ಸ್ಮಾರ್ಟ್‌ ನಗರಿಗೂ ಬರಲಿ ಲಿಟಲ್‌ ಫ್ರೀ ಲೈಬ್ರೆರಿ 

Team Udayavani, Mar 17, 2019, 7:41 AM IST

ಪುಸ್ತಕ ಓದೋದು ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಒತ್ತಡದ ಬದುಕಿನಲ್ಲಿ ಸಮಯ ಇಲ್ಲದೇ ಇರೋದ್ರಿಂದ ಪುಸ್ತಕ ಮೂಲೆ ಗುಂಪಾಗಿದೆ. ಸಿಗುವ ಸ್ವಲ್ಪ ಕಾಲಾವಕಾಶಗಳೆಲ್ಲ ಸಾಮಾಜಿಕ ಜಾಲತಾಣಗಳಲ್ಲೇ ಜಾಲಡುತ್ತಾ ಸಮಯ ಹರಣವಾಗುತ್ತಿದೆ. ಓದುವ ಮನಸ್ಸಿದ್ರು ಕೂಡ ಪುಸ್ತಕ ಹಿಡಿದು ಜ್ಞಾನವೃದ್ಧಿ ಮಾಡುವ ಸಮಯ ಇಲ್ಲದ ವಾತಾವರಣ ಸೃಷ್ಟಿಯಾಗುತ್ತಿರುವುದು ದುರಂತವೇ ಸರಿ.

ಇಂದಿನ ಮಕ್ಕಳಿಗೂ ಅಷ್ಟೇ. ಮೊಬೈಲೇ ಪ್ರಪಂಚವಾಗಿದೆ. ಸಣ್ಣ ಸಣ್ಣ ಕತೆಗಳ ಪರಿಚಯವಿಲ್ಲ. ಹೊಸ ವಿಷಯಗಳ ತಿಳಿಯುವ ಮನಸ್ಸಿಲ್ಲ. ಓದುವುದರಿಂದ ಅನೇಕ ವಿಷಯಗಳು ಸಿಕ್ಕರೂ ಅದು ಕಡೆಗಣನೆಯತ್ತ ಸಾಗುತ್ತಿದೆ. ಹಾಗಂತ ಓದುವವರೇ ಇಲ್ಲ ಎಂದರೆ ತಪ್ಪಾಗುತ್ತದೆ. ನಗರ, ಗ್ರಾಮೀಣ ಪ್ರದೇಶದಲ್ಲೂ ಪುಸ್ತಕ ಪ್ರಿಯರಿದ್ದಾರೆ. ಆದರೆ ಗ್ರಂಥಾಲಯಗಳು ದೂರವಿರುವುದರಿಂದ, ಬೇಕಾದ ಪುಸ್ತಕ ಖರೀದಿ ಮಾಡಿ ತರುವ ಆಸಕ್ತಿ ಇಲ್ಲದೇ ಇರುವುದರಿಂದ ಓದುವ ಮನಸ್ಸಿದ್ದರೂ ಪುಸ್ತಕವಿಲ್ಲ ಎಂದು ಕೊಂಡು ಸುಮ್ಮನಾಗುತ್ತಾರೆ.

ಈ ಸಮಸ್ಯೆ ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಇದೆ. ಆದರೆ ವಿದೇಶದಲ್ಲಿ ಇದಕ್ಕೊಂದು ವಿಶೇಷ ರೀತಿಯ ಪರಿಹಾರವನ್ನು ಲಿಟಲ್‌ಫ್ರೀ ಲೈಬ್ರೆರಿ ಮೂಲಕ ಕಂಡುಕೊಂಡಿದ್ದು, ಅದನ್ನೂ ನಾವೂ ಅಳವಡಿಸಿಕೊಳ್ಳಬೇಕಿದೆ.

ಏನಿದು ಲಿಟಲ್‌ಫ್ರೀ  ಲೈಬ್ರೆರಿ?
ಜನರು ತಮ್ಮ ಸೃಜನಶೀಲ ಕಲ್ಪನೆಗೆಕಿಸುಲಿ ಹಾಕಿ ತಂದ ಯೋಚನೆ, ಯೋಜನೆಯೇ ಲಿಟಲ್‌ ಫ್ರೀ ಲೈಬ್ರೆರಿ ಲಿಟಲ್‌ಫ್ರೀ ಲೈಬ್ರೆರಿ ಇದೊಂದು ವಿಭಿನ್ನ ಕಾನ್ಸೆಪ್ಟ್ ಆಗಿದ್ದು, ತಮ್ಮ ಮನೆಯಲ್ಲಿ ಓದಿ ಮುಗಿಸಿದ ಪುಸ್ತಕಗಳನ್ನು ಬೇರೆಯವರಿಗೆ ಉಚಿತವಾಗಿ ಓದಿಸಿ ನಾವು ಬೇರೊಂದು ಪುಸ್ತಕವನ್ನು ಉಚಿತವಾಗಿಯೇ ಓದುವ ಪ್ರಕ್ರಿಯೆಯನ್ನು ಮಾಡುವಂತದ್ದಾಗಿದೆ. ಸಂಕ್ಷಿಪ್ತವಾಗಿ ಅಲ್ಲಲ್ಲಿ ಆಕರ್ಷಕ ಪುಸ್ತಕ ಸ್ಟಾಂಡ್‌ಗಳು ನಿರ್ಮಿಸಿ ಇಲ್ಲಿ ನಾವು ಓದಿರುವ ಪುಸ್ತಕಗಳನ್ನು ಬಿಟ್ಟು ನಮಗೆ ಇಷ್ಟವೆನಿಸಿದ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುವುದು.

ಕೆಲವೊಂದು ಪುಸ್ತಕ ಸ್ಟಾಂಡ್‌ಗಳ ಪಕ್ಕ ಅಲ್ಲೇ ಕುಳಿತು ಓದುವಂತಹ ಸುಂದರ ವಾತಾವರಣ ಇರುತ್ತದೆ. ವಿದೇಶದಲ್ಲಿ ಈ ಲಿಟಲ್‌ ಫ್ರೀ ಲೈಬ್ರೆರಿಯ ಹಿಂದೆ ಶ್ರಮಿಸುವ ತಂಡವೇ ಇರು ತ್ತದೆ. ಇವರು ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ಈ ಪ್ರಯತ್ನಕ್ಕೆ ಕೈ ಜೋಡಿಸಲು ಸೆಳೆಯುತ್ತಾರೆ. ಈ ಪುಟ್ಟ ಲೈಬ್ರೆರಿಗಳು ಎಲ್ಲ ವಯಸ್ಸಿನವರನ್ನು ಕೇಂದ್ರೀಕರಿಸಿ ನಿರ್ಮಿಸಲಾಗಿರುತ್ತದೆ. ಹೆಚ್ಚಾಗಿ ಪಾರ್ಕ್‌, ರಸ್ತೆ ಬದಿಗಳಲ್ಲಿ ಇಂಥ ಲೈಬ್ರೆರಿಗಳು ಕಾಣಸಿಗುತ್ತವೆ.

ಮಂಗಳೂರಿಗೂ ಬರಲಿ
ಮಂಗಳೂರು ಸುತ್ತಮುತ್ತ ಅನೇಕ ಪಾರ್ಕ್‌ಗಳಿವೆ. ಆಕರ್ಷಕ ಪಾದಚಾರಿ ರಸ್ತೆಗಳೂ ಇವೆ. ಇಲ್ಲಿ ಎಲ್ಲ ಲಿಟಲ್‌ ಫ್ರೀ ಲೈಬ್ರೆರಿಯನ್ನು ನಿರ್ಮಾಣ ಮಾಡಬಹುದಾಗಿದೆ. ಕೆಲವೊಂದು ಸಂಘ ಸಂಸ್ಥೆಗಳು ಈ ಬಗ್ಗೆ ಗಮನ ಕೊಟ್ಟರೆ ನಗರಕ್ಕೊಂದು ಹೊಸ ಕಲ್ಪನೆಯ ಜತೆಗೆ ಕೊಡುಗೆಯನ್ನು ನೀಡಿದಂತಾಗುತ್ತದೆ.

ವಿಶ್ವಾಸ್‌ ಅಡ್ಯಾರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ