ಕಟ್ಟಡ ತ್ಯಾಜ್ಯ ನಿರ್ವಹಣೆಗೆ ಸಂಸ್ಕರಣ ಘಟಕ

Team Udayavani, Oct 20, 2019, 5:36 AM IST

ನಗರ ಪ್ರದೇಶದಲ್ಲಿ ಹಳೆಯ ಕಟ್ಟಡ ಕೆಡವುವಾಗ ಅಥವಾ ಹೊಸ ಕಟ್ಟಡಗಳ ನಿರ್ಮಾಣ ಸಂದರ್ಭದಲ್ಲಿ ಒಂದಷ್ಟು ತ್ಯಾಜ್ಯ ಉಂಟಾಗುತ್ತದೆ. ಆಗ ಇವುಗಳನ್ನು ಎಲ್ಲಿ ಮತ್ತು ಹೇಗೆ ನಿರ್ವಹಣೆ ಮಾಡುವುದು ಎಂಬ ಪ್ರಶ್ನೆ ಎದುರಾಗುತ್ತಿದೆ. ಇಂತಹ ಸಮಸ್ಯೆಗೆ ಸಂಸ್ಕರಣೆ ಘಟಕ ಪರಿಹಾರ ಕಲ್ಪಿಸುತ್ತದೆ.

ನಗರಗಳ ಕಟ್ಟಡ ತ್ಯಾಜ್ಯ ನಿರ್ವಹಣೆ ಇತ್ತೀಚಿನ ದಿನಗಳಲ್ಲಿ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ನಗರ ಬೆಳೆದಂತೆ ಇದರ ಜತೆಗೆ ಅಭಿವೃದ್ಧಿ ಚಟುವಟಿಕೆಗಳು ಹೆಚ್ಚುತ್ತವೆ.ನಿರ್ಮಾಣ ಕಾಮಗಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತವೆ. ಈ ಸಂದರ್ಭ ಅದಕ್ಕೆ ಸಂಬಂಧಪಟ್ಟಂತೆ ಸೃಷ್ಟಿಯಾಗುವ ಕಟ್ಟಡ ತ್ಯಾಜ್ಯಗಳನ್ನು ವಿಲೇ ಮಾಡುವ ಸಮಸ್ಯೆ ಎದುರಾಗುತ್ತದೆ. ಇದನ್ನು ನಿರ್ವಹಿಸಲು ರಾಜ್ಯದಲ್ಲಿ ಯಾವುದೇ ವೈಜ್ಞಾನಿಕ ವಿಧಾನಗಳಿಲ್ಲ. ಒಂದಷ್ಟು ತ್ಯಾಜ್ಯಗಳನ್ನು ಖಾಲಿ ಇರುವ ನಿವೇಶನಗಳಲ್ಲಿ, ಆಳ ಪ್ರದೇಶಗಳಲ್ಲಿ ತಂದು ಸುರಿಯಲಾಗುತ್ತದೆ. ಇನ್ನು ಕೆಲವು ಬಾರಿ ಇಂತಹ ತ್ಯಾಜ್ಯಗಳಿಗೆ ರಸ್ತೆ ಬದಿಗಳೇ ವಿಲೇವಾರಿ ತಾಣಗಳಾಗಿ ಪರಿವರ್ತನೆಯಾಗುತ್ತವೆ. ರಸ್ತೆಗಳ ಇಕ್ಕೆಲಗಳಲ್ಲಿ ಕಲ್ಲು, ಮಣ್ಣು ಶೇಖರವಾಗಿ ಸಂಚಾರ ಹಾಗೂ ಮಳೆ ನೀರು ಹರಿದು ಹೋಗಲು ಸಮಸ್ಯೆಯಾಗುತ್ತದೆ. ನಗರ ಸೌಂದರ್ಯಕ್ಕೂ ಧಕ್ಕೆಯಾಗುತ್ತದೆ. ಇದನ್ನು ನಿಯಂತ್ರಿಸುವುದು ಒಂದು ಸವಾಲಿನ ಕಾರ್ಯ.

ಹುಬ್ಬಳಿ- ಧಾರವಾಡ ಮಹಾನಗರ ಪಾಲಿಕೆಗಳು ಈಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿದೆ. ಕಟ್ಟಡ ತ್ಯಾಜ್ಯ ಸಂಸ್ಕರಣಾ ಘಟಕವನ್ನು ನಿರ್ಮಿಸುತ್ತಿದ್ದು ಇಂತಹ ವ್ಯವಸ್ಥೆ ರಾಜ್ಯದಲ್ಲೆ ಮೊದಲ ಬಾರಿಗೆ ಧಾರವಾಡದಲ್ಲಿ ರೂಪುಗೊಳ್ಳುತ್ತಿದೆ.

ಈ ಸಮಸ್ಯೆ ಕೇವಲ ಹುಬ್ಬಳಿ-ಧಾರವಾಡ ನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಮಂಗಳೂರು ನಗರ ಕೂಡ ಇಂತಹ ಸಮಸ್ಯೆಯನ್ನು ಎದುರಿಸುತ್ತಿದೆ. ಹುಬ್ಬಳಿ-ಧಾರವಾಡ ಮಹಾನಗರ ಪಾಲಿಕೆ ರೂಪಿಸುತ್ತಿರುವ ಈ ರೀತಿಯ ವ್ಯವಸ್ಥೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮಂಗಳೂರು ನಗರಕ್ಕೆ ಅವಶ್ಯವಿದೆ. ಈ ನಿಟ್ಟಿನಲ್ಲಿ ಚಿಂತನೆಗಳು ನಡೆಯಬೇಕಾಗಿದೆ.

ಕಾರ್ಯನಿರ್ವಹಣೆ
ಸಂಸ್ಕರಣಾ ಘಟಕ ಕನ್ವೆನ್ಶನಲ್‌ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಧಾರವಾಡದಲ್ಲಿ ಪ್ರಸ್ತುತ 50 ಟನ್‌ ಸಾಮರ್ಥ್ಯದ ಘಟಕ ನಿರ್ಮಿಸಲಾಗುತ್ತಿದೆ. ಇದಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ 5.25 ಕೋ. ರೂ. ಅನುದಾನ ನೀಡಿದೆ. ಇಲ್ಲಿನ ಫ್ರೀ ಸ್ಕ್ರೀನಿಂಗ್‌ ಸೆಕ್ಷನ್‌ನಲ್ಲಿ ಸುರಿದ ತ್ಯಾಜ್ಯವನ್ನು ಪರಿಶೀಲಿಸಲಾಗುತ್ತಿದೆ. ಮ್ಯಾಗ್ನೆಟಿಕ್‌ ಸಪರೇಟರ್‌ ಮೂಲಕ ತ್ಯಾಜ್ಯದಿಂದ ಕಾಂಕ್ರೀಟ್‌ ಸಾಮಗ್ರಿ ಹಾಗೂ ಕಬ್ಬಿಣದ ತ್ಯಾಜ್ಯ ಬೇರ್ಪಡಿಸಲಾಗುತ್ತದೆ. ಅನಂತರ ತ್ಯಾಜ್ಯವನ್ನು ಕ್ರಶ್‌ ಮಾಡಲಾಗುತ್ತದೆ. 30 ಮಿ.ಮಿ.ಗಿಂತ ಕಡಿಮೆ ಹಾಗೂ 30 ಮಿ.ಮಿ.ಗಿಂತ ಹೆಚ್ಚಿನ ತ್ಯಾಜ್ಯವನ್ನು ಪ್ರತ್ಯೇಕಿಸಲಾಗುತ್ತದೆ. ಜೆಸಿಬಿಗಳು ಹಾಗೂ ಡಂಪಿಂಗ್‌ ಟ್ರಕ್‌ಗಳ ನೆರವಿನಿಂದ ತ್ಯಾಜ್ಯವನ್ನು ಸಾಗಿಸಲಾಗುತ್ತದೆ.

ಮಂಗಳೂರಿನಲ್ಲಿ ನಿವೇಶನವಿದೆ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಂಜತ್ತಬೈಲ್‌ನಲ್ಲಿ ನಗರದ ಕಟ್ಟಡ ತ್ಯಾಜ್ಯಗಳನ್ನು ನಿರ್ವಹಿಸಲು ಎರಡು ಎಕ್ರೆ ಜಾಗವನ್ನು ಖಾದಿರಿಸಲಾಗಿದೆ. ಅಡ್ಯಾರು ಕಣ್ಣೂರಿನಲ್ಲೂ ಒಂದು ಪ್ರದೇಶವನ್ನು ಇದೇ ಉದ್ದೇಶಕ್ಕೆ ಗುರುತಿಸಲಾಗಿತ್ತು. ಕುಂಜತ್ತಬೈಲ್‌ನಲ್ಲಿ ಕಾದಿರಿಸಿರುವ ಜಾಗ ಈ ಹಿಂದೆ ಜಲ್ಲಿ ಕೋರೆಯಾಗಿತ್ತು. ಇಲ್ಲಿ ರಸ್ತೆ ಸೇರಿದಂತೆ ಮೂಲ ಸೌಕರ್ಯ ಅಭಿವೃದ್ಧಿಗೆ 90 ಲಕ್ಷ ರೂ. ಯೋಜನೆ ರೂಪಿಸಲಾಗಿತ್ತು. ಪ್ರಸ್ತುತ ಮಹಾನಗರ ಪಾಲಿಕೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡುವ ಸಂದರ್ಭದಲ್ಲಿ ಕಟ್ಟಡ ತ್ಯಾಜ್ಯ ನಿರ್ವಹಣೆ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ. ಕುಂಜತ್ತಬೈಲ್‌ನ ನಿವೇಶನವನ್ನು ಬಳಸಿಕೊಂಡು ಕಟ್ಟಡ ತ್ಯಾಜ್ಯ ಸಂಸ್ಕರಣಾ ಘಟಕವನ್ನು ನಿರ್ಮಿಸಬಹುದಾಗಿದೆ.

ಕಟ್ಟಡ ತಾಜ್ಯಗಳನ್ನು ಸಂಸ್ಕರಣೆ ಮಾಡಿ ಎಂ. ಸ್ಯಾಂಡ್‌, ಪೇವರ್‌ , ಅಗ್ರಿಗೇಟರ್ಗಳನ್ನು ಉತ್ಪಾದನೆ ಮಾಡಲು ಅವಕಾಶವಿದೆ. ಜಾಗದ ಲಭ್ಯತೆಗೆ ಅನುಗುಣವಾಗಿ ಸಂಸ್ಕರಣ ಘಟಕಗಳ ಸಾಮರ್ಥ್ಯವನ್ನು ಹೆಚ್ಚಿಸಬಹುದಾಗಿದೆ. ಸದ್ಯ ಧಾರವಾಡದಲ್ಲಿ ಆರಂಭಿಸುತ್ತಿರುವ 50 ಟನ್‌ ಸಾಮರ್ಥ್ಯದ ಘಟಕಕ್ಕೆ 2 ಜೇಸಿಬಿ ಹಾಗೂ 4 ಡಂಪಿಂಗ್‌ ಟ್ರಕ್‌ಗಳ ಆವಶ್ಯಕತೆ ಇದೆ ಎಂದು ಅಂದಾಜಿಸಲಾಗಿದೆ.

ಸಾರ್ವಜನಿಕ ಪ್ರದೇಶಗಳಲ್ಲಿ ಕಟ್ಟಡ ತ್ಯಾಜ್ಯ ಎಸೆಯುವುದು ಸ್ವತ್ಛ ನಗರ ಪರಿಕಲ್ಪನೆಗೆ ಪ್ರಸ್ತುತ ಒಂದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಇದನ್ನು ನಿಯಂತ್ರಿಸುವಲ್ಲಿ ಪಾಲಿಕೆ ವತಿಯಿಂದ ಕ್ರಮಗಳಾಗುತ್ತಿದ್ದರೂ ಪೂರ್ಣ ಯಶಸ್ಸು ಸಾಧ್ಯವಾಗಿಲ್ಲ. ಕಟ್ಟಡ ತಾಜ್ಯ ಸಂಸ್ಕರಣಾ ಘಟಕ ಅಳವಡಿಕೆಯಿಂದ ಸಮಸ್ಯೆಗೆ ಒಂದು ಪರಿಹಾರ ರೂಪಿಸುವುದರ ಜತೆಗೆ ಪಾಲಿಕೆಗೆ ಒಂದು ಆದಾಯ ಮೂಲವಾಗಿಯೂ ಪರಿವರ್ತನೆಯಾಗಲಿದೆ.

ಕಟ್ಟಡ ತ್ಯಾಜ್ಯ ಸಂಸ್ಕರಣಾ ಘಟಕ
ಸಂಸ್ಕರಣಾ ಘಟಕದಲ್ಲಿ ಕಟ್ಟಡ ತ್ಯಾಜ್ಯಗಳನ್ನು ಸಂಸ್ಕರಣೆ ಮಾಡಿ ಅದರಿಂದ ಎಂ. ಸ್ಯಾಂಡ್‌, ಕಾಂಕ್ರೀಟ್‌ ಫೇವರ್ ಉತ್ಪಾದಿಸಲಾಗುತ್ತಿದೆ. ಹೊಸದಿಲ್ಲಿಯ ಐಎಲ್‌ಎಫ್‌ಸಿ ಮಾದರಿಯಲ್ಲಿ ರಾಜ್ಯದಲ್ಲೇ ಮೊದಲ ಘಟಕ ಧಾರವಾಡದಲ್ಲಿ ನಿರ್ಮಾಣವಾಗುತ್ತಿದೆ. ಐಎಲ್‌ಎಫ್‌ಎಸ್‌ ಸಂಸ್ಥೆ ಕಟ್ಟಡ ತ್ಯಾಜ್ಯ ಸಂಸ್ಕರಣ ಘಟಕವನ್ನು ಹೊಸದಿಲ್ಲಿಯಲ್ಲಿ ಯಶಸ್ವಿಯಾಗಿ ನಡೆಸುತ್ತಿದೆ. ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ಸಮೀಪ ಸುಮಾರು 2ಎಕ್ರೆ ಜಾಗದಲ್ಲಿ ಘಟಕ ಸಿದ್ಧಗೊಳ್ಳುತ್ತಿದ್ದು ಆರು ತಿಂಗಳೊಳಗೆ ಇದರ ನಿರ್ಮಾಣ ಕಾರ್ಯಪೂರ್ಣಗೊಂಡು ತ್ಯಾಜ್ಯ ಸಂಸ್ಕರಣಾ ಕಾರ್ಯ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ.

-   ಕೇಶವ ಕುಂದರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ