ಸಂಜೀವ ಬಳೆಗಾರ ಅವರಿಗೆ ಸರ್ಪಂಗಳ ಪ್ರಶಸ್ತಿ

Team Udayavani, Jul 26, 2019, 5:00 AM IST

ಕಟೀಲು ಮೇಳದ ಸುಮಾರು ನಾಲ್ಕು ದಶಕಗಳ ಇತಿಹಾಸವನ್ನು ಅವಲೋಕಿಸುವಾಗ ಉಲ್ಲೇಖೀಸಬಹುದಾದ ಮೇಲ್ಪಂಕ್ತಿಯ ಕಲಾವಿದರಲ್ಲಿ ಸಂಜೀವ ಬಳೆಗಾರ, ಶಂಕರನಾರಾಯಣ ಓರ್ವರು. ಅವರು “ಯಶೋಮತಿ ಸಂಜೀವಣ್ಣ’ ಎಂದೇ ಜನಪ್ರಿಯರು. ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಬೆಳಗಿನ ಜಾವ ಕರುಣರಸ ಪೂರ್ಣವಾಗಿ ಅನಾವರಣಗೊಳ್ಳುವ ಕಥಾಕಲ್ಪನೆಗೆ ಕಳೆಗಟ್ಟಿದ್ದೇ ಸಂಜೀವ ಬಳೆಗಾರರಿಂದಾಗಿ. ಪೌರಾಣಿಕ ಕಥಾವರಣದಲ್ಲಿದ್ದುಕೊಂಡೇ ವರ್ತಮಾನದ ಸದ್ಗಹಿಣಿಯ ಮಾನಸಿಕ ತುಮುಲವನ್ನು ಅಭಿವ್ಯಕ್ತಿಸುವ ಯಶೋಮತಿಯ ಪಾತ್ರ ಜನಮಾನಸದಲ್ಲಿ ಉಳಿದಿದೆ. ಬಳೆಗಾರರ ಜೊತೆಗೆ ಅರುಣಾಸುರನಾಗಿ ಮೆರೆದವರು ಹಲವರಿದ್ದಾರೆ. ಈ ನೆಪದಲ್ಲಿ ಕೀರ್ತಿಶೇಷ ಕೇದಗಡಿ ಗುಡ್ಡಪ್ಪ ಗೌಡರನ್ನು ಇಲ್ಲಿ ಸ್ಮರಿಸಿಕೊಳ್ಳಬೇಕು.

ಬಳೆಗಾರರು ಗರತಿಯಾಗಿ ರಂಗದ ಮೇಲೆ ಹೇಗೆ ಸಾತ್ವಿಕ ಭಾವದಿಂದ ಕಾಣಿಸಿಕೊಳ್ಳುತ್ತಾರೊ ಹಾಗೆಯೇ ನಿಜ ಬದುಕಿನಲ್ಲಿಯೂ. ಬಡಗಿನ ಇಡಗುಂಜಿ, ಅಮೃತೇಶ್ವರಿ ಮೇಳಗಳಲ್ಲಿ ತಿರುಗಾಟ ನಡೆಸಿದ ಅವರು ತೆಂಕು ತಿ ಟ್ಟಿನ ಬಗ್ಗೆ ಒಲವನ್ನು ಹೊಂದಿ ಸುರತ್ಕಲ್‌ ಮೇಳಕ್ಕೆ ಬಂದರು. ಬಡಗುತಿಟ್ಟಿನವರಾಗಿದ್ದಾಗ್ಯೂ ಕಟೀಲು ಮೇಳ ಸೇರಿ ಶ್ರೀದೇವಿಯ ಪಾತ್ರದಲ್ಲಿ ಮೆರೆದಂಥ ಕೋಡಿ ಕುಷ್ಟ ಗಾಣಿಗರ ಹಾದಿಯನ್ನು ಸಂಜೀವ ಬಳೆಗಾರರು ಅನು ಸರಿಸಿದರು. ಇವರಿಬ್ಬರು ಮುಂದೆ ಬಡಗುತಿಟ್ಟಿನ ಅನೇಕ ವೇಷಧಾರಿಗಳು ತೆಂಕುತಿಟ್ಟಿಗೆ ವಲಸೆ ಬರಲು ಕಾರಣರಾದರು.

ಈಗ ವೃತ್ತಿಕ್ಷೇತ್ರದಿಂದ ನಿವೃತ್ತರಾಗಿರುವ ಕೋಡಿ ಕುಷ್ಟ ಗಾಣಿಗರಾಗಲಿ, ಪ್ರವೃತ್ತರಾಗಿರುವ ಸಂಜೀವ ಬಳೆಗಾರರಾಗಲಿ, ಹಾರಾಡಿ ನಾರಾಯಣ ಗಾಣಿಗ-ಕೋಟ ವೈಕುಂಠರಿಂದ ಪ್ರತ್ಯಕ್ಷ-ಪರೋಕ್ಷ ಪ್ರಭಾವಕ್ಕೆ ಒಳಗಾದವರು ಎಂಬುದನ್ನು ಬಲ್ಲವರು ಬಲ್ಲರು. ಬಡಗುತಿಟ್ಟಿನ ಶೈಲಿಯ ವೇಷಧಾರಿಗಳಾದ್ದರೂ ತೆಂಕುತಿಟ್ಟಿನ “ಸ್ವ-ರೂಪ’ಕ್ಕೆ ಬೆಸೆದುಕೊಳ್ಳುವ ಕುಶಲಕರ್ಮಿಗಳಿವರು. ಚಂದ್ರಮತಿ, ದಮಯಂತಿ, ರೇಣುಕೆ, ಸುಭದ್ರೆಯಂಥ ಪಾತ್ರಗಳಲ್ಲಿ ಸ್ವಂತ ಛಾಪು ಮೂಡಿಸಿದ ಸಂಜೀವ ಬಳೆಗಾರರಿಗೆ ಸುಮಾರು 45 ವರ್ಷಗಳ ಅವಿ ಚ್ಛಿನ್ನ ತಿರುಗಾಟದ ಅನುಭವವಿದೆ. ಎಪ್ಪತ್ತರ ಹರೆಯದ ಅವರು ಈಗಲೂ ಕಟೀಲು ಮೇಳದಲ್ಲಿ ಸೇವಾನಿರತ. ಸಂಜೀವ ಬಳೆಗಾರರವರನ್ನು ಜು. 27ರಂದು ಉಡುಪಿಯ ಪುರಭವನದಲ್ಲಿ ಸರ್ಪಂಗಳ ಸುಬ್ರಹ್ಮಣ್ಯ ಭಟ್‌ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ನೇಪಥ್ಯ ಕಲಾವಿದ ವಿಷ್ಣು ಸಜಂಕಿಲ ಅವರಿಗೆ ಸರ್ಪಂಗಳ ಪುರಸ್ಕಾರ ನೀಡಲಾಗುತ್ತಿದೆ. “ಭೀಮಭಾರತ’ ಯಕ್ಷಗಾನ ಪ್ರದರ್ಶನವೂ ಇದೆ.

ಎನ್‌. ಟಿ. ರಾವ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ