ನಗರಾಡಳಿತದಲ್ಲಿ ಆ್ಯಪ್‌ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಯಾಗಲಿ

Team Udayavani, Nov 3, 2019, 4:03 AM IST

ನಮ್ಮ ಮೊಬೈಲ್‌ನ ಬೆರಳತುದಿಯಲ್ಲೇ ಇಂದು ಜಗತ್ತನ್ನು ಕಾಣಬಹುದಾಗಿದೆ. ಅಷ್ಟು ತಂತ್ರಜ್ಞಾನ ಪೂರಕವಾಗಿ ಜಗತ್ತು ಬೆಳೆದು ನಿಂತಿದೆ. ಎಲ್ಲ ಕ್ಷೇತ್ರಗಳಲ್ಲಿ ಕೂಡ ಆ್ಯಪ್‌ಗ್ಳನ್ನು ಬಳಕೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಇಂದು ಆಡಳಿತ ವ್ಯವಸ್ಥೆಗೆ ಚುರುಕು ಬರಬೇಕಾದರೆ ಮತ್ತು ಪರಿಣಾಮಕಾರಿ ಪಾರದರ್ಶಕ ಆಡಳಿತ ನೀಡಬೇಕಾದರೆ ಸಾರ್ವಜನಿಕರ ಸಹಭಾಗಿತ್ವ ಕೂಡ ಅಷ್ಟೇ ಮುಖ್ಯ. ಈ ಕಾರಣಕ್ಕಾಗಿ ನಗರಾಡಳಿತವೂ ಆ್ಯಪ್‌ ವ್ಯವಸ್ಥೆಯನ್ನು ಜಾರಿಗೊಳಿಸಿ, ಸಾರ್ವಜನಿಕರ ಅಭಿಮತಕ್ಕೆ ಮನ್ನಣೆ ನೀಡಬೇಕಿದೆ ಎಂಬುದು ಈ ಲೇಖನದ ಸಾರವಾಗಿದೆ.

ಪ್ರಸ್ತುತ ಡಿಜಿಟಲೀಕರಣ ಯುಗ. ಆನ್‌ಲೈನ್‌, ಆ್ಯಪ್‌ ವ್ಯವಸ್ಥೆಗಳು ಪ್ರತಿಯೊಂದು ಕ್ಷೇತ್ರವನ್ನು ಆವರಿಸಿವೆ. ಆಡಳಿತ ವ್ಯವಸ್ಥೆಗಳಲ್ಲಿ ದೂರವಾಣಿ, ಆನ್‌ಲೈನ್‌ ಜಾಗದಲ್ಲಿ ಈಗ ಆ್ಯಪ್‌ಗ್ಳು ಪ್ರಾಮುಖ್ಯ ಪಡೆದುಕೊಳ್ಳುತ್ತಿವೆ. ಸರಕಾರಿ ಸೇವೆಗಳಳ ಮಾಹಿತಿ, ಚುನಾವಣ ಆಯೋಗವೂ ಮತದಾರರನ್ನು ತಲುಪಲು ಆ್ಯಪ್‌ಗ್ಳನ್ನು ಬಳಸಲಾಗುತ್ತಿದೆ. ನಗರಾಡಳಿತಗಳು ಕೂಡ ಆ್ಯಪ್‌ಗ್ಳ ಮೊರೆ ಹೋಗುತ್ತಿವೆ. ಬಹುತೇಕ ನಗರಗಳ ಆಡಳಿತ ವ್ಯವಸ್ಥೆಯ ವಿವಿಧ ವಿಭಾಗಗಳಲ್ಲಿ ಆ್ಯಪ್‌ಗ್ಳನ್ನು ರೂಪಿಸಿ ಸಾರ್ವಜನಿಕರಿಂದ ದೂರುಗಳು ಸ್ವೀಕರಿಸುವ, ಮಾಹಿತಿಗಳ ದಾಖಲೀಕರಣ ಕಾರ್ಯ ನಡೆಸಲಾಗುತ್ತಿದೆ. ದ.ಕ. ಜಿಲ್ಲೆಯನ್ನು ತೆಗೆದುಕೊಂಡರೆ ಸರಕಾರಿ ಸೇವೆಯಲ್ಲಿ ಆ್ಯಪ್‌ಗ್ಳ ಬಳಕೆ ಇದೆ. ಬೆಂಗಳೂರು ಬಿಬಿಎಂಪಿಯಲ್ಲಿ ಸಹಾಯ ಆ್ಯಪ್‌ ಇದೆ. ಇದನ್ನು ಇನ್ನಷ್ಟು ಬಲಪಡಿಸುವ ಕಾರ್ಯ ಅಲ್ಲಿ ನಡೆಯುತ್ತಿದೆ. ರಾಜ್ಯ ಸರಕಾರ ಪೊಲೀಸ್‌, ಆ್ಯಂಬುಲೆನ್ಸ್‌ ಅಗ್ನಿಶಾಮಕ ತುರ್ತುನೆರವಿಗೆ 112 ನಂಬರ್‌ 112 ಆ್ಯಪ್‌ ಇಂಡಿಯಾ ವ್ಯವಸ್ಥೆಯೂ ಜಾರಿಗೆ ತಂದಿದೆ.

ಮಂಗಳೂರು ಮಹಾನಗರ ಪಾಲಿಕೆಯಲ್ಲೂ ಸಾರ್ವಜನಿಕ ಸೇವೆ, ಮಾಹಿತಿ ಮತ್ತು ದೂರುಗಳು, ಅಹವಾಲುಗಳ ದಾಖಲೀಕರಣಕ್ಕೆ ಸಮಗ್ರವಾದ ಆ್ಯಪ್‌ವೊಂದು ಸಿದ್ಧಗೊಳ್ಳುವುದು ಅಪೇಕ್ಷೇಣೀಯವಾಗಿದೆ.

ಮಳೆಗಾಲದಲ್ಲಿ ಭೂಕುಸಿತ, ರಸ್ತೆಗುಂಡಿಗಳ ಬಗ್ಗೆಯೂ ಪಾಲಿಕೆ ಅಧಿಕಾರಿಗಳಿಗೆ ಆ್ಯಪ್‌ನಲ್ಲಿ ತುರ್ತು ಹಾಗೂ ನಿಖರವಾಗಿ ಮಾಹಿತಿ ನೀಡಬಹುದಾಗಿದೆ. ನಗರದ ಪ್ರತಿ ವಾರ್ಡ್‌ನಲ್ಲೂ ಲೋಕೋಪಯೋಗಿ ಇಲಾಖೆ, ಮೆಸ್ಕಾಂ, ಮಹಾನಗರ ಪಾಲಿಕೆ ವಿವಿಧ ವಿಭಾಗಗಳು, ಕೇಬಲ್‌ ನಿರ್ವಹಣೆ ಸಂಸ್ಥೆಗಳು, ಒಳಚರಂಡಿ , ನೀರಿನ ಪೈಪ್‌ ಸೋರಿಕೆ ಸರಿಪಡಿಸಲು ಗುಂಡಿ ತೋಡುವುದು ಸಹಿತ ಯಾವುದಾದರೂ ಒಂದು ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಕಾಮಗಾರಿ ಮುಗಿದ ಅನಂತರ ತಾತ್ಕಾಲಿಕವಾಗಿ ಅವುಗಳನ್ನು ಮುಚ್ಚಿ ಸುಮ್ಮನಾಗುತ್ತಾರೆ. ಬಳಿಕ ಮಳೆ ಅಥವಾ ನಿರಂತರ ವಾಹನಗಳ ಸಂಚಾರದಿಂದ ಗುಂಡಿಗಳು ಮತ್ತೆ ಬಾಯ್ದೆರೆಯುತ್ತವೆ. ಇವುಗಳ ಬಗ್ಗೆ ಪಾಲಿಕೆಯ ಬಗ್ಗೆ ಆ್ಯಪ್‌ನಲ್ಲಿ ಗಮನ ಸೆಳೆದು ಸೂಕ್ತ ಕ್ರಮ ಆಗಲು ಸಾಧ್ಯವಿದೆ. ಇಂದು ಮುಂದುವರಿದ ತಂತ್ರಜ್ಞಾನದ ಯುಗ ಇದಾಗಿದ್ದು ಹಲವಾರು ರೀತಿಯಲ್ಲಿ ನಾವು ಸಮಸ್ಯೆಗಳಿಗೆ ಬೆರಳತುದಿಯಲ್ಲೇ ಪರಿಹಾರ ಕಂಡುಕೊಳ್ಳಬೇಕಿದೆ. ಇದು ನವ ಮಾಧ್ಯಮ ಯುಗ ಅಂತ್ಯಂತ ಪರಿಣಾಮಕಾರಿಯಾದ ಕಾರ್ಯವಾಗಿದೆ ಎಂಬುದು ತಂತ್ರಜ್ಞರ ಅಭಿಪ್ರಾಯ.
ಹಲವು ಸಮಸ್ಯೆಗಳಿಗೆ ಮುಕ್ತಿ ಬೇಕಿದೆ

ಪಾಲಿಕೆ ವ್ಯಾಪ್ತಿಯಲ್ಲಿ ಇನ್ನೊಂದು ಪ್ರಮುಖ ಸಮಸ್ಯೆ ಘನತ್ಯಾಜ್ಯ. ತ್ಯಾಜ್ಯ ಸಂಗ್ರಹಕ್ಕೆ ನಿಯುಕ್ತಿಗೊಂಡಿರುವ ವಾಹನಗಳು ನಿಯಮಿತವಾಗಿ ಬರುತ್ತಿಲ್ಲ. ಅಥವಾ ರಸ್ತೆಬದಿಗಳಲ್ಲಿ ತಾಜ್ಯಗಳನ್ನು ಎಸೆಯುವುದು ಮುಂತಾದ ಸಮಸ್ಯೆಗಳಿರುತ್ತವೆ. ಇವುಗಳನ್ನು ಸಾರ್ವಜನಿಕರು ಹೆಚ್ಚು ಪರಿಣಾಮಕಾರಿಯಾಗಿ ಪಾಲಿಕೆ ಗಮನ ಸೆಳೆಯಲು ಸಾಧ್ಯವಿದೆ. ಇನ್ನು ಆಡಳಿತ ವ್ಯವಸ್ಥೆಯೂ ಕೂಡ ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ.

ಬಿಬಿಎಂಪಿ ಸಹಾಯ ಆ್ಯಪ್‌
ಬೆಂಗಳೂರಿನಲ್ಲಿ ಸಾರ್ವಜನಿಕ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ ಪರಿಹರಿಸುವ ನಿಟ್ಟಿನಲ್ಲಿ ಸಹಾಯ ಆ್ಯಪ್‌ ಇದೆ. ಇದರಲ್ಲಿ ಸಾರ್ವಜನಿಕರು ಘನತ್ಯಾಜ್ಯ ನಿರ್ವಹಣೆ, ರಸ್ತೆ ಅವ್ಯವಸ್ಥೆ ಮೊದಲಾದ ಸಮಸ್ಯೆಗಳ ಬಗ್ಗೆ ದೂರು ನೀಡುವ ವ್ಯವಸ್ಥೆ ಇದೆ. ಘನತ್ಯಾಜ್ಯ ನಿರ್ವಹಣೆ ಸಮಸ್ಯೆ ದೂರು ದಾಖಲಾದ ಸಮಸ್ಯೆಗಳನ್ನು 12 ತಾಸುಗಳೊಳಗೆ ಪರಿಹರಿಸಬೇಕು ಎಂಬ ನಿಯಮ ಇದೆ. ಇದರಲ್ಲಿ ಗಣನೀಯ ಪ್ರಮಾಣದಲ್ಲಿ ದೂರುಗಳು ದಾಖಲಾಗುತ್ತಿವೆ. ದಾಖಲಾಗುವ ದೂರುಗಳನ್ನು ಕಾಲಮಿತಿಯೊಳಗೆ ಪರಿಹರಿಸುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ಈಗ ಇದರಲ್ಲಿ ಇನ್ನಷ್ಟು ಸುಧಾರಣೆಗಳನ್ನು ಮಾಡುತ್ತಿದೆ. ಇದಕ್ಕೆ ಬಿಬಿಎಂಪಿ ಲೆವೆಲ್‌ ಆ್ಯಗ್ರಿಮೆಂಟ್‌ ಎನ್ನುವ ಸಾಫ್ಟ್‌ವೇರ್‌ ಅಳವಡಿಸುತ್ತಿದೆ. ಇದರ ಮೂಲಕ ದೂರುಗಳು ಕಾಲಮಿತಿಯೊಳಗೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಸಮರ್ಪಕವಾದ ಪರಿಹಾರ ಅಗತ್ಯ
ಸಾರ್ವಜನಿಕರು ದಾಖಲಿಸುವ ದೂರುಗಳನ್ನು ಕಾಲಮಿತಿಯೊಳಗೆ ಪರಿಹರಿಸಲು ಆದ್ಯತೆ ನೀಡಲಾಗುತ್ತದೆ. ಸಮಸ್ಯೆಗೆ ಸಮರ್ಪಕ ಪರಿಹಾರವಾಗದಿದ್ದರೆ ಮತ್ತೇ ಇದರಲ್ಲಿ ದೂರು ದಾಖಲಿಸಬಹುದು. ಎರಡನೇ ಬಾರಿ ದಾಖಲಾಗುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಲೋಪದ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮಂಗಳೂರಿನಲ್ಲಿ ಸ್ಮಾರ್ಟ್‌ ನಗರ ಯೋಜನೆ ಅನುಷ್ಟಾನಗೊಳ್ಳುತ್ತಿದೆ. ಇದರಲ್ಲಿ ವ್ಯವಸ್ಥೆಗಳು ಕೂಡ ಸ್ಮಾರ್ಟ್‌ಗೊಳ್ಳುವುದು ಅವಶ್ಯ. ಈ ಹಿನ್ನೆಲೆಯಲ್ಲಿ ಆ್ಯಪ್‌ ಸಹಿತ ಅಧುನಿಕ ವ್ಯವಸ್ಥೆ ಪೂರಕವಾಗುತ್ತದೆ.

ತುರ್ತು ಮಾಹಿತಿ-ಸ್ಪಂದನೆಗೆ ಸಹಕಾರಿ
ನಗರದೊಳಗೆ ಕೆಲವು ಪ್ರಮುಖ ಸಮಸ್ಯೆಗಳನ್ನು ಪಾಲಿಕೆ ಆಡಳಿತದ ಗಮನ ಸೆಳೆಯಲು ಹಾಗೂ ಪಾಲಿಕೆ ಅದಕ್ಕೆ ಸಂಬಂಧಪಟ್ಟಂತೆ ಶೀಘ್ರ ಸ್ಪಂದಿಸಲು ಆ್ಯಪ್‌ ವ್ಯವಸ್ಥೆ ಸಹಕಾರಿಯಾಗುತ್ತದೆ. ಮುಖ್ಯವಾಗಿ ನೀರು, ರಸ್ತೆ, ತ್ಯಾಜ್ಯ, ದಾರಿದೀಪಕ್ಕೆ ಸಂಬಂಧಪಟ್ಟಂತೆ ಪ್ರಮುಖ ಸಮಸ್ಯೆಗಳಿರುತ್ತವೆ. ಮಂಗಳೂರು ನಗರ ನೀರು ಪೂರೈಕೆ ಪೈಪ್‌ಗ್ಳ ಬೃಹತ್‌ ಜಾಲವನ್ನು ಹೊಂದಿದೆ. ಜತೆಗೆ ನೀರು ಸೋರಿಕೆ ಸಮಸ್ಯೆಗಳೂ ಇರುತ್ತವೆ. ನೀರು ಸೋರಿಕೆ ಪ್ರಾರಂಭವಾಗಿ ಬಹಳಷ್ಟು ಸಮಯದವರೆಗೆ ಪಾಲಿಕೆಯ ಗಮನಕ್ಕೆ ಬಂದಿರುವುದಿಲ್ಲ. ದೂರವಾಣಿ ಮೂಲಕ ಸಂಬಂಧಪಟ್ಟ ವಾರ್ಡ್‌ನ ಕಾರ್ಪೊರೇಟರ್‌ ಅಥವಾ ವಿಭಾಗದ ಅಧಿಕಾರಿಗೆ ಮಾಹಿತಿ ನೀಡಿದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ. ಸೋರಿಕೆಯಾಗುವ ನಿರ್ದಿಷ್ಟ ಜಾಗ ಹುಡುಕಿ ದುರಸ್ತಿ ಕಾರ್ಯ ನಡೆಸಬೇಕು. ಈ ಎಲ್ಲ ಪ್ರಕ್ರಿಯೆಗಳು ಆಗುವಾಗ ಬಹಳಷ್ಟು ಪ್ರಮಾಣದಲ್ಲಿ ನೀರು ಪೋಲಾಗಿರುತ್ತದೆ. ಆದರ ವ್ಯಾಪ್ತಿಯ ಪ್ರದೇಶಕ್ಕೆ ನೀರು ಪೂರೈಕೆಯಲ್ಲೂ ವ್ಯತ್ಯಯಗಳಾಗಿರುತ್ತವೆ. ಆ್ಯಪ್‌ ವ್ಯವಸ್ಥೆ ಇದ್ದರೆ ಅಲ್ಲಿನ ನಾಗರಿಕರು ಸೋರಿಕೆಯಾಗುವ ಜಾಗದ ಚಿತ್ರ ಸಹಿತ ಅದರಲ್ಲಿ ತತ್‌ಕ್ಷಣ ಮಾಹಿತಿ ನೀಡಲು ಸಾಧ್ಯವಾಗುತ್ತದೆ.

- ಕೇಶವ ಕುಂದರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ