ಪಾನೀಯಗಳು ಕೆಫೀನ್‌ ಸಹಿತ ಅಥವಾ ಕೆಫೀನ್‌ರ‌ಹಿತ?

Team Udayavani, Sep 22, 2019, 4:30 AM IST

ಮೃದು ಉದ್ದೀಪಕವಾಗಿರುವ ಕೆಫೀನ್‌ ಕಳೆದ ಹಲವಾರು ಶತಮಾನಗಳಿಂದ ನಮ್ಮ ಆಹಾರ ಶೈಲಿಯ ಭಾಗವಾಗಿದೆ. ಚೀನೀಯರು 5,000 ವರ್ಷಗಳ ಹಿಂದೆಯೇ ಚಹಾವನ್ನು ಶೋಧಿಸಿ ಕುಡಿಯುತ್ತಿದ್ದರು ಎಂಬುದಾಗಿ ದಾಖಲೆಗಳು ಹೇಳುತ್ತವೆ. ಆ ದಿನಗಳಿಂದಲೂ ಕೆಫೀನ್‌ ನಮ್ಮ ಆಹಾರದ ಭಾಗವಾಗಿದೆ. ಇವತ್ತು ಕೆಫೀನ್‌ಯುಕ್ತ ಆಹಾರಗಳು ಮತ್ತು ಪಾನೀಯಗಳು ನಮ್ಮ ಆಹಾರದ ಅವಿಭಾಜ್ಯ ಅಂಗಗಳಾಗಿವೆ. ನಮಗೆಲ್ಲರಿಗೂ ಕಾಫಿ ಅಥವಾ ಚಹಾ ಇಲ್ಲದಿದ್ದರೆ ಬೆಳಗಾಗುವುದೇ ಇಲ್ಲ!

ಸಸ್ಯಗಳಲ್ಲಿ, ವಿಶೇಷವಾಗಿ ಎಲೆಗಳು, ಬೀಜಗಳು ಮತ್ತು ಹಣ್ಣುಗಳಲ್ಲಿ ಕೆಫೀನ್‌ ಇರುತ್ತದೆ. ಸುಮಾರು 60ಕ್ಕೂ ಹೆಚ್ಚಿನ ಸಸ್ಯಗಳು ಕೆಫೀನ್‌ ಹೊಂದಿವೆ ಎಂಬುದಾಗಿ ಅಂದಾಜಿ ಸಲಾಗಿದೆ. ಅವುಗಳಲ್ಲಿ ಕಾಫಿ ಬೀಜ, ಕೊಕೊ ಬೀಜ ಮತ್ತು ಚಹಾ ಎಲೆಗಳು ಮುಖ್ಯವಾದವು.

ಕಾಫಿಯು ಕೆಫೀನ್‌ನ ಮುಖ್ಯ ಮೂಲವಾಗಿದ್ದು, ಅದರ ಪ್ರಮಾಣ ಎಷ್ಟಿದೆ ಎನ್ನುವುದು “ಮೊಚಾ’, “ಕೆಪುಚಿನೊ’ ಹೀಗೆ ಯಾವ ವಿಧದ ಕಾಫಿ ಎನ್ನುವುದನ್ನು ಅವಲಂಬಿಸಿರುತ್ತದೆ. ಕಾಫಿಯ ಪ್ರಮಾಣ ಮತ್ತು ಅದನ್ನು ತಯಾರಿಸಿದ ವಿಧಾನವು ಅದರಲ್ಲಿ ಎಷ್ಟು ಕೆಫೀನ್‌ ಇದೆ ಎಂಬುದನ್ನು ನಿರ್ಧರಿಸುತ್ತದೆ ಹಾಗೂ ಅದು ಕೆಫೀನ್‌ಯುಕ್ತವಾಗಿದೆಯೇ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ.

ಸಾಫ್ಟ್ ಡ್ರಿಂಕ್‌ಗಳು ಮತ್ತು ಚಹಾ ಕೂಡ ಮಕ್ಕಳು ಹಾಗೂ ಹದಿಹರಯದವರಿಗೆ ಕೆಫೀನ್‌ನ ಮುಖ್ಯ ಮೂಲಗಳಾಗಿವೆ. ಸಿಟ್ರಸ್‌ ಸ್ವಾದವುಳ್ಳ ಕೆಲವು ಪಾನೀಯಗಳಲ್ಲಿಯೂ ಕೆಫೀನ್‌ ಇರುತ್ತದೆ. ಕೆಫೀನ್‌ ಕೇಂದ್ರ ನರವ್ಯವಸ್ಥೆಯಲ್ಲಿ ಸೌಮ್ಯ ಉದ್ದೀಪಕವಾಗಿ ಕೆಲಸ ಮಾಡುತ್ತದೆ. ಕೆಲವರು ತಮ್ಮನ್ನು ಜಾಗೃತರಾಗಿ ಉಳಿಸಿಕೊಳ್ಳಲು ಮತ್ತು ದಣಿವನ್ನು ತಡೆಯಲು ಈ ಪಾನೀಯಗಳನ್ನು ಕುಡಿಯುತ್ತಾರೆ.

ಕ್ಯಾನ್ಸರ್‌, ಹೃದ್ರೋಗಗಳು, ಹುಣ್ಣುಗಳು, ಓಸ್ಟಿಯೊಪೊರೋಸಿಸ್‌, ಜನನವೈಕಲ್ಯಗಳು ಇತ್ಯಾದಿಯಾಗಿ ಯಾವುದೇ ಆರೋಗ್ಯ ಸಮಸ್ಯೆಗಳಿಗೂ ಕೆಫೀನ್‌ಗೂ ಸಂಬಂಧ ಕಲ್ಪಿಸುವ ಯಾವುದೇ ಸಾಕ್ಷ್ಯಗಳು ಇದುತನಕ ಲಭಿಸಿಲ್ಲ. ಕೆಫೀನ್‌ ಅಧಿಕ ರಕ್ತದೊತ್ತಡ ಅಥವಾ ದೀರ್ಘ‌ಕಾಲಿಕ ರಕ್ತದೊತ್ತಡ ಹೆಚ್ಚಳವನ್ನು ಉಂಟು ಮಾಡುವುದಿಲ್ಲ ಎಂಬುದಾಗಿ ಸಂಶೋಧನೆಗಳು ಹೇಳುತ್ತವೆ. ಆದರೆ ಕೆಲವು ತಾಸುಗಳಿಗೆ ಸೀಮಿತವಾಗುವ ಅಧಿಕ ರಕ್ತದೊತ್ತಡವನ್ನು ಕೆಫೀನ್‌ ಉಂಟು ಮಾಡಬಹುದು.

ಮೂತ್ರ ವಿಸರ್ಜನೆಯ ಮೂಲಕ ದೇಹದ ದ್ರವಾಂಶ ಹೆಚ್ಚು ನಷ್ಟವಾಗುವ ಡಿಯೂರೆಟಿಕ್‌ ಪರಿಣಾಮವನ್ನು ಕೆಫೀನ್‌ ಉಂಟು ಮಾಡುತ್ತದೆ. ಡಿಯೂರೆಟಿಕ್‌ ಪರಿಣಾಮವು ಸೇವಿಸಿದ ಕೆಫೀನ್‌ ಪ್ರಮಾಣವನ್ನು ಅವಲಂಬಿಸಿದೆ, ಆದರೆ ಅದು ನಿರ್ಜಲೀಕರಣವನ್ನು ಉಂಟು ಮಾಡುವುದಿಲ್ಲ. ಭೇದಿಯುಂಟಾಗಿರುವ ಸಂದರ್ಭದಲ್ಲಿ ಕಾಫಿ ಸೇವನೆಯನ್ನು ವರ್ಜಿಸುವುದು ವಿಹಿತ.

ಕ್ಯಾಲ್ಸಿಯಂ ಅಂಶವು ಮಲ ಮತ್ತು ಮೂತ್ರದ ಮೂಲಕ ನಷ್ಟವಾಗುವುದು ದಿನಕ್ಕೆ ಹೆಚ್ಚು ಕಾಫಿ ಕುಡಿಯುವ ಜನರಲ್ಲಿ ಹೆಚ್ಚು. ಆದರೆ ಕಾಫಿಗೆ ಹಾಲು ಬೆರೆಸುವ ಮೂಲಕ ಇದನ್ನು ಸರಿದೂಗಿಸಿಕೊಳ್ಳಬಹುದು. ಕಾಫಿಯಲ್ಲಿ ನೊರೆಯನ್ನು ಉಂಟು ಮಾಡಲು ಅಥವಾ ಅದನ್ನು ಹೆಚ್ಚು ಸಮೃದ್ಧವನ್ನಾಗಿಸಲು ಸಂಪೂರ್ಣ ಹಾಲನ್ನೇ ಉಪಯೋಗಿಸಬೇಕಾಗಿಲ್ಲ; ಕಡಿಮೆ ಕೊಬ್ಬಿನ ಸ್ಕಿಮ್‌ ಹಾಲು ಕೂಡ ಲಭ್ಯವಿದೆ. ಲ್ಯಾಕ್ಟೋಸ್‌ ಅಸಹಿಷ್ಣುತೆಯ ಸಮಸ್ಯೆ ಹೊಂದಿರುವವರು ಹಸುವಿನ ಹಾಲಿನ ಬದಲು ಸೊಯಾ ಹಾಲನ್ನು ಬಳಸಬಹುದು.

ನೀವು ಕೆಫೀನ್‌ ಸೇವನೆಯನ್ನು ಕಡಿಮೆ ಮಾಡಲು ಬಯಸಿದ್ದರೆ
ಅದು ಬಹಳ ಸುಲಭ. ಹೇಗೆ ಕಡಿಮೆ ಮಾಡಬೇಕು ಎಂಬ ಸೂತ್ರ ಇಲ್ಲಿದೆ:
1. ನಿಧಾನವಾಗಿ ಮತ್ತು ಸ್ವಲ್ಪಸ್ವಲ್ಪವೇ ಕಡಿಮೆ ಮಾಡಿ: ಪ್ರಮಾಣವನ್ನು ನಿಧಾನವಾಗಿ ಕಡಿಮೆ ಮಾಡಿ. ಹಠಾತ್ತಾಗಿ ನಿಲ್ಲಿಸಿದರೆ ತಲೆನೋವು ಅಥವಾ ತೂಕಡಿಕೆ ಕೆಲವು ದಿನಗಳ ಕಾಲ ಬಾಧಿಸಬಹುದು.
2. ಅರ್ಧ ಸಾಮಾನ್ಯ ಕಾಫಿ ಮತ್ತು ಅರ್ಧ ಕೆಫೀನ್‌ಯುಕ್ತ ಕಾಫಿಗಳನ್ನು ಮಿಶ್ರಣ ಮಾಡಿ ಕುಡಿಯಿರಿ. ಅಂದರೆ ಲೈಟ್‌ ಕಾಫಿ ಕುಡಿಯಿರಿ.
3. ಕುಡಿಯಬೇಕು ಅನ್ನಿಸಿದಾಗ ಗುಟುಕರಿಸಲು ಒಂದು ಕಪ್‌ ನೀರನ್ನು ಕೈಯಳತೆಯಲ್ಲಿ ಇರಿಸಿಕೊಳ್ಳಿ. ಕುಡಿಯಲೇಬೇಕು ಅನ್ನುವ ತಡೆಯಲಸಾಧ್ಯ ತಹತಹ ಉಂಟಾದಾಗ ಒಂದು ಕಪ್‌ ಕಾಫಿಯ ಬಳಿಕ ಒಂದು ಗುಟುಕು ನೀರು ಕುಡಿಯಿರಿ.
4. ನಿದ್ರಾಹೀನತೆ ಇರುವವರು ಸಂಜೆಯ ಕೆಫೀನ್‌ಯುಕ್ತ ಪಾನೀಯ ಸೇವನೆಯನ್ನು ವರ್ಜಿಸಿ.
ಸಾಮಾನ್ಯವಾಗಿ ಜನರು ಕಾಫಿ ಡಿಕಾಕ್ಷನ್‌ ತಯಾರಿಸಿ, ಅದಕ್ಕೆ ಬೇಕಾದಷ್ಟು ಪ್ರಮಾಣದ ಹಾಲು ಬೆರೆಸಿಕೊಳ್ಳುತ್ತಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವಾರು ವಿಧದ ದಿಢೀರ್‌ ಕಾಫಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇವನ್ನು ಕುದಿಸಬೇಕಾಗಿಲ್ಲ. ಇವುಗಳನ್ನು ಕೊಳ್ಳುವ ಮುನ್ನ ಲೇಬಲ್‌ ಪರಿಶೀಲಿಸಿಕೊಳ್ಳಿ.

-ಮುಂದುವರಿಯುವುದು

-ಡಾ| ಅರುಣಾ ಮಲ್ಯ
ಹಿರಿಯ ಡಯಟೀಶನ್‌
ಕೆಎಂಸಿ ಆಸ್ಪತ್ರೆ, ಮಂಗಳೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಹಿಂಗಾರು ಮಾರುತಗಳ ಭರ್ಜರಿ ಪ್ರವೇಶ ದಿಂದ ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಮಳೆ ಅಬ್ಬರಿ ಸುತ್ತಿದೆ. ಇನ್ನೂ ಮೂರ್‍ನಾಲ್ಕು ದಿನಗಳು ಇದೇ ವಾತಾವರಣ...

  • ಏಷಿಯಾದ ಮೊದಲ "ಬಿಪಿಎಲ್‌'ಗೆ ಭಾನುವಾರ ಪ್ರಾಯೋಗಿಕ ಚಾಲನೆ ಸಿಕ್ಕಿದೆ. ಈ ಒಂದು ಪಥ ಯಶಸ್ವಿಯಾದರೆ, ನಗರ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಿಗೆ ಮುನ್ನುಡಿ...

  • ಬೆಂಗಳೂರು: ಅಲಯನ್ಸ್‌ ವಿವಿಯ ವಿಶ್ರಾಂತ ಕುಲಪತಿ ಹಾಗೂ ರಾಜಕಾರಣಿ ಡಾ.ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಎರಡನೇ ಪ್ರಮುಖ ಆರೋಪಿ ಹಾಗೂ ಸುಪಾರಿ ಹಂತಕನಿಗೆ ಉತ್ತರ...

  • ವೀರ ಸಾವರ್ಕರ್‌ಗೆ "ಭಾರತ ರತ್ನ' ನೀಡುವ ಮಹಾರಾಷ್ಟ್ರ ಬಿಜೆಪಿ ಪ್ರಣಾಳಿಕೆಯ ಅಂಶದ ಬಗ್ಗೆ ರಾಜಕೀಯ ನಾಯಕರ ವಾಕ್ಸಮರ ಭಾನುವಾರವೂ ಮುಂದುವರಿದಿದೆ. ಇದೇ ವಿಚಾರವಾಗಿ...

  • ಬೆಂಗಳೂರು: ಅನಿಷ್ಠ ಹಾಗೂ ನಿಷೇಧಿತ ದೇವದಾಸಿ ಪದ್ಧತಿಯಿಂದ ಮುಕ್ತಿ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬಂದು ಗೌರವ ಹಾಗೂ ಘನತೆಯ ಬದುಕು ಕಟ್ಟಿಕೊಳ್ಳುತ್ತಿರುವ...