ಸುಂದರ ಕಲಾಪ್ರಸ್ತುತಿ ನಹುಷೇಂದ್ರ

Team Udayavani, Jul 19, 2019, 5:00 AM IST

ಯಕ್ಷಗಾನ ಪ್ರದರ್ಶನ ಕಲಾವಿದ ಮತ್ತು ಸಹೃದಯ ಪ್ರೇಕ್ಷಕನ ಜೊತೆಗಿನ ಭಾವ ಮತ್ತು ಬೌದ್ಧಿಕ ಮನೋವ್ಯಾಪಾರಗಳ ಕಲಾ ಸಂವಾದವಾಗಬೇಕು ಎಂಬುದಕ್ಕೆ ಉಡುಪಿ ಯಕ್ಷಗಾನ ಕಲಾರಂಗವು ಜು.14ರಂದು ಆಯೋಜಿಸಿದ ಬಡಗುತಿಟ್ಟು ಯಕ್ಷಗಾನ ನಹುಷೇಂದ್ರ ಸಾಕ್ಷಿಯಾಯಿತು. ಪದ್ಮಪುರಾಣ ಮತ್ತು ದೇವುಡು ಅವರ ಮಹಾಕ್ಷತ್ರಿಯ ಕಾದಂಬರಿಯನ್ನಾಧರಿಸಿ ಸಿದ್ಧವಾದ ಯಕ್ಷಪಠ್ಯದ ಪದ್ಯಗಳನ್ನು ಸುಂದರವಾಗಿ ಹೆಣೆದವರು ಶಿವಮೊಗ್ಗದ ಗಣಪತಿ ಐತುಮನೆಯವರು. ಹೊಸದಾಗಿ ಸಿದ್ಧಪಡಿಸಿದ ಪ್ರಸಂಗವಾದರೂ, ಕಲಾವಿದರೆಲ್ಲರ ಸಾಂ ಕ ಪ್ರಯತ್ನದಿಂದ ವೆಂಕಟೇಶ ಅವರ ಸಂಯೋಜನೆಯಲ್ಲಿ ನಹುಷೇಂದ್ರ ಯಶಸ್ವಿಯಾಯಿತು.

ಪ್ರತಿಷ್ಠಾನ ನಗರದ ಅಧಿಪತಿ ಚಂದ್ರವಂಶದ ನಹುಷ ಚಕ್ರವರ್ತಿ ಬೆಸ್ತನೊಬ್ಬನಿಗೆ ನದಿಯಲ್ಲಿ ಸಿಕ್ಕ ಚ್ಯವನನೆಂಬ ಮಹಾತ್ಮನನ್ನು ತನ್ನಲ್ಲಿದ್ದ ಗೋವುಗಳ ವಿನಿಮಯದಿಂದ ಕೊಂಡುಕೊಂಡವನು. ವಿರಜೆಯೆಂಬ ಪತ್ನಿಯಿದ್ದರೂ, ತನಗಾಗಿಯೆ ಭುವಿಯಲ್ಲಿ ಹುಟ್ಟಿಬಂದ ಶಿವೆಯ ಮಾನಸಪುತ್ರಿಯೆನಿಸಿದ ಅಶೋಕಸುಂದರಿಯನ್ನು ಪಾತಾಳದ ರಕ್ಕಸ ಹುಂಡಾಸುರನ ಸೆರೆಯಿಂದ ಬಿಡಿಸಿ, ತನ್ನವಳನ್ನಾಗಿಸಿಕೊಳ್ಳುತ್ತಾನೆ. ಅತ್ತ ದೇವಲೋಕದಲ್ಲಿ ವಿಲಾಸಿನಿಯರ ನೃತ್ಯವೈಭವದಲ್ಲಿ ಮುಳುಗಿದ್ದ ದೇವೇಂದ್ರನು ತನ್ನನ್ನು ಅವಗಣಿಸಿದ ಎಂಬ ಕಾರಣಕ್ಕೆ ಕುಪಿತರಾದ ಗುರು ಬ್ರಹಸ್ಪತಿಗಳು ತಮ್ಮ ಗುರುಪೀಠವನ್ನು ಬಿಟ್ಟು ತೆರಳಿದಾಗ, ಬರಿದಾದ ಪೀಠಕ್ಕೆ ಮುಂದಿನ ಪೀಠಾಧಿಪತಿಯಾಗಿ ರಾಕ್ಷಸಗುರು ವಿಶ್ವರೂಪನನ್ನು ಓಲೈಸಿ ಕರೆತರಲಾಗುವುದು. ಅಸುರ ಪಕ್ಷಪಾತಿಯಾದ ಗುರು ವಿಶ್ವರೂಪನನ್ನು ದೇವೇಂದ್ರನು ಕೊಂದು ಗುರು ಹತ್ಯೆಯ ಪಾಪಕ್ಕೆ ಗುರಿಯಾಗುತ್ತಾನೆ. ಮುಂದೊಂದು ದಿನ ದೇವೇಂದ್ರನು ವೃತ್ರಾಸುರನನ್ನು ಕೊಂದದ್ದರಿಂದ ಮಿತ್ರಹತ್ಯಾ ಪಾಪಕ್ಕೆ ತುತ್ತಾಗುತ್ತಾನೆ. ಗುರು-ಬ್ರಹ್ಮ-ಮಿತ್ರ ಹತ್ಯಾ ದೋಷ ಪರಿಹಾರಕ್ಕಾಗಿ ದೇವೇಂದ್ರನು ಇಂದ್ರ ಪದವಿಯನ್ನು ತ್ಯಜಿಸಿದ್ದರಿಂದ ಬರಿದಾದ ದೇವಲೋಕದ ಅಮರಪದವಿಗೆ ಭೂಲೋಕದ ನಹುಷನನ್ನು ಬರಮಾಡಿಕೊಳ್ಳಲಾಗುತ್ತದೆ.

ನಹುಷನು ಮೊದಲಲ್ಲಿ ಪರಮ ಸಾತ್ವಿಕನಾಗಿಯೂ, ಧಾರ್ಮಿಕನಾಗಿಯೂ ಇಂದ್ರಪದವಿಯಲ್ಲಿ ಮುನ್ನಡೆದರೂ, ಕೊನೆಯಲ್ಲಿ ಪುರಂದರನ ಮಡದಿ ಶಚಿಯನ್ನು ಬಯಸಿ ಅಧಃಪತನ ಹೊಂದುವನು. ಸಪ್ತ ಋಷಿಗಳನ್ನು ತುತ್ಛವಾಗಿ ಕಂಡು, ಅಗಸ್ತ್ಯರ ಶಾಪಕ್ಕೆ ತುತ್ತಾಗಿ ಭುವಿಯಲ್ಲಿ ಅಜಗರನಾಗಿ ಬೀಳುತ್ತಾನೆ. ಮುಂದೆ ಚಂದ್ರವಂಶದಲ್ಲಿ ಹುಟ್ಟಿಬರಲಿರುವ ಪರಮ ಧಾರ್ಮಿಕನೊಬ್ಬನೊಂದಿಗೆ ಧರ್ಮ ಜಿಜ್ಞಾಸೆಯ ಮಂಥನಕ್ಕೆ ತೊಡಗಿದಾಗ ಶಾಪ ಪರಿಹಾರವಾಗುವುದೆಂಬ ಅಗಸ್ತ್ಯರ ಮಾತಿನಂತೆ ಅಜಗರನು ನಿರೀಕ್ಷೆಯಲ್ಲಿರುತ್ತಾನೆ. ಮುಂದೆ ದ್ವಾಪರದಲ್ಲಿ ತಾನು ನುಂಗಲನುವಾದ ಭೀಮನನ್ನರಸಿ ಬಂದ ಧರ್ಮಜನೊಂದಿಗೆ ಧರ್ಮಚಿಂತನೆ ನಡೆಸಿ ನಹುಷನು ಶಾಪವಿಮುಕ್ತನಾಗಿ ಮೋಕ್ಷ ಪಡೆಯುವ ಸುಂದರ ಕಥಾವಸ್ತು ಇಲ್ಲಿಯದು.

ಆರಂಭದ ನಹುಷನ ಪಾತ್ರದಲ್ಲಿ ವಿದ್ಯಾಧರ ಜಲವಳ್ಳಿ ಹಿತಮಿತ ಕುಣಿತ, ಮಾತು, ನಿಲುವು, ಗಾಂಭಿರ್ಯಗಳಿಂದ ಪ್ರಸಂಗಕ್ಕೆ ಶುಭ ನಾಂದಿ ಹಾಡಿದರು. ಬ್ರಾಹ್ಮಣ ಮತ್ತು ವಣಿಕರುಗಳ ನ್ಯಾಯ ವಿಮರ್ಶೆಯ ಸನ್ನಿವೇಷ ತುಸು ನೀರಸವೆನಿಸಿದರೂ ಕಾರ್ತಿಕ್‌ ಚಿಟ್ಟಾಣಿಯವರ ಕೆಂಪು ಮುಂಡಾಸಿನ ಹುಂಡಾಸುರನ ಮಿಂಚಿನ ಪ್ರವೇಶವು ರಂಗಕ್ಕೆ ಹೊಸ ಕಾವು ಕೊಟ್ಟಿತು. ಬಣ್ಣಗಾರ ಭುವಿಗೆ ಬರೆದ ಚಿತ್ರ ಕಾವ್ಯವು…ಎಂಬ ಶೃಂಗಾರ ರಸದ ಭೂವನಿತೆಯ ವರ್ಣನೆಯ ಕುಣಿತಕ್ಕೆ ನಲಿದ ಅಶೋಕಸುಂದರಿಯ ಪಾತ್ರದಲ್ಲಿ ನೀಲ್ಕೊಡು ಶಂಕರ ಹೆಗಡೆ ಮನಸೊರೆಗೊಂಡರು. ಕಾಸರಕೋಡು ಶ್ರೀಧರ ಅವರು ಬೆಸ್ತ ಮತ್ತು ರಾಕ್ಷಸ ವೃದ್ಧೆಯಾಗಿ ಹಾಸ್ಯಪಾತ್ರಕ್ಕೆ ನ್ಯಾಯ ಒದಗಿಸಿದರು.

ಥಂಡಿಮನೆ ಶ್ರೀಪಾದ ಭಟ್ಟರ ದೇವೇಂದ್ರನ ಪಾತ್ರಪೋಷಣೆ ನವಿರಾಗಿತ್ತು. ಅಶೋಕ ಭಟ್‌ ಸಿದ್ಧಾಪುರ ಅವರ ಕಾಲಪುರುಷ ಆಳ್ತನದಲ್ಲಿ ಸಣ್ಣದೆನಿಸಿದರೂ, ಪಾತ್ರ ಚಿತ್ರಣದಲ್ಲಿ ಹಿರಿದಾಗಿಯೇ ಕಾಣಿಸಿತು. ಹಂಸಕ್ಷೀರ ನ್ಯಾಯೇನ ವಾಸುದೇವ ಸಾಮಗರ ವಿಶ್ವರೂಪನ ಪಾತ್ರವನ್ನು ಸ್ವೀಕರಿಸುವ ಸಹೃದಯರಿಗೆ ಧಾರಾಳ ಬುದ್ಧಿಗಮ್ಯವಾದ ವಿಚಾರಧಾರೆಗಳಿದ್ದವು. ದೇವ -ರಾಕ್ಷಸ ಗುರುಗಳ ನಾಲಗೆಯಲ್ಲಿ ಆಸ್ಪತ್ರೆ, ನೀರಾವರಿ ಸಚಿವ, ಉಪಮುಖ್ಯಮಂತ್ರಿ ಎಂಬಿತ್ಯಾದಿ ಲಘುದಾಟಿಯ ಕೆಲವೇ ಬೆರಳೆಣಿಕೆಯ ಶಬ್ದಗಳು ಬಂದಿರುವುದು ಪುಣ್ಯ. ರಾಕ್ಷಸ ದೊರೆ ವಿರೂಪಾಕ್ಷ ಮತ್ತು ವೃತ್ರಾಸುರನ ಪಾತ್ರದಲ್ಲಿ ನಾಗರಾಜ ಪಂಚಲಿಂಗ ಮತ್ತು ಆಜ್ರಿ ಗೋಪಾಲ ಗಾಣಿಗ ಅವರ ನಿರ್ವಹಣೆ ಪಾತ್ರೋಚಿತವಾಗಿತ್ತು.

ಸ್ವರ್ಗದ ಪೀಠವನ್ನಲಂಕರಿಸುವ ನಹುಷನಾಗಿ ಬಳ್ಕೂರು ಕೃಷ್ಣಯಾಜಿ ಸಮರ್ಥವಾಗಿ ನಿರ್ವಹಿಸಿದರು. ಯುವ ಪ್ರತಿಭೆ ಸುಧೀರ್‌ ಉಪ್ಪುರ್‌ ಅವರು ದೇವಲೋಕದ ಅಪ್ಸರಾಂಗನೆಯಾಗಿಯೂ, ನಹುಷನ ರಾಣಿ ವಿರಜೆಯಾಗಿಯೂ ಪಾತ್ರನಿರ್ವಹಿಸಿ, ವಿಭಿನ್ನ ಪಾತ್ರಗಳೆರಡರ ಭಾವ ವ್ಯತ್ಯಾಸವನ್ನು ತೆರೆದಿಟ್ಟರು. ಶಚಿಯ ಪಾತ್ರದಲ್ಲಿ ಕಾಣಿಸಿಕೊಂಡ ಹವ್ಯಾಸಿ ಕಲಾವಿದ ಪ್ರದೀಪ ಸಾಮಗರು ಮನೆತನದ ಬಳುವಳಿಯಾಗಿ ಬಂದ ವಾಕ್‌ ಶ್ರೀಮಂತಿಕೆಯನ್ನೂ, ಸ್ವಾರ್ಜಿತವಾದ ನಾಟ್ಯ ಶ್ರೀಮಂತಿಕೆಯನ್ನೂ ಮೇಳೈಸಿಕೊಂಡು ಮನಮುಟ್ಟಿದರು.

ಅಜಗರನ ಪಾತ್ರಾಭಿವ್ಯಕ್ತಿಗೆ ಸಮಯದ ಮಿತಿ ತೊಡಕಾದರೂ, ಸಿಕ್ಕ ಅವಕಾಶದಲ್ಲಿಯೆ ರಂಗ ಕಟ್ಟಿಕೊಟ್ಟ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಆಹಾರ್ಯ, ರಂಗಪ್ರಜ್ಞೆ, ಸಹಪಾತ್ರವನ್ನು ಮುನ್ನೆಡೆಸುವ ರೀತಿ ಮೆಚ್ಚುವಂತಹದು. ಮೂರೂರು ಸುಬ್ರಹ್ಮಣ್ಯ ಹೆಗಡೆ ಧರ್ಮರಾಜನಾಗಿ ಧರ್ಮಸೂಕ್ಷ್ಮಗಳನ್ನು ವಿವರಿಸುವಲ್ಲಿ ಸಫ‌ಲರಾದರು. ತೊಂಬಟ್ಟು ವಿಶ್ವನಾಥ, ಮೂರೂರು ನಾಗೇಂದ್ರ, ಚಂದ್ರಕುಮಾರ್‌ ನೀರ್ಜಡ್ಡು, ಆನಂದ ಭಟ್‌ ಕೆಕ್ಕಾರು, ಪ್ರಣವ್‌ ಸಿದ್ಧಾಪುರ ಇವರೆಲ್ಲರ ವಿವಿಧ ಪಾತ್ರಗಳು ಪ್ರಸಂಗದ ಯಶಸ್ಸಿಗೆ ಪೂರಕವಾಗಿದ್ದವು.

ಭಾಗವತರುಗಳಾದ ರಾಘವೇಂದ್ರ ಆಚಾರ್‌ ಜನ್ಸಾಲೆ, ರಾಮಕೃಷ್ಣ ಹೆಗಡೆ,ಹಿಲ್ಲೂರು, ಮದ್ದಲೆ ವಾದಕರಾದ ಸುನಿಲ್‌ ಭಂಡಾರಿ, ಎನ್‌.ಜಿ. ಹೆಗಡೆ, ಚಂಡೆವಾದಕರಾದ ಶ್ರೀನಿವಾಸ ಪ್ರಭು ಮತ್ತು ಸುಜನ್‌ ಹಾಲಾಡಿ ಇವರ ಎಲ್ಲಿಯೂ ಅತಿಯೆನಿಸದ ಅನುಪಮವಾದ ಹಿಮ್ಮೇಳ ಕರ್ಣಾನಂದಕರವಾಗಿತ್ತು.ಬಡಗುತಿಟ್ಟಿನ ಅನನ್ಯವೆನಿಸುವ ತೆರೆ ಒಡ್ಡೋಲಗ, ಯುದ್ಧ ಕ್ರಮಗಳನ್ನು ಸಾಂದರ್ಭಿಕವಾಗಿ ಬಳಸಬಹುದಿತ್ತು. ವೃತ್ರಾಸುರ ಅಥವಾ ವಿರೂಪಾಕ್ಷ ಯಾವೂದಾದರೂ ಒಂದು ರಾಕ್ಷಸ ಪಾತ್ರವು ಪರಂಪರೆಯ ಬಣ್ಣದ ವೇಷದಲ್ಲಿ ಕಾಣಿಸಿಕೊಂಡಿದ್ದರೆ ಪ್ರದರ್ಶನ ಇನ್ನಷ್ಟು ಪೂರ್ಣತೆಯನ್ನು ಕಾಣುತ್ತಿತ್ತು.

ಸುಜಯೀಂದ್ರ ಹಂದೆ ಎಚ್‌. ಕೋಟ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಜಯತಿ ಎಂದರೆ "ಸರ್ವದಾ ಜಯಶೀಲವಾಗುತ್ತ ಇರುವ'ಎಂಬರ್ಥ ಬಿಂಬಿಸುವ ಇದು ಈ ಮಣ್ಣಿನ ನಾಟ್ಯಪ್ರಕಾರಗಳ "ಜಯತಿ'ಯಾಗಿ ನಾಟ್ಯ ಜಯಂತೀಯ ಸಂಭ್ರಮ ಆಚರಣೆಯಾಯಿತು . ಭರತಮುನಿ...

  • ಇತ್ತೀಚೆಗೆ ಬೆಂಗಳೂರಿನಲ್ಲಿ ಯಕ್ಷಸಿಂಚನ ತಂಡದವರಿಂದ ಉಪನ್ಯಾಸಕ ಶಿವಕುಮಾರ ಬಿ.ಎ. ಅಳಗೋಡು ರಚಿಸಿದ ದೇವಸೇನಾ ಪರಿಣಯ(ಸ್ಕಂದ ವಿಜಯ) ಪ್ರಸಂಗದ ಪ್ರಥಮ ರಂಗಪ್ರದರ್ಶನ...

  • ಸಮಾಜ ಮಂದಿರ ಸಭಾ ಮೂಡಬಿದಿರೆ ಇದರ 74ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಅಂಗವಾಗಿ ಜರುಗಿದ ಪಾರ್ತಿಸುಬ್ಬ ವಿರಚಿತ ವಾಲಿ ಮೋಕ್ಷ ಆಖ್ಯಾನವು ಉತ್ತಮ...

  • ಕೆಲವೊಮ್ಮೆ ಅನ್ನಿಸುವುದುಂಟು, ಗತಿಸಿದ ಬಳಿಕವೂ ಲೋಕ ಅಂಥವರ ಕುರಿತು ಏನೆನ್ನುತ್ತದೆ ಎಂದು ಅರಿತುಕೊಳ್ಳುವ ಸಾಧ್ಯತೆ ಇರುತ್ತಿದ್ದರೆ ಹೇಗೆ ಎಂದು. ಹಾಗೆ ಅರಿತ...

  • ಇಬ್ಬರು ಪದವಿ ಪೂರ್ವ ವಿದ್ಯಾಲಯದ ಅಧ್ಯಾಪಕರು. ಒಬ್ಬರು ಪ್ರೌಢಶಾಲೆಯ ಶಿಕ್ಷಕರು, ಓರ್ವ ನಿವೃತ್ತ ಪ್ರಾಧ್ಯಾಪಕರು. ಇವರದೇ ಮುಮ್ಮೇಳದಲ್ಲಿ ನಡೆದ ಮಧುಕೈಟಭ ವಧೆ...

ಹೊಸ ಸೇರ್ಪಡೆ