ಸವಿಗನ್ನಡಂ ಗೆಲ್ಗೆ! ಕನ್ನಡ ಕೆಫೆ,ಕನ್ನಡದ್ದೇ ರುಚಿ

ನಾಡಿನ ಸ್ವಾದ ಪರಿಚಯಿಸುವ ಹೋಟೆಲ್‌

Team Udayavani, Jun 22, 2019, 4:16 PM IST

ಬೆಂಗಳೂರು ಕರುನಾಡಿನ ರಾಜಧಾನಿ ನಿಜ. ಆದರೆ, ಇಲ್ಲಿ ಎಲ್ಲೆಂದರಲ್ಲಿ ರಾರಾಜಿಸುವುದು ಅನ್ಯಭಾಷೆಗಳು. ಅದರಲ್ಲೂ ಇಂಗ್ಲಿಷಿನ ಪ್ರಭಾವ ಇಲ್ಲಿ ಈಗೀಗ ದಟ್ಟವಾಗಿ ಆವರಿಸಿದೆ. ಉದ್ಯಾನ ನಗರಿಯ ಯಾವುದೇ ಹೋಟೆಲ್‌ಗೆ ಕಾಲಿಟ್ಟರೂ ಅಲ್ಲೂ ಇಂಗ್ಲಿಷೇ ಇಣುಕುತ್ತದೆ. ಹೋಟೆಲ್‌ನ ಹೆಸರಿನಿಂದ ಹಿಡಿದು, ಮೆನುವಿನ ತನಕ, ಅಷ್ಟೇ ಏಕೆ ಬಾಣಸಿಗನ ಅಂಗಿಯ ಮೇಲಿನ ಹೆಸರಿನಿಂದ ಹಿಡಿದು ಗ್ರಾಹಕನ ಕೈ ಸೇರುವ ಬಿಲ್‌ನವರೆಗೂ ಆಂಗ್ಲ ಭಾಷೆಯದ್ದೇ ಪಾರುಪತ್ಯ.

ಆದರೆ, ಪರಭಾಷೆಯ ಪ್ರಭಾವಕ್ಕೆ ಸಿಲುಕಿರುವ ಇಂಥ ರಾಜಧಾನಿಯಲ್ಲೂ ಕನ್ನಡಿಗರು ಹೆಮ್ಮೆಪಡುವಂಥ ಒಂದು ಹೋಟೆಲ್‌ ಇದೆ. ಅದು ಕನ್ನಡ ಕೆಫೆ! ಜಯನಗರ 4ನೇ ಬ್ಲಾಕ್‌ನಲ್ಲಿರುವ ಈ ಹೋಟೆಲ್‌ನಲ್ಲಿ ಎಲ್ಲಿ ನೋಡಿದರೂ, ಕನ್ನಡಮಯ. ಕುವೆಂಪು- ಬೇಂದ್ರೆಯಾದಿಯಾಗಿ ಕನ್ನಡದ ಜ್ಞಾನಪೀಠಿಗಳು ಇಲ್ಲಿ ನಗುನಗುತ್ತಾ ಸ್ವಾಗತಿಸುತ್ತಾರೆ.
ಸುರೇಶ್‌ಗೌಡ ಹಾಗೂ ವೀರೇಂದ್ರ ಅವರ ಮಾಲೀಕತ್ವದಲ್ಲಿ ಆರಂಭವಾದ ಈ ಹೋಟೆಲ್‌, ಹಸಿವನ್ನು ತಣಿಸುತ್ತಾ, ತಣ್ಣಗೆ ಕನ್ನಡದ ಸೇವೆಯನ್ನೂ ಮೆರೆಯುತ್ತಿದೆ. ಈ ಹೋಟೆಲ್‌ನಲ್ಲಿ ಗ್ರಾಹಕರಿಗೆ ನೀಡುವ ಬಿಲ್‌ ಕೂಡ ಕನ್ನಡದ ಅಕ್ಷರಗಳಲ್ಲಿಯೇ ಮುದ್ರಿತವಾಗಿರುತ್ತದೆ.

ಕನ್ನಡ ಕೆಫೆಯು ಕೇವಲ ಕನ್ನಡವನ್ನಷ್ಟೇ ಸಾರುತ್ತಿಲ್ಲ. ಕನ್ನಡ ನೆಲದ ತಿನಿಸುಗಳನ್ನೂ ವಿಶಿಷ್ಟವಾಗಿಯೇ ಉಣಬಡಿಸುತ್ತದೆ. ಇಲ್ಲಿನ ಖಾರಾಬಾತ್‌, ಕೇಸರಿ ಬಾತ್‌ಗಳ ಗಮ್ಮತ್ತೇ ಬೇರೆ. ಇಡ್ಲಿ, ಫ‌ಲಾವ್‌, ಪೂರಿ, ಮೊಸರನ್ನ, ಮಂಗಳೂರು ಬಜ್ಜಿ, ಮಿರ್ಚಿ ಮಂಡಕ್ಕಿಗಳು- ಕರುನಾಡಿನ ವೈವಿಧ್ಯತೆಯನ್ನು ಸಾರುತ್ತವೆ. ಮಸಾಲೆ ದೋಸೆ, ದಾವಣಗೆರೆ ಬೆಣ್ಣೆ ದೋಸೆಗಳ ರುಚಿಯಂತೂ ಮತ್ತೆ ಮತ್ತೆ ಚಪ್ಪರಿಸುವಂಥದ್ದು. ಇಲ್ಲಿನ ಕಾಫಿಗೂ ಕನ್ನಡ ನಾಡಿನದ್ದೇ ಘಮ. ಇದರೊಂದಿಗೆ ಇಲ್ಲಿ ಅನ್ಯ ಭಾಷಿಗ ಗ್ರಾಹಕರ ಒತ್ತಾಯದ ಮೇರೆಗೆ, ಉತ್ತರ ಭಾರತೀಯ ಮತ್ತು ಚೈನೀಸ್‌ ಶೈಲಿಯ ಖಾದ್ಯಗಳನ್ನೂ ಆರಂಭಿಸಲಾಗಿದೆ.

ಜರ್ಮನಿಯ ಮಗ ಫೋನು ಮಾಡಿದ!
ಹಿರಿಯ ಹೆಂಗಸೊಬ್ಬರು ಒಮ್ಮೆ ಈ ಹೋಟೆಲ್‌ಗೆ ಬಂದಿದ್ದರಂತೆ. ಊಟ ಮಾಡಿ, ಸೆಲ್ಫಿಗಳನ್ನು ತೆಗೆದುಕೊಂಡು, ನಂತರ ಮಾಲೀಕರ ಬಳಿ ಬಂದು ಹೀಗೆ ಹೇಳಿದಳು- “ನಿಮಗೆ ತುಂಬಾ ಧನ್ಯವಾದ. ಕನ್ನಡದ ಮೇಲಿರುವ ನಿಮ್ಮ ಅಭಿಮಾನ ಸದಾ ಹೀಗೆಯೇ ಇರಲಿ. ನನ್ನ ಮಗ ಜರ್ಮನಿಯಿಂದ ಕರೆಮಾಡಿ, ಜನರೆಲ್ಲಾ ಕನ್ನಡ ಕಫೆ ಬಗ್ಗೆ ತುಂಬಾ ಮಾತನಾಡುತ್ತಿದ್ದಾರೆ. ಒಮ್ಮೆ ನೀನು ಅಲ್ಲಿಗೆ ಹೋಗಿ, ಫೋಟೋಗಳನ್ನು ಕಳಿಸು ಎಂದಿದ್ದ. ಅದಕ್ಕೆ ನಾನು ಬಂದೆ’!

ಗ್ರಂಥಾಲಯವೂ ಇದೆ…
ಅಂದಹಾಗೆ, ಈ ಹೋಟೆಲ್‌ನಲ್ಲಿ ಪುಟ್ಟ ಗ್ರಂಥಾಲಯವೂ ಇದೆ. ಓದುವ ಆಸಕ್ತಿ ಇರುವ ಗ್ರಾಹಕರು, ಇಲ್ಲೇ ಓದುತ್ತಾ ಕೂರಬಹುದು. ಇಲ್ಲವೇ ಪುಸ್ತಕದ ಬೆಲೆಯನ್ನು ನೀಡಿ, ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಓದಿ, ಮರಳಿ ಪುಸ್ತಕವನ್ನು ಹಿಂತಿರುಗಿಸಬಹುದು. ಕೊಟ್ಟ ಹಣವನ್ನೂ ವಾಪಸು ಪಡೆಯಬಹುದು.

ಗೋಡೆ ಮೇಲೆ ಕನ್ನಡತನ
ಹೋಟೆಲ್‌ ಗೋಡೆಗಳ ಮೇಲೆ ಕನ್ನಡತನವನ್ನು ಸಂಕೇತಿಸುವ ಫೋಟೋಗಳನ್ನೂ ಹಾಕಲಾಗಿದೆ. ಕರ್ನಾಟಕದ ಸುಂದರ ನಕಾಶೆಯಲ್ಲಿ, ಪ್ರಸಿದ್ಧ ತಾಣಗಳನ್ನು ಗುರುತಿಸಲಾಗಿದೆ. ಒಂದು ಚಿತ್ರದಲ್ಲಿ ಸ್ಕ್ಯಾನಿಂಗ್‌ ಕೋಡ್‌ ಇದ್ದು, ಮೊಬೈಲ್‌ನಲ್ಲಿ ಅದನ್ನು ಸ್ಕ್ಯಾನ್‌ ಮಾಡಿದರೆ ಕರ್ನಾಟಕದ ಇತಿಹಾಸವೇ ತೆರೆದುಕೊಳ್ಳುತ್ತದೆ. ಜ್ಞಾನಪೀಠ ಪುರಸ್ಕೃತರು, ಕನ್ನಡ ಸಾಹಿತಿಗಳು, ಕನ್ನಡ ಸಾಧಕರ ಜೊತೆಗೆ ಇಲ್ಲಿನ ಜಾನಪದ ಕಲೆಗಳ ವರ್ಣರಂಜಿತ ಚಿತ್ರಗಳನ್ನು ಹಾಕಲಾಗಿದೆ.

ನಿಜಕ್ಕೂ ಈ ಹೋಟೆಲ್‌ಗೆ ಬಂದರೆ, ಖುಷಿಯಾಗುತ್ತದೆ. ಕನ್ನಡ ಸಾಹಿತ್ಯ, ಕಲೆಯನ್ನು ಬಿಂಬಿಸುವ ಚಿತ್ರಗಳನ್ನು ನೋಡಿದಾಗ ಮನಸ್ಸು ಅರಳುತ್ತದೆ. ಊಟೋಪಾಹಾರವೂ ಚೆನ್ನಾಗಿದೆ.
– ಮಹಾದೇವಪ್ಪ, ಗ್ರಾಹಕ

ಕನ್ನಡ ಜಾಗೃತಿಯನ್ನು ಮೂಡಿಸುವ ಅಪರೂಪದ ಕೆಲಸವನ್ನು ಕನ್ನಡ ಕೆಫೆ ಮಾಡುತ್ತಿದೆ. ಲೈಬ್ರರಿ, ಇಲ್ಲಿನ ಚಿತ್ರಗಳಲ್ಲಿ ಕನ್ನಡತನವೇ ತುಂಬಿಕೊಂಡಿದೆ. ಬೆಂಗಳೂರಿನಲ್ಲಿ ಇಂಥ ಹೋಟೆಲ್‌ಗ‌ಳ ಸಂಖ್ಯೆ ಹೆಚ್ಚಬೇಕಿದೆ.
– ಸತೀಶ್‌ ಗೌಡ, ಕ.ರ.ವೆ. ಅಧ್ಯಕ್ಷ, ಬಸವನಗುಡಿ

– ಉಮೇಶ ರೈತನಗರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  •   ರಾಜಧಾನಿಯ ಆಭರಣಪ್ರಿಯರಿಗೆ, ಇದೊಂದು ಸುಗ್ಗಿ. ಭಾರತದ ಅತಿ ದೊಡ್ಡ ಆಭರಣ ಪ್ರದರ್ಶನವಾದ ಜ್ಯುವೆಲ್ಸ್‌ ಆಫ್ ಇಂಡಿಯಾ ಅಕ್ಟೋಬರ್‌ 18ರಿಂದ ನಗರದಲ್ಲಿ ನಡೆಯುತ್ತಲಿದೆ....

  • ಭಾರತೀಯ ನೆಲದ ದೊಡ್ಡ ಆಸ್ತಿಕ ಔನ್ನತ್ಯವನ್ನು ಕಾಪಿಡುವಲ್ಲಿ ತುಳಸಿಯ ಸ್ಥಾನ ಮಹತ್ತರವಾದದ್ದು. ಯಕ್ಷಗಾನವೂ ಪರಮಪೂಜ್ಯ ಭಾವದಿಂದ ತುಳಸಿಯ ಕಥೆಗೆ ಪದ್ಯ ಹೆಣೆದಿದೆ....

  • ಸಸ್ಯಾಹಾರ ಪ್ರಿಯರಿಗೊಂದು ಸ್ವರ್ಗ ಸೃಷ್ಟಿಯಾಗಿದೆ. ಸಸ್ಯಾಹಾರದಲ್ಲಿ ಎಂತೆಂಥ ರುಚಿಕಟ್ಟಾದ ತಿನಿಸುಗಳಿವೆ ಅಂತ ತಿಳಿಯಲು, ಫ್ರಿಡಂ ಪಾರ್ಕ್‌ಗೆ ಬನ್ನಿ. ಅಲ್ಲಿ,...

  • ಬೌದ್ಧ ಭಿಕ್ಕುಗಳು ಧರಿಸುವ ಬಟ್ಟೆಯೇ "ಚೀವರ'. ಯಾರೋ ಒಬ್ಬ ದರ್ಜಿ ಹೊಲಿದು ಕೊಡುತ್ತಾನೆ, ಭಿಕ್ಕುಗಳು ಅದನ್ನು ಮೈಮೇಲೆ ಧರಿಸುತ್ತಾರೆ ಎನ್ನುವ ಸಂಗತಿಯಾಗಿದ್ದರೆ,...

  • ಸೀರೆಯೆಂದರೆ, ನೀರೆಗೆ ಪ್ರಾಣ. ಹಾಗೆ ಖರೀದಿಸುತ್ತಲೇ, ಮನೆಯ ಕಪಾಟು ತುಂಬಿ, ಅವು ಕೆಲವೇ ದಿನಗಳಲಿ "ಹಳೇ ಸೀರೆ' ಎಂಬ ಹಣೆಪಟ್ಟಿ ಹೊತ್ತುಕೊಳ್ಳುತ್ತವೆ. ನಿಮ್ಮ ಮನೆಯ...

ಹೊಸ ಸೇರ್ಪಡೆ