ಅಧ್ಯಾಪಕರಿಂದ ಮಧು ಕೈಟಭ ವಧೆ

Team Udayavani, Oct 18, 2019, 4:16 AM IST

ಇಬ್ಬರು ಪದವಿ ಪೂರ್ವ ವಿದ್ಯಾಲಯದ ಅಧ್ಯಾಪಕರು. ಒಬ್ಬರು ಪ್ರೌಢಶಾಲೆಯ ಶಿಕ್ಷಕರು, ಓರ್ವ ನಿವೃತ್ತ ಪ್ರಾಧ್ಯಾಪಕರು. ಇವರದೇ ಮುಮ್ಮೇಳದಲ್ಲಿ ನಡೆದ ಮಧುಕೈಟಭ ವಧೆ ತಾಳಮದ್ದಳೆ ಎಲ್ಲಿಯೂ ಬೇಸರ ಮೂಡಿಸುವ ಪಠ್ಯವಾಗದೆ ಕೇಳುಗರಿಗೆ ಒಂದು ಬಯಲಾಟದಷ್ಟೇ ರಂಜನೀಯ ಅನುಭವ ನೀಡಿದ್ದು ಗುರುವಾಯನಕೆರೆಯ ಪಾಂಡುರಂಗ ಮಂದಿರದಲ್ಲಿ, ನವರಾತ್ರೆಯ ಮೂರನೆಯ ದಿನ.

ಆದಿಮಾಯೆಯನ್ನು ಹರಿಹರ ಬ್ರಹ್ಮಾದಿಗಳು ಜಯತು ಜಯತು ಆದಿಮಾಯೇ ಎಂದು ಸ್ತುತಿಸುವಲ್ಲಿಂದ ಆರಂಭವಾದ ಕಥಾಭಾಗದಲ್ಲಿ ಬ್ರಹ್ಮನಾಗಿ ಪಾತ್ರ ನಿರ್ವಹಿಸಿದವರು ಉಪನ್ಯಾಸಕ ದಿವಾಕರ ಆಚಾರ್ಯ. ತಾನೇ ಸೃಷ್ಟಿಕರ್ತನೆಂಬ ಅಹಮಿಕೆಯಿಂದ ಮೆರೆಯುವ ಬ್ರಹ್ಮನ ಹಟಮಾರಿತನ, ಸೊಕ್ಕುಗಳನ್ನು ಪ್ರಬುದ್ಧವಾದ ಮಾತಿನ ಶೈಲಿಯಲ್ಲಿ ಪ್ರದರ್ಶಿಸುತ್ತಲೇ ಹೋದ ಅವರ ವಾಕ್ಯ ವೈಖರಿಗೆ ಸರಿಸಾಟಿಯಾಗಿ ವಿಷ್ಣುವಿನ ಪಾತ್ರದಲ್ಲಿ ಸ್ಪಂದಿಸಿದವರು ಪ್ರಾಧ್ಯಾಪಕ ಮೋಹನ ಕಲ್ಲೂರಾಯರು. ಸಂಯಮ ಕಳೆದುಕೊಳ್ಳದ ಮಾತುಗಾರಿಕೆ, ಸುಂದರವಾಗಿ ಪೋಣಿಸಿದ ಸರಳವಾದ ಪಡಿನುಡಿಗಳ ಮೂಲಕ ರಸಭರಿತವಾದ ಸನ್ನಿವೇಶವನ್ನು ಸೃಷ್ಟಿಸಿದ ಅವರು ವೇಷಗಾರಿಕೆಯಲ್ಲೂ ಪರಿಣತರಾದ ಕಾರಣ ಎಲ್ಲಿಯೂ ಹದ ತಪ್ಪಲಿಲ್ಲ. ಬ್ರಹ್ಮನ ಉದರದೊಳಗೆ ಪ್ರವೇಶಿಸುವ ವಿಷ್ಣು ಅಲ್ಲಿ ಕಂಡ ಅದ್ಭುತವನ್ನು ವರ್ಣಿಸುವ ಪರಿ, ವಿಷ್ಣುವಿನ ಉದರವನ್ನು ಹೊಕ್ಕ ಬ್ರಹ್ಮನ ದಿಗಿಲು ಮನೋಜ್ಞವಾದ ಪಾತ್ರ ಅಭಿವ್ಯಕ್ತಿಯ ಮೂಲಕ ಸೊಗಸಾಗಿ ಹೊರಹೊಮ್ಮಿ, ಇಬ್ಬರು ಸಮರ್ಥರಾದ ಕಲಾವಿದರ ಸಾಮರ್ಥ್ಯವನ್ನು ಶ್ರುತಪಡಿಸಿತು.

ಇನ್ನು ಮಧುವಾಗಿ ಆರ್ಭಟಿಸುತ್ತಲೇ ರಂಗ ಪ್ರವೇಶಿಸಿದ ಶಿಕ್ಷಕ ರಾಮಕೃಷ್ಣ ಬಳಂಜ, ಮಹಿಳೆಯಾದರೂ ಪುರುಷನಿಗಿಂತ ಕಮ್ಮಿಯಿಲ್ಲವೆಂದು ತೋರಿಸಿದ ಉಪನ್ಯಾಸಕಿ ಸುವರ್ಣ ಕುಮಾರಿ ಇಬ್ಬರದೂ ಸಮಂಜಸವಾದ ಪಾತ್ರ ನಿರ್ವಹಣೆ. ಮಾತಿನ ವರಸೆಯಲ್ಲೂ ಒಬ್ಬರಿಗಿಂತ ಒಬ್ಬರು ಮಿಗಿಲು. ಜಲರಾಶಿಯನ್ನು ಬಗೆಯುತ್ತ ಬ್ರಹ್ಮನನ್ನು ಬೆನ್ನಟ್ಟಿಕೊಂಡು ಹೋಗಿ, ವಿಷ್ಣುವಿನೊಂದಿಗೆ ಯುದ್ಧ ಮಾಡುವಾಗ ಮೆರೆದ ಪೌರುಷ ಒಂದು ಅಪೂರ್ವ ಅನುಭವ ನೀಡಿತು. ಕಡೆಗೆ ವಿಷ್ಣುವಿನ ವಿಶ್ವರೂಪ ದರ್ಶನದ ಬಳಿಕ ಮಧು ಕೈಟಭರಿಬ್ಬರೂ ಸುಜ್ಞಾನವಂತರಾಗಿ ವಿಷ್ಣುವನ್ನು ಸ್ತುತಿಸುವ ಸಂದರ್ಭ ರಾಮಕೃಷ್ಣ ಬಳಂಜರದು ಹೃದಯಸ್ಪರ್ಶಿ ಮಾತಿನ ಬಂಧದಲ್ಲಿ ಕೇಳುಗರನ್ನು ಭಾವುಕರನ್ನಾಗಿಸಿತ್ತು. ಇತಿಮಿತಿಯ ಮಾತಿನಲ್ಲೂ ಒಂದು ಪಾತ್ರವನ್ನು ಹೇಗೆ ಅಂದಗೊಳಿಸಬಹುದೆಂಬುದಕ್ಕೆ ಕೈಟಭನ ಪಾತ್ರ ಉತ್ತಮ ಉದಾಹರಣೆಯೆನಿಸಿತ್ತು. ಮಧುವಿನ ಮೇದಸ್ಸಿನಿಂದ ಭೂಮಿಯನ್ನು, ಕೈಟಭನ ದೇಹದಿಂದ ಪರ್ವತಗಳನ್ನು ಸೃಷ್ಟಿಸಿದ ವಿಷ್ಣುವಿನ ಸ್ವಗತದೊಂದಿಗೆ ಪ್ರಸಂಗ ಮುಕ್ತಾಯವಾಯಿತು.

ಎರಡೂವರೆ ತಾಸುಗಳ ಕಾಲ ಶ್ರೋತೃಗಳಿಗೆ ತಂಪೆರೆದ ಪ್ರಸಂಗದ ಆಕರ್ಷಣೆಗೆ ಇನ್ನೊಂದು ಕಾರಣ ಯುವ ಭಾಗವತ ವಿಷ್ಣು ಪ್ರಸಾದರ ಮನಮೋಹಕ ಕಂಠದ ಭಾಗವತಿಕೆ. ಸನ್ನಿವೇಶದ ಭಾವವನ್ನು ಅನುಭವಿಸುತ್ತಲೇ ಹಾಡಿದ ಅವರಿಗೆ ಮೃದಂಗದಲ್ಲಿ ಸಹಕರಿಸಿದ ನರಸಿಂಹ ಮೂರ್ತಿ ಕುಂಟಿನಿ, ಶ್ರವಣ್‌ ಹಾಗೂ ಚಂಡೆ ವಾದನ ಮಾಡಿದ ಸುದರ್ಶನ ಕಲ್ಲೂರಾಯರ ಸಾಥಿಯೂ ಪ್ರಸಂಗದ ಯಶಸ್ಸಿಗೆ ಕಾರಣವಾಯಿತು.

ಪ. ರಾಮಕೃಷ್ಣ ಶಾಸ್ತ್ರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕರ್ಣ ಇಂದಿಗೂ ಮಹಾಭಾರತದ ಯಾವ ರೂಪದ ಪಾತ್ರ ಎಂಬ ಬಗ್ಗೆ ಜಿಜ್ಞಾಸೆಗಳಿವೆ. ಒಂದೆಡೆ ಆತ ದುರಂತಮಯ ನಾಯಕನಾದರೆ ಮತ್ತೂಂದೆಡೆ ವೀರಾಧಿವೀರ ಮಗದೊಂದೆಡೆ ದಾನಶೂರ, ಜೊತೆಗೆ...

  • ಕೃಷಿ ಪ್ರಧಾನ ಗ್ರಾಮೀಣ ಸಮಾಜದಲ್ಲಿ ಮನುಷ್ಯ ಮತ್ತು ಸಾಕುಪ್ರಾಣಿಗಳ ನಡುವೆ ಇರುವ ವಿಶೇಷ ಬಾಂಧವ್ಯದ ಆಯಾಮಗಳನ್ನು ನಾಟಕ ಅತ್ಯಂತ ಹೃದಯಸ್ಪರ್ಶಿಯಾಗಿ ಪ್ರಸ್ತುತಪಡಿಸಿತು. ನಾಲ್ಕೂವರೆ...

  • ಕೋಳ್ಯೂರು ರಾಮಚಂದ್ರ ರಾವ್‌ ಅವರಿಗೆ 87ರ ಇಳಿಪ್ರಾಯ.ಆದರೆ ಸ್ತ್ರೀಯರನ್ನೂ ನಾಚಿಸುವ ಅವರ ಧ್ವನಿ ಹಾಗೂ ಅಂಗಭಾಷೆ ಇಂದಿಗೂ "ಹದಿನಾರು ವತ್ಸರದ ಹೆಣ್ಣಾದ ಕೋಳ್ಯೂರ'ರನ್ನು...

  • ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ಈ ಬಾರಿ ಅ. 14ರಿಂದ ನ. 4ರ ವರೆಗೆ 22 ದಿವಸ ಆಸ್ಟ್ರೇಲಿಯಾದಲ್ಲಿ ಯಕ್ಷ ದಿಗ್ವಿಜಯವನ್ನು ಯಶಸ್ವಿಯಾಗಿ ನಡೆಸಿದೆ. ಆಸ್ಟ್ರೇಲಿಯಾದಲ್ಲಿ...

  • "ಜೂನಿಯರ್‌ ರಾಜಕುಮಾರ್‌' ಖ್ಯಾತಿಯ ಜಗ ದೀಶ ಆಚಾರ್ಯ ಶಿವಪುರ ಅವರು ಗಾಯನ ರಂಗದಲ್ಲಿ 50 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನ. 22ರಂದು ಸಂಜೆ ಮಂಗಳೂರು...

ಹೊಸ ಸೇರ್ಪಡೆ