ಧಾರೇಶ್ವರ ನಿರ್ದೇಶನದಲ್ಲಿ ಮನಗೆದ್ದ ಎಂಟು ಅಪರೂಪದ ಪ್ರಸಂಗಗಳು

Team Udayavani, Sep 6, 2019, 5:30 AM IST

ಉಡುಪಿಯ ರಾಜಾಂಗಣದಲ್ಲಿ ಧಾರೇಶ್ವರ ಯಕ್ಷ ಬಳಗ ಪ್ರಸ್ತುತ ಪಡಿಸಿದ ಯಕ್ಷ ಅಷ್ಟಾಹ ಪರಂಪರೆಯಲ್ಲಿ ಸುಬ್ರಹ್ಮಣ್ಯ ಧಾರೇಶ್ವರರು ಆಯ್ದುಕೊಂಡ ಪ್ರಸಂಗಗಳಲ್ಲಿ ಎಂಟು ದಿನದಲ್ಲಿ ಸುಮಾರು ಐದು ಹೊಸ ಪೌರಾಣಿಕ ಪ್ರಸಂಗ ಅಥವಾ ಬಡಗುತಿಟ್ಟಿನಲ್ಲಿ ಹೆಚ್ಚು ಬಳಕೆಯಲ್ಲಿ ಇರದ, ಪ್ರೇಕ್ಷಕನಿಗೆ ಕಥೆ ಗೊತ್ತಿರದ ಪ್ರಸಂಗಗಳಿದ್ದವು. ಶ್ರೀ ಕೃಷ್ಣ ಪಾರಿಜಾತ,ಭಸ್ಮಾಸುರ ಮೋಹಿನಿ,ಗುರು ವಿಶ್ವರೂಪ, ಸುದ್ಯುಮ್ನ, ಕಬಂಧ ಮೋಕ್ಷ,ಖಾಂಡವ ದಹನ,ಗರುಡೋದ್ಭವ, ರಾವಣ ವಧೆ ಪ್ರಸಂಗಗಳನ್ನು ಪ್ರದರ್ಶಿಸಲಾಯಿತು.

ಭಸ್ಮಾಸುರ ಮೋಹಿನಿಯಲ್ಲಿ ಈಶ್ವರನಾಗಿ ತೀರ್ಥಳ್ಳಿ ಗೋಪಾಲ ಆಚಾರಿಯವರ ತಾಂಡವ ನಾಟ್ಯ ಆಕರ್ಷಣೀಯವಾಗಿತ್ತು. ಪಾರ್ವತಿಯಾಗಿ ಮಾರುತಿ ಬೈಲ್‌ಗ‌ದ್ದೆ ಪಾತ್ರಕ್ಕೆ ಜೀವತುಂಬಿದರು. ಭಸ್ಮಾಸುರನಾಗಿ ಅಪ್ಪನ ನೆನಪು ಬರುವಂತೆ ಮಾಡಿದ ಚಿಟ್ಟಾಣಿ ನರಸಿಂಹ ಹೆಗಡೆಯವರು, ಮೋಹಿನಿಯನ್ನು ವರ್ಣಿಸುವಾಗ ಸಭ್ಯ ಸಭಾಸದರೆದುರು ಅತಿರೇಕವಾಗುವುದನ್ನು ಗಮನಿಸಿದ ಧಾರೇಶ್ವರರು ಮುಂದಿನ ಪದ್ಯ ಎತ್ತುಗಡೆ ಮಾಡಿದ‌ರು.

ಗುರುವಿಶ್ವರೂಪ ಪ್ರಸಂಗ ಪ್ರೇಕ್ಷಕನಿಗೂ, ಕಲಾವಿದನಿಗೂ ಹೊಸತು. ಅಲ್ಲದೇ ಇಂತಹ ಪ್ರಸಂಗದಲ್ಲಿ ಎಲ್ಲಾ ಸನ್ನಿವೇಶಗಳನ್ನು ಕಾಲಮಿತಿಯೊಳಗೆ ತರಲು ಅಸಾಧ್ಯವೆಂದು ಭಾವಿಸಿದ ಧಾರೇಶ್ವರರು ಪ್ರೇಕ್ಷಕರಿಗೆ ಸ್ಪಷ್ಟವಾಗಿ ತಿಳಿಯುವಂತೆ ಅದಕ್ಕಾಗಿ ಕತೆಯ ಸಂಕ್ಷಿಪ್ತ ರೂಪವನ್ನೂ, ಸಾರಾಂಶದ ಕರಪತ್ರವನ್ನು ಮುದ್ರಿಸಿ ಕೊಟ್ಟಿರುವುದು ಪ್ರಥಮ ಪ್ರಯೋಗವೆನಿಸಿದೆ.

ಗುರು ವಿಶ್ವರೂಪನಾಗಿ ತೀರ್ಥಳ್ಳಿ ಗೋಪಾಲ ಆಚಾರಿಯವರು ಪಾತ್ರವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದರು. ವಿರೂಪಾಕ್ಷನಾಗಿ ನಿಲ್ಕೋಡು ಶಂಕರ ಹೆಗಡೆಯವರು, ಬ್ರಹಸ್ಪತಿಯಾಗಿ ಅಶೋಕ ಭಟ್‌ ಸಿದ್ದಾಪುರ, ದೇವೇಂದ್ರನಾಗಿ ಲೋಕೇಶ್‌ ಕುಮಾರ್‌, ತೇಜೋಮೂರ್ತಿ ಮತ್ತು ಮಾಯಾದೇವತೆಯಾಗಿ ಮಾರುತಿ ಬೈಲ್ಗದ್ದೆ, ಬ್ರಹ್ಮನಾಗಿ ನಾಗೇಶ್‌ ಕುಳಿಮನೆ, ಅಗ್ನಿ ಮತ್ತು ದಧೀಚಿಯಾಗಿ ದಿನೇಶ್‌ ಕನ್ನಾರು, ದಾನವದೂತನಾಗಿ ಶ್ರೀಧರ ಭಟ್‌ ಕಾಸರ್‌ಕೋಡ್‌ ಉತ್ತಮವಾಗಿ ನಿರ್ವಹಿಸಿದರು.

ಸುದ್ಯುಮ್ನದಲ್ಲಿ ಬುಧನಾಗಿ ತೀರ್ಥಳ್ಳಿ, ಇಳೆಯಾಗಿ ನಿಲ್ಕೋಡು, ಸುದುಮ್ನನಾಗಿ ಲೋಕೇಶ್‌, ಪುರೂರವನಾಗಿ ಮಾರುತಿ ಬೈಲ್ಗದ್ದೆ, ವಸಿಷ್ಠನಾಗಿ ಅಶೋಕ ಭಟ್‌ ಸಿದ್ದಾಪುರ ಹಾಗೂ ವಿಷ್ಣು ಮತ್ತು ಈಶ್ವರನಾಗಿ ದಿನೇಶ ಕನ್ನಾರು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದರು. ಹಿಮ್ಮೇಳದಲ್ಲಿ ಧಾರೇಶ್ವರ, ಶಶಿ ಆಚಾರ್‌, ಕಾರ್ತಿಕೇಯ ಸಹಕರಿಸಿದರು.

ಕಬಂಧ ಮೋಕ್ಷದಲ್ಲಿ ವಿಶ್ವಾವಸುವಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಸ್ಥೂಲಶಿರಮುನಿಯಾಗಿ ಲೋಕೇಶ್‌ರವರು ಬಾಯಿತಪ್ಪಿನಿಂದ ಲಕ್ಷ್ಮಣ ಎನ್ನುವ ಬದಲಿಗೆ ಶ್ರೀರಾಮನ ಕತ್ತಿಯಿಂದ ಕಡಿದಾಗ ಎಂದು ತಪ್ಪೆಸಗಿದರು. ದೇವನಾರಿ ಹಾಗೂ ಲಕ್ಷ್ಮಣನಾಗಿ ಮಾರುತಿ ಬೆ„ಲ್ಗದ್ದೆ, ಹಂಸನಾಗಿ ಕಾಸರ್‌ಕೋಡ್‌, ಶ್ರೀರಾಮನಾಗಿ ಅಶೋಕ ಭಟ್‌ ಸಿದ್ದಾಪುರ, ವಿಶ್ವಾವಸು ರಾಕ್ಷಸರೂಪವಾಗಿ ದಿನೇಶ್‌ಕನ್ನಾರು, ಕಬಂಧನಾಗಿ ನಾಗೇಶ್‌ ಕುಳಿಮನೆ ಮತ್ತು ದೇವೇಂದ್ರನಾಗಿ ಶಶಾಂಕ ಚೆನ್ನಾಗಿ ನಿರ್ವಹಿಸಿದರು.

ಖಾಂಡವ ದಹನದಲ್ಲಿ ಮೂಲಕಥೆ ವ್ಯಾಸಭಾರತದಲ್ಲಿರುವಂತೆ ಇದೆಲ್ಲವೂ ಮೊದಲೇ ಸಿಕ್ಕಿರುತ್ತದೆ ಎಂದು ತೋರಿಸಲು ಧಾರೇಶ್ವರರ ನಿರ್ದೇಶನದ ಜವಾಬ್ದಾರಿಯನ್ನು ಗುರುತಿಸುತ್ತದೆ. ಶ್ರೀಕೃಷ್ಣನಾಗಿ ಅಶೋಕ ಭಟ್‌ ಸಿದ್ದಾಪುರ, ಅರ್ಜುನನಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಕಾಳಿಂದಿಯಾಗಿ ನಿಲ್ಕೋಡು, ಅಗ್ನಿಬ್ರಾಹ್ಮಣನಾಗಿ ಕಾಸರ್‌ಕೋಡ್‌, ನಾಗಿಣಿಯಾಗಿ ಮಾರುತಿ ಬೆ„ಲ್ಗದ್ದೆ, ಅಶ್ವಸೇನನಾಗಿ ನಾಗೇಶ್‌ ಕುಳಿಮನೆ, ಮಯಾಸುರನಾಗಿ ದಿನೇಶ್‌ ಕನ್ನಾರು, ದೇವೇಂದ್ರನಾಗಿ ಲೋಕೇಶ್‌ರವರು ಪ್ರಸಂಗಕ್ಕೆ ಚ್ಯುತಿಬಾರದಂತೆ ನಿರ್ವಹಿಸಿದರು.

ಗರುಡೋದ್ಭವದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆಯವರು ಗರುಡನಾಗಿ ಮನಸೆಳೆದರು. ಕದ್ರುವಾಗಿ ಮಾರುತಿಬೆ„ಲ್ಗದ್ದೆ, ವಿನುತೆಯಾಗಿ ನೀಲ್ಕೋಡು ಕಶ್ಯಪರಾಗಿ ವಿಶೇಷ ಆಹ್ವಾನಿತರಾದ ಶ್ರೀರಮಣಾಚಾರ್‌, ವಿಷ್ಣುವಾಗಿ ಇನ್ನೋರ್ವ ವಿಶೇಷ ಆಹ್ವಾನಿತರಾದ ವಾಸುದೇವ ರಂಗ ಭಟ್‌ ಕಥೆಯ ವೈಶಿಷ್ಟವನ್ನು ಎತ್ತಿ ಹಿಡಿದರು.

ರಾವಣ ವಧೆಯಲ್ಲಿ ರಾವಣ- ಮಂಡೋದರಿಯ ಸಂಭಾಷಣೆಯು ಮಂತ್ರಮುಗ್ಧರನ್ನಾಗಿಸಿತು. ತಾಳಮದ್ದಲೆಯಲ್ಲಿ ತಮ್ಮದೇ ಛಾಪನ್ನು ಮೂಡಿಸಿದ ಉಜಿರೆ ಅಶೋಕ ಭಟ್‌ರವರು ರಾಮನ ಪಾತ್ರದಲ್ಲಿ ಮಿಂಚಿದರು.

ವಿ. ರಾಘವೇಂದ್ರ ಉಡುಪ, ನೇರಳಕಟ್ಟೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ