ಆತ್ಮಹತ್ಯೆ: ತಪ್ಪು ನಂಬಿಕೆಗಳು ಮತ್ತು ಅವುಗಳಿಗೆ ಉತ್ತರ


Team Udayavani, Dec 8, 2019, 4:53 AM IST

sd-60

ಆತ್ಮಹತ್ಯೆಯ ಬಗ್ಗೆ ಹಲವಾರು ತಪ್ಪು ನಂಬಿಕೆಗಳು ಪ್ರಪಂಚಾದ್ಯಂತ ಪ್ರಚಲಿತವಾಗಿವೆ. ಇವು ಅಗತ್ಯವಿರುವ ವ್ಯಕ್ತಿಗೆ ಸಹಾಯ ಮಾಡಲು ಅಡ್ಡ ಬರುತ್ತವೆ. ಈ ತಪ್ಪು ನಂಬಿಕೆಗಳನ್ನು ಸಮಾಜದಿಂದ ಅಳಿಸಿಹಾಕುವ ಮೂಲಕ ಸಹಾಯ ಮಾಡುವ ವ್ಯಕ್ತಿಗಳಿಗೆ ಸ್ಪಷ್ಟ ದಾರಿ ತಿಳಿಯುತ್ತದೆಯಲ್ಲದೇ ಸಹಾಯದ ಅಗತ್ಯವಿರುವವರನ್ನು ಬೇಗನೆ ಗುರುತಿಸಬಹುದು. ಸಾಮಾನ್ಯವಾಗಿ ಕಂಡುಬರುವ ತಪ್ಪುನಂಬಿಕೆಗಳನ್ನು ಮತ್ತು ಅವುಗಳ ಪರಾಮರ್ಶೆಯನ್ನು  ಇಲ್ಲಿ  ವಿವರಿಸಲಾಗಿದೆ.

1. ತಪ್ಪು: ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೇಳುವವರು ಬರೀ ಹೇಳುತ್ತಾರೆಯೇ ವಿನಾ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಅವರಿಗೆ ಕೇವಲ ಅವರ ಕಡೆಗೆ ನಮ್ಮ ಗಮನ ಬೇಕಾಗಿರುತ್ತದೆ.

ಸರಿ: ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೇಳುವವರು ಖಂಡಿತವಾಗಿಯೂ ಅದರ ಬಗ್ಗೆ ಗಂಭೀರವಾಗಿರುತ್ತಾರೆ ಮತ್ತು ಆತ್ಮಹತ್ಯೆ ಮಾಡಿಕೊಂಡ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಆತ್ಮಹತ್ಯೆಯ ಬಗ್ಗೆ ತಿಳಿಸಿರುತ್ತಾರೆ. ನೆನಪಿಡಿ: ಯಾವುದೇ ರೀತಿಯ ಆತ್ಮಹತ್ಯೆಯ ಹೇಳಿಕೆಗಳನ್ನು/ನಡವಳಿಕೆಗಳನ್ನು ಕ್ಷುಲ್ಲಕವೆಂದು ತಳ್ಳಿಹಾಕುವ ಹಾಗಿಲ್ಲ.

2. ತಪ್ಪು: ಆತ್ಮಹತ್ಯೆಯ ಬಗ್ಗೆ ಮಾತನಾಡುವುದರಿಂದ ಅಥವಾ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನಿಸುತ್ತದೆಯೇ ಎಂದು ಕೇಳುವುದರಿಂದ ವ್ಯಕ್ತಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೋತ್ಸಾಹಿಸಿದ ಹಾಗಾಗುತ್ತದೆ.

ಸರಿ: ಆತ್ಮಹತ್ಯೆಯ ಬಗ್ಗೆ ಮಾತಾಡುವುದರಿಂದ ಸಂವಾದಕ್ಕೆ ಒಂದು ಅವಕಾಶ ಮಾಡಿಕೊಟ್ಟ ಹಾಗಾಗುತ್ತದೆ. ಹಂಚಿಕೊಂಡಾಗ ಗೊಂದಲ, ಭಯ, ತವಕ ಕಡಿಮೆಯಾಗುತ್ತವೆ. ವ್ಯಕ್ತಿಯನ್ನು ಬದುಕಲು ಪ್ರೋತ್ಸಾಹಿಸಲು ಇರುವ ಮೊದಲ ಹಂತವೆಂದರೆ, ವ್ಯಕ್ತಿಯ ಜತೆ ಆತನ ಆತ್ಮಹತ್ಯೆಯ ಆಲೋಚನೆಗಳ ಬಗ್ಗೆ ಚರ್ಚಿಸುವುದು. ಮಾತುಕತೆ ಆರಂಭಿಸಲು ಸರಳವಾಗಿ ಕೇಳಬಹುದಾದ ಪ್ರಶ್ನೆಯೆಂದರೆ, ವ್ಯಕ್ತಿಯು ಬದುಕುವುದು ಬೇಡವೆಂದು ಆಲೋಚಿಸುತ್ತಿದ್ದಾನೆಯೇ?  ಆದರೆ ನೆನಪಿರಲಿ- ಈ ವಿಷಯದ ಬಗ್ಗೆ ಮಾತನಾಡುವಾಗ ಸಂವೇದನಶೀಲರಾಗಿರುವುದು ಅತ್ಯವಶ್ಯವಾಗಿದೆ.

3. ತಪ್ಪು: ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೇಳುವ ತರುಣರು/ ಯೌವನಾವಸ್ಥೆಯಲ್ಲಿರುವವರು ಎಂದೂ ಆತ್ಮಹತ್ಯೆಗೆ ಪ್ರಯತ್ನ ಮಾಡುವುದಿಲ್ಲ ಮತ್ತು ಮಾಡಿಕೊಂಡರೂ ಪೂರ್ಣ ಪ್ರಮಾಣದಲ್ಲಿ  ಪ್ರಯತ್ನ ಮಾಡುವುದಿಲ್ಲ.

ಸರಿ: ಆತ್ಮಹತ್ಯೆಯ ಬಗ್ಗೆ ಮಾತನಾಡುವ ವ್ಯಕ್ತಿಯ ಮಾತುಗಳು ಸಹಾಯ ಕೇಳುತ್ತಿರುವ ಮಾತುಗಳಾಗಿವೆಯೆಂದು ಅರ್ಥಮಾಡಿಕೊಳ್ಳಬೇಕು ಮತ್ತು ಇದು ಆತ್ಮಹತ್ಯೆಯ ಕಡೆಗೆ ಮುಂದುವರಿದ ಹಂತವಾಗಿರಬಹುದು. ಆತ್ಮಹತ್ಯೆಯ ಬಗ್ಗೆ ಮಾತನಾಡುವ ತರುಣರು/ ಯೌವನಾವಸ್ಥೆಯಲ್ಲಿರುವವರ ಜತೆ ಹೇಗೆ ಮುಂದುವರಿಯಬಹುದೆಂದರೆ:

ನಿರಾತಂಕವಾಗಿ ಮನಸ್ಸು ಬಿಚ್ಚಿ ಮಾತನಾಡಲು ಪ್ರೋತ್ಸಾಹಿಸಬೇಕು ಮತ್ತು ಸೂಕ್ತ ಮನೋವೈದ್ಯರನ್ನು ಅಥವಾ ಆಪ್ತ ಸಮಾಲೋಚಕರನ್ನು ಕಾಣಲು ಸಹಾಯ ಮಾಡಬೇಕು ಅಥವಾ ಕರೆದುಕೊಂಡು ಹೋಗಬೇಕು.

 ಆತ್ಮಹತ್ಯೆಯ ಬಗ್ಗೆ ಬರೀ ಆಲೋಚನೆಯಷ್ಟೇ ಇದೆಯಾ ಅಥವಾ ಮಾಡಿಕೊಳ್ಳುವ ಬಗ್ಗೆ ನಿರ್ಧಾರ ಮಾಡಿಯಾಗಿದೆಯಾ ಎಂದು ಕೇಳಿ ತಿಳಿದುಕೊಳ್ಳಬೇಕು.

 ಯಾವ ರೀತಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ಯೋಜನೆ/ಪ್ಲ್ಯಾನ್‌ ಏನಾದರೂ ಮಾಡಿಯಾಗಿದೆಯಾ ಎಂದು ಕೇಳಿ ತಿಳಿದುಕೊಳ್ಳಬೇಕು

 ಯೋಜನೆ/ಪ್ಲ್ಯಾನ್‌ ಬಗ್ಗೆ ಪೂರ್ತಿ ಮಾಹಿತಿ ಪಡೆದು ಅದು ಎಷ್ಟರ ಮಟ್ಟಕ್ಕೆ ಪರಿಪೂರ್ಣವಾಗಿದೆಯೆಂದು ಮತ್ತು ಪ್ರಾಣಾಂತಿಕವೆಂದು ವಿಶ್ಲೇಷಿಸಬೇಕು. ಇಲ್ಲಿ ನೆನಪಿಡಬೇಕಾದ ವಿಷಯವೆಂದರೆ: ಯಾವುದೇ ಯೋಜನೆಯನ್ನು ಅಲ್ಲಗಳೆಯುವ ಹಾಗಿಲ್ಲ ಮತ್ತು ಎಲ್ಲ ವಿಧಾನಗಳನ್ನು ಪ್ರಾಣಾಂತಿಕವೆಂದೇ ಪರಿಗಣಿಸಬೇಕು.

 ತರುಣರನ್ನು/ ಯೌವನಾವಸ್ಥೆಯಲ್ಲಿರುವವರನ್ನು ಒಂದು ರಕ್ಷಣಾತ್ಮಕ ಯೋಜನೆ/ಪ್ಲ್ಯಾನ್‌ ಕೂಡ ಮಾಡಿಕೊಳ್ಳಲು ತಿಳಿಸಬೇಕು ಮತ್ತು ಸಹಾಯ ಮಾಡಬೇಕು. ಉದಾ: ಇತರರ ಜತೆಗೆ ಫ‌ಲವತ್ತಾಗಿ ಸಮಯ ಕಳೆಯುವುದು, ಆಪ್ತರೊಟ್ಟಿಗೆ ಬೆರೆಯುವುದು, ಹಿರಿಯರೊಟ್ಟಿಗೆ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸುವುದು, ಭವಿಷ್ಯದ ಬಗ್ಗೆ ಲಭ್ಯವಿರುವ ಅವಕಾಶಗಳ ಬಗ್ಗೆ ಚರ್ಚಿಸುವುದು ಇತ್ಯಾದಿ.

4. ತಪ್ಪು: ಆತ್ಮಹತ್ಯೆ ನಡವಳಿಕೆಯಿರುವ ವ್ಯಕ್ತಿಯು ಗೌಪ್ಯವಾಗಿಡಲು ಹೇಳಿದ ಪತ್ರವನ್ನು ತೆರೆಯಬಾರದು ಮತ್ತು ಓದಬಾರದು.

ಸರಿ: ಯಾವಾಗ ವ್ಯಕ್ತಿಯೊಬ್ಬ ಆತ್ಮಹತ್ಯೆಯ ಬಗ್ಗೆ ಹೇಳಿದಾಗ ಅಥವಾ ಪ್ರಯತ್ನ ಮಾಡಿದಾಗ ಅದನ್ನು ಗೌಪ್ಯವಾಗಿಡುವ ಆವಶ್ಯಕತೆಯಿಲ್ಲ. ಯಾಕೆಂದರೆ ಗೌಪ್ಯವಾಗಿಡಲು ಮಾಡಿದ ಪ್ರಮಾಣಕ್ಕಿಂತ ವ್ಯಕ್ತಿಯ ಜೀವ ಅತ್ಯಮೂಲ್ಯವಾದದ್ದು. ಮೊದಲಿಗೆ ಆತ್ಮಹತ್ಯೆ ಮಾಡಲು ಆಲೋಚಿಸಿದ್ದ ವ್ಯಕ್ತಿ ಗೌಪ್ಯತೆ ಕಾಯ್ದುಕೊಳ್ಳದಿರುವ ಬಗ್ಗೆ ಮುನಿಸಿಕೊಳ್ಳಬಹುದು. ಆದರೆ ಇವೆಲ್ಲವುಗಳಿಂದ ಹೊರಬಂದಾಗ ಅದೇ ವ್ಯಕ್ತಿ ಪ್ರಮಾಣ ಮುರಿದು ಜೀವ ಉಳಿಸಿದ್ದಕ್ಕಾಗಿ ಚಿರಋಣಿಯಾಗಿರಬಹುದು. ನೆನಪಿಡಿ: ಸೀಲ್‌ ಮಾಡಿ ತೆಗೆಯಲೇಬಾರದೆಂದು ಯಾರಾದರೂ ಲಕೋಟೆ ನೀಡಿದರೆ, ಏನೋ ಗಂಭೀರ ಅನಾಹುತವಾಗಲಿದೆಯೆಂದು ಶಂಕಿಸಬೇಕು.

5. ತಪ್ಪು: ಆತ್ಮಹತ್ಯೆಯ ಪ್ರಯತ್ನಗಳು ಮತ್ತು ಆತ್ಮಹತ್ಯೆಯಿಂದ ಸಾವುಗಳು ಯಾವುದೇ ಮುನ್ಸೂಚನೆ ಯಿಲ್ಲದೆ ಆಗುತ್ತವೆ.

ಸರಿ: ಆತ್ಮಹತ್ಯೆ ಮಾಡಿಕೊಂಡವರ ಕುಟುಂಬದವರು/ಆಪ್ತರು/ಸ್ನೇಹಿತರು ಸಾಮಾನ್ಯವಾಗಿ ಹೇಳುವುದೇನೆಂದರೆ: ಆತ/ಅವಳು ಆತ್ಮಹತ್ಯೆಯ ಇರಾದೆಯನ್ನು ನಮ್ಮಿಂದ ಮುಚ್ಚಿಟ್ಟ/ಮುಚ್ಚಿಟ್ಟಳು ಎಂದು. ಆದರೆ ಹೆಚ್ಚಾಗಿ ಆಗಿರುವುದೇನೆಂದರೆ,

ಅವರ ಇರಾದೆಯನ್ನು ಗುರುತಿಸಲು ಸಾಧ್ಯವಾಗದಿರುವುದು. ಸಾಮಾನ್ಯವಾಗಿ ಕಂಡುಬರುವ ಮುನ್ಸೂಚನೆಗಳೆಂದರೆ:

 ಇತ್ತೀಚಿನ ದಿನಗಳಲ್ಲಿ ಆಪ್ತರ/ಸ್ನೇಹಿತರ ಆತ್ಮಹತ್ಯೆ ಅಥವಾ ಸಾವು

 ಹಿಂದೆ ಆತ್ಮಹತ್ಯೆಯ ಪ್ರಯತ್ನ ಮಾಡಿರುವುದು

 ಸಾವಿನ ವಿಷಯಗಳಲ್ಲಿ ತಲ್ಲೀನನಾಗಿರುವುದು ಅಥವಾ ಆತ್ಮಹತ್ಯೆಯ ಆಲೋಚನೆಗಳನ್ನು ವ್ಯಕ್ತಪಡಿಸಿರುವುದು.

 ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವುದು. ಉದಾ: ಖನ್ನತೆ, ಮದ್ಯ ಮತ್ತಿತರ ಮಾದಕ ವಸ್ತುಗಳ ಅವಲಂಬನೆ ಇತ್ಯಾದಿ.

 ತನ್ನ ಅತ್ಯಂತ ಅಚ್ಚುಮೆಚ್ಚಿನ ವಸ್ತುವನ್ನು ಇತರರಿಗೆ ನೀಡುವುದು, ಅಕಾಲಿಕವಾಗಿ ವಿಲ್‌ ಮಾಡುವುದು ಅಥವಾ ಕೊನೆಯ ಹಂತದ ಎಲ್ಲ ವ್ಯವಸ್ಥೆಗಳಲ್ಲಿ ತೊಡಗಿರುವುದು.

 ನಿದ್ರೆಯಲ್ಲಿ ಗಮನಾರ್ಹವಾದ ಬದಲಾವಣೆಗಳು: ಅತಿಯಾದ ನಿದ್ರೆ ಅಥವಾ ತುಂಬಾ ಕಡಿಮೆ ನಿದ್ರೆ.

 ಕಡಿಮೆ ಅವಧಿಯಲ್ಲಿ, ತೀವ್ರಗತಿಯಲ್ಲಿ ಆಹಾರ ಸೇವನೆಯಲ್ಲಿ ಬದಲಾವಣೆ/ ತೂಕ ಕಡಿಮೆಯಾಗುವುದು ಅಥವಾ ಹೆಚ್ಚಾಗುವುದು.

 ಸ್ನೇಹಿತರ/ಕುಟುಂಬದವರ ಜತೆಗೆ ಬೆರೆಯುವುದನ್ನು ನಿಲ್ಲಿಸುವುದು ಅಥವಾ ನಡವಳಿಕೆಯಲ್ಲಿ ಗಮನಾರ್ಹವಾದ ಬದಲಾವಣೆಗಳು ಕಂಡುಬರುವುದು.

 ತನ್ನ ನಿಯಮಿತವಾದ ಗುಂಪಿನ ಚಟುವಟಿಕೆಗಳಿಂದ ಕಾರಣವಿರದೆ ಹೊರಬರುವುದು.

 ವಿನಾಕಾರಣ ವ್ಯಕ್ತಿತ್ವದಲ್ಲಿ/ನಡವಳಿಕೆಯಲ್ಲಿ ಬದಲಾವಣೆಗಳು: ಯಾವಾಗಲೂ ಅಥವಾ ಹೆಚ್ಚಾಗಿ ಚಡಪಡಿಸುತ್ತಿರುವುದು, ಗಾಬರಿಯಾಗಿರುವುದು, ದುಡುಕುವುದು, ತಾಳ್ಮೆ ಕಡಿಮೆಯಾಗುವುದು, ಮುಂಗೋಪಿಯಾಗುವುದು, ತನ್ನ ತೋರಿಕೆಯಲ್ಲಿ/ಶೃಂಗಾರದಲ್ಲಿ/ಆರೋಗ್ಯದ ವಿಷಯದಲ್ಲಿ ನಿರಾಸಕ್ತನಾಗುವುದು ಅಥವಾ ಭಾವಶೂನ್ಯನಾಗುವುದು.

 ಪದೇಪದೇ ರೇಗುವುದು ಅಥವಾ ಕಾರಣವಿಲ್ಲದೆ ಅಳುವುದು.

 ತಾನು ನಿಷ್ಪ್ರಯೋಜಕ ಅಥವಾ ಸೋತ ವ್ಯಕ್ತಿಯೆಂದು ವ್ಯಕ್ತಪಡಿಸುತ್ತಿರುವುದು.

 ಭವಿಷ್ಯದಲ್ಲಿ ನಿರಾಸಕ್ತನಾಗಿರುವುದು.

 ಸ್ವಲ್ಪ ಸಮಯದಿಂದ ಜೀವನದಲ್ಲಿ ನಿರಾಸಕ್ತನಾಗಿದ್ದು, ಒಮ್ಮಿಂದೊಮ್ಮೆ ಉತ್ಸಾಹಿಯಾಗಿ ತೋರಿಸಿಕೊಳ್ಳುವುದು ಆತ್ಮಹತ್ಯೆಗೆ ನಿರ್ಧಾರ

ಮಾಡಿ ಆಗಿದೆಯೆನ್ನುವುದನ್ನು ತಿಳಿಸುತ್ತದೆ.

6. ತಪ್ಪು: ಒಮ್ಮೆ ಆತ್ಮಹತ್ಯೆಯ ಪ್ರಯತ್ನ ಮಾಡಿ ವ್ಯಕ್ತಿ ಬದುಕುಳಿದರೆ ಆತ ಮುಂದೆಂದೂ ಆತ್ಮಹತ್ಯೆಯ ಪ್ರಯತ್ನ ಮಾಡುವುದಿಲ್ಲ.

ಸರಿ: ಆತ್ಮಹತ್ಯೆಯ ಒಂದು ಪ್ರಯತ್ನ ಭವಿಷ್ಯದಲ್ಲಿ ಮತ್ತೆ ಆ ತರಹ ಮಾಡಿಕೊಳ್ಳಬಹುದೆನ್ನುವುದರ ಸೂಚಕವಾಗಿದೆ. ಅನಂತರದ ಪ್ರತೀ ಪ್ರಯತ್ನದ ಜತೆ ಆತ್ಮಹತ್ಯೆಯ ತೀವ್ರತೆಯ/ಘಾತಕದ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ.

7. ತಪ್ಪು: ಕೇವಲ ಕೆಲವು ತರಹದ ವ್ಯಕ್ತಿಗಳು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಸರಿ: ಎಲ್ಲರಲ್ಲೂ ಆತ್ಮಹತ್ಯೆಯ ಸಾಧ್ಯತೆಯಿರುತ್ತದೆ. ಲಭ್ಯ ಸಂಶೋಧನೆಗಳ/ಮಾಹಿತಿಗಳ ಪ್ರಕಾರ ಇದು ಯಾರಲ್ಲೂ ಕಂಡುಬರಬಹುದು. ಆದರೆ ಕೆಲವು ಸನ್ನಿವೇಶಗಳು/ಕಾಯಿಲೆಗಳು/ವ್ಯಕ್ತಿತ್ವ ದೋಶಗಳು ಇರುವವರಲ್ಲಿ ಇದರ ಸಾಧ್ಯತೆ ಹೆಚ್ಚಾಗಿರುತ್ತದೆ.

8. ತಪ್ಪು: ಆತ್ಮಹತ್ಯೆ ಒಂದು ನೋವಿರದಂತಹ ಅನುಭವ.

ಸರಿ: ಆತ್ಮಹತ್ಯೆಯ ಹೆಚ್ಚಿನ ವಿಧಾನಗಳು ಅತ್ಯಂತ ನೋವುಂಟುಮಾಡುತ್ತವೆ. ಕಾಲ್ಪನಿಕ ಚಿತ್ರಣಗಳು/ವಿವರಣೆಗಳು ಆತ್ಮಹತ್ಯೆಯ ನಿಜವಾದ ನೋವನ್ನು ಬಿಂಬಿಸುವುದಿಲ್ಲ.

9. ತಪ್ಪು: ಖನ್ನತೆ ಮತ್ತು ಸ್ವಂತ ಹಾನಿ ಮಾಡಿಕೊಳ್ಳುವಂತಹ ನಡವಳಿಕೆಗಳು ಯುವಜನತೆಯಲ್ಲಿ ವಿರಳವಾಗಿವೆ.

ಸರಿ: ಎರಡು ನಡವಳಿಕೆಗಳು ತರುಣರಲ್ಲಿ/ಯುವಜನತೆಯಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಖನ್ನತೆಯು ವಯಸ್ಕರಲ್ಲಿ ಕಂಡುಬರುವ ರೀತಿಯಲ್ಲಿ ಕಂಡುಬರದೆ ಮಕ್ಕಳಲ್ಲಿ/ಯುವಜನತೆಯಲ್ಲಿ ವಿಭಿನ್ನ ರೀತಿಯ ಲಕ್ಷಣಗಳ ಮೂಲಕ ಕಂಡುಬರುತ್ತದೆ.

10. ತಪ್ಪು: ಆತ್ಮಹತ್ಯೆಯ ಆಲೋಚನೆಯಿರುವ ಎಲ್ಲ ಯುವಜನತೆ ಖನ್ನತೆಯಿಂದ ಬಳಲುತ್ತಿರುತ್ತಾರೆ.

ಸರಿ: ಖನ್ನತೆ ಕಾಯಿಲೆ ಸಾಮಾನ್ಯವಾಗಿ ಕಂಡುಬಂದರೂ ಹಲವರಲ್ಲಿ ಕಾಯಿಲೆ ಇರದಿದ್ದರೂ ಆತ್ಮಹತ್ಯೆಯ ಬಗ್ಗೆ ಆಲೋಚಿಸಿದ್ದಾರೆ, ಪ್ರಯತ್ನಿಸಿದ್ದಾರೆ ಮತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

11. ತಪ್ಪು: ಆತ್ಮಹತ್ಯೆಯ ಬಿಕ್ಕಟ್ಟಿನ/ಖನ್ನತೆಯ ಅನಂತರ ಗಮನಾರ್ಹ ಮತ್ತು ಕ್ಷಿಪ್ರಗತಿಯಲ್ಲಿ ಮಾನಸಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುವುದು ಸೂಚಿಸುವುದೇನೆಂದರೆ, ಆತ್ಮಹತ್ಯೆಯ ಅಪಾಯ ಮುಗಿಯಿತು.

ಸರಿ: ಇದರ ತದ್ವಿರುದ್ಧವಾಗಿರುವುದು ನಿಜವಾಗಿದೆ. ಆತ್ಮಹತ್ಯೆಯ ಪ್ರಯತ್ನದ ಮೊದಲ ಮೂರು ತಿಂಗಳುಗಳಲ್ಲಿ ಪುನಃ ಪ್ರಯತ್ನ ಮಾಡಿ ಸಾಯುವ ಸಾಧ್ಯತೆಗಳು ಅತಿ ಹೆಚ್ಚಾಗಿವೆ. ತೋರುವ ಸುಧಾರಣೆಯ ಅರ್ಥವೆಂದರೆ, ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡು ಸಾಯುವ ದ‌ೃಢ ನಿರ್ಧಾರ ಮಾಡಿಯಾಗಿದೆ ಮತ್ತು ಈ ನಿರ್ಧಾರದಿಂದ ವ್ಯಕ್ತಿಗೆ ಸಮಾಧಾನವೆನಿಸಿದೆ.

12. ತಪ್ಪು: ಯುವಜನತೆ ಒಮ್ಮೆ ಆತ್ಮಹತ್ಯೆಯ ಬಗ್ಗೆ ಆಲೋಚಿಸಿದರೆ ಅವರು ಜೀವನವಿಡೀ ಆತ್ಮಹತ್ಯೆಯ ಬಗ್ಗೆಯೇ ಆಲೋಚಿಸುತ್ತಾರೆ.

ಸರಿ: ಹೆಚ್ಚಿನ ಯುವಜನತೆ ಆತ್ಮಹತ್ಯೆಯ ಆಲೋಚನೆಯನ್ನು ಆ ಬಿಕ್ಕಟ್ಟಿನ ಸಮಯದಲ್ಲಿ ಆ ವಯಸ್ಸಿನಲ್ಲಿ ಇದೊಂದೇ ಉಳಿದಿರುವ ದಾರಿಯೆಂದು ಹೊಂದಿರುತ್ತಾರೆ. ಸೂಕ್ತ ಬೆಂಬಲ, ಸಹಾಯ, ಮಾರ್ಗದರ್ಶನ, ಆಪ್ತಸಮಾಲೋಚನೆ, ಚಿಕಿತ್ಸೆಯಿಂದಾಗಿ ಅವರು ಅರ್ಥಪೂರ್ಣ ಮತ್ತು ಸಂತಸದ ಜೀವನವನ್ನು ಯಾವುದೇ ಆತ್ಮಹತ್ಯೆಯ ಚಿಂತೆಯಿಲ್ಲದೆ ಕಳೆಯಬಹುದು.

13. ತಪ್ಪು: ಆತ್ಮಹತ್ಯೆಯ ಬಗ್ಗೆ ಆಲೋಚನೆ ಮಾಡುವ ಯುವಜನತೆ ತಮ್ಮನ್ನು ತಾವು ಸಹಾಯ ಮಾಡಿಕೊಳ್ಳಲಾಗುವುದಿಲ್ಲ.

ಸರಿ: ಆತ್ಮಹತ್ಯೆಯ ಬಗ್ಗೆ ಆಲೋಚಿಸುತ್ತಿರುವಾಗ ಯುವಜನತೆಗೆ ತಮ್ಮ ಜೀವನದ ನೈಜ ಪರಿಸ್ಥಿತಿಯ ಬಗ್ಗೆ ಮತ್ತು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಸ್ಪಷ್ಟ ಅನುಭವವಿರುವುದಿಲ್ಲ. ಆದರೆ ಅವರ ಜತೆಗಿರುವ ಆತ್ಮೀಯರಿಂದ ಸೂಕ್ತ ಬೆಂಬಲ ಮತ್ತು ರಚನಾತ್ಮಕ ಸಹಾಯ ದೊರೆತಾಗ ತಮ್ಮ ಜೀವನದ ಬಗ್ಗೆ ಸ್ಪಷ್ಟ ಚಿತ್ರಣ ದೊರೆತು ಸ್ವಂತ ಗುರಿಯನ್ನು ನಿರ್ಧರಿಸಿಕೊಂಡು ತಮ್ಮ ಜೀವನವನ್ನು ತಾವೇ ನಿರ್ವಹಿಸಬಲ್ಲರು.

14. ತಪ್ಪು: ಆತ್ಮಹತ್ಯೆಗೆ ಅತ್ಯಂತ ಪರಿಣಾಮಕಾರಿಯಾದ ಚಿಕಿತ್ಸೆ ಕೇವಲ ತುಂಬಾ ವರ್ಷಗಳಿಂದ ಈ ಕ್ಷೇತ್ರದಲ್ಲಿ ಅನುಭವವಿರುವ ಮನೋಚಿಕಿತ್ಸಕರಿಂದ ಮಾತ್ರ ಸಾಧ್ಯವಾಗಿದೆ.

ಸರಿ: ಬಿಕ್ಕಟಿನಲ್ಲಿರುವ ತರುಣರ ಮತ್ತು ಯುವಕರ ಜತೆ ಸಂವಾದಿಸುವ ಎಲ್ಲ ಜನರು ಭಾವನಾತ್ಮಕವಾಗಿ ಬೆಂಬಲ ನೀಡುವುದರ ಮತ್ತು ಪ್ರೋತ್ಸಾಹಿಸುವುದರ ಮೂಲಕ ಬಿಕ್ಕಟಿನ ಸನ್ನಿವೇಶದಲ್ಲಿ ಸಹಾಯ ಮಾಡಬಹುದು. ಆಪ್ತಸಮಾಲೋಚನೆ ಮತ್ತಿತರ ಚಿಕಿತ್ಸಾ ವಿಧಾನಗಳು ಕೂಡ ವ್ಯಕ್ತಿಯ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ನೀಡುವ ಬೆಂಬಲ ಮತ್ತು ಸಹಕಾರದ ಮೇಲೆ ನಿರ್ಭರವಾಗಿರುತ್ತದೆ. ಹಾಗಾಗಿ ಇದೊಂದು ತಂಡದ ಪ್ರಯತ್ನ ಎಂದು ಹೇಳಬಹುದು.

15. ತಪ್ಪು: ಆತ್ಮಹತ್ಯೆಯ ಬಗ್ಗೆ ಆಲೋಚಿಸುತ್ತಿರುವ ಹೆಚ್ಚಿನ ಯುವಜನತೆ ತಮ್ಮ ಸಮಸ್ಯೆಗಳಿಗೆ ಎಂದೂ ಸಹಾಯ ಪಡೆಯುವುದಿಲ್ಲ.

ಸರಿ: ಸಂಶೋಧನೆಗಳಿಂದ ತಿಳಿದುಬಂದಿರುವುದೆಂದರೆ: ಹೆಚ್ಚಿನವರು ತಮ್ಮ ಆತ್ಮಹತ್ಯೆಯ ಆಲೋಚನೆಗಳ ಮತ್ತು ಯೋಜನೆಗಳ ಬಗ್ಗೆ ತಮ್ಮ ಸಹಪಾಠಿಗಳ ಹತ್ತಿರ ಹೇಳಿರುತ್ತಾರೆ. ಹೆಚ್ಚಿನ ವಯಸ್ಕರು ಈ ರೀತಿಯ ಆಲೋಚನೆಗಳಿದ್ದಾಗ ಸಾವಿನ ಮುಂಚಿನ ಮೂರು ತಿಂಗಳಿನಲ್ಲಿ ವೈದ್ಯರ ಹತ್ತಿರ ಇದರ ಬಗ್ಗೆ ಹೇಳಿರುತ್ತಾರೆ. ತರುಣರು ಮತ್ತು ಯುವಜನತೆ ಶಬ್ದಗಳ ಮೂಲಕ ಹೇಳಿ ಸಹಾಯ ಪಡೆಯುವುದಕ್ಕಿಂತ ತಮ್ಮ ಹಾವ-ಭಾವ ಮತ್ತು ನಡವಳಿಕೆಗಳಿಂದ ಇತರರಲ್ಲಿ ಸಹಾಯ ಕೋರಿರುತ್ತಾರೆ.

16. ತಪ್ಪು: ಆತ್ಮಹತ್ಯೆಯ ಬಗ್ಗೆ ಆಲೋಚಿಸುತ್ತಿರುವ ಯುವಜನತೆ ಇದರಲ್ಲಿ ಹಸ್ತಕ್ಷೇಪ ಮಾಡುವವರ ಮೇಲೆ ಯಾವಾಗಲೂ ಸಿಟ್ಟಿನಲ್ಲಿರುತ್ತಾರೆ ಮತ್ತು ಆ ವ್ಯಕ್ತಿಯ ಮೇಲೆ ಅನಂತರ ಮುನಿಸುಕೊಂಡಿರುತ್ತಾರೆ.

ಸರಿ: ಮೊದಲಿಗೆ ಸಹಾಯ ಮಾಡಲು ಅಥವಾ ಆತ್ಮಹತ್ಯೆಯ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಹೋದಾಗ ಯುವಜನತೆ ಅದನ್ನು ನಿರಾಕರಿಸುವುದು ಅಥವಾ ಏನೂ ಚರ್ಚಿಸದಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಈ ನಿರಾಕರಣೆ ಮತ್ತು ಚರ್ಚಿಸದಿರುವುದು ತನ್ನ ಬಗ್ಗೆ ಇತರರರಿಗೆ ಎಷ್ಟು ಕಾಳಜಿಯಿದೆ ಮತ್ತು ತನ್ನನ್ನು ಎಷ್ಟರ ಮಟ್ಟಿಗೆ ಸಹಾಯ ಮಾಡಲು ಮನಸ್ಸಿದೆ ಎನ್ನುವುದನ್ನು ಅರ್ಥೈಸಿಕೊಳ್ಳುವ ತಡೆಗೋಡೆಗಳಾಗಿವೆ. ಆತ್ಮಹತ್ಯೆಯ ಬಗ್ಗೆ ಆಲೋಚಿಸುವ ಹೆಚ್ಚಿನ ಯುವಜನತೆಗೆ ತನ್ನ ಬಗ್ಗೆ ನಿಜವಾಗಿಯೂ ಇತರರಿಗೆ ಕಾಳಜಿಯಿದೆಯೆಂದು ತಿಳಿದು ಮನಸ್ಸಿಗೆ ಸಮಾಧಾನವಾಗಿ ಅವರ ಜತೆ ವಿಷಯ ಹಂಚಿಕೊಳ್ಳುತ್ತಾರೆ. ಇವೆಲ್ಲವುಗಳಿಂದ ಹೊರಬಂದಾಗ ಕೇಳಿದರೆ ಅವರು ಹಸ್ತಕ್ಷೇಪ ಮಾಡಿದ ವ್ಯಕ್ತಿಗೆ ತಾನು ಚಿರಋಣಿ ಎಂದು ಹೇಳುತ್ತಾರೆ.

17. ತಪ್ಪು: ಸಂಬಂಧಗಳು ಮುರಿದುಹೋಗುವುದು (ಬ್ರೇಕ್‌ ಅಪ್‌) ಸಾಮಾನ್ಯವಾಗಿ ಪದೇಪದೇ ಆಗುತ್ತಿರುತ್ತವೆ, ಅವುಗಳು ಆತ್ಮಹತ್ಯೆಗೆ ಕಾರಣವಾಗುವುದಿಲ್ಲ.

ಸರಿ: ಸಂಬಂಧಗಳು ಮುರಿದುಹೋಗುವುದು (ಬ್ರೇಕ್‌ ಅಪ್‌ ಆಗುವುದು) ಆತ್ಮಹತ್ಯೆಗೆ ಕಾರಣವಾಗಬಹುದು.

18. ತಪ್ಪು: ಆತ್ಮಹತ್ಯೆಯ ಬಗ್ಗೆ ಆಲೋಚಿಸುವ ಯುವಜನತೆ ಮತಿಭ್ರಮೆಯಾದವರು ಅಥವಾ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರು.

ಸರಿ: ಆತ್ಮಹತ್ಯೆಯ ಬಗ್ಗೆ ಆಲೋಚಿಸುತ್ತಿರುವ ಯುವಜನತೆ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರಬಹುದು ಆದರೆ ಅವರನ್ನು ಕಾನೂನಿನ ಪ್ರಕಾರ ಮತಿಭ್ರಮೆಯಾದವರಲ್ಲ. ಹಲವರಿಗೆ ಯಾವುದೇ ಮಾನಸಿಕ ಸಮಸ್ಯೆಯೂ ಇರುವುದಿಲ್ಲ.

19. ತಪ್ಪು: ಶ್ರೀಮಂತರ ಮನೆಯ ಯುವಜನತೆಯಲ್ಲಿ ಆತ್ಮಹತ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ.

ಸರಿ: ಆತ್ಮಹತ್ಯೆಯ ನಡವಳಿಕೆಗಳು ಯಾವುದೇ ಹಣಕಾಸಿನ ಪರಿಸ್ಥಿತಿಯ ಎಲ್ಲೆಯಿರದೆ ಎಲ್ಲ ವರ್ಗಗಳಲ್ಲೂ ಕಂಡುಬರುತ್ತವೆ.

20. ತಪ್ಪು: ಕೆಲವರು ಯಾವಾಗಲೂ ಆತ್ಮಹತ್ಯೆ ಮಾಡಿಕೊಳ್ಳುವಂತಹವರೇ.

ಸರಿ: ಯಾವ ವ್ಯಕ್ತಿಯೂ ಯಾವಾಗಲೂ ಆತ್ಮಹತ್ಯೆ ಮಾಡಿಕೊಳ್ಳುವಂತಹವರಲ್ಲ. ಯಾವುದೇ ವ್ಯಕ್ತಿಯಲ್ಲಿ ಆತ್ಮಹತ್ಯೆಯ ಸಾಧ್ಯತೆ ಸಮಯಕ್ಕೆ ಹಾಗೂ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತದೆ. ಹಾಗಾಗಿ ಈ ತರಹದ ಲಕ್ಷಣಗಳಿರುವ ವ್ಯಕ್ತಿಗಳ ನಿಯಮಿತ ಪರಿಶೀಲನೆ ಅತ್ಯಗತ್ಯವಾಗಿರುತ್ತದೆ.

21. ತಪ್ಪು: ಎಲ್ಲ ಆತ್ಮಹತ್ಯೆಗಳನ್ನು ಶತಪ್ರತಿಶತ ತಡೆಗಟ್ಟಬಹುದು.

ಸರಿ: ಎಷ್ಟೇ ಮುಂಜಾಗ್ರತೆ ವಹಿಸಿದರೂ, ಪ್ರಯತ್ನಿಸಿದರೂ ಕೆಲವೊಮ್ಮೆ ಆತ್ಮಹತ್ಯೆಯನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ. ಇದರರ್ಥ ತಡೆಗಟ್ಟಲು ಪ್ರಯತ್ನಿಸಬಾರದೆಂದಲ್ಲ. ಇದರರರ್ಥವೆಂದರೆ: ಈ ಆತ್ಮಹತ್ಯೆಯ ಪ್ರಯತ್ನದ ಅಥವಾ ಸಾವಿನ ಹೊಣೆಯನ್ನು ಕುಟುಂಬದವರು ತನ್ನದೇ ತಪ್ಪೆಂದು ಅಥವಾ ತಾನು ಮಾಡಿದ್ದ ಪ್ರಯತ್ನ ಸಾಕಾಗಲಿಲ್ಲವೇನೋ ಎಂದು ಪಶ್ಚಾತ್ತಾಪ ಪಡುವುದು ಬೇಡ.

ಇದೇ ರೀತಿ ಹಲವಾರು ತಪ್ಪು ನಂಬಿಕೆಗಳು ಸಮಾಜದಲ್ಲಿ ಪ್ರಚಲಿತವಾಗಿವೆ. ಇವುಗಳ ಬಗ್ಗೆಯಿರುವ ತಪ್ಪು ನಂಬಿಕೆಗಳನ್ನು ಅಳಿಸಿ

ನೈಜ ಮಾಹಿತಿಯನ್ನು ತಿಳಿದುಕೊಂಡು ಇತರರಿಗೂ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ತಪ್ಪು: ಒಬ್ಬ ವ್ಯಕ್ತಿ ಸಾಯಲು ನಿರ್ಧರಿಸಿದರೆ, ಅದನು ವೈಯಕ್ತಿಕ ನಿರ್ಧಾರ, ಅದರಲ್ಲಿ ಹಸ್ತಕ್ಷೇಪ ಮಾಡಬಾರದು.

ಸರಿ: ಜ್ವರ ಬಂದಾಗ, ಗಾಯವಾದಾಗ ಇತ್ಯಾದಿ ದೈಹಿಕ ಸಮಸ್ಯೆಗಳಿ¨ªಾಗ ಹೇಗೆ ಸಹಾಯ ಮಾಡಲು ಮುಂದಾಗುತ್ತೇವೆಯೋ ಅದೇ ರೀತಿ ಇದು ಕಂಡುಬಂದಾಗ ಸಹಾಯಕ್ಕೆ ಮುಂದಾಗುವ ಆವಶ್ಯಕತೆಯಿರುತ್ತದೆ.

ಡಾ| ರವೀಂದ್ರ ಮುನೋಳಿ, ಸಹ ಪ್ರಾಧ್ಯಾಪಕರು, ಮನೋರೋಗ ಚಿಕಿತ್ಸಾ ವಿಭಾಗ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

ಟಾಪ್ ನ್ಯೂಸ್

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.