ಸಂಧಿವಾತ (ಆರ್ಥ್ರೈಟಿಸ್); ನಿರ್ವಹಣೆಗೆ ದೀರ್ಘ‌ಕಾಲಿಕ ಚಿಕಿತ್ಸೆಯೇಕೆ ಬೇಕು

Team Udayavani, Aug 11, 2019, 5:00 AM IST

ವೈದ್ಯಕೀಯ ಸೇವೆಯಲ್ಲಿ ಸಾಮಾನ್ಯವಾಗಿ ಎದುರಾಗುವ ಸಂಧಿವಾತ ಅಥವಾ ಆರ್ಥ್ರೈಟಿಸ್ ಎಂದರೆ ರುಮಟಾಯ್ಡ ಆರ್ಥ್ರೈಟಿಸ್ ಮತ್ತು ಸೋರಿಯಾಟಿಕ್‌ ಆರ್ಥ್ರೈಟಿಸ್, ಆ್ಯಂಕಿಲೂಸಿಂಗ್‌ ಸ್ಪಾಂಡಿಲೈಟಿಸ್‌ ಮತ್ತು ಗೌಟ್‌. ವಂಶವಾಹಿಗಳು ಹೆತ್ತವರಿಂದ ಮಕ್ಕಳಿಗೆ ವಂಶವಾಹೀಯ ಗುಣಗಳನ್ನು ಹೊತ್ತು ತರುತ್ತವೆ. ಈ ವಂಶವಾಹಿಗಳು ಕ್ರೊಮೊಸೋಮ್‌ಗಳಲ್ಲಿ ಹುದುಗಿರುತ್ತವೆ.

ಮನುಷ್ಯ ದೇಹದಲ್ಲಿ 23 ಜೋಡಿ ಕ್ರೊಮೋಸೋಮ್‌ಗಳು ಇರುತ್ತವೆ. ಲಿಂಗೀಯ ಕ್ರೊಮೊಸೋಮ್‌ಗಳು ಭ್ರೂಣವು ಹೆಣ್ಣಾಗಿ ಬೆಳೆಯಬೇಕೇ, ಗಂಡಾಗಬೇಕೇ ಎಂಬುದನ್ನು ನಿರ್ಧರಿಸುತ್ತವೆ. ಇದು ನಿರ್ಧಾರವಾದ ಬಳಿಕ ಲಿಂಗೀಯ ಕ್ರೊಮೋಸೋಮ್‌ಗಳು ನಿಷ್ಕ್ರಿಯವಾಗುತ್ತವೆ. ಆಟೋಸೋಮ್‌ಗಳು ಇತರ ದೈಹಿಕ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸುತ್ತವೆ. 22 ಜತೆ ಆಟೊಸೋಮ್‌ಗಳಲ್ಲಿ ಆರನೇ ಜೋಡಿ ಆಟೊಸೋಮ್‌ಗಳಲ್ಲಿ ಆಥೆùìಟಿಸ್‌ ಅಥವಾ ಸಂಧಿವಾತದ ಉಗಮದ ಕೋಡ್‌ ಹೊಂದಿರುವ ವಂಶವಾಹಿಗಳಿರುತ್ತವೆ. ಜೀನ್‌ಗಳ ಕೋಡ್‌ಗಳು ಪ್ರೊಟೀನ್‌ಗಳಿಂದಾಗಿದ್ದು, ಈ ಪ್ರೊಟೀನ್‌ಗಳು ಆರ್ಥ್ರೈಟಿಸ್ (ಸಂಧಿಗಳಲ್ಲಿ ನೋವು ಮತ್ತು ಊತ)ಗೆ ಕಾರಣವಾಗುವ ಉರಿಯೂತವನ್ನು ಉಂಟು ಮಾಡುತ್ತವೆ. ಕೆಲವು ಸಂಧಿವಾತಗಳು ಯಾವುದೇ ಚಿಕಿತ್ಸೆ ಇಲ್ಲದೆ ಸ್ವಯಂ ಆಗಿ ಶಮನಗೊಳ್ಳುತ್ತವೆ. ತಾನಾಗಿ ಉಪಶಮನಗೊಳ್ಳದ ಸಂಧಿವಾತಗಳಿಗೆ ಔಷಧಗಳ ಮೂಲಕ ಚಿಕಿತ್ಸೆ ನೀಡಬೇಕಾಗುತ್ತದೆ. ನಿರ್ದಿಷ್ಟವಾಗಿ ಗೌಟ್‌ ಹೊರತುಪಡಿಸಿದರೆ ಇನ್ಯಾವುದೇ ವಿಧವಾದ ಸಂಧಿವಾತಗಳ ನಿರ್ವಹಣೆಯಲ್ಲಿ ಪಥ್ಯಾಹಾರಕ್ಕೆ ಯಾವುದೇ ಸ್ಥಾನವಿಲ್ಲ.

ಯಾವುದಾದರೂ ನಿರ್ದಿಷ್ಟ ಆಹಾರ ಸೇವನೆಯ ಬಳಿಕ ರೋಗಿಗೆ ಸಂಧಿವಾತ ಉಲ್ಬಣವಾಗುತ್ತಿದ್ದಲ್ಲಿ, ಆಕೆ ಅಥವಾ ಆತ ಆಯಾ ಆಹಾರದ ಬಗ್ಗೆ ಎಚ್ಚರಿಕೆ ವಹಿಸಬೇಕು, ನೋವು ಉಲ್ಬಣಿಸುವುದು ನಿಜವೇ ಆಗಿದ್ದಲ್ಲಿ ವರ್ಜಿಸಬೇಕಾದ ಆಹಾರಗಳ ಯಾದಿಯಲ್ಲಿ ಸೇರ್ಪಡೆ ಮಾಡಬೇಕು. ಗೌಟ್‌ ರೋಗಿಗಳಿಗೆ ನಿರ್ದಿಷ್ಟ ಆಹಾರಗಳು ನಿಷಿದ್ಧವಾಗಿರುತ್ತವೆ. ಗೌಟ್‌ ರೋಗಿಗಳು ಹಾಲು ಮತ್ತು ಹೈನು ಉತ್ಪನ್ನಗಳು, ಸಮುದ್ರ ಆಹಾರ, ಕಾಲಿಫ್ಲವರ್‌, ಕ್ಯಾಬೇಜ್‌ ಮತ್ತು ಅಂಗಾಂಗ ಮಾಂಸವನ್ನು ವರ್ಜಿಸಬೇಕಾಗುತ್ತದೆ. ಪಥ್ಯಾಹಾರವು ರಕ್ತದಲ್ಲಿನ ಯೂರಿಕ್‌ ಆ್ಯಸಿಡ್‌ ಮಟ್ಟವನ್ನು 1ಎಂಜಿ/ಡಿಎಲ್‌ನಷ್ಟು ಇಳಿಸುವ ಮೂಲಕ ಗೌಟ್‌ ಕಾಯಿಲೆಯನ್ನು ಚೆನ್ನಾಗಿ ನಿರ್ವಹಣೆ ಮಾಡುವುದಕ್ಕೆ ಸಹಾಯ ಮಾಡುತ್ತದೆ.

ಸಂಧಿವಾತದ ನಿರ್ವಹಣೆಗಾಗಿ ಪ್ರಸ್ತುತ ಲಭ್ಯವಿರುವ ಔಷಧಗಳನ್ನು ಉಪಯೋಗಿಸುವುದರ ಮೂಲಕ ನಾವು ಜೀನ್‌ಗಳಿಂದ ಕೋಡ್‌ ಆಗಿರುವ ಪ್ರೊಟೀನ್‌ಗಳು ಉಂಟು ಮಾಡುವ ಉರಿಯೂತವನ್ನು ಉಪಶಮನಗೊಳಿಸಬಹುದಾಗಿದೆ.

ಔಷಧಗಳಿಂದಾಗಿ ಉರಿಯೂತವು ಸಂಪೂರ್ಣವಾಗಿ ತಗ್ಗಿದಾಗ ರೋಗಿಯು ಸಂಧಿಗಳಲ್ಲಿ ಉಂಟಾಗಿರುವ ನೋವು ಮತ್ತು ಊತದಿಂದ ಮುಕ್ತನಾಗಬಲ್ಲ. ವೈದ್ಯಕೀಯವಾಗಿ ಈ ಸ್ಥಿತಿಯನ್ನು “ರೆಮಿಶನ್‌’ ಅಥವಾ ಉಪಶಮನ ಎನ್ನಲಾಗುತ್ತದೆ. ಈ ಉಪಶಮನ ಅಥವಾ ರೆಮಿಶನ್‌ ಆರು ತಿಂಗಳುಗಳ ಕಾಲ ಮುಂದುವರಿದರೆ ಆರ್ಥ್ರೈಟಿಸ್ ನ ನಿರ್ವಹಣೆಗಾಗಿ ಉಪಯೋಗಿಸುತ್ತಿರುವ ಔಷಧಗಳು ಮತ್ತು ಅವುಗಳ ಪ್ರಮಾಣವನ್ನು ನಿಧಾನವಾಗಿ ಕಡಿಮೆ ಮಾಡುತ್ತಾ ಬಂದು ನಿಲ್ಲಿಸಬಹುದಾಗಿದೆ. ಉಪಶಮನ ಹೊಂದಿದ ಬಳಿಕ ರೋಗಿಯು ಔಷಧವನ್ನು ಸರಿಸುಮಾರು ಎರಡು ವರ್ಷಗಳ ವರೆಗೆ ಮುಂದುವರಿಸಬೇಕಾಗುತ್ತದೆ. ಅಮೆರಿಕನ್‌ ಕಾಲೇಜ್‌ ಆಫ್ ರುಮಟಾಲಜಿ ಅಥವಾ ಬ್ರಿಟಿಷ್‌ ಸೊಸೈಟಿ ಆಫ್ ರುಮಟಾಲಜಿಗಳು ವಿಧಿಸಿದ ವಿಧಿವಿಧಾನಗಳ ಅನ್ವಯ ರೋಗಿಯು ಸಂಧಿವಾತ ಔಷಧಗಳನ್ನು ನಂಬಿಕೆ ಮತ್ತು ವಿಶ್ವಾಸದೊಂದಿಗೆ ತೆಗೆದುಕೊಳ್ಳಬೇಕಾಗುತ್ತದೆ.

ಆರಂಭದಲ್ಲಿ ಮೂರು ತಿಂಗಳುಗಳವರೆಗೆ ಪ್ರತೀ ತಿಂಗಳು ಕೂಡ ರಕ್ತ ಪರೀಕ್ಷೆಯನ್ನು ಮಾಡಿಸಬೇಕಾಗುತ್ತದೆ ಬಳಿಕ ಮೂರು ತಿಂಗಳಿಗೆ ಒಮ್ಮೆ ಮಾಡಿಸಿದರೆ ಸಾಕಾಗುತ್ತದೆ. ರಕ್ತ ಪರೀಕ್ಷೆಯಲ್ಲಿ ಸಂಪೂರ್ಣ ಬ್ಲಿಡ್‌ ಕೌಂಟ್‌, ಲಿವರ್‌ ಫ‌ಂಕ್ಷನ್‌ ಮತ್ತು ಕಿಡ್ನಿ ಫ‌ಂಕ್ಷನ್‌ ಪರೀಕ್ಷೆಗಳು ಒಳಗೊಳ್ಳಬೇಕು. ಈ ರಕ್ತ ಪರೀಕ್ಷೆಗಳಿಂದ ಕಾಯಿಲೆ ಅಥವಾ ಔಷಧಗಳಿಂದ ಯಾವುದೇ ಸಮಸ್ಯೆ ಉಂಟಾಗಿದ್ದರೆ ಪತ್ತೆ ಹಚ್ಚಬಹುದಾಗಿದೆ.

ಒಂದು ದಶಕಕ್ಕೂ ಅಧಿಕ ಕಾಲದ ನನ್ನ ವೈದ್ಯಕೀಯ ವೃತ್ತಿಯಲ್ಲಿ ಯಾವುದೇ ರೋಗಿ ಸಂಧಿವಾತದಿಂದ ಸಂಕೀರ್ಣ ಸಮಸ್ಯೆಗೆ ಒಳಗಾದದ್ದನ್ನು ನಾನು ಕಂಡಿಲ್ಲ. ಸಂಧಿವಾತದ ನಿರ್ವಹಣೆ ಮತ್ತು ಉಪಶಮನಕ್ಕೆ ಅಲೊಪಥಿ ವೈದ್ಯವಿಧಾನವು ಸುರಕ್ಷಿತವಾಗಿದೆ ಮತ್ತು ಸಂಧಿವಾತದ ಉಗಮ ಮತ್ತು ವಿಕಾಸವನ್ನು ಬಹಳ ನಿಕಟವಾಗಿ ತೋರಿಸಿಕೊಟ್ಟಿದೆ.

-ಡಾ| ಪ್ರದೀಪ್‌ಕುಮಾರ್‌ ಶೆಣೈ ಕನ್ಸಲ್ಟಂಟ್‌ ರುಮಟೋಲಜಿಸ್ಟ್‌
ಕೆಎಂಸಿ ಆಸ್ಪತ್ರೆ, ಮಂಗಳೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ