ಪರಂಪರೆಯ ಚೌಕಟ್ಟಿನಲ್ಲಿ ನಡೆದ ಯಕ್ಷನವಮಿ

ಭಗವತಿ ಯಕ್ಷಕಲಾ ಬಳಗದ ಸಂಯೋಜನೆಯಲ್ಲಿ ತೆಂಕುತಿಟ್ಟಿನ ಒಂಬತ್ತು ಪೌರಾಣಿಕ ಪ್ರಸಂಗಗಳ ಪ್ರದರ್ಶನ

Team Udayavani, Nov 15, 2019, 4:09 AM IST

ಪುತ್ತೂರು ಶ್ರೀ ಭಗವತೀ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿಯಲ್ಲಿ ಶ್ರೀ ಭಗವತೀ ಯಕ್ಷಕಲಾ ಬಳಗದವರು ನವರಾತ್ರಿಯಂಗವಾಗಿ ಸಂಯೋಜಿಸಿದ್ದ 9 ದಿನಗಳ ತೆಂಕುತಿಟ್ಟು ಯಕ್ಷಗಾನ ಕಾರ್ಯಕ್ರಮ ಯಕ್ಷನವಮಿ ಅತ್ಯುತ್ತಮ ಸಾಂಪ್ರದಾಯಿಕ ಪ್ರದರ್ಶನ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.ಒಂಬತ್ತು ದಿನ ಕಾಲ ಒಂಬತ್ತು ಆಹ್ವಾನಿತ ತೆಂಕುತಿಟ್ಟಿನ ಹವ್ಯಾಸಿ ಮೇಳಗಳು ವಿವಿಧ ಆಖ್ಯಾನಗಳನ್ನು ಪ್ರದರ್ಶಿಸಿದವು.

ಮೊದಲನೇ ದಿನ ಯಕ್ಷಾರಾಧನಾ ಕಲಾ ಕೇಂದ್ರ ಉರ್ವ ಇವರು ಶಿವಭಕ್ತ ವೀರಮಣಿ ಎಂಬ ಪ್ರಸಂಗ ಪ್ರದರ್ಶಿಸಿದರು.ಎರಡನೇ ದಿನ ಉತ್ಸಾಹಿ ತರುಣ ವೃಂದ, ಕಾವೂರು ಇವರಿಂದ ದಕ್ಷಯಜ್ಞ – ಗಿರಿಜಾ ಕಲ್ಯಾಣ ಪ್ರಸಂಗಗಳು ಪ್ರಸ್ತುತವಾದರೆ ಮೂರನೇ ದಿನ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನ ವಾಮಂಜೂರು ಇವರಿಂದ ಶ್ರೀನಿವಾಸ ಕಲ್ಯಾಣ ಪ್ರಸಂಗ ಪ್ರದರ್ಶಿತವಾಯಿತು. ಲಂಕಿಣಿ ಮೋಕ್ಷ – ಗರುಡಗರ್ವ ಭಂಗ ಪ್ರಸಂಗದ್ವಯಗಳು ಆತಿಥೇಯ ತಂಡದಿಂದ ನಾಲ್ಕನೇ ದಿನ ಪ್ರದರ್ಶಿತವಾದರೆ ಪಣಂಬೂರು ಶ್ರೀ ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇವರಿಂದ ಚಕ್ರವ್ಯೂಹ ಎಂಬ ಪ್ರಸಂಗ ಐದನೇ ದಿನ ಪ್ರದರ್ಶನವನ್ನು ಕಂಡಿತು. ಕದಳಿ ಕಲಾ ಕೇಂದ್ರ, ಮಂಗಳೂರು ಇವರಿಂದ ಶ್ರೀ ಕದಂಬ ಕೌಶಿಕ ಎಂಬ ಪ್ರಸಂಗ ಆರನೇ ದಿನ ಪ್ರಸ್ತುತವಾದರೆ ಏಳನೇ ದಿನ ಯಕ್ಷಕೂಟ ಕದ್ರಿ ಇವರಿಂದ ಸುದರ್ಶನ ಗರ್ವಭಂಗ ಮತ್ತು ಶುಭವರ್ಣ ಯಕ್ಷ ಸಂಪದ ಮರಕಡ, ಮಂಗಳೂರು ಇವರು ಎಂಟನೇ ದಿನ ಶ್ರೀ ಕೃಷ್ಣಲೀಲಾಮೃತ ಎಂಬ ಪ್ರಸಂಗ ಪ್ರದರ್ಶಿಸಿದರು.

ಕೊನೆಯ ದಿನ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದ ಕಾಸರಗೋಡು ಸುಬ್ರಾಯ ಹೊಳ್ಳ ಇವರಿಗೆ ಯಕ್ಷ ಪ್ರದೀಪ್ತರತ್ನ ಮತ್ತು ಯಕ್ಷ ಪ್ರಸಾದನ ತಜ್ಞ ದೇವರಾನ ಕೃಷ್ಣ ಭಟ್‌ ಇವರಿಗೆ ಯಕ್ಷಭೂಷಣ ಪ್ರಶಸ್ತಿ ಪ್ರದಾನಿಸಲಾಯಿತು.

ಪ್ರತಿದಿನವೂ ಕ್ಲಪ್ತ ಸಮಯದಲ್ಲಿ ಆರಂಭವಾಗಿ ಮುಗಿಯುತ್ತಿದ್ದ ಈ ಕಾರ್ಯಕ್ರಮಗಳು ಪರಂಪರೆಯ ಚೌಕಟ್ಟನ್ನು ಮೀರದೆ ಉಡುಪಿ ಪರಿಸರದಲ್ಲಿ ತೆಂಕುತಿಟ್ಟಿನ ಸೊಗಡನ್ನು ಪಸರಿಸುವಲ್ಲಿ ಯಶಸ್ವಿ ಎಂದೆನಿಸಿಕೊಂಡವು. ಕೊನೆಯ ದಿನ ತೆಂಕುತಿಟ್ಟಿನ ಸುಪ್ರಸಿದ್ಧ ಕಲಾವಿದರಿಂದ ಪಾದುಕಾ ಪ್ರಧಾನ – ಪಂಚವಟಿ – ಮಾಯಾ ತಿಲೋತ್ತಮೆ ಎಂಬ ಪ್ರಸಂಗ ಪ್ರದರ್ಶಿತವಾಯಿತು.

ಡಾ| ಸುನಿಲ್‌ ಸಿ. ಮುಂಡ್ಕೂರು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ