ವರಮಹಾಲಕ್ಷ್ಮೀ ಹಬ್ಬದಂದು ನಡೆಯಿತು ಲಕ್ಷ್ಮೀ ಸ್ವಯಂವರ

ಹಿರಿ-ಕಿರಿ ಕಲಾವಿದರ ಪ್ರಸ್ತುತಿ

Team Udayavani, Aug 30, 2019, 5:00 AM IST

ದೇವತೆಗಳು ಮತ್ತು ರಾಕ್ಷಸರ ಮಧ್ಯೆ ಲಕ್ಷ್ಮೀಗಾಗಿ ವಾಗ್ವಾದ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಈಶ್ವನ ಸಲಹೆಯಂತೆ ಲಕ್ಷ್ಮೀ ಇಷ್ಟ ಬಂದವರೊಂದಿಗೆ ತೆರಳುವ ಅವಕಾಶವನ್ನು ನೀಡಲಾಯಿತು. ಅದುವೇ ಲಕ್ಷ್ಮೀ ಸ್ವಯಂವರ.

ಬಜ್ಪೆಯ ವಿಜಯ ವಿಠಲ ಭಜನಾ ಮಂದಿರದಲ್ಲಿ ವರಮಹಾಲಕ್ಷ್ಮೀ ಹಬ್ಬದಂದು ಹಬ್ಬಕ್ಕೆ ಸರಿಹೊಂದುವ “ಲಕ್ಷ್ಮೀ ಸ್ವಯಂವರ’ ಎಂಬ ಪ್ರಸಂಗದ ಪ್ರದರ್ಶನ ನಡೆಯಿತು. ಪುರಾಣದಲ್ಲಿ ದೇವತೆಗಳು ಮತ್ತು ಅಸುರರು ಸೇರಿ ಅಮೃತದ ಉದ್ಭವಕ್ಕಾಗಿ ನಡೆಸಿದ ಸಮುದ್ರ ಮಥನ ಪ್ರಸಂಗದ ಒಂದು ಭಾಗವೇ ಲಕ್ಷ್ಮೀ ಸ್ವಯಂವರ. ಈ ಕಥಾನಕವು ದೂರ್ವಾಸ ಮುನಿಯ ಅಬ್ಬರದ ಪ್ರವೇಶದೊಂದಿಗೆ ಆರಂಭಗೊಂಡಿತು. ತ್ರಿಮೂರ್ತಿಗಳ ಪಾಲನಾ ಕಾರ್ಯವನ್ನು ಮಾಡುತ್ತಿರುವ ವಿಷ್ಣು ಮೂರು ಲೋಕವನ್ನು ಸಮತೂಕದಲ್ಲಿ ಮುನ್ನಡೆಸುವ ತಂತ್ರವೂ ಇದೆನ್ನಬಹುದು. ಹಾಗಾಗಿ ಈ ಕಥಾನಕದಲ್ಲಿ ವಿಷ್ಣುದೇವ ಸೂತ್ರಧಾರಿ.

ದೇವೇಂದ್ರನಿಗೆ ಸಂಪತ್ತಿನ ಮದವೇರಿತ್ತು. ಇದೇ ಅಹಂಕಾರದಿಂದ ದೇವೇಂದ್ರ ಮೆರವಣಿಗೆ ನಡೆಸುತ್ತಿದ್ದ ಸಂದರ್ಭ ದೂರ್ವಾಸ ಮುನಿಯ ಪ್ರವೇಶ. ದೂರ್ವಾಸ ಮುನಿ ವಿಷ್ಣುವಿತ್ತ ಹೂವಿನ ಮಾಲೆಯನ್ನು ದೇವೇಂದ್ರನಿಗೆ ನೀಡುತ್ತಾರೆ. ದೇವೇಂದ್ರ ಹಾರವನ್ನು ತಿರಸ್ಕರಿಸಿ ಐರಾವತದ ಮೇಲೆ ಎಸೆಯುತ್ತಾನೆ. ಐರಾವತ ಈ ಮಾಲೆಯನ್ನು ಕಾಲಡಿಗೆ ಹಾಕಿ ತುಳಿದು ಪುಡಿಗೈಯುತ್ತದೆ. ಅವಮಾನಿತರಾದ ದೂರ್ವಾಸ ಮುನಿ ದೇವೇಂದ್ರನ ಸಕಲ ಸಂಪತ್ತು ಸುವಸ್ತುಗಳು ಸಮುದ್ರ ಪಾಲಾಗಲಿ ಎಂಬ ಶಾಪವೀಯುತ್ತಾರೆ. ಇದೇ ವೇಳೆ ಬಲಿಚಕ್ರವರ್ತಿ ದೇವೇಂದ್ರನೊಂದಿಗೆ ಯುದ್ಧಕ್ಕೆ ಬರುತ್ತಾನೆ. ಯುದ್ಧದಲ್ಲಿ ದೇವೇಂದ್ರನಿಗೆ ಸೋಲಾಗುತ್ತದೆ. ಈಗ ದೇವೇಂದ್ರನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಸಂಕಷ್ಟ ನಿವಾರಣೆಗೆ ವಿಷ್ಣುವಿನ ಮೊರೆ ಹೋಗುತ್ತಾನೆ. ವಿಷ್ಣುವಿನ ಸಲಹೆಯಂತೆ ದೇವತೆಗಳು ಮತ್ತು ರಾಕ್ಷಸರು ಒಟ್ಟುಗೂಡಿ ಸಮುದ್ರ ಮಥನಕ್ಕೆ ಮುಂದಾಗುತ್ತಾರೆ. ಮಥನದ ವೇಳೆ ಹಲವು ವಸ್ತುಗಳು ಒಂದೊಂದಾಗಿ ಉದ್ಭವಿಸುತ್ತವೆ. ಈ ಸಂದರ್ಭ ಉದ್ಭವಿಸುವ ವಿಷವನ್ನು ಈಶ್ವರ ಸೇವಿಸುತ್ತಾನೆ. ಮಥನದಿಂದ ದೇವತೆಗಳು ರಾಕ್ಷಸರು ದಣಿದು ಸುಸ್ತಾಗಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ವಾಲಿಯ ಪ್ರವೇಶವಾಗುತ್ತದೆ.

ಪರಾಕ್ರಮಿಯಾದ ವಾಲಿ ಸಮುದ್ರ ಮಥನ ಮಾಡಿ ತಾರೆಯನ್ನು ಪಡೆಯುತ್ತಾನೆ. ಆದರೆ ವಿಷ್ಣುವಿನ ನಾಟಕದಲ್ಲಿ ವಾಲಿಯಿಂದ ಸಮುದ್ರ ಮಥನವಾಗುವುದು ಬೇಕಿರಲಿಲ್ಲ. ಹಾಗಾಗಿ ವಿಷ್ಣು -ವಾಲಿಗೆ ಯುದ್ಧವಾಗಿ ವಿಷ್ಣುವಿಗೆ ಸೋಲಾಗುತ್ತದೆ. ವಿಷ್ಣು ಮಾತಿನ ಮೋಡಿಯಿಂದ ವಾಲಿಯನ್ನು ಸೋಲಿಸಿ ತಾರೆಯೊಂದಿಗೆ ಆತನ ಮದುವೆ ಮಾಡಿಸಿ ಕಳುಹಿಸುತ್ತಾನೆ. ದೇವತೆಗಳು ಮತ್ತು ರಾಕ್ಷಸರು ಮತ್ತೆ ಸಮುದ್ರ ಮಥನ ಆರಂಭಿಸುತ್ತಾರೆ. ಐರಾವತ, ಕಾಮಧೇನು ಸೇರಿದಂತೆ ಒಂದರ ಮೇಲೊಂದರಂತೆ ಸುವಸ್ತುಗಳು ಉದ್ಭವಿಸುತ್ತವೆ. ಎಲ್ಲವೂ ದೇವತೆಗಳ ಪಾಲಾಗುತ್ತದೆ. ಬಳಿಕ ಉದ್ಭವಿಸುವಾಕೆಯೇ ಲಕ್ಷ್ಮೀ ದೇವಿ. ದೇವತೆಗಳು ಮತ್ತು ರಾಕ್ಷಸರ ಮಧ್ಯೆ ಲಕ್ಷ್ಮೀಗಾಗಿ ವಾಗ್ವಾದ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಈಶ್ವನ ಸಲಹೆಯಂತೆ ಲಕ್ಷ್ಮೀ ಇಷ್ಟ ಬಂದವರೊಂದಿಗೆ ತೆರಳುವ ಅವಕಾಶವನ್ನು ನೀಡಲಾಯಿತು. ಅದುವೇ ಲಕ್ಷ್ಮೀ ಸ್ವಯಂವರ. ಲಕ್ಷ್ಮೀದೇವಿ ವಿಷ್ಣುವಿನ ಕೊರಳಿಗೆ ಹಾರ ಹಾಕುತ್ತಾಳೆ.

ಪ್ರತಿಯೊಂದು ಪಾತ್ರವನ್ನೂ ಅರ್ಥ ಗರ್ಭಿತವಾಗಿ ನಿರ್ವಹಿಸಿ, ಈ ಕಥಾನಕವನ್ನು ಅರ್ಥಪೂರ್ಣಗೊಳಿಸಿದ ಗೌರವ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರಿಗೆ ಸಲ್ಲುತ್ತದೆ.ಪೂರ್ವಾರ್ಧದಲ್ಲಿ ದಯಾನಂದ ಕೋಡಿಕಲ್‌ ಮತ್ತು ಉತ್ತರಾರ್ಧದಲ್ಲಿ ಸುಧಾಕರ್‌ ಸಾಲಿಯಾನ್‌ ಇವರ ಸುಮಧುರ ಕಂಠದ ಭಾಗವತಿಕೆಗೆ ಚೆಂಡೆಯಲ್ಲಿ ಕೃಷ್ಣರಾಜ್‌ ಭಟ್‌ ನಂದಳಿಕೆ ಮತ್ತು ಮದ್ದಳೆಯಲ್ಲಿ ರಾಜೇಶ್‌ ಭಟ್‌ ಸಾಥ್‌ ನೀಡಿದ್ದರು. ದೂರ್ವಾಸ ಮುನಿಯಾಗಿ ಸಂದೇಶ್‌ ಬಡಗಬೆಳ್ಳೂರು ಮೂಕವಿಸ್ಮಿತರನ್ನಾಗಿಸಿದರೆ, ಬಳಿಕ ಮೂಕಾಸುರನಾಗಿ ನಗಿಸಿದರು. ಬಲಿ ಚಕ್ರವರ್ತಿಯಾಗಿ ಚರಣ್‌ರಾಜ್‌ ಕುಕ್ಕಾಜೆ ವೇದಿಕೆಯನ್ನು ನಡುಗಿಸಿದರು. ವಿಷ್ಣುವಾಗಿ ಅಮಿತಾ ಪೊಳಲಿ ಪಾತ್ರ ನಿರ್ವಹಣೆ ಉತ್ತಮವಾಗಿತ್ತು. ದೇವೇಂದ್ರನ ಪಾತ್ರವನ್ನು ಪುಷ್ಪಾ ಕುಕ್ಕಾಜೆ ಸಮರ್ಥವಾಗಿ ನಿಭಾಯಿಸಿದರು. ವಾಲಿಯಾಗಿ ಸಂಜೀವ ಕೋಟ್ಯಾನ್‌, ಲಕ್ಷ್ಮೀಯಾಗಿ ಆಜ್ಞಾ ಸೋಹಮ್‌ ಪಾತ್ರಕ್ಕೆ ತಕ್ಕ ಅಭಿನಯ ನೀಡಿದರು. ಈಶ್ವರನಾಗಿ ದಯಾನಂದ ಪೂಜಾರಿ , ಪಾರ್ವತಿಯಾಗಿ ಲೋಲಾಕ್ಷಿ ,ಅಗ್ನಿಯಾಗಿ ಚಮನ್‌, ವಾಯುವಾಗಿ ತನ್ಮಯಿ, ವರುಣನಾಗಿ ಅಮೃತವರ್ಣ, ಕುಬೇರನಾಗಿ ಅಮೃತವರ್ಷ, ನಿರುತಿಯಾಗಿ ದೀûಾ ಪೆರಾರ ರಂಗು ತುಂಬಿಸಿದರು. ಬಲಿಚಕ್ರವರ್ತಿ ಬಲಗಳಾಗಿ ಮಂದಾರ ಮೂಡಬಿದ್ರೆ, ಕೌಶಿಕ್‌ ಪೆರಾರ, ಇಂದು, ಸೃಷ್ಟಿಕೃಷ್ಣ, ಸುರೇಶ್‌ ಅಬ್ಬರದ ಪ್ರವೇಶದೊಂದಿಗೆ ರಂಗಸ್ಥಳಕ್ಕೆ ಹೊಸ ಕಳೆ ತುಂಬಿಸಿದರು. ತಾರನಾಥ ವರ್ಕಾಡಿಯವರ ದಕ್ಷ ನಿರ್ದೇಶನವಿತ್ತು.

ಇಂದು ನಾಗೇಶ್‌, ಕೂಳೂರು


ಈ ವಿಭಾಗದಿಂದ ಇನ್ನಷ್ಟು

  • ಸಾಲಿಗ್ರಾಮ ಮೇಳ ಈ ಸಾಲಿನ ತಿರುಗಾಟದ ದೇವದಾಸ ಈಶ್ವರಮಂಗಲ ವಿರಚಿತ "ಚಂದ್ರಮುಖೀ ಸೂರ್ಯಸಖೀ' ಆಖ್ಯಾನ ಜಯಭೇರಿ ಕಾಣುವ ಎಲ್ಲಾ ಲಕ್ಷಣವನ್ನು ಹೊಂದಿದೆ. ಚಲನಚಿತ್ರಗಳ...

  • ಈ ಈರ್ವರು ಕಲಾವಿದೆಯರ ನೃತ್ಯ ಸಾಂಗತ್ಯವು ವೇಣುನಾದ ಎಂಬ ನವೀನ ಹಿನ್ನೆಲೆ ಸಂಗೀತ, ಬರೀ ಕೊಳಲಿನ ನಾದ ಮಾತ್ರ, ಗಾಯನ ಇಲ್ಲದೆ ನೃತ್ಯಕ್ಕೆ ಹೆಚ್ಚು ಒತ್ತುಕೊಟ್ಟು...

  • ಮೂಕಾಂಬಿಕ ಕಲ್ಚರಲ್‌ ಅಕಾಡೆಮಿಯ ನೃತ್ಯಾಂತರಂಗದ 80ನೇ ಸರಣಿ ಕಾರ್ಯಕ್ರಮದಲ್ಲಿ ಅಂತರಾಷ್ಟೀಯ ಖ್ಯಾತಿಯ ನೃತ್ಯ ಗುರು ರಮಾ ವೈದ್ಯನಾಥನ್‌ ಮತ್ತು ಸನಾತನ ನಾಟ್ಯಾಲಯದ...

  • ಚುಮು ಚುಮು ಚಳಿ. ಸುತ್ತಲೂ ಹಿಮದ ರಾಶಿ. ಬೆಳೆದು ನಿಂತಿರುವ ಬೆಟ್ಟಗಳ ಸಾಲು. ಅದೇ ಹಿಮಾಚಲ ಪ್ರದೇಶದ ಸುಂದರ ತಾಣ ಮನಾಲಿಯಾಗಿತ್ತು. ಎಂದೂ ಕಂಡಿರದ ಆ ದೃಶ್ಯವನ್ನು...

  • ಸುಮಾರು ನಾಲ್ಕೈದು ದಶಕಗಳ ಹಿಂದೆ ವೇಷಗಳ ಹಿಂಭಾಗದಲ್ಲಿ ಪಾಕು ಸೀರೆಯನ್ನು ಕಟ್ಟುವ ಕ್ರಮ ಇದ್ದಂತಿಲ್ಲ. ಕಿರೀಟ ವೇಷಗಳಿಗೆ ಕಿರೀಟದ ಕೆಳಭಾಗಕ್ಕೆ ಕಟ್ಟಿದ ಚೌರಿ...

ಹೊಸ ಸೇರ್ಪಡೆ