ಸಮುದಾಯ ಆರೋಗ್ಯ ರಕ್ಷಣೆಯಲ್ಲಿ ಆಶಾ ಕಾರ್ಯಕರ್ತೆಯರು

Team Udayavani, Oct 27, 2019, 3:48 AM IST

ಭಾರತ ಸರಕಾರವು ಜನತೆಯ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಮಾಹಿತಿ ನೀಡುವುದಕ್ಕಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನದಡಿಯಲ್ಲಿ ಪ್ರತಿ ತಾಯಿ, ಮಗು, ಹದಿಹರೆಯದ ಫ‌ಲಾನುಭವಿಗಳಿಗೆ ಮತ್ತು ಇತರ ದುರ್ಬಲ ವರ್ಗದವರಿಗೆ ಆರೋಗ್ಯ ಸೇವೆಯನ್ನು ತಲುಪಿಸುವುದು, ತಜ್ಞರ ಮೂಲಕ ತಾಯಿ ಮರಣ, ಶಿಶುಮರಣಗಳನ್ನು ಕಡಿಮೆಗೊಳಿಸುವುದು, ಪ್ರತಿ ಪ್ರಜೆಯ ಆರೋಗ್ಯವನ್ನು ಉತ್ತಮಗೊಳಿಸುವುದು, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದು ಮೂಲ ಉದ್ದೇಶವಾಗಿದೆ. ಈ ಉದ್ದೇಶವನ್ನು ಈಡೇರಿಸಲು ಪ್ರತೀ ಗ್ರಾಮಕ್ಕೂ ಆರೋಗ್ಯ ಸೇವೆಗಳನ್ನು ತಲುಪಿಸಲು ಸರಕಾರಿ ಆರೋಗ್ಯ ಕಾರ್ಯಕರ್ತೆಯರ ಮೇಲೆ ಹೆಚ್ಚಿನ ಹೊಣೆ ಇರುತ್ತದೆ. ಈ ಹೊರೆಯನ್ನು ಕಡಿಮೆಗೊಳಿಸಲು ಸರಕಾರವು ಅದೇ ಗ್ರಾಮದ ಮಹಿಳಾ ಸ್ವಯಂ ಸೇವಕಿಯನ್ನು ಆಶಾ ಕಾರ್ಯಕರ್ತೆಯನ್ನಾಗಿ ತರಬೇತಿಗೊಳಿಸಿ ಅದೇ ಪ್ರದೇಶದಲ್ಲಿ ಪ್ರತಿ 1,000 ಜನಸಂಖ್ಯೆಗೆ ಒಬ್ಬರಂತೆ ಮತ್ತು ಪಟ್ಟಣ ಪ್ರದೇಶದಲ್ಲಿ ಪ್ರತಿ 2,000 – 2,500 ಜನಸಂಖ್ಯೆಗೆ ಒಬ್ಬರಂತೆ ಆರೋಗ್ಯ ಸೇವೆ ಒದಗಿಸಲು ಪ್ರೇರಕರಾಗಿ ನೇಮಿಸಿದೆ.

ದೇಶದಲ್ಲಿ ಸರಕಾರಿ ಆರೋಗ್ಯ ವ್ಯವಸ್ಥೆ
ದೇಶಾದ್ಯಂತ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ಸರಕಾರಿ ಆರೋಗ್ಯ ವ್ಯವಸ್ಥೆಗಳು ಇರುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 5,000 ಜನಸಂಖ್ಯೆಗೆ ಒಂದು ಆರೋಗ್ಯ ಉಪಕೇಂದ್ರ ಇರುತ್ತದೆ. ಅಲ್ಲಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕರಿಗೆ ಸಹಾಯಕರಾಗಿ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಾರೆ. ಪ್ರತಿ 5-6 ಅಂತಹ ಉಪಕೇಂದ್ರಗಳಿಗೆ (30,000 ಜನಸಂಖ್ಯೆಗೆ) ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇರುತ್ತದೆ. ಅಲ್ಲಿರುವ ವೈದ್ಯಾಧಿಕಾರಿ ಸಮುದಾಯದಲ್ಲಿ ಜನರಿಗೆ ಅತೀ ಸಮೀಪವಿರುವ ಪ್ರಥಮ ಸರಕಾರಿ ಆರೋಗ್ಯ ಅಧಿಕಾರಿಯಾಗಿರುತ್ತಾರೆ. ಹಾಗೆಯೇ ಪ್ರತೀ ಒಂದು ಲಕ್ಷದಿಂದ, ಒಂದು ಲಕ್ಷ ಇಪ್ಪತ್ತು ಸಾವಿರ ಜನಸಂಖ್ಯೆಗೆ ಒಂದು ಸಮುದಾಯ ಆರೋಗ್ಯ ಕೇಂದ್ರವಿರುತ್ತದೆ. ಅಲ್ಲಿ ತಜ್ಞ ವೈದ್ಯರ ಹೊರರೋಗ, ಒಳರೋಗ ಸೇವೆ ಲಭ್ಯ ಇರುತ್ತದೆ. ಪ್ರತೀ ತಾಲೂಕು ಕೇಂದ್ರದಲ್ಲಿ ತಜ್ಞ ವೈದ್ಯರಿರುವ ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಆಸ್ಪತ್ರೆಗಳು ಕೂಡ ಹೊರರೋಗಿ ಮತ್ತು ಒಳರೋಗಿ ಸೇವೆಗಳನ್ನು ನೀಡುತ್ತವೆ. ನಗರ ಪ್ರದೇಶಗಳಲ್ಲಿ ಕೂಡ ಇತ್ತೀಚೆಗೆ 2013ರ ನಗರ ಆರೋಗ್ಯ ಅಭಿಯಾನದಡಿಯಲ್ಲಿ 50-60 ಸಾವಿರ ಜನಸಂಖ್ಯೆಗೆ ಒಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪ್ರತೀ 2.5 ಲಕ್ಷ ಜನಸಂಖ್ಯೆಗೆ 30-50 ಹಾಸಿಗೆ ಸೌಲಭ್ಯಗಳಿರುವ ನಗರ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣವಾಗಿದೆ/ಆಗುತ್ತಿದೆ. ಇವುಗಳಲ್ಲದೆ ಮುನ್ಸಿಪಾಲಿಟಿ ಆಸ್ಪತ್ರೆ, ಅಲ್ಲಲ್ಲಿ ರಾಜ್ಯ ಸರಕಾರದ ಮತ್ತು ಕೇಂದ್ರ ಸರಕಾರದ ವಿಶೇಷ ಆಸ್ಪತ್ರೆಗಳು- ಹೃದಯ ರೋಗಗಳ ಆಸ್ಪತ್ರೆ, ಕ್ಯಾನ್ಸರ್‌ ಆಸ್ಪತ್ರೆ, ಕಣ್ಣಿನ ಆಸ್ಪತ್ರೆ, ಮಾನಸಿಕ ಕಾಯಿಲೆಗಳ ಆಸ್ಪತ್ರೆ, ಕಾರ್ಮಿಕರ ಆಸ್ಪತ್ರೆಗಳು ಆವಶ್ಯಕತೆಗೆ ಅನುಗುಣವಾಗಿ ಇರುತ್ತವೆ.

ಆಶಾ ಕಾರ್ಯಕರ್ತೆಯರು ಜನರು ಆರೋಗ್ಯ ಸೇವೆಯನ್ನು ಪಡೆದುಕೊಳ್ಳಲು ಜನರ ಮತ್ತು ಈ ಆರೋಗ್ಯ ಕೇಂದ್ರಗಳ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಇವರ ಕಾರ್ಯ ವ್ಯಾಪ್ತಿಯಲ್ಲಿ ಸುಮಾರು 200-250 ಕುಟುಂಬಗಳು ಇರುತ್ತವೆ (1,000 ಜನಸಂಖ್ಯೆ) ಮತ್ತು ಆ ಕುಟುಂಬಗಳಲ್ಲಿ ಸರಿಸುಮಾರು ಅಷ್ಟೇ ಸಂಖ್ಯೆಯ ಅರ್ಹ ದಂಪತಿಗಳು (200-250) ಇರಬಹುದು ಮತ್ತು ಅಲ್ಲಿ ಪ್ರತೀ ವರ್ಷ ಸುಮಾರು 15-20 ಮಕ್ಕಳ ಜನನವಾಗಬಹುದು.


ಆಶಾ ಕಾರ್ಯಕರ್ತೆಯರ ಸೇವೆಗಳು
ಆಶಾ ಎಂಬುದು ಒಂದು ಸಂಕ್ಷಿಪ್ತ ರೂಪ, ಇದರ ವಿಸ್ತೃತ ರೂಪ Accredited Social Health Activist ಎಂದಾಗಿದೆ. ಇವರ ಸೇವೆಗಳು ಹೀಗಿವೆ.

– ಪ್ರತೀ ವರ್ಷ ಮನೆ ಮನೆಯ ಸಮೀಕ್ಷೆ ಮಾಡಿ ಆ ಪ್ರದೇಶದ ಒಟ್ಟು ಜನಸಂಖ್ಯೆ, ಕುಟುಂಬಗಳ ಸಂಖ್ಯೆ, ಅರ್ಹ ದಂಪತಿಗಳ ಸಂಖ್ಯೆ, ಬಿಪಿಎಲ್‌ ಕುಟುಂಬಗಳ ಸಂಖ್ಯೆ, ಇತರ ಮಾಹಿತಿಗಳನ್ನು ಸಂಗ್ರಹಿಸುವುದು ಮತ್ತು ಆರು ತಿಂಗಳಿಗೊಮ್ಮೆ ನವೀಕರಿಸುವುದು.

– ಪ್ರತೀ ತಿಂಗಳು ಬಾಕಿಯಿರುವ ಅರ್ಹ ದಂಪತಿಗಳ, ಗರ್ಭಿಣಿ ಫ‌ಲಾನುಭವಿಗಳ ಪಟ್ಟಿಯನ್ನು ತಯಾರಿಸಿ ನವೀಕರಿಸುವುದು.

– ಗ್ರಾಮ ಆರೋಗ್ಯ ದಾಖಲೆ ಪುಸ್ತಕವನ್ನು ನಿರ್ವಹಣೆ ಮಾಡುವುದು. ಜನನ ಮತ್ತು ಮರಣಗಳ ವರದಿಯನ್ನು ನೋಂದಾಯಿಸಲು ಸಹಾಯ ಮಾಡುವುದು.

– ಆಶಾ ಕಾರ್ಯಕರ್ತೆಯರು ತಮ್ಮ ಕಾರ್ಯವ್ಯಾಪ್ತಿಯಲ್ಲಿರುವ ಎಲ್ಲ ಗರ್ಭಿಣಿಯರ ದಾಖಲಾತಿಯನ್ನು ಆ ಗರ್ಭಿಣಿಯರಿಗೆ 4 ತಿಂಗಳು ಆಗುವುದರ ಒಳಗೆ ಅಲ್ಲಿನ ಕಿರಿಯ ಆರೋಗ್ಯ ಸಹಾಯಕಿಯರ ಗಮನಕ್ಕೆ ತಂದು ಮಾಡಿಸುವುದು. ಆಶಾ ಕಾರ್ಯಕರ್ತೆಯರ ಕಿಟ್‌ನಲ್ಲಿ ಮೂತ್ರದಲ್ಲಿ ಗರ್ಭಪರೀಕ್ಷೆ ಮಾಡಬಹುದಾದ ಸಾಧನ ಇರುವುದರಿಂದ ಯಾವುದೇ ಮಹಿಳೆಗೆ ಮುಟ್ಟು ನಿಂತ 42 ದಿನಕ್ಕೆ ಆಕೆ ಬಯಸಿದಲ್ಲಿ ಮೂತ್ರ ಪರೀಕ್ಷೆಯಿಂದ ಮನೆಯಲ್ಲಿಯೇ ಗರ್ಭಿಣಿ ಆಗಿರುವುದನ್ನು ಪತ್ತೆ ಮಾಡಿಕೊಳ್ಳಬಹುದು. ಅನಂತರ ಅದನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದೃಢೀಕರಿಸಿಕೊಳ್ಳಬಹುದು.

– ಎಲ್ಲ ಗರ್ಭಿಣಿ ಮಹಿಳೆಯರ ಮನೆಗೆ ಕನಿಷ್ಠ 4 ಬಾರಿ ಭೇಟಿ ನೀಡಿ ಆಪ್ತ ಸಮಾಲೋಚನೆ ನಡೆಸಿ ಅವರನ್ನು ಕನಿಷ್ಠ 4 ಬಾರಿ (12ನೇ ವಾರ, 22-24 ವಾರ, 32-34 ವಾರ ಮತ್ತು 36-40ನೇ ವಾರದಲ್ಲಿ) ಪ್ರಸವಪೂರ್ವ ಆರೈಕೆ ಮಾಡಿಕೊಳ್ಳುವಂತೆ ಮನವೊಲಿಸಿ ಗರ್ಭಿಣಿಯರ ತಪಾಸಣೆಗಳು ನಡೆಯುವಂತೆ ನೋಡಿಕೊಳ್ಳುವುದು.
– ಪ್ರತೀ ಗರ್ಭಿಣಿ ಮಹಿಳೆಯರಿಗೆ ದಿನಕ್ಕೊಂದರಂತೆ ಕನಿಷ್ಠ 180 ಕಬ್ಬಿಣ ಸತ್ವದ ಮಾತ್ರೆಗಳನ್ನು ನುಂಗಿಸುವುದು ಮತ್ತು ಒಂದು ತಿಂಗಳ ಅಂತರದಲ್ಲಿ 2 ಟಿಡಿ ಲಸಿಕೆ ಪಡೆದುಕೊಳ್ಳುವಂತೆ ನೋಡಿಕೊಳ್ಳುವುದು.

– ಮಹಿಳೆಯು ಅನಪೇಕ್ಷಿತ ಗರ್ಭಧಾರಣೆಗೆ ಒಳಗಾಗಿದ್ದರೆ ಆಕೆಗೆ ಸುರಕ್ಷಿತ ಗರ್ಭಪಾತವನ್ನು ಮಾರ್ಗಸೂಚಿಯಂತೆ ಮಾಡಿಸುವುದು.

– ಎಲ್ಲ ಗರ್ಭಿಣಿಯರ ನಿಗದಿತ ಪ್ರಸವ ದಿನಾಂಕ ಪಟ್ಟಿಯನ್ನು ತಯಾರು ಮಾಡಿಕೊಂಡು ಹೆರಿಗೆ ಯೋಜನೆ ರೂಪಿಸುವುದು ಮತ್ತು ಸಮಯಕ್ಕೆ ಸರಿಯಾಗಿ 108 ಆ್ಯಂಬುಲೆನ್ಸ್‌ ಸಹಾಯ ಪಡೆದು ಹೆರಿಗೆಗೆ ಸಮೀಪವಿರುವ ಆಸ್ಪತ್ರೆಗೆ ದಾಖಲಾತಿಸಿ ಎಲ್ಲ ಹೆರಿಗೆಗಳು ಆಸ್ಪತ್ರೆಯಲ್ಲಿ ಆಗುವಂತೆ ನೋಡಿಕೊಳ್ಳುವುದು.

– ಹೆರಿಗೆ ಆದ ಅನಂತರ 30 ದಿನಗಳ ಒಳಗೆ 6 ಬಾರಿ ತಾಯಿ ಮತ್ತು ನವಜಾತ ಶಿಶುಗಳನ್ನು ಭೇಟಿ ಮಾಡಿ (3ನೇ ದಿನ, 7ನೇ ದಿನ, 14ನೇ ದಿನ, 21ನೇ ದಿನ, 28ನೇ ದಿನ, 42ನೇ ದಿನ) ಮಗುವನ್ನು ಕಡ್ಡಾಯವಾಗಿ ತೂಕ ಮಾಡುವುದು, ಎದೆಹಾಲು ನೀಡುವ ಬಗ್ಗೆ, ಕುಟುಂಬ ಯೋಜನೆ ಆಪ್ತ ಸಮಾಲೋಚನೆ ಒದಗಿಸುವುದು ಮತ್ತು ಆರೋಗ್ಯದಲ್ಲಿ ನ್ಯೂನತೆ ಕಾಣಿಸಿದರೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ತಪಾಸಣೆಗೆ ಹೋಗಲು ಮನವೊಲಿಸಿ ಕಳುಹಿಸುವುದು.

– ನವಜಾತ ಶಿಶುವಿನ ವಿಶೇಷ ಚಿಕಿತ್ಸಾ ಘಟಕದಿಂದ ಬಿಡುಗಡೆಗೊಂಡ ಯಾವುದೇ ನವಜಾತ ಶಿಶುವನ್ನು ಪ್ರತಿ ತಿಂಗಳಲ್ಲಿ ಒಂದು ಬಾರಿ ಮನೆ ಭೇಟಿ ನೀಡಿ ನಿಗದಿತ ದಿನಾಂಕದಂದು ಶಿಶುವಿನ ವಿಶೇಷ ಚಿಕಿತ್ಸಾ ಘಟಕಕ್ಕೆ ಮರು ಭೇಟಿಗೆ ತೆರಳುವುದನ್ನು ಮನವೊಲಿಸಿ ಕಳುಹಿಸುವುದು. ಮಗುವಿನಲ್ಲಿ ಯಾವುದೇ ಸಮಯದಲ್ಲಿ ಭೇದಿ, ತೀವ್ರವಾದ ಶ್ವಾಸಕೋಶ ಸೋಂಕು, ಜ್ವರ, ನಂಜು ಕಂಡುಬಂದಲ್ಲಿ ಅವುಗಳನ್ನು ಗುರುತಿಸಿ ಸೂಕ್ತ ಶಿಫಾರಸು ನೀಡುವುದು.

– ಹುಟ್ಟು ಕಡಿಮೆ ತೂಕವಿರುವ ಮಕ್ಕಳನ್ನು (2.5 ಕೆಜಿ) ಪ್ರತಿ ತಿಂಗಳಲ್ಲಿ ಒಂದು ಬಾರಿ ಮನೆ ಭೇಟಿ ನೀಡಿ ತೂಕ ಹೆಚ್ಚುತ್ತಿರುವ ಬಗ್ಗೆ ಮತ್ತು ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಬಗ್ಗೆ ಆಪ್ತ ಸಮಾಲೋಚನೆ ಹಾಗೂ ಸೂಕ್ತ ಶಿಫಾರಸು ಮಾಡುವುದು. ಯಾವುದೇ ಸಮಯದಲ್ಲಿ ತೊಂದರೆ ಕಂಡುಬಂದಲ್ಲಿ ಸೂಕ್ತ ಚಿಕಿತ್ಸೆ ದೊರೆಯುವ ಸ್ಥಳಕ್ಕೆ ಕಳುಹಿಸುವುದು.

– ಅಪೌಷ್ಟಿಕ ಮಕ್ಕಳು ಎನ್‌ಆರ್‌ಸಿ/ ಎಂಎನ್‌ಆರ್‌ಸಿ (ಸ್ಯಾಮ್‌ ಚಿಲ್ಡ್ರನ್ಸ್‌) ಘಟಕದಿಂದ ಬಿಡುಗಡೆಗೊಂಡ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಅವರಿಗೆ ಅಂಗನವಾಡಿ ಕೇಂದ್ರದಲ್ಲಿ ಹೆಚ್ಚಿನ ಆಹಾರ ನೀಡುವಂತೆ ನೋಡಿಕೊಳ್ಳುವುದು.

– ಲಸಿಕೆ ತೆಗೆದುಕೊಳ್ಳಬೇಕಾದ ಅರ್ಹ ಮಕ್ಕಳ ಪಟ್ಟಿ ಮಾಡಿ ಆ ಮಕ್ಕಳನ್ನು ಸಮೀಪದ ಲಸಿಕಾ ಕೇಂದ್ರಕ್ಕೆ ಕರೆದೊಯ್ದು ಎಲ್ಲ ಲಸಿಕೆಗಳನ್ನು ನಿಗದಿತ ಸಮಯದ ಒಳಗೆ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ಪಡೆದುಕೊಳ್ಳುವಂತೆ ನೋಡಿಕೊಳ್ಳುವುದು.

– ಗರ್ಭಿಣಿ, ಬಾಣಂತಿಯರಲ್ಲಿ ಮತ್ತು ಮಕ್ಕಳಲ್ಲಿ ಎಚ್ಚರಿಕೆಯ ಚಿಹ್ನೆಗಳು ಹಾಗೂ ಅಪಾಯದ ಚಿಹ್ನೆಗಳನ್ನು ಗುರುತಿಸಿ 108 ವಾಹನದ ಸೇವೆ ಬಳಸಿ ಸೂಕ್ತ ಆರೋಗ್ಯ ಕೇಂದ್ರ/ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡುವಂತೆ ನೋಡಿಕೊಳ್ಳುವುದು.

– ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಅರ್ಹ ದಂಪತಿಗಳು ಸೂಕ್ತ ಕುಟುಂಬ ನಿಯಂತ್ರಣ ಸಾಧನಗಳನ್ನು ಬಳಸುವಂತೆ ಮನವೊಲಿಸುವುದು ಮತ್ತು ಎರಡು ಮಕ್ಕಳ ನಡುವೆ ಕನಿಷ್ಠ ಮೂರು ವರ್ಷ ಅಂತರವಿಡುವಂತೆ ದಂಪತಿಗಳ ಮನವೊಲಿಸುವುದು. ಅರ್ಹ ದಂಪತಿಗಳಿಗೆ ಎರಡು ಮಕ್ಕಳಾದ ಅನಂತರ ನಿಗದಿತ ಸಮಯದಲ್ಲಿ ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆಗೆ ಮನವೊಲಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸುವುದು ಹಾಗೂ ಶಸ್ತ್ರ ಚಿಕಿತ್ಸೆ ಆದ ಬಳಿಕ ಮನೆ ಭೇಟಿ ಮಾಡುವುದು.

– ಯಾವುದೇ ಗರ್ಭಿಣಿ ಅಥವಾ ಬಾಣಂತಿಯ ಮರಣ ಉಂಟಾದರೆ ಮರಣ ಹೊಂದಿದ ಬಗ್ಗೆ 24 ಗಂಟೆಗಳೊಳಗೆ ಅಲ್ಲಿನ ವೈದ್ಯಾಧಿಕಾರಿಗೆ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿಗೆ ವರದಿ ನೀಡುವುದು ಮತ್ತು ಆಡಿಟ್‌ ನಡೆಯುವ ಸಮಯದಲ್ಲಿ ಸಂಬಂಧಿಕರ ಜತೆಯಲ್ಲಿ ಸಭೆಗೆ ಹಾಜರಾಗುವುದು.

– ಪ್ರತೀ ತಿಂಗಳು ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಆಹಾರ ಸಮಿತಿ ಸಭೆಯನ್ನು ಆಯೋಜಿಸಿ ಎಲ್ಲ ಸದಸ್ಯರು ಹಾಜರಾಗುವಂತೆ ನೋಡಿಕೊಳ್ಳುವುದು ಮತ್ತು ಆ ಸಭೆಯಲ್ಲಿ ಸಂಬಂಧಿತ ಸೌಲಭ್ಯಗಳ ಬಗ್ಗೆ ಹಾಗೂ ಆರೋಗ್ಯ ಸೇವೆಗಳ ಹಕ್ಕುಗಳ ಬಗ್ಗೆ ತಿಳಿವಳಿಕೆ ಮೂಡಿಸುವುದು.

– ಪ್ರತಿ ತಿಂಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ನಡೆಯುವ ಸಭೆಗೆ ಹಾಜರಾಗಿ ಎಲ್ಲ ವರದಿಗಳನ್ನು ನೀಡುವುದು ಮತ್ತು ನಡೆಯುವ ಸಭೆಯಲ್ಲಿ ಎಲ್ಲ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳುವುದು.

– ಸಮುದಾಯದಲ್ಲಿ ಯಾವುದೇ ಸಾಂಕ್ರಾಮಿಕ ರೋಗಗಳು ಪತ್ತೆಯಾದಲ್ಲಿ ಆರೋಗ್ಯ ಕೇಂದ್ರ, ಆಸ್ಪತ್ರೆ, ಕಿರಿಯ ಆರೋಗ್ಯ ಸಹಾಯಕಿಯರಿಗೆ ಮಾಹಿತಿ ನೀಡುವುದು.

– ಮಲೇರಿಯಾ ಸೋಂಕು ವ್ಯಾಪಕವಾಗಿರುವ ಪ್ರದೇಶಗಳಲ್ಲಿ ಯಾವುದೇ ವ್ಯಕ್ತಿಗೆ ಜ್ವರ ಬಂದರೆ ಅವರಿಗೆ ಮಲೇರಿಯಾ ಪತ್ತೆಗಾಗಿ ಸ್ಲೆ„ಡ್‌ನ‌ಲ್ಲಿ ರಕ್ತ ಪರೀಕ್ಷೆ ಮಾಡುವುದು. ಆಯ್ದ ಪ್ರದೇಶಗಳಲ್ಲಿ ತ್ವರಿತ ರೋಗ ಪತ್ತೆ ಪರೀಕ್ಷೆ ಮಾಡಿ ವೈದ್ಯರ ಸಲಹೆಯಂತೆ ಅಗತ್ಯ ಚಿಕಿತ್ಸೆ ನೀಡುವುದು. ಚಿಕಿತ್ಸೆ ಆರಂಭಿಸಿದ ಅನಂತರ 2-3 ದಿನಗಳಲ್ಲಿ ಜ್ವರ ಕಡಿಮೆಯಾಗದಿದ್ದರೆ, ತೀವ್ರತೆರನಾದ ಲಕ್ಷಣಗಳು ಕಂಡುಬಂದರೆ ಅಥವಾ ಒಂದು ವಾರದ ಅನಂತರವೂ ಜ್ವರ ಹಾಗೇ ಇದ್ದರೆ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸುವುದು.

– ಮಲೇರಿಯಾ, ಡೆಂಗ್ಯೂ, ಚಿಕನ್‌ಗುನ್ಯಾ ಜ್ವರ ಇರುವ ಪ್ರದೇಶಗಳಲ್ಲಿ ಸೊಳ್ಳೆ ಉತ್ಪತ್ತಿಯಾಗುವ ಸ್ಥಳಗಳನ್ನು ಪತ್ತೆಹಚ್ಚಿ ನಿರ್ಮೂಲನೆ ಮಾಡುವುದು ಮತ್ತು ಮನೆಯವರಿಗೆ ಮನೆಯ ಸಮೀಪ, ಮನೆಯೊಳಗಿರುವ ಸೊಳ್ಳೆ ಉತ್ಪತ್ತಿ ಸ್ಥಳಗಳ ಬಗ್ಗೆ ತಿಳಿಹೇಳುವುದು ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡುವುದು.

– ಸಮುದಾಯದಲ್ಲಿ ಕುಷ್ಠ ರೋಗ ಇದೆ ಎಂಬ ಶಂಕೆ ಇರುವ ವ್ಯಕ್ತಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕರೆತರುವುದು, ರೋಗವಿರುವುದು ಪತ್ತೆಯಾದಲ್ಲಿ ದೀರ್ಘ‌ಕಾಲದ ಚಿಕಿತ್ಸೆ ಪಡೆಯುವ ವ್ಯಕ್ತಿಗಳು ನಿಯಮಿತವಾಗಿ ಔಷಧ ಸೇವಿಸುವುದಕ್ಕೆ ಪ್ರೋತ್ಸಾಹ ನೀಡುವುದು ಮತ್ತು ಚಿಕಿತ್ಸೆ ಪೂರ್ಣಗೊಳಿಸುವುದನ್ನು ನಿಗಾವಹಿಸಿ ಖಾತರಿಪಡಿಸಿಕೊಳ್ಳುವುದು.

– ಮನೆ ಭೇಟಿ ಸಂದರ್ಭದಲ್ಲಿ ಯಾವುದೇ ವ್ಯಕ್ತಿಗೆ ಎರಡು ವಾರಕ್ಕಿಂತ ಹೆಚ್ಚು ಸಮಯದಿಂದ ಕೆಮ್ಮು ಕಫ‌ ಇದ್ದಲ್ಲಿ ಅಂಥವರ ಕಫ‌ ಪರೀಕ್ಷೆಗೆ ಮನವೊಲಿಸಿ ಕ್ಷಯ ರೋಗವಿದ್ದಲ್ಲಿ ಕ್ಷಯ ರೋಗ ದೀರ್ಘ‌ ಕಾಲ ಚಿಕಿತ್ಸೆಯ ನೇರ ನಿಗಾವಣೆ ಮಾಡುವುದು.

– ಆನೆಕಾಲು ರೋಗದಲ್ಲಿ ಕಂಡು ಬರುವ ಲಿಂಫೆಡಿಮಾ ಮತ್ತು ಹೈಡ್ರೋಸೀಲ್‌ ಪ್ರಕರಣಗಳನ್ನು ಪಟ್ಟಿ ಮಾಡುವುದು. ಹೊಸ ಆನೆಕಾಲು ರೋಗ ಪತ್ತೆಯಾದಲ್ಲಿ ದೀರ್ಘ‌ಕಾಲ ರೋಗಚಿಕಿತ್ಸೆಯನ್ನು ನಿಗಾವಹಿಸಿ ಖಾತರಿಗೊಳಿಸುವುದು.

ಈ ಮೇಲಿನ ಎಲ್ಲ ಕೆಲಸಗಳಿಗೆ ಆಶಾ ಕಾರ್ಯಕರ್ತೆಯರಿಗೆ ಯಾವುದೇ ಮಾಸಿಕ ವೇತನ ನೀಡಲಾಗುವುದಿಲ್ಲ. ಆದರೆ ಅವರ ಕಾರ್ಯ ವ್ಯಾಪ್ತಿಯಲ್ಲಿ ಬರುವ ಜನರಿಗೆ ಅವರು ನೀಡುವ ಪ್ರತಿ ಸೇವೆಯ ಆಧಾರದ ಮೇಲೆ ಪ್ರೋತ್ಸಾಹ ಧನವನ್ನು ಮತ್ತು ನಿಶ್ಚಿತ ಗೌರವ ನೀಡಲಾಗುತ್ತದೆ. ವಿಶಾಲಾರ್ಥದಲ್ಲಿ ಹೇಳುವುದಾದರೆ ಅವರು ಸಮುದಾಯದಲ್ಲಿ ಆರೋಗ್ಯ ಸ್ಥಿತಿ ಬದಲಾವಣೆ, ಸಾಮಾಜಿಕ ಬದಲಾವಣೆ ತರುವಲ್ಲಿ ತಳಮಟ್ಟದಿಂದ ಸೈನಿಕರಂತೆ ನಿಸ್ವಾರ್ಥ ಸೇವೆಯನ್ನು ನೀಡುತ್ತಿದ್ದಾರೆ.

ಆಶಾ ಕಾರ್ಯಕರ್ತೆಯರ ಆಶಾಕಿಟ್‌ನಲ್ಲಿರುವ ಔಷಧ- ಸಾಮಗ್ರಿಗಳು
ಒಆರ್‌ಎಸ್‌ ಪ್ಯಾಕೆಟ್‌ಗಳು, ಪ್ಯಾರಸಿಟಮಾಲ್‌ ಮಾತ್ರೆ ಮತ್ತು ಸಿರಪ್‌, ಗರ್ಭ ನಿರೋಧಕ ಮಾತ್ರೆಗಳು,
ಯುಪಿಟಿ ಸ್ಟ್ರಿಪ್‌ಗ್ಳು, ಕಾಂಡೋಮ್‌ಗಳು, ಕಬ್ಬಿಣ ಸತ್ವ ಮಾತ್ರೆಗಳು, ಕ್ಲೋರೊಕ್ವಿನ್‌ ಮಾತ್ರೆಗಳು, ಕೊಟ್ರಿಮೊಕ್ಸಜೋಲ್‌ ಸಿರಪ್‌ ಮತ್ತು ಮಾತ್ರೆ, ಡೈಸಿಕ್ಲೊಮೈನ್‌, ಅಲ್‌ಬೆಂಡಜೋಲ್‌, ಥರ್ಮಾಮೀಟರ್‌, ಬ್ಯಾಂಡೇಜ್‌ಗಳು, ಹತ್ತಿ ಬೆಟಡಿನ್‌, ಜೆಂಶಿಯನ್‌ ವಯಲೆಟ್‌.

ಅಟೆನ್ಶನ್‌ ಡೆಫಿಸಿಟ್‌ ಹೈಪರ್‌ ಆ್ಯಕ್ಟಿವಿಟಿ ಡಿಸಾರ್ಡರ್‌ -ಎಡಿಎಚ್‌ಡಿ
ಡಾ| ಅಶ್ವಿ‌ನಿ ಕುಮಾರ್‌ ಗೋಪಾಡಿ, ಅಡಿಶನಲ್‌ ಪ್ರೊಫೆಸರ್‌ ಕಮ್ಯೂನಿಟಿ ಮೆಡಿಸಿನ್‌ ವಿಭಾಗ
ಕೆಎಂಸಿ, ಮಣಿಪಾಲ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ವಿಶ್ವಾದ್ಯಂತ ಪ್ರತೀ ವರ್ಷ 15 ಮಿಲಿಯನ್‌ ಅವಧಿಪೂರ್ವ ಶಿಶುಗಳ ಜನನವಾಗುತ್ತಿದೆ. ಅಂದರೆ ಜನಿಸುವ ಪ್ರತೀ ಹತ್ತು ಶಿಶುಗಳಲ್ಲಿ ಒಂದು ಅವಧಿಪೂರ್ವ ಜನಿಸಿದ್ದಾಗಿರುತ್ತದೆ....

  • ಗಂಗಮ್ಮ 76 ವರ್ಷದವರು. ಮನೆಯ ಹೊಸ ಗ್ರಾನೈಟ್‌ ನೆಲದಲ್ಲಿ ಕಾಲು ಜಾರಿ ಉಳುಕಿದಂತಾಯಿತು. ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಸೊಂಟದ ಕೀಲಿನ ಬಳಿ ಮೂಳೆ ಮುರಿತ ಪತ್ತೆ....

  • ಕಿವಿ ಕೇಳದೆ ಇರುವ ಮಗು ಶಾಲೆಯಲ್ಲಿ ಇದ್ದರೆ ಶಿಕ್ಷಕ/ಶಿಕ್ಷಕಿಯರಿಗೆ ತಾನು ಆ ಮಗುವಿಗೆ ಹೇಗೆ ಕಲಿಸಲಿ ಎಂದು ಪ್ರಶ್ನೆ ಏಳುವುದು ಸಹಜ. ಅದ‌ರ ಜತೆ ಹೇಗೆ ಸಂಭಾಷಣೆ...

  • ಮನುಷ್ಯರಲ್ಲಿ ಕಂಡುಬರುವ ಶೇ.60ರಷ್ಟು ಸಾಂಕ್ರಾಮಿಕ ರೋಗಗಳು ಪ್ರಾಣಿಗಳಿಂದ, ಪ್ರಾಣಿ ಮೂಲಗಳಿಂದ ಹರಡುವಂಥವು. ನಮಗೆ ತಿಳಿದಂತೆ ಮಾನವ-ಪರಿಸರ-ಪ್ರಾಣಿಗಳ ನಡುವೆ ಸದಾ...

  • ಸಂಧಿವಾತವು ಶರೀರದ ಕೀಲುಗಳ (ಕೀಲು = ಸಂಧು) ಮೇಲೆ ಪರಿಣಾಮ ಉಂಟುಮಾಡುವ ಒಂದು ರೋಗಲಕ್ಷಣವಾಗಿದ್ದು, ವಯಸ್ಸಾದಂತೆ ತೀವ್ರವಾಗುತ್ತದೆ. ಕೂದಲು ಉದುರುವಂತೆ, ನರೆದಂತೆ,...

ಹೊಸ ಸೇರ್ಪಡೆ