ನಿಮ್ಮ ಮಗುವಿಗೆ ಕೇಳುತ್ತಿದೆಯೇ?

ಇದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ

Team Udayavani, Sep 15, 2019, 5:00 AM IST

ಸಾಂದರ್ಭಿಕ ಚಿತ್ರ.

ಒಂದು ಕುಟುಂಬಕ್ಕೆ ಆರೋಗ್ಯವಂತ ಶಿಶುವಿನ ಜನನದಷ್ಟು ಸಂತೋಷಕರವಾದ ಸಂಭ್ರಮ ಇನ್ನೊಂದಿಲ್ಲ. ಶಿಶುವನ್ನು ವೀಕ್ಷಿಸುವುದು, ಮುದ್ದಾಡುವುದು, ವಿವಿಧ ಬಗೆಯ ಸದ್ದುಗಳಿಗೆ ಅದು ತೋರುವ ಕೌತುಕ ಎಲ್ಲರಿಗೂ ಇಷ್ಟ. ತನ್ನ ಧ್ವನಿಗೆ ಹಸುಳೆ ವಿವಿಧ ರೀತಿಗಳಲ್ಲಿ ಪ್ರತಿಕ್ರಿಯಿಸುವುದು ತಾಯಿಗೆ ಅತ್ಯಾನಂದವನ್ನು ಉಂಟು ಮಾಡುತ್ತದೆ. ಶಿಶುವಿನ ಸರಿಯಾದ ಬೆಳವಣಿಗೆಯಲ್ಲಿ ಅದರ ಆರೋಗ್ಯ ಸ್ಥಿತಿ ಪ್ರಾಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಶ್ರವಣ ಶಕ್ತಿಯು ಶಿಶುವಿನ ಕೆಲವು ಬೆಳವಣಿಗೆ ಸೂಚಕಗಳಲ್ಲಿ ಅತ್ಯಂತ ಪ್ರಧಾನವಾದುದು. ಶ್ರವಣ ಶಕ್ತಿ ದೋಷ ಹೊಂದಿರುವ ಮಗು ಸಹಜ ಬೆಳವಣಿಗೆಯನ್ನು ಹೊಂದಲಾರದು.

ಶ್ರವಣ ಶಕ್ತಿ ದೋಷವು ಜಗತ್ತಿನಾದ್ಯಂತ ಶಿಕ್ಷಣ ಮತ್ತು ಭಾಷಿಕ ಪ್ರಗತಿ ಸಹಿತ ಮಕ್ಕಳ ಸಮಗ್ರ ಬೆಳವಣಿಗೆಗೆ ಗಂಭೀರ ಅಡ್ಡಿಯಾಗಿ ಪರಿಣಮಿಸಿದೆ. ಪ್ರತೀ ಒಂದು ಸಾವಿರ ನವಜಾತ ಶಿಶುಗಳಲ್ಲಿ 0.5ರಿಂದ 5 ಶಿಶುಗಳು ಆಜನ್ಮ ಅಥವಾ ಬಾಲ್ಯದಲ್ಲಿ ಬೇಗನೆ ಆರಂಭವಾಗಿ ಬಳಿಕ ಹೆಚ್ಚುವ ಸೆನ್ಸೊರಿ- ನ್ಯೂರಲ್‌ ಕಿವುಡು ಅಥವಾ ತೀವ್ರದಿಂದ ಅತಿ ತೀವ್ರ ಶ್ರವಣ ದೋಷ ಹೊಂದಿರುತ್ತವೆ ಎಂದು ವಿವಿಧ ಅಧ್ಯಯನಗಳು ಮತ್ತು ಸಮೀಕ್ಷೆಗಳು ವರದಿ ಮಾಡಿವೆ. ಶ್ರವಣ ದೋಷವುಳ್ಳ ಮತ್ತು ಕಿವುಡು ಮಕ್ಕಳು ಸಂವಹನ, ಭಾಷೆ ಮತ್ತು ಗ್ರಹಣ ಕೌಶಲಗಳನ್ನು ತಡವಾಗಿ ಗಳಿಸುತ್ತವೆ. ಇದು ನಿಧಾನ ಕಲಿಕೆ ಮತ್ತು ಶಾಲೆಯಲ್ಲಿ ಪ್ರಗತಿಗೆ ಅಡಚಣೆಯನ್ನು ಉಂಟು ಮಾಡುತ್ತದೆ. ಬೆಳವಣಿಗೆಯ ನಿರ್ಣಯಾತ್ಮಕ ಹಂತಗಳಲ್ಲಿ ಸರಿಯಾದ ಮತ್ತು ಸಮರ್ಪಕವಾದ ಚಿಕಿತ್ಸೆ ಒದಗದೆ ಇದ್ದರೆ ಆಜನ್ಮ ಅಥವಾ ಬಾಲ್ಯದಲ್ಲಿ ಬೇಗನೆ ಆರಂಭವಾಗಿ ಬಳಿಕ ಹೆಚ್ಚುವ ಸೆನ್ಸೊರಿ- ನ್ಯೂರಲ್‌ ಕಿವುಡು ಅಥವಾ ತೀವ್ರದಿಂದ ಅತಿ ತೀವ್ರ ಶ್ರವಣ ದೋಷಗಳು ಕಿವಿಯ ಇತರ ಭಾಗಗಳ ಮೇಲೂ ಬೆಳವಣಿಗೆಯ ಮುಂದಿನ ಹಂತಗಳಲ್ಲಿ ಪ್ರತಿಕೂಲ ಪರಿಣಾಮ ಬೀರುತ್ತವೆ.

ಜನ್ಮತಃ ಕಿವುಡು ಅಥವಾ ಶ್ರವಣ ದೋಷವುಳ್ಳ ಮಗುವನ್ನು ಪಡೆಯುವ ಸಾಧ್ಯತೆಗಳು ಕಡಿಮೆಯಾದರೂ ಜನನ ಕಾಲದಲ್ಲಿಯೇ ಅಥವಾ ಅದಕ್ಕಿಂತಲೂ ಪೂರ್ವದಲ್ಲಿ ಅದನ್ನು ಪತ್ತೆ ಮಾಡುವ ವಿವಿಧ ವಿಧಾನಗಳು ಪ್ರಗತಿಯ ಹಂತದಲ್ಲಿವೆ. ಜನ್ಮತಃ ಶ್ರವಣ ಶಕ್ತಿ ನಷ್ಟ ಸಾಧ್ಯತೆಯು ತೀರಾ ಅಲ್ಪವಾದರೂ ಅಂತಹ ಕೊರತೆಯನ್ನು ಗುರುತಿಸುವುದು ಏಕೆ ಮುಖ್ಯ ಎಂಬುದು ಸದ್ಯದ ಪ್ರಶ್ನೆ. ಮಗುವಿನ ಸಹಜ ಬೆಳವಣಿಗೆ ಮತ್ತು ಪ್ರಗತಿಯ ಬಹುಭಾಗವು ಅವನ ಅಥವಾ ಅವಳ ಶ್ರವಣ ಮತ್ತು ದೃಷ್ಟಿಯಂತಹ ಇಂದ್ರಿಯ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಮಗು ಕಲಿಯುತ್ತಾ ಬೆಳೆಯುವ ಪ್ರಕ್ರಿಯೆಯಲ್ಲಿ ಎಲ್ಲ ಜ್ಞಾನೇಂದ್ರಿಯಗಳು ಜತೆಯಾಗಿ ಕೊಡುಗೆ ನೀಡುವುದರಿಂದ ಯಾವುದೇ ಒಂದು ಇಂದ್ರಿಯ ದೋಷ ಇದ್ದಾಗ ಅದರ ಪರಿಣಾಮವು ಪ್ರಗತಿಯ ಆಯಾ ವಿಭಾಗದ ಮೇಲೆ ಮಾತ್ರವಲ್ಲದೆ ಒಟ್ಟಾರೆ ಬೆಳವಣಿಗೆಯ ಮೇಲೂ ಉಂಟಾಗುತ್ತದೆ. ಶ್ರವಣ ಶಕ್ತಿ ದೋಷವು ಬಹಳ ವರ್ಷಗಳ ವರೆಗೆ ಗಮನಕ್ಕೆ ಬಾರದೇ ಇರುವ ಸಾಧ್ಯತೆ ಇದೆ. ಇದರಿಂದಾಗಿ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮಗು ಕಾರ್ಯಚಟುವಟಿಕೆ, ಕಲಿಕೆಗಳಲ್ಲಿ ತನ್ನ ಸಹಪಾಠಿಗಳಿಗಿಂತ ಹಿಂದುಳಿಯಬಹುದು; ಇದರಿಂದಾಗಿ ಮಗುವಿನ ಪ್ರಗತಿಯ ಮೇಲೆ ಶಾಶ್ವತ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಮಗುವಿಗೆ ಇರುವ ವೈಕಲ್ಯವು ತೀರಾ ಎಳವೆಯಲ್ಲಿಯೇ ಪತ್ತೆಯಾಗಿ ಅದಕ್ಕೆ ಚಿಕಿತ್ಸೆ ಒದಗಿಸಿದರೆ ಅದು ತನ್ನ ವಯಸ್ಸಿನ ಮಕ್ಕಳಿಗೆ ಸಾಟಿಯಾಗುವಂತಹ ಬೆಳವಣಿಗೆ ಮತ್ತು ಪ್ರಗತಿ ಸಾಧಿಸುವ ಸಾಧ್ಯತೆ ಹೆಚ್ಚು ಎಂಬುದನ್ನೂ ಅಧ್ಯಯನಗಳು ಗಮನಿಸಿವೆ. ತಡವಾಗಿ ಪತ್ತೆಯಾಗುವ ಮಕ್ಕಳ ಬೆಳವಣಿಗೆ ಇದಕ್ಕಿಂತ ಕುಂಠಿತವಾಗಿರುತ್ತದೆ. ವಿಳಂಬವಾಗಿ ಪತ್ತೆಯಾದಾಗ ಅವರು ಅದಾಗಲೇ ಸಮಾನ ವಯಸ್ಕ ಮಕ್ಕಳಿಗಿಂತ ಹಿಂದುಳಿದಿರುತ್ತಾರೆ, ಇದರಿಂದಾಗಿ ಅವರಿಗೆ ಮತ್ತೆ ಅವರನ್ನು ಸರಿಗಟ್ಟುವುದು ಸಾಧ್ಯವಾಗುವುದಿಲ್ಲ. ಅತಿ ಶೀಘ್ರವಾಗಿ ವೈಕಲ್ಯವು ಪತ್ತೆಯಾದ ಬಳಿಕ ಅಷ್ಟೇ ಕ್ಷಿಪ್ರವಾಗಿ ಚಿಕಿತ್ಸೆ ಒದಗಿಸಿದರೆ ಉತ್ತಮ ಬೆಳವಣಿಗೆಯ ಸಾಧ್ಯತೆ ಹೆಚ್ಚು. ಆದ್ದರಿಂದಲೇ ಶ್ರವಣ ದೋಷವುಳ್ಳ ಅಥವಾ ಕಿವುಡು ಮಕ್ಕಳಲ್ಲಿ ವೈಕಲ್ಯವನ್ನು ಆದಷ್ಟು ಬೇಗನೆ ಪತ್ತೆ ಹಚ್ಚುವುದು ಮತ್ತು ಚಿಕಿತ್ಸೆ ಒದಗಿಸುವುದು ಅತ್ಯಂತ ಪ್ರಾಮುಖ್ಯವಾಗಿರುತ್ತದೆ. ಇದರಿಂದಾಗಿ ಅಂತಹ ಮಕ್ಕಳಿಗೆ ಇತರರಂತೆ ಸಾಮಾಜಿಕ ಮತ್ತು ಇತರ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಈ ವೈಕಲ್ಯವನ್ನು ಬೇಗನೆ ಪತ್ತೆಹಚ್ಚುವಲ್ಲಿ ಎರಡು ಅಂಶಗಳು ಪ್ರಧಾನವಾಗಿರುತ್ತವೆ; ಮೊದಲನೆಯದು, ಜನ್ಮತಃ ಶ್ರವಣದೋಷ ಅಥವಾ ಕಿವುಡಿಗೆ ಕಾರಣವಾಗಬಲ್ಲ ಅಪಾಯಾಂಶಗಳನ್ನು ತಿಳಿದುಕೊಳ್ಳುವುದು ಮತ್ತು ಎರಡನೆಯದಾಗಿ, ಜನನದ ಬಳಿಕ ವಿವಿಧ ಶ್ರವಣ ಕಾರ್ಯಕ್ರಮಗಳ ಮೂಲಕ ವೈಕಲ್ಯವನ್ನು ಗುರುತಿಸುವುದು.

ರೋಗವನ್ನಾಗಲಿ, ವೈಕಲ್ಯವನ್ನಾಗಲಿ; ಅದು ಉಂಟಾದ ಬಳಿಕ ಚಿಕಿತ್ಸೆ ನೀಡುವುದಕ್ಕಿಂತ ಅದು ಬಾರದಂತೆ ತಡೆಹಿಡಿಯುವುದು ಅತ್ಯುತ್ತಮ ಎಂಬ ಮಾತಿದೆ. ಶ್ರವಣದೋಷಕ್ಕೆ ಕಾರಣವಾಗಬಲ್ಲ ಅಪಾಯಾಂಶಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ಆ ಬಗ್ಗೆ ಎಚ್ಚರದಿಂದ ಇರುವುದು ಈ ವೈಕಲ್ಯವು ಜನ್ಮತಃ ಉಂಟಾಗುವ ಸಾಧ್ಯತೆಗಳನ್ನು ಕಡಿಮೆ ಮಾಡುವುದಕ್ಕೆ ಅಥವಾ ಒಂದುವೇಳೆ ಮಗು ವೈಕಲ್ಯದೊಂದಿಗೆ ಜನಿಸಿದರೂ ವಿಳಂಬವಾಗಿ ಅರಿವಿಗೆ ಬರುವುದು ತಪ್ಪುವುದಕ್ಕೆ ಕಾರಣವಾಗುತ್ತದೆ. ಮಗು ಹುಟ್ಟಿನಿಂದಲೇ ಶ್ರವಣ ದೋಷ ಅಥವಾ ಕಿವುಡಾಗಿರುವುದಕ್ಕೆ ಕಾರಣವಾಗಬಲ್ಲ ಕೆಲವು ಅಂಶಗಳನ್ನು ಕೂಲಂಕಷ ಅಧ್ಯಯನ ಮತ್ತು ಸಂಶೋಧನೆಗಳಿಂದ ಕಂಡುಕೊಳ್ಳಲಾಗಿದೆ. ಬಾಲ್ಯದಲ್ಲಿಯೇ ಶ್ರವಣಶಕ್ತಿ ನಷ್ಟವಾಗುವ ಕೌಟುಂಬಿಕ ಚರಿತ್ರೆ, ನಿಯೊನೇಟಲ್‌ ಇಂಟೆನ್ಸಿವ್‌ ಕೇರ್‌ ವಿಭಾಗದಲ್ಲಿ ಐದು ದಿನ ಇರುವುದು ಅಥವಾ ಕೆಳಕಂಡ ಯಾವುದೇ ಕಾರಣಕ್ಕಾಗಿ ಅದಕ್ಕಿಂತ ಹೆಚ್ಚು ಸಮಯ ಮಗು ಉಳಿಯಬೇಕಾಗಿ ಬಂದಿರುವುದು:
1. ಎಕ್ಸ್‌ಟ್ರಾಕಾರ್ಪೊರಿಯಲ್‌ ಮೆಂಬ್ರೇನ್‌ ಆಕ್ಸಿಜನೇಶನ್‌ (ಇಸಿಎಂಒ),
2. ಅಸಿಸ್ಟೆಡ್‌ ವೆಂಟಿಲೇಶನ್‌,
3. ಒಟೊಟಾಕ್ಸಿನ್‌ ಔಷಧಗಳು (ಜೆಂಟಾಮೈಸಿನ್‌ ಮತ್ತು ಟೊಬ್ರಾಮೈಸಿನ್‌) ಅಥವಾ ಲೂಪ್‌ ಡಿಯೂರೆಟಿಕ್ಸ್‌ (ಫ‌ುÂರೊಸೆಮೈಡ್‌/ ಲಾಸಿಕ್ಸ್‌) ಪ್ರಯೋಗಗೊಂಡಿರುವುದು ಮತ್ತು
4. ಎಕ್ಸ್‌ಚೇಂಜ್‌ ಟ್ರಾನ್ಸ್‌ಫ್ಯೂಶನ್‌ ಅಗತ್ಯವಾಗಿರುವ ಹೈಪರ್‌ ಬಿಲಿರುಬಿಮೇನಿಯ ಉಂಟಾಗಿರುವುದು.
ಅಂತರ್‌ ಗರ್ಭಕೋಶ ಸೋಂಕುಗಳಾದ ಸೈಟೊಮೆಗಾಲೊವೈರಸ್‌ (ಸಿಎಂವಿ), ಹರ್ಪಿಸ್‌, ರುಬೆಲ್ಲಾ, ಸಿಫಿಲಿಸ್‌ ಮತ್ತು ಟೊಕೊÕಪ್ಲಾಸೊ¾ಸಿಸ್‌ ಕೂಡ ಈ ವೈಕಲ್ಯ ಉಂಟಾಗುವಂತೆ ಪ್ರಭಾವ ಬೀರುತ್ತವೆ. ಕ್ರೆನಿಯೊಫೇಶಿಯಲ್‌ ಅನೊಮಲಿಸ್‌ ಅಂದರೆ ಮುಖ ವಿರೂಪಿಯಾಗಿ ಬೆಳೆಯುವ ತೊಂದರೆಗಳಾದ ಪಿನ್ನಾ, ಕಿವಿಗಾಲುವೆ, ಕಿವಿ ಹಾಲೆ, ಕಿವಿಯ ಕುಳಿ ಮತ್ತು ಟೆಂಪೊರಲ್‌ ಬೋನ್‌ ಅನಾಮಲಿಸ್‌ಗಳು, ತುಟಿ ಮತ್ತು ಪೆಲೇಟ್‌ ವಿರೂಪಗೊಂಡಿರುವುದು ಕೂಡ ಕಾರಣವಾಗುವುದು ತಿಳಿದುಬಂದಿದೆ. ವೈಟ್‌ ಫೋರ್‌ಲಾಕ್‌ನಂತಹ ದೈಹಿಕ ಸಮಸ್ಯೆಗಳು ಸೆನ್ಸೊರಿನ್ಯೂರಲ್‌ ಅಥವಾ ಶಾಶ್ವತ ಕಂಡಕ್ಟಿವ್‌ ಶ್ರವಣಶಕ್ತಿ ನಷ್ಟವನ್ನು ಉಂಟು ಮಾಡುವ ಸಿಂಡ್ರೋಮ್‌ ಒಂದಕ್ಕೆ ಕಾರಣವಾಗುವುದು ತಿಳಿದುಬಂದಿದೆ. ಶ್ರವಣಶಕ್ತಿ ನಷ್ಟ ಅಥವಾ ಜನನದ ಬಳಿಕ ಶ್ರವಣ ಶಕ್ತಿ ದೋಷಗಳು ಉಂಟಾಗುವುದರ ಜತೆಗೆ ಸಂಬಂಧ ಹೊಂದಿರುವ ಇತರ ಸಮಸ್ಯೆಗಳೆಂದರೆ ನ್ಯೂರೊಫೈಬೊÅಮೆಟೊಸಿಸ್‌, ಓಸ್ಟಿಯೊಪೆಟ್ರೊಸಿಸ್‌ ಮತ್ತು ಅಶರ್‌ ಸಿಂಡ್ರೋಮ್‌ ವಾರ್ಡನ್‌ಬರ್ಗ್‌, ಅಲ್‌ಪೋರ್ಟ್‌, ಪೆಂಡ್ರೆಡ್‌ ಮತ್ತು ಜೆರ್ವೆಲ್‌ ಆ್ಯಂಡ್‌ ಲಾಂಗೆ – ನೀಲ್ಸನ್‌. ಹಂಟರ್‌ ಸಿಂಡ್ರೋಮ್‌ನಂತಹ ನ್ಯೂರೊಡಿಜನರೇಟಿವ್‌ ಡಿಸಾರ್ಡರ್‌ಗಳು, ಸೆನ್ಸರಿ ಮೋಟಾರ್‌ ನ್ಯೂರೊಪಥಿಗಳಾದ ಫ್ರೆಡ್ರಿಕ್‌ ಅಟಾಕ್ಸಿಯಾ ಮತ್ತು ಚಾರ್ಕ್‌ – ಮೇರಿ-ಟೂತ್‌ ಸಿಂಡ್ರೋಮ್‌ಗಳು ಕೂಡ ಶ್ರವಣ ಸಾಮರ್ಥ್ಯದ ಮೇಲೆ ಹಾನಿ ಉಂಟು ಮಾಡುವುದನ್ನು ಗುರುತಿಸಲಾಗಿದೆ. ಸೆನ್ಸೊನ್ಯೂರಲ್‌ ಶ್ರವಣಶಕ್ತಿ ನಷ್ಟದ ಜತೆಗೆ ಸಂಬಂಧ ಹೊಂದಿರುವ ಪ್ರಯೋಗಾಲಯ ಸಂಸ್ಕರಿತ ಜನ್ಮೋತ್ತರ ಸೋಂಕುಗಳಲ್ಲಿ ದೃಢೀಕರಣಗೊಂಡ ಬ್ಯಾಕ್ಟೀರಿಯಲ್‌ ಮತ್ತು ವೈರಲ್‌ (ವಿಶೇಷವಾಗಿ ಹರ್ಪಿಸ್‌ ವೈರಸ್‌ ಮತ್ತು ವೆರಿಸೆಲ್ಲಾ) ಮೆನಿಂಜೈಟಿಸ್‌ ಸೇರಿವೆ. ಆಸ್ಪತ್ರೆಗೆ ದಾಖಲಾಗಬೇಕಾಗಿ ಬರುವ ತಲೆಗೆ ಉಂಟಾದ ಗಾಯ ಅಥವಾ ಹಾನಿ ಅದರಲ್ಲೂ ತಲೆಬುರುಡೆ ಅಥವಾ ಟೆಂಪೋರಲ್‌ ಎಲುಬು ಮುರಿತ ಕೂಡ ಇನ್ನಿತರ ಕಾರಣಗಳಾಗಬಹುದಾಗಿವೆ. ಗರ್ಭ ಧರಿಸಿದ್ದ ಸಮಯದಲ್ಲಿ ಕಿಮೊಥೆರಪಿ ಮತ್ತು ಎಂಆರ್‌ಐ, ಸಿಟಿ ಸ್ಕ್ಯಾನ್‌ನಂತಹ ವಿಕಿರಣಶೀಲ ವಸ್ತುಗಳು ಅಥವಾ ಮೆಡಿಕಲ್‌ ಇಮೇಜಿಂಗ್‌ಗೆ ಒಳಗಾಗುವುದು ಭ್ರೂಣದ ಮೇಲೆ ಪರಿಣಾಮ ಬೀರುತ್ತವೆ. ವೈದ್ಯರ ಶಿಫಾರಸು ಇಲ್ಲದೆ ಸೇವಿಸುವ ಅಥವಾ ಉಪಯೋಗಿಸುವ ಯಾವುದೇ ಔಷಧವೂ ಅಪಾಯಕ್ಕೆ ಕಾರಣವಾಗಬಹುದು. ಭ್ರೂಣವನ್ನು ಅಪಾಯಕ್ಕೆ ಒಡ್ಡಬಹುದಾದ ಮೇಲೆ ವಿವರಿಸಿರುವ ಅಂಶಗಳ ಬಗ್ಗೆ ಅರಿತುಕೊಂಡು ಎಚ್ಚರ ವಹಿಸುವುದರಿಂದ ವೈಕಲ್ಯವನ್ನು ಕ್ಷಿಪ್ರವಾಗಿ ಪತ್ತೆಹಚ್ಚಬಹುದು ಅಥವಾ ಸಾಕಷ್ಟು ಮಟ್ಟಿಗೆ ತಡೆಯಬಹುದು ಕೂಡ.

ಶ್ರವಣ ಶಕ್ತಿ ನಷ್ಟ ಅಥವಾ ಕಿವುಡುತನ ಇರುವುದೇ ಆಗಿದ್ದರೆ ಅದನ್ನು ಎಷ್ಟು ಸಾಧ್ಯವೋ ಅಷ್ಟು ಕ್ಷಿಪ್ರವಾಗಿ ಪತ್ತೆ ಹಚ್ಚುವುದರ

ಪ್ರಾಮುಖ್ಯವನ್ನು ಅರ್ಥ ಮಾಡಿಕೊಂಡು, ತಂತ್ರಜ್ಞಾನದಲ್ಲಿ ಆಗಿರುವ ಪ್ರಗತಿಗಳನ್ನು ಉಪಯೋಗಿಸಿಕೊಂಡು ನಿಯೋನೆಟಾಲಜಿಸ್ಟ್‌, ಮಕ್ಕಳ ವೈದ್ಯರು, ಪ್ರಸೂತಿಶಾಸ್ತ್ರಜ್ಞರು ಮತ್ತು ಆಡಿಯಾಲಜಿಸ್ಟ್‌ ಒಂದು ತಂಡವಾಗಿ ಶ್ರವಣ ಕ್ಷೇತ್ರದಲ್ಲಿ ಅತ್ಯದ್ಭುತ ಬದಲಾವಣೆಯನ್ನು ತರುವುದಕ್ಕೆ ಸಾಧ್ಯ. ವಿಶ್ವ ಆರೋಗ್ಯ ಸಂಸ್ಥೆಯು ಈ ವಿಚಾರದ ಪ್ರಾಮುಖ್ಯ ಮತ್ತು ತುರ್ತು ಅಗತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಶಿಶು ಶ್ರವಣ ಶಕ್ತಿಯ ಜಂಟಿ ಆಯೋಗ (ಜೆಸಿಐಎಚ್‌) ದ ಮಾರ್ಗದರ್ಶಿ ಸೂತ್ರಗಳ ಅನುಸಾರ ವಿಶ್ವದೆಲ್ಲೆಡೆ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ನವಜಾತ ಶಿಶು ಶ್ರವಣ ಶಕ್ತಿ ಕಾರ್ಯಕ್ರಮಗಳು ಮತ್ತು ಶ್ರವಣ ಶಕ್ತಿ ದೋಷವನ್ನು ಆದಷ್ಟು ಬೇಗನೆ ಪತ್ತೆ ಹಚ್ಚುವುದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಶಿಶು ಶ್ರವಣ ಶಕ್ತಿಯ ಜಂಟಿ ಆಯೋಗ (ಜೆಸಿಐಎಚ್‌) ವು ಮಕ್ಕಳಲ್ಲಿ ಶ್ರವಣ ಶಕ್ತಿ ದೋಷವನ್ನು ಆದಷ್ಟು ಬೇಗನೆ ಪತ್ತೆ ಮಾಡುವುದು ಮತ್ತು ಚಿಕಿತ್ಸೆ ನೀಡುವುದನ್ನು ಸಮುದಾಯ, ರಾಜ್ಯ, ರಾಷ್ಟ್ರ ಮಟ್ಟದ ಜಾಗತಿಕ ಶಿಶು ಶ್ರವಣಶಕ್ತಿ ಪರೀಕ್ಷೆ, ವಿಶ್ಲೇಷಣೆ ಮತ್ತು ಕುಟುಂಬ ಕೇಂದ್ರಿತ ಚಿಕಿತ್ಸೆಯಂತಹ ಸಮಗ್ರ ಪ್ರಯತ್ನಗಳ ಮೂಲಕ ನಡೆಸುವುದಕ್ಕೆ ಬೆಂಬಲ ನೀಡುತ್ತಿದೆ. ಕಿವುಡಾಗಿರುವ ಅಥವಾ ಶ್ರವಣ ಶಕ್ತಿ ಕಡಿಮೆ ಇರುವ ಮಕ್ಕಳ ಭಾಷಿಕ ಮತ್ತು ಸಂವಹನ ಸಾಮರ್ಥ್ಯವನ್ನು ವೃದ್ಧಿಸುವುದೇ ಶ್ರವಣ ದೋಷದ ಕ್ಷಿಪ್ರ ಪತ್ತೆ ಮತ್ತು ಚಿಕಿತ್ಸೆ (ಇಎಚ್‌ಡಿಐ)ಯ ಪ್ರಧಾನ ಗುರಿಯಾಗಿದೆ. ಭಾಷೆಯನ್ನು ಕಲಿಯುವುದಕ್ಕೆ ಸಮರ್ಪಕವಾದ ಅವಕಾಶಗಳು ಲಭ್ಯವಿಲ್ಲದೆ ಇಂತಹ ಮಕ್ಕಳು ಭಾಷೆ, ಗ್ರಹಣ ಮತ್ತು ಸಾಮಾಜಿಕ-ಭಾವನಾತ್ಮಕ ಪ್ರಗತಿಯಲ್ಲಿ ತಮ್ಮದೇ ವಯಸ್ಸಿನ ಮಕ್ಕಳಿಗಿಂತ ಹಿಂದುಳಿಯುತ್ತಾರೆ. ಇಂತಹ ವಿಳಂಬಗಳಿಂದಾಗಿ ಮಕ್ಕಳು ದೊಡ್ಡವರಾದಾಗ ಅವರ ಶೈಕ್ಷಣಿಕ ಮತ್ತು ಔದ್ಯೋಗಿಕ ಮಟ್ಟ ಕಳಪೆಯಾಗಿರುತ್ತದೆ. ಇಂತಹ ಕ್ಷಿಪ್ರ ಪತ್ತೆ ಮತ್ತು ಚಿಕಿತ್ಸಾ ಕಾರ್ಯಕ್ರಮಗಳಿಂದ ಉತ್ತಮ ಫ‌ಲಿತಾಂಶ ಲಭಿಸುತ್ತಿದೆ ಎಂಬುದಾಗಿಯೂ ಅಧ್ಯಯನಗಳು ಹೇಳಿವೆ. ತನ್ನ ಗುಣಮಟ್ಟ, ಸೇವಾದರ್ಜೆಗಳನ್ನು ನಿರಂತರವಾಗಿ ಎತ್ತರಿಸಿಕೊಳ್ಳುವ ಪ್ರಯತ್ನ ನಿರತವಾಗಿರುವ ಕಸ್ತೂರ್ಬಾ ಆಸ್ಪತ್ರೆಯು ಈ ವಿಚಾರದಲ್ಲಿಯೂ ಹಿಂದೆ ಬಿದ್ದಿಲ್ಲ.

ಮಣಿಪಾಲದ ಮಾಹೆಯಲ್ಲಿನ ಎಂಸಿಎಚ್‌ಪಿಯ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗವು ಈ ನಿಟ್ಟಿನಲ್ಲಿ ನವಜಾತ ಶ್ರವಣ ಪರೀಕ್ಷಾ ಕಾರ್ಯಕ್ರಮವನ್ನು ಆಯೋಜಿಸಿದೆ. ಇದೀಗ ತಾನೇ ಜನಿಸಿದ ಎಲ್ಲ ಶಿಶುಗಳಿಗೂ ಈ ತಪಾಸಣೆಯು ಲಭ್ಯವಿದೆ. ಶಿಶುಗಳಲ್ಲಿ ಇರಬಹುದಾದ ಶ್ರವಣ ದೋಷವು ಪತ್ತೆಯಾಗದೆ ಇರುವ ಅಪಾಯವನ್ನು ಇದು ನಿವಾರಿಸುತ್ತದೆ. ಈ ಕಾರ್ಯಕ್ರಮದಡಿ ಶಿಶುವನ್ನು ಒಂದು ಪರೀಕ್ಷೆಗೆ ಒಳಪಡಿಸಲಾಗುತ್ತದೆ.

“ಪಾಸ್‌’ ಆಗಿದ್ದರೆ ರೋಗಿಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಲಾಗುತ್ತದೆ ಮತ್ತು ಮಗುವಿನ “ಶ್ರವಣ ಮೈಲಿಗಲ್ಲು’ಗಳ ಬಗೆಗೆ ತಿಳಿಸಿಕೊಡಲಾಗುತ್ತದೆ. ಇದನ್ನೇ ವಿವರಿಸುವ ಸಚಿತ್ರ ಕೈಪಿಡಿಯನ್ನೂ ನೀಡಲಾಗುತ್ತದೆ. ಮಗುವಿನ ಬೆಳವಣಿಗೆಯ ಹಂತಗಳಲ್ಲಿ ಇದರಲ್ಲಿ ಯಾವುದೇ ವ್ಯತ್ಯಯಗಳು ಕಂಡು ಬಂದರೆ ಆಸ್ಪತ್ರೆಗೆ ಮುಂದಿನ ಭೇಟಿಯ ಸಂದರ್ಭ ಮಾಹಿತಿ ನೀಡಲು ಸೂಚಿಸಲಾಗುತ್ತದೆ. ಅನುಸರಣ ಭೇಟಿಯನ್ನು ಮಗುವಿನ ಹೆತ್ತವರ ಅನುಕೂಲತೆಯ ಮೇರೆಗೆ ಮಗುವಿನ ಲಸಿಕೆಯ ದಿನಾಂಕದ ಜತೆಗೆ ಹೊಂದಿಸಲಾಗುತ್ತದೆ. ಇಂತಹ ಸನ್ನಿವೇಶದಲ್ಲಿ ತಪಾಸಣಾ ಪರೀಕ್ಷೆಯಲ್ಲಿ “ಫೈಲ್‌’ ಎಂಬುದು ಭವಿಷ್ಯದ ಋಣಾತ್ಮಕ ಫ‌ಲಿತಾಂಶ ಸೂಚಕವೇ ಆಗಿರಬೇಕಾಗಿಲ್ಲ ವಾದ್ದರಿಂದ “ಶಿಫಾರಸು’ ಎಂಬ ಪದ ಹೆಚ್ಚು ಸೂಕ್ತವಾಗಿರುತ್ತದೆ.

ತಪಾಸಣಾ ಪರೀಕ್ಷೆಯ ಮೇಲೆ ಅನೇಕ ಅಂಶಗಳು ಪ್ರಭಾವ ಬೀರುತ್ತವೆ – ಶಿಶುವಿನ ಸಹಕಾರ, ಜನನದ ಬಳಿಕ ಕಿವಿಯಲ್ಲಿ ದ್ರವಾಂಶ ಉಳಿದುಕೊಳ್ಳುವಿಕೆ, ಪರೀಕ್ಷೆಯಲ್ಲಿ ಕಳಪೆ ಪ್ರತಿಸ್ಪಂದನೆಗೆ ಕಾರಣವಾಗುವ ಶ್ರವಣ ವ್ಯವಸ್ಥೆಯ ಅಸಂಪೂರ್ಣ ಬೆಳವಣಿಗೆ ಮತ್ತು ಇತರ ಹಲವು. ಪರೀಕ್ಷೆಯಲ್ಲಿ ಸತತವಾಗಿ “ಫೈಲ್‌’ ಫ‌ಲಿತಾಂಶವೇ ಬಂದರೆ ವಿಸ್ತೃತವಾದ ತಪಾಸಣೆಗಳನ್ನು ಕೈಗೊಳ್ಳಲಾಗುತ್ತದೆ. ವೈವಿಧ್ಯಮಯವಾದ ಪುನಶ್ಚೇತನ ಕಾರ್ಯಕ್ರಮಗಳು ಲಭ್ಯವಿದ್ದು, ಶಿಶುವಿನ ಹೆತ್ತವರು ಅವರಿಗೆ ಇಷ್ಟವಾದದ್ದನ್ನು ಆರಿಸಿಕೊಳ್ಳಬಹುದು.

ಒಟ್ಟಾರೆಯಾಗಿ ಹೇಳಬೇಕೆಂದರೆ, ಸಂವೇದನಶೀಲ ಆಲಿಸುವಿಕೆಯ ಶಕ್ತಿ ಬಹಳ ಮಹತ್ವಪೂರ್ಣವಾದದ್ದು. ಶಿಶುವಿನ ಭವಿತವ್ಯದಲ್ಲಿ ಅದರ ಪ್ರಾಮುಖ್ಯವನ್ನು ಅರಿತುಕೊಂಡು ಎಲ್ಲ ಅಡೆತಡೆಗಳನ್ನು ಮೆಟ್ಟಿನಿಂತು ಮಗುವಿನ ವೈಕಲ್ಯವನ್ನು ನಿವಾರಿಸುವಲ್ಲಿ ಅಥವಾ ಶ್ರವಣ ಸಾಮರ್ಥ್ಯವನ್ನು ಪುನಶ್ಚೇತನಗೊಳಿಸುವಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡಬೇಕು. ತಮ್ಮಲ್ಲಿರುವ ಸಂದೇಹಗಳು, ಪ್ರಶ್ನೆಗಳನ್ನು ವೈದ್ಯರ ಮುಂದೆ ವ್ಯಕ್ತಪಡಿಸಿ ಸಮರ್ಪಕವಾದ ಉತ್ತರಗಳನ್ನು ಪಡೆಯುವಲ್ಲಿ ಹೆತ್ತವರು ಹಿಂದೆ ಬೀಳಬಾರದು. ಮಗುವಿನ ಆರೋಗ್ಯವು ಬಹಳ ಮುಖ್ಯವಾದದ್ದು ಮತ್ತು ವೈದ್ಯರು ಆ ನಿಟ್ಟಿನಲ್ಲಿ ತಮ್ಮ ಶಕ್ತಿಮೀರಿದ ಪ್ರಯತ್ನಗಳನ್ನು ನಡೆಸುತ್ತಾರೆ.

-ಡಾ| ಅರ್ಚನಾ ಜಿ.
ಅಸೋಸಿಯೇಟ್‌ ಪ್ರೊಫೆಸರ್‌
ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗ
ಮಾಹೆ, ಮಣಿಪಾಲ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಹಿಂಗಾರು ಮಾರುತಗಳ ಭರ್ಜರಿ ಪ್ರವೇಶ ದಿಂದ ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಮಳೆ ಅಬ್ಬರಿ ಸುತ್ತಿದೆ. ಇನ್ನೂ ಮೂರ್‍ನಾಲ್ಕು ದಿನಗಳು ಇದೇ ವಾತಾವರಣ...

  • ಏಷಿಯಾದ ಮೊದಲ "ಬಿಪಿಎಲ್‌'ಗೆ ಭಾನುವಾರ ಪ್ರಾಯೋಗಿಕ ಚಾಲನೆ ಸಿಕ್ಕಿದೆ. ಈ ಒಂದು ಪಥ ಯಶಸ್ವಿಯಾದರೆ, ನಗರ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಿಗೆ ಮುನ್ನುಡಿ...

  • ಬೆಂಗಳೂರು: ಅಲಯನ್ಸ್‌ ವಿವಿಯ ವಿಶ್ರಾಂತ ಕುಲಪತಿ ಹಾಗೂ ರಾಜಕಾರಣಿ ಡಾ.ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಎರಡನೇ ಪ್ರಮುಖ ಆರೋಪಿ ಹಾಗೂ ಸುಪಾರಿ ಹಂತಕನಿಗೆ ಉತ್ತರ...

  • ವೀರ ಸಾವರ್ಕರ್‌ಗೆ "ಭಾರತ ರತ್ನ' ನೀಡುವ ಮಹಾರಾಷ್ಟ್ರ ಬಿಜೆಪಿ ಪ್ರಣಾಳಿಕೆಯ ಅಂಶದ ಬಗ್ಗೆ ರಾಜಕೀಯ ನಾಯಕರ ವಾಕ್ಸಮರ ಭಾನುವಾರವೂ ಮುಂದುವರಿದಿದೆ. ಇದೇ ವಿಚಾರವಾಗಿ...

  • ಬೆಂಗಳೂರು: ಅನಿಷ್ಠ ಹಾಗೂ ನಿಷೇಧಿತ ದೇವದಾಸಿ ಪದ್ಧತಿಯಿಂದ ಮುಕ್ತಿ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬಂದು ಗೌರವ ಹಾಗೂ ಘನತೆಯ ಬದುಕು ಕಟ್ಟಿಕೊಳ್ಳುತ್ತಿರುವ...