ವೃದ್ಧಾಪ್ಯದಲ್ಲಿ ದೇಹಪುಷ್ಟಿ

ಹಿರಿಯರಿಗೆ ಪೌಷ್ಟಿಕಾಂಶ ಮಾರ್ಗದರ್ಶನ

Team Udayavani, Jul 21, 2019, 5:09 AM IST

ವಯಸ್ಸಾಗುವುದನ್ನು ಪ್ರಗತಿ ಹೊಂದುತ್ತಿರುವ ದೈಹಿಕ ಕಾರ್ಯಚಟುವಟಿಕೆಗಳ ಕುಸಿತ ಅಥವಾ ವಯಸ್ಸಿನ ಜತೆಗೆ ದೈಹಿಕ ಕಾರ್ಯಚಟುವಟಿಕೆಗಳು ಕುಸಿಯುತ್ತಾ ಹೋಗುವುದು ಎಂಬುದಾಗಿ ವ್ಯಾಖ್ಯಾನಿಸಬಹುದು. ಅಂಗಾಂಗ ವ್ಯವಸ್ಥೆಗಳ ಕಾರ್ಯದಕ್ಷತೆ ಕಡಿಮೆಯಾಗುತ್ತ ಹೋಗುವುದು ಮತ್ತು ಆಂತರಿಕ ದೈಹಿಕ ನಿಯಂತ್ರಣ ದುರ್ಬಲವಾಗುತ್ತ ಹೋಗುವುದು ಇದರ ಗುಣಲಕ್ಷಣಗಳು.

ಇತ್ತೀಚೆಗಿನ ವರ್ಷಗಳಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಆರೋಗ್ಯ ಸೇವಾ ಸೌಲಭ್ಯಗಳ ಪ್ರಗತಿಯಿಂದಾಗಿ ಮನುಷ್ಯನ ಜೀವಿತಾವಧಿಯು ಹೆಚ್ಚಿದೆ. 65 ವರ್ಷ ವಯಸ್ಸಿಗಿಂತ ಹೆಚ್ಚು ವಯೋಮಾನದವರನ್ನು ಹಿರಿಯರು ಎಂದೂ 75 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರನ್ನು ವಯೋವೃದ್ಧರು ಎಂಬುದಾಗಿಯೂ ವೈದ್ಯಕೀಯ ಸಮುದಾಯವು ಪರಿಭಾವಿಸುತ್ತದೆ. 2050ರ ವೇಳೆಗೆ ಜಾಗತಿಕವಾಗಿ ಹಿರಿಯರ ಜನಸಂಖ್ಯೆಯು 140 ಕೋಟಿಗಳಿಗೇರಲಿದೆ ಎಂಬುದಾಗಿ ಅಂದಾಜಿಸಲಾಗಿದೆ. ಅಂದರೆ ಪ್ರತೀ ನಾಲ್ವರಲ್ಲಿ ಒಬ್ಬರು 65 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರಾಗಿರುತ್ತಾರೆ.

ಪ್ರಸ್ತುತ ಭಾರತದಲ್ಲಿ 70.7 ಲಕ್ಷ ಮಂದಿ 65 ವರ್ಷ ವಯಸ್ಸಿಗಿಂತ ಮೇಲ್ಪಟ್ಟ ಹಿರಿಯರಿದ್ದಾರೆ. ಇದು ಒಟ್ಟು ಜನಸಂಖ್ಯೆಯ ಶೇ.7.7ರಷ್ಟು. ಇದು 2026 ಮತ್ತು 2050ರ ವೇಳೆಗೆ ಅನುಕ್ರಮವಾಗಿ ಶೇ.12.5 ಮತ್ತು ಶೇ.20ಕ್ಕೆ ವೃದ್ಧಿಸುವ ಮುನ್ಸೂಚನೆಯಿದೆ.

ಹಿರಿಯ ವಯಸ್ಕರು ನಿರ್ದಿಷ್ಟವಾಗಿ ಅಪೌಷ್ಟಿಕತೆಗೆ ತುತ್ತಾಗುವುದು ಅಧಿಕ. ಅಲ್ಲದೆ, ಅವರಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ಒದಗಿಸುವುದಕ್ಕೆ ಅನೇಕ ವಾಸ್ತವಿಕ ಸಮಸ್ಯೆಗಳಿವೆ. ಮೊದಲನೆಯದಾಗಿ, ಅವರ ಪೌಷ್ಟಿಕಾಂಶ ಅಗತ್ಯಗಳನ್ನು ಸರಿಯಾಗಿ ಗುರುತಿಸಲಾಗುವುದಿಲ್ಲ. ದೇಹ ಪರಿಮಾಣ ಮತ್ತು ಚಯಾಪಚಯ ಕ್ರಿಯಾದರ ಎರಡೂ ವಯಸ್ಸಿನ ಜತೆಗೆ ಇಳಿಯುತ್ತ ಹೋಗುವುದರಿಂದ ವಯೋವೃದ್ಧ ವ್ಯಕ್ತಿಯ ತಲಾ ಕಿಲೋಗ್ರಾಂ ದೇಹತೂಕಕ್ಕೆ ಅಗತ್ಯವಾದ ಶಕ್ತಿಯ ಅಗತ್ಯವೂ ಇಳಿಯುತ್ತದೆ. ಸಹಜವಾಗಿ ವಯಸ್ಸಾಗುವಿಕೆಯ ಪ್ರಕ್ರಿಯೆಗೆ ಸಂಬಂಧಿಸಿರುವ ಬದಲಾವಣೆಗಳು ಕೂಡ ವಯೋವೃದ್ಧರ ಪೌಷ್ಟಿಕಾಂಶ ಅಪಾಯಗಳನ್ನು ಹೆಚ್ಚಿಸುತ್ತ ಹೋಗುತ್ತವೆ.

ವಯೋವೃದ್ಧರ ಪೌಷ್ಟಿಕಾಂಶ ಅಗತ್ಯಗಳು ಅನೇಕ ಅಂಶಗಳಿಂದ ಪ್ರಭಾವಿತವಾಗುತ್ತವೆ. ನಿರ್ದಿಷ್ಟ ಆರೋಗ್ಯ ಸಮಸ್ಯೆಗಳು ಮತ್ತು ಅದಕ್ಕೆ ಸಂಬಂಧಿಸಿದ ಅಂಗಾಂಗ ವ್ಯವಸ್ಥೆಯ ಹೊಂದಾಣಿಕೆಗಳು ಇದರಲ್ಲಿ ಸೇರಿವೆ. ಅಲ್ಲದೆ, ವ್ಯಕ್ತಿಯ ಕಾರ್ಯಚಟುವಟಿಕೆಗಳ ಮಟ್ಟ, ಶಕ್ತಿಯ ವ್ಯಯ ಮತ್ತು ಕ್ಯಾಲೊರಿ ಅಗತ್ಯಗಳು; ಆಹಾರವನ್ನು ಪಡೆದು, ತಯಾರಿಸಿ, ಸ್ವೀಕರಿಸುವ ಹಾಗೂ ಜೀರ್ಣಿಸಿಕೊಳ್ಳುವ ಸಾಧ್ಯತೆ ಮಾತ್ರವಲ್ಲದೆ ವೈಯಕ್ತಿಕ ಆಹಾರ ಆದ್ಯತೆಗಳು ಕೂಡ ಪ್ರಭಾವ ಬೀರುತ್ತವೆ.

ಸ್ನಾಯುವಿನ ಸ್ಥಾನವನ್ನು ಕೊಬ್ಬು ಆಕ್ರಮಿಸಿಕೊಂಡಂತೆ ದೇಹದ ಸಂರಚನೆಯೂ ಬದಲಾಗುತ್ತದೆ, ಈ ವಿದ್ಯಮಾನವನ್ನು ಸರ್ಕೊಪೇನಿಯಾ ಎನ್ನಲಾಗುತ್ತದೆ. ವ್ಯಾಯಾಮ, ಅದರಲ್ಲೂ ನಿರ್ದಿಷ್ಟವಾಗಿ ತೂಕ ಎತ್ತುವ ತರಬೇತಿಯಿಂದ ಈ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು ಎಂಬುದಾಗಿ ಅಧ್ಯಯನಗಳು ಹೇಳಿವೆ. ವೃದ್ಧಾಪ್ಯದಲ್ಲಿ ದೇಹ ತೆಳುವಾದಂತೆ ಪರಿಮಾಣವೂ ಕುಸಿಯುವುದರಿಂದ ಬೇಸಲ್‌ ಮೆಟಬಾಲಿಕ್‌ ರೇಟ್‌ (ಬಿಎಂಆರ್‌) ದಶಕದಲ್ಲಿ ಶೇ.5ರಂತೆ ಕಡಿಮೆಯಾಗುತ್ತ ಹೋಗುತ್ತದೆ. ಒಟ್ಟು ಕ್ಯಾಲೊರಿ ಕುಸಿತ ಮತ್ತು ಪ್ರೊಟೀನ್‌ ದಾಸ್ತಾನು ಕಡಿಮೆ ಇರುವುದರಿಂದ ಗಾಯ ಅಥವಾ ಶಸ್ತ್ರಚಿಕಿತ್ಸೆಗಳಿಗೆ ದೇಹ ಸ್ಪಂದಿಸುವ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ದೇಹ ಪರಿಮಾಣ ಕುಸಿದಂತೆ ದೇಹದಲ್ಲಿ ದ್ರವಾಂಶವೂ ಕಡಿಮೆಯಾಗುತ್ತದೆ. ಅವಧಿಪೂರ್ವ ಮುಪ್ಪಾಗುವುದು ಮತ್ತು ವೃದ್ಧಾಪ್ಯದ ಕಾಯಿಲೆಗಳಿಂದ ಜೀವಿತಾವಧಿ ಕಡಿಮೆಯಾಗುತ್ತದೆ; ಆದರೆ ಈ ಎರಡನ್ನೂ ವ್ಯಾಯಾಮ ಮತ್ತು ಆಹಾರಾಭ್ಯಾಸಗಳ ಮೂಲಕ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಬಹುದು ಅಥವಾ ಮುಂದೂಡಬಹುದು. ಪೌಷ್ಟಿಕಾಂಶ ಕೊರತೆ, ದೀರ್ಘ‌ಕಾಲಿಕವಾದ ಆಹಾರಾಭ್ಯಾಸ ಸಂಬಂಧಿ ಕಾಯಿಲೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗಗಳು ಮತ್ತು ಕ್ಯಾನ್ಸರ್‌ಗಳನ್ನು ಪೌಷ್ಟಿಕಾಂಶ ನಿರ್ವಹಣೆಯ ಮೂಲಕ ತಡೆದು ನಮಗೆ ವಂಶವಾಹೀಯವಾಗಿ ನೀಡಲ್ಪಟ್ಟ ಪೂರ್ಣಾವಧಿಯ ಬದುಕನ್ನು ಬದುಕಲು ಅನುವು ಮಾಡಿಕೊಡಬಹುದಾಗಿದೆ. ಯುವ ಜನರಿಗೆ ಹೋಲಿಸಿದಲ್ಲಿ ಸಾಮಾನ್ಯವಾಗಿ ಹಿರಿಯರಿಗೆ ಕಡಿಮೆ ಪೌಷ್ಟಿಕಾಂಶ ಸಾಕಾಗುತ್ತದೆ. ಮನೆಯಲ್ಲಿಯೇ ಇರುವ ಅಥವಾ ಹಾಸಿಗೆಯಲ್ಲಿ ಇರುವ ವಯೋವೃದ್ಧರಿಗೆ ಬಿಸಿಲಿಗೆ ಒಡ್ಡಿಕೊಳ್ಳುವ ಅವಕಾಶ ಇರುವುದಿಲ್ಲವಾದ್ದರಿಂದ ಅವರಿಗೆ ವಿಟಮಿನ್‌ ಡಿ ಹೆಚ್ಚುವರಿಯಾಗಿ ಬೇಕಾಗುತ್ತದೆ.

ದೀರ್ಘ‌ಕಾಲಿಕ ಅನಾರೋಗ್ಯಗಳಿಂದ ಮುಕ್ತರಾಗಿ ಪೂರ್ಣ ಜೀವಿತಾವಧಿಯನ್ನು ಅನುಭವಿಸಲು ಅಗತ್ಯವಾದ ಪೌಷ್ಟಿಕಾಂಶ ಅಗತ್ಯಗಳೆಂದರೆ ಹೆಚ್ಚು ಶಕ್ತಿ ಮತ್ತು ಕೊಬ್ಬಿನಿಂದ ದೂರ ಉಳಿಯುವುದು. ವಯೋವೃದ್ಧರಲ್ಲಿ ಪೌಷ್ಟಿಕಾಂಶ ವಿಶ್ಲೇಷಣೆಯು ಪೌಷ್ಟಿಕಾಂಶ ಕೊರತೆಯನ್ನು ಮಾತ್ರ ಗುರುತಿಸುವ ಗುರಿ ಹೊಂದಿರುವುದಲ್ಲ; ಬದಲಾಗಿ ಹೆಚ್ಚುವರಿ ಪೌಷ್ಟಿಕಾಂಶ ಹಾಗೂ ದೀರ್ಘ‌ಕಾಲಿಕ ಆಹಾರಾಭ್ಯಾಸ ಸಂಬಂಧಿ ಕಾಯಿಲೆಗಳನ್ನು ಗುರುತಿಸುವ ಗುರಿಯನ್ನೂ
ಹೊಂದಿರುತ್ತದೆ.

ಮುಂದುವರಿಯುವುದು

ಹೆನಿಟಾ ವೆನಿಸಾ ಡಿ’ಸೋಜಾ,
ಪಥ್ಯಾಹಾರ ತಜ್ಞೆ
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮನುಷ್ಯನಿಗೆ ಆರೋಗ್ಯಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಆರೋಗ್ಯ ಚೆನ್ನಾಗಿರಬೇಕಾದರೆ ನಮ್ಮ ದಿನನಿತ್ಯದ ಚಟುವಟಿಕೆಗಳೂ ಚೆನ್ನಾಗಿರಬೇಕು. ಪ್ರತಿದಿನ ನಾವು...

  • ಮನುಷ್ಯನ ದೇಹದಲ್ಲಿರುವ ಒಂದು ಅವಿಭಾಜ್ಯ ಅಂಗವೆಂದರೆ ಅದು ಕಣ್ಣು. ಪ್ರಪಂಚವನ್ನು ಇಷ್ಟು ಸುಂದರವಾಗಿ ಕಾಣಲು ಕಾರಣವೇ ಕಣ್ಣು.ನಮ್ಮ ದೇಶದಲ್ಲಿ ಇಂದಿಗೂ ಒಂದು ಅಂದಾಜಿನ...

  • ಸಂಸ್ಕರಿತ ಆಹಾರಗಳಾವುವು? ಆಹಾರವನ್ನು ಸಂರಕ್ಷಿಸಲು ಅಥವಾ ದಿಢೀರ್‌ ತಯಾರಿ ಅಥವಾ ಸೇವನೆಗೆ ಅನುವಾಗುವಂತೆ ಪರಿವರ್ತಿಸಲಾದ ಆಹಾರಗಳನ್ನು ಸಂಸ್ಕರಿತ ಆಹಾರಗಳೆನ್ನುತ್ತಾರೆ....

  • ಕಳೆದ ಸಂಚಿಕೆಯಿಂದ-ಜೀವನ ಶೈಲಿ ಅಂಶಗಳು: ಮುಂದುವರಿದ ದೇಶಗಳಲ್ಲಿ ಗ್ಯಾಸ್ಟ್ರೊ ಈಸೊಫೇಜಿಯಲ್‌ ರಿಫ್ಲಕ್ಸ್‌ ಕಾಯಿಲೆ ಅಥವಾ ಗೆರ್ಡ್‌ ಹೆಚ್ಚಿರುವುದಕ್ಕೆ ಅಲ್ಲಿನ...

  • ಒಗ್ಗರಣೆ ಎಂದ ಕೂಡಲೇ ಮೊದಲು ನೆನಪಾಗುವುದು ಕರಿಬೇವು. ಒಗ್ಗರಣೆಯ ಘಮ ಹೆಚ್ಚಿಸುವ ಕರಿಬೇವನ್ನು ತಿನ್ನದೆ ಅದನ್ನು ತಟ್ಟೆಯ ಮೂಲೆಗೆ ತಳ್ಳುವವರೇ ಹೆಚ್ಚು. ಆದರೆ,...

ಹೊಸ ಸೇರ್ಪಡೆ