ರಜಾಮೇಳದಲ್ಲಿ ರಂಗುರಂಗಾದ ಬ್ರಹ್ಮರಾಕ್ಷಸ, ತಂತ್ರಗಾರ್ತಿ

Team Udayavani, Jun 7, 2019, 5:50 AM IST

ಕುಂದಾಪುರ ಸಮುದಾಯವು ಮಕ್ಕಳಲ್ಲಿ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ‌ ಹಮ್ಮಿಕೊಂಡ ಹದಿಮೂರು ದಿನಗಳ “ರಂಗ ರಂಗು ರಜಾಮೇಳ’ದಲ್ಲಿ ಭಾಗವಹಿಸಿದ ಸುಮಾರು 110 ಮಂದಿ ಮಕ್ಕಳು ರಂಗ ನಿರ್ದೇಶಕ ವಾಸುದೇವ ಗಂಗೇರ ಅವರ ಮಾರ್ಗದರ್ಶನದಲ್ಲಿ ಪ್ರಸ್ತುತ ಪಡಿಸಿದ ಎರಡು ನಾಟಕಗಳು “ಬ್ರಹ್ಮರಾಕ್ಷಸ’ (ರ:ಉದಯ ಗಾಂವ್‌ಕರ್‌) ಮತ್ತು “ತಂತ್ರ ಗಾರ್ತಿ’ (ರ:ಪಾರ್ವತಿ ಜಿ.ಐತಾಳ್‌) ಲವಲವಿಕೆಯ ಅಭಿನಯದಲ್ಲಿ ಸುಂದರವಾಗಿ ಮೂಡಿಬಂದವು.

ಶಕ್ತಿಗಿಂತ ಯುಕ್ತಿ ಮೇಲು ಎಂಬ ಸಂದೇಶವಿರುವ ನಾಟಕ ಬ್ರಹ್ಮರಾಕ್ಷಸ. ಕೆಲಸ ಮಾಡಲು ಮನಸ್ಸಿಲ್ಲದ ಕ್ಷೌರಿಕನನ್ನು ಅವನ ಹೆಂಡತಿ ಸಂಪಾದನೆ ಮಾಡಿ ತನ್ನಿ ಎಂದು ದೂಡುತ್ತಾಳೆ. ಕಾಡಿನ ದಾರಿಯಲ್ಲಿ ಸಾಗುತ್ತಿರುವಾಗ ಆಕಸ್ಮಿಕವಾಗಿ ಕಾಣಸಿಗುವ ಭಯಂಕರ ಬ್ರಹ್ಮರಾಕ್ಷಸನನ್ನು ಉಪಾಯವಾಗಿ ಹೆದರಿಸಿ ತನ್ನ ಜಾಣ ಮಾತುಗಳಿಂದಲೇ ಸೋಲಿಸಿ ಅವನ ಕೈಯಲ್ಲಿದ್ದ ಒಡವೆ ಗಂಟನ್ನು ವಶಪಡಿಸಿಕೊಂಡು ಕ್ಷೌರಿಕ ತನ್ನ ಬುದ್ಧಿವಂತಿಕೆಯನ್ನು ಸಾಬೀತುಪಡಿಸುತ್ತಾನೆ. ಈ ನಾಟಕವನ್ನು ಪುಟಾಣಿಗಳು ಚುರುಕಾಗಿ ಅಭಿನಯಿಸಿ ತೋರಿಸಿದರು. ಆರಂಭದಲ್ಲಿ ಹೊತ್ತುಕಳೆಯಲೆಂದು ಯಾರಾದರೊಬ್ಬರು ಕಥೆ ಹೇಳಬೇಕು ಎಂದು ತೀರ್ಮಾನಿಸುವುದು, ಒಬ್ಬೊಬ್ಬರು ಒಂದೊಂದು ಕಥೆಯನ್ನು ಅಭಿನಯ ಮತ್ತು ಹಾಡುಗಳ ಮೂಲಕ ಸೂಚಿಸುವುದು, ಬ್ರಹ್ಮರಾಕ್ಷಸನ ಕಥೆಯಲ್ಲಿ ಯಾರೂ ಸಾಯಬಾರದು ಎಂದು ಪದೇಪದೇ ತಮ್ಮ ಸದಾಶಯವನ್ನು ವ್ಯಕ್ತಪಡಿಸುವುದು ಪುಟ್ಟ ಮಕ್ಕಳ ಮುಗ್ಧ ಮನಸ್ಸಿನ ದ್ಯೋತಕವಾಗಿ ನೈಜವಾಗಿ ಬಂದವು. ಸುಮಾರು 30 ಮಂದಿ ಮಕ್ಕಳಿಗೆ ರಂಗದ ಮೇಲೆ ಅವಕಾಶ ನೀಡಲು ಗುಂಪು ದೃಶ್ಯಗಳನ್ನು ಸೃಷ್ಟಿಸಿಕೊಂಡು ನಾಟಕದುದ್ದಕ್ಕೂ ಅಚ್ಚುಕಟ್ಟುತನವನ್ನು ಕಾಯ್ದುಕೊಂಡದ್ದು ನಿರ್ದೇಶಕರ ಜಾಣ್ಮೆ.

ತಂತ್ರಗಾರ್ತಿ ತುಸು ರಾಜಕೀಯ ಸ್ಪರ್ಷವುಳ್ಳ ಹೈಸ್ಕೂಲು ಮಕ್ಕಳು ಆಡುವಂತಹ ನಾಟಕ. ಸುಭಿಕ್ಷೆ ನೆಲೆಸಿದ್ದ ವಿಜಯಪುರದಲ್ಲಿ ಸಮರ್ಥ ಕೋತ್ವಾಲನ ಸಾವಿನ ನಂತರ ಕಾಣಿಸಿಕೊಂಡ ಕೊಲೆ-ಸುಲಿಗೆ ದರೋಡೆಗಳು ಸಮಸ್ಯೆಯನ್ನು ಸೃಷ್ಟಿಸಿವೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬಂತೆ ಅವರನ್ನು ಸರಿಪಡಿಸಲು ಸಮಸ್ಯೆಗೆ ಕಾರಣರಾದ ಭೂಪತಿ-ಅಧಿಪತಿ ಎಂಬ ಇಬ್ಬರು ದುಷ್ಟರನ್ನೇ ಕೋತ್ವಾಲರನ್ನಾಗಿ ಮಾಡುವ ಮೂಲಕ ವಿಜಯವರ್ಮ ಒಂದು ಪ್ರಯೋಗಕ್ಕೆ ಮುಂದಾಗುತ್ತಾನೆ. ಆದರೆ ಅವನ ಉದ್ದೇಶ ಈಡೇರುವುದಿಲ್ಲ. ಬದಲಾಗಿ ಅಧಿಕಾರ ಕೈಗೆ ಸಿಗುತ್ತಲೇ ಭೂಪತಿ ಮತ್ತು ಅಧಿಪತಿ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸಿ ಬಡವರನ್ನು ಶೋಷಿಸುತ್ತಾರೆ. ಈಗ ಹಳೆಯ ಕೋತ್ವಾಲನ ಹೆಂಡತಿ ಚತುರೆ ಚೆನ್ನಮ್ಮ ಕಾಣಿಸಿಕೊಳ್ಳುತ್ತಾಳೆ. ತನ್ನ ಗಂಡ ಸತ್ತು ಹೋದ ನಂತರ ರಾಜ ತನ್ನನ್ನ ಕಡೆಗಣಿಸಿ ಬಿಟ್ಟ ಬಗ್ಗೆ ಅವಳಲ್ಲಿ ಖೇದವಿದೆ. ತನಗೆ ನ್ಯಾಯ ಸಿಗಬೇಕೆಂದು ಅವಳೀಗ ಉಪಾಯದ ಮೇಲೆ ಉಪಾಯಗಳನ್ನು ಹೂಡುತ್ತಾಳೆ. ಸನ್ಯಾಸಿಯ ವೇಷ ಹಾಕಿ ನೂರಾರು ಸುಳ್ಳುಗಳನ್ನು ಸೃಷ್ಟಿಸಿ ಜನರನ್ನು ದೋಚುತ್ತಾಳೆ. ಕೊನೆಯಲ್ಲಿ ಬೇಕೆಂದೇ ರಾಜಭಟರ ಕೈಗೆ ಸಿಕ್ಕಿ ರಾಜನ ಮುಂದೆ ಅಪರಾಧಿಯಾಗಿ ನಿಲ್ಲುತ್ತಾಳೆ. ತನಗಾದ ಅನ್ಯಾಯದ ಬಗ್ಗೆ ಮತ್ತು ಭೂಪತಿ ಮತ್ತು ಅಧಿಪತಿಯರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ರಾಜ್ಯದಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಿರುವುದರ ಬಗ್ಗೆ ರಾಜನಿಗೆ ವಿವರಿಸಿ ಹೇಳುತ್ತಾಳೆ. ಅನ್ಯಾಯವನ್ನೆಂದೂ ಸಹಿಸದ ಆಕೆ ತಾನು ಸುಳ್ಳು ಹೇಳಿ ದೋಚಿಕೊಂಡ ಎಲ್ಲ ವಸ್ತು ಒಡವೆಗಳನ್ನು ಕೂಡಲೇ ಹಿಂದಿರುಗಿಸುವುದಾಗಿ ಮಾತು ಕೊಡುತ್ತಾಳೆ. ರಾಜನಿಗೆ ತನ್ನಿಂದಾದ ಪ್ರಮಾದದ ಅರಿವಾಗಿ ಅವನು ಚೆನ್ನಮ್ಮನ ಮಗ ಶೂರಸೇನನ್ನು ಕೋತ್ವಾಲನನ್ನಾಗಿ ಮಾಡುವಲ್ಲಿಗೆ ನಾಟಕ ಮುಗಿಯುತ್ತದೆ. ತಂತ್ರಗಾರ್ತಿ ಮಾಡುವ ಉಪಾಯಗಳು ಪ್ರೇಕ್ಷಕರನ್ನು ನಕ್ಕು ನಗಿಸುವಂತಿವೆ. ರಾಜನ ಆಸ್ಥಾನ, ರಾಜ, ಮಂತ್ರಿ ಮತ್ತು ರಾಜಭಟರ ವೇಷಭೂಷಣ-ಚಲನ ವಲನಗಳೂ ಶೈಲೀಕೃತವಾಗಿದ್ದವು .ಚೆನ್ನಮ್ಮ, ರಾಜ, ಮಂತ್ರಿ, ಶೀಲವತಿ, ವ್ಯಾಪಾರಿ, ಅಧಿಪತಿ, ಭೂಪತಿ ಮೊದಲಾ¨ವರ ಅಭಿನಯ ಪಾತ್ರೋಚಿತವಾಗಿ ಮೂಡಿಬಂತು. ಆರಂಭದಲ್ಲಿ ಮತ್ತು ಕೊನೆಯಲ್ಲಿ ಬೇಂದ್ರೆಯವರ ಬದುಕಿನ ಸಾರ್ವಕಾಲಿಕ ತತ್ವಗಳನ್ನು ಪ್ರಸ್ತುತ ಪಡಿಸುವ ಹಾಡು ಕುಣಿಯೋಣು ಬಾರಾವನ್ನು ಅಳವಡಿಸಿಕೊಂಡು ಇಡೀ ತಂಡವೇ ಕುಣಿದದ್ದು ನಾಟಕದ ಆಕರ್ಷಣೆಗೆ ಪೂರಕವಾಗಿತ್ತು.

ಪೂರ್ಣಚಂದ್ರ, ಕುಂದಾಪುರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ