ತಲ್ಲಣ, ಹೋರಾಟದ ಮುಖಾಮುಖಿ-ಮತ್ಸ್ಯಗಂಧಿ

ರೂಪಾಂತರ ತಂಡದ ಪ್ರಸ್ತುತಿ

Team Udayavani, Jun 7, 2019, 6:00 AM IST

ಮಹಾಭಾರತದ ಹಲವಾರು ಘಟನಾವಳಿಗಳನ್ನು ರಂಗರೂಪಕ್ಕೆ ಇಳಿಸಿದರೆ ಸಮಾಜಕ್ಕೆ ಒಂದು ದೊಡ್ಡ‌ ಕೊಡುಗೆ ನೀಡಿದಂತಾಗುತ್ತದೆ. ಅಂದಿನೆಲ್ಲಾ ಘಟನಾವಳಿಗಳು ಪ್ರೀತಿ-ಪ್ರೇಮ, ದ್ವೇಷ‌-ಅಸೂಯೆ; ಕರುಣೆ-ವ್ಯಾಮೋಹ; ತಿರಸ್ಕಾರ-ಪುರಸ್ಕಾರ; ಭೂಮಿಗಾಗಿ-ನೀರಿಗಾಗಿ ನಡೆಯುವ ಕಾಳಗ, ಯತ್ನ-ಒಂದೇ ಎರಡೇ?

ಮಂಚಿಯ ಬಿ.ವಿ. ಕಾರಂತ ರಂಗಭೂಮಿಕಾ ಟ್ರಸ್ಟ್‌, ಕಂದಾಯ ಇಲಾಖಾ ನೌಕರರ ಸಂಘ ಬೆಂಗಳೂರು ಹಾಗೂ ಮಂಗಳೂರು ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘಗಳ‌ ಜಂಟಿ ಆಶ್ರಯದಲ್ಲಿ ಮಂಗಳೂರಿನಲ್ಲಿ ಇತ್ತೀಚಿಗೆ ಬಿ. ವಿ. ಕಾರಂತರ ನೆನಪಿನ ಎರಡು ದಿನಗಳ ನಾಟಕೋತ್ಸವ ಜರುಗಿತು. ಪ್ರಥಮ ದಿನ ಹಿರಿಯ ವಿದ್ವಾಂಸ ಡಾ| ಪ್ರಭಾಕರ ಶಿಶಿಲರ ಮತ್ಸéಗಂಧಿ ಕಾದಂಬರಿ ಆಧಾರಿತ ಅದೇ ಹೆಸರಿನ ನಾಟಕ ಪ್ರದರ್ಶನ ಉತ್ತಮವಾಗಿ ಮೂಡಿಬಂದು ಮುದ ನೀಡಿತು.

ಎನ್‌.ಟಿ. ಪ್ರಸನ್ನಕುಮಾರ್‌ ರಂಗರೂಪಕ್ಕೆ ತಂದ ಈ ಕೃತಿಯ ನಾಟಕವನ್ನು ರಂಗಕ್ಕಿಳಿಸಿದ್ದು ಬೆಂಗಳೂರಿನ ರೂಪಾಂತರ ತಂಡ. ಮೂಲಕೃತಿಗೆ ಸ್ವಲ್ಪವೂ ಚ್ಯುತಿಯಾಗದಂತೆ ವಿಸ್ತೃತವಾದ ಕಾದಂಬರಿಯ ಅತೀ ಅಗತ್ಯದ ಸನ್ನಿವೇಶಗಳನ್ನು ಸೇರಿಸಿ, ಸುಮಾರು ಎರಡು ತಾಸಿನ ಕಾಲ ಪ್ರೇಕ್ಷ‌ಕರನ್ನು ಹಿಡಿದಿಟ್ಟುಕೊಂಡು ನಾಟಕ ರೂಪದಲ್ಲಿ ತಲುಪಿಸುವಲ್ಲಿ ನಿರ್ದೇಶಕ ಕೆ.ಎಸ್‌.ಡಿ ಎಲ್‌. ಚಂದ್ರು ಯಶಸ್ವಿಯಾಗಿದ್ದಾರೆ. ಕಾದಂಬರಿಕಾರರೆ ಹೇಳುವಂತೆ ಕಾದಂಬರಿಯ ಎಲ್ಲಾ ಸನ್ನಿವೇಶಗಳನ್ನು ರಂಗದಲ್ಲಿ ಪ್ರಸ್ತುತಪಡಿಸಿದರೆ ಇದರ ಪ್ರದರ್ಶನಕ್ಕೆ ಸುಮಾರು 5 ಗಂಟೆ ಅವಧಿ ಬೇಕಾಗುತ್ತದಂತೆ. ಪ್ರೇಕ್ಷ‌ಕರ ವ್ಯವಧಾನ ಹಾಗೂ ಸಮಯವನ್ನೂ ಗಮನದಲ್ಲಿಟ್ಟುಕೊಂಡು ಬೇಕಾದ ಅಂಶಗಳನ್ನು ಸ್ವಲ್ಪವೂ ಬಿಡದೆ, ಕಥೆಯ ಓಘಕ್ಕೆ ಎಲ್ಲಿಯೂ ಚ್ಯುತಿ ಬಾರದಂತೆ ನಾಟಕದ ಮುಖಾಂತರ ಪ್ರೇಕ್ಷಕರಿಗೆ ತಲುಪಿಸುವಲ್ಲಿನ ನಿರ್ದೇಶಕರ ಜಾಣ್ಮೆ ಮೆಚ್ಚಬೇಕು.

ಮಹಾಭಾರತದ ಹಲವಾರು ಘಟನಾವಳಿಗಳನ್ನು ರಂಗರೂಪಕ್ಕೆ ಇಳಿಸಿದರೆ ಸಮಾಜಕ್ಕೆ ಒಂದು ದೊಡ್ಡ‌ ಕೊಡುಗೆ ನೀಡಿದಂತಾಗುತ್ತದೆ. ಅಂದಿನೆಲ್ಲಾ ಘಟನಾವಳಿಗಳು ಪ್ರೀತಿ-ಪ್ರೇಮ, ದ್ವೇಷ‌-ಅಸೂಯೆ; ಕರುಣೆ-ವ್ಯಾಮೋಹ; ತಿರಸ್ಕಾರ-ಪುರಸ್ಕಾರ; ಭೂಮಿಗಾಗಿ-ನೀರಿಗಾಗಿ ನಡೆಯುವ ಕಾಳಗ, ಯತ್ನ-ಒಂದೇ ಎರಡೇ? ಪ್ರತಿಯೊಂದೂ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಘಟನಾವಳಿಗಳ ತದ್ರೂಪಿಗಳಿದ್ದಂತೆ. ಇವುಗಳನ್ನು ರಂಗರೂಪಕ್ಕೆ ಯಾರಾದರೂ ಇಳಿಸಿದರೆ; ಅವುಗಳನ್ನು ಇಂದಿನ ಜನತೆ ನೋಡಿದರೆ, ಇಂದಿನ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳು ದೊರೆಯಬಹುದೇನೋ?

ಮಹಾಭಾರತಕ್ಕೆ ಆರಂಭದಲ್ಲಿ ಗ‌ಟ್ಟಿಯಾದ ಅಡಿಗಲ್ಲು ಹಾಕಿಕೊಟ್ಟ ಒಂದು ಕಥಾನಕ/ಕಥಾ ನಾಯಕಿ (ಸತ್ಯವತಿ) ಮತ್ಸ್ಯಗಂಧಿ. ಈಕೆ ನದಿಯಲ್ಲಿ ತೇಲಿ ಬಂದ ಮಗು. ದಾಶರಾಜನ ಸಾಕು ಮಗಳು. ಮತ್ಸ್ಯಗಂಧಿ ಯೋಜನಾಗಂಧಿಯಾದುದು, ಕುರುಕುಲದ ಗಂಧಿಯಾದುದು, ಆಕೆಯ ಬದುಕಿನುದ್ದಕ್ಕೂ ಆದ ತಲ್ಲಣಗಳು, ಹೋರಾಟಗಳು ನಾಟಕದುದ್ದಕ್ಕೂ ಕಂಡುಬರುತ್ತದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯೊಬ್ಬಳು ಹೇಗೆ ಬಲಿಪಶುವಾಗುತ್ತಾಳೆಂಬುದನ್ನು ನಾಟಕದ ಮತ್ಸéಗಂಧಿ, ಅಂಬೆ, ಅಂಬಿಕೆ, ಅಂಬಾಲಿಕೆಯರ ಪಾತ್ರಗಳು ನಿರೂಪಿಸಿವೆ. ಶಿಕ್ಷಣ ಪಡೆದರೆ ಓರ್ವ ಬೆಸ್ತರ ಹುಡುಗಿಯೂ ಸಾಮ್ರಾಜ್ಯ ಕಟ್ಟಬಹುದು ಎಂಬುದು ಎಳೆಎಳೆಯಾಗಿ ರಂಗದಲ್ಲಿ ನಿರೂಪಿತವಾಗಿದೆ. ಮತ್ಸéಗಂಧಿ ಮೊದಲು ತನ್ನ ಕನ್ಯತ್ವ ಕಳಕೊಂಡ ಪ್ರಸಂಗ, ಶಂತನುವಿನ ಪ್ರಣಯ ನಿವೇದನೆ, ದೇವವ್ರತನ ಪ್ರತಿಜ್ಞೆ, ಅಂಬೆ, ಅಂಬಿಕೆ, ಅಂಬಾಲಿಕೆಯರ ಪ್ರಕರಣ, ಪರಶುರಾಮರ ಸಂಧಾನ ಪ್ರಯತ್ನ, ನಪುಂಸಕ ವಿಚಿತ್ರವೀರ್ಯನನ್ನು ಮದುವೆಯಾಗಬೇಕಾಗಿ ಬಂದ ಅನಿವಾರ್ಯತೆ, ಧಿಕ್ಕರಿಸಿದರೆ ಏನಾಗುತ್ತದೆ ಎಂಬ ಪಾಠ, ವ್ಯವಸ್ಥೆಯ ವಿರುದ್ಧ ಹೋರಾಡಿದುದರ ಪರಿಣಾಮ… ಒಂದೇ, ಎರಡೇ? ಎಲ್ಲವೂ ಸಕಾಲಿಕವಾಗಿಯೇ ತೋರುತ್ತದೆ.

ಉತ್ತಮವಾಗಿ ಮೂಡಿಬಂದ ಈ ನಾಟಕದಲ್ಲಿ ಪರಾಶರ ಮುನಿ ಮತ್ತು ಮತ್ಸéಗಂಧಿಯರ ಕೂಡುವಿಕೆಯ ದೃಶ್ಯವನ್ನು ಇನ್ನೂ ಸಾಂಕೇತಿಕವಾಗಿಯೂ, ನಂತರ ವೇದವ್ಯಾಸ ಹಾಗೂ ಅಂಬಿಕೆ, ಅಂಬಾಲಿಕೆಯರ ಕೂಡುವಿಕೆಯ ದೃಶ್ಯವನ್ನು ಸ್ವಲ್ಪ ಭಯಾನಕವಾಗಿಯೂ ಮೂಡಿಸಿದರೆ ಇನ್ನೂ ಚೆನ್ನಾಗಿರುತ್ತಿತ್ತೇನೋ? ಹಾಗೆಯೇ ಕೆಲವು ಪಾತ್ರಧಾರಿಗಳ ಉಚ್ಚಾರದೋಷ‌ ತಿದ್ದುಪಡಿಯಾದರೆ ಇನ್ನೂ ಉತ್ತಮ. ಮತ್ಸ್ಯಗಂಧಿ, ಅಂಬೆ, ಪರಾಶರ, ಭೀಷ್ಮ, ಪರಶುರಾಮ ಮತ್ತು ದಾಶರಾಜರ ಪಾತ್ರ ನಿರ್ವಹಣೆ ಸೊಗಸಾಗಿ ಮೂಡಿಬಂದಿದೆ.ಉತ್ತಮ ವಸ್ತ್ರ ವಿನ್ಯಾಸ, ಪೂರಕ ಬೆಳಕು, ಧ್ವನಿ, ಗಾಯನ ನಾಟಕದುದ್ದಕ್ಕೂ ಮೂಡಿಬಂದಿದೆ.

ಡಾ| ಟಿ ಕೃಷ್ಣಮೂರ್ತಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ