ರಂಜಿಸಿದ ಬಲಿಪ ಗಾನ ಯಾನ-ಯಕ್ಷಗಾನ

ಯಕ್ಷ ತರಂಗಿಣಿ ಪ್ರಸ್ತುತಿ

Team Udayavani, Sep 27, 2019, 5:00 AM IST

ಮೂರೂ ಭಾಗವತರ ಪ್ರತಿಭೆಗೆ ಸವಾಲೊಡ್ಡುವ ಹಾಡುಗಳನ್ನೇ ಆಯ್ಕೆ ಮಾಡಿ ಕೊಟ್ಟದ್ದರಿಂದ ಹಾಗೂ ಪದ್ಯಗಳ ಆಯ್ಕೆಯಲ್ಲೂ ಹೊಸತನವಿದ್ದದರಿಂದ ಕಲಾಭಿಮಾನಿಗಳಿಗೆ ಅಂದು ಕಲಾ ರಸದೌತಣವೇ ದೊರೆಯಿತು.

ಯಕ್ಷತರಂಗಿಣಿ ಕೈಕಂಬ ಆಶ್ರಯದಲ್ಲಿ ಗಣೇಶೊತ್ಸವದ ಪ್ರಯುಕ್ತ ಕೈಕಂಬದ ಬೆನಕ ವೇದಿಕೆಯಲ್ಲಿ ಯಕ್ಷ ವೈಭವ ಜರಗಿತು. ಆರಂಭದಲ್ಲಿ ಬಲಿಪ ಶೈಲಿಯ ಗವತತ್ರಯರಿಂದ ಗಾನ ಯಾನ, ನಂತರ ಶ್ರೀ ಸುಬ್ರಹ್ಮಣೇಶ್ವರ ಯಕ್ಷನಾಟ್ಯ ಕಲಾಕೇಂದ್ರ ತಕಧಿಮಿ ತಂಡದ ವಿದ್ಯಾರ್ಥಿಗಳಿಂದ “ಲೀಲಾಮಾನುಷ ವಿಗ್ರಹ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.

ಯಕ್ಷಗಾನದಲ್ಲಿ ಬಲಿಪ ಶೈಲಿಯ ಬಲಿಪ ಪ್ರಸಾದ್‌ ಭಟ್‌, ಬಲಿಪ ಶಿವಶಂಕರ ಭಟ್‌ ಮತ್ತು ಪುಂಡಿಕಾಯಿ ಗೋಪಾಲಕೃಷ್ಣ ಭಟ್‌ ಈ ಮೂವರು ಭಾಗವತರು ಗಣಪತಿ ಸ್ತುತಿಯಿಂದ ಹಿಡಿದು ರಂಗನಾಯಕನ ಮಂಗಳದ ಹಾಡಿನವರೆಗೆ ಸುಮಾರು ಎರಡು ಗಂಟೆಗಳ ಕಾಲ ಹರಿಸಿದ ಅಮೋಘ ಗಾನ ಸುಧೆಯನ್ನು ಯಕ್ಷಪ್ರಿಯರು ಮಂತ್ರಮುಗ್ಧರಾಗಿ ಆಲಿಸಿದರು. ಮೂರೂ ಭಾಗವತರ ಪ್ರತಿಭೆಗೆ ಸವಾಲೊಡ್ಡುವ ಹಾಡುಗಳನ್ನೇ ಆಯ್ಕೆ ಮಾಡಿ ಕೊಟ್ಟದ್ದರಿಂದ ಹಾಗೂ ಪದ್ಯಗಳ ಆಯ್ಕೆಯಲ್ಲೂ ಹೊಸತನವಿದ್ದದರಿಂದ ಕಲಾಭಿಮಾನಿಗಳಿಗೆ ಅಂದು ಕಲಾ ರಸದೌತಣವೇ ದೊರೆಯಿತು. ಭರತಾಗಮನದ “ಬಂದೆಯಾ ಇನವಂಶ ವಾರಿಧಿ’, ಶರಸೇತು ಬಂಧನದ “ಅಕಟಕಟ ಏತಕೆ ಇವನಲಿ’, ಕುಮಾರ ವಿಜಯದ “ಕನ್ನೆ ಸುಗುಣ ಸಂಪನ್ನೆ’ ಹಾಗೂ ಹಿರಣ್ಯಾಕ್ಷದ “ಸುಂದರಾಂಗಿ ಸುಮಗಂಧಿ ಚಂದ್ರವದನೆ’ ಹಾಡುಗಳು ಬಲಿಪ ಪ್ರಸಾದರ ಕಂಠಸಿರಿಯಲ್ಲಿ ಅದ್ಭುತವಾಗಿ ಹೊರಹೊಮ್ಮಿತ್ತು. ಗೋಪಾಲಕೃಷ್ಣ ಭಟ್ಟರು ಜಾಂಬವತಿ ಕಲ್ಯಾಣದ “ಕಿರು ಬೆಟ್ಟಿನೊಳಗೆ ನಾನು ಗೋವರ್ಧನ ಗಿರಿಯ” ಹಾಗೂ ಸತ್ಯಹರಿಶ್ಚಂದ್ರದ “ಆಡಿದರಾಡಿದರು’ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ಬಲಿಪ ಶಿವಶಂಕರ್‌ ಭಟ್‌ ಇಂಪಾದ ಸ್ವರದಲ್ಲಿ ಮಾಗಧ ವಧೆಯ “ತಿಳಿಯದಾದಿರೆ ನಮ್ಮ ಕಂಸಗೆ’, ಇಂದ್ರಜಿತುವಿನ “ಈತಗಳು ನರರಲ್ಲ’ ಹಾಗೂ ಕರ್ಣಾವಸಾನದ “ಮನಸಿಜ ಪಿತ ನೀನು ಮಾತಿನಲಿ’ ಹಾಡಿದ ಹಾಡುಗಳು ಮೆಚ್ಚುಗೆ ಗಳಿಸಿತು. ಮೂರೂ ಭಾಗವತರು ಜತೆಯಾಗಿ ಹಾಡಿದ ಭೀಷ್ಮವಿಜಯದ ಭಾಮಿನಿ “ಪರಮ ಋಷಿ ಮಂಡಲದಿ’, ದೇವಿ ಮಹಾತ್ಮೆಯ “ವೀಣೆಯ ಪಿಡಿದಿರ್ಪ ವಾಣಿಯ ಪರಿಯ’ ಮತ್ತು “ಕಂಡೆಯಾ ಸುರಪಾಲ ದೈತ್ಯರ ರುಂಡಗಳ’, ರಾವಣ ವಧೆಯ “ಕಂಡು ದಶವದನ ಕೋದಂಡರಾಮನ’ ಹಾಗೂ ವಾಲಿಮೋಕ್ಷದ “ಜಾಣನಹುದಹುದು’ ಪದ್ಯಗಳು ಮನಗೆದ್ದಿತು. ಏರು ಪದ್ಯಗಳ ಬಳಿಕ ಮೂರು ಭಾಗವತರು ಸೇರಿ “ರಂಗನಾಯಕ ರಾಜೀವಲೋಚನ’ ಹಾಡಿನೊಂದಿಗೆ ಗಾನಯಾನಕ್ಕೆ ಮಂಗಳ ಹಾಡಿದರು.

ಕೊಂಕಣಾಜೆ ಚಂದ್ರಶೇಖರ ಭಟ್ಟರ ಚೆಂಡೆವಾದನ, ಚೈತನ್ಯ ಕೃಷ್ಣ ಪದ್ಯಾಣ ಹಾಗೂ ಸುಮಿತ್‌ ಆಚಾರ್ಯ ಅವರ ಮದ್ದಲೆಯ ನಾದ, ಪೂರ್ಣೇಶ ಆಚಾರ್ಯರ ಚಕ್ರತಾಳದ ಝೇಂಕಾರ ಹಾಗೂ ವಾದಿರಾಜ ಕಲ್ಲೂರಾಯರ ನಿರೂಪಣೆ ಇವೆಲ್ಲ ಗಾನ ಯಾನದ ಸೊಬಗನ್ನು ಮತ್ತಷ್ಟೂ ಹೆಚ್ಚಿಸಿತು.

ರಕ್ಷಿತ್‌ ಶೆಟ್ಟಿ ಪಡ್ರೆಯವರಿಂದ ಯಕ್ಷಾಭ್ಯಾಸ ಮಾಡುತ್ತಿರುವ ತಕಧಿಮಿ ತಂಡದ ವಿದ್ಯಾರ್ಥಿಗಳು ಪ್ರದರ್ಶಿಸಿದ ಲೀಲಾಮಾನುಷ ವಿಗ್ರಹ (ಕಂಸ ವಧೆ ಮತ್ತು ನರಕಾಸುರ ವಧೆ) ಪ್ರಸಂಗ ಕಾಲಮಿತಿಯಲ್ಲಿ ಸುಂದರವಾಗಿ ಪ್ರಸ್ತುತಗೊಂಡಿತು. ಕಂಸನ ಸೆರೆಯಲ್ಲಿರುವ ವಸುದೇವ ದೇವಕಿಯರು ಬಿಡುಗಡೆಗಾಗಿ ಕೃಷ್ಣನಿಗೆ ಮೊರೆಯಿಡುವ ದೃಶ್ಯದೊಂದಿಗೆ ಆರಂಭಗೊಂಡ ಈ ಪ್ರದರ್ಶನದಲ್ಲಿ ಕೃಷ್ಣ, ವಿಜಯರ ನಡುವಿನ ನವಿರು ಹಾಸ್ಯದ ಸಂಭಾಷಣೆ, ಅಭಿನಯ ಸೊಗಸಾಗಿತ್ತು. ಶಕಟ, ಧೇನುಕ, ಹಾಗೂ ಇತರ ರಕ್ಕಸ ಬಲಗಳ ವೇಷಭೂಷಣ, ಅಬ್ಬರದ ಪ್ರವೇಶ, ದಿಗಿಣ ಹಾಗೂ ಉತ್ತಮ ಕುಣಿತ ಕಲಾಪ್ರಿಯರಿಗೆ ಮುದ ನೀಡಿತು. ನಿದ್ರೆಯಲ್ಲಿ ಕೆಟ್ಟ ಕನಸುಗಳನ್ನು ಕಂಡು ಭಯಭೀತನಾಗಿ ಬೆಚ್ಚಿ ಬೀಳುವ ಕಂಸನ ಪಾತ್ರಧಾರಿಯ ಅಭಿನಯ ಮನಮೋಹಕವಾಗಿತ್ತು. ವಸುದೇವ – ದೇವಕಿ, ಬಲರಾಮ, ಚಾನೂರ – ಮುಷ್ಟಿಕ ಮಲ್ಲರ ಹಾಗೂ ಇತರ ಪೋಷಕ ಪಾತ್ರಗಳ ನಿರ್ವಹಣೆಯೂ ತೃಪ್ತಿಕರವಾಗಿತ್ತು. ನರಕಾಸುರ ವಧೆಯಲ್ಲಿ ನರಕಾಸುರ ಪಾತ್ರಧಾರಿಯ ಪಾತ್ರ ಪೋಷಣೆ ಅಚ್ಚುಕಟ್ಟಾಗಿತ್ತು. ಕೃಷ್ಣ ಸತ್ಯಭಾಮೆಯರ ನಾಟ್ಯ ವೈವಿಧ್ಯ, ಸೊಗಸಾದ ಭಾವಾಭಿನಯ, ಮಾತಿನ ಸೊಬಗು ಕಲಾರಸಿಕರ ಮನಗೆದ್ದಿತು. ಇನ್ನು ದೇವೇಂದ್ರ ಹಾಗೂ ನರಕಾಸುರನ ಸಹಚರನ ವೇಷಧಾರಿಗಳು ಸಿಕ್ಕಿದ ಚಿಕ್ಕ ಅವಕಾಶದಲ್ಲಿ ಚೊಕ್ಕವಾದ ನಿರ್ವಹಣೆ ನೀಡಿದರು. ಸಮರ್ಥ ಚೆಂಡೆ-ಮದ್ದಳೆ ವಾದಕರ ಸಾಂಗತ್ಯದೊಂದಿಗೆ ಸತೀಶ್‌ ಶೆಟ್ಟಿ ಬೊಂದೇಲ್‌ ತಮ್ಮ ಕಂಚಿನ ಕಂಠದ ಸುಶ್ರಾವ್ಯವಾದ ಭಾಗವತಿಕೆಯಿಂದ ಪ್ರದರ್ಶನದ ಒಟ್ಟಂದವನ್ನು ಹೆಚ್ಚಿಸಿದರು.

ನರಹರಿ ರಾವ್‌ ಕೈಕಂಬ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಜಯತಿ ಎಂದರೆ "ಸರ್ವದಾ ಜಯಶೀಲವಾಗುತ್ತ ಇರುವ'ಎಂಬರ್ಥ ಬಿಂಬಿಸುವ ಇದು ಈ ಮಣ್ಣಿನ ನಾಟ್ಯಪ್ರಕಾರಗಳ "ಜಯತಿ'ಯಾಗಿ ನಾಟ್ಯ ಜಯಂತೀಯ ಸಂಭ್ರಮ ಆಚರಣೆಯಾಯಿತು . ಭರತಮುನಿ...

  • ಇತ್ತೀಚೆಗೆ ಬೆಂಗಳೂರಿನಲ್ಲಿ ಯಕ್ಷಸಿಂಚನ ತಂಡದವರಿಂದ ಉಪನ್ಯಾಸಕ ಶಿವಕುಮಾರ ಬಿ.ಎ. ಅಳಗೋಡು ರಚಿಸಿದ ದೇವಸೇನಾ ಪರಿಣಯ(ಸ್ಕಂದ ವಿಜಯ) ಪ್ರಸಂಗದ ಪ್ರಥಮ ರಂಗಪ್ರದರ್ಶನ...

  • ಸಮಾಜ ಮಂದಿರ ಸಭಾ ಮೂಡಬಿದಿರೆ ಇದರ 74ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಅಂಗವಾಗಿ ಜರುಗಿದ ಪಾರ್ತಿಸುಬ್ಬ ವಿರಚಿತ ವಾಲಿ ಮೋಕ್ಷ ಆಖ್ಯಾನವು ಉತ್ತಮ...

  • ಕೆಲವೊಮ್ಮೆ ಅನ್ನಿಸುವುದುಂಟು, ಗತಿಸಿದ ಬಳಿಕವೂ ಲೋಕ ಅಂಥವರ ಕುರಿತು ಏನೆನ್ನುತ್ತದೆ ಎಂದು ಅರಿತುಕೊಳ್ಳುವ ಸಾಧ್ಯತೆ ಇರುತ್ತಿದ್ದರೆ ಹೇಗೆ ಎಂದು. ಹಾಗೆ ಅರಿತ...

  • ಇಬ್ಬರು ಪದವಿ ಪೂರ್ವ ವಿದ್ಯಾಲಯದ ಅಧ್ಯಾಪಕರು. ಒಬ್ಬರು ಪ್ರೌಢಶಾಲೆಯ ಶಿಕ್ಷಕರು, ಓರ್ವ ನಿವೃತ್ತ ಪ್ರಾಧ್ಯಾಪಕರು. ಇವರದೇ ಮುಮ್ಮೇಳದಲ್ಲಿ ನಡೆದ ಮಧುಕೈಟಭ ವಧೆ...

ಹೊಸ ಸೇರ್ಪಡೆ

  • ಬೆಂಗಳೂರು: ಹಿಂಗಾರು ಮಾರುತಗಳ ಭರ್ಜರಿ ಪ್ರವೇಶ ದಿಂದ ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಮಳೆ ಅಬ್ಬರಿ ಸುತ್ತಿದೆ. ಇನ್ನೂ ಮೂರ್‍ನಾಲ್ಕು ದಿನಗಳು ಇದೇ ವಾತಾವರಣ...

  • ಏಷಿಯಾದ ಮೊದಲ "ಬಿಪಿಎಲ್‌'ಗೆ ಭಾನುವಾರ ಪ್ರಾಯೋಗಿಕ ಚಾಲನೆ ಸಿಕ್ಕಿದೆ. ಈ ಒಂದು ಪಥ ಯಶಸ್ವಿಯಾದರೆ, ನಗರ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಿಗೆ ಮುನ್ನುಡಿ...

  • ಬೆಂಗಳೂರು: ಅಲಯನ್ಸ್‌ ವಿವಿಯ ವಿಶ್ರಾಂತ ಕುಲಪತಿ ಹಾಗೂ ರಾಜಕಾರಣಿ ಡಾ.ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಎರಡನೇ ಪ್ರಮುಖ ಆರೋಪಿ ಹಾಗೂ ಸುಪಾರಿ ಹಂತಕನಿಗೆ ಉತ್ತರ...

  • ವೀರ ಸಾವರ್ಕರ್‌ಗೆ "ಭಾರತ ರತ್ನ' ನೀಡುವ ಮಹಾರಾಷ್ಟ್ರ ಬಿಜೆಪಿ ಪ್ರಣಾಳಿಕೆಯ ಅಂಶದ ಬಗ್ಗೆ ರಾಜಕೀಯ ನಾಯಕರ ವಾಕ್ಸಮರ ಭಾನುವಾರವೂ ಮುಂದುವರಿದಿದೆ. ಇದೇ ವಿಚಾರವಾಗಿ...

  • ಬೆಂಗಳೂರು: ಅನಿಷ್ಠ ಹಾಗೂ ನಿಷೇಧಿತ ದೇವದಾಸಿ ಪದ್ಧತಿಯಿಂದ ಮುಕ್ತಿ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬಂದು ಗೌರವ ಹಾಗೂ ಘನತೆಯ ಬದುಕು ಕಟ್ಟಿಕೊಳ್ಳುತ್ತಿರುವ...