ಈಶ್ವರಯ್ಯ ನೆನಪಿನಲ್ಲೊಂದು ಮಧುರ ಸುಗಮ ಸಂಗೀತ

Team Udayavani, Sep 6, 2019, 5:00 AM IST

ಹಿರಿಯ ಕಲಾ ವಿಮರ್ಶಕ, ಕಲಾವಿಹಾರಿ ಈಶ್ವರಯ್ಯ ಸ್ಮರಣಾರ್ಥ ಅವರ ಆಶಯದಂತೆ ಅವರ ನೂತನ ಗೃಹ “ಮಾಧುರ್ಯ’ದಲ್ಲಿ ಆ. 11ರಂದು ಆಕಾಶವಾಣಿಯ ಹಿರಿಯ ಕಲಾವಿದ, ಸುಗಮ ಸಂಗೀತಗಾರ, ಕೆ. ಆರ್‌. ರಾಘವೇಂದ್ರ ಆಚಾರ್ಯ ಮಣಿಪಾಲ ಹಾಗೂ ಅವರ ಪುತ್ರಿ ಶ್ರುತಿ ಗುರುಪ್ರಸಾದ್‌ ಅವರ ಲಘು ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಲಾವಿದರು ಪೂರ್ವಾರ್ಧದಲ್ಲಿ ಭಕ್ತಿ ಗೀತೆಗಳನ್ನೂ, ಉತ್ತರಾರ್ಧದಲ್ಲಿ ಭಾವಗೀತೆಗಳನ್ನೂ ಹಾಡಿದರು. ಮೊದಲಲ್ಲಿ ಶ್ಲೋಕ ಹಾಗೂ ಪಾಹಿ ಪಾಹಿ ಬಾಲ ಗಣಪತೇ ಪ್ರಾರ್ಥನಾ ಗೀತೆಯನ್ನು ಹಾಡಿದರು. ನಂತರ ಸರಸ್ವತೀ ನಮಸ್ತುಭ್ಯಂ ಶ್ಲೋಕದೊಂದಿಗೆ ವಂದೇಹಂ ಶಾರದಾ, ಉಗಾಭೋಗದೊಂದಿಗೆ ರಾಗಮಾಲಿಕೆಯಲ್ಲಿ ಉದರ ವೈರಾಗ್ಯವಿದು, ನೀನ್ಯಾಕೋ ನಿನ್ನ ಹಂಗ್ಯಾಕೋ, ಇಕೋ ನಮ್ಮ ಸ್ವಾಮೀ, ಉಗಾಭೋಗ- ಹಾಲುಕ್ಕಿತೋ ರಂಗಾ, ದಿ.ಈಶ್ವರಯ್ಯ ವಿರಚಿತ-ನಾದವೆ ಆನಂದವು ಪರತತ್ವದ ಸೋಪಾನವು (ದಿ.ಈಶ್ವರಯ್ಯನವರು ರಚಿಸಿದ ಈ ಹಾಡಿನ ಪ್ರಸ್ತುತಿ ಕಾಂಭೋಜಿ ರಾಗದಲ್ಲಿದ್ದು ಬಹು ವಿಶೇಷವೆನಿಸಿತು. ಈ ಕವನದ ಕೆಲ ಸಾಲುಗಳು, “ವರ್ಣದ ಗಾಂಭೀರ್ಯವು ತಾನಪಲ್ಲವಿ ಅಲಂಕಾರವು, ಸರಸಕೆ ಜಾವಳಿ-ವಿರಸಕೆ ಪದವು, ನಲಿವಿಗೆ ತಿಲ್ಲಾನ-ಭಕುತಿಗೆ ಭಜನವು, ಪದಸರಿ ಸಂಚಾರ-ಕೃತಿಗಳ ಸಾಕಾರ, ಗುರುಗುಹ ತ್ಯಾಗರಾಜ ಶ್ಯಾಮಕ್ರಷ್ಣಾಂಕಿತ ( ಕರ್ನಾಟಕ ಸಂಗೀತದ ತ್ರಿಮೂರ್ತಿಗಳು) ಸಾಹಿತ್ಯದ ಈ ಸಾಲುಗಳು, ಸಂಗೀತವೇನೆಂಬುದರ ಬಗ್ಗೆ, ವೈವಿಧ್ಯಮಯ ರಚನೆಗಳ ಬಗ್ಗೆ, ವಾಗ್ಗೇಯಕಾರರುಗಳ ಬಗ್ಗೆ ಒಂದೇ ಹಾಡಿನ ಕೆಲವೇ ಶಬ್ದಗಳಲ್ಲಿ ಸಂಗೀತದ ಸಮಗ್ರ ಚಿತ್ರಣವನ್ನು ತಿಳಿಸಿ ಹೇಳಿದಂತಿತ್ತು), ಸಖೀಸಜಗಾಮನ(ಠುಮ್ರಿ), ಗಾಯತಿ ವನಮಾಲೀ, ಯಾರಮಿತಾ ವನಮಾಲೀ. ಮುಂದೆ ಭಾವಗೀತೆಗಳ ಸರದಿ. ಯಾವಮೋಹನ ಮುರಳಿ, ನಲ್ಲೆ ನಿನ್ನ ಲಲ್ಲೆ ವಾತು, ಮುಚ್ಚು ಮರೆ ಇಲ್ಲದೆಯೆ, ಸಂಜೆಗೆನ್ನ ಪಯಣವೆಂದು, ಲೋಕದ ಕಣ್ಣಿಗೆ ರಾಧೆಯು ಕೂಡಾ, ಬಾ ಮಲ್ಲಿಗೇ ಬಾ ಮೆಲ್ಲಗೇ, ನಿನ್ನ ಕಂಗಳ ಕೊಳದಿ, ಎಲ್ಲೋ ಹುಡುಕಿದೆ ಇಲ್ಲದ ದೇವರ, ಲಕ್ಷ್ಮೀ ರಮಣಗೆ ಮಾಡಿದಳು ಉರುಟಾಣಿಯೊಂದಿಗೆ ಗಾಯನದ ಮುಕ್ತಾಯ. ಇವರೀರ್ವರೂ ವಿ|ಮಧೂರ್‌ ಪಿ. ಬಾಲಸುಬ್ರಮಣ್ಯಂ ಅವರಲ್ಲಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿರುತ್ತಾರೆ.

ಈ ಗಟ್ಟಿ ಬುನಾದಿಯೊಂದಿಗೆ ಭಕ್ತಿ, ಭಾವರಸ ಕೂಡಿಕೊಡು ಹಾಡಿದಾಗ ಒಳ್ಳೆಯ ಅನುಭೂತಿ ಹೊರ ಹೊಮ್ಮುತ್ತದೆ. ಇಬ್ಬರದೂ ಒಳ್ಳೆಯ ಶಾರೀರ. ಶಾಸ್ತ್ರೀಯ ಹಾಗೂ ಸುಗಮ ಎರಡು ಪ್ರಕಾರಗಳಿಗೂ ಹೊಂದಿಕೊಳ್ಳುವ ಧ್ವನಿಗಳು. ನೀನ್ಯಾಕೋ, ನಾದವೆ ಆನಂದವು, ಠುಮ್ರಿ, ಸಂಜೆಗೆನ್ನ ಪಯಣವೆಂದು, ಲೋಕದ ಕಣ್ಣಿಗೆ ರಾದೆಯು ಕೂಡಾ, ಬಾ ಮೆಲ್ಲಗೇ, ಎಲ್ಲೋ ಹುಡುಕಿದೆ… ಪ್ರಸ್ತುತಿಗಳು ಬಹಳ ಕಾಲ ಮನಸ್ಸಿನಲ್ಲುಳಿಯುತ್ತವೆ. ಶೃತಿ, ರಾಗ ತಾಳ, ಸಾಹಿತ್ಯ ಶುದ್ಧತೆಯೊಂದಿಗಿನ ಲಘು ಸಂಗೀತದ ಈ ಹಾಡುವಿಕೆಯು ಮನ ಗೆದ್ದಿತು.ಇಲ್ಲಿ ಉತ್ತಮ ಸಾಥಿಯನ್ನು ನೀಡಿ ಗಾಯನದ ಮಾಧುರ್ಯವನ್ನು ಹೆಚ್ಚಿಸಿದವರು ಕೀಬೋರ್ಡ್‌ನಲ್ಲಿ ರಜಾಕ್‌ ಪಯ್ಯನಾಡು, ಗಟಾರ್‌-ಶರತ್‌ ಹಳೆಯಂಗಡಿ, ತಬಲಾ- ಮಾಧವ ಆಚಾರ್ಯ.

ವಿದ್ಯಾಲಕ್ಷ್ಮೀ ಕಡಿಯಾಳಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ