ದಸರಾ ಉತ್ಸವದಲ್ಲಿ ವಾಲಿ ಮೋಕ್ಷ

Team Udayavani, Oct 18, 2019, 4:23 AM IST

ಸಮಾಜ ಮಂದಿರ ಸಭಾ ಮೂಡಬಿದಿರೆ ಇದರ 74ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಅಂಗವಾಗಿ ಜರುಗಿದ ಪಾರ್ತಿಸುಬ್ಬ ವಿರಚಿತ ವಾಲಿ ಮೋಕ್ಷ ಆಖ್ಯಾನವು ಉತ್ತಮ ಕಲಾವಿದರ ಸಂಯೋಜನೆ , ಉತ್ತಮ ನಿರ್ವಹಣೆ ಹಾಗೂ ಪ್ರಬುದ್ಧ ಪ್ರೇಕ್ಷಕರ ಉಪಸ್ಥಿತಿಯಿಂದ ಒಟ್ಟಂದದ ಯಶಸ್ಸಿಗೆ ಕಾರಣವಾಯಿತು .

ಸೀತಾನ್ವೇಷಣೆಗೆ ಹೊರಟ ಶ್ರೀರಾಮ , ಲಕ್ಷ್ಮಣರು ಕಬಂಧ , ಶಬರಿಯರ ಸೂಚನೆಯಂತೆ ಋಷ್ಯಮೂಕ ಪರ್ವತದಲ್ಲಿ ಸುಗ್ರೀವನನ್ನು ಭೇಟಿಯಾಗಿ , ತುಲ್ಯಾರಿ ಮಿತ್ರತ್ವ ಬೆಳೆಸುತ್ತಾರೆ . ಸುಗ್ರೀವನ ಶತ್ರುವಾದ ವಾಲಿಯನ್ನು ಕೊಂದು , ಸುಗ್ರೀವನಿಗೆ ಕಿಷ್ಕಿಂಧೆಯ ಪಟ್ಟ ಕೊಡಿಸಿ , ಆ ಮೂಲಕ ಕಪಿಸೇನೆಯ ಸಹಾಯದೊಂದಿಗೆ ಸೀತಾಮಾತೆಯನ್ನು ಶ್ರೀರಾಮನಿಗೆ ಒಪ್ಪಿಸಲು ಸುಗ್ರೀವ ನೆರವಾಗುವುದು ವಾಲಿ ಮೋಕ್ಷ ಪ್ರಸಂಗದ ಕಥಾವಸ್ತು . ಶ್ರೀರಾಮನಾಗಿ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿಯವರು ಪ್ರಸಂಗದ ನಡೆಯಲ್ಲೇ ನಿರ್ವಹಿಸಿ ಮಿಂಚಿದರು .ರಾಮನ ಧೀಮಂತ ವ್ಯಕ್ತಿತ್ವ , ಪರಾಕ್ರಮ ಎಲ್ಲವನ್ನೂ ಚೆನ್ನಾಗಿ ಚಿತ್ರಿಸಿದರು . ಸುಗ್ರೀವನಾಗಿ ಉಜ್ರೆ ಅಶೋಕ ಭಟ್ಟರು ಉತ್ತಮವಾಗಿ ನಿರ್ವಹಿಸಿ ಮೆಚ್ಚುಗೆ ಗಳಿಸಿದರು .

ಶ್ರೀರಾಮ – ಸುಗ್ರೀವ ಸಂಭಾಷಣೆಯು ಆಕರ್ಷಕವಾಗಿತ್ತು . ಸುಗ್ರೀವನಾಗಿ ಅಶೋಕ ಭಟ್ಟರು , ಮಾಯಾವಿಯೊಂದಿಗೆ ಯುದ್ಧ ಮಾಡಲು ವಾಲಿಯ ಗುಹೆಗೆ ಹೋದಾಗ , ಗುಹೆಯಿಂದ ರಕ್ತ ಹೊರ ಬಂದುದು ನೋಡಿದ ಕಾರಣ ವಾಲಿ ಸತ್ತಿರಬಹುದೆಂದೆಣಿಸಿ ಆ ಗುಹೆಯ ದ್ವಾರದಲ್ಲಿ ದೊಡ್ಡ ಬಂಡೆಕಲ್ಲನ್ನು ಇಟ್ಟೆ ಎಂದಾಗ ಶ್ರೀರಾಮನಾಗಿ ಕುಕ್ಕುವಳ್ಳಿಯವರು , ವಾಲಿಯನ್ನು ಕೊಂದ ಮಾಯಾವಿಗೆ ನೀನು ಇಟ್ಟ ಕಲ್ಲು ಸರಿಸಲು ಅಸಾಧ್ಯವೇ ಎಂದಾಗ ಭಟ್ಟರು ,ಕಪಿಗಳು ಇಟ್ಟ ಕಲ್ಲನ್ನು ಸರಿಸಲು ಇನ್ನೊಂದು ಕಪಿಗೆ ಮಾತ್ರ ಸಾಧ್ಯ .ಮಾಯಾವಿಗೆ ಅದು ಸಾಧ್ಯವಾಗದು . ಒಂದು ವೇಳೆ ಸತ್ತದ್ದು ಮಾಯಾವಿಯಾದರೆ , ವಾಲಿಗೆ ಆ ಕಲ್ಲನ್ನು ಸರಿಸಲು ಸಾಧ್ಯ ಎಂಬ ಯೋಚನೆಯಿಂದ ಬಂಡೆ ಕಲ್ಲನ್ನು ಇಟ್ಟಿದ್ದೆ ಎಂದು ಹೊಸ ಸಾಧ್ಯತೆಯನ್ನು ವಾದದ ಮೂಲಕ ಹೇಳಿದರು . ಸಪ್ತಜನಾಶ್ರಮದ ದಾರಿಯಾಗಿ ಧರ್ಮಿಷ್ಠರು ಮಾತ್ರ ಹೋಗಲು ಸಾಧ್ಯ . ಆದ ಕಾರಣ ನನಗೆ ಬರಲು ಅಳುಕುಂಟಾಗುತ್ತದೆ ಎಂದು ಭಟ್ಟರು ಹೇಳಿದಾಗ , ಕುಕ್ಕುವಳ್ಳಿಯವರು ,ನೀನು ಧರ್ಮಕ್ಕೆ ವಿರುದ್ಧವಾಗಿ ವರ್ತಿಸಿದ್ದಿಯಾ ಎಂದಾಗ ಉಜ್ರೆಯವರು ಹಾಗಲ್ಲ , ನನ್ನ ಅಣ್ಣ ವಾಲಿಯು ಜೀವಂತನಾಗಿರುವಾಗಲೇ ಆತನಿಗೆ ಪಿಂಡ ಅರ್ಪಿಸಿದ ಅಳುಕು ಎಂದದ್ದು ಮೆಚ್ಚುಗೆ ಮೂಡಿಸಿತು .ಆದರೂ ಸುಗ್ರೀವನು ಶ್ರೀರಾಮಚಂದ್ರನಲ್ಲಿ ಸಂಭಾಷಣೆ ಮಾಡುವಾಗ ಇನ್ನಷ್ಟು ವಿನಯತೆ ತೋರಿದ್ದರೆ ಚೆನ್ನಾಗಿತ್ತು ಎನಿಸಿತು . ವಾಲಿಯಾಗಿ ಹಿರಿಯ ಅರ್ಥಧಾರಿಗಳಾದ ಡಾ| ಪ್ರಭಾಕರ ಜೋಷಿಯವರ ನಿರ್ವಹಣೆ ಉತ್ತಮ ಮಟ್ಟದಲ್ಲಿತ್ತು . ವಾಲಿ – ಸುಗ್ರೀವರ ಯುದ್ಧದ ಸಂಭಾಷಣೆಯು ಹಲವಾರು ಹೊಸ ವಿಚಾರಗಳಿಗೆ ದಾರಿ ಮಾಡಿ ಕೊಟ್ಟಿತು .ಶ್ರೀರಾಮನ ನಡೆಯನ್ನು ಖಂಡಿಸಿ ಹೇಳುವ ಭಾಗವು ಚೆನ್ನಾಗಿ ಮೂಡಿಬಂತಲ್ಲದೆ ಡಾ| ಜೋಷಿಯವರ ವಾಲಿ ಪಾತ್ರದ ಅನುಭವವು ಎದ್ದು ಕಂಡಿತು . ತಾರೆಯಾಗಿ ಉದಯೋನ್ಮುಖ ಕಲಾವಿದರಾದ ಹರೀಶ ಬಳಂತಿಮೊಗರು ಅವರ ಅರ್ಥದಲ್ಲಿ ಭಾವನೆ ಇತ್ತು . ಪತಿವ್ರತೆ ಹೆಣ್ಣೊಬ್ಬಳ ಮಾನಸಿಕ ತುಮುಲವನ್ನು ಚೆನ್ನಾಗಿ ಬಿಂಬಿಸಿದರು . ಭಾಗವತಿಕೆಯಲ್ಲಿ ರವಿಚಂದ್ರ ಕನ್ನಡಿಕಟ್ಟೆಯವರು ಸುಶ್ರಾವ್ಯವಾಗಿ ಹಾಡಿ ಮನ ಗೆದ್ದರು . ಕೆಲವೊಂದು ಹಾಡುಗಳನ್ನು ಅಗರಿ ಶೈಲಿಯಲ್ಲಿ ಹಾಡಿ ರಂಜಿಸಿದರು . ಚಿತ್ರತರಾಂಗಿ ಕೇಳ್‌ ಬಾಲೆ… , ಜಾಣನಹುದಹದೋ… ಮುಂತಾದ ಪದ್ಯಗಳು ಉತðಷ್ಟವಾಗಿತ್ತು . ಚೆಂಡೆಯಲ್ಲಿ ದಯಾನಂದ ಮಿಜಾರು ಹಾಗೂ ಮದ್ದಲೆಯಲ್ಲಿ ಚೈತನ್ಯಕೃಷ್ಣ ಪದ್ಯಾಣರ ಕೈ ಚಳಕವು ಚೇತೋಹಾರಿಯಾಗಿದ್ದು ಪದ್ಯಗಳಿಗೆ ಪೂರಕವಾಗಿತ್ತು . ಚಕ್ರತಾಳದಲ್ಲಿ ಪುರುಷೋತ್ತಮ ಆಚಾರಿ ಸಹಕರಿಸಿದರು .

ಎಂ .ಶಾಂತರಾಮ ಕುಡ್ವ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಇಬ್ಬರೇ ಪಾತ್ರಧಾರಿಗಳು ಕಥನವನ್ನು ಕೊಂಡೊಯ್ಯುವ ಗತಿ , ದಿನ ನಿತ್ಯದ ಎಲ್ಲಾ ಗೌಜಿ ಗದ್ದಲದ ನಡುವೆ ಸಾಗುವ ನಾಟಕ ಕೇವಲ ಇಬ್ಬರೇ ಪಾತ್ರಧಾರಿಗಳ ಪ್ರಸ್ತುತಿ ಎಂಬುದನ್ನೇ...

  • ಸತ್ಯರೂಢನಾದ ಭೂಪಾಲನಾರು ಎನ್ನುವ ಇಂದ್ರನ ಪ್ರಶ್ನೆಯೊಂದಿಗೆ ಕಥೆ ಆರಂಭ.ವಸಿಷ್ಠರು ಹರಿಶ್ಚಂದ್ರನ ಹೆಸರು ಸೂಚಿಸಿದಾಗ ಕೋಪಗೊಂಡು ವಿರೋಧಿಸಿದ ವಿಶ್ವಾಮಿತ್ರರು...

  • ಉಡುಪಿ ಪುತ್ತೂರು ಭಗವತಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಶ್ರೀ ಭಗವತಿ ಹವ್ಯಾಸಿ ಯಕ್ಷ ಬಳಗ ಪುತ್ತೂರು ಇವರು "ಲಂಕಿಣಿ ಮೋಕ್ಷ' ಮತ್ತು...

  • ಡಿಜಿಟಲ್‌ ಯುಗದಲ್ಲಿ ಮಕ್ಕಳ ಮನಸ್ಸನ್ನು ಆಕರ್ಷಿಸಿ ಅವರ ಸೃಜನಶೀಲತೆ ಬೆಳೆಸಲು ಸೂಕ್ತ ತರಬೇತಿಯನ್ನು ನೀಡುವುದೆಂದರೆ ಸುಲಭದ ಕೆಲಸವಲ್ಲ. ಉತ್ಸಾಹಿ ಸಂಪನ್ಮೂಲ...

  • ಚೇಂಪಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಜಿ.ಎಸ್‌.ಬಿ.ಎಸ್‌ ಸೇವಾ ಸಂಘದ ಆಶ್ರಯದಲ್ಲಿ ಸುಧನ್ವ ಕಾಳಗ ಎಂಬ ಯಕ್ಷಗಾನ ಪ್ರದರ್ಶನಗೊಂಡಿತು. ಕಿರಣ್‌ ಪೈ...

ಹೊಸ ಸೇರ್ಪಡೆ