ಮಕ್ಕಳಲ್ಲಿ ಕ್ಯಾನ್ಸರ್‌

Team Udayavani, Jul 28, 2019, 5:02 AM IST

ಕ್ಯಾನ್ಸರ್‌ ಪ್ರಕರಣಗಳಲ್ಲೇ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ಗಳು ಬಹಳ ವಿಶಿಷ್ಟ. ಇವುಗಳಿಗೆ ಕಾರಣಗಳೂ ಬಹಳ ಅನಿರ್ದಿಷ್ಟ. ಆದರೆ ಬಹುತೇಕ ಮಕ್ಕಳ ಕ್ಯಾನ್ಸರ್‌ಗಳನ್ನು ಗುಣಪಡಿಸಬಹುದಾಗಿದೆ. ಭಾರತದಲ್ಲಿ ಪ್ರತಿವರ್ಷ ಸುಮಾರು 50 ಸಾವಿರ ಮಕ್ಕಳ ಕ್ಯಾನ್ಸರ್‌ ಪ್ರಕರಣಗಳು ಉಂಟಾಗುತ್ತವೆಯಾದರೂ ಅವನ್ನು ಗುಣಪಡಿಸುವ ಸಾಧ್ಯತೆಯ ಕುರಿತು ಅರಿವಿನ ಕೊರತೆ ಮತ್ತು ಕ್ಯಾನ್ಸರ್‌ ಆರೈಕೆ ಕೇಂದ್ರಗಳ ಅಲಭ್ಯತೆಯಿಂದಾಗಿ ಆಸ್ಪತ್ರೆಗೆ ದಾಖಲಾಗುವುದು ಸುಮಾರು 8 ಸಾವಿರ ಮಾತ್ರ.

1960ರ ಕಾಲಘಟ್ಟದಲ್ಲಿ ಮಕ್ಕಳ ಕ್ಯಾನ್ಸರ್‌ ಗುಣಪಡಿಸಬಹುದಾದ ಪ್ರಮಾಣ ಶೇ.4ರಷ್ಟು ಕಡಿಮೆಯಿತ್ತು; ವೈದ್ಯಕೀಯ ಕ್ಷೇತ್ರದಲ್ಲಿ ಉಂಟಾಗಿರುವ ಪ್ರಗತಿಯೊಂದಿಗೆ ಇಂದು ಅದು ಶೇ.80ಕ್ಕಿಂತಲೂ ಹೆಚ್ಚು ಪ್ರಮಾಣವನ್ನು ಮುಟ್ಟಿದೆ. ಇತ್ತೀಚೆಗಿನ ದಶಕಗಳಲ್ಲಿ ಮಕ್ಕಳ ಕ್ಯಾನ್ಸರ್‌ ಚಿಕಿತ್ಸೆಯ ಕ್ಷೇತ್ರದಲ್ಲಿ ಉಲ್ಲೇಖಾರ್ಹ ಪ್ರಗತಿಯಾಗಿದೆ; ಇದರ ಜತೆಗೆ ಆಗಿರುವ ಪ್ರಗತಿಯನ್ನು ಸಾಮಾಜಿಕ ಪರಿಸರದಲ್ಲಿ ಸಕ್ರಿಯವಾದ ಬೋಧನೆ ಮತ್ತು ಅಧ್ಯಯನಗಳ ಮೂಲಕ ಇನ್ನಷ್ಟು ಮುಂದಕ್ಕೆ ಒಯ್ಯಬೇಕಾದ ಆವಶ್ಯಕತೆಯಿದೆ. ಎಲ್ಲ ಬಗೆಯ ಕ್ಯಾನ್ಸರ್‌ ಪ್ರಕರಣಗಳನ್ನು ಒಟ್ಟಾರೆಯಾಗಿ ಗಮನಿಸಿದರೆ, ಮಕ್ಕಳ ಕ್ಯಾನ್ಸರ್‌ ಚಿಕಿತ್ಸೆಯ ಫ‌ಲಿತಾಂಶ ಬಹಳ ಗಮನಾರ್ಹವಾಗಿದೆ. ಆದರೆ ಇದು ಸಾಧನೆಯಾಗಬೇಕಾದರೆ ಈ ಕ್ಯಾನ್ಸರ್‌ಗಳನ್ನು ಸಮರ್ಪಕವಾಗಿ ಪತ್ತೆ ಹಚ್ಚುವುದು, ಶೀಘ್ರವಾಗಿ ಚಿಕಿತ್ಸೆ ನೀಡುವುದು ಮತ್ತು ಪರಿಣಿತ ಮಕ್ಕಳ ಕ್ಯಾನ್ಸರ್‌ ಚಿಕಿತ್ಸಾ ವೈದ್ಯರಿಂದ ಚಿಕಿತ್ಸೆಗೆ ಒಳಪಡಿಸುವುದು ಅತ್ಯಂತ ಅವಶ್ಯವಾಗಿದೆ. ಕಾರ್ಯದಕ್ಷ ಪೀಡಿಯಾಟ್ರಿಕ್‌ ಹೆಮಟಾಲಜಿ/ ಓಂಕಾಲಜಿ ತಜ್ಞ ವೈದ್ಯರ ತಂಡ ಮತ್ತು ಸ್ನಾತಕೋತ್ತರ ತರಬೇತಿ ಪಡೆಯುತ್ತಿರುವ ವೈದ್ಯವಿದ್ಯಾರ್ಥಿಗಳ ತಂಡದಿಂದ ಒದಗುವ ಚಿಕಿತ್ಸೆಯು ಅತ್ಯುತ್ತಮ ಫ‌ಲಿತಾಂಶವನ್ನು ದಾಖಲಿಸುವುದು ಜಾಗತಿಕವಾಗಿ ದಾಖಲಾಗುತ್ತಿರುವ ವಿದ್ಯಮಾನವಾಗಿದೆ.

ನಿರೀಕ್ಷಿತ ಲಕ್ಷಣಗಳೇನು?
ಲಕ್ಷಣಗಳು ಮತ್ತು ಚಿಹ್ನೆಗಳು ಕ್ಯಾನ್ಸರ್‌ ವಿಧವನ್ನು ಅವಲಂಬಿಸಿವೆ. ರಕ್ತದ ಕ್ಯಾನ್ಸರ್‌ ಸಾಮಾನ್ಯವಾಗಿ ದೀರ್ಘಾವಧಿಯ ಜ್ವರ, ಎಲುಬುಗಳಲ್ಲಿ ನೋವು ಮತ್ತು ರಕ್ತಸ್ರಾವದಂತಹ ಲಕ್ಷಣಗಳನ್ನು ಉಂಟು ಮಾಡುತ್ತದೆ. ಮಿದುಳು ಗಡ್ಡೆಗಳು ತಲೆನೋವು, ವಾಂತಿ, ಚಲನೆ- ನಡಿಗೆಯ ಸಮಸ್ಯೆಯಂತಹ ಲಕ್ಷಣಗಳನ್ನು ಪ್ರಕಟಪಡಿಸುತ್ತದೆ. ಘನ ಗಡ್ಡೆಗಳು ಕೂಡ ಯಾವ ಅಂಗದಲ್ಲಿ ಕಾಣಿಸಿದೆ ಎಂಬುದನ್ನು ಆಧರಿಸಿ ಲಕ್ಷಣಗಳನ್ನು ತೋರ್ಪಡಿಸುತ್ತದೆ. ಉದಾಹರಣೆಗೆ, ವಿಲ್ಮ್ಸ್ ಟ್ಯೂಮರ್‌ ಹೊಟ್ಟೆ ಗಟ್ಟಿಯಾಗುವಿಕೆ ಅಥವಾ ಮೂತ್ರದಲ್ಲಿ ರಕ್ತದಂತಹ ಚಿಹ್ನೆಗಳನ್ನು; ಎಲುಬು ಕ್ಯಾನ್ಸರ್‌ ಅದು ಬಾಧಿಸಿದ ಎಲುಬಿನಲ್ಲಿ ದೀರ್ಘ‌ಕಾಲಿಕ ನೋವು; ಊತದಂತಹ ಲಕ್ಷಣಗಳನ್ನು ತೋರ್ಪಡಿಸಬಹುದು.

ಮಕ್ಕಳ ಕ್ಯಾನ್ಸರ್‌ ವಿಧಗಳು
ವಯಸ್ಕರ ಕ್ಯಾನ್ಸರ್‌ಗೆ ಹೋಲಿಸಿದರೆ ಮಕ್ಕಳ ಕ್ಯಾನ್ಸರ್‌ ಬಹಳ ವಿಭಿನ್ನ ಕ್ಯಾನ್ಸರ್‌ ಗುತ್ಛವಾಗಿದೆ. ಅವುಗಳನ್ನು ಪ್ರಮುಖವಾಗಿ ಮೂರು ವಿಧಗಳಾಗಿ ವರ್ಗೀಕರಿಸಲಾಗಿದೆ – ಹೆಮಟೋಲಿಂಫಾಯ್ಡ ಕ್ಯಾನ್ಸರ್‌ಗಳು, ಮಿದುಳು ಗಡ್ಡೆಗಳು ಮತ್ತು ಘನ ಗಡ್ಡೆಗಳು. ರಕ್ತ ಮತ್ತು ಲಿಂಫೇಟಿಕ್‌ ವ್ಯವಸ್ಥೆಗೆ ಸಂಬಂಧಿಸಿದ್ದು ಹೆಮಟೋಲಿಂಫಾಯ್ಡ ಕ್ಯಾನ್ಸರ್‌ಗಳು. ಉದಾಹರಣೆಗೆ, ರಕ್ತದ ಕ್ಯಾನ್ಸರ್‌ (ಲ್ಯುಕೇಮಿಯಾ ಮತ್ತು ಲಿಂಫೊಮಾ). ಮಿದುಳು ಮತ್ತು ಬೆನ್ನುಹುರಿಗೆ ಸಂಬಂಧಿಸಿ ಉಂಟಾಗುವಂಥವು ಮಿದುಳಿನ ಗಡ್ಡೆಗಳು. ಉದಾಹರಣೆಗೆ, ಮೆಡುಲ್ಲೊಬ್ಲಾಸ್ಟೊಮಾ. ಘನ ಗಡ್ಡೆಗಳು ಅಂಗಾಂಗಗಳಲ್ಲಿ ಉಂಟಾಗುತ್ತವೆ. ಉದಾಹರಣೆಗೆ, ನೆಫ‌Åವಬ್ಲಾಸ್ಟೊಮಾ (ವಿಲ್ಮ್ಸ್ ಗಡ್ಡೆ). ಮಕ್ಕಳಲ್ಲಿ ರಕ್ತದ ಕ್ಯಾನ್ಸರ್‌ ಅತಿ ಹೆಚ್ಚು ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆಯಾದರೆ ಮಿದುಳು ಗಡ್ಡೆಗಳು ಆ ಬಳಿಕದ ಸ್ಥಾನದಲ್ಲಿವೆ.

ಗಡ್ಡೆಗಳನ್ನು ಪತ್ತೆ ಹಚ್ಚುವುದು ಹೇಗೆ?
ರಕ್ತ ಅಥವಾ ಅಸ್ಥಿ ಮಜ್ಜೆಯ ಮಾದರಿಯ ಮೂಲಕ ರಕ್ತದ ಕ್ಯಾನ್ಸರ್‌ ಪತ್ತೆ ಮಾಡಬಹುದು. ಘನ ಟ್ಯೂಮರ್‌ ಪತ್ತೆಗೆ ರಕ್ತದ ಪರೀಕ್ಷೆಯ ಜತೆಗೆ ಬಯಾಪ್ಸಿ ನಡೆಸುವುದು ಅಗತ್ಯವಾಗುತ್ತದೆ. ಮಿದುಳಿನ ಗಡ್ಡೆಗಳನ್ನು ವಯಸ್ಸು, ಗಡ್ಡೆಯಿರುವ ಭಾಗಗಳ ಎಂಆರ್‌ಐ/ಸಿಟಿ ಸ್ಕ್ಯಾನ್‌ ಮೂಲಕ ಪತ್ತೆ ಮಾಡಬೇಕಾಗುತ್ತದೆ. ಅನೇಕ ಗಡ್ಡೆಗಳ ಸಂದರ್ಭದಲ್ಲಿ ಅವು ಇತರ ಭಾಗಗಳಿಗೂ ಹರಡಿವೆಯೇ ಎಂಬುದನ್ನು ಪತ್ತೆ ಮಾಡಬೇಕಾಗುತ್ತದೆ; ಆಗ ಪಿಇಟಿ ಸ್ಕ್ಯಾನ್‌ ಅಗತ್ಯವಾಗುತ್ತದೆ.

ನಿರೀಕ್ಷಿತ ಫ‌ಲಿತಾಂಶಗಳೇನು?
ಮಕ್ಕಳಲ್ಲಿ ಕಾಣಿಸಿಕೊಳ್ಳುವ ಬಹುತೇಕ ಕ್ಯಾನ್ಸರ್‌ಗಳು ಕಿಮೊಥೆರಪಿ ಮತ್ತು ರೇಡಿಯೇಶನ್‌ಗೆ ಪ್ರತಿಸ್ಪಂದಿಸುತ್ತವೆ. ಕ್ಯಾನ್ಸರ್‌ ವಿಧವನ್ನು ಆಧರಿಸಿ ನಿರೀಕ್ಷಿತ ಫ‌ಲಿತಾಂಶ ವ್ಯತ್ಯಯವಾಗುತ್ತದೆ. ರಕ್ತದ ಕ್ಯಾನ್ಸರ್‌ ಮತ್ತು ಲಿಂಫೊಮಾದಂತಹವು ಶೇ.80ಕ್ಕಿಂತಲೂ ಹೆಚ್ಚು ಗುಣ ಫ‌ಲಿತಾಂಶಗಳನ್ನು ನೀಡುತ್ತವೆ. ಘನ ಗಡ್ಡೆಗಳು ಮತ್ತು ಮಿದುಳಿನ ಗಡ್ಡೆಗಳ ಫ‌ಲಿತಾಂಶವು ಅವು ಒಂದು ಕಡೆ ಮಾತ್ರ ಇವೆಯೇ ಅಥವಾ ಇನ್ನಿತರ ಭಾಗಗಳಿಗೂ ಹರಡಿವೆಯೇ ಎಂಬುದನ್ನು ಅವಲಂಬಿಸಿದೆ. ಮೂತ್ರಪಿಂಡದ ವಿಲ್ಮ್ಸ್ ಟ್ಯೂಮರ್‌ನಂತಹ ಘನ ಗಡ್ಡೆಗಳಲ್ಲಿ ನಿರೀಕ್ಷಿತ ಗುಣ ಫ‌ಲಿತಾಂಶ ಶೇ.90ರಷ್ಟು ಉಚ್ಚ ಮಟ್ಟದಲ್ಲಿರುತ್ತದೆ.

ಲಭ್ಯವಿರುವ ಚಿಕಿತ್ಸಾ ವಿಧಾನಗಳೇನು?
ರಕ್ತದ ಕ್ಯಾನ್ಸರ್‌ ಮತ್ತು ಲಿಂಫೊಮಾಗಳನ್ನು ಸಾಮಾನ್ಯವಾಗಿ ಕಿಮೊಥೆರಪಿಯೊಂದರಿಂದಲೇ ನಿರ್ವಹಿಸಲಾಗುತ್ತದೆ. ರಕ್ತದ ಕ್ಯಾನ್ಸರ್‌ನ ಕೆಲವೇ ಪ್ರಕರಣಗಳಲ್ಲಿ ರೇಡಿಯೊಥೆರಪಿ ಅಗತ್ಯವಾಗುತ್ತದೆ. ಮಿದುಳು ಗಡ್ಡೆಗಳು ಮತ್ತು ಘನ ಗಡ್ಡೆಗಳ ಚಿಕಿತ್ಸೆಗೆ ಸಾಮಾನ್ಯವಾಗಿ ಕಿಮೊಥೆರಪಿ, ರೇಡಿಯೇಶನ್‌ ಥೆರಪಿ, ಶಸ್ತ್ರಚಿಕಿತ್ಸಾ ಪರಿಣತಿ ಮತ್ತು ಚಿಕಿತ್ಸೆಯ ಬಳಿಕದ ಆರೈಕೆಯಂತಹ ಬಹು ಆಯಾಮದ ನಿರ್ವಹಣೆ ಅಗತ್ಯವಾಗುತ್ತದೆ. ಪ್ರತೀ ನಿಭಾವಣಾ ವಿಧಾನದ ಸಮಯವು ನಿರ್ಣಾಯಕವಾಗಿದ್ದು, ಚಿಕಿತ್ಸೆಯ ಫ‌ಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ.

ಮಣಿಪಾಲ ಕೆಎಂಸಿಯಲ್ಲಿ ಪೀಡಿಯಾಟ್ರಿಕ್‌ ಓಂಕಾಲಜಿ
ಮಣಿಪಾಲದ ಕೆಎಂಸಿಯಲ್ಲಿ ಮಕ್ಕಳ ಕ್ಯಾನ್ಸರ್‌ ಪ್ರಕರಣಗಳನ್ನು ಚಿಕಿತ್ಸೆಗೊಳಪಡಿಸುವ ಪರಿಣಿತ ವಿಭಾಗವು 2019ರ ಜು.1ರಿಂದ ಪ್ರಾರಂಭಗೊಂಡಿದೆ. ಕ್ಯಾನ್ಸರ್‌ ಪತ್ತೆಯ ವಿವಿಧ ಪರೀಕ್ಷೆಗಳಾದ ಫ್ಲೋ ಸಿಟೊಮೆಟ್ರಿಗಾಗಿ ಅಸ್ಥಿಮಜ್ಜೆಯ ಪರೀಕ್ಷೆ ಮತ್ತು ಕ್ಯಾನ್ಸರ್‌ ಅಂಗಾಂಶದ ಸಂಸ್ಕರಣೆ ಬಯಾಪ್ಸಿಯಂತಹ ಸೌಲಭ್ಯಗಳು ಆಸ್ಪತ್ರೆಯೊಳಗೆಯೇ ಲಭ್ಯವಿವೆ. ಕಿಮೊಥೆರಪಿಯಲ್ಲಿ ರೋಗಿಗಳಿಗೆ ನೀಡಬೇಕಾಗಿರುವ ಔಷಧಗಳು ಫಾರ್ಮಸಿಯಲ್ಲಿ ತತ್‌ಕ್ಷಣ ಲಭ್ಯವಿವೆ. ಸಮಯಕ್ಕನುಗುಣವಾಗಿ ಚಿಕಿತ್ಸೆಯನ್ನು ಒದಗಿಸುವುದಕ್ಕೆ ಅನುಕೂಲವಾಗುವಂತೆ ಒಳರೋಗಿ ಆರೈಕೆ ಮತ್ತು ಡೇ ಕೇರ್‌ ಕೀಮೊಥೆರಪಿ ಸೌಲಭ್ಯಗಳೂ ಇವೆ. ಕೀಮೋಥೆರಪಿಯ ಜತೆಗೆ ಅನೇಕ ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ರೇಡಿಯೇಶನ್‌ ಥೆರಪಿಯ ಅಗತ್ಯವೂ ಉಂಟಾಗುತ್ತದೆ. ಕ್ಯಾನ್ಸರ್‌ಪೀಡಿತ ಭಾಗಕ್ಕೆ ಅತ್ಯಂತ ನಿಖರವಾಗಿ ಅಧಿಕ ತೀಕ್ಷ್ಣತೆಯ ರೇಡಿಯೇಶನ್‌ ಹಾಯಿಸುವುದನ್ನು ರೇಡಿಯೇಶನ್‌ ಥೆರಪಿ ಒಳಗೊಂಡಿರುತ್ತದೆ. ಮಕ್ಕಳಲ್ಲಿ ರೇಡಿಯೇಶನ್‌ ಥೆರಪಿಗೆ ಅರಿವಳಿಕೆ ಅಗತ್ಯವಾಗಿದ್ದು, ಮಣಿಪಾಲ ಕೆಎಂಸಿಯಲ್ಲಿ ಅದು ಮತ್ತು ರೇಡಿಯೇಶನ್‌ ಚಿಕಿತ್ಸೆ ಎರಡೂ ಲಭ್ಯವಿವೆ. ಇದರ ಹೊರತಾಗಿ, ಘನ ಗಡ್ಡೆಗಳ ನಿವಾರಣೆಗೆ ಶಸ್ತ್ರಚಿಕಿತ್ಸೆ ಅಗತ್ಯವಾಗಿರುತ್ತದೆ. ಆಸ್ಪತ್ರೆಯಲ್ಲಿ ಮಕ್ಕಳ ಶಸ್ತ್ರಚಿಕಿತ್ಸೆ, ನ್ಯೂರೋಸರ್ಜರಿ ಮತ್ತು ಓಂಕೊಸರ್ಜರಿ ವಿಭಾಗಗಳ ಸೇವೆ ಲಭ್ಯವಿದ್ದು, ಘನ ಗಡ್ಡೆಗಳ ನಿವಾರಣೆಗೆ ಅನುಕೂಲಕಾರಿಯಾಗಿದೆ. ಉಪಶಾಮಕ ಆರೈಕೆಯ ದಕ್ಷ ತಂಡ ಲಭ್ಯವಿದ್ದು, ಗುಣಕಾಣದ ರೋಗಿಗಳ ಅಂತ್ಯಕಾಲೀನ ಆರೈಕೆ ಮತ್ತು ನೋವು ಉಪಶಮನದ ಬಗ್ಗೆ ನಿಗಾ ವಹಿಸುತ್ತದೆ. ಪ್ರತೀ ಮಗುವಿನ ಚಿಕಿತ್ಸೆಯ ಬಗೆಗಿನ ನಿರ್ಣಯವನ್ನು ಟ್ಯೂಮರ್‌ ಬೋರ್ಡ್‌ನಲ್ಲಿ ಚರ್ಚಿಸಿಯೇ ತೆಗೆದುಕೊಳ್ಳಲಾಗುತ್ತದೆ. ಈ ಟ್ಯೂಮರ್‌ ಬೋರ್ಡ್‌ನಲ್ಲಿ ಮೆಡಿಕಲ್‌ ಓಂಕಾಲಜಿ, ರೇಡಿಯೇಶನ್‌ ಓಂಕಾಲಜಿಸ್ಟ್‌, ಪೆಥಾಲಜಿಸ್ಟ್‌, ನ್ಯೂಕ್ಲಿಯರ್‌ ಮೆಡಿಸಿನ್‌ ಮತ್ತು ಉಪಶಮನ ಆರೈಕೆ ವಿಭಾಗಗಳ ತಜ್ಞ ವೈದ್ಯರಿರುತ್ತಾರೆ. ಕ್ಯಾನ್ಸರ್‌ ಹೊಂದಿರುವ ಪ್ರತೀ ಮಗುವಿಗೂ ನೀಡಬಹುದಾದ ಅತ್ಯುತ್ತಮ ಚಿಕಿತ್ಸೆಯ ಬಗ್ಗೆ ಒಂದು ತಂಡವಾಗಿ ನಿರ್ಣಯ ತೆಗೆದುಕೊಳ್ಳಲು ಟ್ಯೂಮರ್‌ ಬೋರ್ಡ್‌ ಅನುವು ಮಾಡಿಕೊಡುತ್ತದೆ. ಈ ಎಲ್ಲ ಸೇವೆಗಳು ಒಂದೇ ಸೂರಿನಡಿ ಲಭ್ಯವಿರುವುದರಿಂದ ಕ್ಯಾನ್ಸರ್‌ನಂತಹ ಕಾಯಿಲೆಯ ವಿರುದ್ಧ ಹೋರಾಡುವ ರೋಗಿಗಳು ಉತ್ತಮ ಮಾರ್ಗದರ್ಶನ ಮತ್ತು ಚಿಕಿತ್ಸೆಗಳನ್ನು ಪಡೆಯುವುದಕ್ಕೆ ಸುಲಭವಾಗುತ್ತದೆ.

-ಡಾ| ವಾಸುದೇವ ಭಟ್‌ ಕೆ.,
ಸಹಾಯಕ ಪ್ರಾಧ್ಯಾಪಕರು,
ಮಕ್ಕಳ ಕ್ಯಾನ್ಸರ್‌ ಚಿಕಿತ್ಸಾ ವಿಭಾಗ,
ಕೆಎಂಸಿ, ಮಣಿಪಾಲ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಒಗ್ಗರಣೆ ಎಂದ ಕೂಡಲೇ ಮೊದಲು ನೆನಪಾಗುವುದು ಕರಿಬೇವು. ಒಗ್ಗರಣೆಯ ಘಮ ಹೆಚ್ಚಿಸುವ ಕರಿಬೇವನ್ನು ತಿನ್ನದೆ ಅದನ್ನು ತಟ್ಟೆಯ ಮೂಲೆಗೆ ತಳ್ಳುವವರೇ ಹೆಚ್ಚು. ಆದರೆ,...

  • "ಊಟ ಬಲ್ಲವನಿಗೆ ರೋಗವಿಲ್ಲ' ಎಂಬ ಮಾತಿದೆ. ಯಾರಿಗೆ ಊಟ ಮಾಡುವ ಕಲೆ (ವಿಜ್ಞಾನವೂ ಹೌದು) ಗೊತ್ತಿದೆಯೋ, ಅವರು ಆರೋಗ್ಯವಂತರಾಗಿರುತ್ತಾರೆ. ಯಾವ ಆಹಾರವನ್ನು ಯಾವ ಕಾಲದಲ್ಲಿ,...

  • ಗ್ಯಾಸ್ಟ್ರೊಈಸೊಫೇಜಿಯಲ್‌ ರಿಫ್ಲೆಕ್ಸ್‌ ಡಿಸೀಸ್‌ ಅಥವಾ ಸಂಕ್ಷಿಪ್ತವಾಗಿ ಗೆರ್ಡ್‌ (GERD) ಎಂಬುದಾಗಿ ವೈದ್ಯಕೀಯ ಪರಿಭಾಷೆಯಲ್ಲಿ ಕರೆಯಲ್ಪಡುವ ಎದೆಯುರಿ ಜನಸಾಮಾನ್ಯರಲ್ಲಿ...

  • ಕಳೆದ ಸಂಚಿಕೆಯಿಂದ- ನ್ಯೂರೊಮಸ್ಕಾಲರ್‌ ವ್ಯವಸ್ಥೆ - ವಯಸ್ಸಾಗುತ್ತಿದ್ದಂತೆ ನರ-ಸ್ನಾಯು ಸಮನ್ವಯವು ನಶಿಸಲಾರಂಭಿಸುತ್ತದೆ. - ಸಂಧಿವಾತದಂತಹ ಅನಾರೋಗ್ಯಗಳು ಸಂಕಷ್ಟ...

  • ವೈದ್ಯಕೀಯ ಸೇವೆಯಲ್ಲಿ ಸಾಮಾನ್ಯವಾಗಿ ಎದುರಾಗುವ ಸಂಧಿವಾತ ಅಥವಾ ಆರ್ಥ್ರೈಟಿಸ್ ಎಂದರೆ ರುಮಟಾಯ್ಡ ಆರ್ಥ್ರೈಟಿಸ್ ಮತ್ತು ಸೋರಿಯಾಟಿಕ್‌ ಆರ್ಥ್ರೈಟಿಸ್, ಆ್ಯಂಕಿಲೂಸಿಂಗ್‌...

ಹೊಸ ಸೇರ್ಪಡೆ