Udayavni Special

ಕ್ರಿಕೆಟ್‌ನಿಂದ ಹತ್ತು ಮಾನಸಿಕ ಆರೋಗ್ಯ ಪಾಠಗಳು


Team Udayavani, Jan 24, 2021, 6:50 AM IST

ಕ್ರಿಕೆಟ್‌ನಿಂದ ಹತ್ತು ಮಾನಸಿಕ ಆರೋಗ್ಯ ಪಾಠಗಳು

ನಮಗೆಲ್ಲ ತಿಳಿದಿರುವಂತೆ ಕ್ರಿಕೆಟ್‌ ಅನೇಕ ಭಾರತೀಯರಿಗೆ ಬಹಳ ಪ್ರಿಯವಾದ ಕ್ರೀಡೆ. ಹದಿಹರಯದಲ್ಲಿ ಕ್ರಿಕೆಟ್‌ ಬಗ್ಗೆ ನನಗೂ ಬಹಳ ಆಸಕ್ತಿ ಇತ್ತು. ನಾನು ಸ್ವತಃ ಕ್ರಿಕೆಟ್‌ ಆಡಿಲ್ಲವಾದರೂ ಪಂದ್ಯಗಳನ್ನು ತಾಸುಗಟ್ಟಲೆ ವೀಕ್ಷಿಸುತ್ತಿದ್ದೆ. ವಿಶೇಷವಾಗಿ ವಿದೇಶಗಳಲ್ಲಿ ಪಂದ್ಯಗಳು ನಡೆಯುತ್ತಿದ್ದಾಗ, ಬೆಳ್ಳಂಬೆಳಗ್ಗಿನ ವಿಶ್ವಕಪ್‌ ಮ್ಯಾಚ್‌ ಆಗಿರಲಿ; ತಡರಾತ್ರಿಯ ವರೆಗಿನ ಟೆಸ್ಟ್‌ ಮ್ಯಾಚ್‌ ಆಗಿರಲಿ; ಟಿವಿ ಮೇಲೆ ಕಣ್ಣು ನೆಟ್ಟು ಕುಳಿತಿರುತ್ತಿದ್ದೆ. ಈಗ ಹಿಂದಿರುಗಿ ನೋಡಿದರೆ ವರ್ಷಗಟ್ಟಲೆ ಆ ಪಂದ್ಯಾಟಗಳನ್ನು ನೋಡುತ್ತ, ತಜ್ಞರ ವೀಕ್ಷಕ ವಿವರಣೆಗಳನ್ನು ಕೇಳುತ್ತ ನಾನು ಬದುಕಿಗೆ ಸಂಬಂಧಿಸಿದ ಹಲವು ಪಾಠಗಳನ್ನು ಕಲಿತಿದ್ದೇನೆ ಎಂದೆನಿಸುತ್ತದೆ, ಆ ಪಾಠಗಳು ಈಗಲೂ ನನ್ನೊಳಗೆ ಉಳಿದುಕೊಂಡಿವೆ.

ಈಗ ಆಕ್ಯುಪೇಶನಲ್‌ ಥೆರಪಿಸ್ಟ್‌ ಆಗಿ, ಮಾನಸಿಕ ಅಸ್ವಾಸ್ಥ é ಹೊಂದಿರುವ ವ್ಯಕ್ತಿಗಳಿಗೆ ಅಮೂಲ್ಯ ಮಾನಸಿಕ ಆರೋಗ್ಯ ಪರಿಕಲ್ಪನೆಗಳನ್ನು ವಿವರಿಸುವಾಗ, ಕ್ರಿಕೆಟ್‌ನಿಂದ ನಾನು ಕಲಿತ ಪಾಠಗಳು ಬಹಳ ಉಪಯುಕ್ತವಾಗಿ ಒದಗುತ್ತವೆ. ಕ್ರಿಕೆಟನ್ನು ಒಂದು ಆಟವಾಗಿ ಮಾತ್ರವಲ್ಲ; ಆರೋಗ್ಯಯುತ ಸಕಾರಾತ್ಮಕ ಮನೋಭೂಮಿಕೆಯನ್ನು ರೂಢಿಸಿಕೊಳ್ಳುವುದಕ್ಕೆ ಒಂದು ಸಾಧನವಾಗಿ ಉಪಯೋಗಿಸುತ್ತೇನೆ. ಕ್ರಿಕೆಟ್‌ ನಮಗೆ ಕಲಿಸುತ್ತದೆ ಎಂದು ನಾನು ಭಾವಿಸುವ ಹತ್ತು ಮಾನಸಿಕ ಆರೋಗ್ಯ ಪಾಠಗಳು ಇಲ್ಲಿವೆ.

ಮೂಲ ವಿಚಾರಗಳನ್ನು ಚೆನ್ನಾಗಿ ತಿಳಿಯಿರಿ :

ಕ್ರಿಕೆಟ್‌ನಲ್ಲಿ ಬ್ಯಾಟಿಂಗ್‌, ಬೌಲಿಂಗ್‌ ತಂತ್ರಗಳು, ಆಟದ ನಿಯಮಗಳನ್ನು ತಿಳಿದುಕೊಳ್ಳುವುದು, ನಿಯಮಿತವಾಗಿ ತರಬೇತಿ ಪಡೆಯುವುದು ಚೆನ್ನಾಗಿ ಕ್ರಿಕೆಟ್‌ ಆಡಲು ಬಹಳ ಮುಖ್ಯ. ಹಾಗೆಯೇ ಬದುಕಿನಲ್ಲಿ ಆರೋಗ್ಯಪೂರ್ಣ ಪೌಷ್ಟಿಕ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಚೆನ್ನಾಗಿ ನಿದ್ದೆ ಮಾಡುವುದು ಬಹಳ ಪ್ರಾಮುಖ್ಯ. ಹಣ್ಣು ಮತ್ತು ತರಕಾರಿಗಳು ಸಮರ್ಪಕ ಪ್ರಮಾಣದಲ್ಲಿ ಒಳಗೊಂಡಿರುವ ಸಮತೋಲಿತ ಆಹಾರ ಸೇವನೆ, ನಿಯಮಿತವಾಗಿ ಸರಿಯಾದ ವ್ಯಾಯಾಮ ಮಾಡುವುದು ಮತ್ತು ನಮ್ಮ ಹಳೆಯ ರೂಢಿಯಾದ ರಾತ್ರಿ ಬೇಗನೆ ಮಲಗಿ ಬೆಳಗ್ಗೆ ಬೇಗನೆ ಏಳುವುದು ಉತ್ತಮ ಮಾನಸಿಕ ಆರೋಗ್ಯವನ್ನು ಉಂಟು ಮಾಡುತ್ತದೆ ಎಂಬುದಕ್ಕೆ ಸಾಕಷ್ಟು ಸಂಶೋಧನ ಸಾಕ್ಷ್ಯಗಳು ಲಭ್ಯವಿವೆ.

ಬೌಲರ್‌/ಬ್ಯಾಟ್ಸ್‌ಮನ್‌ ಎಷ್ಟೇ ಸಮರ್ಥನಿರಲಿ; ನಿಮ್ಮ ಬಗ್ಗೆ ಮತ್ತು ನಿಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆ  ಇರಲಿ :

ಹೆಸರೇ ಕೇಳದ ಹೊಸಬ ಬೌಲರ್‌ ಹೆಸರಾಂತ ಬ್ಯಾಟ್ಸ್‌ಮನ್‌ನನ್ನು ಬೌಲ್ಡ್‌ ಮಾಡಿದ, ಅನುಭವಿ ಬೌಲರ್‌ನನ್ನು ಆಗಷ್ಟೇ ಕ್ರಿಕೆಟ್‌ಗೆ ಕಾಲಿರಿಸಿದ ಯುವ ಬ್ಯಾಟ್ಸ್‌ಮನ್‌ ಬೌಂಡರಿ, ಸಿಕ್ಸರ್‌ಗಳಿಂದ ಹಿಗ್ಗಾಮುಗ್ಗ ದಂಡಿಸಿದ ಉದಾಹರಣೆಗಳು ಕ್ರಿಕೆಟ್‌ನಲ್ಲಿ ಎಷ್ಟೋ ಸಿಗುತ್ತವೆ. ಬದುಕಿನಲ್ಲಿಯೂ ಎಷ್ಟೇ ಅಡೆತಡೆಗಳು, ಸವಾಲುಗಳು ಎದುರಾ ದರೂ ನಾವು ನಮ್ಮ ಸ್ವಸಾಮರ್ಥ್ಯದ ಬಗ್ಗೆ ನಂಬಿಕೆ ಹೊಂದಿರಬೇಕು ಮತ್ತು ದೃಢ ನಿರ್ಧಾರದೊಂದಿಗೆ ಮುನ್ನಡೆಯಬೇಕು. ಎದುರಾದ ಸವಾಲುಗಳ ಗಾತ್ರ, ಕ್ಲಿಷ್ಟತೆಗಳಿಂದ ಎದೆಗುಂದದೆ ನಮ್ಮಷ್ಟಕ್ಕೆ ನಾವು ನಮ್ಮ ಗರಿಷ್ಠ ಪ್ರಯತ್ನವನ್ನು ಮುಂದುವರಿಸಬೇಕು.

ಕ್ಯಾಚ್‌ಗಳಿಂದ ಮ್ಯಾಚ್‌ ಗೆಲ್ಲಬಹುದು :

ಪ್ರತೀ ಕ್ರಿಕೆಟ್‌ ಅಭಿಮಾನಿಗೂ ಈ ಜನಪ್ರಿಯ ಹೇಳಿಕೆ ನಾಲಗೆಯ ತುದಿಯಲ್ಲಿರುತ್ತದೆ, ಕ್ಷೇತ್ರರಕ್ಷಕರು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರಿಂದಲೇ ಅನೇಕ ಪಂದ್ಯಗಳನ್ನು ಸೋತ ಉದಾಹರಣೆಗಳು ಕೂಡ ತಿಳಿದಿರುತ್ತವೆ. ದಕ್ಷಿಣ ಆಫ್ರಿಕ ತಂಡವು 1999ರ ವಿಶ್ವಕಪ್‌ ಕೂಟವನ್ನು ಸೋಲುವಂತೆ ಮಾಡಿದ ಕೈಚೆಲ್ಲಿದ ಕ್ಯಾಚ್‌ ಇದಕ್ಕೆ ಅತ್ಯುತ್ತಮ ಉದಾಹರಣೆ. ಬದುಕಿನಲ್ಲಿ ಕೂಡ ಪ್ರತಿಯೊಬ್ಬರೂ ತನಗೆ ಎದುರಾಗುವ ಪ್ರತೀ ಅವಕಾಶಗಳನ್ನು ಅತ್ಯುತ್ತಮವಾಗಿ ಸದುಪಯೋಗಪಡಿಸಿಕೊಳ್ಳಬೇಕು. ಕೆಲವು ಸರಳ ಕ್ಷಣಗಳು, ಸಕಾರಾತ್ಮಕ ಪ್ರಭಾವ ಬೀರುವ ವ್ಯಕ್ತಿಗಳ ಜತೆಗೆ ಕಿರು ಸಂಭಾಷಣೆಗಳು ಕೂಡ ತನ್ನ ಬಗ್ಗೆ ಮತ್ತು ಒಟ್ಟಾರೆಯಾಗಿ ಬದುಕಿನ ಬಗ್ಗೆ ಒಳ್ಳೆಯ ದೃಷ್ಟಿ, ಭಾವನೆ ಹೊಂದಲು ಸಹಾಯ ಮಾಡಬಲ್ಲವು.

ಒಳ್ಳೆಯ ಓವರ್‌ಗಳಿರುತ್ತವೆ, ಕೆಟ್ಟ ಓವರ್‌ಗಳೂ ಇರುತ್ತವೆ :

ಜೀವನ ಸದಾಕಾಲ ಒಂದೇ ತೆರನಾಗಿರುವುದಿಲ್ಲ. “ಇಂಥ ದಿನಗಳು ಇನ್ನಷ್ಟು ಬರಲಿ’ ಎಂದು ಹಾರೈಸುವಂತಹ ದಿನಗಳು ಇರುತ್ತವೆ, ಕೆಲವು ದಿನಗಳ ಬಗ್ಗೆ “ಶತ್ರುಗಳಿಗೂ ಬಾರದಿರಲಿ’ ಎಂದು ಹಾರೈಸುತ್ತೇವೆ. ಒಳ್ಳೆಯ ದಿನಗಳು ಎದುರಾದಾಗ ಮಿತಿಮೀರಿ ಹಿಗ್ಗದೆ, ಕೆಟ್ಟ ಸಮಯ ಬಂದಾಗ “ಇದೂ ದಾಟಿ ಹೋಗುತ್ತದೆ’ ಎಂದು ಸಂತೈಸಿಕೊಳ್ಳಬೇಕು. ಎಲ್ಲವೂ ತಾನಾಗಿ ಶಾಂತವಾಗಲು, ಒಳ್ಳೆಯ ಸಮಯ ಮರುಕಳಿಸಲು ತಾಳ್ಮೆಯಿಂದ ಕಾಯಬೇಕು. ಕಷ್ಟಗಳು ಎದುರಾದಾಗ ಕುಗ್ಗಿ ಹೋಗದೆ, ಒಳ್ಳೆಯ ಕಾಲ ಇರುವಂತೆ ಕೆಟ್ಟ ಕಾಲವೂ ಇರುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡು ಸ್ವೀಕರಿಸಿ ಮತ್ತೆ ಒಳ್ಳೆಯ ದಿನಗಳು ಬರುತ್ತವೆ ಎಂಬ ವಿಶ್ವಾಸದಿಂದ ಕಾಯಬೇಕು. ಪ್ರಸ್ತುತ ನಾವು ಒಂದು ಸವಾಲಿನ ಕಾಲದಲ್ಲಿದ್ದೇವೆ. ಆದರೆ ಒಳ್ಳೆಯ ಸಮಯ ಬರುವುದಕ್ಕಿದೆ.

ಇದು ತಂಡ ಆಟ, ನೀವು ಜತೆಯಾಗಿ ಇದನ್ನು ಆಡಬೇಕು :

ಕ್ರಿಕೆಟನ್ನು ಒಬ್ಬೊಬ್ಬರಾಗಿ ಆಡುವುದಕ್ಕಾಗುವುದಿಲ್ಲ. ಅದನ್ನು ಒಂದು “ಟೀಮ್‌ ಗೇಮ್‌’ ಎಂದು ಕರೆಯಲಾಗುತ್ತದೆ. ತಂಡ ಗಳಿಸುವ ಫ‌ಲಿತಾಂಶದಲ್ಲಿ ಪ್ರತಿಯೊಬ್ಬ ಸದಸ್ಯ ಆಟಗಾರನ ಕೊಡುಗೆಯೂ ಇರುತ್ತದೆ. ಒಂದು ದೀರ್ಘ‌ ಇನ್ನಿಂಗ್ಸ್‌ ಕಟ್ಟುವುದಕ್ಕೆ ಒಬ್ಬ ಉತ್ತಮ ಸಂಗಾತಿ ಆಟಗಾರನ ಅಗತ್ಯವಿರುತ್ತದೆ. ಸರಿಯಾದ ಸಂವಹನದ ಕೊರತೆ ಇದ್ದಾಗ ರನ್‌ಔಟ್‌ಗಳು ಉಂಟಾಗುತ್ತವೆ, ಮ್ಯಾಚ್‌ ಸೋಲಬೇಕಾಗುತ್ತದೆ. ಬದುಕಿನಲ್ಲಿ ಕೂಡ ನಮ್ಮ ಸುತ್ತಮುತ್ತಲಿನವರ ಜತೆಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಒಬ್ಬರು ಇನ್ನೊಬ್ಬರನ್ನು ಬೆಂಬಲಿಸಬೇಕಾಗುತ್ತದೆ, ಸಹಾಯ ಮಾಡಬೇಕಾಗುತ್ತದೆ, ಯಾರಾದರೂ ಸೋಲುತ್ತಿದ್ದರೆ ಕೈ ಹಿಡಿದು ಮೇಲೆತ್ತಬೇಕಾಗುತ್ತದೆ. ನೈಜ, ಪ್ರಾಮಾಣಿಕವಾದ, ಸಹಾನುಭೂತಿಯ ಸಂಬಂಧಗಳನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜದ ಜತೆಗೆ ಬೆರೆಯುವುದು ಉತ್ತಮ ಮಾನಸಿಕ ಕಲ್ಯಾಣಕ್ಕೆ ಪ್ರಾಮುಖ್ಯ ಅಂಶವಾಗಿದೆ.

ನಿಮ್ಮದೇ ಶೈಲಿಯಲ್ಲಿ ಅತ್ಯುತ್ತಮ ಆಟವಾಡಿ :

“ಗೋಡೆ’ಯಂತೆ ಸ್ಥಿರ ಆಟ ಒದಗಿಸುವ ದ್ರಾವಿಡ್‌ ಆಗಿರಲಿ, ಯುವರಾಜ್‌ನಂತಹ ಹೊಡಿಬಡಿಯ ಆಟವಿರಲಿ; ಕ್ರಿಕೆಟ್‌ನಲ್ಲಿ ಪ್ರತಿಯೊಬ್ಬ ಆಟಗಾರನಿಗೂ ಅವನದ್ದೇ ಆದ ಶೈಲಿ ಇರುತ್ತದೆ. ಆಯಾ ಆಟಗಾರ ತನ್ನ ನೈಸರ್ಗಿಕ ಶೈಲಿಯ ಆಟದ ಲಯವನ್ನು ಕಂಡುಕೊಂಡಾಗ ಅತ್ಯುತ್ತಮ ಇನ್ನಿಂಗ್ಸ್‌ ಕಟ್ಟುತ್ತಾನೆ. ಬದುಕಿನಲ್ಲಿ ನಾವು ಆಗಾಗ ಇತರರ ಜತೆಗೆ ನಮ್ಮನ್ನು ಹೋಲಿಸಿಕೊಳ್ಳುತ್ತೇವೆ. ಯಾವುದೋ ಒಂದು ನಿರ್ದಿಷ್ಟ ಶೈಲಿಯಲ್ಲಿ ಕೆಲಸ ಮಾಡಬೇಕು ಅಥವಾ ಎಲ್ಲರಂತೆ ಕೆಲಸ ಮಾಡಬೇಕು ಎಂದು ಹಾರೈಸುತ್ತೇವೆ. ಆದರೆ ಅದು ಹಾಗೆ ಆಗಬೇಕಿಲ್ಲ. ನೀವು ಇತರರ ಜತೆಗೂಡದೆ ಪ್ರತ್ಯೇಕವಾಗಿ ಬೆಳಗ್ಗೆ ಅಥವಾ ಸಂಜೆ ಕೆಲಸ/ ಅಧ್ಯಯನ ಮಾಡಲು ಬಯಸುತ್ತೀರಾದರೆ ಹಾಗೆಯೇ ಮಾಡಿ. ಇತರರ ಹಾಗೆ ಏನನ್ನಾದರೂ ಮಾಡಬೇಕು ಅಥವಾ ವರ್ತಿಸಬೇಕು ಎಂದುಕೊಂಡು ಒತ್ತಡ ಹೇರಿಕೊಳ್ಳುವುದು ಸಲ್ಲದು. ನಿಮ್ಮದೇ ಆದ ಶೈಲಿ ಸ್ವತಃ ನಿಮಗೆ ಅಥವಾ ಇತರರಿಗೆ ಹಾನಿ, ತೊಂದರೆ ಉಂಟು ಮಾಡದೆ ಇದ್ದಲ್ಲಿ ಅದನ್ನೇ ಅನುಸರಿಸಿ. ಇಂತಹ ಮನೋಭಾವನೆಯನ್ನು ಬೆಳೆಸಿಕೊಂಡರೆ ಕೀಳರಿಮೆ, ಪೂರ್ವಾಗ್ರಹ ಬೆಳೆಸಿಕೊಳ್ಳುವುದನ್ನು ಕಡಿಮೆ ಮಾಡಬಹುದು.

ಒಂದೊಂದು ರನ್‌ ಕೂಡ ತುಂಬಾ ಮುಖ್ಯ :

ಬ್ಯಾಟ್ಸ್‌ಮನ್‌ ಬಾರಿಸುವ ಬೌಂಡರಿ, ಸಿಕ್ಸರ್‌ಗಳು ಪ್ರೇಕ್ಷಕರ ಮನ ಸೆಳೆಯುತ್ತವೆ, ಸಿಳ್ಳೆ, ಚಪ್ಪಾಳೆ ಗಿಟ್ಟಿಸುತ್ತವೆ. ಆದರೆ ಕಷ್ಟಪಟ್ಟು ಓಡಿ ಗಳಿಸುವ ಪ್ರತಿಯೊಂದು ಒಂಟಿ ರನ್‌ ಕೂಡ ಅತ್ಯಂತ ಮುಖ್ಯವಾಗಿರುತ್ತವೆ ಎಂಬುದು ಪ್ರತಿಯೊಬ್ಬ ಅನುಭವಿ ಆಟಗಾರನಿಗೆ ಗೊತ್ತಿರುತ್ತದೆ. ವಿಕೆಟ್‌ಗಳ ನಡುವೆ ಓಡಿ ಗಳಿಸುವ ಈ ಒಂಟಿ ರನ್‌ಗಳು ಒಂದಾಗಿ, ಎರಡಾಗಿ, ಮೂರಾಗಿ ಒಂದು ದೊಡ್ಡ ಸ್ಕೋರ್‌ಗೆ ಅಡಿಪಾಯ ನಿರ್ಮಿಸುತ್ತವೆ. ಬದುಕಿನಲ್ಲಿ ಕೂಡ ಸರಳವಾದ ಸುಲಭ ಎಂದು ಕಾಣಿಸುವ ಹೆಜ್ಜೆಗಳು ಬಹಳ ಮುಖ್ಯವಾಗಿರುತ್ತವೆ. ಒಂದು ಬಿರುಸಾದ ನಡಿಗೆ, ಪುಸ್ತಕದ ಕೆಲವು ಪುಟಗಳ ಓದು, ಆಪ್ತ ಗೆಳೆಯನ ಜತೆಗೆ ಹತ್ತು ನಿಮಿಷಗಳ ಕಾಲ ಮನಬಿಚ್ಚಿ ಮಾತನಾಡುವುದು ಇತ್ಯಾದಿ ಸರಳ ಕಾರ್ಯಗಳು ಮಾನಸಿಕ ಆರೋಗ್ಯವನ್ನು ಚೆನ್ನಾಗಿರಿಸಿಕೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಈ ಸರಳ ಹೆಜ್ಜೆಗಳೇ ದೀರ್ಘ‌ಕಾಲಿಕವಾಗಿ ಉತ್ತಮ ಹವ್ಯಾಸ ರೂಢಿಸಿಕೊಳ್ಳುವಲ್ಲಿ, ಬದುಕಿನತ್ತ ಸಕಾರಾತ್ಮಕ ದೃಷ್ಟಿ ಬೆಳೆಸಿಕೊಳ್ಳುವಲ್ಲಿ ಸಹಾಯ ಮಾಡುತ್ತವೆ. ಸಣ್ಣದಾಗಿ ಆರಂಭಿಸಿ, ದೊಡ್ಡದಾಗಿ ಬೆಳೆಯಿರಿ.

ನಿಮ್ಮ ಕೆಲಸವನ್ನು ನೀವು ಚೆನ್ನಾಗಿ ಮಾಡಿ :

ನೀವು ಮಾಡುವ ಕೆಲಸವನ್ನು ಮನಃಪೂರ್ವಕವಾಗಿ, ನಿಮ್ಮ ಪೂರ್ಣ ಶಕ್ತಿ ಸಾಮರ್ಥ್ಯಗಳೊಂದಿಗೆ ಮಾಡಿ. ಮಗುವಿನೊಂದಿಗೆ ಆಟವಾಡುವುದಿರಬಹುದು, ನಿಮ್ಮ ಕಪಾಟು ಶುಚಿಗೊಳಿಸುವುದಾಗಿರಬಹುದು, ಸಣ್ಣ ಅಸೈನ್‌ಮೆಂಟ್‌ ಬರೆಯುವು ದಿರಬಹುದು; ನೀವು ಏನನ್ನೇ ಮಾಡುವುದಿದ್ದರೂ ಅದನ್ನು ನಿಮ್ಮ ಪೂರ್ತಿ ಶಕ್ತಿ ಸಾಮರ್ಥ್ಯ ವಿನಿಯೋಗಿಸಿ ನಡೆಸಿ. ಆಸ್ಟ್ರೇಲಿಯದ ಫಾಸ್ಟ್‌ ಬೌಲರ್‌  ಗ್ಲೆನ್‌ ಮೆಕ್‌ಗ್ರಾಥ್‌ ಒಂದು ರನ್ನನ್ನೂ ಬಿಟ್ಟು ಕೊಡದೆ, ಬ್ಯಾಟ್ಸ್‌ಮನ್‌ಗೆ ಒಂದು ಸಣ್ಣ ಅವಕಾಶವನ್ನೂ ನೀಡದೆ ಬೌಲಿಂಗ್‌ ನಡೆಸುವುದಕ್ಕೆ ಪ್ರಖ್ಯಾತರು. ನಮ್ಮ ಸಚಿನ್‌ ತೆಂಡೂಲ್ಕರ್‌ ಜಗತ್ತಿನ ಅತೀ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ಹಾಗೆಯೇ ಸ್ಲಿಪ್‌ನಲ್ಲಿ ಉತ್ತಮ ಫೀಲ್ಡರ್‌ ಆಗಿದ್ದರು; ನಿರ್ಣಾಯಕ ಕ್ಷಣಗಳಲ್ಲಿ ಮಹತ್ವದ ಓವರ್‌ಗಳನ್ನು ಬೌಲ್‌ ಮಾಡಿದ್ದರು.

ಸಾಧಿಸಬೇಕಾದ ರನ್‌ರೇಟ್‌ ಎಷ್ಟೇ ಇರಲಿ;

ಓವರ್‌ನಿಂದ ಓವರ್‌ನಂತೆ ಸಾಧಿಸುತ್ತ ಹೋಗಿ ಕ್ರಿಕೆಟ್‌ ಪಂದ್ಯ ನಡೆಯುತ್ತಿರುವಾಗ ಕೆಲವು ಬಾರಿ ಒತ್ತಡಮಯ ಸನ್ನಿವೇಶ ನಿರ್ಮಾಣವಾಗುತ್ತದೆ.ಗೆಲ್ಲಲು ಅಗತ್ಯವಾದ ಮೊತ್ತವನ್ನು ಸೇರಿಸುವುದಕ್ಕೆ ಬೇಕಾದ ರನ್‌ರೇಟ್‌ ಏರುತ್ತಲೇ ಹೋಗುತ್ತದೆ, ಇದು ಕ್ರೀಸ್‌ನಲ್ಲಿರುವ ಬ್ಯಾಟ್ಸ್‌ಮನ್‌ ಮೇಲೆ ಅಪಾರ ಒತ್ತಡವನ್ನು ಉಂಟುಮಾಡುತ್ತದೆ. ಇಂತಹ ಸನ್ನಿವೇಶಗಳಲ್ಲಿ ಅನುಸರಿಸಬೇಕಾದ ಉತ್ತಮ ಸೂತ್ರ ಎಂದರೆ, ಒಟ್ಟು ಎಷ್ಟು ರನ್‌ ಬೇಕು, ಅಗತ್ಯವಾದ ರನ್‌ರೇಟ್‌ ಏನು ಎಂಬುದನ್ನೆಲ್ಲ ಗಣನೆಗೆ ತೆಗೆದುಕೊಳ್ಳದೆ; ಒಂದೊಂದು ಎಸತವನ್ನೂ ಪರಿಗಣಿಸಿ ಅತ್ಯುತ್ತಮ ಆಟವನ್ನು ಆಡುವುದು. ಒಂದೊಂದು ಎಸೆತ, ಒಂದೊಂದು ಓವರ್‌ನಂತೆ ಕಾರ್ಯಸಾಧಿಸುತ್ತ ಹೋದರೆ ಅಂತಿಮ ಗೆಲುವು ಕೈಯಲ್ಲಿರುತ್ತದೆ. ಬದುಕಿನಲ್ಲಿ ಕೂಡ, ಒತ್ತಡಮಯ ಸನ್ನಿವೇಶಗಳು ಎದುರಾದಾಗ, ಸನ್ನಿವೇಶ ನಮ್ಮಿಂದ ಹಲವನ್ನು ಬಯಸುತ್ತಿರುವಾಗ ಆ ಸನ್ನಿವೇಶದಲ್ಲಿ ನೀವು ಮಾಡಬಹುದಾದ ಅತ್ಯುತ್ತಮವಾದದ್ದು ಏನು ಎಂಬುದರತ್ತ ಗಮನಹರಿಸಬೇಕು. ಸಣ್ಣ ಸಣ್ಣ ಗುರಿಗಳನ್ನು ಹಾಕಿಕೊಂಡು ಅವುಗಳನ್ನು ಸಾಧಿಸುತ್ತ ಹೋಗಬೇಕು.

 ಕೊನೆಯ ಎಸೆತದ ತನಕವೂ ಪಂದ್ಯ ನಡೆಯುತ್ತಲೇ ಇರುತ್ತದೆ! :

ಈ ಹತ್ತು ಕ್ರಿಕೆಟ್‌ ಮನೋಪಾಠಗಳಲ್ಲಿ ಅತ್ಯುತ್ತಮವಾದದ್ದು ಇದು – ಏನೇ ಇರಲಿ; ಎಂತಹ ಅಡ್ಡಿ ಅಡಚಣೆಗಳೇ ಇರಲಿ ಅಥವಾ ಬದುಕು ಎಷ್ಟೇ ಸುಖಮಯವಾಗಿರಲಿ, ಕೊನೆಯ ಕ್ಷಣದ ವರೆಗೂ ಪ್ರಯತ್ನ ಬಿಡಬೇಡಿ; ಯಾವುದೇ ಸಂದರ್ಭವನ್ನು ಹಗುರವಾಗಿ ಪರಿಗಣಿ ಸಬೇಡಿ. ಸವಾಲುಗಳು ಎದುರಾದಾಗ ನಾವು ಕೈಚೆಲ್ಲುತ್ತೇವೆ. “ಇತರರಿಗೆ ಮೆಚ್ಚುಗೆ ಆಗಲಾರದು’, “ನನ್ನಿಂದು ಇದು ಸಾಧ್ಯವಿಲ್ಲ’  ಇತ್ಯಾದಿ ಕಾರಣಗಳನ್ನು ಕೊಟ್ಟುಕೊಳ್ಳುತ್ತೇವೆ. ಹಾಗೆಯೇ ಎಲ್ಲವೂ ಸರಿಯಿರುವಾಗ ಮೈಮರೆಯುವುದೂ ಉಂಟು. ಆದರೆ ನಿಜವಾಗಿ ಬೇಕಾದದ್ದು ಏನೆಂದರೆ, ಕೊನೆಯ ಕ್ಷಣದ ವರೆಗೂ ಹಠ ಬಿಡದೆ ಪ್ರಯತ್ನಿಸುವ ಛಾತಿ. ಹಾಗೆಯೇ, ಯಾವುದೇ ಕ್ಷಣದಲ್ಲಿ ಮೈಮರೆಯದ ಎಚ್ಚರ. ಇದಕ್ಕಾಗಿ ಸ್ಫೂರ್ತಿ ಗಳಿಸಬಹುದಾದ ಒಂದು ಉತ್ಕೃಷ್ಟ ಉದಾಹರಣೆ ಎಂದರೆ, 1983ರ ವಿಶ್ವಕಪ್‌ ಗೆಲುವು.

ನಾವೀಗಾಗಲೇ ಹೊಸ ವರ್ಷದಲ್ಲಿದ್ದೇವೆ. ಆಸ್ಟ್ರೇಲಿಯದಲ್ಲಿ ಬಲಿಷ್ಠ ಆಸೀಸ್‌ ತಂಡದೆದುರು ಆಡಿದ ಭಾರತದ ಹೊಸ ಹುಡುಗರ ತಂಡ ಟೆಸ್ಟ್‌ ಸರಣಿ ಗೆದ್ದಿದೆ. ಯಾರೂ ಅಸಾಧ್ಯವನ್ನು ಸಾಧ್ಯ ಮಾಡಿಕೊಳ್ಳಬಹುದು ಎಂಬುದಕ್ಕೆ ಇದೂ ಒಂದು ಉದಾಹರಣೆ. ಇಲ್ಲಿ ಹೇಳಿರುವ ಕ್ರಿಕೆಟ್‌ ಮನೋಪಾಠಗಳು ಕೋವಿಡ್‌ ಕಾಲದ ಮಾನಸಿಕ ಒತ್ತಡ, ತಲ್ಲಣಗಳನ್ನು ಸಮರ್ಥವಾಗಿ ಎದುರಿಸಿ ಗೆಲ್ಲಲು ಮಾರ್ಗವಾಗಲಿ.

 

ಡಾ| ವಿನೀತಾ ಎ. ಆಚಾರ್ಯ

ಅಸೋಸಿಯೇಟ್‌ ಪ್ರೊಫೆಸರ್‌ ಮತ್ತು ವಿಭಾಗದ ಮುಖ್ಯಸ್ಥರು,

ಆಕ್ಯುಪೇಶನಲ್‌ ಥೆರಪಿ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

Bhuvan Ponnanna And Harshika Poonaccha Interview in Udayavani

ಪರೋಪಕಾರಾರ್ಥಂ ಇದಂ ಶರೀರಂ: ಉದಯವಾಣಿ ಜೊತೆ ನೆರವಿನ ಅನುಭವ ಹಂಚಿಕೊಂಡ ಭುವನ್,ಹರ್ಷಿಕಾ ಜೋಡಿ  

08

ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆ: ಮೈಸೂರು ಜನತೆಗೆ ಕೊಂಚ ರಿಲ್ಯಾಕ್ಸ್

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

ಜಮ್ಮು-ಕಾಶ್ಮೀರ: ಶೋಪಿಯಾದಲ್ಲಿ ಸೇನಾ ಎನ್ ಕೌಂಟರ್ ಗೆ ಶಂಕಿತ ಭಯೋತ್ಪಾದಕ ಬಲಿ

ಜಮ್ಮು-ಕಾಶ್ಮೀರ: ಶೋಪಿಯಾದಲ್ಲಿ ಸೇನಾ ಎನ್ ಕೌಂಟರ್ ಗೆ ಶಂಕಿತ ಭಯೋತ್ಪಾದಕ ಬಲಿ

ಸಂಚಾರಿ ನಿಯಮ ಉಲ್ಲಂಘನೆ: ದೆಹಲಿ ಪೊಲೀಸರಿಂದ ರಾಬರ್ಟ್‌ ವಾದ್ರಾಗೆ ಚಲನ್‌

ಸಂಚಾರಿ ನಿಯಮ ಉಲ್ಲಂಘನೆ: ದೆಹಲಿ ಪೊಲೀಸರಿಂದ ರಾಬರ್ಟ್‌ ವಾದ್ರಾಗೆ ಚಲನ್‌

10

ನಾಲಿಗೆ ಹರಿಬಿಟ್ಟು ಜೈಲು ಸೇರಿದ ಬಾಲಿವುಡ್ ನಟಿ

ಮಹಾರಾಷ್ಟ್ರ; ಮತ್ತೆ ಕಠಿಣ ಕೋವಿಡ್ ನಿರ್ಬಂಧ ಘೋಷಣೆ, 4 ಗಂಟೆವರೆಗೆ ಅಂಗಡಿ ಬಂದ್

ಮಹಾರಾಷ್ಟ್ರ; ಮತ್ತೆ ಕಠಿಣ ಕೋವಿಡ್ ನಿರ್ಬಂಧ ಘೋಷಣೆ, 4 ಗಂಟೆವರೆಗೆ ಅಂಗಡಿ ಬಂದ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sports-related injuries

ಮಕ್ಕಳಲ್ಲಿ  ಕ್ರೀಡೆ ಸಂಬಂಧಿ ಗಾಯಗಳು : ತಡೆ ಮತ್ತು ಆರೈಕೆ

Radiation therapy

ರೇಡಿಯೇಶನ್‌ ಥೆರಪಿ :ನೀವು ಹೊಂದಿರಬೇಕಾದ ಸಾಮಾನ್ಯ ಜ್ಞಾನ

Exome sequencing

ಎಕ್ಸೋಮ್‌ ಸೀಕ್ವೆನ್ಸಿಂಗ್‌ ಎಂದರೇನು?

Arogyavani

ದೀರ್ಘ‌ಕಾಲೀನ ಮತ್ತು ಹಸ್ತಕ್ಷೇಪಿತ ನೋವಿಗೆ ಸಂಬಂಧಿಸಿದ  ಸೇವೆಗಳು

covid 19 Lockdown Effect

ಸಂವಹನ ಮತ್ತು ಭಾಷೆಯ ಬೆಳವಣಿಗೆಯಲ್ಲಿ  ಕೋವಿಡ್‌ 19 ಲಾಕ್‌ ಡೌನ್‌ ಪರಿಣಾಮ

MUST WATCH

udayavani youtube

ಶೀಘ್ರದಲ್ಲೇ ಕಾಲೇಜು ಆರಂಭಕ್ಕೆ ಸಿದ್ಧತೆ : ಡಾ.ಸಿ.ಎಸ್.ಅಶ್ವತ್ಥನಾರಾಯಣ

udayavani youtube

4G ಜಮಾನದಲ್ಲೂ ನೆಟ್ವರ್ಕ್ ಇಲ್ಲದೇ ಮಡಾಮಕ್ಕಿ ಮಕ್ಕಳ ಪರದಾಟ!

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

ಹೊಸ ಸೇರ್ಪಡೆ

Bhuvan Ponnanna And Harshika Poonaccha Interview in Udayavani

ಪರೋಪಕಾರಾರ್ಥಂ ಇದಂ ಶರೀರಂ: ಉದಯವಾಣಿ ಜೊತೆ ನೆರವಿನ ಅನುಭವ ಹಂಚಿಕೊಂಡ ಭುವನ್,ಹರ್ಷಿಕಾ ಜೋಡಿ  

08

ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆ: ಮೈಸೂರು ಜನತೆಗೆ ಕೊಂಚ ರಿಲ್ಯಾಕ್ಸ್

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

ಜಮ್ಮು-ಕಾಶ್ಮೀರ: ಶೋಪಿಯಾದಲ್ಲಿ ಸೇನಾ ಎನ್ ಕೌಂಟರ್ ಗೆ ಶಂಕಿತ ಭಯೋತ್ಪಾದಕ ಬಲಿ

ಜಮ್ಮು-ಕಾಶ್ಮೀರ: ಶೋಪಿಯಾದಲ್ಲಿ ಸೇನಾ ಎನ್ ಕೌಂಟರ್ ಗೆ ಶಂಕಿತ ಭಯೋತ್ಪಾದಕ ಬಲಿ

ಸಂಚಾರಿ ನಿಯಮ ಉಲ್ಲಂಘನೆ: ದೆಹಲಿ ಪೊಲೀಸರಿಂದ ರಾಬರ್ಟ್‌ ವಾದ್ರಾಗೆ ಚಲನ್‌

ಸಂಚಾರಿ ನಿಯಮ ಉಲ್ಲಂಘನೆ: ದೆಹಲಿ ಪೊಲೀಸರಿಂದ ರಾಬರ್ಟ್‌ ವಾದ್ರಾಗೆ ಚಲನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.