ಮಾದಕ ವಸ್ತು ವ್ಯಸನ ತ್ಯಜಿಸಲು ಪ್ರಯತ್ನಿಸಿ-ಜಯಿಸಿ

Team Udayavani, Aug 26, 2018, 6:15 AM IST

ಮಾದಕ ವಸ್ತುಗಳ ಉಪಯೋಗ ಸಾಮಾನ್ಯವಾಗಿ ಪ್ರಪಂಚಾದ್ಯಂತ ಕಂಡುಬರುವ ಒಂದು ದೊಡ್ಡ ಪಿಡುಗು. ಇದು ಗಂಡು-ಹೆಣ್ಣು, ಬಡವ-ಶ್ರೀಮಂತ ಎನ್ನುವ ಭೇದವಿಲ್ಲದೆ ಎಲ್ಲೆಡೆಯೂ ಕಂಡುಬರುವ ತೊಂದರೆ. ಸಾಮಾನ್ಯವಾಗಿ ಉಪಯೋಗಿಸುವ ಮಾದಕ ವಸ್ತುಗಳೆಂದರೆ, ಮದ್ಯ, ತಂಬಾಕು, ಗಾಂಜಾ, ಕೋಕೇನ್‌, ಓಪಿಯಮ್‌, ಆಂಫಿಟಮೈನ್‌, ಹಿರಾಯಿನ್‌, ಎಲ್‌.ಎಸ್‌.ಡಿ., ಪಿ.ಸಿ.ಪಿ., ನಿದ್ದೆ ಮಾತ್ರೆಗಳು, ಅನಿಲಗಳು (ವೈಟನರ್‌, ಪೆಟ್ರೋಲಿಯಮ್‌ ಉತ್ಪನ್ನಗಳು), ಇತ್ಯಾದಿ. 

ಮಾದಕ ವಸ್ತುಗಳ ಚಟವು ವ್ಯಕ್ತಿಯ ಮೆದುಳಿನ ಮೇಲೆ ದೀರ್ಘ‌ಕಾಲದ ಮತ್ತು ಪ್ರಭಾವಿ ಪರಿಣಾಮ ಬೀರುತ್ತದೆ. ಈ ಪರಿಣಾಮಗಳೆಂದರೆ: ಮಾದಕ ವಸ್ತುಗಳ ಸೇವನೆಯ ತವಕ/ಹಪಹಪಿಸುವಿಕೆ, ಮಾದಕ ವಸ್ತುಗಳ ಸೇವನೆ/ಉಪಯೋಗದ ಮೇಲೆ ನಿಯಂತ್ರಣ ತಪ್ಪಿ$ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು, ಮಾದಕ ವಸ್ತುಗಳ ದುಷ್ಪರಿಣಾಮಗಳಾಗುತ್ತಿದ್ದರೂ ಅದರ ಸೇವನೆ/ಉಪಯೋಗ ಮುಂದುವರಿಸುವುದು. ಆದ್ದರಿಂದ ಈ ಕೆಳಗೆ ವಿವರಿಸಿದಂತೆ ವ್ಯಸನಿಗಳ ಲಕ್ಷಣಗಳನ್ನು ಗಮನಿಸಿ ಅವರು ಅವುಗಳನ್ನು ತ್ಯಜಿಸುವಂತೆ ಪ್ರಯತ್ನಿಸಲು ಪ್ರೇರೇಪಿಸಬೇಕು. ಈ ಮೂಲಕ ಅವರು ಜಯಿಸಿ ವ್ಯಸನ ಮುಕ್ತರಾಗಬೇಕು. 

ಮಾದಕ ವಸ್ತು ವ್ಯಸನಿಗಳನ್ನು 
ಗುರುತಿಸುವುದು ಹೇಗೆಂದರೆ:

1. ವ್ಯಕ್ತಿಯು ತನ್ನ ಜವಾಬ್ದಾರಿಗಳನ್ನು ನಿರ್ಲಕ್ಷಿಸಲಾರಂಭಿಸುತ್ತಾನೆ; ಶಾಲೆ/ಕಾಲೇಜಿಗೆ ಚಕ್ಕರ್‌ ಹೊಡೆದು ಮಾದಕ ವಸ್ತು ಬಳಸಲು ಹೋಗುವುದು; ಕೆಲಸಕ್ಕೆ ಗೈರಾಗುವುದು/ಕೆಲಸ ಅರ್ಧಕ್ಕೇ ಬಿಟ್ಟು ಹೋಗುವುದು; ಹೆಂಡತಿ ಮಕ್ಕಳನ್ನು ನಿರ್ಲಕ್ಷಿಸುವುದು; ಮನೆ ಖರ್ಚಿಗೆ ದುಡ್ಡು ಕೊಡದೆ ಅದನ್ನು ಮಾದಕ ವಸ್ತುಗಳ ಖರೀದಿಗೆ ಉಪಯೋಗಿಸುವುದು; ಸಾಮಾಜಿಕ ಜವಾಬ್ದಾರಿಗಳನ್ನು ನಿರ್ಲಕ್ಷಿಸುವುದು, ಇತ್ಯಾದಿ.
2. ವ್ಯಕ್ತಿಯು ಅಪಾಯಕಾರಿ ಸನ್ನಿವೇಶಗಳಲ್ಲಿ ಮಾದಕ ವಸ್ತುಗಳನ್ನು ಬಳಸಲಾರಂಭಿಸುತ್ತಾನೆ ಹಾಗೂ ಮಾದಕ ವಸ್ತುವಿನ ಮತ್ತಿನಲ್ಲಿರುವಾಗ ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ. ಮಾದಕ ವಸ್ತುಗಳನ್ನು ಬಳಸಿ ವಾಹನ ಚಲಾಯಿಸುವುದು, ಒಂದೇ ಸಿರಿಂಜಿನಲ್ಲಿ ಎಲ್ಲರೂ ಸೇರಿ ಮಾದಕ ವಸ್ತುಗಳನ್ನು ಇಂಜೆಕ್ಟ್ ಮಾಡಿಕೊಳ್ಳುವುದು, ಮಾದಕ ವಸ್ತು ತೆಗೆದುಕೊಳ್ಳಲು ಬಳಸಿದ ಸೂಜಿಯನ್ನೇ ಪದೆ-ಪದೇ ಬಳಸುವುದು, ಅಮಲಿನಲ್ಲಿ ಅಸುರಕ್ಷಿತ ಲೈಂಗಿಕ ಕ್ರಿಯೆಗೆ ತೊಡಗುವುದು, ಇತ್ಯಾದಿ.
3. ವ್ಯಕ್ತಿಯು ಮಾದಕ ವಸ್ತುವಿನ ವ್ಯಸನದಿಂದಾಗಿ ಅಪರಾಧವೆಸಗುವುದು, ಅಮಲಿನಲ್ಲಿ   ವಾಹನ ಚಲಾಯಿಸುವುದು, ಜಗಳ ಮಾಡುವುದು, ಇತರರ/ಮನೆಯವರ ನಿಂದೆ ಮಾಡುವುದು.
4. ಸಂಬಂಧಗಳಲ್ಲಿ ಬಿರುಕುಗಳುಂಟಾಗುವುದು, ಮಾದಕ ವಸ್ತುವಿನ ಸೇವನೆಯಿಂದಾಗಿ, ಅಮಲಿನಲ್ಲಿ ನಡವಳಿಕೆಗಳಿಂದಾಗಿ, ಬೇಜವಾಬ್ದಾರಿಯಿಂದಾಗಿ ಹೆಂಡತಿ-ಮಕ್ಕಳೊಂದಿಗೆ ಜಗಳಗಳಾಗುವುದು, ಸ್ನೇಹಿತರೊಟ್ಟಿಗೆ ಜಗಳಗಳಾಗುವುದು, ಕುಟುಂಬ/ಸಹೋದ್ಯೋಗಿಗಳೊಟ್ಟಿಗೆ ಮನಸ್ತಾಪವಾಗುವುದು, ಸ್ನೇಹ ಮುರಿದುಬೀಳುವುದು. 

ವ್ಯಸನಿಗಳ ಲಕ್ಷಣಗಳು
ಈ ಕೆಳಗೆ ನಮೂದಿಸಿದ ಲಕ್ಷಣಗಳಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಲಕ್ಷಣಗಳು ವ್ಯಕ್ತಿಯೋರ್ವನಲ್ಲಿ ಒಂದು ವರ್ಷದ ಅವಧಿಯಲ್ಲಿ ಹಲವು ಸಮಯದ ವರೆಗೆ ಕಂಡುಬಂದಲ್ಲಿ ಆತನನ್ನು ಚಟಕ್ಕೊಳಗಾಗಿದ್ದಾನೆಯೆಂದು ಪರಿಗಣಿಸಲಾಗುತ್ತದೆ.
1. ಮಾದಕ ವಸ್ತು ಸೇವಿಸಲೇಬೇಕೆಂಬ ಅತಿಯಾದ ಆಸೆ, ತವಕ ಮತ್ತು ಒತ್ತಡವನ್ನು ಅನುಭವಿಸುವುದು .

2. ಮಾದಕ ವಸ್ತುವಿನ ಪ್ರಮಾಣದ ಸಹನಾಶಕ್ತಿಯ ಹೆಚ್ಚಾಗುವಿಕೆ : ವ್ಯಕ್ತಿಗೆ ಮೊದಲಿಗೆ ಸ್ವಲ್ಪ$ ಪ್ರಮಾಣದಲ್ಲಿ ಮಾದಕ ವಸ್ತು ಉಪಯೋಗಿಸಿದರೆ ಸಾಕಾಗುತ್ತಿತ್ತು. ಸಮಯ ಕಳೆದಂತೆ ಮೊದಲಿನ ಅನುಭವ ಪಡೆಯಲು ಸ್ವಲ್ಪ$ ಪ್ರಮಾಣದಲ್ಲಿ ಮಾದಕ ವಸ್ತು ಸಾಕಾಗುವುದಿಲ್ಲ. ಆತ ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತು ಉಪಯೋಗಿಸಬೇಕಾಗುತ್ತದೆ ಮತ್ತು ಹೆಚ್ಚಿನ ಸಾಂದ್ರತೆಯ ಮಾದಕ ವಸ್ತು ಬೇಕಾಗುತ್ತದೆ. ಉದಾ: ಮೊದಲಿಗೆ ವ್ಯಕ್ತಿಯೋರ್ವನಿಗೆ ಅರ್ಧ ಬಿಯರ್‌ ಸಾಕಾಗುತ್ತಿತ್ತು, ಆದರೆ ಸಮಯ ಕಳೆದಂತೆ ಆತ ಇದು ಏನೂ ಕಿಕ್‌ ನೀಡುತ್ತಿಲ್ಲ ಎಂದು ಪೂರ್ತಿ ಬಿಯರ್‌ ಕುಡಿಯಲಾರಂಭಿಸಿದ; ಅನಂತರ ಬಿಯರ್‌ ಕೂಡ ಕಿಕ್‌ ನೀಡುತ್ತಿಲ್ಲ ಎಂದು ಹಾರ್ಡ್‌ ಡ್ರಿಂಕ್‌ (ವ್ಹಿಸ್ಕಿ, ರಮ್‌, ಜಿನ್‌, ವೊಡಾ, ಇತ್ಯಾದಿ) ಆರಂಭಿಸಿದ. ಸಮಯ ಕಳೆದಂತೆ ಹಾರ್ಡ್‌ ಡ್ರಿಂಕ್‌ ಪ್ರಮಾಣವನ್ನು 2 ಪೆಗ್ಗಿನಿಂದ 3 ಪೆಗ್‌  (ಸಾಮಾನ್ಯವಾಗಿ ಬಳಸುವ ಮದ್ಯದ ಮಾಪನ, ಇದು 30, 60, 90 ಞl ಆಗಿರುತ್ತದೆ) ಮಾಡಿದ. ಅನಂತರ ಮಧ್ಯಾಹ್ನ ಕೂಡ ಕುಡಿಯಲು ಶುರುಮಾಡಿದ. ಇದನ್ನು ಸಹನಶಕ್ತಿಯೆಂದು ಹೇಳಲಾಗುತ್ತದೆ. ಅಂದರೆ ಸಮಯ ಕಳೆದಂತೆ ಮದ್ಯಪಾನದ ಸಲುವಾಗಿ ವ್ಯಕ್ತಿಯ ದೇಹದ/ಮೆದುಳಿನ ಸಹನಶಕ್ತಿ ಹೆಚ್ಚಾಗುತ್ತಾ ಹೋಗಿ ಮೊದಲಿನ ಕಿಕ್‌/ಪರಿಣಾಮ ಬರಲು ಹೆಚ್ಚಿನ ಪ್ರಮಾಣದಲ್ಲಿ ಮತ್ತು ಹೆಚ್ಚೆಚ್ಚು ಸಲ ಮಾದಕ ವಸ್ತು ಬೇಕಾಗುತ್ತದೆ. 

3. ವಿಥ್‌ಡ್ರಾವಲ್‌ ಸಿಂಪ್ಟಮ್ಸ: ಅಂದರೆ ಮಾದಕ ವಸ್ತುವಿನ ಉಪಯೋಗ ನಿಲ್ಲಿಸಿದ ಅನಂತರ ಕೆಲವು ದೈಹಿಕ ಮತ್ತು ಮಾನಸಿಕ ಲಕ್ಷಣಗಳು ಕಂಡುಬರುತ್ತವೆ. ಉದಾ. ದಿನಾ ಮಾದಕ ವಸ್ತು ತೆಗೆದುಕೊಳ್ಳುವ ವ್ಯಕ್ತಿ ಒಂದು ದಿನ ತೆಗೆದುಕೊಳ್ಳದಿದ್ದರೆ, ಆತನಿಗೆ ತಲೆ ಸುತ್ತುವುದು, ಮೈ ಬೆವರುವುದು, ಎದೆ ಡಬ-ಡಬ ಎಂದು ಬಡಿದುಕೊಳ್ಳುವುದು, ಗಾಬರಿಯಾಗುವುದು, ಕೈ-ಕಾಲು ನಡುಗುವುದು, ಹೊಟ್ಟೆ ನೋವಾಗುವುದು, ಕೆಲಸದ ಮೇಲೆ ಗಮನಕೊಡಲು ಕಷ್ಟವಾಗುವುದು, ಇತ್ಯಾದಿ ಲಕ್ಷಣಗಳು ಮಾದಕ ವಸ್ತುವಿಗೆ ತಕ್ಕಂತೆ ಕಂಡುಬರಲಾರಂಭಿಸುತ್ತವೆ.

4. ಮಾದಕ ವಸ್ತುವಿನ ಉಪಯೋಗದ ಮೇಲಿನ ಹತೋಟಿ ತಪ್ಪಿಹೋಗುವುದು: ವ್ಯಕ್ತಿಯು ತಾನು ಅಂದುಕೊಂಡದ್ದಕ್ಕಿಂತ ಹೆಚ್ಚಾಗಿ ಮಾದಕ ವಸ್ತುವನ್ನು ಉಪಯೋಗಿಸಲಾರಂಭಿಸುತ್ತಾನೆ, ಅದನ್ನು ನಿಯಂತ್ರಿಸಬೇಕೆಂದರೂ ಅದು ಆತನಿಂದ ಸಾಧ್ಯವಾಗುವುದಿಲ್ಲ. ಅಂದರೆ ವ್ಯಕ್ತಿಗೆ ಮಾದಕ ವಸ್ತುವಿನ ಉಪಯೋಗದ ಆರಂಭ, ಅದರ ಪ್ರಮಾಣ ಮತ್ತು ಅದನ್ನು ಎಷ್ಟರ ಮಟ್ಟಿಗೆ ನಿಲ್ಲಿಸಬೇಕು ಎನ್ನುವುದರ ಮೇಲೆ ನಿಯಂತ್ರಣವಿರುವುದಿಲ್ಲ. ಉದಾ. ವ್ಯಕ್ತಿಯು ಒಂದು ಪೆಗ್‌ ವ್ಹಿಸ್ಕಿ ಕುಡಿಯಬೇಕೆಂದು ದ‌ೃಢ ನಿರ್ಧಾರ ಮಾಡಿ ಹೋಗುತ್ತಾನೆ ಆದರೆ, ಅಲ್ಲಿ ಹೋದ ಮೇಲೆ ಅದು ಎರಡಾಗಿ ಅನಂತರ ಮೂರು ಪೆಗ್‌ ಆಗಿಬಿಡುತ್ತದೆ.
5. ವ್ಯಕ್ತಿಯ ಜೀವನವಿಡೀ ಮಾದಕ ವಸ್ತುವಿನ ಸುತ್ತವೇ ತಿರುಗಲಾರಂಭಿಸುತ್ತದೆ. ಸಮಯ ಕಳೆದಂತೆ ವ್ಯಕ್ತಿಯ ದಿನಚರಿ ಕೇವಲ ಮಾದಕ ವಸ್ತುವಿನಲ್ಲಿಯೇ ಮುಳುಗಿರುತ್ತದೆಯಲ್ಲದೇ ಆತನ ಎಲ್ಲ ಚಟುವಟಿಕೆಗಳು ಮಾದಕ ವಸ್ತುವಿಗೆ ಸಂಬಂಧಿಸಿದಂತೆ ಮಾರ್ಪಾಟಾಗುತ್ತವೆ. ಆತನ ಆಲೋಚನೆಗಳೆಲ್ಲವುಗಳೂ ಮಾದಕ ವಸ್ತುಗಳಿಗೆ ಸಂಬಂಧಪಟ್ಟಂತೆ ಇರುತ್ತವೆ. ಉದಾ. ಮಾದಕ ವಸ್ತು ಖರೀದಿಸುವ ಬಗ್ಗೆ, ಅದಕ್ಕಾಗಿ ಹಣ ಹೊಂದಿಸುವ ಬಗ್ಗೆ, ಇತ್ಯಾದಿ. ಕ್ರಮೇಣವಾಗಿ ವ್ಯಕ್ತಿಯು ತನ್ನ ಜೀವನದ ಎಲ್ಲಾ ಸಂತೋಷ ನೀಡುವ ಸನ್ನಿವೇಶಗಳನ್ನು / ಸಮಯವನ್ನು / ವ್ಯಕ್ತಿಗಳನ್ನು / ಕುಟುಂಬದವರನ್ನು/ ಸ್ನೇಹಿತರನ್ನು / ಆಟೋಟಗಳನ್ನು/ ದಿನಚರಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾನೆ.

ವ್ಯಸನಿಗಳೊಂದಿಗೆ ಮಾತನಾಡಿ
ನಿಮ್ಮ ಆತ್ಮೀಯರೊಬ್ಬರು ಈ ತೊಂದರೆಯಿಂದ ಬಳಲುತ್ತಿದ್ದಾರೆ ಎಂದನಿಸಿದರೆ ಅವರೊಟ್ಟಿಗೆ ನಿಮ್ಮ ಸಂಶಯವನ್ನು ಚರ್ಚಿಸಿ. ಆದರೆ, ಹೀಗೆ ಮಾಡುವಾಗ ಯಾವುದೇ ಟೀಕೆ ಅಥವಾ ವಿಮರ್ಶೆ ಮಾಡದೆ ನಿಮ್ಮ ಕಾಳಜಿಯನ್ನು ವ್ಯಕ್ತಪಡಿಸಿ. ಯಾಕೆಂದರೆ, ಈ ತೊಂದರೆಯನ್ನು ಬೇಗ ಗುರುತಿಸಿ ಬೇಗ ಚಿಕಿತ್ಸೆ ಮಾಡಿದಷ್ಟು ಒಳ್ಳೆಯದು. ನಿಮ್ಮ ಆತ್ಮೀಯರು ಇಲ್ಲ ನಾನು ಹಾಗೇನು ಮಾಡುತ್ತಿಲ್ಲ, ಸ್ವಲ್ಪವೇ ಮಾತ್ರ ಉಪಯೋಗಿಸುತ್ತಿದ್ದೇನೆ, ಕೆಲವೊಮ್ಮೆ ಮಾತ್ರ ಉಪಯೋಗಿಸುತ್ತಿದ್ದೇನೆ, ನಿಮಗ್ಯಾರು ಹೇಳಿದರು ಎಂದೆಲ್ಲ ಪ್ರತಿಕ್ರಿಯೆ ನೀಡಬಹುದು. ಅವುಗಳಿಗೆ ನೀವು ಸಿದ್ಧರಾಗಿರಬೇಕು.

ನಿಮ್ಮನ್ನು ಸುರಕ್ಷಿತವಾಗಿಟ್ಟುಕೊಳ್ಳಿ
ಕೆಲವೊಮ್ಮೆ ನಿಮ್ಮ ಆತ್ಮೀಯನಿಗೆ ನಿಮ್ಮ ಸಲಹೆ ಗೆಳೆತನ ಬೇಕಾಗದಿದ್ದರೂ, ಅವನ ತೊಂದರೆಯನ್ನು ನಿಮ್ಮದೇ ತೊಂದರೆಯೆಂದು ತಿಳಿದು ಬಗೆಹರಿಸಲು ಆವಶ್ಯಕತೆಗಿಂತ ಹೆಚ್ಚು ಪ್ರಯತ್ನಪಡುವುದು ಬೇಡ. ಯಾಕೆಂದರೆ, ಕೆಲವೊಮ್ಮೆ ಇದು ಅಹಿತಕರ ಅನುಭವಗಳೊಂದಿಗೆ ಶುರುವಾಗಿ ಅನಾವಶ್ಯಕ ತೊಂದರೆಗಳಿಗೆ ದಾರಿಮಾಡಿಕೊಡುತ್ತದೆ. ಆದುದರಿಂದ ಆದಷ್ಟು ತಮ್ಮ ಮಿತಿಯಲ್ಲಿದ್ದುಕೊಂಡೇ ನಿಮ್ಮ ಆತ್ಮೀಯನೊಟ್ಟಿಗೆ ವ್ಯವಹರಿಸಿ.

ತನ್ನದೇ ತಪ್ಪೆಂದು ಒದ್ದಾಡಬೇಡಿ
ತನ್ನ ಆತ್ಮೀಯ ಈ ಸ್ಥಿತಿಗೆ ಬರಲು ತಾನೇ ಕಾರಣನೆಂದು ನೊಂದುಕೊಳ್ಳುವ ಅಗತ್ಯವಿಲ್ಲ. ನೀವು ಆತನಿಗೆ ಇದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹೇಳಿ ಸಹಾಯ ಮಾಡಬಹುದೇ ಹೊರತು ಆತನನ್ನು ಒತ್ತಾಯಪೂರ್ವಕ ಬದಲಾಯಿಸಲು ಆಗುವುದಿಲ್ಲ. ಆದುದರಿಂದ, ಇದು ನನ್ನ ವೈಫ‌ಲ್ಯ, ನನ್ನ ಬೇಜವಾಬ್ದಾರಿ ಎಂದುಕೊಳ್ಳುವ ಆವಶ್ಯಕತೆಯಿಲ್ಲ.

ಈ ಕೆಳಗಿದ್ದನ್ನು ಮಾಡಬೇಡಿ
– ವ್ಯಕ್ತಿಯನ್ನು ಶಿಕ್ಷಿಸುವುದು, ಬಯ್ಯುವುದು, ಅವಹೇಳನ ಮಾಡುವುದು, ಹೆದರಿಸುವುದು, ಉಪದೇಶ ನೀಡುತ್ತಾ ಹೋಗುವುದು.
– ಭಾವನಾತ್ಮಕ ವಿಷಯಗಳನ್ನು ಮಧ್ಯ ತುರುಕಬೇಡಿ. ಇದರಿಂದಾಗಿ ವ್ಯಕ್ತಿಯ ತಪ್ಪಿತಸ್ಥ ಮನೋಭಾವನೆ ಇನ್ನಷ್ಟು ಹೆಚ್ಚಾಗಿ ಅಥವಾ ಸಿಟ್ಟು ಹೆಚ್ಚಾಗಿ ಆತ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತು ಬಳಸಬಹುದು.
– ವ್ಯಕ್ತಿಯ ಋಣಾತ್ಮಕ ನಡವಳಿಕೆ ಗಳಿಂದಾಗುವ ತೊಂದರೆಗಳಿಂದ ಅವರನ್ನು ರಕ್ಷಿಸುವುದು.
– ವ್ಯಕ್ತಿಯ ಕೈಯಿಂದ ಆಗುತ್ತಿಲ್ಲವೆಂದು, ಅವರ ಜವಾಬ್ದಾರಿಗಳನ್ನೆಲ್ಲ ನೀವೇ ವಹಿಸಿಕೊಂಡುಬಿಡುವುದು.
– ಅವರ ಮಾದಕ ವಸ್ತುಗಳನ್ನು ಮುಚ್ಚಿಡುವುದು ಅಥವಾ ಎಸೆದುಬಿಡುವುದು. ಈ ತರಹ ಮಾಡಿದರೆ, ನಿಮ್ಮ ನಡುವಿನ ನಂಬಿಕೆ ಅಳಿದುಹೋಗುತ್ತದೆಯಲ್ಲದೇ ನಿಮ್ಮ ನಡುವೆ ಋಣಾತ್ಮಕ ಭಾವನೆಗಳು ಬೆಳೆಯತೊಡಗುತ್ತವೆ.
– ವ್ಯಕ್ತಿಯು ಮಾದಕ ವಸ್ತುವಿನ ಮತ್ತಿನಲ್ಲಿರುವಾಗ/ ಅಮಲಿನಲ್ಲಿರುವಾಗ ಅವರೊಟ್ಟಿಗೆ ವಾದ-ವಿವಾದಕ್ಕಿಳಿಯುವುದು.
– ಅವರ ಪರಿಸ್ಥಿತಿಯನ್ನು ಕಂಡು ಸಹಾನುಭೂತಿಗಾಗಿ ಅವರೊಟ್ಟಿಗೆ ನೀವೂ ಕೂಡ ಮಾದಕ ವಸ್ತು ಸೇವಿಸುವುದು.
– ಅವರ ನಡವಳಿಕೆಗೆ ನೀವು ಜವಾಬ್ದಾರಿ ತೆಗೆದುಕೊಳ್ಳುವುದು.

ನೆನಪಿಡಿ: ಮಾದಕ ವಸ್ತುಗಳ ಚಟದಿಂದ ಹೊರಬರಲು ವ್ಯಕ್ತಿಗೆ ತನ್ನ ಕುಟುಂಬದ, ಸ್ನೇಹಿತರ, ಸಹೋದ್ಯೋಗಿಗಳ, ಸಮಾಜದ, ವೈದ್ಯರ, ಎಲ್ಲರ ಸಹಕಾರ ಅಗತ್ಯವಾಗಿರುತ್ತದೆ. ಹೀಗಾಗಿ ಆತನ ಈ ಸಹಕಾರ ವ್ಯವಸ್ಥೆ ಒಡೆಯದಂತೆ ಮುಂಜಾಗ್ರತೆ ವಹಿಸಬೇಕು. ವ್ಯಕ್ತಿಯು ಚಟಕ್ಕೊಳಗಾಗುತ್ತಿದ್ದಾನೆಂದು ಅರಿತುಕೊಂಡು ಆತನ ಮನೆಯವರು/ ಸ್ನೇಹಿತರು ವ್ಯಕ್ತಿಯನ್ನು ಮಾನಸಿಕ ರೋಗ ತಜ್ಞರ ಹತ್ತಿರ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಬೇಕು. ಇದಕ್ಕೆ ಸೂಕ್ತ ಚಿಕಿತ್ಸೆ ನೀಡಿ, ತೊಂದರೆ ಮುಂದುವರಿಯದಂತೆ ಹಾಗೂ ಮರುಕಳಿಸದಂತೆ ಮಾರ್ಗದರ್ಶನ ನೀಡಲಾಗುತ್ತದೆ.

ಮಾದಕ ವಸ್ತುಗಳ ಚಟದ ಚಿಕಿತ್ಸೆಗಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮನೋರೋಗ ಚಿಕಿತ್ಸಾ ವಿಭಾಗದಲ್ಲಿ ಪ್ರತ್ಯೇಕ ಘಟಕವನ್ನು ಮಾಡಲಾಗಿದೆ. ಪ್ರತೀ ಬುಧುವಾರ ಮತ್ತು ಶನಿವಾರ (ಮೂರನೆಯ ಶನಿವಾರ ಹೊರತುಪಡಿಸಿ), ಮನೋರೋಗ ಚಿಕಿತ್ಸಾ ವಿಭಾಗದ ಓ.ಪಿ.ಡಿ.ಯಲ್ಲಿ  ನುರಿತ ತಜ್ಞ ಮನೋವೈದ್ಯರು ಲಭ್ಯರಿರುತ್ತಾರೆ ಹಾಗೂ ಅಡ್ಮಿಶನ್‌ ಸೌಲಭ್ಯ ಕೂಡ ಇರುತ್ತದೆ.

ತಿಳಿದೂ ಮಾಡುವ ತಪ್ಪು
ಮಾದಕ ವಸ್ತುವಿನಿಂದ ತನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿಯಾಗುತ್ತದೆಯೆಂದು ಗೊತ್ತಿದ್ದರೂ/ ಆ ಹಾನಿಯನ್ನು ಅನುಭವಿಸುತ್ತಿದ್ದರೂ ಅದರ ಬಳಕೆ ಮುಂದುವರಿಸುತ್ತಾರೆ. ಉದಾ.  ಮದ್ಯಪಾನದಿಂದ ಲಿವರ್‌ ಹಾಳಾಗಿ ಜಾಂಡೀಸ್‌ (ಕಾಮಾಲೆ ರೋಗ) ಆಗಿದ್ದರೂ ಮದ್ಯಪಾನವನ್ನು ಮುಂದುವರಿಸುವುದು; ಒಂದು ಸಲ ಗಾಂಜಾ ಸೇವನೆಯಿಂದ ಚಿತ್ತಭ್ರಮೆಯಾಗಿ ಏನೇನೋ ವಿಚಿತ್ರ ಅನುಭವಗಳಾಗಿ ಚಿಕಿತ್ಸೆಗಾಗಿ ವಾರಗಟ್ಟಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಅನಂತರವೂ ಪುನಃ ಗಾಂಜಾ ಸೇದುವುದು, ಸಿಗರೇಟ್‌ ಸೇದುವುದರಿಂದ ಹಾರ್ಟ್‌ ಅಟ್ಯಾಕ್‌ (ಹೃದಯಾಘಾತ) ಆಗಿದ್ದರೂ ಸಿಗರೇಟ್‌ ಸೇದುವುದನ್ನು ಮುಂದುವರಿಸುವುದು, ಇತ್ಯಾದಿ.

ಮನೆಯವರು/ಸ್ನೇಹಿತರು ಗುರುತಿಸುವುದು ಹೇಗೆ?
ಹೆಚ್ಚಿನ ಮಾದಕ ವಸ್ತುಗಳ ವ್ಯಸನಿಗಳು ಆ ಬಗ್ಗೆ ಯಾರಿಗೂ ಹೇಳದೇ  ಗೌಪ್ಯವಾಗಿಟ್ಟಿರುತ್ತಾರೆ. ಯಾರು ಕೇಳಿದರೂ ಹಾಗೇನಿಲ್ಲ ಎಂದು ವಿಷಯವನ್ನು ತಳ್ಳಿಹಾಕುತ್ತಾರೆ ಅಥವಾ ತಾನು ಸ್ವಲ್ಪ ಪ್ರಮಾಣದಲ್ಲೇ ಉಪಯೋಗಿಸುತ್ತಿದ್ದು ಅದರಿಂದ ತೊಂದರೆಯೇನಿಲ್ಲ ಎಂದು ಮಾತು ಮುಗಿಸಿಬಿಡುತ್ತಾರೆ. ಆದರೆ ಮನೆಯವರಿಗೆ ಅಥವಾ ಸ್ನೇಹಿತರಿಗೆ ತಮಗೆ ಬೇಕಾದ ವ್ಯಕ್ತಿಯೊಬ್ಬ ಮಾದಕ ವಸ್ತುಗಳನ್ನು ಉಪಯೋಗಿಸುತ್ತಿದ್ದಾನೆ ಎಂಬ ಸಂಶಯವಿದ್ದರೆ, ಈ ಕೆಳಗೆ ನಮೂದಿಸಿದ ಕೆಲವು ಮುನ್ಸೂಚನೆಗಳು/ಲಕ್ಷಣಗಳು ಈ ಸಂಶಯವನ್ನು ದೃಢೀಕರಿಸಿಕೊಳ್ಳಲು ಸಹಾಯಕವಾಗುವುವು:

1. ದೈಹಿಕ ಮುನ್ಸೂಚನೆಗಳು/ ಲಕ್ಷಣಗಳು
– ಕಣ್ಣು ಯಾವಾಗಲೂ ಕೆಂಪಾಗಿರುವುದು, ಕಣ್ಣಿನ ಬೊಂಬೆ (ಪ್ಯುಪಿಲ್‌) ಸಹಜ ಗಾತ್ರಕ್ಕಿಂತ ದೊಡ್ಡದಾಗಿರುವುದು ಅಥವಾ ಚಿಕ್ಕದಾಗಿರುವುದು.
– ವ್ಯಕ್ತಿಯ ಹಸಿವೆ ಮತ್ತು ನಿದ್ದೆಯ ಮಾದರಿಯಲ್ಲಿ/ ದಿನಚರಿಯಲ್ಲಿ ಬದಲಾವಣೆಗಳಾಗುವುದು. ವೇಗವಾಗಿ ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು.
– ವ್ಯಕ್ತಿಯ ಸ್ವರೂಪ, ಅಲಂಕಾರ, ಉಡುಗೆ- ತೊಡುಗೆಗಳು ದಿನಕಳೆದಂತೆ ಹದಗೆಡುವುದು.
– ಬಟ್ಟೆಗಳಿಂದ, ಬಾಯಿಂದ ಅಥವಾ ದೇಹದಿಂದ ಅಸಹಜ ವಾಸನೆ ಬರುವುದು.
– ಮಾತು ತೊದಲುವುದು, ನಡೆಯುವಾಗ ಆಚೀಚೆ ವಾಲುವುದು, ಕೈ-ಕಾಲು ನಡುಗುವುದು.

2. ನಡವಳಿಕೆ ಮುನ್ಸೂಚನೆಗಳು/ ಲಕ್ಷಣಗಳು
– ಶಾಲೆಯ/ಕಾಲೇಜಿನ ಹಾಜರಾತಿ ಯಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಾ ಬರುವುದು.
– ಯಾವುದೇ ಕಾರಣ ಕೊಡದೇ ಪದೇ-ಪದೇ ಹಣದ ಆವಶ್ಯಕತೆಯಿದೆಯೆಂದು ಹಣ ಕೇಳುವುದು; ಕೆಲವೊಮ್ಮೆ ಹಣ ಕೊಡದಿದ್ದರೆ, ಕದಿಯುವುದು, ಸಾಲ ಮಾಡುವುದು.
– ಸಂಶಯಾತ್ಮಕ ಅಥವಾ ಗೌಪ್ಯ ರೀತಿಯಲ್ಲಿ ನಡೆದುಕೊಳ್ಳುವುದು.
– ಕ್ಷಿಪ್ರಗತಿಯಲ್ಲಿ ಗೆಳೆಯರ ಗುಂಪಿನಲ್ಲಿ, ಹವ್ಯಾಸಗಳಲ್ಲಿ, ಸಮಯ ಕಳೆಯುವ ಸ್ಥಳಗಳಲ್ಲಿ ಬದಲಾವಣೆಯಾಗುವುದು.
– ಪದೇ-ಪದೇ ತೊಂದರೆಗಳಿಗೀಡಾಗುವುದು: ಜಗಳಗಳು, ಆಕ್ಸಿಡೆಂಟ್‌, ಅಕ್ರಮ (ಕಾನೂನು ಬಾಹಿರ) ಚಟುವಟಿಕೆಗಳು.

3. ಮಾನಸಿಕ ಮುನ್ಸೂಚನೆಗಳು/ ಲಕ್ಷಣಗಳು
– ಯಾವುದೇ ಕಾರಣವಿರದೇ ವ್ಯಕ್ತಿತ್ವದಲ್ಲಿ ಮತ್ತು ಮನೋವೃತ್ತಿಯಲ್ಲಿ ಬದಲಾವಣೆಯಾಗುವುದು.
– ವೇಗವಾಗಿ ಮನಃಸ್ಥಿತಿ ಬದಲಾಗುವುದು, ಸಿಟ್ಟಾಗುವುದು, ಸಿಡಿಮಿಡಿಗೊಳ್ಳುವುದು.
– ಕೆಲವೊಮ್ಮೆ ಅಸಹಜವಾಗಿ ಅತಿಯಾಗಿ ಚುರುಕಾಗಿರುವುದು, ಸಿಟ್ಟಾಗುವುದು.
– ಜೀವನದಲ್ಲಿ ಏನೂ ಪ್ರೇರಣೆಯಿರದಂತಿರುವುದು, ಎಲ್ಲೋ ಏನೋ ಆಲೋಚಿಸುತ್ತಾ ಕುಳಿತುಕೊಳ್ಳುವುದು.
– ಯಾವುದೇ ಕಾರಣವಿಲ್ಲದೆ ಸಂಶಯಪಡುವುದು, ಗಾಬರಿಯಾಗುವುದು, ಹೆದರಿಕೊಳ್ಳುವುದು, ಒಬ್ಬೊಬ್ಬರೇ ಮಾತಾಡಿಕೊಳ್ಳುವುದು.

ಈ ಮೇಲಿನ ಲಕ್ಷಣಗಳು ಕಂಡುಬಂದರೆ, ಆ ವ್ಯಕ್ತಿಗೆ ಮಾದಕ ವಸ್ತುವಿನ ಚಟವಿರಬಹುದೆಂದು ಊಹಿಸಬಹುದು. ಆದರೆ ಅನಂತರ ಮುಂದು ವರಿಯುವುದು ಹೇಗೆ ಎನ್ನುವುದು ತಿಳಿದುಕೊಳ್ಳುವುದು ಅತ್ಯಗತ್ಯ. ವ್ಯಕ್ತಿಯೋರ್ವ ಮಾದಕ ವಸ್ತು ಉಪಯೋಗಿಸುತ್ತಿದ್ದಾನೆ ಎಂಬ ಸಂಶಯವಿದ್ದರೆ, ಮನೆಯವರು ಮತ್ತು ಸ್ನೇಹಿತರು ಈ ಲೇಖನದಲ್ಲಿ ತಿಳಿಸಿರುವ ಸಲಹೆಗಳನ್ನು ಅನುಸರಿಸಬಹುದು.

– ಡಾ| ರವೀಂದ್ರ ಮುನೋಳಿ

(ಮುಂದುವರಿಯುತ್ತದೆ)

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ವಿಶ್ವಾದ್ಯಂತ ಪ್ರತೀ ವರ್ಷ 15 ಮಿಲಿಯನ್‌ ಅವಧಿಪೂರ್ವ ಶಿಶುಗಳ ಜನನವಾಗುತ್ತಿದೆ. ಅಂದರೆ ಜನಿಸುವ ಪ್ರತೀ ಹತ್ತು ಶಿಶುಗಳಲ್ಲಿ ಒಂದು ಅವಧಿಪೂರ್ವ ಜನಿಸಿದ್ದಾಗಿರುತ್ತದೆ....

  • ಗಂಗಮ್ಮ 76 ವರ್ಷದವರು. ಮನೆಯ ಹೊಸ ಗ್ರಾನೈಟ್‌ ನೆಲದಲ್ಲಿ ಕಾಲು ಜಾರಿ ಉಳುಕಿದಂತಾಯಿತು. ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಸೊಂಟದ ಕೀಲಿನ ಬಳಿ ಮೂಳೆ ಮುರಿತ ಪತ್ತೆ....

  • ಕಿವಿ ಕೇಳದೆ ಇರುವ ಮಗು ಶಾಲೆಯಲ್ಲಿ ಇದ್ದರೆ ಶಿಕ್ಷಕ/ಶಿಕ್ಷಕಿಯರಿಗೆ ತಾನು ಆ ಮಗುವಿಗೆ ಹೇಗೆ ಕಲಿಸಲಿ ಎಂದು ಪ್ರಶ್ನೆ ಏಳುವುದು ಸಹಜ. ಅದ‌ರ ಜತೆ ಹೇಗೆ ಸಂಭಾಷಣೆ...

  • ಮನುಷ್ಯರಲ್ಲಿ ಕಂಡುಬರುವ ಶೇ.60ರಷ್ಟು ಸಾಂಕ್ರಾಮಿಕ ರೋಗಗಳು ಪ್ರಾಣಿಗಳಿಂದ, ಪ್ರಾಣಿ ಮೂಲಗಳಿಂದ ಹರಡುವಂಥವು. ನಮಗೆ ತಿಳಿದಂತೆ ಮಾನವ-ಪರಿಸರ-ಪ್ರಾಣಿಗಳ ನಡುವೆ ಸದಾ...

  • ಸಂಧಿವಾತವು ಶರೀರದ ಕೀಲುಗಳ (ಕೀಲು = ಸಂಧು) ಮೇಲೆ ಪರಿಣಾಮ ಉಂಟುಮಾಡುವ ಒಂದು ರೋಗಲಕ್ಷಣವಾಗಿದ್ದು, ವಯಸ್ಸಾದಂತೆ ತೀವ್ರವಾಗುತ್ತದೆ. ಕೂದಲು ಉದುರುವಂತೆ, ನರೆದಂತೆ,...

ಹೊಸ ಸೇರ್ಪಡೆ