ಸೀಡ್‌ ವೆಂಡಿಂಗ್‌ ಮೆಶಿನ್‌: ನಗರದಲ್ಲಿ  ಹಸಿರು ಪರಿಸರವೃದ್ಧಿಗೆ ಪೂರಕ

Team Udayavani, Feb 3, 2019, 7:23 AM IST

ನಗರದಲ್ಲಿ ವಾಸಿಸುವ ಕೃಷಿ ಆಸಕ್ತಿರಿಗೆ ಕೃಷಿ ಕೆಲಸವನ್ನು ಮಾಡದೆ ಕೊರಗುತ್ತಾರೆ. ಆದರೆ ಅಂತಹವರಿಗೆ ತಮ್ಮ ಮನೆಯ ಟೆರೆಸ್‌ನಲ್ಲಿರುವ ಜಾಗದಲ್ಲಿ ತಾರಸಿ ಕೃಷಿಯನ್ನು ಮಾಡುವ ಮೂಲಕ ಹೊಸ ಮಾದರಿಯನ್ನು ಈಗಾಗಲೇ ಮಾಡಲಾಗುತ್ತಿದೆ. ಅದಕ್ಕೆ ಪೂರಕವಾಗುವಂತೆ ಸೀಡ್‌ ವೆಂಡಿಂಗ್‌ ಮೆಶಿನ್‌ ಮೂಲಕ ಬೀಜಗಳನ್ನು ನೀಡುವ ಯಂತ್ರವನ್ನು ತಂದರೆ ನಗರದಲ್ಲಿ ಪರಿಸರ ಸಂರಕ್ಷಣೆಗೆ ಒತ್ತು ನೀಡಿದಂತಾಗುತ್ತದೆ.

ಮಂಗಳೂರು ಸೇರಿದಂತೆ ನಗರಗಳಲ್ಲಿ ತಾರಸಿ ಕೃಷಿ ಪ್ರಸ್ತುತ ದಿನಗಳಲ್ಲಿ ಒಂದು ಟ್ರೆಂಡ್‌ ಆಗಿ ಬೆಳೆಯುತ್ತಿದೆ. ಮನೆಯಂಗಳದ ಪುಟ್ಟ ಜಾಗ, ಮನೆಯ ತಾರಸಿಗಳೆ ತರಕಾರಿ ತೋಟವಾಗಿ, ಹೂವಿನ ಉದ್ಯಾನವಾಗಿ ಕಂಗೊಳಿಸ ತೊಡಗಿವೆ. ತಾರಸಿ ಕೃಷಿ ಬರೇ ಒಂದು ಹವ್ಯಾಸವಾಗಿ ಉಳಿದಿಲ್ಲ.  ಅದರಲ್ಲಿ ಅನೇಕ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿರುವ ಮಾದರಿಗಳು, ಯಶೋಗಾಥೆಗಳು ನಮ್ಮ ಮುಂದಿವೆ. ತಾಪಮಾನ ಏರುತ್ತಿರುವ ಇಂದಿನ ಕಾಲಘಟ್ಟದಲ್ಲಿ ನಗರದಲ್ಲಿ ಹಸಿರು ವಾತಾವರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪರಿಸರಾತ್ಮಕವಾಗಿಯೂ ತಾರಸಿ ಕೃಷಿ ಪ್ರಾಮುಖ್ಯ ವನ್ನು ಪಡೆದುಕೊಂಡಿದೆ. 

ನಗರದಲ್ಲಿ ತಾರಸಿ ಕೃಷಿಯ ಮೂಲಕ ಕೃಷಿ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಮತ್ತು ಕೃಷಿ ಆಸಕ್ತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ಸೀಡ್‌ವೆಂಡಿಂಗ್‌ ಮೆಶಿನ್‌ (ಬೀಜ ಲಭ್ಯತಾ ಯಂತ್ರ) ಅಭಿವೃದ್ಧಿ ಪಡಿಸಿದ್ದು ಬೆಂಗಳೂರಿನಲ್ಲಿ 10 ಕಡೆಗಳಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಮಂಗಳೂರು ನಗರದಲ್ಲೂ ಈಗಾಗಲೇ ತಾರಸಿ ಕೃಷಿ ಪರಿಕಲ್ಪನೆ ಪ್ರವರ್ಧಮಾನಕ್ಕೆ ಬರುತ್ತಿದೆ. ಇಲ್ಲೂ ಈ ರೀತಿಯ ವ್ಯವಸ್ಥೆಯನ್ನು ಅಳವಡಿಸಿದರೆ ತಾರಸಿ ಕೃಷಿ ಆಸಕ್ತರಿಗೆ ಉಪಯುಕ್ತವಾಗಲಿದೆ ಮಾತ್ರವಲ್ಲದೆ ಹಸಿರು ಪರಿಸರ ನಿರ್ಮಾಣಕ್ಕೂ ಸಹಕಾರಿಯಾಗಲಿದೆ. 

ಸೀಡ್‌ ವೆಂಡಿಂಗ್‌ ಮೆಶಿನ್‌ 
ಸೀಡ್‌ ವೆಂಡಿಂಗ್‌ ಮೆಶಿನ್‌ ಹಣ ಹಾಕಿದರೆ ತರಕಾರಿ ಬೀಜಗಳ ಪ್ಯಾಕೆಟ್‌ ದೊರೆಯುವ ವ್ಯವಸ್ಥೆ. ನಗರ ಪ್ರದೇಶಗಳಲ್ಲಿ ಗುಣಮಟ್ಟದ ತರಕಾರಿ ಹಾಗೂ ಹೂವಿನ ಬೀಜಗಳು ಗ್ರಾಹಕರಿಗೆ ಲಭ್ಯವಾಗುತ್ತಿಲ್ಲ. ಲಭ್ಯವಾದರೂ ಗುಣಮಟ್ಟದ ಸಮಸ್ಯೆ ಇದೆ ಎಂಬ ದೂರುಗಳಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಸ್ವತಃ ತಾನು ಅಭಿವೃದ್ಧಿಪಡಿಸಿದ ಗುಣಮಟ್ಟದ ಬೀಜಗಳನ್ನು ಸುಲಭವಾಗಿ ಮತ್ತು ಅತ್ಯಂತ ಅಗ್ಗದ ದರದಲ್ಲಿ ತಲುಪಿಸುವ ಉದ್ದೇಶದಿಂದ ಸೀಡ್‌ ವೆಂಡಿಂಗ್‌ ಮೆಶಿನ್‌ ವ್ಯವಸ್ಥೆ ರೂಪಿಸಿದೆ. ಇದನ್ನು ಜನಸಂದಣಿ ಹೆಚ್ಚು ಇರುವ ಹಾಗೂ ತರಕಾರಿ ವಹಿವಾಟು ಹೆಚ್ಚಿರುವ ಸ್ಥಳಗಳಲ್ಲಿ ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಅಳವಡಿಸಲು ಸಂಸ್ಥೆ ನಿರ್ಧರಿಸಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಲಾಲ್‌ಬಾಗ್‌, ಬಸ್‌ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ 10 ಕಡೆಗಳಲ್ಲಿ ಇದನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

ಮಂಗಳೂರಿಗೆ ಸೀಡ್‌ ವೆಂಡಿಂಗ್‌ ಮೆಶಿನ್‌ ಉಪಯುಕ್ತ
ಮಂಗಳೂರಿನಲ್ಲಿ ಟೆರೇಸ್‌ ಕೃಷಿಯ ಟ್ರೆಂಡ್‌ ಬೆಳೆಯುತ್ತಿದೆ. ಟೆರೇಸ್‌ನ ಪುಟ್ಟ ತೋಟ ವೈವಿಧ್ಯಮಯ ಕೃಷಿಗಳ ದೊಡ್ಡ ಪ್ರಯೋಗಶಾಲೆಗಳಾಗುತ್ತಿವೆ. ವಿರಾಮದ ಸಮಯವನ್ನು ಆರೋಗ್ಯಪೂರ್ಣವಾಗಿ ಕಳೆಯಲು ಕೂಡ ಇದನ್ನು ಒಂದು ಮಾದರಿಯಾಗಿ ಕಂಡುಕೊಳ್ಳಲಾಗುತ್ತಿದೆ. ಕಸದಿಂದ ರಸ ಪಡೆಯುವುದರ ಜತೆಗೆ ಮನೆಗಳ ಮೇಲ್ಛಾವಣಿಗಳನ್ನು ತಂಪಾಗಿಡಲೂ ಇದು ಸಹಕಾರಿಯಾಗಿದೆ. ಟೆರೇಸ್‌ ಕೃಷಿಗೆ ಅವರು ಮನೆಯಲ್ಲಿ ಉತ್ಪತಿಯಾಗುವ ತಾಜ್ಯಗಳನ್ನೇ ಗೊಬ್ಬರವಾಗಿ ಬಳಸುತ್ತಾರೆ. ಇದರಿಂದ ತ್ಯಾಜ್ಯ ನಿರ್ವಹಣೆಯ ಸಮಸ್ಯೆಗೂ ಒಂದಷ್ಟು ಪರಿಹಾರ ಸಿಗುತ್ತದೆ.

ಸುಮಾರು 600 ಚದರ ಅಡಿಯಿಂದ 2,500 ಚದರ ಅಡಿಗಳವರೆಗಿನ ವಿಸ್ತೀರ್ಣದ ಟೆರೇಸ್‌ನಲ್ಲಿ ತರಕಾರಿ, ಹಣ್ಣಿನ ಗಿಡಗಳು ಬೆಳೆಸಲಾಗುತ್ತಿದೆ. ಟೆರೇಸ್‌ ಕೃಷಿ ಮಾಡಲು ಸಿದ್ಧರಾಗುವ ಸಂದರ್ಭದಲ್ಲಿ ಎದುರಾಗುವ ಪ್ರಮುಖ ಸವಾಲು ಎಂದರೆ ಗುಣಮಟ್ಟದ ತರಕಾರಿ ಬೀಜಗಳನ್ನು ಸಕಾಲದಲ್ಲಿ ಪಡೆಯುವುದು. ತೋಟಗಾರಿಕಾ ಕೇಂದ್ರಗಳಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಬೇಕಾದ ರೀತಿಯಲ್ಲಿ ತರಕಾರಿ ಬೀಜಗಳು ಲಭ್ಯತೆ ಇರುವುದಿಲ್ಲ. ತರಕಾರಿ ಬೀಜಗಳನ್ನು ಹುಡುಕಿಕೊಂಡು ಹೋಗಬೇಕಾದ ಪ್ರಮೇಯಗಳು. ಹಳ್ಳಿಗಳಲ್ಲಿಯೂ ತರಕಾರಿ ಬೆಳೆಸುವ ಆಸಕ್ತಿ ಮಾಯವಾಗುತ್ತಿದೆ. ಸೂಕ್ತ ತರಕಾರಿ ಬೀಜಗಳು, ಗಿಡಗಳು ಲಭ್ಯವಾಗದಿದ್ದರೆ ಟೆರೇಸ್‌ ಕೃಷಿಯ ಆಸಕ್ತಿಯು ಕುಂದುತ್ತದೆ. ಲಭ್ಯವಿದ್ದರೂ ಕೆಲವು ಬಾರಿ ದುಬಾರಿ ದರಗಳನ್ನು ತೆರಬೇಕಾಗುತ್ತದೆ. ಸಾಮಾನ್ಯವಾಗಿ ಮಂಗಳೂರಿನ ಟೆರೇಸ್‌ ಗಳಲ್ಲಿ ಕಂಡುಬರುವ ತರಕಾರಿಗಳಾದ ತೊಂಡೆ, ಬೆಂಡೆ, ಬದನೆ, ಟೊಮೇಟೊ, ಕುಂಬಳಕಾಯಿ, ಚೀನಿಕಾಯಿ, ಪಡುವಲ ಕಾಯಿ, ಹಾಗಲಕಾಯಿ, ಮೆಣಸು, ಬಸಳೆ, ಸೋರೆಕಾಯಿ ಸೇರಿದಂತೆ ವಿವಿಧ ತರಕಾರಿ ಗಿಡಗಳನ್ನು ಬೆಳೆಸಲಾಗುತ್ತಿದೆ.

ಮಂಗಳೂರಿನಲ್ಲಿ ಜನಸಂದಣಿಯ ಕೆಲವು ಪ್ರದೇಶಗಳಲ್ಲಿ ಸೀಡ್‌ ವೆಂಡಿಂಗ್‌ ಮೆಶಿನ್‌ಗಳನ್ನು ಸ್ಥಾಪಿಸಿದರೆ ನಗರ ತೋಟ ಅದರಲ್ಲೂ ಟೆರೇಸ್‌ ಕೃಷಿ ಆಸಕ್ತರಿಗೆ ಉತ್ತೇಜನ ಉತ್ತೇಜನಕಾರಿಯಾಗಲಿದೆ. ತೋಟಗಾರಿಕಾ ಸಂಶೋಧನಾ ಕೇಂದ್ರವು ಅಭಿವೃದ್ಧಿಪಡಿಸಿರುವ ತರಕಾರಿ ಬೀಜಗಳೇ ಇಲ್ಲಿ ಲಭ್ಯವಾಗುವುದರಿಂದ ಗುಣಮಟ್ಟದ ಬೀಜಗಳು ತೊರೆಯುವ ಸಾಧ್ಯತೆಗಳಿವೆ. ಕಡಿಮೆ ದರದಲ್ಲಿ ವಿವಿಧ ರೀತಿಯ ತರಕಾರಿ ಬೀಜಗಳನ್ನು ಒಂದೇ ಕಡೆಯಲ್ಲಿ ಪಡೆಯುವ ಅವಕಾಶವೂ ಇರುತ್ತದೆ. ಇದಲ್ಲದೆ ಸಂಶೋಧನಾ ಕೇಂದ್ರವೂ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸೀಡ್‌ ವೆಂಡಿಂಗ್‌ ಮೆಶಿನ್‌ಗಳನ್ನು ಅಳವಡಿಸಲು ಉತ್ಸುಕವಾಗಿದೆ. 

36 ಪ್ರಕಾರದ 24 ತರಕಾರಿ ಬೀಜ ಪ್ಯಾಕೆಟ್‌ಗಳು
ಸೀಡ್‌ ವೆಂಡಿಂಗ್‌ ಮೆಶಿನ್‌ನಲ್ಲಿ ಸುಮಾರು 36 ಪ್ರಕಾರದ 24 ತರಕಾರಿ ಬೀಜಗಳ, ಹೂವಿನ ಬೀಜಗಳ ಪ್ಯಾಕೆಟ್‌ಗಳಿರುತ್ತವೆ. ಸದ್ಯಕ್ಕೆ ಪ್ರತಿ ಪ್ಯಾಕೆಟ್‌ಗೆ 20 ರೂ. ದರ ನಿಗದಿ ಪಡಿಸಲು ತೋಟಗಾರಿಕಾ ಸಂಶೋಧನಾ ಸಂಸ್ಥೆ ನಿರ್ಧರಿಸಿದೆ. ಸ್ಕ್ರೀನ್‌ ಮೇಲೆ ಡಿಜಿಟಲ್‌ ಗುಂಡಿಗಳಿರುತ್ತವೆ. ಸಾರ್ವಜನಿಕರು ನಿಗದಿಪಡಿಸಿದ ಹಣವನ್ನು ಮೆಶಿನ್‌ನೊಳಗೆ ಹಾಕಿದ ಬಳಿಕ ಸ್ಕ್ರೀನ್‌ ಮೇಲೆ ಇರುವ ಡಿಜಿಟಲ್‌ ಗುಂಡಿಗಳ ಮೂಲಕ ಯಾವ ತರಕಾರಿ ಬೀಜ ಬೇಕು ಎಂಬುದನ್ನು ಸೂಚಿಸಬೇಕು. ವ್ಯಕ್ತಿಯು ಸೂಚಿಸಿದ ತರಕಾರಿ ಬೀಜದ ಪ್ಯಾಕೆಟ್‌ ಹೊರಬರುತ್ತದೆ. ಸೀಡ್‌ ವೆಂಡಿಂಗ್‌ ಮೆಶಿನ್‌ನ ಬೆಲೆ ಸುಮಾರು ಎರಡೂವರೆ ಲಕ್ಷ ರೂ. ಆಗುತ್ತದೆ. ಬೆಂಗಳೂರಿನಲ್ಲಿ ಇದನ್ನು ಅಳವಡಿಸಲು ತೋಟಗಾರಿಕಾ ಇಲಾಖೆಯ ನೆರವು ಕೇಳಲು ನಿರ್ಧರಿಸಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದ ಇತರ ಜಿಲ್ಲೆಗಳಲ್ಲೂ ಸೀಡ್‌ ವೆಂಡಿಂಗ್‌ ಮೆಶಿನ್‌ಗಳನ್ನು ಅಳವಡಿಸಲು ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆ ಚಿಂತನೆ ನಡೆಸಿದೆ. 

 ಕೇಶವ ಕುಂದರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ: ದಕ್ಷಿಣದಲ್ಲಿ ಅಬ್ಬರಿಸಿ ಅಪಾರ ಸಾವು- ನೋವು, ಆಸ್ತಿ ಪಾಸ್ತಿ ಹಾನಿಗೆ ಕಾರಣನಾದ ಮಳೆರಾಯ ಉತ್ತರದಲ್ಲಿ ತನ್ನ ಪ್ರತಾಪ ಮುಂದುವರಿಸಿದ್ದಾನೆ. ದಿಲಿ,...

  • ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಹಾಗೂ ಮೈತ್ರಿ ಸರ್ಕಾರ ಮುಂದುವರಿಸಿಕೊಂಡು ಬಂದಿರುವ 'ಅನ್ನಭಾಗ್ಯ' ಹಾಗೂ 'ಇಂದಿರಾ ಕ್ಯಾಂಟೀನ್‌' ಯೋಜನೆಗೆ...

  • ಮನುಷ್ಯನ ದೇಹದಲ್ಲಿರುವ ಒಂದು ಅವಿಭಾಜ್ಯ ಅಂಗವೆಂದರೆ ಅದು ಕಣ್ಣು. ಪ್ರಪಂಚವನ್ನು ಇಷ್ಟು ಸುಂದರವಾಗಿ ಕಾಣಲು ಕಾರಣವೇ ಕಣ್ಣು.ನಮ್ಮ ದೇಶದಲ್ಲಿ ಇಂದಿಗೂ ಒಂದು ಅಂದಾಜಿನ...

  • ರಾಯಚೂರು: ಮಂತ್ರಾಲಯದ ಶ್ರೀರಾಘ ವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವದ ಅಂಗವಾಗಿ ಶನಿವಾರ ರಾಯರ ಮಧ್ಯಾರಾಧನೆ ವಿಜೃಂಭಣೆಯಿಂದ ನೆರವೇರಿತು. ಸಂಪ್ರದಾಯದಂತೆ...

  • ಬೆಂಗಳೂರು: ವಿಶೇಷ ಸ್ಥಾನಮಾನ ರದ್ದುಪಡಿಸುವ ನಿರ್ಧಾರಕ್ಕೆ ಪೂರ್ವಭಾವಿಯಾಗಿ ಕೇಂದ್ರ ಸರಕಾರವು ಜಮ್ಮು-ಕಾಶ್ಮೀರದಲ್ಲಿ ಭಾರೀ ಸಂಖ್ಯೆಯಲ್ಲಿ ಸೇನಾ ಯೋಧರನ್ನು...

  • ಹುಬ್ಬಳ್ಳಿ: ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ನಿರ್ದೇಶನದಂತೆ ನ.1ರಿಂದ ಬೆಳಗಾವಿ-ಬೆಂಗಳೂರು (06526/06525) ಸೂಪರ್‌ಫಾಸ್ಟ್‌ ತತ್ಕಾಲ್ ಸ್ಪೇಷಲ್ ರೈಲನ್ನು ಪ್ರತಿದಿನ...