ಭಾವ ತೀವ್ರತೆಯ ಕಥಾವಸ್ತುವಿನ ವಧು ಮಾಧವಿ

Team Udayavani, Aug 9, 2019, 5:00 AM IST

ವೆಂಕಟೇಶ ವೈದ್ಯ ಬಳಗದ ಪ್ರಸ್ತುತಿ

ವಧು ಮಾಧವಿಯ ಮಾಧವಿಯು ಹೆಣ್ಣಿನ ಘನತೆಯನ್ನು ನಿರಾಕರಿಸಿ ತಮ್ಮ ಸ್ವಾರ್ಥಕ್ಕಾಗಿ ಆಕೆಯನ್ನು ಬೇಕಾಬಿಟ್ಟಿಯಾಗಿ ಬಳಸುವ ಗಂಡಸರ ಕ್ರೌರ್ಯಕ್ಕೆ ಬಲಿಯಾದ ಮತ್ತು ಕೊನೆಯಲ್ಲಿ ತನ್ನದೇ ರೀತಿಯಲ್ಲಿ ಪ್ರತಿರೋಧ ಒಡ್ಡುವ ಹೆಣ್ಣಿನ ಅಂತರಂಗವನ್ನು ಬಹಿರಂಗಗೊಳಿಸುವ ವಿಶಿಷ್ಟ ಪಾತ್ರ.

ತೆಕ್ಕಟ್ಟೆ ಯಶಸ್ವೀ ಕಲಾವೃಂದದವರು ತಮ್ಮ ವಿಂಶತಿ ಸಂಭ್ರಮದ ಭಾಗವಾಗಿ ಜು.21ರಂದು ತೆಕ್ಕಟ್ಟೆಯಲ್ಲಿ ವಧು ಮಾಧವಿ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಿದ್ದರು. ವೆಂಕಟೇಶ ವೈದ್ಯ ಬಳಗದವರು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಪ್ರದರ್ಶಿಸಿದ “ವಧು ಮಾಧವಿ’ ಕಥಾ ವಸ್ತುವಿನ ತೀವ್ರತೆಗೆ ತಲ್ಲಣಿಸಿ ಹೋಗುವಂತೆ ಪರಿಣಾಮಕಾರಿಯಾಯಿತು.

ವಧು ಮಾಧವಿಯ ಮಾಧವಿಯು ಹೆಣ್ಣಿನ ಘನತೆಯನ್ನು ನಿರಾಕರಿಸಿ ತಮ್ಮ ಸ್ವಾರ್ಥಕ್ಕಾಗಿ ಆಕೆಯನ್ನು ಬೇಕಾಬಿಟ್ಟಿಯಾಗಿ ಬಳಸುವ ಗಂಡಸರ ಕ್ರೌರ್ಯಕ್ಕೆ ಬಲಿಯಾದ ಮತ್ತು ಕೊನೆಯಲ್ಲಿ ತನ್ನದೇ ರೀತಿಯಲ್ಲಿ ಪ್ರತಿರೋಧ ಒಡ್ಡುವ ಹೆಣ್ಣಿನ ಅಂತರಂಗವನ್ನು ಬಹಿರಂಗಗೊಳಿಸುವ ವಿಶಿಷ್ಟ ಪಾತ್ರ. ಕಂದಾವರ ರಘುರಾಮ ಶೆಟ್ಟಿಯವರು ಪುರಾಣದ ಕಥೆಯೊಂದರ ಆಧಾರದಲ್ಲಿ ಈ ಸುಂದರ ಆಖ್ಯಾನ ರಚಿಸಿದ್ದಕ್ಕೆ ಅಭಿನಂದನಾರ್ಹರು.

ಪ್ರಸಂಗ ಪ್ರಾರಂಭವಾಗಿದ್ದು ವಿಶ್ವಾಮಿತ್ರ ಮತ್ತು ಶಿಷ್ಯ ಗಾಲವರ ಸಂಭಾಷಣೆಯ ದೃಶ್ಯದೊಂದಿಗೆ. ಗಾಲವ ಗುರುದಕ್ಷಿಣೆ ಕೊಡುವ ತನ್ನ ಬಯಕೆಯನ್ನು ಮುಂದಿಡುತ್ತಾನೆ. ಆದರೆ ವಿಶ್ವಾಮಿತ್ರರಿಗೆ ಇದು ಶಿಷ್ಯನ ಅಹಂಕಾರವಾಗಿ ಕಂಡು ಕೊಡಲು ಅಸಾಧ್ಯವಾಗಬಹುದಾದ ಬೇಡಿಕೆಯನ್ನಿಡುತ್ತಾರೆ. ಒಂದು ಕರ್ಣ ಕಪ್ಪಗಿರುವ, ಮೈ ಪೂರ್ತಿ ಬಿಳಿಯಾಗಿರುವ ಎಂಟುನೂರು ಹಯಗಳನ್ನು ಗುರುದಕ್ಷಿಣೆಯಾಗಿ ಕೊಡಬೇಕೆಂದು ಆಗ್ರಹಿಸುತ್ತಾರೆ.

ಕೇವಲ ಎರಡೇ ದೃಶ್ಯಗಳಲ್ಲಿ ಕಂಡು ಬಂದರೂ ತಮ್ಮ ಲಘು ಹಾಸ್ಯ ಮಿಶ್ರಿತ ಮಾತಿನ ಚಟಾಕಿಯಿಂದ ವಿಶ್ವಾಮಿತ್ರ ಪಾತ್ರಧಾರಿ ತುಂಬ್ರಿ ಭಾಸ್ಕರ ಅವರು ಗಮನಸೆಳೆದರು. ಪ್ರಸಂಗದುದ್ದಕ್ಕೂ ಒಂದು ರೀತಿಯ ಸೂತ್ರಧಾರನಂತಿದ್ದ ಗಾಲವ ಪಾತ್ರಧಾರಿ ಎಚ್‌. ಸುಜಯೀಂದ್ರ ಹಂದೆಯವರು ಹಿತಮಿತವಾದ ಮಾತು, ಸುಪ್ರದಾಯಬದ್ಧ ಕುಣಿತ, ಪದ ಎತ್ತುಗಡೆಯಿಂದ ಪ್ರೇಕ್ಷಕರನ್ನು ಹಿಡಿದಿಟ್ಟಿದ್ದರು. ಸಾಧಾರಣವಾಗಿ ಶಿಖೆ, ಕಾಷಾಯ ವಸ್ತ್ರಧಾರಿಯಾಗಿ ಬರುವ ಮುನಿ ಗಾಲವನಿಗೆ ಯಕ್ಷಗಾನೀಯವಾದ ವೇಷಭೂಷಣವನ್ನು ಸಿದ್ಧಪಡಿಸಿದ್ದು ಈ ಪ್ರಯೋಗಕ್ಕೆ ಒಂದು ಹೊಸ ನೋಟವನ್ನು ದಕ್ಕಿಸಿತು.

ಪ್ರಪಂಚವಿಡೀ ಸುತ್ತಿದರೂ ಅಂತಹ ಹಯಗಳು ಕಾಣದಾದಾಗ ಗಾಲವ ಗರುಡನ ಸಹಕಾರದೊಂದಿಗೆ ಯಯಾತಿ ಮಹಾರಾಜನ ಮುಂದೆ ನಿಂತು ತನ್ನ ಗುರುದಕ್ಷಿಣಿಯ ವೃತ್ತಾಂತವನ್ನು ವಿವರಿಸಿ ಅದಕ್ಕಾಗಿ ಅವನ ಸಹಕಾರ ಕೇಳುತ್ತಾನೆ. ಕುದುರೆಯಲ್ಲದಿದ್ದರೂ ಅದನ್ನು ಸಂಪಾದಿಸಲು ಸಂಪತ್ತನ್ನಾದರೂ ನೀಡಬೇಕೆಂಬುದು ಗಾಲವನ ಬೇಡಿಕೆ. ಆ ಹೊತ್ತಿಗಾಗಲೇ ಭಂಡಾರ ಬರಿದು ಮಾಡಿಕೊಂಡ ಯಯಾತಿಯ ಬಳಿ ಅಂತಹ ಕುದುರೆಗಳೂ ಇರಲಿಲ್ಲ. ಹಾಗಾಗಿ ಪತ್ನಿ ದೇವಯಾನಿಯ ಸೂಚನೆಯಂತೆ ತಾನು ಅಪ್ಸರೆಯೊಬ್ಬಳಿಂದ ಪಡೆದ ಮಗಳು ಮಾಧವಿ ಎಂಬ ಕನ್ಯಾರತ್ನವನ್ನೇ ಗಾಲವನಿಗೆ ಕೊಟ್ಟು ಅವಳನ್ನು ಬಳಸಿಕೊಂಡು ಹಯಗಳನ್ನು ಸಂಪಾದಿಸಿಕೊಳ್ಳುವಂತೆ ಕೇಳಿಕೊಳ್ಳುತ್ತಾನೆ. ಕೌಟುಂಬಿಕ ಹಾಗೂ ರಾಜಕೀಯ ಕಾರಣಕ್ಕೆ ಮಗಳನ್ನು ಬಲಿಕೊಡಬೇಕಾದ ಸಂದರ್ಭದ ಯಯಾತಿ ಪಾತ್ರಧಾರಿ ಆನಂದ ಕೆಕ್ಕಾರು ಚೆನ್ನಾಗಿ ಅಭಿನಯಿಸಿದರು.

ಈ ಹಂತದಲ್ಲಿಯೇ ಆಖ್ಯಾನದ ಮುಖ್ಯ ಪಾತ್ರ ಮಾಧವಿಯ ಪ್ರವೇಶ. ಬದುಕಿನಲ್ಲಿ ಆಸೆ, ಆಕಾಂಕ್ಷೆ, ಕನಸುಗಳನ್ನು ಕಟ್ಟಿಕೊಂಡಿದ್ದ ಅನುಪಮ ಸುಂದರಿಯಾದ ಈ ಹುಡುಗಿ ಗಾಲವನ ಹಿಂದೆ ತಾನು ಹೋಗಬೇಕೆಂಬ ತಂದೆಯ ಅಪ್ಪಣೆಯನ್ನು ಕೇಳಿ ಅಘಾತಕ್ಕೊಳಗಾಗುತ್ತಾಳೆ. ಮಾಧವಿಯ ಒಳಹೊಕ್ಕು ಅವಳ ಒಳಗನ್ನು ಹೊರ ತೆಗೆದಿಟ್ಟ ಸಂಜೀವ ಹೆನ್ನಾಬೈಲು ಇವರು ತಮ್ಮ ಸಂಯಮದ ನಡೆನುಡಿಯಿಂದ ಪ್ರಸಂಗದುದ್ದಕ್ಕೂ ನೋಡುಗರ ಒಡಲಲ್ಲಿ ಒಂದು ಸಂಕಟದ ಅಲೆಯನ್ನು ಎಬ್ಬಿಸಿಬಿಟ್ಟರು.

ಪ್ರಸಂಗದ ಕೊನೆಯ ದೃಶ್ಯ ಮಾಧವಿಯ ಸ್ವಯಂವರ. ನಾಲ್ಕು ಮಕ್ಕಳ ತಾಯಿ ಮಾಧವಿ ಮತ್ತೆ ವಧುವಾಗಿ ಅನೇಕ ರಾಜಕುಮಾರರ ಮುಂದೆ ನಿಲ್ಲಬೇಕಾದ ಪರಿಸ್ಥಿತಿ. ರಾಜಕುಮಾರರಾಗಿ ಸಾತ್ಯಕಿ, ಪ್ರತೀಕ್‌ ಸಮರ್ಥವಾಗಿ ನಿರ್ವಹಿಸಿದರು. ಇಲ್ಲಿ ಮದುವೆ ಸಂಸಾರ, ಮಕ್ಕಳು ಎಂಬೆಲ್ಲ ಮಮಕಾರವನ್ನು ಮೀರಿದ ಮಾಧವಿಯು ಮದುವೆಯನ್ನೇ ಧಿಕ್ಕರಿಸಿ ತಾನು ಜ್ಞಾನ ಸಂಪಾದನೆಯ ಮಾರ್ಗ ತುಳಿದು ಯೋಗಿನಿಯಾಗುತ್ತಾಳೆ.

ಭಾವಪೂರ್ಣ ಭಾಗವತಿಕೆಗೆ ಪ್ರಸಿದ್ಧರಾದ ಕೆ.ಪಿ. ಹೆಗಡೆಯವರು ಪ್ರಧಾನ ಭಾಗವತರಾಗಿ ತಮ್ಮ ವೃತ್ತಿಪರತೆಯನ್ನು ಮೆರೆದರು. ಅವರಿಗೆ ಜೊತೆಯಾಗಿ ಪ್ರಸಂಗವನ್ನು ಮುಂದುವರಿಸಿಕೊಂಡು ಹೋದವರು ಲಂಬೋದರ ಹೆಗಡೆ, ಕೂಡ್ಲಿ ದೇವದಾಸ್‌. ಮದ್ದಳೆ ವಾದಕರಾಗಿ ಕೋಟ ಶಿವಾನಂದ್‌, ಚಂಡೆ ವಾದಕರಾಗಿ ರಂಗದ ಕಳೆ ಏರಿಸಿದರು. ಸೀಮಿತ ಅವಧಿಯ ಪ್ರಸಂಗವನ್ನು ನೋಡುವಾಗ ಒಂದೆರಡು ಪ್ರಶ್ನೆಗಳು ಕಾಡಿದವು. ಅತ್ಯಂತ ಪ್ರಸ್ತುತವಾದ ಸಮಸ್ಯೆಯೊಂದನ್ನು ಕೈಗೆತ್ತಿಕೊಂಡು ಪ್ರದರ್ಶನವಾಗಿ ಇದು ಪ್ರೇಕ್ಷಕರನ್ನು ಮುಟ್ಟಿದ್ದು ಸತ್ಯವಾದರೂ, ಯಕ್ಷಗಾನ ಪ್ರಸಂಗವಾಗಿ ಕೆಲವೊಂದು ಆಯಾಮಗಳು ಇದಕ್ಕೆ ದಕ್ಕಲಿಲ್ಲವೇನೋ ಅನ್ನಿಸಿತು. ಇಲ್ಲಿಯ ಕಥೆ ಕಥನವಾಗಿ ಏಕಮುಖದಲ್ಲಿ ಸಂಚರಿಸದೇ ಅಲ್ಲಿ ಮೌಲ್ಯಗಳ ನಡುವೆ, ಪಾತ್ರಗಳ ನಡುವೆ ತಾತ್ವಿಕ ಸಂಘರ್ಷವೇರ್ಪಟ್ಟು ಒಂದು ಬಗೆಯ ಜಿಜ್ಞಾಸೆ ನೋಡುಗರನ್ನು ಕಾಡಬೇಕು. ತತ್ವಗಳನ್ನೂ ಮೌಲ್ಯಗಳನ್ನೂ ಸರಳವಾಗಿ ಜನಸಾಮಾನ್ಯರಿಗೆ ಮುಟ್ಟಿಸುವುದಕ್ಕಾಗಿಯೇ ಸೃಷ್ಟಿಯಾದ ಪುರಾಣ ಪುಣ್ಯ ಕಥೆ ಇಲ್ಲಿಯದ್ದಾದ್ದರಿಂದ ಮಾಧವಿಗಾದ ಅನ್ಯಾಯವನ್ನು ಗ್ರಹಿಸುವ ಮಟ್ಟಿಗಾದರೂ ಅಲ್ಲಿಯ ಪಾತ್ರಗಳಿಗೆ ಬೆಳೆಯುವ ಅವಕಾಶ ಇರಬೇಕಿತ್ತು ಅಥವಾ ಅಂತಹ ದರ್ಶನ ಕೊಡಿಸುವ ಒಂದು ಪಾತ್ರದ ಅಗತ್ಯವಿತ್ತು.

ಅಭಿಲಾಷ ಎಸ್‌. ಸಾಲಿಕೇರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬಡಗುತಿಟ್ಟಿನ ಯಕ್ಷ ರಂಗದಲ್ಲಿ ಬಹುತೇಕ ಪ್ರಸಿದ್ಧ ಸ್ತ್ರೀವೇಷ ಕಲಾವಿದರು ನೇಪಥ್ಯಕ್ಕೆ ಸಂದ ಕಾಲದಲ್ಲಿ ಯಕ್ಷ ರಂಗಕ್ಕೆ ಬಂದವರು ಸ್ತ್ರೀ ವೇಷಧಾರಿ ನೀಲಕೋಡು...

  • ನೂರಾರು ವರ್ಷಗಳ ಹಿಂದೆ ನಾಟ್ಯಲೋಕದ ಅನಭಿಷಕ್ತ ಸಾಮ್ರಾಜ್ಞಯರಾಗಿ ಇತಿಹಾಸದಲ್ಲಿ ಹೆಸರನ್ನು ದಾಖಲಿಸಿ ಕಾಲಚಕ್ರದಲ್ಲಿ ಲೀನರಾದರೂ ತಮ್ಮ ಕಲಾಸಾಧನೆಯಿಂದಾಗಿ...

  • ಯಕ್ಷಬಳಗ ಹೊಸಂಗಡಿ ಸಂಘದ ವತಿಯಿಂದ ಈ ಬಾರಿಯ ವಾರ್ಷಿಕ ಸಮ್ಮಾನ ಹಿರಿಯ ಹವ್ಯಾಸಿ ಕಲಾವಿದ ನಾರಾಯಣ ಪೂಜಾರಿ ಬೆಜ್ಜಂಗಳ ಅವರಿಗೆ ಸಲ್ಲಲಿದೆ. ನಾರಾಯಾಣ ಪೂಜಾರಿ ಬೆಜ್ಜಂಗಳ...

  • ಬೆಳುವಾಯಿ ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿಯ ಆಗಸ್ಟ್‌ ತಿಂಗಳ ತಾಳಮದ್ದಳೆಗೆ ಡಾ| ಕೋಳ್ಯೂರು ರಾಮಚಂದ್ರ ವಿಶೇಷ ಆಮಂತ್ರಿತರು. ಪ್ರಧಾನವಾಗಿ ಅವರು ಸ್ತ್ರೀ ಪಾತ್ರ...

  • ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಇವರ ಸಹಯೋಗದೊಂದಿಗೆ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ವೀರ ಬರ್ಭರೀಕ ಎನ್ನುವ...

ಹೊಸ ಸೇರ್ಪಡೆ