ಧ್ವನಿ ಎಬ್ಬಿಸಿದ ಎರಡೇ ಪಾತ್ರಗಳ ಎರಡು ನಾಟಕಗಳು

ಆಟ-ಮಾಟ , ಆಯನ ನಾಟಕದ ಮನೆ ತಂಡದವರ ಪ್ರಸ್ತುತಿ

Team Udayavani, Nov 8, 2019, 4:43 AM IST

ಇಬ್ಬರೇ ಪಾತ್ರಧಾರಿಗಳು ಕಥನವನ್ನು ಕೊಂಡೊಯ್ಯುವ ಗತಿ , ದಿನ ನಿತ್ಯದ ಎಲ್ಲಾ ಗೌಜಿ ಗದ್ದಲದ ನಡುವೆ ಸಾಗುವ ನಾಟಕ ಕೇವಲ ಇಬ್ಬರೇ ಪಾತ್ರಧಾರಿಗಳ ಪ್ರಸ್ತುತಿ ಎಂಬುದನ್ನೇ ಮರೆಯುವಂತೆ ಮಾಡುತ್ತದೆ. ಮಾಹಾದೇವ ಹಡಪದ ಅವರ ನಟನೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ಕುರ್ಚಿ ಟೇಬಲ್‌ಗ‌ಳಷ್ಟೇ ಪರಿಕರಗಳಾಗಿದ್ದವು, ಬೆಳಕು , ಸಂಗೀತ ಹದವಾಗಿ ಹಿತವಾಗಿತ್ತು.

ಮಂಗಳೂರಿನ ಪಾದುವ ಕಾಲೇಜು ವಾರಾಂತ್ಯದಲ್ಲಿ ನಾಟಕ ಪ್ರದರ್ಶನ ಆಯೋಜಿಸುವ ಸಲುವಾಗಿ ವೀಕೆಂಡ್‌ ಥಿಯೇಟರ್‌ ಹಬ್‌ ಯೋಜನೆಯನ್ನು ಹುಟ್ಟು ಹಾಕಿದೆ. ಪ್ರತಿ ಶನಿವಾರ ಸಂಜೆ ರಂಗ ಪ್ರದರ್ಶನವನ್ನು ಏರ್ಪಡಿಸುವುದು ಈ ಯೋಜನೆಯ ಉದ್ದೇಶ.

ಮತ್ತೂಬ್ಬ ಮಾಯಿ
ಥಿಯೇಟರ್‌ ಹಬ್‌ ಉದ್ಘಾಟನೆಯ ದಿನ ಪ್ರದರ್ಶನಗೊಂಡದ್ದು “ಮತ್ತೂಬ್ಬ ಮಾಯಿ’ . ಇದು ಕೇವಲ ಇಬ್ಬರೇ ಪಾತ್ರಧಾರಿಗಳಿದ್ದ ನಾಟಕ . ಅನಂತರ ಪ್ರದರ್ಶನಗೊಂಡ ದ್ವೀಪ ನಾಟಕದಲ್ಲೂ ಕೇವಲ ಇಬ್ಬರೇ ಪಾತ್ರಧಾರಿಗಳು . ಈ ಎರಡೂ ನಾಟಕಗಳ ಸಾಮ್ಯತೆ ಕೇವಲ ಕಾಕತಾಳೀಯ.

ಮತ್ತೂಬ್ಬ ಮಾಯಿ ಇಬ್ಬರೇ ಪಾತ್ರಧಾರಿಗಳು ಸ್ವಗತದಂತೆ ಮಾತನಾಡಿಕೊಂಡು ಆರಂಭಗೊಂಡು ಮುಂದಕ್ಕೆ ಜನ ಸಮೂಹದೊಳಗೆ, ಪೇಟೆಯ ಗದ್ದಲದೊಳಗೆ ಸಾಗುತ್ತಾ ಒಂದು ವಿಷಾದನೀಯ ಘಟನೆಯೊಂದಿಗೆ ಅಂತ್ಯಗೊಳ್ಳುತ್ತದೆ. ನಾಟಕ ಮುಕ್ತಾಯಗೊಂಡಾಗಲೇ ಪ್ರೇಕ್ಷಕನಿಗೆ ತಾನೂ ಕೂಡ ನಾಟಕದ ಪಾತ್ರಧಾರಿ ಹೇಳುವ ಕತೆಯೊಂದಿಗೆ ಹೆಜ್ಜೆಹಾಕಿದ್ದು ಅನುಭವಕ್ಕೆ ಬರುತ್ತದೆ. ಇದು ಈ ನಾಟಕದ ಶಕ್ತಿ.

ರಾಘವೇಂದ್ರ ಪಾಟೀಲರ ರಚನೆಯ ಮತೊಬ್ಬ ಮಾಯಿಯನ್ನು ನಾಟಕ ಪರಿಕಲ್ಪನೆಗೆ ತಂದವರು ಮಹಾದೇವ ಹಡಪದ . ಧಾರವಾಡದ ಆಟ-ಮಾಟ ತಂಡವು ಪ್ರಸ್ತುತ ಪಡಿಸಿದ ಈ ನಾಟಕ ಈಗಾಗಲೇ ಅನೇಕ ಪ್ರದರ್ಶನಗಳನ್ನು ಕಂಡಿದೆ. ಮನೆಯಂಗಳ , ಚಾವಡಿಯಂತಹ ಸಣ್ಣ ಜಾಗದಲ್ಲೂ ಪ್ರದರ್ಶನ ಮಾಡುವ ಸಾಧ್ಯತೆ ಇರುವುದು ಈ ನಾಟಕದ ಇನ್ನೊಂದು ಶಕ್ತಿ .

ಇಂಗ್ಲಿಷ್‌ ಪ್ರಾಧ್ಯಪಕ ಹಾಗೂ ಕಥೆಗಾರನಾಗಿರುವ ಮೂರ್ತಿ ಮತ್ತು ಕನ್ನಡ ಅಧ್ಯಾಪಕ ಪಾಂಡುರಂಗ ಡಿಗಸ್ಕರ್‌ ರಂಗದ ಮೇಲೆ ಬರುವ ಮತ್ತು ಕಾಣುವ ಪಾತ್ರಗಳು. ಮೂರ್ತಿಯ ನಡೆನುಡಿ ಸಾಹಿತ್ಯದ ತಂತ್ರ ಮತ್ತು ತತ್ವವನ್ನು ಪ್ರತಿಪಾದಿಸುವ ರೀತಿಯದ್ದು. ಇದಕ್ಕೆ ವಿರುದ್ಧವಾಗಿ ಡಿಗಸ್ಕರ್‌ ತಾನು ಹೇಳುವುದು ಕತೆಯಲ್ಲ ಜೀವನ ಎಂದು ವಾದಿಸುವ ಜೀವನ ತತ್ವದ ಪ್ರತಿಪಾದಕ.

ಇಬ್ಬರೂ ಪಾತ್ರದಾರಿಗಳು ಕಥೆಯೊಂದನ್ನು ನಿರೂಪಿಸುತ್ತಾ ಪ್ರಸ್ತುತಿ ಪಡಿಸುವ ನಾಟಕವು ಸಾಗುವ ರೀತಿ ಪ್ರಯೋಗ ರಂಗಭೂಮಿಯ ಅದ್ಭುತ ಸಾಧ್ಯತೆಯನ್ನು ತೆರೆದಿಟ್ಟಿತು. ಲಕ್ಷ್ಮೀ ಎಂಬ ಪುಟ್ಟ ಹುಡುಗಿಯು ಕಾಲೇಜು ವಿದ್ಯಾರ್ಥಿ ಜೀವನ ತನಕ ಸಾಗುವ ಬದುಕಿನ ಪಥವನ್ನು ಕಥೆ ಕಟ್ಟಿಕೊಡುತ್ತದೆ. ಲಕ್ಷ್ಮೀಯ ಬಾಲ್ಯದ ಖುಷಿ, ಸಂಭ್ರಮವನ್ನು ಕಟ್ಟಿಕೊಡುವ ಕಥನವು , ಆಕೆ ಕಾಲೇಜು ಮೆಟ್ಟಿಲೇರಿದಾಗ ಗಂಭೀರವಾಗುವುದು , ಬಳಿಕ ಇದ್ದಕ್ಕಿದ್ದಂತೆ ವಿಷಾದದ ತಿರುವು ಪಡೆಯುವುದು, ವಾಮಾಚಾರದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗುವುದರೊಂದಿಗೆ ಲಕ್ಷ್ಮೀಯ ಬದುಕು ಮುಗಿಯುತ್ತದೆ. ಆಗಲೇ ನಾಟಕ ಕೂಡ ಮುಗಿಯುತ್ತದೆ. ಪ್ರೇಕ್ಷಕ ರೆಪ್ಪೆ ಮಿಟುಕಿಸದೆ ನೋಡುವಷ್ಟು ತಲ್ಲೀನತೆಗೆ ಪಾತ್ರಧಾರಿಗಳು ಸೆಳೆದಿರುತ್ತಾರೆ. ಇಬ್ಬರೇ ಪಾತ್ರಧಾರಿಗಳು ಕಥನವನ್ನು ಕೊಂಡೊಯ್ಯುವ ಗತಿ , ದಿನ ನಿತ್ಯದ ಎಲ್ಲಾ ಗೌಜಿ ಗದ್ದಲದ ನಡುವೆ ಸಾಗುವ ನಾಟಕ ಕೇವಲ ಇಬ್ಬರೇ ಪಾತ್ರಧಾರಿಗಳ ಪ್ರಸ್ತುತಿ ಎಂಬುದನ್ನೇ ಮರೆಯುವಂತೆ ಮಾಡುತ್ತದೆ. ಮಾಹಾದೇವ ಹಡಪದ ಅವರ ನಟನೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ಕುರ್ಚಿ ಟೇಬಲ್‌ಗ‌ಳಷ್ಟೇ ಪರಿಕರಗಳಾಗಿದ್ದವು, ಬೆಳಕು , ಸಂಗೀತ ಹದವಾಗಿ ಹಿತವಾಗಿತ್ತು.

ದ್ವೀಪ
ಎರಡನೇ ವಾರ ಆಯನ ನಾಟಕದ ಮನೆ ತಂಡದವರು ಪ್ರಸ್ತುತಿ ಪಡಿಸಿದ “ದ್ವೀಪ’. ಮೂಲ ಆಫ್ರಿಕ್‌ ಕಥೆಯನ್ನು ಕನ್ನಡಕ್ಕೆ ತಂದವರು ಎಸ್‌.ಆರ್‌. ರಮೇಶ್‌ . ನಾಟಕದ ವಿನ್ಯಾಸ ಮತ್ತು ನಿದೇರ್ಶನ ಮಾಡಿದವರು ಕೆ.ಪಿ. ಲಕ್ಷ್ಮಣ. ಈ ನಾಟಕದಲ್ಲೂ ನಟರ ನಟನೆಯೇ ಜೀವಾಳ. ಇಬ್ಬರೇ ಪಾತ್ರಧಾರಿಗಳು ಒಂದೂವರೆ ತಾಸು ಕಥನದೊಳಗೊಂದು ನಾಟಕವನ್ನು ಸೃಷ್ಟಿಸಿ ತಮ್ಮ ಮನೋಜ್ಞ ನಟನೆಯ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಚಂದ್ರಹಾಸ ಉಳ್ಳಾಲ್‌ ಮತ್ತು ಪ್ರಭಾಕರ್‌ ಕಾಪಿಕಾಡ್‌ ಅವರ ಚಿತೋಹಾರಿ ನಟನೆ ಮತ್ತು ಸಂಭಾಷಣೆಯನ್ನು ಪ್ರಸ್ತುತಿ ಪಡಿಸುವ ಶೈಲಿ ಇಡೀ ನಾಟಕದ ಶಕ್ತಿಯಾಗಿತ್ತು.

ಪ್ರಭುತ್ವದ ವಿರುದ್ಧ ಧ್ವನಿ ಎತ್ತಿದಕ್ಕೆ ದ್ವೀಪದಲ್ಲಿನ ಜೈಲಿಗಟ್ಟಲ್ಪಟ್ಟವರು ಪಡುವ ಏಕಾಂಗಿ ಬದುಕಿನ ಯಾತನೆ , ವಿಪರೀತ ದುಡಿಮೆಯ ನೋವು , ಬಿಡುಗಡೆಯೇ ಇಲ್ಲ ಎಂಬ ಸ್ಥಿತಿಗೆ ಬಂದಾಗ ಬದುಕು ಸಾಗಿಸಲು ಪಡುವ ಬವಣೆ ನಾಟಕದ ಕಥಾಹಂದರ . ಒಮ್ಮೆಮ್ಮೊ ತಮ್ಮಷ್ಟಕ್ಕೆ ಕುಚೋದ್ಯ ಮಾಡಿಕೊಂಡು ವಿಷಾದದ ನಗು ಅನುಭವಿಸುವುದು ಇದೆ. ಅದು ಸಮಯ ಕಳೆಯಲಷ್ಟೇ . ತಮ್ಮೊಳಗಿನ ಆಕ್ರೋಶವನ್ನು , ತುಡಿತವನ್ನು ಅಂತಿಗೊನೆ ನಾಟಕವಾಡುವ ಮೂಲಕ ಪ್ರಸ್ತುತ ಪಡಿಸಿದ ತಂತ್ರವು ರಂಗಭೂಮಿಯ ಅಪಾರ ಸಾಧ್ಯತೆಯನ್ನು ಸಮರ್ಥವಾಗಿ ಬಳಸಿಕೊಂಡಂತೆ ಇತ್ತು.

ರಾಜ ಪ್ರಭುತ್ವದ ವಿರುದ್ದ ಧ್ವನಿ ಎತ್ತಿದ ಸಹಜ ಸಾತಂತ್ರ್ಯದ ಮೌಲ್ಯವನ್ನು ಹೇಳುತ್ತಾ , ಕೈದಿಗಳು ಸಹಜವಾಗಿ ಬಯಸುವ ಬಿಡುಗಡೆಯ ಮಾನವೀಯ ತುಡಿತವನ್ನು ಬಿಂಬಿಸುತ್ತಾ ನಾಟಕ ಸಾಗುತ್ತದೆ. ಪ್ರಭುತ್ವದ ದೌರ್ಜನ್ಯವನ್ನು ಖಂಡಿಸುವ ದಾಟಿಯು ಇದು ಈ ಹೊತ್ತಿನ ಸಕಾಲಿಕ ಪ್ರತಿಕ್ರಿಯೆಯಾಗಿಯೂ ಕೇಳಿಸುತ್ತದೆ.

ನಾಟಕವನ್ನು ಸಿದ್ಧ ವೇದಿಕೆಯ ಬದಲಿಗೆ ಮೈದಾನದ ಮೂಲೆಯ ಬಯಲು ಜಾಗದಲ್ಲಿ ಪ್ರದರ್ಶನ ಮಾಡಿದ್ದು, ಆ ಜಾಗವನ್ನೇ ದ್ವೀಪದಂತೆ ಬಿಂಬಿಸಿದ್ದು ಮತ್ತಷ್ಟು ಶಕ್ತಿಶಾಲಿಯಾಗಿ ಮೂಡಿಬರಲು ಕಾರಣವಾಯಿತು.ಪ್ರೇಕ್ಷಕರ ಮಧ್ಯೆಯೇ ಸಾಗುವ ನಟನೆ , ನೈಜತೆಗೆ ಹತ್ತಿರವಾದ ಬೆಳಕು ಸಂಯೋಜನೆ , ವಿಷಾದದ ಸಂಗೀತ ಎಲ್ಲವೂ ನಾಟಕ ಪರಿಣಾಮಕಾರಿಯಾಗಿ ಮೂಡಿಬರಲು ಸಹಕಾರಿಯಾಗಿತ್ತು.

ತಾರಾನಾಥ್‌ ಗಟ್ಟಿ ಕಾಪಿಕಾಡ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ