ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ ಸಪ್ತ ಭಾಗವತರ ಯಕ್ಷ ಸಪ್ತಸ್ವರ

ಸಪ್ತ ಸ್ವರ ನೃತ್ಯವರ್ಷ ದರ್ಶನ ತಾಳಮದ್ದಲೆ ಯಕ್ಷರಂಗ ಪ್ರಯೋಗ

Team Udayavani, Jun 14, 2019, 5:00 AM IST

ಸತೀಶ್‌ ಶೆಟ್ಟಿ ಪಟ್ಲ ಭಾಗವತರು ಸ್ಥಾಪಕಾಧ್ಯಕ್ಷರಾಗಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್‌ ವತಿಯಿಂದ ಮಂಗಳೂರಿನ ಅಡ್ಯಾರ್‌ನಲ್ಲಿ ಜೂ. 2ರಂದು ಜರಗಿದ ಯಕ್ಷಗಾನ ಪರಂಪರೆಯ ವಿವಿಧ ಕಾರ್ಯಕ್ರಮಗಳ ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ “ಯಕ್ಷ ಸಪ್ತ ಸ್ವರ’ದಲ್ಲಿ ಏಳು ಮಂದಿ ಪ್ರಸಿದ್ಧ ಭಾಗವತರು ಏಕಕಾಲದಲ್ಲಿ ಒಂದೇ ವೇದಿಕೆಯಲ್ಲಿ ಭಾಗವಹಿಸಿದರು. ಈ ಮೂಲಕ ಯಕ್ಷ “ಸಪ್ತ’ಸ್ವರವನ್ನು ಅಭಿಮಾನಿಗಳಿಗೆ ಅತ್ಯಪೂರ್ವ ಅನುಭವವಾಗಿ ಹರಿಸಿದರು.

ಭಾಗವತರು: ಹೊಳ್ಳ, ಅಮ್ಮಣ್ಣಾಯ, ಪುಣಿಂಚಿತ್ತಾಯ, ಕನ್ನಡಿಕಟ್ಟೆ, ಪ್ರಸಾದ್‌ ಬಲಿಪ (ತೆಂಕು), ನಗರ, ಹಿಲ್ಲೂರು (ಬಡಗು), ಚೌಕಿಪೂಜೆ, ಅಬ್ಬರ ತಾಳದ ಬಳಿಕ ಚೆಂಡೆ ಜುಗಲ್‌ ಬಂದಿ- ಪೀಠಿಕೆ ಸ್ತ್ರೀವೇಷ, ಉದ್ಘಾಟನಾ ಸಮಾರಂಭ. ಆ ಬಳಿಕ ಬಹು ನಿರೀಕ್ಷಿತ ಯಕ್ಷ ಸಪ್ತಸ್ವರ. ಪುಷ್ಪರಾಜ್‌ ಇರಾ ಅವರ ನಿರೂಪಣೆ ಈ ಸಪ್ತಸ್ವರಕ್ಕೆ ಸಕಾಲಿಕ ಹಿನ್ನೆಲೆ ಒದಗಿಸಿತು.

ತೆಂಕುತಿಟ್ಟಿನ ಐವರು ಭಾಗವತರು ನಾಟಿರಾಗದಲ್ಲಿ ಮುದದಿಂದ ನಿನ್ನ ಕೊಂಡಾಡುವೆ- ಗಣಪತಿ ಸ್ತುತಿಯನ್ನು ಪ್ರಸ್ತುತಪಡಿಸಿದರು.

ಇಲ್ಲಿ ಭಾಗವತರ ದ್ವಂದ್ವ ಹಾಡುಗಾರಿಕೆಗಳು ಯಕ್ಷಗಾನಾಭಿಮಾನಿಗಳಿಗೆ ವಿಶೇಷ ಕೊಡುಗೆಯಂತಾಯಿತು. ಅಮ್ಮಣ್ಣಾಯರು ಪಂಚವಟಿಯ ರಾಘವ ನರಪತಿ ಸುಣು ಮಾಮ ವಚನಂ ಹಾಡಿದರೆ ಬಲಿಪ ಪ್ರಸಾದರು ಮಧ್ಯಮಾವತಿಯಲ್ಲಿ ಪ್ರಸ್ತುತಪಡಿಸಿದ ವೀರ ದಶರಥ ನೃಪತಿ ಇನಕುಲವಾರಿಧಿಗೆ ಪ್ರತಿ ಚಂದ್ರಮ ಹಾಡು ಸ್ಮರಣೀಯವಾಯಿತು. ಪುಣಿಂಚಿತ್ತಾಯ- ಕನ್ನಡಿಕಟ್ಟೆ (ತೆಂಕು) ಅವರು ದ್ವಂದ್ವ ಭಾಗವತಿಕೆಯಲ್ಲಿ ಶಶಿಪ್ರಭಾ ಪರಿಣಯದ ಮಾತನಾಡು ಮತಿವಂತ ಪ್ರೀತ ಹಾಗೂ ನಗರ. ಹಿಲ್ಲೂರು ಅವರು (ಬಡಗು) ಧರ್ಮಾಂಗದ ದಿಗ್ವಿಜಯದ ಹರುಷವಾಯಿತು ನಿನ್ನ ವಚನವು ಹಾಡಿದರು.

ಆ ಬಳಿಕ ನೃತ್ಯವರ್ಷ ದರ್ಶನ. ಕಲಾವಿದರು ಅಷ್ಟದಿಕಾ³ಲಕ ವಂದನಂ ಪರಿಕಲ್ಪನೆಯನ್ನು ಇಲ್ಲಿ ಸಾಕಾರಗೊಳಿಸಿದರು. ಪುಣಿಂಚಿತ್ತಾಯ ಮತ್ತು ಕನ್ನಡಿಕಟ್ಟೆ ಭಾಗವತರು. ಇಲ್ಲಿ ಅಷ್ಟದಿಕಾ³ಲಕರ ಸ್ವರೂಪ, ಅವರ ಕರ್ತವ್ಯ ಸ್ಥಾನ ಮುಂತಾದ ವಿವರಗಳನ್ನು ನಾಟ್ಯಸಹಿತ ರಕ್ಷಿತ್‌ ಶೆಟ್ಟಿ ಬಳಗದವರು ಪ್ರಸ್ತುತಪಡಿಸಿದರು; ಮಾರ್ನಾಡ್‌, ನೆಲ್ಯಾಡಿ, ಪ್ರಶಾಂತ್‌ ಶೆಟ್ಟಿ, ನಿಟ್ಟೆ, ಅಡ್ಕ, ಉಚ್ಚಿಲ. ನಾಟ್ಯ ಸಹಿತವಾದ ವರ್ಣನೆಯು ಉಲ್ಲೇಖನೀಯ. ವಾಸುದೇವರಂಗ ಭಟ್‌ ಅವರು ಈ ಹಾಡುಗಳನ್ನು ಸಂಸ್ಕೃತದಿಂದ ಆಯ್ಕೆ ಮಾಡಿದ್ದರು. ಯಕ್ಷ- ನಾಟ್ಯ ಸಂಗಮದ ಈ ಅಭಿವ್ಯಕ್ತಿ ಹೊಸತನದ ಯಶಸ್ವೀ ಪ್ರಯೋಗವೆನಿಸಿತು.

ಅಪರಾಹ್ನದ ನಿರೀಕ್ಷಿತ ತಾಳಮದ್ದಲೆಯ ಪ್ರಸಂಗ ಇಂದ್ರಜಿತು ಕಾಳಗ. ಸುರೇಶ್‌ ಶೆಟ್ಟಿ, ಸಿರಿಬಾಗಿಲು ಅವರ ಭಾಗವತಿಕೆ. ಬೊಳಿಂಜಡ್ಕ, ವಗೆನಾಡು ಹಿಮ್ಮೇಳ. ಕಲ್ಚಾರ್‌, ಕುಕ್ಕುವಳ್ಳಿ, ಸದಾಶಿವ ಆಳ್ವ, ಬೊಳಂತಿಮೊಗರು, ವಿಜಯಶಂಕರ ಆಳ್ವ, ಪೆರ್ಮುದೆ ಅವರು ಅರ್ಥದಾರಿಗಳು. ಭಾಸ್ಕರ ರೈ ಅವರ ರಾಮನ ಪಾತ್ರದಲ್ಲಿ ಹೇಳಿದಂತೆ: “ಇಂದ್ರಜಿತು ಸಹಿತ ರಾಕ್ಷಸರ ಮಾಯಾ ವಿದ್ಯೆಯು ತಾಮಸಿ ಪ್ರಭಾವವನ್ನಷ್ಟೇ ಹೊಂದಿದೆ. ಇದು ಶಾಶ್ವತವಲ್ಲ. ಸಾತ್ವಿಕ ತೇಜಸ್ಸಿನ ಎದುರು ಈ ಅಸುರಶಕ್ತಿಗಳು ಸೋಲಲೇಬೇಕು’. ಇದು ಪ್ರಸಂಗ ದ ಆಶಯವೂ ಹೌದು. ಬಳಿಕ ಸಭಾ ಕಾರ್ಯಕ್ರಮ- ಡಾ| ಎಂ. ಪ್ರಭಾಕರ ಜೋಷಿ ಅವರಿಗೆ ಪಟ್ಲ ಪ್ರಶಸ್ತಿ ಪ್ರದಾನ.

ನಂತರ ಕುರುಕ್ಷೇತ್ರಕ್ಕೊಂದು ಆಯೋಗ ಎಂಬ ಯಕ್ಷರಂಗ ಪ್ರಯೋಗ. ದೇರಾಜೆ ಸೀತಾರಾಮಯ್ಯ ಅವರ ರಚನೆ. ಕದ್ರಿ ನವನೀತ ಶೆಟ್ಟಿ ಅವರ ರಂಗ ಪರಿಕಲ್ಪನೆ, ನಿರೂಪಣೆ. ಕುರುಕ್ಷೇತ್ರದ ಘಟನಾವಳಿಯ ಸಮಗ್ರ ಮರು ವಿಶ್ಲೇಷಣೆ ಈ ಪ್ರಸಂಗದ ವೈಶಿಷ್ಟ್ಯ. ಭಾಗವತಿಕೆ: ಹೊಸಮೂಲೆ, ಪೊಳಲಿ, ಬಳ್ಳಮಂಜ, ತಲಪಾಡಿ, ಕಡಂಬಳಿತ್ತಾಯ, ನೆಕ್ಕರೆ ಮೂಲೆ, ಕೌಶಿಕ್‌.

ಆಯೋಗದ ಮುಂದೆ: ಸೂರಿಕುಮೇರು, ವಿಟ್ಲ, ಶೆಟ್ಟಿಗಾರ್‌, ಸರಪಾಡಿ, ಉಜಿರೆ, ಉಬರಡ್ಕ, ದಿವಾಣ, ಪೆರ್ಮುದೆ, ಕಟೀಲು, ಗೋಣಿಬೀಡು, ಧರ್ಮಸ್ಥಳ, ಅಮ್ಮುಂಜೆ, ಕಾವಳಕಟ್ಟೆ, ಕನ್ನಡಿಕಟ್ಟೆ, ನಿಟ್ಟೆ, “ಆಯೋಗ’ದ ನ್ಯಾಯಮೂರ್ತಿಗಳಾಗಿ ಶಾನಾಡಿ ಅಜಿತ್‌ಕುಮಾರ್‌ ಹೆಗ್ಡೆ.
ತಾಳಮದ್ದಲೆ ಮತ್ತು ಈ ಯಕ್ಷಗಾನದಲ್ಲಿ ಸಮಕಾಲೀನ ಪ್ರಸಿದ್ಧ ಕಲಾವಿದರ ಸಂಗಮ ಉಲ್ಲೇಖನೀಯ. ಬಳಿಕ ಕೊಳತ್ತಮಜಲು ಅವರ ಸಂಯೋಜನೆಯಲ್ಲಿ ಜರಗಿದ ಹಾಸ್ಯ ಕಾರ್ಯಕ್ರಮದಲ್ಲಿ ಬಂಟ್ವಾಳ, ಕಟೀಲು, ಉಜಿರೆ, ಕಡಬ, ಕೊಡಪದವು, ಬಂಗಾಡಿ ಅವರು ರಂಜಿಸಿದರು.

– ಮನೋಹರ ಪ್ರಸಾದ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ