ದೀರ್ಘ‌ಕಾಲಿಕ ರುಮಾಟಿಕ್‌ ನಿರೋಧಕ ಔಷಧ ಸೇವನೆಯನ್ನು ಏಕೆ ಅನುಸರಿಸಬೇಕು?

ರುಮಟಾಲಜಿ

Team Udayavani, Sep 8, 2019, 5:15 AM IST

ನಾನು ನನ್ನ ವೈದ್ಯಕೀಯ ವೃತ್ತಿಯಲ್ಲಿ ಎದುರಿಸುವ ಪ್ರಶ್ನೆಗಳಲ್ಲಿ ಅತ್ಯಂತ ಸಾಮಾನ್ಯವಾದುದು: “ಡಾಕ್ಟರ್‌, ನೀವು ಶಿಫಾರಸು ಮಾಡಿರುವ ಈ ಔಷಧಗಳನ್ನು ಸೇವಿಸಿದರೆ ಅಡ್ಡ ಪರಿಣಾಮಗಳು ಉಂಟಾಗಲಾರವೇ?’ ರೋಗಿಯು ಔಷಧಗಳನ್ನು ವಿಶ್ವಾಸದಿಂದ ಸೇವಿಸುವುದಕ್ಕಾಗಿ ಈ ಪ್ರಶ್ನೆಗೆ ವೈದ್ಯರು ಉತ್ತರಿಸಲೇ ಬೇಕಾಗಿದೆ. ಈ ಸನ್ನಿವೇಶವನ್ನು ಇನ್ನಷ್ಟು ಆಳವಾಗಿ ವಿಶ್ಲೇಷಿಸುವುದಕ್ಕಾಗಿ ಔಷಧಗಳ ಕೆಲವು ಅಂಶಗಳು ಮತ್ತು ಆಯಾಮಗಳನ್ನು ನಾವು ಪರಿಶೀಲಿಸೋಣ.

ಯಾವುದೇ ನಿರ್ದಿಷ್ಟ ಕಾಯಿಲೆಗಾಗಿ ವ್ಯಕ್ತಿಯೋರ್ವ ಬಳಸುವ ಔಷಧವು ಪ್ರಧಾನವಾಗಿ ಎರಡು ವಿಧವಾದ ಪರಿಣಾಮಗಳನ್ನು ಉಂಟು ಮಾಡುತ್ತದೆ. ಒಂದನೆಯದು, ಕಾಯಿಲೆಗೆ ಚಿಕಿತ್ಸೆ ನೀಡುವಲ್ಲಿ ಪ್ರಯೋಜನಕಾರಿಯಾದ ಚಿಕಿತ್ಸಾತ್ಮಕ ಪರಿಣಾಮ (ಅಪೇಕ್ಷಿತ ಪರಿಣಾಮ). ಎರಡನೆಯದು, ಕಾಯಿಲೆಗೆ ಚಿಕಿತ್ಸೆ ನೀಡುವಲ್ಲಿ ಒಳಗೊಂಡಿಲ್ಲದ, ಔಷಧದ ಇತರ ಕ್ರಿಯಾತ್ಮಕತೆಗಳಿಗೆ ಸಂಬಂಧಿಸಿದ ಪರಿಣಾಮ. ಇಂತಹ ಕ್ರಿಯಾತ್ಮಕತೆಗಳಲ್ಲಿ ಕೆಲವು ಕಾಯಿಲೆಗೆ ಚಿಕಿತ್ಸೆ ನೀಡುವುದಕ್ಕೆ ಅನಗತ್ಯವಾದ ಪರಿಣಾಮಗಳನ್ನು ಉಂಟು ಮಾಡುತ್ತವೆ. ಇಂತಹ ಪರಿಣಾಮಗಳನ್ನು ರೋಗಿಯು “ಅಡ್ಡ ಪರಿಣಾಮ’ ಎಂಬುದಾಗಿ ಕರೆಯುತ್ತಾರೆ.

ದೀರ್ಘ‌ಕಾಲಿಕ ರುಮಾಟಿಕ್‌ ಕಾಯಿಲೆಗಳಿಗೆ ನೀಡುವ ದೀರ್ಘ‌ಕಾಲಿಕ ಚಿಕಿತ್ಸೆಯನ್ನು ಚಾಚೂ ತಪ್ಪದೆ ಅನುಸರಿಸುವುದು ಏಕೆ ಅಗತ್ಯ ಎಂಬುದನ್ನು ವಿವರಿಸುವುದಕ್ಕೆ ಮುನ್ನ ಔಷಧಗಳಿಗೆ ಸಂಬಂಧಿಸಿ ಇನ್ನೂ ವಿಚಾರಗಳನ್ನು ಗಮನಿಸೋಣ.

ಫಾರ್ಮಕಾಲಜಿ ಎಂಬುದು ಔಷಧಗಳ ಬಳಕೆ, ಪರಿಣಾಮಗಳು ಮತ್ತು ಅವುಗಳ ಕ್ರಿಯಾತ್ಮಕತೆಯ ಬಗೆಗಳಿಗೆ ಸಂಬಂಧಿಸಿದ ವೈದ್ಯವಿಜ್ಞಾನದ ಒಂದು ಅಂಗವಾಗಿದೆ.

ಔಷಧದ ಜತೆಗೆ ದೇಹವು ಹೇಗೆ ವರ್ತಿಸುತ್ತದೆ ಎಂಬುದನ್ನು ವಿವರಿಸುವುದು ಫಾರ್ಮಕೋಕೈನೆಟಿಕ್ಸ್‌. ಅಂದರೆ, ಔಷಧವು ದೇಹವನ್ನು ಪ್ರವೇಶಿಸುವುದು, ದೇಹದೊಳಗೆ ಚಲಿಸುವುದು ಮತ್ತು ದೇಹದಿಂದ ಹೊರಹೋಗುವುದು – ಔಷಧ ದೇಹದಲ್ಲಿ ಹೀರಿಕೆಯಾಗುವುದು, ದೇಹ ಔಷಧದಲ್ಲಿ ಏನನ್ನು ಸ್ವೀಕರಿಸುತ್ತದೆ, ದೇಹದಲ್ಲಿ ಅದರ ಹಂಚಿಕೆ, ಚಯಾಪಚಯ ಕ್ರಿಯೆಯ ಜತೆಗೆ ವರ್ತನೆ ಮತ್ತು ವಿಸರ್ಜನೆ – ಇವಿಷ್ಟೂ ಅಂಶಗಳೇ ಫಾರ್ಮಕೋಕೈನೆಟಿಕ್ಸ್‌.

ದೇಹವು ಸೇವಿಸಿದ ಔಷಧದಲ್ಲಿ ಏನನ್ನು ಸ್ವೀಕರಿಸುತ್ತದೆ ಅಥವಾ ಬಯೋಅವೇಲೆಬಲಿಟಿ ಎಂದರೆ ದೇಹಕ್ಕೆ ನೀಡಿದ ಬಳಿಕ ಔಷಧ ಅಥವಾ ಇತರ ವಸ್ತುಗಳಲ್ಲಿ ನಮ್ಮ ದೇಹದ ರಕ್ತ ಪರಿಚಲನೆಯನ್ನು ಸೇರುವ ಮತ್ತು ಸಕ್ರಿಯ ಪರಿಣಾಮವನ್ನು ಬೀರುವ ಅಂಶ.

ಹಂಚಿಕೆ ಅಥವಾ ವಿತರಣೆ ಯಾ ಡಿಸ್ಟ್ರಿಬ್ಯೂಶನ್‌ ದೇಹದೊಳಗೆ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಔಷಧದ ವರ್ಗಾವಣೆಯನ್ನು ವಿವರಿಸುತ್ತದೆ.

ಬಹುತೇಕ ಔಷಧಗಳನ್ನು ಪಿತ್ತಕೋಶವು ಚಯಾಪಚಯ ಕ್ರಿಯೆಗೆ ಒಳಪಡಿಸುತ್ತದೆ ಮತ್ತು ಮೂತ್ರಪಿಂಡವು ಅವನ್ನು ವಿಸರ್ಜಿಸುತ್ತದೆ.

ಔಷಧವು ದೇಹದಲ್ಲಿ ಏನು ಮಾಡುತ್ತದೆ ಎಂಬುದನ್ನು ಫಾರ್ಮಕೋಡೈನಾಮಿಕ್ಸ್‌ ವಿವರಿಸುತ್ತದೆ.

ಯಾವುದೇ ಒಂದು ಔಷಧವನ್ನು ತೆಗೆದುಕೊಂಡದ್ದರಿಂದ ಉಂಟಾದ ಹಾನಿಯನ್ನು ಔಷಧದ ನೇತ್ಯಾತ್ಮಕ ವರ್ತನೆ ಅಥವಾ ಅಡ್ವರ್ಸ್‌ ಡ್ರಗ್‌ ರಿಯಾಕ್ಷನ್‌ – ಎಡಿಎರ್‌ ಎಂಬುದಾಗಿ ಕರೆಯಲಾಗುತ್ತದೆ. ಎಡಿಆರ್‌ಗಳು ಯಾವುದೇ ಒಂದು ಔಷಧದ ಒಂದು ಡೋಸ್‌ನಿಂದ ಉಂಟಾಗಿರಬಹುದು; ಅಥವಾ ಅದನ್ನು ದೀರ್ಘ‌ಕಾಲ ತೆಗೆದುಕೊಂಡದ್ದರಿಂದ ಆಗಿರಬಹುದು ಯಾ ಎರಡು ಅಥವಾ ಹೆಚ್ಚು ಔಷಧಗಳನ್ನು ಸಂಯೋಜಿತವಾಗಿ ತೆಗೆದುಕೊಂಡದ್ದರಿಂದ ಉಂಟಾಗಬಹುದು. ದೈಹಿಕ, ಮಾನಸಿಕ ಹಾನಿಗಳು ಮತ್ತು ಕ್ರಿಯಾತ್ಮಕತೆ ನಷ್ಟ ಸಹಿತ ಔಷಧ ಉಪಯೋಗದಿಂದ ಉಂಟಾದ ಯಾವುದೇ ಹಾನಿ ಇದರಲ್ಲಿ ಒಳಗೊಳ್ಳುತ್ತದೆ. ಔಷಧೀಯ ಪ್ರಮಾದಗಳಿಗೆ ಹೋಲಿಸಿದರೆ ಎಡಿಆರ್‌ ರೋಗಿಗೆ ಹಾನಿಯುಂಟಾಗುವ ಹೆಚ್ಚು ನೇರವಾದ ವಿಧಾನವಾಗಿದೆ.

ಅಡ್ಡ ಪರಿಣಾಮಗಳು ಬಹುತೇಕ ತಾತ್ಕಾಲಿಕವಾಗಿದ್ದು, ಆಗಾಗಲೇ ಪರಿಹಾರ ಕಾಣುತ್ತವೆ. ಆದರೆ ನೇತ್ಯಾತ್ಮಕ ವರ್ತನೆಗಳು ದೀರ್ಘ‌ಕಾಲ ಉಳಿಯುವವಾಗಿದ್ದು, ಚಿಕಿತ್ಸೆ ಅಗತ್ಯವಾಗುತ್ತದೆ. ನೇತ್ಯಾತ್ಮಕ ವರ್ತನೆಯು ಅನಪೇಕ್ಷಿತ ಪರಿಣಾಮವಾಗಿದ್ದು, ಸಾಮಾನ್ಯವಾಗಿ ಅತ್ಯಂತ ಹಾನಿಕರವಾಗಿರುತ್ತದೆ.

ಅಡ್ಡ ಪರಿಣಾಮಗಳು ಔಷಧದ ಚಿಕಿತ್ಸಾತ್ಮಕ ಕ್ರಿಯೆಗಳಿಗೆ ಸಂಬಂಧಿಸಿದವಾಗಿದ್ದರೆ ನೇತ್ಯಾತ್ಮಕ ಪರಿಣಾಮಗಳು ಹಾಗಿರುವುದಿಲ್ಲ.

ಔಷಧ ನೇತ್ಯಾತ್ಮಕ ವರ್ತನೆಗಳಲ್ಲಿ ಶೇ.80ರಷ್ಟು ಟೈಪ್‌ ಎ ರಿಯಾಕ್ಷನ್‌ಗಳಾಗಿರುತ್ತವೆ. ಇವು ಔಷಧದ ಪ್ರಾಥಮಿಕ ಫಾರ್ಮಕಾಲೊಜಿಕಲ್‌ ಪರಿಣಾಮ (ಉದಾಹರಣೆಗೆ, ಆ್ಯಂಟಿ ಕೊಆಗ್ಯುಲೆಂಟ್‌ ವಾಫ‌ìರಿನ್‌ ಔಷಧ ಉಪಯೋಗಿಸಿದಾಗ ರಕ್ತಸ್ರಾವ ಉಂಟಾಗುವುದು)ದಿಂದ ಅಥವಾ ಕಡಿಮೆ ಚಿಕಿತ್ಸಾತ್ಮಕ ಸೂಚಿ (ಔಷಧವು ಅಪೇಕ್ಷಿತ ಚಿಕಿತ್ಸಾತ್ಮಕ ಪರಿಣಾಮವನ್ನು ಉಂಟುಮಾಡುವ ಪ್ರಮಾಣ, ಇದಕ್ಕಿಂತ ಹೆಚ್ಚಿದರೆ ಅದು ವಿಷಕಾರಿ ಪರಿಣಾಮವನ್ನು ಉಂಟು ಮಾಡುತ್ತದೆ) ಗಳಿಂದ ಉಂಟಾಗುತ್ತವೆ. ಹೀಗಾಗಿ ಇವುಗಳನ್ನು ನಿರೀಕ್ಷಿಸಬಹುದಾಗಿದೆ. ಡೈಗಾಕ್ಸಿನ್‌ನಿಂದ ಹೊಟ್ಟೆ ತೊಳೆಸುವಿಕೆ ಉಂಟಾಗುವುದು ಇದಕ್ಕೊಂದು ಉದಾಹರಣೆ.

ಈಡಿಯೋಸಿಂಕ್ರಾಟಿಕ್‌ ಡ್ರಗ್‌ ರಿಯಾಕ್ಷನ್‌ಗಳನ್ನು ಟೈಪ್‌ ಬಿ ರಿಯಾಕ್ಷನ್‌ ಎಂದೂ ಕರೆಯುತ್ತಾರೆ. ಜನರಲ್ಲಿ ಈ ನೇತ್ಯಾತ್ಮಕ ಪರಿಣಾಮಗಳಶು ಅಪರೂಪವಾಗಿ ಮತ್ತು ಊಹಿಸಲಾಗದಂತೆ ಉಂಟಾಗುತ್ತವೆ. ಈ ಪರಿಣಾಮಗಳಿಗೂ “ಕಾರಣ ರಹಿತ ಅಥವಾ ಸ್ವಯಂಜನ್ಯ’ ಎಂಬರ್ಥದ ಈಡಿಯೋಪಾಥಿಕ್‌ ಪದಕ್ಕೂ ಸಂಬಂಧವಿಲ್ಲ. ಈ ಪರಿಣಾಮಗಳು ಔಷಧದ ಪ್ರಮಾಣವನ್ನು ಅವಲಂಬಿಸಿಲ್ಲ.

ಔಷಧ ಅಂದರೇನು?
ಇದಕ್ಕೆ ಹೀಗೆ ಉತ್ತರ ನೀಡಬಹುದು: ಉಸಿರಿನ ಮೂಲಕ ಎಳೆದುಕೊಂಡು, ಇಂಜೆಕ್ಷನ್‌ ಮೂಲಕ ಚುಚ್ಚಿ, ಪುಡಿಯಾಗಿ ಸೇವಿಸಿ, ಹೊಟ್ಟೆಗೆ ಸೇವಿಸಿ, ಚರ್ಮದ ಮೇಲಿನ ಪಟ್ಟಿಯ ಮೂಲಕ ಹೀರಿಕೊಂಡು ಅಥವಾ ನಾಲಗೆಯಡಿ ಕರಗಿಸುವ ಮೂಲಕ ಸ್ವೀಕರಿಸಿ ದೇಹಶಾಸ್ತ್ರೀಯ ಬದಲಾವಣೆಗೆ ಕಾರಣವಾಗುವ ಆಹಾರವಲ್ಲದ ವಸ್ತು.

ಔಷಧ ಅಲರ್ಜಿ ಎಂಬುದು ಯಾವುದೇ ಒಂದು ಔಷಧಕ್ಕೆ ನಿಮ್ಮ ರೋಗ ಪ್ರತಿರೋಧಕ ಶಕ್ತಿಯು ಒಡ್ಡುವ ಅಸಹಜ ಪ್ರತಿಕ್ರಿಯೆ. ನೀವೇ ಫಾರ್ಮಸಿಗೆ ಹೋಗಿ ತೆಗೆದುಕೊಂಡ ಔಷಧ, ವೈದ್ಯರು ಶಿಫಾರಸು ಮಾಡಿರುವಂಥದು ಅಥವಾ ನಾಟಿ ಔಷಧ-ಇವು ಯಾವುದೂ ಅಲರ್ಜಿಯನ್ನು ಉಂಟು ಮಾಡಬಹುದಾಗಿದೆ. ಆದರೆ ಔಷಧ ಅಲರ್ಜಿಯು ನಿರ್ದಿಷ್ಟವಾದ ಒಂದು ಅಥವಾ ಕೆಲವು ಔಷಧಗಳ ಜತೆಗೆ ಮಾತ್ರ ಇರುವ ಸಾಧ್ಯತೆ ಹೆಚ್ಚು. ಔಷಧ ಅಲರ್ಜಿಯ ಅತ್ಯಂತ ಸಾಮಾನ್ಯ ಲಕ್ಷಣಗಳು ಮೈಮೇಲೆ ದದ್ದುಗಳು, ಕೆಂಪನೆಯ ಗುಳ್ಳೆಗಳು ಮತ್ತು ಜ್ವರ.

ರಾಸಾಯನಿಕವೊಂದು ಕಾಯಿಲೆಗಳನ್ನು ಗುಣಪಡಿಸುವ ಔಷಧವಾಗುವುದು ಯಾವಾಗ? ನಾನು ನನ್ನ ಕ್ಲಿನಿಕ್‌ನಲ್ಲಿ, ಕೆಎಂಸಿಯಲ್ಲಿ ಔಷಧಾಲಯದ ಮುಂದೆ ನಡೆದು ಹೋಗುವಾಗ ಈ ಪ್ರಶ್ನೆ ನನ್ನನ್ನು ಗಾಢವಾಗಿ ಕಾಡುತ್ತದೆ. ಔಷಧಾಲಯಗಳಲ್ಲಿ ಮಾತ್ರೆಗಳು, ಕ್ಯಾಪ್ಸೂಲ್‌ಗ‌ಳು ಮತ್ತು ಇಂಜೆಕ್ಷನ್‌ಗಳನ್ನು ನೋಡುವಾಗ ಅವು ಕೇವಲ ರಾಸಾಯನಿಕಗಳು ಎನ್ನುವ ವಾಸ್ತವ ಅರ್ಥವಾಗುತ್ತದೆ. ಆದರೆ ಅವು ರೋಗಿಗಳು ಅನುಭವಿಸುತ್ತಿರುವ ಕಾಯಿಲೆಗಳನ್ನು ದೂರಮಾಡಿ ಅವರಿಗೆ ಸೌಖ್ಯವನ್ನು ತಂದುಕೊಡುವುದು ಯಾವಾಗ? ಇದರಲ್ಲಿ ಪ್ರಧಾನ ಪಾತ್ರ ವಹಿಸುವಂಥವರು ಆಯಾ ಕಾಯಿಲೆಯನ್ನು ನಿಖರವಾಗಿ ಪತ್ತೆ ಹಚ್ಚುವ ವೈದ್ಯರು. ರಾಸಾಯನಿಕವೊಂದು ಔಷಧವಾಗಿ ಪರಿವರ್ತನೆ ಹೊಂದುವಲ್ಲಿ ಇದು ಪ್ರಾಮುಖ್ಯವಾದ ಒಂದು ಹಂತ. ರೋಗವನ್ನು ನಿಖರವಾಗಿ ಗುರುತಿಸಿದ ಬಳಿಕ ವೈದ್ಯರು ಆಯಾ ಕಾಯಿಲೆಗೆ ಸರಿಯಾದ ಔಷಧ ಮತ್ತು ಅದರ ಸರಿಯಾದ ಡೊಸೇಜ್‌ ನಿರ್ಧರಿಸುತ್ತಾರೆ. ಈ ಪ್ರಕ್ರಿಯೆಯು ಪೂರ್ಣಗೊಂಡಾಗ ರೋಗಿ ಮತ್ತು ವೈದ್ಯರು ಸರಿಯಾದ ಹಳಿಯಲ್ಲಿ ಸಾಗುತ್ತಿದ್ದಾರೆ ಎಂದರ್ಥ. ಕಾಯಿಲೆ ಪರಿಣಾಮಕಾರಿಯಾಗಿ ಗುಣ ಹೊಂದುವಲ್ಲಿ ಇದು ಬಹಳ ಮುಖ್ಯವಾಗಿದೆ.

ರೋಗಿಗೆ ಸಂಬಂಧಿಸಿ ಕೆಲವಂಶಗಳೂ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದರೆ ಒಟ್ಟು ಪ್ರಕ್ರಿಯೆ ಸುಲಲಿತವಾಗುತ್ತದೆ. ಅತಿ ಮುಖ್ಯವಾದುದು ಎಂದರೆ, ರೋಗಿಯು ಔಷಧ ಸೇವನೆಗೆ ಬದ್ಧನಾಗಿರುವುದು. ಇದು ಚಿಕಿತ್ಸೆಯು ಪರಿಣಾಮಕಾರಿ ಫ‌ಲಿತಾಂಶ ಸಾಧಿಸುವುದಕ್ಕೆ ರೋಗಿಯು ಅನುಸರಿಸಬೇಕಾದ ಪ್ರಧಾನವಾದ ಹೆಜ್ಜೆ. ರೋಗಿಯ ವಿದ್ಯಾರ್ಹತೆ ಮತ್ತು ತನಗಿರುವ ಕಾಯಿಲೆಯ ಬಗ್ಗೆ ಅವನಿಗಿರುವ ಅರಿವು ಮತ್ತು ಒಳನೋಟಗಳು ಕೂಡ ಮುಖ್ಯವಾಗಿರುತ್ತವೆ.

ರೋಗಿಯು ಕೆಲವು ನಂಬಿಕೆಗಳನ್ನು ಹೊಂದಿದ್ದರೆ ಚಿಕಿತ್ಸೆಯು ಉತ್ತಮ ಪರಿಣಾಮ ಬೀರುತ್ತದೆ ಎಂಬುದಾಗಿ ಕೆಲವು ವೈದ್ಯರು ಹೇಳುತ್ತಾರೆ. ಆತ್ಮವಿಶ್ವಾಸ, ದೇವರಲ್ಲಿ ನಂಬಿಕೆ (ಕಾಯಿಲೆಯಿಂದ ಗುಣ ಹೊಂದುವುದಕ್ಕೆ ದೇವರು ಸಹಾಯ ಮಾಡುತ್ತಾನೆ ಎಂಬ ನಂಬಿಕೆ), ಔಷಧದ ಮೇಲೆ ವಿಶ್ವಾಸ (ತನಗಿರುವ ಕಾಯಿಲೆಯನ್ನು ಗುಣಪಡಿಸಲು ಈ ಔಷಧ ಶಕ್ತಿ ಹೊಂದಿದೆ ಎಂಬ ವಿಶ್ವಾಸ) ಮತ್ತು ವೈದ್ಯರ ಮೇಲೆ ನಂಬುಗೆ (ವೈದ್ಯರು ತನ್ನ ಕಾಯಿಲೆಯನ್ನು ನಿಖರವಾಗಿ ಪತ್ತೆ ಹಚ್ಚಿದ್ದಾರೆ ಮತ್ತು ಸರಿಯಾದ ಔಷಧವನ್ನೇ ನೀಡಿದ್ದಾರೆ ಎಂಬ ನಂಬಿಕೆ) ಇವು ರೋಗಿಯಲ್ಲಿರಬೇಕಾದಂಥವು.

ಔಷಧದಿಂದ ನೇತ್ಯಾತ್ಮಕ ಪರಿಣಾಮಗಳು ಉಂಟಾದರೆ ಏನೆಂದು ಹೇಳಬಹುದು? ನಾನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗ ಡಾ| ಧರ್ಮಾನಂದ ಅವರು ಹೇಳುತ್ತಿದ್ದ ಒಂದು ಮಾತು ಇದಕ್ಕೆ ಅತ್ಯುತ್ತಮ ಉತ್ತರವಾಗಬಹುದು. “”ಅಡ್ಡ ಪರಿಣಾಮಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಅವು ಯಾವಾಗಲೂ ಉಂಟಾಗುವುದಿಲ್ಲ. ಒಬ್ಬ ವ್ಯಕ್ತಿ ಮನೆಯಿಂದ ಕಚೇರಿಗೆ ಕಾರಿನಲ್ಲಿ ಹೊರಟಿದ್ದಾನೆ ಎಂದುಕೊಳ್ಳಿ. ಅಪಘಾತ ಆಗುವ ಸಾಧ್ಯತೆಗಳು ಕಡಿಮೆ ಇರುತ್ತವೆ, ಹಾಗೆಂದು ಆಗಬಾರದು ಎಂದೇನೂ ಇಲ್ಲ. ಅಪರೂಪಕ್ಕೆ ಒಮ್ಮೆ ಆಗಬಹುದು; ಒಂದೆರಡು ಬಾರಿಯೂ ಘಟಿಸಬಹುದು. ಆದರೆ ಅದು ದಿನವೂ ನಡೆಯುವುದಿಲ್ಲ. ಹೀಗೆಯೇ ಔಷಧಗಳು ಅಡ್ಡ ಪರಿಣಾಮ ಅಥವಾ ನೇತ್ಯಾತ್ಮಕ ಪರಿಣಾಮಗಳನ್ನು ಯಾವತ್ತೂ ಅಥವಾ ಪದೇಪದೇ ಉಂಟು ಮಾಡುವುದಿಲ್ಲ. ಆದರೆ ಅವು ಉಂಟಾಗುತ್ತವೆ ಎಂದು ಹೆದರಿ ರೋಗಿ ಔಷಧಗಳನ್ನು ತೆಗೆದುಕೊಳ್ಳದೆಯೇ ಇದ್ದರೆ ಏನಾಗುತ್ತದೆ? ಆಯಾ ಕಾಯಿಲೆಗೆ ತೆಗೆದುಕೊಳ್ಳಬೇಕಾದ ಔಷಧವನ್ನು ತೆಗೆದುಕೊಳ್ಳದೆ ಇದ್ದರೆ ರೋಗ ಉಲ್ಬಣಿಸಿ ಅಪಾಯವಾಗುವುದಂತೂ ಖಂಡಿತ; ಆದರೆ ಅಡ್ಡ ಪರಿಣಾಮ ಅಥವಾ ನೇತ್ಯಾತ್ಮಕ ಪರಿಣಾಮ ಅಪರೂಪವಾಗಿರುತ್ತದೆ” ಎಂದು ಡಾ| ಧರ್ಮಾನಂದ ಹೇಳುತ್ತಿದ್ದರು.

ಇದನ್ನು ರುಮಾಟಿಕ್‌ ಕಾಯಿಲೆಗಳಿಗೆ ದೀರ್ಘ‌ಕಾಲಿಕ ಚಿಕಿತ್ಸೆಗೆ ಒಳಗಾಗುವ ಸಂದರ್ಭದಲ್ಲಿ ರೋಗಿ ವಿಶ್ಲೇಷಿಸಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕು.

-ಡಾ| ಪ್ರದೀಪ್‌ ಕುಮಾರ್‌ ಶೆಣೈ
ಕನ್ಸಲ್ಟಂಟ್‌ ರುಮಟಾಲಜಿ
ಕೆಎಂಸಿ ಆಸ್ಪತ್ರೆ, ಮಂಗಳೂರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ