ಪಂಪಾ ತೀರದ ಯಾಂತ್ರಿಕ 75 ರ ಎಚ್ಚೆಸ್ವಿ ಹೆಚ್ಚೆಚ್ಚು ಸವಿ

Team Udayavani, Jun 22, 2019, 10:52 AM IST

ಎಚ್ಚೆಸ್ವಿ ಅವರಿಗೆ ಇವತ್ತಿಗೆ ಭರ್ತಿ 75 ವರ್ಷ. ಅವರು 21ನೇ ಶತಮಾನದಲ್ಲಿದ್ದರೂ, 15ನೇ ಶತಮಾನದ ಪಂಪ, ರನ್ನರ ಒಡನಾಡಿಗಳು. ಅವರನ್ನೆಲ್ಲಾ ಇಲ್ಲಿಗೆ ಆವಾಹಿಸಿ, ನಮ್ಮ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಅವರ ಗೆಳೆತನ ದೊರೆತೇ 50ವರ್ಷ ಆಗಿದೆ. ಇಂದು ಬದುಕುತ್ತಾ, ನಾಳೆಯ ಬಗ್ಗೆ ಚಿಂತಿಸುತ್ತಾ, ನಿನ್ನೆಯವರೊಂದಿಗೆ ಒಡನಾಡುವ ಕವಿ “ಮೂರ್ತಿ ‘ ಯ ಅಂತರಾಳ, ಹುಟ್ಟು ಹಬ್ಬದ ನೆಪದಲ್ಲಿ ಇಲ್ಲಿ ತೆರೆದು ಕೊಂಡಿದೆ.

ಈ ಕಾಲದಲ್ಲಿ ಇದ್ದು, ಪುರಾಣದಲ್ಲಿ ಹೇಗೆ ಜೀವಿಸುತ್ತೀರಿ?

ಕಾವ್ಯ ಅನ್ನೋದೇ ಹಾಗೆ, ಅದು ಕೇವಲ ವರ್ತಮಾನವನ್ನು ಮಾತ್ರವಲ್ಲ, ಭೂತ, ವರ್ತಮಾನ, ಭವಿಷ್ಯ ಮೂರು ಕಾಲಗಳನ್ನೂ ಒಳಗೊಂಡಿರುತ್ತೆ. ಹಾಗಾಗಿ, ಸಾಹಿತ್ಯದಲ್ಲಿ ಹಳೆಯದು ಯಾವತ್ತು ಹೊಸತೇ. ಅದರಲ್ಲಿ ಭೂತಕಾಲದ ಪ್ರಯೋಗವನ್ನೇ ಮಾಡಲ್ಲ. ಉದಾಹರಣೆಗೆ-ದ್ರೌಪದಿ ಬಂದಳು. ಅರ್ಜುನ ಬಿಲ್ಲನ್ನು ಎತ್ತಿಕೊಂಡ ಅಂತ ಹೇಳುತ್ತೇವೆಯೋ ಹೊರತು, ಯಾವತ್ತೋ ಎತ್ತಿಕೊಂಡಿದ್ದ ಅನ್ನಲ್ಲ. ಅದಕ್ಕೇ ತ್ರಿಕಾಲ ಚಕ್ರ ಅಂತ ಹೇಳ್ಳೋದು. ಮೂರು ಕಾಲಗಳೂ ಒಂದು ಗೆರೆಯಲ್ಲಿ ಸಂಧಿಸಿದಾಗ, ಒಳ್ಳೆ ಕಾವ್ಯ ರಚನೆಯಾಗುತ್ತೆ. ಅದರಲ್ಲಿ ಹಳೆಯ ನೆನಪುಗಳು. ಇವತ್ತಿನ ಪಾಡುಗಳು, ನಾಳೆ ಕನಸುಗಳು ಇರುತ್ತವೆ. ಕಾವ್ಯ ಅನ್ನೋದು ಸರ್ವಕಾಲವನ್ನೂ ಐಕ್ಯ ಮಾಡಿಕೊಳ್ಳುತ್ತದೆ.

ಪುರಾಣಗಳನ್ನು ವರ್ತಮಾನಕ್ಕೆ ತರೋದು ಹೇಗೆ?
ನಾನು ಎಲ್ಲವನ್ನೂ ವರ್ತಮಾನದಲ್ಲಿ ನಿಂತೇ ನೋಡ್ತಾ ಇದ್ದೀನಿ. ಅಲ್ಲಿನವರನ್ನೆಲ್ಲ ಇಲ್ಲಿಗೆ ಆವಾಹಿಸುತ್ತಿರುತ್ತೇನೆ. ಈ ಮೂಲಕ ಹೊಸದನ್ನು ನೆನಪಿಸ್ತಾ ಇದ್ದೀನಿ. ಬೇಂದ್ರೆ, ಅಡಿಗರು ಹೀಗೆ ಎಲ್ಲರ ಕಾವ್ಯದಲ್ಲೂ ಇದನ್ನು ಕಾಣಬಹುದು. ಇದನ್ನು ರೂಪಕವಾಗಿಯೂ, ಇನ್ನೊಂದು ಕಥೆಯಾಗಿಯೂ ಹೇಳುವ ಕ್ರಮವಿದೆ. ಕುವೆಂಪು ಅವರು ರಾಮಾಯಣ ದರ್ಶನಂನಲ್ಲಿ ಅಂದಿನ ಕಥೆಯಲ್ಲಿ ಇವತ್ತಿನ ಸ್ಥಿತಿಗತಿಯ ಬಗ್ಗೆ ಹೇಳ್ತಾರೆ. ಇವತ್ತಿನ ವಿಜ್ಞಾನದ ಬಗ್ಗೆ , ಸಾಮಾಜಿಕ ಸಮಸ್ಯೆಗಳ ಬಗ್ಗೆ ತಿಳಿಸುತ್ತಾರೆ. ಅಂದರೆ, ಅವರು ವರ್ತಮಾನದ ಎಲ್ಲ ಸಂಗತಿಗಳನ್ನೂ ರಾಮಾಯಣದಲ್ಲಿ ಕಂಡಿದ್ದಾರೆ. ಇದು ಕುವೆಂಪು ಕ್ರಮ. ಅಡಿಗರು, ತಮ್ಮ ಕವಿತೆಗಳಲ್ಲಿ ಪುರಾಣವನ್ನು ರೂಪಕವಾಗಿ ಬಳಸುತ್ತಾರೆ. ನಾನು ಈ ಎರಡೂ ಪ್ರಕಾರಗಳಲ್ಲೂ ಕೆಲಸ ಮಾಡಿದ್ದೇನೆ. ಮಾಸ್ತಿ ಯವರದ್ದು ಇದಕ್ಕಿಂತ ಭಿನ್ನ. ಕಥೆಯಾಗಿ ಹೇಳುತ್ತಲೇ ಆ ಕಥೆ ಇವತ್ತಿಗೆ ಹೇಗೆ ಸಲ್ಲುತ್ತೆ ಅಂತ ಯೋಚನೆ ಮಾಡುವುದು ಮಾಸ್ತಿ ಅವರ ಕ್ರಮ.

ಹಾಗಾದರೆ ನಿಮಗೆ ಈಗಿನ ಸಾಮಾಜಿಕ ಪಲ್ಲಟಗಳು ಹೇಗೆ ಕಾಣುತ್ತವೆ?
ನಾನು ಆ ಭೂತದ ಕನ್ನಡಿಯಲ್ಲೇ ವರ್ತಮಾನದ ವಿಕಾರಗಳನ್ನು ನೋಡೋದು. ಅದು ಉತ್ಪ್ರೇಕ್ಷೆ ಮಾಡಿ ತೋರಿಸುತ್ತೆ. ಅಂದರೇನು, ಹಳೇದರ ಮೂಲಕ ಇವತ್ತನ್ನು ನೋಡೋದು. ಹಳೇದರಲ್ಲಿ ಕಂಸನಂಥ ವ್ಯಕ್ತಿ ಇದ್ದ ಅಂದರೆ, ವರ್ತಮಾನದಲ್ಲಿ ಅವನನ್ನು ತಂದಿರಿಸೋದು. ಹಿಂದೆ ಆಗಿದ್ದು , ಇವತ್ತು ಆಗುತ್ತಿರುವುದು, ಮುಂದೆ ಆಗೋದು ಹೀಗೆ… ತ್ರಿಕಾಲ ಸತ್ಯಗಳು ನಮ್ಮ ಪುರಾಣಗಳಲ್ಲಿ ಇವೆ. ಆದ್ದರಿಂದ ಆವತ್ತಿನ ಪ್ರಮೇಯ ತಗೊಂಡು ಇವತ್ತಿಗೆ ಅಪ್ಲೆ„ ಮಾಡ್ತೀನಿ. ಇವತ್ತು ಅಡುಗೆ ಮಾಡ್ಕೊà ತೀವಿ ಅಂದರೆ, ಅದರ ದ್ರವ್ಯಗಳೆಲ್ಲಾ ನಿನ್ನೆಯದಾಗಿರುತ್ತದೆ. ನಿನ್ನೆಯ ರಾಮಾಯಣ, ಮಹಾಭಾರತ ಜನರ ಮನಸ್ಸಲ್ಲಿ ಬೇರೂರಿದ ಅದ್ಬುತವಾದ ಲೋಕ. ಅದು ಜನ ಬಲ್ಲ ಭಾಷೆ. ಯಾವುದೇ ಹಳ್ಳಿಗೆ ಹೋದರೆ, ರಾವಣ ಎಂಥ ನೀಚ ಅನ್ನೋದಕ್ಕೆ ಗ್ರಾಮಸ್ಥರೇ ಉದಾಹರಣೆ ಕೊಡ್ತಾರೆ. ಹಾಗೇನೆ, ರಾಮನಂಥ ವ್ಯಕ್ತಿ ಬೇಕು ಅಂತಾರೆ. ಅಂದರೆ, ವರ್ತಮಾನದಲ್ಲಿ ರಾಮಾಯಣ ಇದೆ. ಕುವೆಂಪು ಅವರನ್ನು “ನೀವು ರಾಮಾಯಣನ ಏಕೆ ಬರೆದಿರಿ? ವಾಸ್ತವ ವಸ್ತು ವಿಷಯ ತಗೊಂಡು ಬರೀಬಹುದಿತ್ತಲ್ವ ? ‘ ಅಂತ ಯಾರೋ ಕೇಳಿದರಂತೆ. ಅದಕ್ಕೆ ಅವರು ರಾಮಾಯಣ ಎಲ್ಲರ ಮನಸ್ಸಿನಲ್ಲೂ ಇದೆ. ಅದರ ಮೂಲಕ ಹೇಳುವುದು ಸುಲಭ ಅಂದರಂತೆ. ಆವತ್ತು ಒಬ್ಬ ದುರ್ಯೋಧನ, ದುಶ್ಯಾಸನ ಇದ್ದರೆ ಇವತ್ತು ಬೀದಿ ಬೀದಿಯಲ್ಲಿ ದುರ್ಯೋಧನ, ದುಶ್ಯಾಸನ ಕಾಣುತ್ತಿದ್ದಾರೆ. ಇವತ್ತು ಹೆಣ್ಣು ಮಕ್ಕಳು ನಿರ್ಭಯದಿಂದ ಓಡಾಡೋಕೆ ಸಾಧ್ಯವಿಲ್ಲ. ಮಧ್ಯೇರಾತ್ರಿ ಇರಲಿ, ಮಧ್ಯಾಹ್ನವೇ ಓಡಾಡೋದು ಕಷ್ಟ. ಮನೆ ಮನೆಯಲ್ಲಿ ದುಶ್ಯಾಸನರ ಸಂಖ್ಯೆ ಜಾಸ್ತಿಯಾಗಿದೆ.

ಆ ಕಾಲದಲ್ಲೂ ಲಂಚ, ರಾಜಕೀಯ ಎಲ್ಲವೂ ಇತ್ತಾ?
ಹದಿನೈದನೇ ಶತಮಾನದಲ್ಲೇ ಕುಮಾರವ್ಯಾಸ ದುರ್ಯೋಧನ ಆಸ್ಥಾನದಲ್ಲಿ ಎಂತೆಂಥ ಲಂಚಕೋರರು ಇದ್ದರು, ಮಂತ್ರಿಗಳು ಯಾವ ರೀತಿ ಶೋಷಣೆ ಮಾಡುತ್ತಿದ್ದರು ಅಂತೆಲ್ಲ ಹೇಳಿದ್ದಾನೆ. ಅಂದರೆ, ಮನುಷ್ಯನ ಮೂಲಭೂತ ಗುಣಗಳಲ್ಲಿ ಬದಲಾವಣೆ ಮಾಡುವುದು ಕಷ್ಟ. ನಮ್ಮ ಪುರಾಣಗಳು, ತತ್ವ, ನೀತಿ, ಧರ್ಮ ಇವು ಪರಿವರ್ತನೆ ಮಾಡುವ ಕೆಲಸ ಮಾಡುತ್ತಲೇ ಇದೆ. ಶುದ್ಧೀಕರಣ ಇದೆಯಲ್ಲ; ಅದು ನಿತ್ಯದ ಕರ್ತವ್ಯ. ಸ್ನಾನ ಅನ್ನೋದು ಒಂದು ದಿನ ಮಾಡೋದಲ್ಲ. ಇವತ್ತು ಮಾಡಿದರೆ ಇವತ್ತು ಚೆನ್ನಾಗಿರುತ್ತದೆ. ನಾಳೆ ವಾಸನೆ ಶುರುವಾಗುತ್ತದೆ. ಇದೂ ಹಾಗೇ.
ಅಡಿಗರು, “ ನಾರುವುದು ಸೇಂದ್ರಿಯ ಧರ್ಮ, ಶುದ್ಧ ಮಾಡಿಕೊಳ್ಳೋದು ಅತೀಂದ್ರಿಯ ಕರ್ಮ’ ಅಂದಿದ್ದಾರೆ. ಇದು ನ್ಯಾಚುರಲ್‌. ಕಾವ್ಯ, ನಾಟಕ, ವೇದ, ಉಪನಿಷತ್ತು, ವಚನಗಳು ಏಕೆ ಮುಖ್ಯವಾಗುತ್ತೆ ಅಂದ್ರೆ ಮನುಷ್ಯನನ್ನು ಶುಚಿಯಾಗಿಡುವ ಸಲುವಾಗಿ. ಕಂಸನಿಗೆ ಈ ಗತಿಯಾಯಿತು, ದುಶ್ಯಾಸನಿಗೆ ಆ ಗತಿ ಬಂತು. ರಾವಣನ ಮೋಹ ರಾಜ್ಯವನ್ನು ಬಲಿ ತೆಗೆದುಕೊಂಡಿತು. ಹೀಗೆ ಹೇಳಿ ಪುರಾಣ ನಮ್ಮ ಬದುಕು ಬದಲಿಸುವ ಕೆಲಸ ಮಾಡುತ್ತದೆ.

ಮಹಾಕಾವ್ಯಗಳನ್ನು ಹೇಗೆ ಅರಗಿಸಿಕೊಂಡ್ರಿ?
ಮನಸ್ಸಿನ ಶಕ್ತಿ ಇದು. ಸಂಕಲ್ಪ ಮಾಡಬೇಕು. ಮನಸ್ಸಿದ್ದಲ್ಲಿ ಮಾರ್ಗ. ಇಚ್ಛೆ ಇದ್ದರೆ ಹೇಗೋ ದಾರಿ ಕಾಣುತ್ತೆ. ಅಡಿಗರು -”ಬರೆಯೋಕೆ ಸಮಯ ನಿಶ್ಚಯ ಮಾಡ್ಕೊà. ಆ ಸಮಯದಲ್ಲಿ ಬೇರೇನೂ ಮಾಡಬೇಡ. ಟೇಬಲ್‌ ಮುಂದೆ ಕೂತ್ಕೊà. ಬಂದ್ರೆ ಬರೀ. ಇಲ್ಲ ಅಂದ್ರೆ ಧ್ಯಾನ ಮಾಡು ‘ಅಂದ್ರು. ಕಳೆದ ಮೂವತ್ತು ವರ್ಷದಿಂದ ಬೆಳಗ್ಗೆ 4ರಿಂದ 6 ಗಂಟೆ ತನಕ ಅಡಿಗರು ಹೇಳಿದಂತೆ ಬರೀತಾಲೆ ಇದ್ದೀನಿ. ಹೀಗಾಗಿಯೇ, ಆದಿಪುರಾಣ, ವಿಕ್ರಮಾರ್ಜುನ ವಿಜಯ ಕನ್ನಡಕ್ಕೆ ತಂದದ್ದು, ಋಗ್ವೇದದ ಋಗ್‌ಗಳನ್ನೂ, ಭಗವದ್ಗೀತೆ ಸಂಪೂರ್ಣ, ಕುಮಾರ ವ್ಯಾಸನ ಸಮಗ್ರ ಚಿಂತನೆ ಮಾಡೋದಕ್ಕೆ ಆಗಿದ್ದು. ದಿನದಿನ ಕರ್ತವ್ಯ ಮಾಡಬೇಕು ಅನ್ನೋದು ಅಡಿಗರು ಹೇಳಿ ಕೊಟ್ಟ ಪಾಠ.

ಕಾವ್ಯ ಎಂಬ ಹಿಮಾಲಯದ ಮುಂದೆ ನಿಂತಾಗ ಏನು ಅನಿಸ್ತು?

ಮೊದಲು ನೋಡಿದಾಗ ಇಷ್ಟೆಲ್ಲಾ ಮಾಡಕ್ಕೆ ಆಗುತ್ತಾ ಅನಿಸುತ್ತೆ. ಅದಕ್ಕೇ ಮೊದಲು ಇಡುವ ಹೆಜ್ಜೆ ಮಾತ್ರ ನೋಡಬೇಕು. ಮುಂದಿನದನ್ನು ನೋಡಬಾರದು. ಹೆಜ್ಜೆ ಇಟ್ಕೊಂಡು ಹೋಗ್ತಾ ಇದ್ದರೆ ಒಂದಲ್ಲ ಒಂದು ದಿನ ಇದ್ದಕ್ಕಿದ್ದಂತೆ ಬೆಟ್ಟದ ಮೇಲೆ ಇರ್ತೀವಿ. ಈ ಸತ್ಯ ನನಗೆ ತಿಳಿಯಿತು. ನಾನಂತೂ ಹಗಲೆಲ್ಲ ಅಧ್ಯಯನವಾಸಿ. ಬೇರೆ ಏನೂ ಮಾಡೋಲ್ಲ. ನಿತ್ಯದ ವ್ಯವಹಾರ ಮುಗಿಸಿ ಓದೊRàತ ಇರ್ತೀನಿ. ಈಗ ಅಕ್ಕಮಹಾದೇವಿ ವಚನಗಳ ಮೇಲೆ ಕೆಲಸ ಮಾಡುತ್ತಾ ಇದ್ದೀನಿ.

ರಾಮ, ಕೃಷ್ಣ ಇವರ್ಯಾರು ಕನಸಲ್ಲಿ ಬರೋಲ್ವೇ?

ರಾಮ, ಕೃಷ್ಣ, ಸೀತೆ, ಊರ್ಮಿಳೆ, ಧರ್ಮರಾಯ, ಜರಾಸಂಧ…ಹೀಗೆ ಎಲ್ಲರೂ ಹಗಲಲ್ಲೇ ನನ್ನ ಜೊತೆ ಇರ್ತಾರೆ. ಇನ್ನು ರಾತ್ರಿ ಏಕೆ ಬರ್ತಾರೆ? ಇವರೆಲ್ಲ ಹಳೇ ಕಾಲದವರಲ್ಲ. ನನ್ನ ಕಾಂಟೆಂಪರರೀಸ್‌. ನನ್ನ ಜೊತೆ ಕೂತು ಈಗಿನ ಸಮಸ್ಯೆಗಳ ಬಗ್ಗೆ ಮಾತಾಡ್ತಾ ಇರ್ತಾರೆ. ನಿತ್ಯ ನಡೆಯುವ ಸಂವಾದದ ಫ‌ಲವೇ ನನ್ನ ಸಾಹಿತ್ಯ.

ಪುರಾಣ ಪಾತ್ರಗಳಿಂದ ಹೊರಗಡೆ ಬರಬೇಕು ಅನಿಸಲ್ವಾ?
ಏಕೆ ಅನಿಸಬೇಕು? ಅವರಿಂದ ಉಪಯೋಗಿಲ್ಲ ಅಂದ್ರೆ ಹೊರಗೆಬರಬೇಕು. ಅವರಿಂದ ಸನ್ಮಾರ್ಗ ಸಿಗುತ್ತೆ ಅಂದರೆ ಯಾಕೆ ಅವರನ್ನು ದೂರ ಮಾಡಬೇಕು? ಎಲ್ಲಿವರೆಗೂ ಬೇಕು ಅನಿಸಿತೋ ಅಲ್ಲಿವರೆಗೆ ಅವರ ಜೊತೆ ಇರ್ತೀನಿ. ಎಲ್ಲಿ ಹೋದರೂ ಅವರ ಹಿಂದೆ ಹೋಗ್ತಾ ಇರ್ತೀನಿ. ಹೀಗೆ ಪಾತ್ರಗಳು ನನ್ನ ಹಂಟ್‌ ಮಾಡ್ತಾನೇ ಇರ್ತವೆ. ಎಷ್ಟೋ ಸಲ ಬರೀಬೇಕು ಅಂತ ಅಂದುಕೊಂಡಾಗ ಅಕ್ಕಮಹಾದೇವಿ ಬಿಡೋಲ್ಲ. ಬೆಳಗ್ಗೆ ಮೂರು ಗಂಟೆಗೆ ಎಚ್ಚರಿಸುತ್ತಾರೆ.

ಕಾವ್ಯಗಳನ್ನು ಸರಳವಾಗಿ ಹೇಳ್ಳೋಕೆ ನಿಮಗೆ ಹೇಗೆ ಸಾಧ್ಯವಾಯ್ತು?

ಹಳೇ ಕಾವ್ಯಗಳು, ಪಂಪ, ಕುಮಾರವ್ಯಾಸ, ಜನ್ನ ಇವರನ್ನೆಲ್ಲಾ ಪಂಡಿತರು ಮಾತ್ರ ಓದುತ್ತಾರೆ, ಬಲ್ಲವರು ತಿಳಿಯತ್ತಾರೆ. ಆದರೆ, ಸಾಮಾನ್ಯ ಜನಕ್ಕೆ ಇದು ಆಗಲ್ವಲ್ಲ. ಒಳ್ಳೆ ವಿಚಾರಗಳು ಅಲ್ಲೇ ನಿಂತು ಬಿಡುತ್ತಲ್ಲ ಅನ್ನೋ ಕೊರಗು ಇತ್ತು. ಜೊತೆಗೆ, ಕನ್ನಡ ಅನ್ನೋದು ನಮ್ಮ ಸಮಾಜದಲ್ಲಿ ನಿಧಾನವಾಗಿ ಅಸ್ವಿತ್ವವನ್ನು ಕಳೆದು ಕೊಳ್ತಿದೆ. ಮನೆಯಲ್ಲಿ ಇಂಗ್ಲಿಷ್‌ ಮಾತನಾಡೋ ಸ್ಥಿತಿ ಎದುರಾಗಿದೆ. ಕನ್ನಡ ಓದುಗರ ಸಂಖ್ಯೆ ಕಡಿಮೆಯಾಗಿದೆ. ಹೀಗಿರುವಾಗ, ಇನ್ನು ಕಾವ್ಯ, ಅದರಲ್ಲೂ ಕುಮಾರವ್ಯಾಸ, ಪಂಪನನ್ನು ಓದೋರು ಎಷ್ಟು ಜನ? ಅದಕ್ಕೆ ನಾನು, ಓದೋ ಆಸಕ್ತಿ ಇರೋರು ಯಾವುದೋ ಹಳ್ಳಿಯಲ್ಲಿ ಇರಬಹುದು. ಅವರಿಗೋಸ್ಕರ ಹಳೆಗನ್ನಡ, ಸಂಸ್ಕೃತದಲ್ಲಿ ಇರೋ ಸಾಹಿತ್ಯವನ್ನು ಇವತ್ತಿನ ಕನ್ನಡದಲ್ಲಿ ಹೇಳ್ಳೋಣ ಅಂತ ಶುರುಮಾಡಿದೆ. ಸರಳ ಅನ್ನೋದು ಇಚ್ಛಾಶಕ್ತಿ ಅಷ್ಟೇ.

ರಾಮ, ಕೃಷ್ಣರ ಬಗ್ಗೆ ಹೇಳಿ?

ಎರಡು ಇಂಟರೆಸ್ಟಿಂಗ್‌ ಕ್ಯಾರೆಕ್ಟರ್‌. ಇಬ್ಬರ ಬದುಕಲ್ಲೂ ವಿರುದ್ಧ ಚಲನೆಗಳಿವೆ. ಹೇಗೆಂದರೆ, ರಾಮ ರಾಜನ ಮಗನಾಗಿ ನಗರದಲ್ಲಿ ಹುಟ್ಟಿ, ಕಾಡಿಗೆ ಹೋಗಿ ಆದರ್ಶ ಪುರುಷನಾದ. ಕೃಷ್ಣ ಕಾಡಲ್ಲಿ ಹುಟ್ಟಿ ನಗರಕ್ಕೆ ಬಂದು ಜಗತ್ತಿನ ಲೀಡರ್‌ ಆದ. ರಾಜನ ಮಗನಾದ ರಾಮ ಸ್ನೇಹ ಮಾಡಿದ್ದು ಕಾಡಲ್ಲಿದ್ದ ವಾಲಿ, ಸುಗ್ರೀವ, ಜಾಬುವಂತ ರಂಥವರನ್ನು.
ಕೃಷ್ಣ ದ್ವಾರಕೆಗೆ ಬರ್ತಾನೆ. ಮತ್ತೆ ಗೋಕುಲಕ್ಕೆ ಹೋಗಲಿಲ್ಲ. ನಗರ ಅವನನ್ನು ಎಷ್ಟು ಸುತ್ತುಕೊಂಡು ಬಿಡು¤ ಅಂದರೆ, ಆ ಸಮಸ್ಯೆ ಬಿಡಿಸೋತನಕ ಬಿಡುಗಡೆಯೇ ಇಲ್ಲ ಅವನಿಗೆ. ನಾವೆಲ್ಲ ಬೆಂಗಳೂರಿಗೆ ಬಂದಹಾಗೆ, ಮಕ್ಕಳೆಲ್ಲ ಅಮೇರಿಕಕ್ಕೆ ಹೋದ ಹಾಗೆ! ಹಾಗಾಗಿ, ಕೃಷ್ಣ ದ್ವಾರಕ ನಗರದ ಸಮಸ್ಯೆ ಬಗೆಹರಿಸ್ತಾನೆ. ತಾನು ಮಾಡಲಾಗದ್ದನ್ನು ಬೇರೆಯವರ ಕೈಲಿ ಮಾಡಿಸ್ತಾನೆ. ದುರ್ಜನರ ನಿರ್ನಾಮ ಮಾಡಿ ಸಜ್ಜನರ ಉದ್ದಾರ ಮಾಡೋದು ಇವನು ಉದ್ದೇಶ. ರಾಮ, ಕೃಷ್ಣ ಇಬ್ಬರೂ ಸಮಾನತೆ ಸಾರಿದವರೇ. ಕೃಷ್ಣ ಊರಿನ ಎಲ್ಲ ವರ್ಗದ ಮನೆಯ ಮಗನಾಗಿ ಸಮಾನತೆ ಸಾರಿದರೆ, ರಾಮ ಆಂಜನೇಯನಿಗೆ ಆಲಿಂಗನ ಕೊಟ್ಟು ಸಮಾನತೆಯ ಪಾಠ ಮಾಡಿದ.

ದೊಡ್ಡೋರ ಜೊತೆ ಮಾತಾಡೋದೇ ತೀರ್ಥ ಯಾತ್ರೆ ಇದ್ದಂಗೆ. ಕಾಶಿ ರಾಮೇಶ್ವರಕ್ಕೆ ಹೋದ ಹಾಗೆ . ನಾನು ಪುತಿನ, ಅಡಿಗರು, ಬೇಂದ್ರೆ, ಕುವೆಂಪು ಜಿಎಸ್‌ಎಸ್‌ ಹತ್ರ ಹೋದರೆ, ಅವರು ಲೋಕದ ಸಂಗತಿ ಮಾತಾಡುತ್ತಿರಲಿಲ್ಲ. ನೇರ ವಾಲ್ಮೀಕಿ ರಾಮಾಯಣದಲ್ಲಿ ಏನು ಬಂತು ಗೊತ್ತಾಪ್ಪ ಅಂತ ಅಲ್ಲಿಗೆ ಹೋರಟೋಗ್ತಾ ಇದ್ದರು. ಅವರ ರನ್‌ವೇ ಚಿಕ್ಕದು. ಆದರೆ ಫ್ಲೈಟ್‌ ಬೇಗ ಟೇಕ್‌ ಆಫ್ಆಗಿಬಿಡೋದು. ಆ ಏರೋಪ್ಲೇನ್‌ ಇಳಿತಾ ಇದ್ದದ್ದು ನನ್ನಂಥವರನ್ನು ಮತ್ತೆ ಕರೆದು ಕೊಂಡು ಹಾರೋಕೆ. ಅಷ್ಟು ಅಗಾಧವಾಗಿ ಬದುಕಿದ್ದರು.

ಕಟ್ಟೆ ಗುರುರಾಜ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  •   ರಾಜಧಾನಿಯ ಆಭರಣಪ್ರಿಯರಿಗೆ, ಇದೊಂದು ಸುಗ್ಗಿ. ಭಾರತದ ಅತಿ ದೊಡ್ಡ ಆಭರಣ ಪ್ರದರ್ಶನವಾದ ಜ್ಯುವೆಲ್ಸ್‌ ಆಫ್ ಇಂಡಿಯಾ ಅಕ್ಟೋಬರ್‌ 18ರಿಂದ ನಗರದಲ್ಲಿ ನಡೆಯುತ್ತಲಿದೆ....

  • ಭಾರತೀಯ ನೆಲದ ದೊಡ್ಡ ಆಸ್ತಿಕ ಔನ್ನತ್ಯವನ್ನು ಕಾಪಿಡುವಲ್ಲಿ ತುಳಸಿಯ ಸ್ಥಾನ ಮಹತ್ತರವಾದದ್ದು. ಯಕ್ಷಗಾನವೂ ಪರಮಪೂಜ್ಯ ಭಾವದಿಂದ ತುಳಸಿಯ ಕಥೆಗೆ ಪದ್ಯ ಹೆಣೆದಿದೆ....

  • ಸಸ್ಯಾಹಾರ ಪ್ರಿಯರಿಗೊಂದು ಸ್ವರ್ಗ ಸೃಷ್ಟಿಯಾಗಿದೆ. ಸಸ್ಯಾಹಾರದಲ್ಲಿ ಎಂತೆಂಥ ರುಚಿಕಟ್ಟಾದ ತಿನಿಸುಗಳಿವೆ ಅಂತ ತಿಳಿಯಲು, ಫ್ರಿಡಂ ಪಾರ್ಕ್‌ಗೆ ಬನ್ನಿ. ಅಲ್ಲಿ,...

  • ಬೌದ್ಧ ಭಿಕ್ಕುಗಳು ಧರಿಸುವ ಬಟ್ಟೆಯೇ "ಚೀವರ'. ಯಾರೋ ಒಬ್ಬ ದರ್ಜಿ ಹೊಲಿದು ಕೊಡುತ್ತಾನೆ, ಭಿಕ್ಕುಗಳು ಅದನ್ನು ಮೈಮೇಲೆ ಧರಿಸುತ್ತಾರೆ ಎನ್ನುವ ಸಂಗತಿಯಾಗಿದ್ದರೆ,...

  • ಸೀರೆಯೆಂದರೆ, ನೀರೆಗೆ ಪ್ರಾಣ. ಹಾಗೆ ಖರೀದಿಸುತ್ತಲೇ, ಮನೆಯ ಕಪಾಟು ತುಂಬಿ, ಅವು ಕೆಲವೇ ದಿನಗಳಲಿ "ಹಳೇ ಸೀರೆ' ಎಂಬ ಹಣೆಪಟ್ಟಿ ಹೊತ್ತುಕೊಳ್ಳುತ್ತವೆ. ನಿಮ್ಮ ಮನೆಯ...

ಹೊಸ ಸೇರ್ಪಡೆ