ಶಿಸ್ತು, ಸರಳತೆಯ ಚೌಕಟ್ಟಿನಲ್ಲಿ ಸತ್ಯಾಗ್ರಹಿ ವಿಜ್ಞಾನಿ

ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಪ್ರಸ್ತುತಿ

Team Udayavani, Nov 1, 2019, 3:20 AM IST

ಗಾಂಧಿ ಮತ್ತು ವಿಜ್ಞಾನದ ವಿಷಯವನ್ನು ಕೇಂದ್ರೀಕರಿಸಿ ರಚನೆಗೊಂಡ ಈ ಕೃತಿಯಲ್ಲಿ ಗಾಂಧಿ ನಿಜವಾಗಿಯೂ ವಿಜ್ಞಾನದ ಬಗ್ಗೆ ಹೊಂದಿದ್ದ ನಿಲುವುಗಳನ್ನು ಅರಿಯುವ ಪ್ರಯತ್ನ ಮಾಡಲಾಗಿದೆ. ಈ ನಿಟ್ಟಿನಲ್ಲಿ ರಚನೆಕಾರರು ಗಾಂಧಿ ಕುರಿತಾಗಿ ನಡೆಸಿದ ಅಧ್ಯಯನ ಹಾಗೂ ಕಂಡುಕೊಂಡ ಆಧಾರಗಳು ಈ ಕೃತಿಯ ಹಿನ್ನೆಲೆಯಲ್ಲಿದೆ.

ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ, ಬೈಕಾಡಿ ಇವರು ಶಾಂತಿದೂತನ ನೆನಪಲ್ಲಿ ಸಾಂಸ್ಕೃತಿಕ ಸಂಜೆ ಎನ್ನುವ ಕಾರ್ಯಕ್ರಮವನ್ನು ಸಾಲಿಕೇರಿಯ ಅಂಬೇಡ್ಕರ್‌ ಸಭಾಭವನದಲ್ಲಿ ಆಯೋಜಿಸಿದ್ದು, ಈ ಸಂದರ್ಭದಲ್ಲಿ ಮೊದಲಿಗೆ ತೋರಣ ಮಕ್ಕಳ ತಂಡ ಶಂಕರದಾಸ್‌ ಚೆಂಡ್ಕಳ ಅವರಿಂದ ತರಬೇತಿ ಪಡೆದ ಕಂಗೀಲು ಕುಣಿತ ಮತ್ತು ಕಂಸಾಳೆ ಜಾನಪದ ನೃತ್ಯವನ್ನು ಸೊಗಸಾಗಿ ಪ್ರದರ್ಶಿಸಿದರು.ಅನಂತರ ಬ್ರಹ್ಮಾವರದ ಎಸ್‌.ಎಂ.ಎಸ್‌. ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಸತ್ಯಾಗ್ರಹ ವಿಜ್ಞಾನಿ ಎನ್ನುವ ನಾಟಕ ಪ್ರದಶಿಸಲ್ಪಟ್ಟಿತು. ಗಾಂಧಿ ಮತ್ತು ವಿಜ್ಞಾನದ ವಿಷಯವನ್ನು ಕೇಂದ್ರೀಕರಿಸಿ ರಚನೆಗೊಂಡ ಈ ಕೃತಿಯಲ್ಲಿ ಗಾಂಧಿ ನಿಜವಾಗಿಯೂ ವಿಜ್ಞಾನದ ಬಗ್ಗೆ ಹೊಂದಿದ್ದ ನಿಲುವುಗಳನ್ನು ಅರಿಯುವ ಪ್ರಯತ್ನ ಮಾಡಲಾಗಿದೆ. ಈ ನಿಟ್ಟಿನಲ್ಲಿ ರಚನೆಕಾರರಾದ ಅಭಿಲಾಷಾ ಎಸ್‌. ಅವರು ಗಾಂಧಿ ಕುರಿತಾಗಿ ನಡೆಸಿದ ಅಧ್ಯಯನ ಹಾಗೂ ಅವರು ಕಂಡುಕೊಂಡ ಆಧಾರಗಳು ಈ ಕೃತಿಯ ಹಿನ್ನೆಲೆಯಲ್ಲಿದೆ.

ಪ್ರಸ್ತುತ ಘಟನೆ ಚಂದ್ರಯಾನ-2ರ ಬಗ್ಗೆ ಚರ್ಚೆ ಮಾಡುತ್ತಾ ಗದ್ದಲ ಮಾಡುತ್ತಿರುವ ಮಕ್ಕಳಿಗೆ ಮೋನು ಗದರಿಸಿ ಗಾಂಧಿ ಬಗ್ಗೆ ತನಗೆ ಲೇಖನ ಬರೆಯಬೇಕಿದೆ, ಅದಕ್ಕಾಗಿ ತಾನೊಂದಿಷ್ಟು ಪುಸ್ತಕಗಳ ಅಧ್ಯಯನ ಮಾಡಬೇಕಾಗಿದ್ದು ನಿಮ್ಮಿಂದ ನನಗೆ ತೊಂದರೆ ಆಗುತ್ತಿದೆ ಎನ್ನುತ್ತಾ ಮೋನು ಗಾಂಧಿ ಮತ್ತು ವಿಜ್ಞಾನದ ವಿಷಯವಾಗಿ ಮಕ್ಕಳೊಂದಿಗೆ ಚರ್ಚೆಗೆ ಇಳಿಯುತ್ತಾಳೆ. ಅವಳ ದೃಷ್ಟಿಯಲ್ಲಿ ಗಾಂಧಿ ಸ್ವಾತಂತ್ರ್ಯ ಹೋರಾಟಗಾರರು ಮಾತ್ರ, ವಿಜ್ಞಾನಿ ಅಲ್ಲ. ಆದರೆ ಮಕ್ಕಳ ದೃಷ್ಟಿಯಲ್ಲಿ ಅವರು ಒಂದು ರೀತಿಯಲ್ಲಿ ವಿಜ್ಞಾನಿ ಹಾಗೂ ವಿಜ್ಞಾನವನ್ನು ಪ್ರೋತ್ಸಾಹಿಸುತ್ತಿದ್ದವರು.

ಅವರ ಮಾತನ್ನು ನಂಬದ ಮೋನು ಪುಸ್ತಕವನ್ನು ಓದುತ್ತಿರುವ ಸಂದರ್ಭದಲ್ಲಿ ಅವಳ ಮನದಲ್ಲಿ ಮೂಡಿದ ಗಾಂಧಿಯೇ ತಾನು ವಿಜ್ಞಾನವನ್ನು ಸಮರ್ಥಿಸಿದ ಕೆಲವೊಂದು ಘಟನೆಗಳನ್ನು ಮತ್ತು ತನ್ನ ಬದುಕಿನಲ್ಲಿ ಬದುಕುವ ರೀತಿಯ ಕುರಿತು ನಡೆಸಿದ ಪ್ರಯೋಗಗಳ ಬಗ್ಗೆ ಮೋನುವಿನಲ್ಲಿ ಹಂಚಿಕೊಳ್ಳುತ್ತಾರೆ. ಅದರಲ್ಲಿ ಬಾಪು ಯರವಾಡ ಜೈಲಿನಲ್ಲಿದ್ದಾಗ ಖಗೋಳ ಶಾಸ್ತ್ರದ ಬಗ್ಗೆ ಅಧ್ಯಯನ ನಡೆಸಿದ್ದು, ಅವರನ್ನು ಭೇಟಿಯಾಗಲು ಬಂದ ಅರೆಶಿರ್‌ ಗೋದ್ರೆಜ್‌ ಅವರಿಂದ ದೂರದರ್ಶಕ ತರಿಸಿಕೊಂಡು ಆಕಾಶ ವೀಕ್ಷಿಸಿದ್ದು, ವಿಜ್ಞಾನ ಮತ್ತು ಪ್ರೀತಿಯ ನಡುವಿನ ಬಂಧವನ್ನು ಸಿಂಗರ್‌ ಹೊಲಿಗೆ ಯಂತ್ರದ ಕಥೆಯ ಮೂಲಕ ಹೇಳುವುದು ಹಾಗೂ ಚರಕದ ಬಗ್ಗೆ ಹೇಳುತ್ತಾ ಸಬರಮತಿಯ ಅಶ್ರಮದಲ್ಲಿ ನಡೆಯುತ್ತಿದ್ದ ಸತ್ಯಾಗ್ರಹಿಗಳ ತರಬೇತಿ , ರೋಗಿಗಳ ಆರೈಕೆ ಇವೆಲ್ಲವನ್ನು ವಿಸ್ತಾರವಾಗಿ ಆಕೆಗೆ ತಿಳಿಸುತ್ತಾರೆ. ಕೊನೆಯಲ್ಲಿ ಮೋನು ಕನಸಲ್ಲಿ ಕಾಣುವ ಯುದ್ಧ ಶಸ್ತ್ರಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸುತ್ತಾ ಬಾಪು “ಮನುಷ್ಯರೇ ಮನುಷ್ಯರನ್ನು ಕೊಲ್ಲುವ ವಿಜ್ಞಾನದ ಈ ಹಿಂಸೆಯ ಮುಖ ನಮಗೆ ಬೇಕೇ?’ ಎಂಬ ಪ್ರಶ್ನೆಯನ್ನು ಎತ್ತಿ ಹಿಡಿಯುತ್ತಾ ಮೋನುವಿನ ಕಲ್ಪನೆಯಿಂದ ಮರೆಯಾಗುತ್ತಾರೆ.

ಗಾಂಧೀಯಾಗಿ ಸಾತ್ವಿಕ್‌, ಮೋನುವಾಗಿ ಸುಪ್ತ, ಆಶ್ರಮವಾಸಿ ಮತ್ತು ಸಿಂಗರ್‌ ಆಗಿ ಸುಜಿತ್‌, ಮೈಸೂರಿನ ಇಂಜಿನಿಯರ್‌ ಹಾಗೂ ಅರೆಶಿರ್‌ ಗೋದ್ರೆಜ್‌ ಆಗಿ ವಿಲ್ಸನ್‌, ಕಸ್ತೂರ್ಬಾ ಆಗಿ ವೈಷ್ಣವಿ, ಸಿಂಗರ್‌ನ ಮಡದಿಯಾಗಿ ಶ್ರೀನಿಧಿ, ಕುಷ್ಟರೋಗಿಯಾಗಿ ಶ್ರೀಕರ ಮತ್ತು ಪ್ರೊಫೆಸರ್‌ ಆಗಿ ಪಲ್ಲವಿ ತಮ್ಮ ಪಾತ್ರಗಳನ್ನು ಬಹಳ ಸರಳ ಹಾಗೂ ಪಕ್ವತೆಯ ಆಭಿನಯ ಮತ್ತು ಸಂಭಾಷಣೆಯ ಮೂಲಕ ಪ್ರಸ್ತುತಪಡಿಸಿದರು. ಹಿನ್ನೆಲೆಯ ಹಾಡು ವಿದ್ಯಾರ್ಥಿಗಳೇ ಹಾಡಿದ್ದು, ರೋಹಿತ್‌ ಬೈಕಾಡಿಯವರು ನಿರ್ದೇಶಿಸಿದ್ದರು.

ಕೆ.ದಿನಮಣಿ ಶಾಸ್ತ್ರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ