ಸೂಲಗಿತ್ತಿಯರು ಸ್ತ್ರೀ ಹಕ್ಕುಗಳ ರಕ್ಷಕರು

Team Udayavani, May 5, 2019, 6:00 AM IST

ಪ್ರತೀ ವರ್ಷ ಮೇ 5ನ್ನು ಅಂತಾರಾಷ್ಟ್ರೀಯ ಸೂಲಗಿತ್ತಿಯರ ದಿನವನ್ನಾಗಿ ಆಚರಿಸಲಾಗುತ್ತದೆ. ಸೂಲಗಿತ್ತಿಯರ ಪರಿಶ್ರಮವನ್ನು ಸ್ಮರಿಸಿ ಗೌರವಿಸುವುದು ಈ ದಿನಾಚರಣೆಯ ಉದ್ದೇಶ. ಇನ್ನೊಬ್ಬ ಮನುಷ್ಯನ ಆತ್ಮವನ್ನು ಬಡಿದೆಬ್ಬಿಸುವ ವ್ಯಕ್ತಿಯಾಗುವುದು ಪ್ರತೀ ಮಾನವನಿಗೆ ಒದಗಬಲ್ಲ ಒಂದು ಸುವರ್ಣಾವಕಾಶ. 1991ರ ಮೇ 5ರಂದು ಪ್ರಪ್ರಥಮ ಅಂತಾರಾಷ್ಟ್ರೀಯ ಸೂಲಗಿತ್ತಿಯರ ದಿನವನ್ನು ಆಚರಿಸಲಾಯಿತು.

“”2000ನೇ ಇಸವಿಗೆ ಮುನ್ನ ಎಲ್ಲರಿಗೂ ಸುರಕ್ಷಿತ ಪ್ರಸವ” ಎಂಬುದು ಆಗ ಅದರ ಘೋಷವಾಕ್ಯವಾಗಿತ್ತು. ಆ ಬಳಿಕ ಪ್ರತೀ ವರ್ಷವೂ ಜಗತ್ತಿನಾದ್ಯಂತ ಸುಮಾರು 50ಕ್ಕೂ ಹೆಚ್ಚು ದೇಶಗಳು ಈ ದಿನವನ್ನು ಆಚರಿಸುತ್ತ ಬರುತ್ತಿವೆ. ಗರ್ಭಿಣಿ ಮಹಿಳೆಯರಿಗೆ ಪ್ರಸವ ಕಾಲದಲ್ಲಿ ನೆರವಾಗುವುದಕ್ಕೆ ತರಬೇತಿ ಪಡೆದವರು ಸೂಲಗಿತ್ತಿಯರು; ಪ್ರಸವಿಸುತ್ತಿರುವ ಸ್ತ್ರೀಯರ ರಕ್ಷಕರು ಎಂಬುದಾಗಿಯೂ ನಾವು ಅವರನ್ನು ಕರೆಯಬಹುದು.

“ಸೂಲಗಿತ್ತಿಯರು: ಸ್ತ್ರೀಯರ ಹಕ್ಕುಗಳ ರಕ್ಷಕರು” ಎಂಬ ಈ ವರ್ಷದ ಸೂಲಗಿತ್ತಿಯರ ದಿನದ ಘೋಷವಾಕ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಎಲ್ಲ ಮನುಷ್ಯರ ಹಕ್ಕುಗಳನ್ನೂ ರಕ್ಷಿಸುವವರು ರಕ್ಷಕರು ಎನ್ನಿಸಿಕೊಳ್ಳುತ್ತಾರೆ. ಈ ದೃಷ್ಟಿಕೋನದಲ್ಲಿ ಸೂಲಗಿತ್ತಿಯರು ಇತರ ಮಹಿಳೆಯರು ಗರ್ಭ ಧರಿಸಲು ಹಾಕಿಕೊಳ್ಳುವ ಯೋಜನೆಯಿಂದ ಆರಂಭಿಸಿದಂತೆ ಅವರ ಎಲ್ಲ ಮಾನವ ಹಕ್ಕುಗಳ ರಕ್ಷಕರಾಗಿರುತ್ತಾರೆ.

ಭಾರತೀಯ ಚಿತ್ರಣವನ್ನು ಗಮನದಲ್ಲಿ ಇರಿಸಿಕೊಂಡರೆ, ಇಲ್ಲಿ ಮಹಿಳೆಯನ್ನು ಕುಟುಂಬದ ಸಂಪ್ರದಾಯವನ್ನು ಮುನ್ನಡೆಸುವವಳು ಎಂಬಂತೆ ಕಾಣಲಾಗುತ್ತದೆ; ಆಕೆಗೆ ತನಗಾಗಿ ಯಾವುದನ್ನೂ ಆರಿಸಿಕೊಳ್ಳುವ ಸ್ವಾತಂತ್ರ್ಯ ಇರುವುದಿಲ್ಲ. ಮರ್ಸರ್ ಮೆಟರ್ನಲ್‌ ರೋಲ್‌ ಅಟೈನ್‌ಮೆಂಟ್‌ ಥಿಯರಿಯ ಪ್ರಕಾರ, ಮಹಿಳೆಯ ಜನ್ಮ ಕಾಲದಲ್ಲಿ ಆಕೆಯ ವ್ಯಕ್ತಿತ್ವ ಗುರುತು, ಜನನಾನುಭವ ಗ್ರಹಿಕೆ, ಆಕೆಯ ಸ್ವಪ್ರತಿಷ್ಠೆ ಮತ್ತು ಸ್ವ ಪರಿಕಲ್ಪನೆಯಂತಹ ಅನೇಕ ಪರಿಕಲ್ಪನೆಗಳನ್ನು ಗಮನಿಸಬೇಕಾಗುತ್ತದೆ. ಮಹಿಳೆಯರ ಈ ಮಾನಸಿಕ ಪರಿವರ್ತನೆಗಳ ಜತೆಗೆ ಆಕೆಯ ದೇಹದೊಳಗೆ ಹೊಸ ಜೀವವೊಂದು ಜನ್ಮ ತಳೆಯುವ ಮೂಲಕ ದೈಹಿಕವಾದ ಬದಲಾವಣೆಗಳೂ ಆಗುತ್ತಿರುತ್ತವೆ. ಈ ಬದಲಾವಣೆಗಳು ಘಟಿಸುವಾಗ ಸೂಲಗಿತ್ತಿಯು ಮಹಿಳೆಗೆ ಮಾರ್ಗದರ್ಶಿಯಂತೆ ಕೆಲಸ ಮಾಡುತ್ತಾಳೆ.

ಸೂಲಗಿತ್ತಿಯರ ಕೆಲವು ಹೊಣೆಗಾರಿಕೆಗಳು
1. ಗರ್ಭಿಣಿ ಮಹಿಳೆಯ ಆರೋಗ್ಯ ಸಿœತಿಯ
 ಉಸ್ತುವಾರಿ ನೋಡಿಕೊಳ್ಳುವುದು
 ಮತ್ತು ನಿಗಾ ಇರಿಸುವುದು
-ಗರ್ಭಿಣಿ ಮಹಿಳೆಯೊಬ್ಬಳ ಉಸ್ತುವಾರಿ ನೋಡಿಕೊಳ್ಳುವುದು ಮತ್ತು ನಿಗಾ ಇರಿಸಿಕೊಳ್ಳುವ ವಿಚಾರದಲ್ಲಿ ಸೂಲಗಿತ್ತಿಯು ಪ್ರಾಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತಾರೆ. ಒಬ್ಬ ಮಹಿಳೆ ತಾನು ಗರ್ಭಿಣಿ ಎಂಬುದು ಖಚಿತವಾದ ತತ್‌ಕ್ಷಣದಿಂದಲೇ ಆಸ್ಪತ್ರೆಯ ಸಹಾಯವನ್ನು ಯಾಚಿಸುತ್ತಾಳೆ ಹಾಗೂ ಆಗ ಆಕೆಗೆ ಒದಗುವ ಮೊದಲ ನೆರವಿನ ಹಸ್ತ ಸೂಲಗಿತ್ತಿಯದೇ ಆಗಿರುತ್ತದೆ.
– ಸೂಲಗಿತ್ತಿಯು ಆ ಮಹಿಳೆಯ ಎಲ್ಲ ಜವಾಬ್ದಾರಿಗಳನ್ನೂ ತೆಗೆದುಕೊಳ್ಳುತ್ತಾಳೆ: ವೈದ್ಯರನ್ನು ಸಂಪರ್ಕಿಸುವುದು, ಸಹಜ ಗರ್ಭಧಾರಣೆಯನ್ನು ಕಾಪಾಡಿಕೊಳ್ಳಲು ಔಷಧಗಳನ್ನು ಒದಗಿಸುವುದು, ಮಹಿಳೆ ಸುರಕ್ಷಿತವಾಗಿದ್ದಾಳೆ ಮತ್ತು ಆರೋಗ್ಯವಂತ ಶಿಶುವನ್ನು ಪ್ರಸವಿಸುತ್ತಾಳೆ ಎಂಬುದನ್ನು ಖಾತರಿ ಪಡಿಸಲು ಸೂಕ್ತ ತಪಾಸಣೆಗಳನ್ನು ನಡೆಸುವ ಜವಾಬ್ದಾರಿಯನ್ನು ಆಕೆ ಹೊರುತ್ತಾಳೆ.

2. ಆರೈಕೆ ನೀಡುವ ಮೂಲಕ ಪ್ರಸೂತಿಯಲ್ಲಿ
 ತೊಡಗಿಕೊಳ್ಳಲು ಮಹಿಳೆಗೆ ನೆರವಾಗುವುದು
– ಪ್ರಸೂತಿಯಲ್ಲಿ ತೊಡಗಿರುವ ಮಹಿಳೆಯ ಆವಶ್ಯಕತೆಗಳನ್ನು ವಿಶ್ಲೇಷಿಸುತ್ತಾಳೆ: ಪ್ರತೀ ಮಹಿಳೆ ಬಯಸುವ ಸಹಾಯ ವಿಭಿನ್ನ ರೀತಿಯದಾಗಿದ್ದರೂ ಎಲ್ಲ ಮಹಿಳೆಯರೂ ಕರುಣೆ, ಗೌರವ ಮತ್ತು ಗಮನವನ್ನು ಬಯಸುತ್ತಾರೆ. ಪ್ರಸೂತಿ ಅನುಭವಿಸುತ್ತಿರುವ ಮಹಿಳೆಯನ್ನು ಹುರಿದುಂಬಿಸುವ ಮೂಲಕ ಸೂಲಗಿತ್ತಿಯು ಪ್ರಸೂತಿ ಕಾಲದಲ್ಲಿ ಆಕೆ ಆತ್ಮವಿಶ್ವಾಸದಿಂದ ಮತ್ತು ಸದೃಢವಾಗಿ ಇರುವುದಕ್ಕೆ ನೆರವಾಗುತ್ತಾಳೆ. ಮಹಿಳೆ ವಿಶ್ರಮಿಸಿಕೊಳ್ಳಲು ಸಹಾಯ ಮಾಡುತ್ತಾಳೆ. ಈ ಬೆಂಬಲ ಮತ್ತು ನೆರವಿನಿಂದ ಪ್ರಸೂತಿ ನೋವುರಹಿತವಾಗುವುದಿಲ್ಲವಾದರೂ ಇದರಿಂದ ಪ್ರಸೂತಿ ಸುಲಭವಾಗುತ್ತದೆ, ಕಿರು ಅವಧಿಯದಾಗುತ್ತದೆ ಹಾಗೂ ಸುರಕ್ಷಿತವಾಗುತ್ತದೆ.
– ಮಹಿಳೆಗೆ ಸೂಲಗಿತ್ತಿಯು ಒದಗಿಸಿರುವ ಪ್ರಸೂತಿ ಪ್ರಕ್ರಿಯೆಯ ವಿವರಣೆ, ಭಂಗಿ ಇತ್ಯಾದಿಗಳಿಂದ ಆಕೆಗೆ ಪ್ರಸೂತಿಯು ಸುರಕ್ಷಿತವಾಗುತ್ತದೆ.

3. ಹೊಸ ತಾಯಂದಿರಿಗೆ ಎದೆಹಾಲು ಕುಡಿಸುವ ಬಗೆಗಿನ ಶಿಕ್ಷಣ ನೀಡುವುದು, ಶಿಶುವಿನ ಆರೋಗ್ಯ ಆರೈಕೆಯ ಬಗ್ಗೆ ಸಲಹೆ ಸೂಚನೆ ನೀಡುವುದು:
– ತನ್ನ ಶಿಶುವನ್ನು ಎದೆಗಪ್ಪಿ ಹಿಡಿದು ಹಾಲೂಡಿಸಲು ಹೊಸ ತಾಯಂದಿರಿಗೆ ಕಾತರವಿರುತ್ತದೆ. ಹೊಸ ತಾಯಿ ಹಾಲೂಡಿಸುವಾಗ ಆರಾಮವಾಗಿರುವಂತೆ ಸೂಲಗಿತ್ತಿಯು ನೋಡಿಕೊಳ್ಳುತ್ತಾಲೆ ಮಾತ್ರವಲ್ಲದೆ ಎದೆಹಾಲು ಉಣ್ಣಿಸುವ ತಂತ್ರ, ಅದರ ಪ್ರಾಮುಖ್ಯ ಮತ್ತು ನವಜಾತ ಶಿಶುವಿನ ಆರೈಕೆ ಮಾಡುವ ತಂತ್ರಗಳನ್ನು ಹೇಳಿಕೊಡುತ್ತಾಳೆ.
– ಇದರಿಂದಾಗಿ ನೂತನ ತಾಯಿಗೆ ಆತ್ಮವಿಶ್ವಾಸ ವೃದ್ಧಿಸುತ್ತದೆ.

4. ಜನನ ನಿಯಂತ್ರಣ ವಿಚಾರಗಳಲ್ಲಿ ಮಹಿಳೆಯೊಂದಿಗೆ ಆಪ್ತ ಸಮಾಲೋಚನೆ.
ಕುಟುಂಬ ಯೋಜನೆಯು ಒಂದು ಜಾಗತಿಕ ಕಾಳಜಿಯಾಗಿದೆ. ಕುಟುಂಬ ಯೋಜನೆಯನ್ನು ಅಳವಡಿಸಿಕೊಳ್ಳಲು ಹತ್ತು ಹಲವು ವಿಧಾನಗಳಿವೆ. ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸುವುದರ ಜತೆಗೆ ಹಲವು ಜೀವಗಳನ್ನು ಉಳಿಸಲು ಕಾರಣವಾಗಬಹುದಾದ ಜನನ ನಿಯಂತ್ರಣದ ಬಗ್ಗೆ ಸೂಲಗಿತ್ತಿಯು ಮಹಿಳೆಯರಿಗೆ ಆಪ್ತ ಸಮಾಲೋಚನೆಯನ್ನು ಒದಗಿಸುತ್ತಾರೆ. ಮೊಘಲ್‌ ದೊರೆ ಶಾಹಜಹಾನ್‌ ತನ್ನ ಮಡದಿ ಮುಮ್ತಾಜಳನ್ನು ಬಹಳವಾಗಿ ಪ್ರೀತಿಸುತ್ತಿದ್ದನಂತೆ. ಆದರೆ ಶಿಶುವಿಗೆ ಜನ್ಮ ನೀಡಿದ ಬಳಿಕ ತೀವ್ರವಾದ ರಕ್ತಸ್ರಾವದಿಂದಾಗಿ ಆಕೆಯನ್ನು ಕಳೆದುಕೊಳ್ಳಬೇಕಾಯಿತು ಎನ್ನುತ್ತದೆ ಇತಿಹಾಸ. ಬಳಿಕ ಆಕೆಯ ಸ್ಮರಣೆಗಾಗಿ ಶಾಹಜಹಾನ್‌ ತಾಜ್‌ಮಹಲ್‌ ನಿರ್ಮಿಸಿದನಂತೆ.

ಪ್ರಸೂತಿ ಪ್ರಕ್ರಿಯೆಯ ಸಂದರ್ಭದಲ್ಲಿ ಮತ್ತು ಆ ಬಳಿಕ ಸ್ತ್ರೀಯ ರಕ್ತದಲ್ಲಿ ಅನೇಕ ಬದಲಾವಣೆಗಳು (ಹೆಮಟೋಲಾಜಿಕಲ್‌) ಉಂಟಾಗುತ್ತವೆ. ಆಕೆ ಭಾರೀ ಪ್ರಮಾಣದಲ್ಲಿ ರಕ್ತವನ್ನು ಕಳೆದುಕೊಳ್ಳುತ್ತಾಳೆ; ಇದು ಪುನರ್‌ಸ್ಥಾಪನೆಯಾಗಲು ಸುಮಾರು ಎರಡು ವರ್ಷಗಳು ಬೇಕಾಗುತ್ತವೆ. ಹಿಂದಿನ ಪ್ರಸವದ ಬಳಿಕ ದೈಹಿಕ ಶಕ್ತಿಯನ್ನು ಮರಳಿ ಗಳಿಸಿಕೊಳ್ಳಲು ಮಹಿಳೆಗೆ ಕುಟುಂಬ ಯೋಜನೆ ವಿಧಾನಗಳ ಬಗ್ಗೆ ಮಾಹಿತಿ ಇರಬೇಕಾಗುತ್ತದೆ. ಇದರಿಂದ ಆಕೆ ರಕ್ತಹೀನತೆಯೇ ಮೊದಲಾದ ಅಪೌಷ್ಟಿಕತೆಗಳು, ಸಮಸ್ಯೆಗಳಿಂದ ಪಾರಾಗಲು ಸಾಧ್ಯವಾಗುತ್ತದೆ. ಜತೆಗೆ, ಯುಟೆರೈನ್‌ ಪ್ರೊಲಾಪ್ಸ್‌ನಂತಹ ಜಟಿಲ ಸಮಸ್ಯೆಗಳು ಉಂಟಾಗದಂತೆ ತಡೆಯಬಹುದಾಗಿದೆ.
ಕುಟುಂಬ ಯೋಜನೆಯ ಅನೇಕ ವಿಧಾನಗಳು ಚಾಲ್ತಿಯಲ್ಲಿವೆ: ಕಾಂಡೋಮ್‌, ಕಾಪರ್‌ ಟಿ, ಇಂಜೆಕ್ಷನ್‌ಗಳು, ಗುಳಿಗೆಗಳು ಮತ್ತು ಶಸ್ತ್ರಚಿಕಿತ್ಸೆ (ಲಘು). ಈ ಕುಟುಂಬ ಯೋಜನೆ ವಿಧಾನಗಳ ಪೈಕಿ ಯಾವುದನ್ನಾದರೂ ಆಯ್ದುಕೊಳ್ಳಲು ಮಹಿಳೆಗೆ ಹಕ್ಕಿದೆ ಮತ್ತು ಈ ಬಗ್ಗೆ ಸೂಲಗಿತ್ತಿಯು ಆಕೆಗೆ ಶಿಕ್ಷಣವನ್ನು ಒದಗಿಸುತ್ತಾಳೆ.

5. ಶಿಕ್ಷಣದ ಮೂಲಕ ಮಹಿಳೆಯ ಸಶಕ್ತೀಕರಣ
ಜನನಾಂಗ ವ್ಯೂಹಕ್ಕೆ ಸಂಬಂಧಿಸಿದ ವಿವಿಧ ಕಾಯಿಲೆ, ಅನಾರೋಗ್ಯಗಳ ಬಗ್ಗೆ ತಿಳಿದುಕೊಳುವ ಹಕ್ಕು ಮಹಿಳೆಗೆ ಇದೆ. ಕುಟುಂಬದಲ್ಲಿ ಪೀಳಿಗೆಯಿಂದ ಪೀಳಿಗೆಗೆ ಗರ್ಭಧಾರಣೆಯನ್ನು ಮುಂದೊಯ್ಯುವ ಶಕ್ತಿಯಿರುವುದು ಮಹಿಳೆಗೆ ಮಾತ್ರ. ಮಹಿಳೆ ಶಿಕ್ಷಿತೆಯಾದರೆ ತನ್ನ ಜ್ಞಾನದ ಬಲದಿಂದ ಆಕೆ ಇಡೀ ಪೀಳಿಗೆಯನ್ನು ಸುಶಿಕ್ಷಿತಗೊಳಿಸಬಹುದಾಗಿದೆ.

ಸ್ತನದ ಕ್ಯಾನ್ಸರ್‌ ಬಗ್ಗೆ ತಿಳಿದುಕೊಳ್ಳಬೇಕಾ
ದುದೇನು?
ತನ್ನ ಸ್ತನದಲ್ಲಿ ಈ ಕೆಳಗಿನ ಅಸಹಜತೆಗಳು ಕಂಡುಬಂದರೆ ಮಹಿಳೆಯು ವೈದ್ಯರನ್ನು ಸಂಪರ್ಕಿಸಬೇಕು.
– ಸ್ತನದಲ್ಲಿ ಗಡ್ಡೆ, ಗಟ್ಟಿಯಾದ ಗಂಟು
– ಊತ, ಬಿಸಿಯಾಗುವುದು, ಕೆಂಪಾಗುವುದು ಅಥವಾ ಅಸಹಜವಾಗಿ ಗಾಢ ಬಣ್ಣ ಉಂಟಾಗುವುದು.
– ಚರ್ಮ ಗುಳಿಬೀಳುವುದು.
– ಹಠಾತ್ತಾಗಿ ಸ್ತನದ ತೊಟ್ಟಿನಿಂದ ಸ್ರಾವ ಆರಂಭವಾಗುವುದು.

ಸ್ತನ ಕ್ಯಾನ್ಸರ್‌
ಭಾರತೀಯ ಮಹಿಳೆಯರಲ್ಲಿ ಮೃತ್ಯುವಿಗೆ ಪ್ರಧಾನ ಕಾರಣಗಳಲ್ಲಿ ಒಂದು ಸ್ತನ ಕ್ಯಾನ್ಸರ್‌ ಆಗಿದೆ. ಮಹಿಳೆ ಈ ಅಪಾಯಕಾರಿ ಕಾಯಿಲೆಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.

ಸರಳವಾಗಿ ಹೇಳುವುದಾದರೆ, ಸ್ತನದ ಜೀವಕೋಶಗಳಲ್ಲಿ ರೂಪುಗೊಳ್ಳುವ; ಪ್ರಾಥಮಿಕ ಹಂತದಲ್ಲಿ ಬೇಗನೆ ಪತ್ತೆಯಾದರೆ ಗುಣಪಡಿಸಬಲ್ಲಂಥದ್ದು ಸ್ತನದ ಕ್ಯಾನ್ಸರ್‌. ಸ್ತನದ ಸ್ವ ತಪಾಸಣೆ (ಬಿಎಸ್‌ಇ- ಬ್ರೆಸ್ಟ್‌ ಸೆಲ್ಫ್ ಎಕ್ಸಾಮಿನೇಶನ್‌) ಮೂಲಕ ತನ್ನ ಸ್ತನದಲ್ಲಿ ಇರಬಹುದಾದ ಅಸಹಜತೆಗಳನ್ನು ಮಹಿಳೆಯು ತಾನೇ ಪತ್ತೆ ಹಚ್ಚಬಹುದಾಗಿದೆ.ಮಹಿಳೆಯು 20 ವರ್ಷ ವಯಸ್ಸಿನ ಬಳಿಕ ಸ್ತನದ ಸ್ವ ತಪಾಸಣೆಯನ್ನು ನಡೆಸಬಹುದು ಮತ್ತು ಜೀವನಪರ್ಯಂತ ತೊಡಗಿಸಿಕೊಳ್ಳಬಹುದು.

ಪ್ರತೀ ತಿಂಗಳು ಋತುಚಕ್ರದ ಬಳಿಕ ಮಹಿಳೆ ಬಿಎಸ್‌ಇಯನ್ನು ನಡೆಸಬಹುದು.

ಸ್ತನದ ಸ್ವಯಂ ತಪಾಸಣೆ
ಹಂತಗಳು
1. ಸ್ತನದ ಸ್ವಯಂ ತಪಾಸಣೆ
(ಬಿಎಸ್‌ಇ)
ಕೆಳಕಂಡ ಲಕ್ಷಣಗಳಿಗಾಗಿ ಗಮನಿಸಿ
ಎ) ಸ್ತನಗಳು ಸಾಮಾನ್ಯ ಗಾತ್ರ, ಆಕಾರ ಮತ್ತು ಬಣ್ಣದಲ್ಲಿದೆ.
ಬಿ) ಸ್ತನಗಳು ದೃಷ್ಟಿ ಗೋಚರವಾಗುವ ಯಾವುದೇ ಅಸಹಜತ ಅಥವಾ ಊತ ಇಲ್ಲದೆ ಸಹಜವಾಗಿವೆ.
ಸಿ) ಗುಳಿ ಬಿದ್ದಿರುವುದು ಅಥವಾ ಚರ್ಮ ಜೋತಿರುವುದು.
ಡಿ) ಸ್ತನದ ತೊಟ್ಟಿನ ಸ್ಥಾನ ಬದಲಾಗಿರುವುದು ಅಥವಾ ಒಳಕ್ಕೆ ಅಂಟಿಕೊಂಡಿರುವುದು.
ಇ) ಕೆಂಪಾಗಿರುವುದು, ಬಾವು, ದದ್ದುಗಳು ಅಥವಾ ಊತ

ಮುಂದುವರಿಯುವುದು

ಡಾ| ಸುಶ್ಮಿತಾ ಕರ್ಕಡ,
ಮಣಿಪಾಲ್‌ ಸ್ಕೂಲ್‌ ಆಫ್ ನರ್ಸಿಂಗ್‌
ಮಣಿಪಾಲ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ