ಗಿನ್ನೆಸ್ ದಾಖಲೆಗೆ ಲಾಲ್ಬಾಗ್ ರೆಡಿ!
Team Udayavani, Oct 28, 2017, 11:48 AM IST
ಡಿಸೆಂಬರ್ 9, 2017… ಇನ್ನೇನು ನಲ್ವತ್ತೆರಡೇ ದಿನ! ಆ ದಿನ ನೀವೇನಾದರೂ ಲಾಲ್ಬಾಗ್ಗೆ ಹೋದರೆ, ಅಲ್ಲಿ ಮರಗಳಿಗಿಂತ ಜಾಸ್ತಿ ಮಕ್ಕಳನ್ನು ಕಾಣುತ್ತೀರಿ. ಅಲ್ಲಿನ ಪಕ್ಷಿಗಳ ಕಲರವಕ್ಕಿಂತ ಜಾಸ್ತಿ, ಮಕ್ಕಳ ಚಿಲಿಪಿಲಿ ಮಾತುಗಳು ನಿಮ್ಮ ಕಿವಿಗೆ ಬೀಳುತ್ತವೆ. ಅವತ್ತು ಲಾಲ್ಬಾಗ್ ಜಾಗತಿಕವಾಗಿ ಸುದ್ದಿಯಲ್ಲಿರುತ್ತೆ. ಸಸ್ಯಕಾಶಿಯಲ್ಲಿ ಅವತ್ತು 10 ಸಾವಿರ ಮಕ್ಕಳು ಸೇರಿಕೊಂಡು ಗಿನ್ನೆಸ್ ದಾಖಲೆ ನಿರ್ಮಿಸಲಿದ್ದಾರೆ!
ಪರಿಸರ ಜಾಗೃತಿಗೆ, ಹವಾಮಾನ ವೈಪರೀತ್ಯವನ್ನು ಆಡಳಿತ ಸರ್ಕಾರಗಳು ಗಂಭೀರವಾಗಿ ಪರಿಗಣಿಸಲಿಯೆಂದು ಆಗ್ರಹಿಸುತ್ತಾ, ಮಕ್ಕಳೆಲ್ಲ ಒಕ್ಕೊರಲಿನ ಉದ್ಗೊಷ ಹಾಕುತ್ತಿರುತ್ತಾರೆ. ಆ ಪುಟಾಣಿಗಳೆಲ್ಲ ಥೇಟ್ ಮರಗಳಂತೆಯೇ ನಿಂತುಕೊಂಡು, ಪರಸ್ಪರ ಅಪ್ಪಿಕೊಳ್ಳುತ್ತಾರೆ. ಅಲ್ಲಿನ ಮರಗಳನ್ನೂ ಅಪ್ಪಿಕೊಳ್ಳುತ್ತಾ, “ಮರಗಳನ್ನು ಕಡಿಯಬೇಡಿ’ ಎಂಬ ಸಂದೇಶ ಸಾರುತ್ತಿರುತ್ತಾರೆ.
“ಇದು “”ನನ್ನ ಮರ, ನನ್ನ ಜೀವನ” ಎಂಬ ಪರಿಸರ ಜಾಗೃತಿ ಕಾರ್ಯಕ್ರಮ. ಡಿ.9ರ ಶನಿವಾರ, ಬೆಂಗಳೂರಿನ ವಿವಿಧ ಶಾಲೆಗಳ 10 ಸಾವಿರ ಮಕ್ಕಳು ಲಾಲ್ಬಾಗ್ನಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಲಿದ್ದಾರೆ. ಈ ಗಿನ್ನೆಸ್ ದಾಖಲೆಯ ವಿಶ್ವದ ಕಣ್ತೆರೆಸುವ ಕೆಲಸ ಮಾಡಲಿದ್ದೇವೆ’ ಎಂದು ಪರಿಸರ ತಜ್ಞ ಎ.ಎನ್. ಯಲ್ಲಪ್ಪ ರೆಡ್ಡಿ ಮಾಹಿತಿ ನೀಡಿದರು. ಅಂದಹಾಗೆ, ನಗರದ 60 ಶಾಲೆಯ ಮಕ್ಕಳು ಗಿನ್ನೆಸ್ ದಾಖಲೆಗೆ ತರಬೇತುಗೊಳ್ಳುತ್ತಿದ್ದಾರೆ.