ವೃದ್ಧಾಪ್ಯ ಸಂಧಿವಾತ

Team Udayavani, Nov 3, 2019, 4:00 AM IST

ಸಂಧಿವಾತವು ಶರೀರದ ಕೀಲುಗಳ (ಕೀಲು = ಸಂಧು) ಮೇಲೆ ಪರಿಣಾಮ ಉಂಟುಮಾಡುವ ಒಂದು ರೋಗಲಕ್ಷಣವಾಗಿದ್ದು, ವಯಸ್ಸಾದಂತೆ ತೀವ್ರವಾಗುತ್ತದೆ. ಕೂದಲು ಉದುರುವಂತೆ, ನರೆದಂತೆ, ಚರ್ಮ ಸುಕ್ಕಾದಂತೆ ವಯಸ್ಸಾದಂತೆ ಕಾಣಿಸಿಕೊಳ್ಳುವ ಸಾಮಾನ್ಯ ತೊಂದರೆ. ಮೊಣಕಾಲು, ಸೊಂಟ, ಭುಜದಂತಹ ಕೀಲುಗಳಲ್ಲಿ ಮತ್ತು ಕೈಯ ಸಣ್ಣ ಕೀಲುಗಳಲ್ಲಿ ಪ್ರಭಾವ ಜಾಸ್ತಿ.

ಸಂಧಿ / ಕೀಲು : ಎರಡು ಅಥವಾ ಹೆಚ್ಚು ಎಲುಬುಗಳು ಸಂಧಿಸುವ ಸ್ಥಳ. ಚಲನವಲನಕ್ಕೆ ಮತ್ತು ನಡೆದಾಡಲು ಇಂತಹ ಜೋಡಣೆಗಳು ಆವಶ್ಯಕ. ಎಲುಬುಗಳು ಸಂಧಿಸುವ ಸ್ಥಳದಲ್ಲಿ ಮೃದ್ವಸ್ಥಿ (ಕಾರ್ಟಿಲೇಜ್‌) ಎಂಬ ಮೃದುವಾದ, ನಯವಾದ ಪದರ ಆವರಿಸಿಕೊಂಡಿರುತ್ತದೆ. ಎಣ್ಣೆಯಂತಹ ಸೈನೋಯಲ್‌ ದ್ರವ ಘರ್ಷಣೆ ಇಲ್ಲದೆ ಕೀಲು ಚಲಿಸುವಂತೆ ಮಾಡುತ್ತದೆ.

ಸಂಧಿವಾತದ ಎಚ್ಚರಿಕೆ ಕರೆಘಂಟೆ:
ಲಕ್ಷಣಗಳು ಹಂತಹಂತವಾಗಿ
ಹೆಚ್ಚಾಗುತ್ತವೆ.
-ಕೀಲಿನಲ್ಲಿ ಬಿಗಿತ / ಸೆಳಕು: ಹಾಸಿಗೆಯಿಂದ ಏಳುವಾಗ, ಬಹಳ ಹೊತ್ತು ಕುಳಿತು ಮೇಲೆ ಏಳುವಾಗ ಕೀಲುಗಳಲ್ಲಿ ಬಿಗಿತ (ಸ್ಟಿಫ್ನೆಸ್‌).
– ಕೀಲು ನೋವು: ಸಂಜೆಯಾದಂತೆ, ದಿನಗಳೆದಂತೆ ಮೊಣಕಾಲಿನಲ್ಲಿ ನೋವು, ಮೆಟ್ಟಿಲೇರುವಾಗ, ಇಳಿಯುವಾಗ, ನೆಲದಲ್ಲಿ ಕುಳಿತುಕೊಳ್ಳುವಾಗ, ದೂರ ನಡೆದಂತೆ ಹೆಚ್ಚಾಗುವ -ವಿರಮಿಸಿದಾಗ ಕಡಿಮೆಯಾಗುವ ನೋವು.
– ಸಂಧಿಯೊಳಗೆ ಶಬ್ದ ಸವೆದ ಕಾರ್ಟಿಲೇಜ್‌ ದೊರಗಾಗುತ್ತದೆ. ದೊರಗಾದ ಎರಡು ಎಲುಬಿನ ತುದಿಗಳು ಒಂದನ್ನೊಂದು ಸ್ಪಂದಿಸಿದಾಗ ಕರಕರನೆ ಶಬ್ದವಾದಂತೆ ಭಾಸವಾಗುತ್ತದೆ.

ಸಂಧಿವಾತ: ಕೀಲು ನೋವು
ಚಿಕಿತ್ಸೆ ಏನು?
ಉದ್ದೇಶ: ನೋವು ನಿಯಂತ್ರಣ, ಸಾಮಾನ್ಯ ದೇಹ ತೂಕ – ಬೊಜ್ಜು ಇಳಿಸುವಿಕೆ.
-ಕೀಲುಗಳ ಕಾರ್ಯಕ್ಷಮತೆ, ಶಕ್ತಿ ಹೆಚ್ಚಿಸುವುದು
-ಆರೋಗ್ಯಕರ ಜೀವನ ಶೈಲಿ
-ಜೀವನ ಶೈಲಿಯಲ್ಲಿ ಬದಲಾವಣೆ

ವಿಧಾನಗಳು:
-ವ್ಯಾಯಾಮ
-ತೂಕ ನಿಯಂತ್ರಣ
– ಔಷಧ ರಹಿತ ನೋವು ನಿವಾರಣೆ
– ಔಷಧಗಳು
-ಇಂಜೆಕ್ಷನ್‌
-ಶಸ್ತ್ರಚಿಕಿತ್ಸೆ

ಜೀವನ ಶೈಲಿಯಲ್ಲಿ ಬದಲಾವಣೆ
ವೃತ್ತಿಜನ್ಯ ಕೀಲುನೋವಿನಲ್ಲಿ, ಜೀವನಶೈಲಿ, ವೃತ್ತಿ ಬದಲಾವಣೆ ಅಗತ್ಯ. ಅನಾವಶ್ಯಕ ಚಲನವಲನ (ಉದಾ: ಮೆಟ್ಟಿಲೇರುವುದು, ನೆಲದಮೇಲೆ ಕುಳಿತುಕೊಳ್ಳುವುದು) ಮತ್ತು ಹಾನಿಕಾರಕ ಚಲನವಲನಗಳನ್ನು ನಿಲ್ಲಿಸಿದರೆ ಕೀಲಿನ ವಯಸ್ಸು ವೃದ್ಧಿಯಾಗುತ್ತದೆ. ಹೊತ್ತಿಗೆ ಸರಿಯಾಗಿ ಸಮತೋಲನ ಆಹಾರ ಸೇವನೆಯಿಂದ ದೇಹತೂಕ ಕಾಪಾಡಿಕೊಳ್ಳಬಹುದು.

ವ್ಯಾಯಾಮ
ಕೀಲುಗಳ ಸ್ನಾಯುಗಳ ಶಕ್ತಿ ಹೆಚ್ಚಿಸುವುದರಿಂದ, ಚಲನವಲನ ಕಾಯ್ದುಕೊಳ್ಳುವ ವ್ಯಾಯಾಮ ಮಾಡುವುದರಿಂದ ಕೀಲುಗಳ ಆರೋಗ್ಯ ಹೆಚ್ಚುವುದು. ಶಸ್ತ್ರಚಿಕಿತ್ಸೆಯ ಪೂರ್ವಭಾವಿ ತಯಾರಿಯಾಗಿ ವ್ಯಾಯಾಮಗಳನ್ನು ನಡೆಸಿದಲ್ಲಿ, ಫ‌ಲಿತಾಂಶ ಚೆನ್ನಾಗಿರುತ್ತದೆ. ದೈನಂದಿನ ಚಟುವಟಿಕೆ ಮುಂದುವರಿಸುವಲ್ಲಿ ಕೂಡ ವ್ಯಾಯಾಮಗಳು ಸಹಕಾರಿ.

ಔಷಧರಹಿತ ನೋವು ನಿವಾರಣೆ
ಬಿಸಿ ಹಾಗೂ ತಂಪಿನ ಸಂಯೋಜಿತ ಚಿಕಿತ್ಸೆ ಮಸಾಜ್‌, ತೈಲ ಅಭ್ಯಂಜನ, ಲೇಸರ್‌, ಇನ್‌ಫ್ರಾರೆಡ್‌ ಕಿರಣ ಮತ್ತು ಇತರ ಫಿಸಿಯೋಥೆರಪಿ ವಿಧಾನಗಳು ಉತ್ತಮ ನೋವು ನಿವಾರಣೆ ನೀಡುತ್ತವೆ.

ಮೊಣಕಾಲಿನ ಬ್ರೇಸ್‌
ನೋವಿಲ್ಲದೆ, ಆತ್ಮವಿಶ್ವಾಸದಿಂದ ನಡೆದಾಡಲು ಉಪಯೋಗಿ, ಬ್ರೇಸ್‌ ಬಳಸುವುದರಿಂದ ಕೀಲಿನ ಅನಾವಶ್ಯಕ ಚಲನವಲನ ನಿಯಂತ್ರಣ ಸಾಧ್ಯ. ವೈದ್ಯರ ಸಲಹೆ ಇಲ್ಲದೆ ಸಾಮಾನ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅವೈಜ್ಞಾನಿಕ (ನೀ ಕ್ಯಾಪ್‌) ಬಳಸದಿರುವುದು ಉತ್ತಮ. ಊರುಗೋಲು: ಎರಡೂ ಕಾಲುಗಳಲ್ಲಿ ಕೀಲು ನೋವಿದ್ದು ನಡೆಯುವ ಧೈರ್ಯ ಇಲ್ಲದಿದ್ದಲ್ಲಿ ಊರುಗೋಲು ಬಳಕೆ ಅನಿವಾರ್ಯ:

ಕೀಲು ನೋವು ಮತ್ತು ಔಷಧ
(ತಜ್ಞ ವೈದ್ಯರ ಸಲಹೆ ಅಗತ್ಯ)
– ನೋವು ನಿವಾರಣ :
ತಾತ್ಕಾಲಿಕ ನೋವಿನ ಶಮನಕ್ಕಾಗಿ ಬಹಳಷ್ಟು ಔಷಧಗಳು ಲಭ್ಯ. ಆದರೆ ತಜ್ಞವೈದ್ಯರ ಸಲಹೆಯಿಲ್ಲದೆ ಬಳಸಿದರೆ ಅಪಾಯಕಾರಿ ಅಡ್ಡಪರಿಣಾಮಗಳು ಆಗಬಹುದು. ದೀರ್ಘ‌ಕಾಲದ ನೋವು ನಿವಾರಣೆಗೆ ನೋವು ನಿವಾರಿಸುವ ಎಣ್ಣೆ, ಮುಲಾಮುಗಳ ಬಳಕೆ ಉತ್ತಮ
– ಕಾರ್ಟಿಲೇಜ್‌ ಪುನರುಜ್ಜೀವನ: ಸವೆದ ಕಾರ್ಟಿಲೇಜ್‌ ದುರಸ್ತಿಗಾಗಿ ಬಹಳಷ್ಟು ಔಷಧಗಳು ಈಗ ಲಭ್ಯವಿವೆ (ಗ್ಲೂಕೋಸಮೀನ್‌, ಡಯಾಸೆರಿನ್‌ ಇತ್ಯಾದಿ).
– ದೇಹ ತೂಕ ಇಳಿಸುವ ಔಷಧ: ದೇಹತೂಕ ಇಳಿಸುವ ಪರ್ಯಾಯ ವಿಧಾನಗಳೆಲ್ಲ ವಿಫ‌‌ಲವಾದರೆ ವೈದ್ಯರ ಸಲಹೆ ಮೇರೆಗೆ ನಿರ್ದಿಷ್ಟ ಅವಧಿಗೆ ತೂಕ ಇಳಿಸುವ ಮಾತ್ರೆ/ಪುಡಿಗಳನ್ನು ಸೇವಿಸಬಹುದು.
– ಎಚ್ಚರ: ವೈದ್ಯರ ಸಲಹೆ ಇಲ್ಲದೆ, ಸ್ವಯಂ ಔಷಧ ಬಳಕೆ, ಯಾರದೋ ಕಮಿಷನ್‌ ಆಮಿಷಕ್ಕೆ ಮಾರಲ್ಪಡುವ ದುಬಾರಿ ನ್ಯುಟ್ರೀಶನಲ್‌ ಸಪ್ಲಿಮೆಂಟ್ಸ್‌ ಇತ್ಯಾದಿಗಳು ಅವೈಜ್ಞಾನಿಕ ಮತ್ತು ಅಪಾಯಕಾರಿ. ಅನಿಶ್ಚಿತ ಔಷಧಗಳಿಂದ ಹಣ ಮತ್ತು ಆರೋಗ್ಯ ಕಳೆದುಕೊಳ್ಳಬೇಡಿ.
ಕೀಲು ನೋವಿಗೆ ಶಸ್ತ್ರಚಿಕಿತ್ಸೆ: ತಜ್ಞವೈದ್ಯರು ಕೀಲುಸವೆತದ ತೀವ್ರತೆಯ ಮೇರೆಗೆ ಬೇರೆ ಬೇರೆ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಸಲಹೆ ನೀಡುತ್ತಾರೆ.
– ಇಂಜೆಕ್ಷನ್‌: ಸವೆದ ಕೀಲಿನ ಚಲನವಲನ ನಯವಾಗಿಸಲು ಕೀಲೆಣ್ಣೆಯಂತಹ ಇಂಜೆಕ್ಷನ್‌ ಈಗ ಲಭ್ಯ. ಇಂಜೆಕ್ಷನ್‌ ಪಡೆದ ಕೂಡಲೇ ನಡೆದಾಡಲು ಸಾಧ್ಯ. ವೃದ್ಧಾಪ್ಯದ ಕೀಲುನೋವಿಗೆ ಸ್ಟಿರಾಯ್ಡ ಇಂಜೆಕ್ಷನ್‌ ಬಳಸದಿರುವುದು ಉತ್ತಮ.
– ಆಥೋìಸ್ಕೋಪಿ / ಕೀಲುದರ್ಶಕ: ಸೂಕ್ಷ್ಮ ರಂಧ್ರದ ಸಹಾಯದಿಂದ ಕೀಲಿನ ಒಳಭಾಗವನ್ನು ನೋಡಿ ಸ್ವತ್ಛ ಮಾಡುವ ವ್ಯವಸ್ಥೆ, ಮೃದ್ವಸ್ಥಿಯನ್ನು ನಯವಾಗಿಸಲು, ಕೀಲಿನೊಳಗೆ ತುಂಬಿದ ಕಸ ತೆಗೆಯಲು ಬಳಸಬಹುದು. ಸಂಧಿವಾತದ ಕಾರಣ ಪತ್ತೆಹಚ್ಚಲು ಬಯಾಪ್ಸಿಯಿಂದ ಕೂಡ ಸಾಧ್ಯ.
– ಕಾಲಿನ ಓರೆಕೋರೆ ಸರಿಪಡಿಸಲು ಶಸ್ತ್ರಚಿಕಿತ್ಸೆ: ಕಾಲು ಬಾಗಿದ್ದರೆ ಶಸ್ತ್ರಚಿಕಿತ್ಸೆ ನಡೆಸಿ ನೇರವಾಗಿಸಿದರೆ ಮುಂಬರುವ ಸವೆತ ತಡೆಗಟ್ಟಬಹದು.
– ಮಂಡಿ/ಕೀಲು ಬದಲಾವಣೆ: ಕೃತಕ ಕೀಲು ಅಳವಡಿಕೆ: ಕೀಲು ಸಂಪೂರ್ಣ ಸವೆದಿದ್ದು ಕೀಲು ವಿಕಾರಗೊಂಡಿದ್ದಲ್ಲಿ ಕೃತಕ ಮಂಡಿ ಅಳವಡಿಸಬೇಕಾಗುತ್ತದೆ (ಕೃತಕ ಮಂಡಿ = ಟೋಟಲ್‌ ನೀ ರಿಪ್ಲೇಸ್‌ಮೆಂಟ್‌; ಸಂಯುಕ್ತ ಲೋಹ ಹಾಗೂ ಪ್ಲಾಸ್ಟಿಕ್‌ ಬಳಸಿ ತಯಾರಿಸಲಾಗುತ್ತಿದೆ). ಉತ್ತಮ ನೋವು ನಿವಾರಣೆ, ಮೊದಲಿನಂತೆ ಚಲನವಲನ ಕೃತಕ ಮಂಡಿ ಅಳವಡಿಸಿಕೊಂಡರೆ ಸಾಧ್ಯ. ಶಸ್ತ್ರಚಿಕಿತ್ಸೆ ನಡೆಸಿದ ಮರುದಿನವೇ ನಡೆಯಲು ಸಾಧ್ಯ.
– ಹೊಸ ಆಯಾಮಗಳು: ಕಾರ್ಟಿಲೇಜ್‌ ಕಸಿ, ಸ್ಟೆಮ್‌ ಸೆಲ್‌ (ಸ್ಟೆಮ್‌ ಸೆಲ್‌ ಥೆರಪಿ) ಚಿಕಿತ್ಸೆಗಳು ಸದ್ಯಕ್ಕೆ ದುಬಾರಿಯಾದರೂ ಉತ್ತಮ ಭವಿಷ್ಯವನ್ನು ಹೊಂದಿವೆ.
ಕೆಲವೇ ವರ್ಷಗಳಲ್ಲಿ ಜನಪ್ರಿಯವಾಗಲಿವೆ.

ಸಂಧಿವಾತದೊಂದಿಗೆ ಜೀವನ: ಕೆಲವು ಸುಲಭ ಸೂತ್ರಗಳು
– ನಿಮಗಿರುವ ತೊಂದರೆ ಏನು ಎಂದು ಅರ್ಥಮಾಡಿಕೊಳ್ಳಿ
– ಆತ್ಮವಿಶ್ವಾಸದಿಂದ ಚಟುವಟಿಕೆಯಿಂದಿರಿ: ನಿಯಮಿತ ದೈಹಿಕ ವ್ಯಾಯಾಮ ಉತ್ಸಾಹ ನೀಡುತ್ತದೆ.
– ಚೆನ್ನಾಗಿ ನಿದ್ರಿಸಿ: ರಾತ್ರಿ ನಿಯಮಿತವಾಗಿ ನಿದ್ರಿಸಿ. ರೋಗದ ಸ್ವಭಾವ, ನೋವು ಎರಡೂ ಕಡಿಮೆಯಾಗುತ್ತದೆ.
– ಕೊರಗದೆ, ಸಂತೋಷವಾಗಿರಿ. ಹವ್ಯಾಸ, ಚಟುವಟಿಕೆಗಳು ನಿಮ್ಮನ್ನು ನೋವಿನಿಂದ ದೂರವಿಡುತ್ತವೆ.
ಚಟುವಟಿಕೆ ಹಾಗೂ ವಿರಾಮ ಸಮತೋಲನದಲ್ಲಿರಲಿ.
– ಕುಟುಂಬ, ಗೆಳೆಯರು ಹಾಗೂ ತಜ್ಞವೈದ್ಯರ ಸಲಹೆ, ಪ್ರೋತ್ಸಾಹ ಎಂದಿಗೂ ನಿಮ್ಮೊಂದಿಗೆ ಇರಲಿಸಂಧಿವಾತ ದೀರ್ಘ‌ಕಾಲದ ತೊಂದರೆ. ನಿಮ್ಮ ಕುಟುಂಬ ವೈದ್ಯರು ಹಾಗೂ ತಜ್ಞವೈದ್ಯರ ಮೇಲೆ ವಿಶ್ವಾಸವಿರಿಸಿ. ಕಾಲಕಾಲಕ್ಕೆ ಅವರ ಸಲಹೆಯಂತೆ ಚಿಕಿತ್ಸೆ ಪಡೆಯಿರಿ. ಸರಿಯಾದ ಸಮಯಕ್ಕೆ ಚಿಕಿತ್ಸೆ, ಅನಿಶ್ಚಿತ ಔಷಧಗಳು, ಜಾಹೀರಾತಿನ ಭರಾಟೆಗೆ ಮಾರುಹೋಗಿ ಹಣ ಮತ್ತು ಅರೋಗ್ಯವನ್ನು ಕಳೆದುಕೊಳ್ಳಬೇಡಿ.

ಕೀಲುಗಳೇಕೆ ಸವೆಯುತ್ತವೆ?
ಕೀಲುಗಳ ಮೃದ್ವಸ್ಥಿ -ವಯಸ್ಸಾದಂತೆ ತನ್ನ ಮೃದುತ್ವವನ್ನು ಕಳೆದುಕೊಳ್ಳುತ್ತದೆ. ಪುನರಾವರ್ತನೆಯಾಗುವ ಚಲನ ವಲನಗಳಿಂದ ಕ್ರಮೇಣ ದೊರಗಾಗಿ, ಒಡೆಯಲು ಆರಂಭಿಸುತ್ತದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಸ್ನಾಯುಗಳು ಬಿಗುಗೊಂಡು ಕೀಲಿನ ಚಲನೆ ಕುಂಠಿತವಾಗುತ್ತದೆ. ಕಾರಣಗಳು- ಹೆಚ್ಚುತ್ತಿರುವ ವಯಸ್ಸಿನ ಜತೆ ಕೀಲುಸವೆತ, ಅತಿಯಾದ ದೇಹ ತೂಕ – ಬೊಜ್ಜು, ವೃತ್ತಿ ಮತ್ತು ಜೀವನ ಶೈಲಿ: ಉದಾ: ದಿನವೂ ಹಲವು ಬಾರಿ ಮೆಟ್ಟಿಲೇರುವುದು, ನಿಂತೇ ಇರುವುದು, ಕೀಲುಗಳ ಅತಿಯಾದ ಉಪಯೋಗ, ಅಪಘಾತಗಳು, ಊನಗಳು ವಯಸ್ಸಾದಂತೆ ಬಾಗುವ ಕಾಲುಗಳು ಬೇಗನೆ ಸವೆಯುತ್ತವೆ. ಇತರ ವಾತವ್ಯಾಧಿಗಳು ರುಮುಟಾಯ್ಡ ಕಾಯಿಲೆ, ಗೌಟ್‌ ಇತ್ಯಾದಿ.

ಸಂಧಿವಾತ: ಗುರುತಿಸುವುದು ಹೇಗೆ?
ಸಂಧಿವಾತಕ್ಕೆಂದೇ ಪರೀಕ್ಷೆ ಎಂಬುದು ಇಲ್ಲ. ವೈದ್ಯಕೀಯ ಹಿನ್ನೆಲೆ, ದೇಹ ತಪಾಸಣೆಯಿಂದ ಸಂಧಿವಾತದ ಕಾರಣಗಳನ್ನು ಪತ್ತೆಹಚ್ಚಬಹುದು. ಕ್ಷಕಿರಣ (ಎಕ್ಸ್‌ ರೇ) ಮಾಡುವುದರಿಂದ ಸವೆತದ ತೀವ್ರತೆಯನ್ನು ಕಂಡುಹಿಡಿ¿ಬಹುದು. ರಕ್ತ ಪರೀಕ್ಷೆ ನಡೆಸಿ ಸಂಧಿವಾತದ ಇತರ ಕಾರಣಗಳನ್ನೂ ಪತ್ತೆ ಹಚ್ಚಲು ಸಾಧ್ಯ.

-ಡಾ| ಕಿರಣ್‌ ಆಚಾರ್ಯ
ಪ್ರೊಫೆಸರ್‌
ಆಥೋìಪೆಡಿಕ್ಸ್‌ ವಿಭಾಗ
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ