ಏಕಾಯಣದಲ್ಲಿ ಪ್ರಕಟಗೊಂಡ ಅಹಲ್ಯಾ ಭಾವಯಾನ

ಭಾವನಾ ಕೆರೆಮಠ ಪ್ರಸ್ತುತಿ

Team Udayavani, Oct 11, 2019, 5:31 AM IST

ಸುರಸುಂದರಾಂಗ ದೇವೇಂದ್ರನನ್ನು ಆಂತರ್ಯದಲ್ಲಿ ಆರಾಧಿಸುತ್ತಿದ್ದ ಅಹಲ್ಯೆ ಅನಿವಾರ್ಯವಾಗಿ ಗೌತಮರ ಪತ್ನಿಯಾಗುವಲ್ಲಿಂದ ಆಕೆಯ ದುರಂತಮಯ ಜೀವನದ ಅಧ್ಯಾಯಕ್ಕೆ ಮುನ್ನುಡಿ ಬರೆದಂತಾಗುತ್ತದೆ.ಪಾಲಿಗೆ ಬಂದದ್ದು ಪಂಚಾಮೃತ ಎನ್ನುವಂತೆ ಅಹಲ್ಯೆ ತನ್ನ ಒಳಬೇಗುದಿಯನ್ನು ನಿಯಂತ್ರಿಸಿಕೊಂಡು ತಾಪಸ ಜೀವನಕ್ಕೆ ಹೊಂದಿಕೊಳ್ಳುವಳು.

ಪುರಾಣ ಕತೆಯಲ್ಲಿ ಗೌತಮ ಋಷಿ ಪತ್ನಿ ಅಹಲ್ಯೆಯ ಜೀವನ ಪಯಣ ಎಷ್ಟು ರೋಚಕವೋ ಅಷ್ಟೇ ದುರಂತಮಯ. ಕವಿ ಕಲ್ಪನೆಗೆ ಸಾಟಿಯಿಲ್ಲ ಎನ್ನುವುದನ್ನು ಪುಷ್ಟೀಕರಿಸುವಂತೆ ಕವಿಗಳು ಮೂಲ ಕತೆಗೆ ತಮ್ಮ ಕಲ್ಪನೆಯನ್ನು ಸೇರಿಸಿ ಆಕೆಯ ಜೀವನವನ್ನು ವರ್ಣಮಯಗೊಳಿಸಿ ತಮಗೆ ಸರಿಕಂಡ ರೀತಿಯಲ್ಲಿ ಚಿತ್ರಿಸಿದ್ದಾರೆ. ಇದಕ್ಕೊಂದು ಸೇರ್ಪಡೆ ಹಿರಿಯ ವಿದ್ವಾಂಸ ಅಂಬಾತನಯ ಮುದ್ರಾಡಿ ಲೇಖನಿಯಿಂದ ಮೂಡಿಬಂದ ಅಹಲ್ಯಾ.

ಈ ಕೃತಿಯನ್ನು ಅಹಲ್ಯಾ ಭಾವಯಾನವಾಗಿ ಭಾವನಾ ಕೆರೆಮಠ ಅಭಿನಯದ ಮೂಲಕ ಏಕಾಯಣ ರಂಗ ಪ್ರಯೋಗವಾಗಿ ಇತ್ತೀಚೆಗೆ ಉಡುಪಿ ರವೀಂದ್ರ ಮಂಟಪದಲ್ಲಿ ಪ್ರಸ್ತುತಿ ಪಡಿಸಿದರು. ಬ್ರಹ್ಮಮಾನಸಪುತ್ರಿ ಅಹಲ್ಯೆಯ ಸ್ವಯಂವರದ ಭೂಪ್ರದಕ್ಷಿಣೆಯ ಷರತ್ತನ್ನು ಜಾಣ್ಮೆಯಿಂದ ಪೂರೈಸಿ ದೇವೇಂದ್ರನಂಥ ಘಟಾನುಘಟಿಗಳನ್ನು ಸೋಲಿಸಿ ಗೌತಮ ಮಹರ್ಷಿ ಅಹಲ್ಯೆಯ ಕೈಹಿಡಿಯುವನು. ಸುರಸುಂದರಾಂಗ ದೇವೇಂದ್ರನನ್ನು ಆಂತರ್ಯದಲ್ಲಿ ಆರಾಧಿಸುತ್ತಿದ್ದ ಅಹಲ್ಯೆ ಅನಿವಾರ್ಯವಾಗಿ ಗೌತಮರ ಪತ್ನಿಯಾಗುವಲ್ಲಿಂದ ಆಕೆಯ ದುರಂತಮಯ ಜೀವನದ ಅಧ್ಯಾಯಕ್ಕೆ ಮುನ್ನುಡಿ ಬರೆದಂತಾಗುತ್ತದೆ. ಪಾಲಿಗೆ ಬಂದದ್ದು ಪಂಚಾಮೃತ ಎನ್ನುವಂತೆ ಅಹಲ್ಯೆ ತನ್ನ ಒಳಬೇಗುದಿಯನ್ನು ನಿಯಂತ್ರಿಸಿಕೊಂಡು ತಾಪಸ ಜೀವನಕ್ಕೆ ಹೊಂದಿಕೊಳ್ಳುವಳು. ಆದರೆ ಆಕೆಯೊಂದಿಗೆ ಸುಖೀಸುವ ಬಹುಕಾಲದ ಬಯಕೆಯನ್ನು ಹತ್ತಿಕ್ಕಿಕೊಳ್ಳಲಾಗದೆ ಸುರಲೋಕದ ಅಧಿಪತಿ ದೇವೇಂದ್ರ ವಾಮಮಾರ್ಗದಿಂದ ಆಕೆಯನ್ನು ಹೊಂದುವನು.ಆತನ ಬಗೆಗಿನ ಸುಪ್ತಕಾಮನೆ ಅಹಲ್ಯೆಯನ್ನು ಮೈಮರೆಯುವಂತೆ ಮಾಡಿರಬಹುದೇನೋ? ವಿಷಯವನ್ನರಿತ ಗೌತಮ ಮಹರ್ಷಿಗಳು ಇಬ್ಬರನ್ನೂ ಶಪಿಸುವರು.ಶ್ರೀರಾಮ ದರ್ಶನದಿಂದ ಅಹಲ್ಯೆಯ ಶಾಪ ವಿಮೋಚನೆ ಎಂದು ಉಪಸಂಹಾರ ಮಾಡುವಲ್ಲಿ ಅಹಲ್ಯೆಯ ಬಗ್ಗೆ ಗೌತಮ ಋಷಿಗಳಿಗಿದ್ದ ಒಳಸೆಳೆತವನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ತಿಳಿದಿರುವಂತೆ ಶಾಪಗ್ರಸ್ತ ಅಹಲ್ಯೆ ಬಂಡೆಯ ರೂಪತಾಳಿದರೂ ಅಂಬಾತನಯರು ಆಕೆ ಸುಟ್ಟು ಬೂದಿಯಗಿ ಸೂಕ್ಷ್ಮ ಜೀವಿಯಾಗಿ ಶ್ರೀರಾಮನ ಬರುವಿಕೆಗಾಗಿ ಕಾಯುತ್ತಿರುವಂತೆ ವರ್ಣಿಸಿದ್ದಾರೆ.

ವಿವಿಧ ಸಂದರ್ಭಗಳಲ್ಲಿ ಅಹಲ್ಯೆಯ ಆಂತರ್ಯವನ್ನು ತೆರೆದಿಡುವ ಪರಿ, ಆಕೆಯ ಸುಪ್ತ ಮನೋಕಾಮನೆಗಳನ್ನು ವ್ಯಕ್ತಪಡಿಸುವ ರೀತಿ, ಶ್ರೀರಾಮನ ದರ್ಶನ ಭಾಗ್ಯ ದೊರಕುತ್ತದೆನ್ನುವ ಕಾರಣಕ್ಕಾಗಿ ಶಾಪವನ್ನು ಸಂಭ್ರಮಿಸುವ ಸೊಬಗು, ಶ್ರೀರಾಮನನ್ನು ಮಾತೃಹೃದಯದಿಂದ ಕಾಣುವ ಕಕ್ಕುಲತೆ ಇವೆಲ್ಲವುಗಳನ್ನು ಭಾವನಾ ಕೆರೆಮಠ ಭಾವನಾತ್ಮಕವಾಗಿ ರಂಗದಮೇಲೆ ಪ್ರದರ್ಶಿಸಿದರು. ಸಂದರ್ಭಕ್ಕೆ ತಕ್ಕಂತೆ ಸಾಂಕೇತಿಕ ವಾಗಿ ದೃಶ್ಯ ಬದಲಾವಣೆ, ವೇಷಪಲ್ಲಟ ಮುಂತಾದ ರಂಗಕ್ರಿಯೆಗಳನ್ನು ನಟನೆ ಹಾಗೂ ನಾಟ್ಯಕ್ಕೆ ಭಂಗ ಬಾರದಂತೆ ಅಚ್ಚುಕಟ್ಟಾಗಿ ನಿರ್ವಹಿಸಿದ ರೀತಿ ಪ್ರಶಂಸಾರ್ಹ. ಅದರಲ್ಲೂ ದೇವೇಂದ್ರ ಮುಂತಾದ ಪಾತ್ರಗಳನ್ನು ಯಕ್ಷಗಾನ ಹೆಜ್ಜೆ ಹಾಗೂ ಹಿಮ್ಮೇಳ ಮೂಲಕ ವೀರಕಸೆ ವಸ್ತ್ರವನ್ನು ಉಪಯೋಗಿಸಿ ಸಂಭಾಷಣೆ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದ ಪರಿ ಅದ್ಬುತ. ಅದಕ್ಕೆ ಪೂರಕವಾಗಿ ಒಂದೆರಡು ಸಂದರ್ಭಗಳನ್ನು ಹೊರತುಪಡಿಸಿ, ಬೆಳಕಿನ ವ್ಯವಸ್ಥೆ ಸಮರ್ಪಕವಾಗಿದ್ದು ಮಾತ್ರವಲ್ಲ ಹಿತಮಿತ ಸಂಗೀತ ನೀಡಿದ ಗೀತಂ ಗಿರೀಶ್‌ ಅಭಿನಂದನಾರ್ಹರು.

ಕಣ್ಸೆಳೆಯುವ ರಂಗ ವಿನ್ಯಾಸ, ರಂಗ ಪರಿಕರಗಳ ಸಮರ್ಥ ಬಳಸುವಿಕೆ ನಾಟಕದ ಸಂಭಾಷಣೆ ಹಾಗೂ ಹಾಡುಗಳ ಸಾಹಿತ್ಯ ಅರ್ಥಗರ್ಭಿತವಾಗಿದ್ದು ಕರ್ಣಾನಂದಕರವೆನಿಸಿತು. ಯುವ ಪ್ರತಿಭೆಯನ್ನು ಪರಿಣಾಮಕಾರಿಯಾಗಿ ರಂಗದ ಮೇಲೆ ದುಡಿಸಿಕೊಂಡ ನಿರ್ದೇಶಕ ರವಿರಾಜ್‌ಎಚ್‌.ಪಿ. ಪ್ರಾಮಾಣಿಕವಾಗಿ ಮಾಡಿದ ಪ್ರಯತ್ನ ಏಕವ್ಯಕ್ತಿ ಪ್ರದರ್ಶನದ ಒಂದು ಯಶಸ್ವಿ ಮೈಲಿಗಲ್ಲು ಎಂದು ಗುರುತಿಸುವಂತೆ ಆದದ್ದು ಪ್ರಯೋಗಕ್ಕೆ ಸಂದ ವಿಜಯ. ಪಾತ್ರದ ಘನತೆಗೆ-ಸೂಕ್ಷ್ಮತೆಗೆ ಚ್ಯುತಿ ಬಾರದ ರೀತಿಯಲ್ಲಿ ಅಭಿವ್ಯಕ್ತಿಯನ್ನು ಪ್ರಕಟಿಸಬೇಕಾದ ಸವಾಲುಗಳನ್ನು ಯಶಸ್ವಿಯಾಗಿ ಮನಮುಟ್ಟುವಂತೆ ನಿಭಾಯಿಸಿದ ಭಾವನಾ ಇವರ ಭಾವಯಾನ ಮೆಚ್ಚುಗೆ ಗಳಿಸುವಲ್ಲಿ ಸಫ‌ಲವಾಯ್ತು.

ಜನನಿ ಭಾಸ್ಕರ್‌ಕೊಡವೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ