ಕಣ್ಮನ ತುಂಬುವ ಗೋಕುಲ ನಿರ್ಗಮನ 

Team Udayavani, May 18, 2018, 6:00 AM IST

ಕೃಷ್ಣ ತನ್ನ ಸ್ನೇಹಿತರು ಗೊಲ್ಲರು, ಗೋಪ ಬಾಲ ಬಾಲೆಯರೊಡಗೂಡಿ ಹರೆಯದ ದಿನಗಳನ್ನು ಸಂಭ್ರಮದಿಂದ ಕಳೆಯುತ್ತಿರುವ ದಿನಗಳವು. ಆತನ ಮಧುರ ಕೊಳಲಿನ ಗಾನಕ್ಕೆ ಇಡೀ ಗೋಕುಲವೇ ತಲೆದೂಗುತ್ತಾ ಮೈ ಮರೆಯುತಿತ್ತು. ಅವನ ಕೊಳಲಿನ ದನಿಯೇ ಅವರಿಗೆ ಜೀವನೋತ್ಸಾಹವನ್ನು ತುಂಬುತ್ತಿತ್ತು. ಅತ್ತ ಕಡೆ ರಾಧೆ, ಕೃಷ್ಣನ ಕೊಳಲಿನ ಗಾನ ಕೇಳುತ್ತಲಿದ್ದರೂ ಕಣ್ಣೆದುರು ಕಾಣದ ಕೃಷ್ಣನಿಗಾಗಿ ಆತನ ಬರುವಿಕೆಗಾಗಿ ಕಾತರದಿಂದ ಕಾಯುತ್ತಿರುತ್ತಾಳೆ. ಅದನ್ನು ಅರಿತ ಕೃಷ್ಣ ರಾಧೆಯನ್ನು ಮತ್ತಷ್ಟು ಕಾಡುವುದು ತರವಲ್ಲವೆಂದು ತಿಳಿದು ಅವಳೆದುರು ಪ್ರತ್ಯಕ್ಷನಾಗುತ್ತಾನೆ. ಕೃಷ್ಣ ರಾಧೆಯರಿಬ್ಬರೂ ಪವಿತ್ರ ಪ್ರೀತಿಯ ಸಲಿಲದಲ್ಲಿ ಮಿಂದೆದ್ದು ಸಂಭ್ರಮಿಸುತ್ತಾರೆ. 

 ಅದೇ ಸಮಯಕ್ಕೆ ಸೋದರಮಾವನಾದ ಕಂಸನ ಊರಾದ ಮಥುರೆಯಲ್ಲಿ ನಡೆಯುವ ಬಿಲ್ಲ ಹಬ್ಬಕ್ಕೆ ಆಮಂತ್ರಣವನ್ನು ಕೊಡಲು ಅಕ್ರೂರನ ಆಗಮನವಾಗುತ್ತದೆ. ಅಣ್ಣ ಬಲರಾಮನಿಗೆ ಕೃಷ್ಣನಿಂದ ಭವಿಷ್ಯದಲ್ಲಿ ಆಗಬೇಕಾದ ಮಹತ್ತರ ಕಾರ್ಯಗಳ ಬಗೆಗೆ ಅರಿವಿದ್ದುದರಿಂದ ಕೊಳಲನ್ನು ತ್ಯಜಿಸಿ ಮಥುರೆಗೆ ತನ್ನೊಂದಿಗೆ ಬರಲು ಹೇಳುತ್ತಾನೆ. ಕೃಷ್ಣ ಒಲ್ಲದ ಮನಸ್ಸಿನಿಂದಲೇ ಸ್ನೇಹಿತರಿಗೆ ತಾನು ಬರುವ ತನಕ ಕೊಳಲು ನಿಮ್ಮ ನೆನಪಿಗಿರಲಿ ಎಂದು ಕೊಳಲನ್ನು ಅವರಿಗೊಪ್ಪಿಸಿ ತೆರಳುತ್ತಾನೆ. ಅತ್ತ ಕಡೆ ರಾಧೆ ಈ ವಿಚಾರ ತಿಳಿದು ಮತ್ತಷ್ಟು ರೋದಿಸುತ್ತಾಳೆ. ಬಳಿಕ ಕೃಷ್ಣನ ಕುರುಹಾದ ಕೊಳಲನ್ನು ಬಾರಿಸುತ್ತಾ ತನ್ನ ಇನಿಯನ ನೆನಪಲ್ಲಿ ಮೈ ಮರೆಯುತ್ತಾಳೆ. ಅಲ್ಲಿಗೆ ಒಂದು ಸುಂದರ ಭಾವುಕ ಅಧ್ಯಾಯ ಕೊನೆಗೊಳ್ಳುತ್ತದೆ.

 ಈ ಇಡೀ ಕಥೆಯಲ್ಲಿ ಸಂಭ್ರಮ, ಸಂತೋಷ, ಕುಣಿತ, ನೋವು, ನಲಿವು, ವಿರಹ ವೇದನೆ, ಕಾತರ, ತುಂಟಾಟ, ಸ್ನೇಹ, ಪ್ರೀತಿಯ ಉತ್ಕಟತೆ, ರಮ್ಯತೆ, ಭಾವ ತೀವ್ರತೆ, ನಿರ್ಗಮನದ ನೀರವತೆ, ವಿಷಾದ ಎಲ್ಲವೂ ಇದೆ. ಅದನ್ನು ಅಷ್ಟೇ ಸಮರ್ಥವಾಗಿ ಪ.ತಿ. ನರಸಿಂಹಚಾರ್‌ ವಿರಚಿತವಾದ “ಗೋಕುಲ ನಿರ್ಗಮನ’ ನೃತ್ಯ ನಾಟಕದ ಮೂಲಕ ಪ್ರೇಕ್ಷಕರ ಮನಸ್ಸಿಗೆ ತುಂಬಿಸುತ್ತಿದ್ದಾರೆ ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ನಂದ ಗೋಕುಲ ಬಳಗ. ವಿದ್ದು ಉಚ್ಚಿಲ್‌ ಈ ನೃತ್ಯರೂಪಕದ ನಿರ್ದೇಶಕ. 

 ಪ್ರಾಥಮಿಕ ಶಾಲಾ ಮಕ್ಕಳು, ಗೃಹಿಣಿಯರು ಸೇರಿದಂತೆ ವಿವಿಧ ವಯೋಮಾನದ ಕಲಾವಿದೆಯರನ್ನೊಳಗೊಂಡ ನಂದ ಗೋಕುಲ ತಂಡ ಇಡೀ ಕತೆಯನ್ನು ನೃತ್ಯ, ಹಾಡು, ಅಭಿನಯ, ಅಚ್ಚುಕಟ್ಟಾದ ರಂಗಸಜ್ಜಿಕೆ ಮತ್ತು ಆಕರ್ಷಕ ಬೆಳಕಿನ ವಿನ್ಯಾಸಗಳೊಂದಿಗೆ ಸುಂದರವಾಗಿ ಪ್ರಸ್ತುತಪಡಿಸುತ್ತಿದೆ.  ನಾನೇನಲ್ಲ, ನಾನೇ ಎಲ್ಲ, ನಾನು ನಾನಲ್ಲ ಎನ್ನುವ ಅರ್ಥ ಪೂರ್ಣ ಹಾಡಿನೊಂದಿಗೆ ಆರಂಭಗೊಳ್ಳುವ ಗೋಕುಲ ನಿರ್ಗಮನ ರಂಗ ತುಂಬಿಕೊಳ್ಳುವ ಪಾತ್ರಧಾರಿಗಳ ವೈವಿಧ್ಯತೆ, ಚುರುಕಾದ ಲವಲವಿಕೆಯ ಅಭಿನಯದಿಂದ ಕಣ್ತುಂಬಿಕೊಳ್ಳುತ್ತಾ ಸಾಗುತ್ತದೆ. ಗ್ರಾಂಥಿಕ ಭಾಷೆಯ ಬಳಕೆ ಆಪ್ತವಾಗುತ್ತದೆ. ಗೋಪ ಬಾಲರ ನಲಿದಾಟಗಳು, ಸಂಭ್ರಮ ವೇದಿಕೆಯ ವಿವಿಧ ಕೋನಗಳಿಂದ ಆಗಮಿಸುತ್ತಿದ್ದ ರೀತಿ , ಕೃಷ್ಣ ರಾಧೆಯ ಪ್ರೀತಿಯ ಸನ್ನಿವೇಶಗಳು, ನಟರೆಲ್ಲರ ಫೌಢ ಅಭಿನಯ ವೈವಿಧ್ಯಮಯವಾದ ನೃತ್ಯ ಭಂಗಿಗಳು, ದೃಶ್ಯ ಕಾವ್ಯಗಳು ನಾಟಕ ಕಳೆಗಟ್ಟುವಂತೆ ಮಾಡುತ್ತಿವೆ. ಕೊನೆಯಲ್ಲಿ ಕೃಷ್ಣ ಕೊಳಲನ್ನು ತ್ಯಜಿಸುವ ವೇಳೆಯ ಸನ್ನಿವೇಶದ ಗಂಭೀರತೆ, ರಾಧೆ- ಹೊರಟನೆ ? ನೆನೆದನೇ? ನನ್ನ ನೆನೆದನೆ?ಎಂದು ಪ್ರಲಾಪಿಸುವ ಪರಿ ಪ್ರೇಕ್ಷಕರ ಮನಮುಟ್ಟುತ್ತದೆ. 

 ಕೃಷ್ಣ ಕೊಳಲುನೂದುವ ಸನ್ನಿವೇಶಕ್ಕೆ ಹಾಡಿನ ಬದಲಾಗಿ ಕೊಳಲ ನಾದವನ್ನು ಬಳಸಿದರೆ ಈ ದೃಶ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬಹುದು. ಭಾವ ಅರ್ಥೈಸಿಕೊಳ್ಳಲು ಒಂದೆರಡು ಕಡೆ ಬೆಳಕು ಸ್ವಲ್ಪ ಹೆಚ್ಚಿಸುವ ಅಗತ್ಯವಿದೆ. ಶ್ವೇತಾ ಅರೆಹೊಳೆ, ಚಿನ್ಮಯಿ ವಿ. ಭಟ್‌, ಪ್ರಥ್ವಿ ಎಸ್‌. ರಾವ್‌, ಧನ್ಯಾ ಅಡ್ತಲೆ, ಆಶಾರಾಣಿ, ದೇವಿಕಾ, ನಿಶ್ಚಿತಾ, ಭೂಮಿಕಾ, ವಂಶಿಕಾ, ರಂಜಿತಾ, ದೀಕ್ಷಿತಾ, ಶಕುಂತಲಾ, ದೀಕ್ಷಾ, ಅದಿತಿ, ನಯನಾ, ವಿದ್ಯಾಶ್ರೀ, ದಿವ್ಯಾ, ಕಾವ್ಯಶ್ರೀ, ರೇಖಾ , ವೀಕ್ಷಾ, ವಿಮಶಾì, ವರ್ಷಾ, ಶ್ರಾವ್ಯಾ, ಕಾಮಾಕ್ಷಿ ಗೋಕುಲ ನಿರ್ಗಮನದ ಕಲಾವಿದರು.

 ನರೇಂದ್ರ ಎಸ್‌. ಗಂಗೊಳ್ಳಿ 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಜಯತಿ ಎಂದರೆ "ಸರ್ವದಾ ಜಯಶೀಲವಾಗುತ್ತ ಇರುವ'ಎಂಬರ್ಥ ಬಿಂಬಿಸುವ ಇದು ಈ ಮಣ್ಣಿನ ನಾಟ್ಯಪ್ರಕಾರಗಳ "ಜಯತಿ'ಯಾಗಿ ನಾಟ್ಯ ಜಯಂತೀಯ ಸಂಭ್ರಮ ಆಚರಣೆಯಾಯಿತು . ಭರತಮುನಿ...

  • ಇತ್ತೀಚೆಗೆ ಬೆಂಗಳೂರಿನಲ್ಲಿ ಯಕ್ಷಸಿಂಚನ ತಂಡದವರಿಂದ ಉಪನ್ಯಾಸಕ ಶಿವಕುಮಾರ ಬಿ.ಎ. ಅಳಗೋಡು ರಚಿಸಿದ ದೇವಸೇನಾ ಪರಿಣಯ(ಸ್ಕಂದ ವಿಜಯ) ಪ್ರಸಂಗದ ಪ್ರಥಮ ರಂಗಪ್ರದರ್ಶನ...

  • ಸಮಾಜ ಮಂದಿರ ಸಭಾ ಮೂಡಬಿದಿರೆ ಇದರ 74ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಅಂಗವಾಗಿ ಜರುಗಿದ ಪಾರ್ತಿಸುಬ್ಬ ವಿರಚಿತ ವಾಲಿ ಮೋಕ್ಷ ಆಖ್ಯಾನವು ಉತ್ತಮ...

  • ಕೆಲವೊಮ್ಮೆ ಅನ್ನಿಸುವುದುಂಟು, ಗತಿಸಿದ ಬಳಿಕವೂ ಲೋಕ ಅಂಥವರ ಕುರಿತು ಏನೆನ್ನುತ್ತದೆ ಎಂದು ಅರಿತುಕೊಳ್ಳುವ ಸಾಧ್ಯತೆ ಇರುತ್ತಿದ್ದರೆ ಹೇಗೆ ಎಂದು. ಹಾಗೆ ಅರಿತ...

  • ಇಬ್ಬರು ಪದವಿ ಪೂರ್ವ ವಿದ್ಯಾಲಯದ ಅಧ್ಯಾಪಕರು. ಒಬ್ಬರು ಪ್ರೌಢಶಾಲೆಯ ಶಿಕ್ಷಕರು, ಓರ್ವ ನಿವೃತ್ತ ಪ್ರಾಧ್ಯಾಪಕರು. ಇವರದೇ ಮುಮ್ಮೇಳದಲ್ಲಿ ನಡೆದ ಮಧುಕೈಟಭ ವಧೆ...

ಹೊಸ ಸೇರ್ಪಡೆ