ಅನಾಹುತ ಸಂಭವಿಸುವ ಮೊದಲು ತೋಡುಗಳ ಸಮಸ್ಯೆ ಸರಿಪಡಿಸಿ

Team Udayavani, Apr 10, 2019, 6:00 AM IST

ನಗರ ವ್ಯಾಪ್ತಿಯ ನಾಗರಿಕ ಸಮಸ್ಯೆಗಳ ನಿಮ್ಮ
ದನಿಗೆ ನಮ್ಮ ದನಿ ಸೇರಿಸುವ ಪ್ರಯತ್ನ ಈ ಸುದಿನ ಜನದನಿ. ಓದುಗರು ತಮ್ಮ ಪ್ರದೇಶದ ರಸ್ತೆ, ನೀರು, ಸ್ವತ್ಛತೆ, ನೈರ್ಮಲ್ಯ, ಮಾಲಿನ್ಯ, ಸಂಚಾರ ವ್ಯವಸ್ಥೆ ಸೇರಿದಂತೆ ಯಾವುದೇ ಸಮಸ್ಯೆ ಕುರಿತು ತಿಳಿಸಬಹುದು. ಈ ಅಂಕಣ ಪ್ರತಿ ಬುಧವಾರ ಪ್ರಕಟವಾಗಲಿದೆ. ವೈಯಕ್ತಿಕ ಸಮಸ್ಯೆ, ಕಾನೂನು ವ್ಯಾಜ್ಯದ ದೂರು ಅಥವಾ ವಿವಾದದಲ್ಲಿರುವ ವಿಷಯಗಳನ್ನು ಪರಿಗಣಿಸುವುದಿಲ್ಲ. ನಾಗರಿಕರು ತಮ್ಮ ಪ್ರದೇಶದ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಬರೆದು ಪೂರಕವೆನಿಸುವ ಒಂದು ಪೋಟೊ ಜತೆ ಹೆಸರು, ವಿಳಾಸ ಮತ್ತು ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ ಅಂಚೆ, ಇಮೇಲ್‌ ಅಥವಾ ವಾಟ್ಸಪ್‌ ಮೂಲಕ ಕಳುಹಿಸಬಹುದು. ಅರ್ಹ ದೂರುಗಳನ್ನು ಪ್ರಕಟಿಸಿ, ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಸುದಿನ ಮಾಡಲಿದೆ.

ಕಸದ ವಾಹನ ಬರುವುದಿಲ್ಲ
ಮಹಾನಗರ ಪಾಲಿಕೆಯ ಕಸದ ವಾಹನಗಳು ಪ್ರತಿ ದಿನ ಎಲ್ಲ ಕಡೆಗಳಿಗೆ ಬರುವುದಿಲ್ಲ ಎಂಬ ಸಮಸ್ಯೆ ಅನೇಕ ದಿನಗಳಿಂದಿವೆ. ಶಕ್ತಿನಗರದ ಬಳಿಯ ಕೆವಿಎಸ್‌ ಮಹಾಕಾಳಿ ದ್ವಾರದ ಬಳಿಯ ಕೆಲವು ನಿವಾಸಿಗಳಿಗೆ ಕಸದ ಸಮಸ್ಯೆಗಳಿಗೆ ಮುಕ್ತಿ ಸಿಗಬೇಕಿದೆ. ಈ ಪ್ರದೇಶದಲ್ಲಿರುವ ಒಳ ರಸ್ತೆಗಳಿಗೆ ಪ್ರತೀ ದಿನ ಕಸದ ವಾಹನಗಳು ಬರುವುದಿಲ್ಲ. ಶಕ್ತಿನಗರದ ಮುಖ್ಯ ರಸ್ತೆಗಳ ಬದಿಯಲ್ಲಿರುವ ಕಸವನ್ನಷ್ಟೇ ತೆಗೆದುಕೊಂಡು ಹೋಗಲಾಗುತ್ತಿದೆ. ಇದೇ ಸಮಸ್ಯೆಯಿಂದ ಒಳರಸ್ತೆಗಳ ಮನೆ ಮುಂದೆ ಕಸ ಹಾಗೇ ಬಿದ್ದಿರುತ್ತದೆ. ಸಂಬಂಧಪಟ್ಟ ಇಲಾಖೆ ಕೂಡಲೇ ಇತ್ತ ಗಮನ ಹರಿಸಿ ಸಮಸ್ಯೆಗೆ ಪರಿಹಾರ ನೀಡಬೇಕು.
ನಿರೀಕ್ಷಾ, ವಿದ್ಯಾರ್ಥಿನಿ,
ಡಾ| ಪಿ. ದಯಾನಂದ ಪೈ, ಸತೀಶ್‌ ಪೈ ಸರಕಾರಿ ಪ್ರ.ದ. ಕಾಲೇಜು, ರಥಬೀದಿ

ಕೊಳಚೆ ನೀರು ನಿಂತು ಸೊಳ್ಳೆ ಕಾಟ
ಪ್ರಗತಿ ನಗರದ ಮೂಡಾ ಲೇ ಔಟ್‌ ಬಳಿ ಇರುವ ಒಳಚರಂಡಿಯಲ್ಲಿ ಕೊಳಚೆ ನೀರು ನಿಂತುಕೊಂಡಿದೆ. ಕಳೆದ ಕೆಲ ಸಮಯಗಳ ಹಿಂದೆ ಈ ಒಳಚರಂಡಿ ಸಂಪರ್ಕ ನಿರ್ಮಾಣಗೊಂಡಿದ್ದು, ಅರೆಬರೆ ಕಾಮಗಾರಿ ನಡೆದಿದೆ.ಇದೇ ಪರಿಸರದಲ್ಲಿ ಕೆಲವು ಮನೆಗಳಿದ್ದು, ಕಲುಷಿತಗೊಂಡ ನೀರಿನಿಂದ ಸೊಳ್ಳೆ ಉತ್ಪತ್ತಿಯಾಗುತ್ತಿದೆ. ಸುತ್ತಮುತ್ತಲಿನ ಮನೆಮಂದಿ ಸೊಳ್ಳೆ ಕಾಟ ಅನುಭವಿಸುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ. ಈ ಬಗ್ಗೆ ಸ್ಥಳೀಯಾಡಳಿತ ಕೂಡಲೇ ಗಮನಹರಿಸಬೇಕಿದೆ.
ಪುರುಷೋತ್ತಮ, ಪ್ರಗತಿ ನಗರ ಲೇಔಟ್‌

ರಸ್ತೆ ಕಾಮಗಾರಿ ನಡೆಸಿ
ಶಕ್ತಿನಗರ ಪಕ್ಕದಲ್ಲಿನ ಪ್ರೀತಿನಗರದ ನೆಕ್ಕರೆಗುಂಡಿ ರಸ್ತೆಯ ಗೋಳು ಕೇಳುವವರಿಲ್ಲದಂತಾಗಿದೆ. ಈಚ ರಸ್ತೆಯಿಂದ ಸುಮಾರು 50ಕ್ಕೂ ಹೆಚ್ಚಿನ ಮನೆಗಳಿಗೆ ಸಂಪರ್ಕ ಇದ್ದು, ನಡೆದುಕೊಂಡು ಹೋಗಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಾರ್ವಜನಿಕರು ಸ್ಥಳೀಯಾಡಳಿತಕ್ಕೆ ದೂರು ನೀಡಿದರೂ ಸಮಸ್ಯೆ ಪರಿಹಾರವಾಗಿಲ್ಲ. ಸುಮಾರು ಒಂದು ಕಿ.ಮೀ. ಸಂಪರ್ಕದ ಈ ರಸ್ತೆ ಗುಂಡಿ ಬಿದ್ದಿದ್ದು, ಜಲ್ಲಿ ಎದ್ದು ಹೋಗಿದೆ. ಇದರಿಂದಾಗಿ ಈಗಾಗಲೇ ಅನೇಕ ಬೈಕ್‌ ಸ್ಕಿಡ್‌ ಆಗಿದ್ದು, ಮಳೆಗಾಲದಲ್ಲಿ ರಸ್ತೆ ತುಂಬಾ ಕೆಸರಿನಿಂದ ಕೂಡಿರುತ್ತದೆ. ಇನ್ನು ಹಿರಿಯ ನಾಗರಿಕರು ಈ ರಸ್ತೆಯಲ್ಲಿ ಓಡಾಡಲು ಕಷ್ಟ ಪಡುವಂತಾಗಿದೆ. ಸಂಬಂಧಪಟ್ಟ ಇಲಾಖೆ ಕೂಡಲೇ ಈ ಬಗ್ಗೆ ಗಮನಹರಿಸಿ, ರಸ್ತೆ ಕಾಂಕ್ರೀಟ್‌ ಕಾಮಗಾರಿ ನಡೆಸಲಿ.
ಹರಿಪ್ರಸಾದ್‌, ನೆಕ್ಕರೆಗುಂಡಿ

ತೋಡಿನ ವ್ಯಥೆ ಕೇಳುವವರಿಲ್ಲ
ಉರ್ವ ಹೊಗೆಬೈಲು ಪಕ್ಕದಲ್ಲಿರುವ ಮಳೆ ನೀರಿನ ತೋಡಿ ನಿಂದಾಗಿ ಸುತ್ತಮುತ್ತಲಿನ ಮನೆ ಮಂದಿ ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದ ಬಾರಿ ಸುರಿದ ಭಾರೀ ಮಳೆಗೆ ಈ ತೋಡಿನಿಂದ ಮಳೆ ನೀರು ಮೇಲೆ ಬಂದು ಸಮಸ್ಯೆ ಉಂಟಾಗಿತ್ತು. ಸ್ಥಳೀಯಾಡಳಿತ ಇನ್ನೂ ಎಚ್ಚೆತ್ತುಕೊಂಡಿಲ್ಲ. ಈ ತೋಡಿನಲ್ಲಿ ಮಣ್ಣು ತುಂಬಿಕೊಂಡಿದ್ದು, ಇನ್ನೂ ಹೂಳೆತ್ತುವ ಕೆಲಸ ನಡೆದಿಲ್ಲ. ತೋಡಿನಲ್ಲಿ ಗಿಡ ಬೆಳೆದು ದೊಡ್ಡದಾಗಿದ್ದು, ಸುತ್ತಮುತ್ತಲಿನ ಮಂದಿ ದಿನನಿತ್ಯ ಸೊಳ್ಳೆ ಕಾಟ ಅನುಭವಿಸುತ್ತಿದ್ದಾರೆ. ಇನ್ನು, ತೋಡಿನಲ್ಲಿ ಹರಿಯುವ ನೀರಿನ ವಾಸನೆಗೆ ಪಕ್ಕದಲ್ಲಿರುವ ಮನೆಮಂದಿ ಮೂಗು ಮುಚ್ಚಿಕೊಂಡು ವಾಸಿಸುವ ಅನಿವಾರ್ಯವಿದೆ. ಸಂಬಂಧಪಟ್ಟ ಇಲಾಖೆ ಕೂಡಲೇ ಈ ಬಗ್ಗೆ ಗಮನಹರಿಸಬೇಕಿದೆ.
ಉದಯ ಕುಮಾರ್‌, ಹೊಗೆಬೈಲು

ತೋಡು ಬ್ಲಾಕ್‌; ಸಾರ್ವಜನಿಕರಿಗೆ ಸಮಸ್ಯೆ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮೇರಿಹಿಲ್‌ ರಸ್ತೆಯ ಬಳಿ ತೆರೆದ ತೋಡು ಇದ್ದು, ಸುತ್ತಮುತ್ತಲಿನ ಕೆಲವು ಮನೆ, ಹೊಟೇಲ್‌ ಮಂದಿ ಇದೇ ತೋಡಿಗೆ ಡ್ರೈನೇಜ್‌ ಸಂಪರ್ಕ ಕಲ್ಪಿಸಿದ್ದಾರೆ. ಇದೇ ಕಾರಣಕ್ಕೆ ಇದೀಗ ತೋಡು ಬ್ಲಾಕ್‌ ಆಗಿದ್ದು, ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದೆ. ಈ ತೋಡು ತೆರೆದ ಸ್ಥಿತಿಯಲ್ಲಿದ್ದು, ಸುತ್ತಮುತ್ತಲೂ ಶಾಲಾ-ಕಾಲೇಜುಗಳಿವೆ. ಇದರಿಂದಾಗಿ ವಿದ್ಯಾರ್ಥಿಗಳು ಕೂಡ ಜಾಗರೂಕತೆಯಿಂದ ಸಂಚರಿಸಬೇಕಾದ ಅನಿವಾರ್ಯವಿದೆ. ಕಳೆದ ಬಾರಿ ಸುರಿದ ಭಾರೀ ಮಳೆಯಿಂದಾಗಿ ಇದೇ ತೋಡಿನಿಂದ ಸುತ್ತಮುತ್ತಲಿನ ಮನೆಗೆ ನೀರು ನುಗ್ಗಿ ಅನಾಹುತ ಸಂಭವಿಸಿತ್ತು. ಕೂಡಲೇ ಸಮಸ್ಯೆಗೆ ಪರಿಹಾರಬೇಕು.
– ಪ್ರೇಮ್‌ ಕುಮಾರ್‌, ಮೇರಿಹಿಲ್‌

ಪಾಂಡೇಶ್ವರ ತೋಡಿನಲ್ಲಿ ಕಸದ ರಾಶಿ
ಪಾಂಡೇಶ್ವರದ ರೈಲ್ವೇ ಸೇತುವೆಯ ಕೆಳ ಭಾಗದಲ್ಲಿ ಹರಿಯುವ ತೋಡಿನಲ್ಲಿ ಕಸ ಶೇಖರಣೆಯಾಗಿದ್ದು, ಸುತ್ತಮುತ್ತಲಿನ ಮಂದಿ ಸಮಸ್ಯೆ ಅನುಭವಿಸುತ್ತಿದ್ದಾರೆ. ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸ್ಥಳೀಯಾಡಳಿತ ಮಾತ್ರ ಸಮಸ್ಯೆ ತಿಳಿದಿದ್ದರೂ ಸುಮ್ಮನೆ ಕೂತಿದೆ. ಕಸದಿಂದಾಗಿ ನೀರು ಹರಿಯಲು ಸಾಧ್ಯವಾಗುತ್ತಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಬರಲಿದ್ದು, ತೋಡಿನಲ್ಲಿ ಇನ್ನೂ ಹೂಳೆತ್ತಲಿಲ್ಲ. ಇದೇ ಕಾರಣಕ್ಕೆ ಮಳೆಯಿಂದ ಅನಾಹುತ ಉಂಟಾಗುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ. ನೀರಿನಲ್ಲಿ ತುಂಬಿರುವ ಕಸ, ತ್ಯಾಜ್ಯದಿಂದಾಗಿ ಸುತ್ತಮುತ್ತಲೂ ಗಬ್ಬು ವಾಸನೆ ಬೀರುತ್ತಿದೆ. ಸಂಬಂಧಪಟ್ಟ ಇಲಾಖೆ ಚುನಾವಣೆಯ ನೆಪ ಹೇಳಿ ಕಾಲಹರಣ ಮಾಡದೆ ಕೂಡಲೇ ಸಮಸ್ಯೆ ಬಗೆಹರಿಸಬೇಕಿದೆ.
ಜಾರ್ಜ್‌ ಡಿ’ಸೋಜಾ, ಪಾಂಡೇಶ್ವರ

ಇಲ್ಲಿಗೆ ಕಳುಹಿಸಿ
“ಸುದಿನ-ಜನದನಿ’ ವಿಭಾಗ, ಉದಯವಾಣಿ, ಮಾನಸ ಟವರ್‌, ಮೊದಲ ಮಹಡಿ, ಎಂಜಿ ರಸ್ತೆ, ಪಿವಿಎಸ್‌ ವೃತ್ತ ಸಮೀಪ, ಕೊಡಿಯಾಲ್‌ಬೈಲ್‌, ಮಂಗಳೂರು-575003. ವಾಟ್ಸಪ್‌ ನಂಬರ್‌-9900567000. ಇ-ಮೇಲ್‌: mlr.sudina@udayavani.com


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ