ವಿಶೇಷ ಋತು ಮತ್ತು ಹಬ್ಬದ ಸಂದರ್ಭದಲ್ಲಿ ಮಧುಮೇಹದ ನಿಯಂತ್ರಣ

ಮಧುಮೇಹ ಜಾಗೃತಿ

Team Udayavani, Dec 22, 2019, 4:45 AM IST

ಭಾರತ 6ಕ್ಕಿಂತಲೂ ಅಧಿಕ ಧರ್ಮ, 29 ಪ್ರಮುಖ ಧಾರ್ಮಿಕ ಹಬ್ಬಗಳನ್ನು ಆಚರಿಸುವ, 6,400 ಜಾತಿಗಳಿರುವ; ಪ್ರತೀ 100 ಕಿ.ಮೀ.ಗೊಂದು ಭಾಷೆ, ಸಂಸ್ಕೃತಿ ಮತ್ತು ಆಹಾರಕ್ರಮದಲ್ಲಿ ಬದಲಾವಣೆ ಇರುವ ವೈವಿಧ್ಯಮಯ ದೇಶ. ಈ ವೈವಿಧ್ಯವೇ ಭಾರತೀಯರ ಜೀವನಾಡಿ. ಅಕ್ಟೋಬರ್‌, ನವಂಬರ್‌ ಮತ್ತು ಡಿಸೆಂಬರ್‌ನಲ್ಲಿ ಹಲವಾರು ಹಬ್ಬಗಳಾದರೆ ಮಾರ್ಚ್‌, ಎಪ್ರಿಲ್‌ ಮತ್ತು ಮೇ ಹೆಚ್ಚಾಗಿ ಎಲ್ಲರೂ ಇಷ್ಟಪಡುವ ಮಾವು, ಹಲಸು ಸುಲಭವಾಗಿ ಸಿಗುವ ಸಮಯ. ಅತಿ ಹೆಚ್ಚು ಮದುವೆ, ಗೃಹಪ್ರವೇಶ ಇತ್ಯಾದಿ ಸಮಾರಂಭಗಳು ನಡೆಯುವ ಸಂದರ್ಭ. ಸಮಾಜಜೀವಿಯಾಗಿರುವ ಮನುಷ್ಯನಿಗೆ ಇವೆಲ್ಲವನ್ನೂ ಆನಂದಿಸುವ ಬಯಕೆ ಸಹಜವೇ. ಭಾರತದಲ್ಲಿರುವ ಹಬ್ಬ, ಹರಿದಿನ, ಧಾರ್ಮಿಕ ಆಚರಣೆಗಳು, ಆಹಾರದ ವೈವಿಧ್ಯಗಳು ಮಧುಮೇಹ ದೊಂದಿಗೆ ಜೀವಿಸುವವರಿಗೆ ಅದರ‌ ನಿಯಂತ್ರಣಕ್ಕೆ ಸವಾಲು ಕೂಡ. ಹಾಗಾಗಿ ವಿಶೇಷ ಸಂದರ್ಭದಲ್ಲಿ ವಿಶೇಷ ಯೋಜನೆ ಕೈಗೊಂಡು ಮಧುಮೇಹವನ್ನು ನಿಯಂತ್ರಣದಲ್ಲಿಡುವುದು ಮಧುಮೇಹದೊಂದಿಗೆ ಜೀವಿಸುವವರಿಗೆ ಮತ್ತು ಅವರ ಸಹಪಾಠಿಗಳು ತಿಳಿದುಕೊಂಡಿರಲೇಬೇಕಾದ ಕೌಶಲ. ಈ ಕೌಶಲ ಜೀವನಾಡಿ ಮತ್ತು ಆರೋಗ್ಯದ ಸಮತೋಲನಕ್ಕೆ ಅತಿ ಅವಶ್ಯ. ಈ ಲೇಖನ ವಿಶೇಷ ಸಂದರ್ಭದಲ್ಲಿ ಮಧುಮೇಹದ ನಿರ್ವಹಣೆ ಯೋಜನೆ ರೂಪಿಸಲು ಮುಖ್ಯವಾಗಿರುವ ಕೆಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ.

ಹಬ್ಬದ ಸಂದರ್ಭದಲ್ಲಿ ಮಧುಮೇಹದೊಂದಿಗೆ ಜೀವಿಸುವವರು ಮಧುಮೇಹ ನಿಯಂತ್ರಣ ಸುಗಮವಾಗಿಸಲು ಯೋಜನೆ ಮಾಡಲು ಅಗತ್ಯವಾಗಿ ತಿಳಿದಿರಬೇಕಾದ ಪ್ರಾಥಮಿಕ ಮಾಹಿತಿಗಳಾವುವು?

ಭಾರತೀಯರು ಸರಾಸರಿ ತಿಂಗಳಿಗೊಂದು ಹಬ್ಬವನ್ನು ಆಚರಿಸುತ್ತಾರೆ, ಈ ಹಬ್ಬಗಳು ಹಬ್ಬದೂಟ ಅಥವಾ ಉಪವಾಸವನ್ನೊಳಗೊಂಡಿರುತ್ತವೆ. ಕೆಲವು ತಲೆಮಾರುಗಳ ಹಿಂದಿನ ನಮ್ಮ ಹಿರಿಯರು ಇಷ್ಟೆಲ್ಲ ಹಬ್ಬಗಳನ್ನು ಆಚರಿಸಿದರೂ ಈಗಿನ ಕಾಲದಲ್ಲಿ ನಾವು ತಿನ್ನುವಷ್ಟು ಸಿಹಿತಿಂಡಿಗಳನ್ನು ಹಾಗೂ ಎಣ್ಣೆಯ ಪದಾರ್ಥಗಳನ್ನು ಸೇವಿಸುತ್ತಿರಲಿಲ್ಲ. ಅಂದು ಹಬ್ಬಗಳ ದಿನಗಳಲ್ಲಿ ಮಾತ್ರ ಇಂತಹ ತಿಂಡಿಗಳನ್ನು ಸೇವಿಸಿದರೆ, ಇಂದು ಅವುಗಳು ದಿನನಿತ್ಯ ಸೇವಿಸುವ ಆಹಾರವಾಗಿವೆ. ಅತಿಯಾದರೆ ಅಮೃತವೂ ವಿಷವೆಂಬುದಕ್ಕೆ ಸಿಹಿತಿಂಡಿ ಮತ್ತು ಎಣ್ಣೆ ಹೊರತಲ್ಲ. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಹಬ್ಬದ ದಿನಗಳಲ್ಲಿ ಮತ್ತು ಪ್ರತಿನಿತ್ಯ ಮಧುಮೇಹ ನಿಯಂತ್ರಣ ದೊಡ್ಡ ಸವಾಲು. ಮಧುಮೇಹದೊಂದಿಗೆ ಜೀವಿಸುವವರಿಗೋಸ್ಕರ ಕುಟುಂಬದವರು ಹಬ್ಬವನ್ನು ಆಚರಿಸದೆ ಇರುವುದು ತುಂಬಾ ಕಷ್ಟ. ಆದರೆ ಹಬ್ಬದ ದಿನಗಳಲ್ಲಿ ಹಾಗೆಯೇ ಪ್ರತಿನಿತ್ಯದ ಆಹಾರ ಕ್ರಮದಲ್ಲಿ ಕಡಿವಾಣ ಹಾಕುವುದೂ ಅವಶ್ಯ. ಹಾಗಾಗಿ ಮಧುಮೇಹದೊಂದಿಗೆ ಜೀವಿಸುವವರು ಮತ್ತು ಸಹಜೀವಿಗಳು ಈ ಕೆಳಗಿನ ಕೆಲವು ಅಂಶಗಳ ಬಗ್ಗೆ ಹೆಚ್ಚಿನ ಗಮನ ಕೊಡುವುದು ಅಗತ್ಯ:

ಆರೋಗ್ಯಕರ ಆಹಾರದ ಆಯ್ಕೆ: ಮಧುಮೇಹದೊಂದಿಗೆ ಜೀವಿಸುವವರು ಸಿಹಿತಿಂಡಿಗಳು ಮತ್ತು ಹೆಚ್ಚು ಕಾರ್ಬೋಹೈಡ್ರೇಟ್‌ ಇರುವ ಆಹಾರವನ್ನು ಹಬ್ಬದ ಸಂದರ್ಭದಲ್ಲಿ ಸೇವಿಸದೆ ಇರುವುದು ಸೂಕ್ತ. ಕೆಲವೊಮ್ಮೆ ಇವುಗಳಿಂದ ದೂರವಿರುವುದು ಕಷ್ಟವಾಗಬಹುದು. ಹಾಗಾಗಿ ಮನೆಯವರು ಮಧುಮೇಹದೊಂದಿಗೆ ಜೀವಿಸುವವರನ್ನು ಗಮನದಲ್ಲಿಟ್ಟು ಮಧುಮೇಹದೊಂದಿಗೆ ಜೀವಿಸುವವರಿಗೆ ಯೋಗ್ಯವಾದ ಆಹಾರ ಆಯ್ಕೆ ಮಾಡುವುದು ಉತ್ತಮ. ತರಕಾರಿ ಸಲಾಡ್‌, ಹಣ್ಣುಗಳ ಮಿಶ್ರಣ ಅಥವಾ ಹಣ್ಣಿನ ರಸಗಳು ಪಾಯಸ ಅಥವಾ ತಂಪು ಪಾನೀಯಗಳಿಗಿಂತ ಉತ್ತಮ ಆಯ್ಕೆ. ಹಾಗೆಯೇ ಬೇಸನ್‌ ಲಡ್ಡುಗಳಿಗಿಂತ ಒಣ ಹಣ್ಣುಗಳ ಲಡ್ಡು ಉತ್ತಮ ಆಯ್ಕೆ. ಮನೆಯಲ್ಲೇ ಕೆನೆರಹಿತ ಹಾಲಿನಿಂದ ತಯಾರಿಸಿದ ಆಹಾರದ ಸೇವನೆ ಅತ್ಯಂತ ಸೂಕ್ತ.

ತಿಂಡಿಗಳ ಹಾವಳಿ: ಎಣ್ಣೆಗಳಲ್ಲಿ ಕರಿದ ತಿಂಡಿಗಳ ಹಾವಳಿ ಹಬ್ಬದ ಸಂದರ್ಭದಲ್ಲಿ ಸಾಮಾನ್ಯ. ಆದರೆ ಮಧುಮೇಹದೊಂದಿಗೆ ಜೀವಿಸುವವರ ಆಯ್ಕೆ ಕರಿದ ತಿಂಡಿಗಳ ಹೊರತಾಗಿ ಒಣಹಣ್ಣುಗಳಾಗಿರಲಿ. ಕರಿದ ತಿಂಡಿಗಳು ಬೇಡ ಎನ್ನುವುದನ್ನು ಕಡ್ಡಾಯವಾಗಿ ಕರಗತಗೊಳಿಸಿಕೊಳ್ಳಬೇಕು.

ಆಹಾರದ ಪ್ರಮಾಣ: ಆಹಾರದ ಆಯ್ಕೆಯೊಂದೇ ಮಾನದಂಡವಾಗಿರದೆ ಆಹಾರದ ಪ್ರಮಾಣ ಕೂಡ ಪ್ರಮುಖವಾಗಿರುತ್ತದೆ. ಹಾಗಾಗಿ ಆಹಾರವನ್ನು ಹಿತಮಿತವಾಗಿ ಸೇವಿಸುವುದು ಸಹ ಹಬ್ಬಗಳ ಸಂದರ್ಭದಲ್ಲಿ ಅಗತ್ಯ.

ದೈಹಿಕ ಚಟುವಟಿಕೆಗಳು: ಹಬ್ಬಗಳ ಸಂದರ್ಭಗಳಲ್ಲಿ ಸರಿಯಾದ ಆಹಾರ ಕ್ರಮದೊಂದಿಗೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಅವಶ್ಯ.

ಔಷಧ: ಮಧುಮೇಹದೊಂದಿಗೆ ಜೀವಿಸುವವರು ಯಾವುದೇ ಕಾರಣಕ್ಕೂ ಔಷಧವನ್ನು ಹಬ್ಬದ ಸಂದರ್ಭದಲ್ಲಿ ನಿಲ್ಲಿಸಕೂಡದು. ವೈದ್ಯರ ಸಲಹೆಯ ಮೇರೆಗೆ ಇನ್ಸುಲಿನ್‌ ತೆಗೆದುಕೊಳ್ಳುವ ಪ್ರಮಾಣವನ್ನು ಕಾಬೊìಹೈಡ್ರೇಟ್‌ ಆಹಾರ ತೆಗೆದುಕೊಳ್ಳುವ ಪ್ರಮಾಣಕ್ಕೆ ಅನುಗುಣವಾಗಿ ಸರಿಹೊಂದಿಸುವುದು ಅಗತ್ಯ.

ರಕ್ತದಲ್ಲಿನ ಗ್ಲುಕೋಸ್‌ ಸ್ವಯಂ-ಪರೀಕ್ಷೆ: ಹಬ್ಬದ ಸಂದರ್ಭಗಳಲ್ಲಿ ಆಹಾರಕ್ರಮದಲ್ಲಿ ವ್ಯತ್ಯಯವಾಗಿ ರಕ್ತದಲ್ಲಿ ಗ್ಲುಕೋಸ್‌ ಅಂಶದಲ್ಲಿ ಏರುಪೇರಾಗುವ ಸಾಧ್ಯತೆಗಳಿದ್ದು, ನಿಯಮಿತವಾಗಿ ರಕ್ತದಲ್ಲಿನ ಗ್ಲುಕೋಸ್‌ನ ಸ್ವಯಂ-ಪರೀಕ್ಷೆ ಮಾಡಿಕೊಳ್ಳುವುದು ಅತ್ಯಗತ್ಯ. ಇದರಿಂದ ರಕ್ತದಲ್ಲಿ ಗುÉಕೋಸ್‌ ಪ್ರಮಾಣ ಅತ್ಯಂತ ಅಧಿಕವಾಗಿ ಅಥವಾ ಕಡಿಮೆಯಾಗಿ ಹೆಚ್ಚಿನ ಅಪಾಯವಾಗುವುದನ್ನು ತಪ್ಪಿಸಲು ಬೇಕಾಗುವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಮಧುಮೇಹದೊಂದಿಗೆ ಜೀವಿಸುವವರಲ್ಲಿ ಸಾಮಾನ್ಯವಾಗಿ ಹಬ್ಬದ ಸಂದರ್ಭಗಳಲ್ಲಿ ಒಂದೋ ಅಜಾಗರೂಕತೆಯಿಂದ ವೈದ್ಯಕೀಯ ಸಲಹೆಯನ್ನು ನಿರ್ಲಕ್ಷಿಸಿ ತಮ್ಮ ಇಚ್ಛೆಗನುಸಾರ ಎಲ್ಲವನ್ನೂ ತಿನ್ನುವವರು ಅಥವಾ ಅತಿಯಾದ ಜಾಗರೂಕತೆಯಿಂದ ಎಲ್ಲವನ್ನೂ ತಿರಸ್ಕರಿಸಿ ಹಬ್ಬವನ್ನು ಆಚರಿಸುವವರು – ಹೀಗೆ ಎರಡು ರೀತಿಯ ನಡವಳಿಕೆಯನ್ನು ತೋರ್ಪಡಿಸುವವರು ಇರುತ್ತಾರೆ. ಆದರೆ ಇವೆರಡರ ನಡುವೆ ಸಮದೂಗಿಸಿದ ನಡವಳಿಕೆಯಿಂದ ಪ್ರತೀ ಹಬ್ಬವನ್ನು ಆನಂದಿಸುವಂತಿರಬೇಕು.

ಹಾಗೆಯೇ ಅತಿಥಿ ದೇವೋ ಭವ ಎನ್ನುವುದು ಭಾರತೀಯರು ಅಳವಡಿಸಿಕೊಂಡಿರುವ ಅತ್ಯಂತ ಪ್ರಮುಖ ಗುಣ. ಆದರೆ ವಿಶೇಷ ಸಮಾರಂಭಗಳಲ್ಲಿ ಮನೆಗೆ ಬರುವ ಅತಿಥಿಗಳಿಗೆ ಊಟದ ವಿಚಾರದಲ್ಲಿ ಅತಿಯಾದ ಒತ್ತಾಯ ತರವಲ್ಲ.

ಮೊದಲೇ ತಿಳಿಸಿದಂತೆ ಅಕ್ಟೋಬರ್‌, ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳಲ್ಲಿ ಹಬ್ಬಗಳಾದರೆ ಮಾರ್ಚ್‌, ಎಪ್ರಿಲ್‌, ಮೇ ತಿಂಗಳುಗಳಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸಮಾರಂಭಗಳು ಹಾಗೂ ಅತಿ ಹೆಚ್ಚಾಗಿ ಎಲ್ಲರೂ ಇಷ್ಟಪಡುವ ಹಣ್ಣುಗಳು ಲಭ್ಯ ಇರುತ್ತವೆ. ಈ ಸಮಯದಲ್ಲಿ ಮಧುಮೇಹದೊಂದಿಗೆ ಜೀವಿಸುವವರಿಗೆ ಮಧುಮೇಹದ ನಿಯಂತ್ರಣ ದೊಡ್ಡ ಸವಾಲು. ಇದರ ಜತೆಗೆ ಮಧುಮೇಹದೊಂದಿಗೆ ಜೀವಿಸುವವರಿಗೆ ಸಮಾರಂಭಗಳಲ್ಲಿ ಎಲ್ಲರ ಜತೆಗೆ ಕುಳಿತು ವಿಶೇಷ ಊಟ ಮಾಡುವ ಒತ್ತಡ ಹಾಗೆಯೇ ಧಾರ್ಮಿಕ ಆಚರಣೆಯ ಭಾಗವಾಗಿ ಮಠ ಮಂದಿರ ಇತ್ಯಾದಿಗಳಲ್ಲಿ ಸಿಹಿ ಊಟ ಮಾಡಬೇಕಾದ ಸಂದಿಗ್ಧತೆ ಎದುರಾಗುತ್ತದೆ. ಊರಿನ ಮಾರಿ, ನಾಗಮಂಡಲ, ಢಕ್ಕೆ ಬಲಿ, ಭೂತ, ಕೋಲ, ಯಕ್ಷಗಾನ ಇತ್ಯಾದಿಗಳಿಂದ ನಿದ್ರೆಯಲ್ಲಿ ಮತ್ತು ಆಹಾರದ ಸಮಯದಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಮಧುಮೇಹದ ನಿಯಂತ್ರಣಕ್ಕೆ ಕೆಲವು ಮಾರ್ಗಸೂಚಿ ಇಲ್ಲಿದೆ.

ಸಾಮಾಜಿಕ ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಬಫೆ (ಸ್ವಯಂ-ಬಡಿಸಿಕೊಳ್ಳುವ) ಊಟ ಇದ್ದಲ್ಲಿ, ಬೇಕಿದ್ದಷ್ಟು ಮತ್ತು ಯೋಗ್ಯವಾದ ಆಹಾರದ ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಇದಿಲ್ಲದೆ ಪಂಕ್ತಿಯಲ್ಲಿ ಕುಳಿತು ಊಟ ಮಾಡುವ ವ್ಯವಸ್ಥೆ ಇದ್ದಾಗ ತನಗೆ ಸೂಕ್ತವಾಗುವ ಆಹಾರವನ್ನು ಮಾತ್ರ ಬಡಿಸುವಂತೆ ಹೇಳುವುದು ಉತ್ತಮ.

ಆದಷ್ಟು ಕಡಿಮೆ ಸಿಹಿ ಮತ್ತು ಅತಿ ಕಡಿಮೆ ಕಾಬೋಹೈಡ್ರೇಟ್‌ ಅಂಶವಿರುವ ಆಹಾರದ ಸೇವನೆಯನ್ನು ಮಾಡುವುದು ಉತ್ತಮ.

ಮಧುಮೇಹದ ನಿಯಂತ್ರಣಕ್ಕೆ ಅಡ್ಡಿಯಾಗುವ ಆಹಾರವನ್ನು ನಿರ್ದಾಕ್ಷಿಣ್ಯವಾಗಿ, ಯಾವುದೇ ಮುಜುಗರ ಪಡದೇ ಬೇಡ ಎನ್ನುವ ಕ್ರಮ ರೂಢಿಸಿಕೊಳ್ಳುವುದು ಒಳ್ಳೆಯದು.

 ಸಮಾರಂಭದ ಆಯೋಜನೆ ಮಾಡಿದವರು ಒತ್ತಾಯಪೂರ್ವಕವಾಗಿ ಸಿಹಿ ಇತ್ಯಾದಿಗಳನ್ನು ಅತಿಥಿಗಳಿಗೆ ಬಡಿಸುವ ಪದ್ಧತಿಯನ್ನು ಕಡಿಮೆಗೊಳಿಸುವುದು ಸೂಕ್ತ.

 ನಿರ್ದಾಕ್ಷಿಣ್ಯವಾಗಿ ದೇವಸ್ಥಾನ ಮಂದಿರ ಇತ್ಯಾದಿಗಳಲ್ಲಿ ಕೊಡುವ ಸಿಹಿ ಪ್ರಸಾದವನ್ನು ಸ್ವಲ್ಪ ಪ್ರಮಾಣದಲ್ಲಿ ಸ್ವೀಕರಿಸುವುದು ಒಳ್ಳೆಯದು.

ನಿರ್ದಾಕ್ಷಿಣ್ಯವಾಗಿ ಹಲಸಿನ ಹಣ್ಣು, ಮಾವಿನ ಹಣ್ಣು ಇತ್ಯಾದಿ ಸಿಹಿಯಾದ ಹಣ್ಣುಗಳನ್ನು ಮಧುಮೇಹ ನಿಯಂತ್ರಣದಲ್ಲಿದ್ದಾಗ ಮಾತ್ರ ನಿಗದಿತ ಪ್ರಮಾಣದಲ್ಲಿ ತಿನ್ನುವುದು ಸೂಕ್ತ. ಈ ಹಣ್ಣುಗಳನ್ನು ತಿಂದಷ್ಟೂ ಇನ್ನೂ ತಿನ್ನಬೇಕೆನ್ನುವ ಬಯಕೆ ಆಗುವುದರಿಂದ ಆದಷ್ಟು ತಿನ್ನದೇ ಇರುವುದೇ ಉತ್ತಮ ಮಾರ್ಗ.

ಮಳೆಗಾಲದಲ್ಲಿ ಹೆಚ್ಚಾಗಿ ಸೇವನೆ ಮಾಡುವ ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆಯನ್ನು ಆದಷ್ಟು ಕಡಿಮೆಗೊಳಿಸಬೇಕು.

 ರಾತ್ರಿಯೆಲ್ಲ ನಡೆಯುವ ಸಮಾರಂಭಗಳಿದ್ದಲ್ಲಿ ನಿದ್ರೆ, ಆಹಾರದ ಸಮಯ, ಆಯ್ಕೆ ಮತ್ತು ಪ್ರಮಾಣದ ಬಗ್ಗೆ ಸಮಂಜಸವಾದ ಮತ್ತು ಕಾರ್ಯರೂಪಕ್ಕೆ ತರಬಹುದಾದ ಯೋಜನೆಯನ್ನು ಮಾಡಿ ಅಭ್ಯಾಸದಲ್ಲಿ ರೂಢಿಸಿಕೊಳ್ಳುವುದು ಸೂಕ್ತ.

ಪ್ರತಿಯೊಬ್ಬ ಮಧುಮೇಹದೊಂದಿಗೆ ಜೀವಿಸುವವರು ಭಾರತದ ಭೌಗೋಳಿಕ ಮತ್ತು ಸಾಂಸ್ಕೃತಿಕ ವಿಭಿನ್ನತೆಯಂತೆ ವಿಭಿನ್ನರಾಗಿರುವುದರಿಂದ ವೈದ್ಯರು, ಪಥ್ಯಾಹಾರ ತಜ್ಞರು, ಶುಶ್ರೂಷಕ ಶುಶ್ರೂಷಕಿಯರು ಮತ್ತು ವ್ಯಾಯಾಮತಜ್ಞರೊಂದಿಗೆ ಚರ್ಚಿಸಿ ಸೂಕ್ತ ಯೋಜನೆ ಮಾಡಿ ಮಧುಮೇಹದ ನಿಯಂತ್ರಣಕ್ಕೆ ಬೇಕಾದ ಮಾರ್ಗೋಪಾಯ ಅಳವಡಿಸಿಕೊಳ್ಳಬೇಕು. ಇದರಿಂದ ಸಾಮಾಜಿಕ ಸಂತೋಷ ಮತ್ತು ಧಾರ್ಮಿಕ ನಂಬಿಕೆಗಳ ಆಚರಣೆಯೊಂದಿಗೆ ಮಧುಮೇಹದ ನಿರ್ವಹಣೆಯನ್ನೂ ಮಾಡಿಕೊಂಡು ಉತ್ತಮ ಆರೋಗ್ಯ ಹೊಂದಲು ಸಾಧ್ಯ.

ಉಪವಾಸದ ಸಂದರ್ಭದಲ್ಲಿ ಮಧುಮೇಹದೊಂದಿಗೆ ಜೀವಿಸುವವರು ಮಧುಮೇಹ‌ ನಿಯಂತ್ರಣ
ಸುಗಮವಾಗಿಸಲು ಯೋಜನೆ ಮಾಡಲು ಅಗತ್ಯವಾಗಿ ತಿಳಿದಿರಬೇಕಾದ ಪ್ರಾಥಮಿಕ ಮಾಹಿತಿಗಳಾವುವು?

ನವರಾತ್ರಿ, ರಜ್ಜಾನ್‌, ಈಸ್ಟರ್‌ನ ಮೊದಲ ಕಪ್ಪು ದಿನಗಳು ಸಾಮಾನ್ಯವಾಗಿ ಕಾಣ ಸಿಗುವ ಉದ್ದದ ಉಪವಾಸದ ದಿನಗಳು. ಮಧುಮೇಹದೊಂದಿಗೆ ಜೀವಿಸುವವರು ಉಪವಾಸವನ್ನು ಮಾಡುವ ಮೊದಲು ವೈದ್ಯರು ಮತ್ತು ಪಥ್ಯಾಹಾರ ತಜ್ಞರೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಉಪವಾಸ ವ್ರತವನ್ನು ಕೈಗೊಳ್ಳುವುದು ಹೆಚ್ಚು ಸೂಕ್ತ. ಈ ಉಪವಾಸಪೂರ್ವ ಅರೋಗ್ಯ ತಪಾಸಣೆಯಿಂದ ಉಪವಾಸದ ಸಂದರ್ಭದಲ್ಲಿ ಮಧುಮೇಹದೊಂದಿಗೆ ಜೀವಿಸುವವರು ಆಹಾರ ಕ್ರಮದಲ್ಲಿ ಮಾಡಬೇಕಾದ ಬದಲಾವಣೆ ಮತ್ತು ಔಷಧದಲ್ಲಿನ ಮಾರ್ಪಾಡಿನ ಆವಶ್ಯಕತೆಯನ್ನು ತಿಳಿದು ಪಾಲಿಸಲು ಸಹಕಾರಿಯಾಗಿರುತ್ತದೆ. ಇದು ರಕ್ತದಲ್ಲಿ ಗ್ಲುಕೋಸ್‌ ಅಂಶ ಅತಿಯಾಗಿ ಅಥವಾ ಕಡಿಮೆಯಾಗಿ ಅನಾಹುತವಾಗುವುದನ್ನು ತಪ್ಪಿಸಿ, ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಸಹಕಾರಿಯಾಗುತ್ತದೆ.

ಉಪವಾಸವು ಕೂಡ ಜೀವನಶೈಲಿಯ ಮಾರ್ಪಾಡಿನ ಭಾಗ. ಇದನ್ನು ಸರಿಯಾಗಿ ಮಾಡುವುದರಿಂದ ಹಲವಾರು ಲಾಭಗಳನ್ನು ಹೊಂದಿರಬಹುದು. ಆದರೆ ಉಪವಾಸಕ್ಕಿಂತ ಮೊದಲು ನಿಧಾನವಾಗಿ ಕ್ಯಾಲರಿ ಬಿಡುಗಡೆ ಆಗುವ ಆಹಾರದ ಸೇವನೆ (ಹಣ್ಣುಗಳು, ಧಾನ್ಯಗಳು) ಮತ್ತು ಸಾಕಷ್ಟು ನೀರಿನ (ವಿಶೇಷವಾಗಿ ಉಪವಾಸದಲ್ಲಿ ನೀರು ನಿಷಿದ್ಧವಾಗಿದ್ದಲ್ಲಿ) ಸೇವನೆ ಅಗತ್ಯ. ಉಪವಾಸದ ಸಂದರ್ಭದಲ್ಲಿ ಯಾವುದೇ ಶ್ರಮದಾಯಕ ಕೆಲಸ ಅಥವಾ ವ್ಯಾಯಾಮ ಸಂಪೂರ್ಣ ನಿಷಿದ್ಧ. ಧಾರ್ಮಿಕ ಉಪವಾಸದ ಸಂದರ್ಭದಲ್ಲಿನ ಧ್ಯಾನ ಮತ್ತು ಪ್ರಾರ್ಥನೆಯಿಂದ ಒತ್ತಡ ನಿರ್ವಹಣೆಗೆ ಅನುಕೂಲವಾಗುತ್ತದೆ.

ಏಕಾದಶಿ, ಸಂಕಷ್ಟಹರಣ ಚೌತಿ, ಪ್ರದೋಷ ಷಷ್ಠಿ ಇತ್ಯಾದಿ ತಿಂಗಳಿಗೊಮ್ಮೆ ಅಥವಾ ತಿಂಗಳಿಗೆರಡು ಬಾರಿ ಮಾಡುವ ಉಪವಾಸದ ಸಂದರ್ಭದಲ್ಲಿ ಔಷಧಗಳ ಬಗ್ಗೆ ವೈದ್ಯರಲ್ಲಿ ಚರ್ಚಿಸಿ ಸೂಕ್ತ ಮಾರ್ಗದರ್ಶನ ತೆಗೆದುಕೊಳ್ಳಬೇಕು.  ಎಲ್ಲ ಉಪವಾಸಗಳ ಸಂದರ್ಭದಲ್ಲಿ ರಕ್ತದಲ್ಲಿ ಸಕ್ಕರೆಯ ಅಂಶವನ್ನು ತಿಳಿಯಲು ಸ್ವಯಂ-ಪರೀಕ್ಷೆ ಮಾಡಿಕೊಳ್ಳಬೇಕು. ಆರೋಗ್ಯದಲ್ಲಿ ಏರುಪೇರಾದಲ್ಲಿ ಉಪವಾಸವನ್ನು ನಿಲ್ಲಿಸುವ ನಮ್ಯತೆಯನ್ನು ಹೊಂದಿರಬೇಕು.

ಪ್ರಭಾತ್‌ ಕಲ್ಕೂರ ಎಂ.
ಸಂಶೋಧನಾ ವಿದ್ಯಾರ್ಥಿ, ಮಣಿಪಾಲ್‌ ಕಾಲೇಜ್‌ ಆಫ್ ಹೆಲ್ತ್‌ ಪ್ರೊಫೆಷನ್ಸ್‌, ಮಣಿಪಾಲ

ಡಾ| ಶಶಿಕಿರಣ್‌ ಉಮಾಕಾಂತ್‌
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಮೆಡಿಸಿನ್‌ ವಿಭಾಗ, ಡಾ| ಟಿಎಂಎ ಪೈ ಆಸ್ಪತ್ರೆ, ಉಡುಪಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ