದೆ.

ಜನಜಾಗೃತಿ ಅಗತ್ಯ
ನೀರು ಸಂರಕ್ಷಣೆಯಲ್ಲಿ ಮಿತ ಬಳಕೆ ಜಾಗೃತಿ ಬಹುದೊಡ್ಡ ಕೊಡುಗೆಯಾಗುತ್ತದೆ. ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ಕಾರ್ಯವೂ ನಡೆಯುವುದು ಅವಶ್ಯವಾಗಿದೆ. ನೀರನ್ನು ಸರಿಯಾಗಿ ಬಳಸಿ ಸಂರಕ್ಷಿಸುವ ಮೂಲಕ ಸಮರ್ಪಕ ನಿರ್ವಹಣೆ ಮಾಡಬಹುದಾಗಿದೆ. ನೀರನ್ನು ಪೋಲು ಮಾಡದೇ, ಅಪವ್ಯಯವಾಗದಂತೆ ಮುಂಜಾಗ್ರತೆ ವಹಿಸಿ ಮಳೆ ಪ್ರಾರಂಭವಾಗುವವರೆಗೆ ಲಭ್ಯ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಲು ಒತ್ತು ನೀಡಬೇಕಾಗಿದೆ. ನೀರಿನ ಬಳಕೆಯಲ್ಲೂ ಜಾಗೃತಿ ಮತ್ತು ಕೌಶಲಗಳ ಅಳವಡಿಕೆಗೂ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳ ಮೂಲಕ ಮಾಹಿತಿ ನೀಡಿ ನೀರಿನ ಮಿತಬಳಕೆ ಕುರಿತು ಜಾಗೃತಿ ಮೂಡಿಸುವುದು ನೀರು ಸಮಸ್ಯೆ ನಿರ್ವಹಣೆಗೆ ಪೂರಕವಾಗಬಹುದು. 

ಕೇಶವ ಕುಂದರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.



ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ