ಕಳಚಿದ ಕಪ್ಪು ಮುಂಡಾಸಿನ ಕೊಂಡಿ ಆಲೂರು ತೇಜ

Team Udayavani, Jun 7, 2019, 5:50 AM IST

ಬಡಗುತಿಟ್ಟಿನಲ್ಲಿ ಕಪ್ಪು ಮುಂಡಾಸಿನ ಕಲಾವಿದರೆಂದೇ ಗುರುತಿಸಲ್ಪಟ್ಟ ಆಲೂರು ತೇಜನವರು (76) ಇತ್ತೀಚೆಗೆ ವಿಧಿವಶರಾದರು.ಅವರ ಅಗಲುವಿಕೆಯಿಂದ ನಡುಪ್ರಾಂತ್ಯದ ವೈವಿಧ್ಯಮಯವಾದ ಹಾರಾಡಿ ಶೈಲಿಯ ಕಪ್ಪುಮುಂಡಾಸು ಪರಂಪರೆಯ ಕೊಂಡಿಯೊಂದು ಕಳಚಿದಂತಾಗಿದೆ.

ಮಾರಣಕಟ್ಟೆ ಸಮೀಪ ಆಲೂರುನಲ್ಲಿ ಜನಿಸಿದ ತೇಜ ಗುರು ವೀರಭದ್ರ ನಾಯ್ಕರಲ್ಲಿ ಹೆಜ್ಜೆಗಾರಿಕೆ ಕಲಿತು ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟಿದರು.ಘಟಾನುಘಟಿ ಕಲಾದರೊಂದಿಗೆ ಪಳಗಿ ಪರಿಪೂರ್ಣ ಮುಂಡಾಸು ವೇಷಧಾರಿಯಾಗಿ ಪ್ರಸಿದ್ಧರಾದರು. ವ್ರಷಕೇತು,ಪ್ರದ್ಯುಮ್ನ,ವಿದ್ಯುನ್ಮಾಲಿ, ಶೂರಸೇನ, ಲೋಹಿತನೇತ್ರ ಮುಂತಾದ ಅವರ ಮುಂಡಾಸು ವೇಷಗಳು ಪ್ರಸಿದ್ಧಿ ಪಡೆದವು. ಅವರಿಗೆ ವಿಶೇಷವಾದ ಕೀರ್ತಿ ತಂದ ಪಾತ್ರ ಅಭಿಮನ್ಯು ಕಾಳಗದ ಕಪ್ಪು ಮುಂಡಾಸಿನ ಕೋಟೆ ಕರ್ಣ.ಹಾರಾಡಿ ಶೈಲಿಯಲ್ಲಿ ಎಡಬಲ ಭುಜಗಳು ಒಂದೇ ರೇಖೆಯಲ್ಲಿ ಇರುವ ಹಾಗೆ ಕಟ್ಟು ಮೀಶೆಯಿಂದ ಕಂಗೊಳಿಸುವ ಸಾಂಪ್ರದಾಯಿಕವಾಗಿ ಬರೆದ ಗಲ್ಲಗಳಿಂದ ಕೂಡಿದ ಅವರ ಕೋಟೆ ಕರ್ಣನ ವೇಷವನ್ನು ನೋಡುವುದೇ ಕಣ್ಣಿಗೆ ಹಬ್ಬ. ಈಗಿನಂತೆ ಪುನಾರಾವರ್ತನೆಯೊಂದಿಗೆ ನಿಧಾನವಾಗಿ ಆದಿತಾಳ-ಏಕ-ಕೋರೆ ತಾಳ ಬಳಸದೆ ಅಭಿಮನ್ಯುವನ್ನು ತತ್ತತೈಯೊಂದಿಗೆ ಎಲವೋ ಬಾಲಕನೆ ಕೇಳು… ಎಂದು ವೀರರಸದಲ್ಲೇ ಮಾತನಾಡಿಸುವ ಪರಿ ಮೈನವಿರೇಳಿಸುತ್ತಿತ್ತು.

ತೇಜನವರ ಸುದೀರ್ಘ‌ 23 ವರ್ಷದ ಸೇವೆ ಮಂದಾರ್ತಿ ಮೇಳದಲ್ಲಿ.ಅದೂ ಮಂದಾರ್ತಿ ಮೇಳಕ್ಕೆ ಹರಕೆ ಆಟಗಳ ಕೊರತೆ ಇದ್ದ ಕಾಲದಲ್ಲಿ.ಹೆಗ್ಗುಂಜೆ ಭೋಜರಾಜ ಹೆಗಡೆಯವರ ಯಜಮಾನಿಕೆಯಲ್ಲಿ ಮೇಳಕ್ಕೆ ಹರಕೆ ಆಟದ ಕೊರತೆ ಇದು,ª ಕಾಡಿಬೇಡಿ ಆಟ ಮಾಡಬೇಕಿದ್ದ ಕಾಲದಲ್ಲಿ ಭೋಜರಾಜ ಹೆಗ್ಡೆಯವರ ಹೆಗಲಿಗೆ ಹೆಗಲುಕೊಟ್ಟು ಅವರ ಮ್ಯಾನೇಜರ್‌ ಆಗಿ ಆಟ ಬುಕ್ಕಿಂಗ್‌ ಮಾಡುವ ಕಾಯಕವನ್ನು ಹಗಲಿಗೆ ಮಾಡಿ ರಾತ್ರಿ ವೇಷಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದರು.ಆಟದ ಕೊರತೆಯನ್ನು ತುಂಬಿಸಲು ಯಕ್ಷಲೋಕ ಜಯ,ರೂಪಶ್ರೀ,ರತ್ನಶ್ರೀ,ಹರ್ಷವರ್ದನ ಚರಿತ್ರೆ,ಪುಷ್ಪವೇಣಿ ಪರಿಣಯ ಮುಂತಾದ ಆಧುನಿಕ ಪ್ರಸಂಗಗಳು ಇವರ ಕಾಲದಲ್ಲಿ ಮಂದಾರ್ತಿ ಮೇಳದಲ್ಲಿ ಪ್ರದರ್ಶಿಸಲ್ಪಟ್ಟವು. ಮದು-ಕೈಟಭ, ವೀರಮಣಿ, ಶಲ್ಯ , ತಾಮ್ರಧ್ವಜ, ಕೌಂಡ್ಲಿàಕ ಮುಂತಾದಅವರ ಮುಂಡಾಸು ವೇಷಗಳು ರಂಜಿಸುತಿದ್ದವು. ಹಂಸದ್ವಜ,ಪರಶುರಾಮ,ಭೀಷ್ಮ, ಕರ್ಣ,ಋತುಪರ್ಣ ಮೊದಲಾದ ಎರಡನೇ ವೇಷ ,ಪುರುಷ ವೇಷಗಳಲ್ಲೂ ಸೈ ಎನಿಸಿದ್ದರು.ಡಾ| ಶಿವರಾಮ ಕಾರಂತರ ಬ್ಯಾಲೆಯಲ್ಲೂ ದೇಶ ಸಂಚಾರ ಮಾಡಿದ ಅವರು ಅಲ್ಲಿ ಕೋರೆ ಮುಂಡಾಸಿನ ಕಿರಾತ ಮತ್ತು ಮುಂಡಾಸು ವೇಷಗಳಿಗೆ ಜೀವ ತೊಂಬಿದ್ದರು.

ಪ್ರೊ|ಎಸ್‌ವಿ.ಉದಯ ಕುಮಾರ ಶೆಟ್ಟಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ