ಆಕ್ಯುಪೇಶನಲ್‌ ಥೆರಪಿಸ್ಟ್‌

Team Udayavani, Aug 4, 2019, 5:00 AM IST

ಈ ಲೇಖನ ಅಥವಾ ಇದರ ಶೀರ್ಷಿಕೆಯನ್ನು ಓದಿದ ತತ್‌ಕ್ಷಣ ಅನೇಕ ಓದುಗರ ಮನಸ್ಸಿನಲ್ಲಿ ಮೂಡಬಹುದಾದ ಪ್ರಶ್ನೆ “ಆಕ್ಯುಪೇಶನಲ್‌ ಥೆರಪಿ’ ಎಂದರೇನು? ಆಕ್ಯುಪೇಶನಲ್‌ ಥೆರಪಿಸ್ಟ್‌ಗಳು ಉದ್ಯೋಗ ನೀಡುವವರೇ? -ಇತ್ಯಾದಿ.

ಆಕ್ಯುಪೇಶನಲ್‌ ಥೆರಪಿ ಎಂಬುದು ಪುನಶ್ಚೇತನ ಸಂಬಂಧಿಯಾದ ಒಂದು ವೈದ್ಯವೃತ್ತಿ. ಈ ಚಿಕಿತ್ಸಕರು ದೈನಿಕ ಚಟುವಟಿಕೆಗಳನ್ನು ನಡೆಸಲು ಅಡೆತಡೆಗಳುಳ್ಳ ರೋಗಿಗಳು, ವ್ಯಕ್ತಿಗಳ ಜತೆಗೆ ಕೆಲಸ ಮಾಡುತ್ತಾರೆ. ಪುಟ್ಟ ಮಗುವಿನಿಂದ ತೊಡಗಿ ವಯೋವೃದ್ಧರ ವರೆಗೆ ಎಲ್ಲ ವಯಸ್ಸಿನವರು, ಎಲ್ಲ ವಿಧದ ಆರೋಗ್ಯ ಸಮಸ್ಯೆ ಇರುವವರ ಜತೆಗೆ ಈ ಚಿಕಿತ್ಸಕರು ತೊಡಗಿಕೊಳ್ಳುತ್ತಾರೆ. ಉದ್ಯೋಗ ನಮನೀಯತೆ ಮತ್ತು ಸಂತೃಪ್ತಿಯನ್ನು ಒದಗಿಸುವ ಈ ವೃತ್ತಿಯು ವೈವಿಧ್ಯಮಯ ಔದ್ಯೋಗಿಕ ಸಂದರ್ಭಗಳನ್ನು ನೀಡುತ್ತದೆ.

ಪುನರ್ವಸತಿ ಮತ್ತು ಪುನಶ್ಚೇತನ ಕ್ಷೇತ್ರವು ಅದರಲ್ಲಿ ತೊಡಗಿಸಿಕೊಂಡಿರುವವರಲ್ಲಿ ಒಂದು ಧನಾತ್ಮಕ ದೃಷ್ಟಿಕೋನವನ್ನು ಬಯಸುತ್ತದೆ; ಅವರು ಎದುರಿಸುವ ಸನ್ನಿವೇಶಗಳನ್ನು ಇನ್ನಿತರರು ಋಣಾತ್ಮಕ ಎಂದು ಪರಿಗಣಿಸುವ ಸಾಧ್ಯತೆಯಿದೆ. ಪ್ರತಿಯೊಂದು ಸನ್ನಿವೇಶದಲ್ಲಿಯೂ ಸಕಾರಾತ್ಮಕತೆಯನ್ನು ಕಾಣುವ ತರಬೇತಿಯನ್ನು ನಾವು ಹೊಂದಿರುತ್ತೇವೆ ಅಥವಾ ನಮ್ಮಲ್ಲಿ ಅದು ರಕ್ತಗತವಾಗಿ ಬಂದಿರುತ್ತದೆ. ಉದಾಹರಣೆಗೆ, ಗಾಲಿಕುರ್ಚಿಯಲ್ಲಿ ಕುಳಿತುಕೊಂಡಿರುವ ಓರ್ವ ವ್ಯಕ್ತಿಯನ್ನು ಕಂಡಾಗ, ಆತ ದೈನಿಕ ಬದುಕಿನಲ್ಲಿ ಒಂದಷ್ಟು ಕೆಲಸ ಕಾರ್ಯಗಳನ್ನು, ಚಟುವಟಿಕೆಗಳನ್ನು ನಡೆಸಲಾಗದ ವ್ಯಕ್ತಿಯಾಗಿ ಇತರರಿಗೆ ಕಾಣಿಸಬಹುದು. ಆದರೆ, ಆಕ್ಯುಪೇಶನಲ್‌ ಥೆರಪಿಸ್ಟ್‌ಗಳಿಗೆ ಮನುಷ್ಯ ಪ್ರಗತಿಯ ವಿವಿಧ ಆಯಾಮ (ಆಧ್ಯಾತ್ಮಿಕ, ಸಾಮಾಜಿಕ, ಭಾವನಾತ್ಮಕ, ದೈಹಿಕ, ಮಾನಸಿಕ ಇತ್ಯಾದಿ)ಗಳು ಆ ವ್ಯಕ್ತಿಯಲ್ಲಿ ಎಷ್ಟಿವೆ ಎಂಬುದನ್ನು ಕಾಣುತ್ತೇವೆ. ಈ ವೃತ್ತಿಯು ಜನರ ಜತೆಗೆ ಕೆಲಸ ಮಾಡುವುದನ್ನು ಪ್ರೀತಿಸುವ ಗುಣವನ್ನು ಬಯಸುತ್ತದೆ ಮತ್ತು ಪರಿಹಾರಗಳನ್ನು ಹುಡುಕುವಾಗ ಸೃಜನಶೀಲರಾಗಿರುವುದನ್ನು ಬಯಸುತ್ತದೆ. ಈ ಗುಣಗಳಿದ್ದಾಗಲೇ ಆಕ್ಯುಪೇಶನಲ್‌ ಥೆರಪಿ ವೃತ್ತಿಪರನೊಬ್ಬ ಆಕ್ಯುಪೇಶನಲ್‌ ಥೆರಪಿ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಗುಣವನ್ನು ಹೊಂದುತ್ತಾನೆ.

ಬಹುತೇಕ ಎಲ್ಲದರಲ್ಲೂ ನಾವು, ಆಕ್ಯುಪೇಶನಲ್‌ ಥೆರಪಿಸ್ಟ್‌ಗಳು ಆವಿಷ್ಕಾರವನ್ನು ಮಾಡಿಕೊಳ್ಳುವ ಗುಣವನ್ನು ಹೊಂದಿರುತ್ತೇವೆ. ನಾವು ಆಸ್ಪತ್ರೆಗಳಲ್ಲಿಯಷ್ಟೇ ಕೆಲಸ ಮಾಡುತ್ತೇವೆ ಎಂಬುದಾಗಿ ಜನರ ಸಾಮಾನ್ಯ ಭಾವನೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚು ಹೆಚ್ಚು ಆಕ್ಯುಪೇಶನಲ್‌ ಥೆರಪಿಸ್ಟ್‌ ಗಳು ಆಸ್ಪತ್ರೆಯಿಂದ ಹೊರಗೆ, ಸಮುದಾಯಗಳು, ಶಾಲೆಗಳು, ಕಂಪೆನಿಗಳಲ್ಲಿ ಮಾನಸಿಕ ಆರೋಗ್ಯವನ್ನು ಸುಧಾರಿಸುವುದೇ ಮೊದಲಾದ ಕೆಲಸಗಳನ್ನು ಮಾಡುತ್ತಿದ್ದಾರೆ. ನಾವು ತೊಡಗಿಸಿಕೊಳ್ಳುವ ಚಟುವಟಿಕೆಗಳು ಕೂಡ ಅಷ್ಟೇ ವೈವಿಧ್ಯಮಯ – ಸ್ಪ್ಲಿಂಟ್‌ಗಳನ್ನು ತಯಾರಿಸುವುದು, ಕಚೇರಿಯಲ್ಲಿ ಸರಿಯಾಗಿ ಕುಳಿತುಕೊಳ್ಳುವ ಆಸನ- ಭಂಗಿಗಳ ಜತೆಗೆ ಬ್ಯಾಂಕ್‌ ಉದ್ಯೋಗಿಗಳಿಗೆ ಶಿಕ್ಷಣ ಒದಗಿಸುತ್ತೇವೆ, ವಿವಿಧ ವಿಶ್ರಾಮದಾಯಕ ಚಟುವಟಿಕೆಗಳನ್ನು ತೊಡಗಿಕೊಳ್ಳುವುದು ಹೇಗೆ ಎಂಬ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸುತ್ತೇವೆ, ವ್ಯಕ್ತಿಯೊಬ್ಬನನ್ನು ಮರಳಿ ಸಾಮುದಾಯಿಕ ಜೀವನದಲ್ಲಿ ಒಳಗೊಳಿಸುವ ಕೆಲಸವನ್ನೂ ನಾವು ಕೈಗೊಳ್ಳುತ್ತೇವೆ.

ಪ್ರತಿದಿನದ ಕ್ಲಿಷ್ಟಕರ ಮತ್ತು ಸವಾಲಿನ ಚಿಕಿತ್ಸಾ ಅವಧಿಗಳ ಬಳಿಕ ಮೈಕೈ-ಬಟ್ಟೆಬರೆ ಕೊಳೆಯಾಗಿದ್ದರೂ ನಮ್ಮ ಗ್ರಾಹಕರ ಮುಖಗಳಲ್ಲಿ ಸಂತೃಪ್ತಿ ಮತ್ತು ಸಮಾಧಾನದ ನಗುವನ್ನು ಕಾಣುವುದು; ಅವಲಂಬನೆಯ ವಿವಿಧ ಸ್ತರಗಳಿಂದ ಅವರು ಬಿಡುಗಡೆಯಾಗಿ ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿರುವುದು ನಮಗೆ ಅತ್ಯಂತ ಆನಂದ ಮತ್ತು ಸಂತೃಪ್ತಿಯನ್ನು ನೀಡುತ್ತದೆ. ನಾವು ಒದಗಿಸಿದ ಚಿಕಿತ್ಸೆಯು ಅವರಲ್ಲಿ ಎಷ್ಟು ಬದಲಾವಣೆಯನ್ನು ಉಂಟು ಮಾಡಿದೆ ಎಂಬುದನ್ನು ನಾವು ಸದಾ ನಮ್ಮ ಗ್ರಾಹಕರಿಂದ ಕೇಳುತ್ತಿರುತ್ತೇವೆ ಮತ್ತು ಅಂಥ ಮಾಹಿತಿಯೇ ನಮಗೆ ಅತ್ಯಂತ ಶ್ರೇಷ್ಠ ಹಾಗೂ ಪ್ರೋತ್ಸಾಹನವಾಗಿರುತ್ತದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ನಿಜ, ಆಕ್ಯುಪೇಶನಲ್‌ ಥೆರಪಿ ಎಂಬ ಈ ಕ್ಷೇತ್ರ ಹತ್ತು ಹಲವು ಸವಾಲುಗಳನ್ನು ಹೊಂದಿದೆ. ಆದರೆ ಅಂಥ ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಿ ಮುಂದುವರಿದಾಗ ಸಿಗುವುದು ಅವು ನಗಣ್ಯ ಎನಿಸುವಷ್ಟು ತೂಕದ ಸಂತೃಪ್ತಿ. ಈ ಕ್ಷೇತ್ರ ಭಾರೀ ಶ್ರಮವನ್ನು ಅಪೇಕ್ಷಿಸುತ್ತದಾದರೂ ಕೊನೆಯಲ್ಲಿ ಒದಗಿಸುವ ತೃಪ್ತಿಯ ಮುಂದೆ ಅದು ಏನೇನೂ ಅಲ್ಲ.

ಭಾವನಾತ್ಮಕ
ಸುಸ್ಥಿತಿ ಸವಾಲು
ತಲೆ ಬಾಚಿಕೊಳ್ಳುವುದು, ಹಲ್ಲುಜ್ಜುವುದು, ಶೌಚ ಕ್ರಿಯೆ ಇತ್ಯಾದಿಗಳನ್ನು ಸ್ವಂತ ವಾಗಿ ಮಾಡಿಕೊಳ್ಳಲು ಕಷ್ಟವಿರುವಂಥವರಿಗೆ ಅಂಥ ಕ್ರಿಯೆಗಳಲ್ಲಿ ಸಮರ್ಥವಾಗಿ ತೊಡಗಿಸಿಕೊಳ್ಳುವಂತೆ ತರಬೇತಿ ನೀಡುವುದು ಕೂಡ ನಮ್ಮ ಕಾರ್ಯವಾಗಿದೆ. ಈ ಮೂಲಕ ನಾವು ಅನ್ಯರಿಗೆ ಮುಜುಗರ ಹುಟ್ಟಿಸಬಹುದಾದ ದೇಹದ್ರವಗಳ ಜತೆಗೆ ಕೆಲಸ ಮಾಡಬೇಕಾಗುತ್ತದೆ. ವಿಶೇಷತಃ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ, ನಮ್ಮ ಗ್ರಾಹಕರಿಗೆ ಕಾಯಿಲೆ ಮರುಕಳಿಸುವಂತಹ ಸಂದರ್ಭಗಳಲ್ಲಿ, ಸನ್ನಿವೇಶಗಳನ್ನು ನಿಭಾಯಿಸುವುದು ಭಾವನಾತ್ಮಕ ವಾಗಿ ಬಹಳ ಕಠಿನ ಸವಾಲಾಗಿರು ತ್ತದೆ. ಭಾವನಾತ್ಮಕವಾಗಿ ನಮ್ಮನ್ನು ನಾವು ಸುಸ್ಥಿತಿಯಲ್ಲಿ ಕಾಪಾಡಿ ಕೊಳ್ಳುವುದು ನಮ್ಮ ಉದ್ಯೋಗದ ಅತ್ಯಂತ ಕ್ಲಿಷ್ಟಕರ ಮತ್ತು ಸವಾಲಿನ ಸಂಗತಿಯಾಗಿದೆ. ಯಾಕೆಂದರೆ, ನಾವು ಚೆನ್ನಾಗಿದ್ದರೆ ಮಾತ್ರ ಇನ್ನಿತರ ರನ್ನು ಚೆನ್ನಾಗಿರಲು ಹೇಳಬಹುದು ಮತ್ತು ಆ ದಿಶೆಯಲ್ಲಿ ಅವರಿಗೆ ಸಹಾಯ ಮಾಡಬಹುದು.

ಒಂದು ಉತ್ತಮ ಆಯ್ಕೆಯೆ ?
ಆಕ್ಯುಪೇಶನಲ್‌ ಥೆರಪಿ ಕ್ಷೇತ್ರವು ಭಾರೀ ಶ್ರಮವನ್ನು ಅಪೇಕ್ಷಿಸುತ್ತದಾದರೂ ಚಿಕಿತ್ಸೆಯ ಕೊನೆಯಲ್ಲಿ ಅದು ಒದಗಿಸುವ ತೃಪ್ತಿಯ ಮುಂದೆ ಆ ಶ್ರಮ ಏನೇನೂ ಅಲ್ಲ.

ಪ್ರೇರಣಾ ಲಾಲ್‌
ಅಸಿಸ್ಟೆಂಟ್‌ ಪ್ರೊಫೆಸರ್‌,
ಶೀತಲ್‌, ಸೌಮ್ಯ, ರೆಬೆಕಾ
ವಿದ್ಯಾರ್ಥಿಗಳು,
ಆಕ್ಯುಪೇಶನಲ್‌ ಥೆರಪಿ ವಿಭಾಗ,
ಮಾಹೆ, ಮಣಿಪಾಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ