ಮದ್ಯಪಾನದಿಂದಾಗುವ ದೈಹಿಕ ಸಮಸ್ಯೆಗಳು

Team Udayavani, Apr 14, 2019, 6:00 AM IST

ಹೆಚ್ಚಿನ ಜನರ ತಪ್ಪು ನಂಬಿಕೆಯೇನೆಂದರೆ, ನಾನು ಕೇವಲ ಒಂದು ಬಾಟಲ್‌ ಬಿಯರ್‌ಅಥವಾ ವೈನ್‌ ಅಥವಾ ಒಂದು ಪೆಗ್‌ ವ್ಹಿಸ್ಕಿ/ರಮ್‌ ಕುಡಿಯುತ್ತೇನೆ; ಇದರಿಂದಾಗಿ ನನ್ನ ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಹೆಚ್ಚಾಗಿ ಎಲ್ಲರೂ ತಿಳಿದುಕೊಂಡಿರುವುದೇನೆಂದರೆ, ಮದ್ಯಪಾನ ಮಾಡಿದರೆ ಲಿವರ್‌ ಹಾಳಾಗುತ್ತದೆ. ಆದರೆ, ಮದ್ಯಪಾನದಿಂದ ಹಾನಿಗೀಡಾಗುವುದು ದೇಹದ ಎಲ್ಲ ಅಂಗಗಳು. ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಮದ್ಯಪಾನದಿಂದ ಸುಮಾರು 200ಕ್ಕೂ ಹೆಚ್ಚಿನ ತರಹದ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಈ ತರಹದ ಆರೋಗ್ಯದ ಸಮಸ್ಯೆಗಳು ಉಲ್ಬಣಗೊಳ್ಳಲು ವ್ಯಕ್ತಿಯು ದಿನವೂ ಮದ್ಯಪಾನ ಮಾಡುತ್ತಾ ಅದರ ಮೇಲೆ ಅವಲಂಬಿತನಾಗಿರಬೇಕೆಂದೇನಿಲ್ಲ; ಅಂದರೆ ನಿಯಮಿತವಾಗಿ ಮದ್ಯಪಾನ ಮಾಡದಿದ್ದರೂ ಈ ರೀತಿಯ ದೈಹಿಕ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಈ ಕೆಳಗೆ ನಮೂದಿಸಿದಂತೆ, ಮದ್ಯಪಾನದಿಂದ ಉಂಟಾಗುವ ದೈಹಿಕ ತೊಂದರೆಗಳನ್ನು ಮಿದುಳಿನಿಂದ ಕಾಲಿನವರೆಗೆ ಅರ್ಥಮಾಡಿಕೊಳ್ಳಬಹುದು.

ಮಿದುಳು
ಮಿದುಳಿನ ನರಕೋಶಗಳಿಗೆ ಹಾನಿಯಾಗುವುದು, ಇದರ ಪರಿಣಾಮವಾಗಿ ಮಿದುಳಿಗೆ ಸಂಬಂಧಪಟ್ಟ ತೊಂದರೆಗಳು ಕಂಡುಬರುತ್ತವೆ.
– ಕಲಿಯುವ ಸಾಮರ್ಥ್ಯ ಕಡಿಮೆಯಾಗುವುದು, ನೆನಪಿನ ತೊಂದರೆಗಳಾಗುವುದು.
– ಮರೆಗುಳಿತನದ ಕಾಯಿಲೆ ಆರಂಭವಾಗುವುದು.
– ಸೆರಿಬೆಲ್ಲಮ್‌ ಎನ್ನುವ ಮಿದುಳಿನ ಭಾಗದ ಸವೆತವುಂಟಾಗಿ ನಡೆಯುವಾಗ ಸಮತೋಲನ ತಪ್ಪುವುದು, ಬೀಳುವುದು.
– ಗೊಂದಲ/ ಕನೂಶನ್‌ ಆಗುವುದು: ಸಮಯ
– ವರ್ನಿಕೆ   ಕಾರ್ಸಕಾಫ್ ಸಿಂಡ್ರೋಮ್‌
ಫಿಟ್ಸ್‌ ಬರುವುದು: ಚಿಕಿತ್ಸೆ ಪಡೆಯದೇ ಹಠಾತ್ತಾಗಿ ಮದ್ಯಪಾನ ನಿಲ್ಲಿಸಿದಾಗ 48ರಿಂದ 72 ಗಂಟೆಗಳ ಒಳಗೆ ಫಿಟ್ಸ್‌ ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಫಿಟ್ಸ್‌ ಕಾಯಿಲೆಯಿರುವವರು ಮದ್ಯಪಾನ ಮಾಡುತ್ತಿದ್ದರೆ ಅವರಿಗೆ ಫಿಟ್ಸ್‌ ಪುನಃ ಬರುವ ಸಾಧ್ಯತೆ ಹೆಚ್ಚಾಗುತ್ತದೆ.

ಕಣ್ಣುಗಳು
– ಕುರುಡುತನ: ಕಲಬೆರಕೆ ಮದ್ಯದಿಂದ ಜನರು ಕೆಲವೊಮ್ಮೆ ದೃಷ್ಟಿ ಕಳೆದುಕೊಂಡ ನಿದರ್ಶನಗಳು ಹಲವಾರಿವೆ.
– ಕ್ಯಾಟರ್ಯಾಕ್ಟ್/ ಕಣ್ಣಿಗೆ ಪೊರೆ ಬರುವುದು
– ವಯಸ್ಸು ಕಳೆದಂತೆ ಉಂಟಾಗುವ ಅಕ್ಷಿಪಟಲದ ಹದಗೆಡುವಿಕೆ ತೀವ್ರವಾಗುವುದು ಮತ್ತು ಬೇಗನೆ ಹದಗೆಡುವುದು
– ಬೆಳಕಿಗೆ ಸಂವೇದನಶೀಲತೆ ಕಡಿಮೆಯಾಗಿ ಮೈಗ್ರೇನ್‌ ತರಹದ ತಲೆನೋವುಗಳು ಬರುವುದು
– ಕಣ್ಣುಗಳು ಹಳದಿ ಬಣ್ಣವಾಗುವುದು
– ಬೆಳಕು ಮತ್ತು ಕತ್ತಲೆಯ ಸ್ಪಷ್ಟ ದೃಷ್ಟಿ ಕ್ಷೀಣವಾಗುವುದು
– ಕಣ್ಣುಗಳಲ್ಲಿನ ತುರಿಕೆ

ಕಿವಿ
ಕಿವುಡುತನ, ಕಿವಿಯಲ್ಲಿ ನಿರಂತರ ಶಬ್ದ ಬರಬಹುದು ಹಾಗೂ ಶ್ರವಣ ಸಾಮರ್ಥ್ಯ ಕಡಿಮೆಯಾಗುವುದು.

ಬಾಯಿ
1. ಹಲ್ಲುಗಳು: ಪದೇ ಪದೆ ಹಲ್ಲಿನ ಸೋಂಕುಗಳುಂಟಾಗುತ್ತವೆ ಮತ್ತು ಹಲ್ಲುಗಳು ಬಿದ್ದುಹೋಗುತ್ತವೆ.
2. ಒಸಡು: ಒಸಡಿನ ನೋವು, ಒಸಡಿನಿಂದ ರಕ್ತಸ್ರಾವವಾಗುವುದು, ಬಾಯಿ ವಾಸನೆ ಬರುವುದು ಇತ್ಯಾದಿ.
3. ನಾಲಿಗೆ: ನಾಲಿಗೆಯು ದಪ್ಪವಾಗುತ್ತದೆ, ಬಿರುಕುಗಳು ಕಂಡುಬರುತ್ತವೆ, ಹುಣ್ಣುಗಳಾಗುತ್ತವೆ, ಉರಿ ಬರುವುದು, ನೋವಾಗುವುದು, ರುಚಿ ಗೊತ್ತಾಗದಿರುವುದು ಇತ್ಯಾದಿ.
4. ಬಾಯಿಯ ಕ್ಯಾನ್ಸರ್‌

ಹೃದಯ
1. ಹೃದಯ: ನಿರಂತರ ಹಾಗೂ ಅತಿಯಾದ ಮದ್ಯಪಾನದಿಂದ ಹೃದಯಕ್ಕೆ ಉಂಟಾಗುವ ತೊಂದರೆಯನ್ನು ಕಾರ್ಡಿಯೊಮಯೋಪತಿ ಎಂದು ಕರೆಯಲಾಗುತ್ತದೆ. ಇದರಿಂದ ದೇಹದ ಇತರ ಭಾಗಗಳಿಗೆ ರಕ್ತಸಂಚಾರ ಮಾಡುವ ಸಾಮರ್ಥ್ಯ ಕಡಿಮೆಯಾಗಿ ಕೆಲವೊಮ್ಮೆ ಹಾರ್ಟ್‌ ಫೈಲ್ಯೂರ್‌ ಆಗಬಹುದು ಅಥವಾ ಹೃದಯಬಡಿತ ನಿಂತುಬಿಟ್ಟು ವ್ಯಕ್ತಿ ಸಾಯಬಹುದು.
2. ರಕ್ತನಾಳ: ನಿರಂತರ ಮದ್ಯಪಾನದಿಂದ ದೇಹದಲ್ಲಿ ಆವಶ್ಯಕತೆಯಿದ್ದಾಗ ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆ ಹಾಗೂ ಸಾಮರ್ಥ್ಯ ಕಡಿಮೆಯಾಗುತ್ತದೆ ಇದರಿಂದಾಗಿ ಮಿದುಳಿನಲ್ಲಿ ಕೆಲವೊಮ್ಮೆ ರಕ್ತಸ್ರಾವವಾಗಿ ಸ್ಟ್ರೋಕ್‌ ಆಗುತ್ತದೆ.
3. ಹೃದಯ ಬಡಿತ: ಕೆಲವೊಮ್ಮೆ ವ್ಯಕ್ತಿಯು ಅತಿಯಾದ ಮದ್ಯಪಾನ ಮಾಡಿದಾಗ ಆತನ ಹೃದಯ ಬಡಿತ ಏರುಪೇರಾಗಲಾರಂಭಿಸುತ್ತದೆ. ಅನಂತರ ಆತನಿಗೆ ಎದೆ ನೋವು ಕಂಡುಬರುತ್ತದೆ, ಉಸಿರಾಡಲು ಕಷ್ಟವಾಗುತ್ತದೆ, ರಕ್ತದೊತ್ತಡದಲ್ಲಿ ಏರಿಳಿತವಾಗುತ್ತದೆ ಮತ್ತು ಹಾರ್ಟ್‌ ಅಟ್ಯಾಕ್‌ ಆಗಿ ವ್ಯಕ್ತಿ ಸಾಯುತ್ತಾನೆ.
4. ರಕ್ತದೊತ್ತಡ: ನಿಯಮಿತ ಮದ್ಯಪಾನದಿಂದ ರಕ್ತದೊತ್ತಡ ಹೆಚ್ಚಾಗಿ ಅದು ಹೆಚ್ಚಿನ ರಕ್ತದೊತ್ತಡದ ಕಾಯಿಲೆಯಾಗಿ ಮಾರ್ಪಾಟುಗೊಳ್ಳುತ್ತದೆ. ಇದರಿಂದಾಗಿ ಸ್ಟ್ರೋಕ್‌ ಅಥವಾ ಹಾರ್ಟ್‌ ಅಟ್ಯಾಕ್‌ ಕೂಡ ಆಗಬಹುದು.

ಶ್ವಾಸಕೋಶ
ಮದ್ಯಪಾನದಿಂದ ಶ್ವಾಸಕೋಶಗಳಿಗೆ ನೇರವಾಗಿ ಹಾನಿಯಾಗದೆ ದೇಹದಲ್ಲಾಗುವ ಇತರ ಬದಲಾವಣೆಗಳಿಂದ ಹಾನಿಯಾಗುವುದು.
– ಮದ್ಯವು ಶ್ವಾಸಕೋಶಗಳು ಸೋಂಕಿಗೀಡಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ, ನ್ಯುಮೋನಿಯಾ
ಶ್ವಾಸಕೋಶಗಳ ಕ್ಯಾನ್ಸರ್‌.

ಮದ್ಯ ಮತ್ತು
ಪ್ಯಾಂಕ್ರಿಯಾಸ್‌
(ಮೇದೋಜೀರಕ ಗ್ರಂಥಿ)
ನಮ್ಮ ಜಠರ ಮತ್ತು ಲಿವರಿನ ಹಿಂಭಾಗದಲ್ಲಿ ಪ್ಯಾಂಕ್ರಿಯಾಸ್‌ ಎನ್ನುವ ಗ್ರಂಥಿಯಿರುತ್ತದೆ. ಇದರ ಮುಖ್ಯ ಕೆಲಸವೇನೆಂದರೆ, ಇನ್ಸುಲಿನ್‌ ಉತ್ಪಾದಿಸಿ ದೇಹದ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿರಿಸುವುದು.

ಪ್ಯಾಂಕ್ರಿಯಾಸಿನಿಂದ ವಿಷಪೂರಿತ ಉತ್ಪನ್ನಗಳು ಹುಟ್ಟುವಂತೆ ಮದ್ಯವು ಇದರ ಕಾರ್ಯವೈಖರಿಯಲ್ಲಿ ಬದಲಾವಣೆಗಳನ್ನು ಉಂಟು ಮಾಡುತ್ತದೆ. ಈ ಉತ್ಪನ್ನಗಳಿಂದಾಗಿ ಸೋಂಕು ಉಂಟಾಗುತ್ತದೆ (ಪ್ಯಾಂಕ್ರಿಯಾಟೈಟಿಸ್‌). ಪ್ಯಾಂಕ್ರಿಯಾ ಟೈಟಿಸಿನಲ್ಲಿ ಎರಡು ವಿಧಗಳಿವೆ: ಅಕ್ಯೂಟ್‌ ಮತ್ತು ಕ್ರೋನಿಕ್‌.
1. ಅಕ್ಯೂಟ್‌ ಪ್ಯಾಂಕ್ರಿಯಾಟೈಟಿಸ್‌: ಇದು ಒಮ್ಮಿಂದೊಮ್ಮಿಗೆ ಹುಟ್ಟಿ ಕೊಳ್ಳುತ್ತದೆ ಹಾಗೂ ಕೆಲವು ದಿನಗಳಲ್ಲಿ ಕಡಿಮೆಯಾಗುತ್ತದೆ. ಹೊಟ್ಟೆ ನೋವು ಬರುವುದು (ಈ ನೋವು ಪಕ್ಕೆಲುಬುಗಳ ಹಿಂದೆ ಹಾಗೂ ಬೆನ್ನಿನ ಮಧ್ಯದಲ್ಲಿ ಕಂಡುಬರುವುದು), ಜ್ವರ ಬರುವುದು, ವಾಕರಿಕೆ ಬರುವುದು ಹಾಗೂ ವಾಂತಿಯಾಗುವುದು.
2. ಕ್ರೋನಿಕ್‌ ಪ್ಯಾಂಕ್ರಿಯಾಟೈಟಿಸ್‌: ಪ್ಯಾಂಕ್ರಿಯಾಸ್‌ ಸೋಂಕಿಗೊಳಗಾಗಿ ಈ ಸೋಂಕು ಹಾಗೆಯೇ ಉಳಿದುಕೊಂಡರೆ ಅದನ್ನು ಕ್ರೋನಿಕ್‌ ಪ್ಯಾಂಕ್ರಿಯಾಟೈಟಿಸ್‌ ಎನ್ನುವರು.
–  ಪದೇ ಪದೆ ಹೊಟ್ಟೆ ನೋವು ಬರುವುದು
– ತೂಕ ಕಡಿಮೆಯಾಗುವುದು
– ಜಿಡ್ಡಿನ, ತುಂಬಾ ಕೆಟ್ಟ ವಾಸನೆ ಬರುವ ಮಲ ಬರುವುದು
ಕ್ರೋನಿಕ್‌ ಪ್ಯಾಂಕ್ರಿಯಾಟೈಟಿಸಿನ ಚಿಕಿತ್ಸೆ ತುಂಬಾ ಕಷ್ಟಕರ. ಇದು ಕೆಲವೊಮ್ಮೆ ಪ್ರಾಣಾಂತಿಕವಾಗಿದ್ದು ಪ್ಯಾಂಕ್ರಿಯಾಸಿನ ಕ್ಯಾನ್ಸರಿಗೂ ಕೂಡ ಕಾರಣವಾಗುತ್ತದೆ. ಪ್ಯಾಂಕ್ರಿಯಾಸಿನ ಸೋಂಕಿಗೊಳಗಾದ ಶೇ.33ರಷ್ಟು ಜನ ಡಯಾಬಿಟೀಸ್‌ ಕಾಯಿಲೆಗೆ ತುತ್ತಾಗುತ್ತಾರೆ.

ಲಿವರ್‌
ವ್ಯಕ್ತಿ ಸೇವಿಸಿದ ಮದ್ಯದ ಹೆಚ್ಚಿನ ಪ್ರಮಾಣವನ್ನು ಲಿವರ್‌ ಪಚನಗೊಳಿಸಿ ಅದನ್ನು ದೇಹದಿಂದ ಹೊರಹಾಕಲು ಸಹಕರಿಸುತ್ತದೆ. ಲಿವರಿನ ತೊಂದರೆಯಿಂದ ಮರಣ ಹೊಂದುವ 5 ಜನರಲ್ಲಿ 4 ಜನ ಮದ್ಯಪಾನದಿಂದಾದ ಲಿವರಿನ ಹಾನಿಯಿಂದ ಮರಣವನ್ನಪ್ಪುತ್ತಾರೆ.

ಮದ್ಯದಿಂದಾಗುವ ಲಿವರಿನ ತೊಂದರೆಗಳನ್ನು ಈ ಕೆಳಗಿನಂತೆ ಅರ್ಥಮಾಡಿಕೊಳ್ಳಬಹುದು:
1. ಕೊಬ್ಬಿನಾಂಶದ ಲಿವರ್‌: ಲಿವರಿನ ತೊಂದರೆಗಳಲ್ಲಿ ಕಂಡುಬರುವ ಮೊತ್ತಮೊದಲಿನ ಮತ್ತು ಅತೀ ಸಾಮಾನ್ಯ ವಾಗಿ ಕಂಡುಬರುವ ತೊಂದರೆಯು ಫ್ಯಾಟಿ ಲಿವರ್‌. ಲಿವರಿನಲ್ಲಿ ಕೊಬ್ಬಿನಂಶ ಹೆಚ್ಚಿಗೆಯಾಗುತ್ತಾ ಹೋಗಿ ಅದು ಅಲ್ಲಿಯೇ ಶೇಖರಣೆಯಾಗುತ್ತಾ ಹೋಗುತ್ತದೆ. ಈ ಕೊಬ್ಬಿನಂಶದಿಂದಾಗಿ ಲಿವರ್‌ ಸಮರ್ಪಕವಾಗಿ ಕಾರ್ಯನಿರ್ವಹಿಸಲಿಕ್ಕಾಗುವುದಿಲ್ಲ.
2. ಲಿವರಿನ ಸೋಂಕು: ಫ್ಯಾಟಿ ಲಿವರಿನಿಂದ ಬಳಲುತ್ತಿರುವ ಶೇ. 33ರಷ್ಟು ವ್ಯಕ್ತಿಗಳಲ್ಲಿ ಅಲ್ಪ ಅಥವಾ ಮಧ್ಯಮ ಪ್ರಮಾಣದ ಲಿವರಿನ ಸೋಂಕು ಉಂಟಾಗುತ್ತದೆ. ಇದನ್ನು ಲಿವರಿನ ಸೋಂಕು ಎಂದು ಕರೆಯಲಾಗುತ್ತದೆ.
3. ಅಕ್ಯೂಟ್‌ ಅಲ್ಕೋಹಾಲಿಕ್‌ ಹೆಪಾಟೈಟಿಸ್‌: ಹೆಚ್ಚಿನ ಪ್ರಮಾಣದ ಗಂಭೀರವಾದ ಮತ್ತು ಪ್ರಾಣಾಪಾಯ ಕಾರಿಯಾದ ಸೋಂಕಿನಿಂದ ವ್ಯಕ್ತಿಯ ಹಸಿವು ಕಡಿಮೆಯಾಗುತ್ತದೆ, ಅನಾರೋಗ್ಯವೆನಿಸುತ್ತದೆ, ತುಂಬಾ ಹೊಟ್ಟೆ ನೋವು ಬರುತ್ತದೆ, ಕಾಮಾಲೆಯಾಗುತ್ತದೆ ಮತ್ತು ಲಿವರ್‌ ಫೈಲ್‌ ಆಗಿ ಸಾವು ಕೂಡ ಸಂಭವಿಸಬಹುದು. ಗಂಭೀರ ಪ್ರಮಾಣದ ಆಲ್ಕೋಹಾಲಿಕ್‌ ಹೆಪಾಟೈಟಿಸ್‌ನಿಂದ ಗುರುತಿಸಲ್ಪಟ್ಟ ಮೂವರಲ್ಲಿ ಒಬ್ಬ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದರೂ ಸಾವನ್ನಪ್ಪುತ್ತಾನೆ.
4. ಲಿವರ್‌ ಸಿರೋಸಿಸ್‌ : ಅತಿಯಾಗಿ ಮದ್ಯಪಾನ ಮಾಡುವ ಐದು ಜನರಲ್ಲಿ ಒಬ್ಬನಿಗೆ ಲಿವರ್‌ ಸಿರೋಸಿಸ್‌ ಆಗಿರುತ್ತದೆ. ಲಿವರ್‌ ಸರಿಯಾಗಿ ಕೆಲಸ ಮಾಡುವುದಿಲ್ಲ, ಅನಂತರ ಲಿವರ್‌ ಫೈಲ್‌ ಆಗಿ ವ್ಯಕ್ತಿ ಸಾವನ್ನಪ್ಪುತ್ತಾನೆ. ಕಂಡುಬರುವ ಲಕ್ಷಣಗಳೆಂದರೆ: ಸುಸ್ತೆನಿಸುವುದು, ಹಸಿವೆ ಕಡಿಮೆಯಾಗುವುದು, ಮೈಯೆಲ್ಲ ತುರಿಕೆ ಬರುವುದು, ಸ್ನಾಯುಗಳ ಸೆಳೆತ, ಹೊಟ್ಟೆ ದೊಡ್ಡದಾಗುವುದು, ರಕ್ತ ವಾಂತಿಯಾಗುವುದು. ನಿನ್ನೆಯವರೆಗೆ ಸರಿಯಾಗಿ ನಡೆದಾಡಿಕೊಂಡು, ಮಾತನಾಡಿಕೊಂಡಿರುವರು ಒಮ್ಮೆಲೇ ರಕ್ತವಾಂತಿ ಮಾಡಿಕೊಂಡು ಸಾವನ್ನಪ್ಪಿದ ಹಲವಾರು ನಿದರ್ಶನಗಳು ನಮ್ಮೆಲ್ಲರ ಸುತ್ತ ಕಾಣಬಹುದು.
5. ಲಿವರ್‌ ಫೈಲ್ಯೂರ್‌: ಲಕ್ಷಣಗಳು ಕಂಡುಬರುವ ಹೊತ್ತಿಗೆ ತುಂಬಾ ತಡವಾಗಿರುತ್ತದೆ ಹಾಗೂ ಇದು ವ್ಯಕ್ತಿಯ ಕೊನೆಯ ಹಂತವೆಂದೇ ಪರಿಗಣಿಸಬಹುದು.
ಇವುಗಳಲ್ಲದೆ, ಮದ್ಯಪಾನ ಮಾಡುವವರಲ್ಲಿ ಲಿವರಿನ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಕಳೆದ 2 ದಶಕಗಳಲ್ಲಿ 15ರಿಂದ 34 ವರ್ಷಗಳವರೆಗಿನ ಯುವಕರಲ್ಲಿ ಮದ್ಯಪಾನದಿಂದಾಗುವ ಲಿವರಿನ ತೊಂದರೆಗಳು ಎರಡುಪಟ್ಟು ಹೆಚ್ಚಾಗಿವೆ.

-ಮುಂದುವರಿಯುವುದು

ಡಾ| ರವೀಂದ್ರ ಮುನೋಳಿ,
ಸಹಾಯಕ ಪ್ರಾಧ್ಯಾಪಕ
ಮನೋರೋಗ ಚಿಕಿತ್ಸಾ ವಿಭಾಗ,
ಕೆ.ಎಂ.ಸಿ., ಮಣಿಪಾಲ


ಈ ವಿಭಾಗದಿಂದ ಇನ್ನಷ್ಟು

  • ಆತ್ಮಹತ್ಯೆಯ ಬಗ್ಗೆ ಹಲವಾರು ತಪ್ಪು ನಂಬಿಕೆಗಳು ಪ್ರಪಂಚಾದ್ಯಂತ ಪ್ರಚಲಿತವಾಗಿವೆ. ಇವು ಅಗತ್ಯವಿರುವ ವ್ಯಕ್ತಿಗೆ ಸಹಾಯ ಮಾಡಲು ಅಡ್ಡ ಬರುತ್ತವೆ. ಈ ತಪ್ಪು ನಂಬಿಕೆಗಳನ್ನು...

  • ಪ್ರತಿ ವರ್ಷ ನವೆಂಬರ್‌ 12ನ್ನು ಜಾಗತಿಕ ನ್ಯುಮೋನಿಯಾ ದಿನವನ್ನಾಗಿ ಆಚರಿಸಲಾಗುತ್ತದೆ. ನ್ಯುಮೋನಿಯಾ ಮತ್ತದರ ಲಕ್ಷಣಗಳು, ಚಿಕಿತ್ಸೆ ಹಾಗೂ ಅದರ ತಡೆ, ನಿಯಂತ್ರಣದ...

  • ಭಾರತದಲ್ಲಿ ಕಂಡುಬರುತ್ತಿರುವ ಕ್ಯಾನ್ಸರ್‌ ಪ್ರಕರಣಗಳಲ್ಲಿ ಸ್ತನದ ಕ್ಯಾನ್ಸರ್‌ ಮುಂಚೂಣಿಯಲ್ಲಿದೆ ಮತ್ತು ಮಹಿಳೆಯಲ್ಲಿ ಕಂಡು ಬರುವ ಕ್ಯಾನ್ಸರ್‌ಗಳಲ್ಲಿ...

  • ಮ್ಯಾಕ್ಸಿಲೊಫೇಶಿಯಲ್‌ ಪ್ರದೇಶದಲ್ಲಿ ಇದ್ದು, ದವಡೆಗಳನ್ನು ತೆರೆಯಲು ಮತ್ತು ಮುಚ್ಚಲು ಸಹಕರಿಸುವ ಸಂಧಿಯೇ ಟೆಂಪರೊಮಾಂಡಿಬ್ಯುಲಾರ್‌ ಸಂಧಿ. ಜೀವನಶೈಲಿ ಬದಲಾವಣೆ...

  • ಲೆಪ್ರೊಸ್ಪೈರೋಸಿಸ್‌(ಇಲಿ ಜ್ವರ) ಲೆಪ್ರೊಸ್ಪೈರಾ ಎಂಬ ಸುರುಳಿ ಆಕಾರದ ಸೂಕ್ಷ್ಮಾಣು ಜೀವಿಗಳಿಂದ ಬರುವ ಸಾಂಕ್ರಾಮಿಕ ರೋಗ. ಈ ರೋಗವು ವರ್ಷವಿಡೀ ಕಾಣಿಸಿಕೊಳ್ಳಬಹುದಾದರೂ...

ಹೊಸ ಸೇರ್ಪಡೆ