ಈಶಾವಾಸ್ಯದ ಭೀಷ್ಮನ ಗುರುಕುಲದಲ್ಲಿ ಹಳೆ ಬೇರು ಹೊಸ ಚಿಗುರು ಸಂಗಮ

Team Udayavani, Aug 23, 2019, 5:00 AM IST

ಎಂಟು ತಾಸಿನಲ್ಲಿ ಭೀಷ್ಮನ ಎಂಟು ನೂರು ವರ್ಷಗಳ ಸುದೀರ್ಘ‌ ಜೀವನಾನುಭವದ ಧಾರೆ. ಪ್ರಬುದ್ಧರಾಗಬೇಕೆಂಬ ಹಂಬಲದಿಂದ ವಿವಿಧ ಪಾತ್ರಪೋಷಣೆಗೆ ಮುಂದಾದ ಕಲಾವಿದರು. ಅವರಿಗೆಲ್ಲ ಯಕ್ಷಗಾನದ ಅರ್ಥದ ಒಳಮರ್ಮ, ಪುರಾಣದ ಮಹತ್ವ, ಪಾತ್ರಗಾರಿಕೆಯಲ್ಲಿ ಅಳವಡಿಸಬೇಕಾದ ರಂಗತಂತ್ರದ ಸೂಕ್ಷ್ಮಗಾರಿಕೆಯ ಪಾಠ. ಇದಿಷ್ಟರಲ್ಲಿ ತಯಾರಾದ ಕಲಾವಿದರು ಅನೇಕ. ಉತ್ಸಾಹ ಹೆಚ್ಚಿಸಿಕೊಂಡವರು ಒಂದಷ್ಟು ಮಂದಿ. ಧೈರ್ಯ ತುಂಬಿಸಿಕೊಂಡವರು ಮತ್ತೂಂದಷ್ಟು ಮಂದಿ. ನಾನೂ ಸಮರ್ಥವಾಗಿ ಪಾತ್ರ ನಿಭಾಯಿಸಬಲ್ಲೆ ಎಂಬ ಆತ್ಮವಿಶ್ವಾಸ ವೃದ್ಧಿಸಿಕೊಂಡವರು ಇನ್ನನೇಕರು. ಒಟ್ಟು ಕಾರ್ಯಕ್ರಮದ ಉದ್ದೇಶ ಕೂಡಾ ಇದೇ ಆಗಿತ್ತು. ಇಲ್ಲಿ ವ್ಯಕ್ತಿ ಪೂಜೆ ಇರಲಿಲ್ಲ. ಯಕ್ಷಗಾನದ ಶಿಕ್ಷಾರ್ಥಿಗಳಿಗೆ ಬೋಧನೆಯೇ ಮುಖ್ಯವಾಗಿತ್ತು. ಕಳೆದ ಬಾರಿ ಸತ್ಯ ಪದದ ಮೂಲಕ ರಾಮನ ಪಾತ್ರದ ಸುತ್ತ ಚಿತ್ರಣ ಇದ್ದರೆ ಈ ಬಾರಿ ಭೀಷ್ಮ ಪದದ ಮೂಲಕ ಭೀಷ್ಮನ ಸುತ್ತ ಗಿರಕಿ. ರಾಧಾಕೃಷ್ಣ ಕಲ್ಚಾರರ ಭೀಷ್ಮನಿಗೆ ಸಂವಾದಿಯಾಗಿ ಉದಯೋನ್ಮುಖರು, ಕಲಿಕಾರ್ಥಿಗಳು. ಜತೆಗೆ ವಾಸುದೇವ ರಂಗಾಭಟ್ಟರು, ಹರೀಶ ಬೊಳಂತಿಮೊಗರು.

ಮದ್ಲೆಗಾರ, ವಿಮರ್ಶಕ ಕೃಷ್ಣಪ್ರಕಾಶ ಉಳಿತ್ತಾಯರ ವಾಮಂಜೂರು ಸಮೀಪದ ಪೆರ್ಮಂಕಿಯ ಈಶಾವಾಸ್ಯ ಮನೆಯಲ್ಲಿ ಈಶಾವಾಸ್ಯ ಪ್ರತಿಷ್ಠಾನ ವತಿಯಿಂದ ಶಿಕ್ಷಣಾತ್ಮಕ ತಾಳಮದ್ದಳೆ ಹಾಗೂ ಈಶಾವಾಸ್ಯ ಪುರಸ್ಕಾರ ನಡೆಯಿತು. ದೇವವ್ರತನಾಗಿ ನಂತರ ಭೀಷ್ಮನಾಗಿ ಕಲ್ಚಾರರು ದೇವವ್ರತನ ಬಿರುಸು, ತಂದೆ ಶಂತನುವಿಗೆ ಮದುವೆ ಮಾಡಿಸಲು ದಾಶರಾಜನ ಜತೆ ಬೇಡಿಕೆಯಿಟ್ಟ ಪರಿ, ದಾಶರಾಜನ ಶರತ್ತಿನಂತೆ ಹಸ್ತಿನೆಯ ಸಿಂಹವಿಷ್ಠರ, ಮದುವೆಯಾಗುವ ಹಂಬಲವನ್ನು ತ್ಯಾಗ ಮಾಡಿ ಭೀಷ್ಮನಾಗಿ ಮೆರೆದುದನ್ನು ಮನೋಜ್ಞವಾಗಿ ಚಿತ್ರಿಸಿದರು. ಭೀಷ್ಮ ಅಂಬೆಯ ಸಂವಾದದಲ್ಲಿ ಬೊಳಂತಿಮೊಗರು ಜತೆ ನಡೆದ ಸಂವಾದ, ಪರಶುರಾಮ ಭೀಷ್ಮರ ಸಂವಾದದಲ್ಲಿ ರಂಗಾ ಭಟ್ಟರ ಜತೆಗಿನ ಮಾತುಕತೆ, ಭೀಷ್ಮಪರ್ವದಲ್ಲಿ ಕೃಷ್ಣನ ಜತೆ ಕರ್ಮಬಂಧದ ಕುರಿತಾದ ಜಿಜ್ಞಾಸೆ ಶಿಕ್ಷಣಾರ್ಥಿಗಳ ಪಾಲಿಗೆ ಸುಗ್ರಾಸ.

ಶಂತನುವಾಗಿ ಶ್ರೀನಿವಾಸ ಮೂರ್ತಿ ಮಡವು, ಮಂತ್ರಿ ಸುನೀತಿಯಾಗಿ ಆದಿತ್ಯ ಶರ್ಮ, ಸತ್ಯವತಿಯಾಗಿ ದೀಪ್ತಿ ಭಟ್‌ ಗಂಟಾಲ್‌ಕಟ್ಟೆ, ದಾಶರಾಜನಾಗಿ ಆದರ್ಶ ಕಟ್ಟಿನಮಕ್ಕಿ, ಅಂಬೆಯಾಗಿ ವಿದುಷಿ ಸುಮಂಗಲಾ ರತ್ನಾಕರ ರಾವ್‌, ಹೋತ್ರವಾಹನನಾಗಿ ಸಾವಿತ್ರಿ ಶಾಸ್ತ್ರಿ, ಅಕೃತೌವ್ರಣನಾಗಿ ವಿಭಾ ಕೃಷ್ಣ ಪ್ರಕಾಶ ಉಳಿತ್ತಾಯ, ಕೌರವನಾಗಿ ದಿನೇಶ್‌ ಶರ್ಮ ಕೊಯ್ಯೂರು, ಅಭಿಮನ್ಯುವಾಗಿ ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ, ಅರ್ಜುನನಾಗಿ ವಿದ್ಯಾಪ್ರಸಾದ್‌ ಉಡುಪಿ, ಕೃಷ್ಣನಾಗಿ ಬಾಲಕೃಷ್ಣ ಭಟ್‌ ಪುತ್ತಿಗೆ ಪಾತ್ರನಿರ್ವಹಿಸಿದ್ದರು. ಭಾಗವತಿಕೆಯಲ್ಲಿ ಸುರೇಂದ್ರ ಪಣಿಯೂರು, ಎಸ್‌.ಎಲ್‌. ಗೋವಿಂದ ನಾಯಕ್‌ ಪಾಲೆಚ್ಚಾರ್‌, ಹರೀಶ್‌ ಬೊಳಂತಿಮೊಗರು, ಪೃಥ್ವಿರಾಜ್‌ ಕವತ್ತಾರು, ರಾಜೇಶ್‌ ಭಟ್‌ ನಂದಿಕೂರು, ಚೆಂಡೆ ಮದೆÉಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್‌, ಲಕೀÒ$¾ಶ ಅಮ್ಮಣ್ಣಾಯ, ಕೃಷ್ಣ ಪ್ರಕಾಶ್‌ ಉಳಿತ್ತಾಯ, ವೆಂಕಟರಮಣ ಉಳಿತ್ತಾಯ, ಚೈತನ್ಯಕೃಷ್ಣ ಪದ್ಯಾಣ, ರತ್ನಾಕರ ಶೆಣೈ, ಪೂರ್ಣೇಶ್‌ ಆಚಾರ್ಯ, ಕೌಶಿಕ್‌ ರಾವ್‌, ಕೌಶಲ್‌ ರಾವ್‌ ಭಾಗವಹಿಸಿದ್ದರು. ಒಟ್ಟಂದದಲ್ಲಿ ಅನುಭವಿಗಳ ಹಾಗೂ ಕಲಿಯುವವರ ರಸಪಾಕ.

ಭೂಮಿಯನ್ನೇ ಅಡಿಮೇಲು ಮಾಡಿದ ಮಳೆಯಿಂದಾಗಿ ಪಾತ್ರಹಂಚಿಕೆಯ ಲೆಕ್ಕಾಚಾರವೆಲ್ಲ ಬುಡಮೇಲು ಆಗಿ ಕೊನೆಕ್ಷಣದಲ್ಲಿ ದೊರೆತ ಪಾತ್ರವನ್ನು ಎಲ್ಲ ಕಲಾವಿದರೂ ಒಪ್ಪವಾಗಿ ನಿರ್ವಹಿಸಿದ್ದು ಕಲಾಕೌಶಲ ಹಾಗೂ ಕಲಾವಲಯದಲ್ಲಿ ಎದುರಾಗುವ ಸವಾಲನ್ನು ಎದುರಿಸಲು ಮಾಡಿದ ಪೂರ್ವಸಿದ್ಧತಾ ಪರೀಕ್ಷೆಯಂತಿತ್ತು. ಸಾಮಾನ್ಯವಾಗಿ ತಾಳಮದ್ದಳೆಯಲ್ಲಿ ತೆಗೆದುಕೊಳ್ಳದ ಪಾತ್ರಗಳನ್ನೂ ಆಯ್ದುಕೊಳ್ಳಲಾಗಿತ್ತು. ಕೂಟಗಳಲ್ಲಿ ಭಾಗವಹಿಸುವ ಅರ್ಥಧಾರಿಗಳ ಜತೆಗೆ ಕಲಿಯುವ ಒಳಮನಸ್ಸಿನ ತುಡಿತವುಳ್ಳವರಿಗೆ ಅರ್ಥ ಹೇಳಿದ ಸಂಭ್ರಮ. ಅಳುಕಿರಲಿಲ್ಲ. ಮರೆತಿರಲಿಲ್ಲ. ಕಲಿಯಲು ಸಮಯವೇ ಇರಲಿಲ್ಲ. ಗುರುಪೀಠದಲ್ಲಿದ್ದ ಹರೀಶ್‌ ಬೊಳಂತಿಮೊಗರು ಅವರು ತಿದ್ದಿಕೊಳ್ಳಬಹುದಾದ ಅಂಶಗಳನ್ನು ತಿಳಿಸಿದರು. ಕಲ್ಚಾರ್‌ ಅವರು ಹೊಸ ಕಲಾವಿದರ ಜತೆಗೆ ಅರ್ಥ ಹೇಳಿದ ರೀತಿಯೇ ಸೊಗಸು. ಶಿಕ್ಷಕನೊಬ್ಬ ವಿದ್ಯಾರ್ಥಿಗಳಿಗೆ ಬೋಧಿಸುವ ಮಾದರಿಯಲ್ಲಿ, ಹಿರಿಯ ಅರ್ಥಧಾರಿಯ ಜತೆಗೆ ವೇದಿಕೆ ಹಂಚಿಕೊಳ್ಳುತ್ತಿದ್ದೇನೆ ಎಂಬ ಭಯಬೀಳದಂತೆ, ಸಂವಾದಗಳಲ್ಲಿ ಎದುರಾಗುವ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕಂಬ ನೆಲೆಗಟ್ಟನ್ನು, ಪ್ರಸಂಗದ ವ್ಯಾಪ್ತಿಯಲ್ಲಿ ಚೌಕಟ್ಟು ಮೀರದೇ ಕಥಾಹಂದರವನ್ನು ಹೇಗೆ ಪ್ರತಿಷ್ಠೆ ಮಾಡಬೇಕೆಂದು ಬೋಧಿಸಿದ ಮಾದರಿಯಲ್ಲಿ ಅರ್ಥವನ್ನು ಕೊಂಡೊಯ್ದರು.

ಬಿಡದೆ ಸುರಿದ ಮಳೆಯಲ್ಲಿ ಮನೆಯೊಳಗೆ ನಡೆದ ಸೀಮಿತ ಸಂಖ್ಯೆಯ ಪ್ರೇಕ್ಷಕರನ್ನು ಒಳಗೊಂಡ ಒಬ್ಬ ಪ್ರಸಿದ್ಧ ಕಲಾವಿದನನ್ನು ಕೇಂದ್ರೀಕರಿಸಿ ನಡೆದ ಕಾರ್ಯಕ್ರಮ. ಕಲಾಸೌಂದರ್ಯದ ವಿನಿಮಯ ಆಗುವುದು ಇಂತಹ ಪ್ರೇಕ್ಷಕರು ಇದ್ದಾಗ. ಕಲಾವಿದ ಹಾಗೂ ಪ್ರೇಕ್ಷಕರ ನಡುವಿನ ಸಂವಹನ, ಕಲಾವಿದನ ಅಭಿವ್ಯಕ್ತಿ ಪ್ರೇಕ್ಷಕರಿಗೆ ತಲುಪುವುದು, ಪ್ರೇಕ್ಷಕರ ಅಭಿಪ್ರಾಯ ಕಲಾವಿದನಲ್ಲಿ ಮಿಳಿತವಾಗುವುದು ಆಗಲೇ. ಕಲೆ ಸಹೃದಯನಲ್ಲಿ ಐಕ್ಯವಾದರೆ ಇನ್ನೊಂದು ಕಲಾ ಸೃಷ್ಟಿಗೆ ಬೀಜರೂಪವಾಗುತ್ತದೆ. ಇದಕ್ಕೆ ಕಲಾವಿದ ಹಾಗೂ ಪ್ರೇಕ್ಷಕನ ನಡುವಿನ ಅಂತರ ಕಡಿಮೆಯಾಗುವುದು ಮುಖ್ಯ. ಒಟ್ಟು ಕಾರ್ಯಕ್ರಮದ ಸೊಬಗು ಹಾಗೂ ಉದ್ದೇಶ ಇರುವುದೇ ಇದರಲ್ಲಿ. ಕಲಾವಿದನ ಭಾವನೆಗಳು ಟಿಸಿಲೊಡೆಯುವಾಗ ಪ್ರೇಕ್ಷಕನ ಕಣ್ಣಲ್ಲಿ ಹೊಳೆಯುವ ಮಿಂಚು, ಜಿನುಗುವ ಹನಿ ನೀರು, ಮೂಡುವ ಮಂದಹಾಸ, ಹೊರಡುವ ಉದ್ಗಾರ ಕಲಾವಿದನ ಹೃದಯದಲ್ಲಿ ನೆಲೆಯಾಗುತ್ತದೆ. ಇದೇ ಸಾರ್ಥಕತೆ.

ಕಲ್ಚಾರ್‌ ಅವರಿಗೆ ಈಶಾವಾಸ್ಯ ಪುರಸ್ಕಾರ ನೀಡಲಾಯಿತು. ಕೃಷ್ಣಪ್ರಕಾಶ ಉಳಿತ್ತಾಯರು ಬರೆದ ಅಗರಿ ಮಾರ್ಗ ಕೃತಿಯ ಲೋಕಾರ್ಪಣೆ ನಡೆಯಿತು. ಸುಧಾಕರ ಜೈನ್‌ ಹೊಸಬೆಟ್ಟುಗುತ್ತು ಅವರು ಕಲ್ಚಾರ್‌ ಜತೆ ಆಪ್ತಸಂವಾದ ನಡೆಸಿದರು.

ಲಕ್ಷ್ಮೀ ಮಚ್ಚಿನ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ